ಬಸ್ ನಿಲ್ದಾಣದಿಂದ ಮನೆಗೆ ಹೋಗಲು
ಗದ್ದೆಹಾದಿಯೇ ಹತ್ತಿರ ಎಂಬ ಮಾತು ಆಗ ಎಲ್ಲರ
ಬಾಯಲ್ಲಿ..
ನಡಿಗೆಗೆ ಬಹುದೂರವೆಂದು ವರ್ಜಿಸಲ್ಪಟ್ಟ ಮುಖ್ಯರಸ್ತೆ
ಬಿಸಿಲಲ್ಲಿ ಬಣಗುಡುತ್ತ ಹೊರಗೆ
ಬಿದ್ದುಕೊಂಡಿರುತ್ತಿತ್ತು.
ನಡೆದು ನಡೆದೇ ಸವೆದಿದ್ದ ಒಳಹಾದಿಯ ಗದ್ದೆಬದುವಿನ
ಮೇಲೆ
ಹೆಜ್ಜೆಯ ಮೇಲೊಂದೆಜ್ಜೆಯನಿಕ್ಕುತ
ನಡೆಯುತ್ತಿದ್ದರೆ
ಬಾಗಿದ ಭತ್ತದ ತೆನೆಗಳು ತಾಗಿ ಮೊಣಕಾಲಿಗೆ
ಕಚಗುಳಿ..
ಟುರ್ರನೆ ಹಾರುವ ಸಣ್ಣ ಪೊದೆಯ ಹಿಂದಡಗಿದ್ದ
ಪುಟ್ಟಹಕ್ಕಿ
ಸರ್ರನೆ ಸರಿಯುವ ಮಟ್ಟಿಯ ಮರೆಯ ಬಿಳಿಹಾವು
ಅಂಚಿಗೆ ಕಾಲಿಟ್ಟರೆ, ಜರ್ರನೆ ಜಾರುವ ಒದ್ದೆಬದು.
ಗಂಡಸರು ಪಂಚೆ ಮಡಿಚಿ ಕಟ್ಟಿಕೊಂಡೂ, ಹೆಂಗಸರು ಸೀರೆ
ಸ್ವಲ್ಪವೇ ಎತ್ತಿಕೊಂಡೂ ಅರಲು ತಾಗದಂತೆ
ಹುಷಾರಾಗಿ ಅಡಿಯಿಡುವರು.
ನಡುವೆ ಸಿಕ್ಕ ಊದ್ದನೆ ಸಾರವನ್ನು ಚಪ್ಪಲ್ಲಿ
ಕೈಯಲ್ಲಿ ಹಿಡಿದು
ಥರಥರಗುಡುತ್ತ ದಾಟಿಬಿಟ್ಟರೆ ನಂತರದ ತಂಪುಹಾದಿಯಲ್ಲಿ
ನಿಟ್ಟುಸಿರು.
ವಾಹನಗಳು ಅಗ್ಗವಾದವೋ ಜನರು ಸಿರಿವಂತರಾದರೋ,
ಮುಖ್ಯರಸ್ತೆಯಲ್ಲಿ ಮೋಟಾರುಗಳ ಸಶಬ್ದ ಸಂಚಾರ
ಹೆಚ್ಚಾಯಿತು.
ಕೆಂಪುರಸ್ತೆ ಟಾರು ಹೊಯ್ಯಿಸಿಕೊಂಡು ಪೂರ ಕಪ್ಪಾಯಿತು.
ಹೊಸಹುಡುಗರ ಪ್ಯಾಂಟೂ, ಲಲನೆಯರ ಲೆಗ್ಗಿಂಗೂ ಕೆಸರಸ್ಪರ್ಶಕ್ಕೆ
ಹೆದರಿ ಗದ್ದೆಹಾದಿಯ ತ್ಯಜಿಸಿದವು. ಒಳಹಾದಿಗಿಂತ
ಥಳಗುಟ್ಟುವ
ಬಳಸುದಾರಿಯೇ ಬಳಕೆಗನುಕೂಲವೆನಿಸಿದ ಘಳಿಗೆ
ಮುಖ್ಯರಸ್ತೆ ವಿಜಯೋತ್ಸವದಲಿ ವಿಜ್ರಂಭಿಸಿತು.
ಗದ್ದೆಹಾದಿಯ ಮೇಲೀಗ ಚುಪುರಾಗಿ ಬೆಳೆದ ಹುಲ್ಲು
ಹಳ್ಳದ ಬಳಿಯ ಇಳಿಜಾರಿನಲಿ ಬರೀ ಜುಳುಜುಳು
ಗುಲ್ಲು
ಮನುಷ್ಯರ ಕಾಣದೇ ಬೆದರಿರುವ ಬೆರ್ಚಪ್ಪಗಳು
ಕನಸಿನಿಂದೇಳದೇ ಮಲಗಿರುವ ಮರಿ ಗೀಜಗಗಳು
ಇವತ್ತು ಸಕ್ಕರೆಯಂತೆ ಇಬ್ಬನಿ ಬೀಳುತ್ತಿದೆ.
ಬೇಲಿಬದಿಯ ಸಾಲು ಸಿತಾಳೆ ಗಿಡಗಳಿಂದುದುರಿದ
ಹೂಪಕಳೆಗಳು ರಾಜಕುವರಿಯ ಮೃದುಕಾಲ ಸ್ಪರ್ಶಕ್ಕೆ
ಕಾದಿವೆಯಂತೆ;
ಗೆಳತೀ, ಇವತ್ತು
ಗದ್ದೆಹಾದಿಯಲ್ಲಿ ಹೋಗೋಣ, ಬಾ.
2 comments:
gadde hadiyalli bidda nenapaagide :)
Very nice!
Post a Comment