Friday, April 15, 2016

ರಾಮಭಕ್ತ ತುಳಸೀದಾಸ

ಯಮುನಾ ನದಿ ತುಂಬಿ ಹರಿಯುತ್ತಿತ್ತು. ರಾಂಬೋಲ ಹಿಂದೆಮುಂದೆ ಸಹ ನೋಡದೆ ಅದರಲ್ಲಿ ಧುಮುಕಿದ. ಆಚೆ ದಡ ತಲುಪಿ ಹೆಂಡತಿ ರತ್ನಾವತಿಯನ್ನು ಕಾಣುವ ತವಕದಲ್ಲಿ ತೆರೆಗಳನ್ನು ತೆತ್ತೈಸುತ್ತ ಈಜಿದ. ಆದರೆ ಅಷ್ಟೆಲ್ಲ ಧಾವಂತದಲ್ಲಿ ಬಂದ ಗಂಡನಿಗೆ ರತ್ನಾವತಿ, ನಿನಗೆ ನನ್ನ ಬಗೆಗಿರುವಷ್ಟೇ ಆರಾಧನೆ ದೇವರ ಬಗೆಗೆ ಇದ್ದಿದ್ದರೆ ಇಷ್ಟೊತ್ತಿಗೆ ಮಹಾಸಾಧಕನಾಗಿರುತ್ತಿದ್ದೆ ಎಂದುಬಿಟ್ಟಳು. ಅಷ್ಟೇ: ರಾಂಬೋಲ ಮತ್ತೆ ಸಂಸಾರದತ್ತ ತಿರುಗಿ ನೋಡಲಿಲ್ಲ. ಸಂತನಾದ. ತುಳಸೀದಾಸನಾದ.

ತುಳಸಿದಾಸರು ಹುಟ್ಟಿದ್ದು ಈಗಿನ ಉತ್ತರ ಪ್ರದೇಶದಲ್ಲಿರುವ ಚಿತ್ರಕೂಟದಲ್ಲಿ. ರಾಂಬೋಲನೆಂಬುದು ಅವರ ಹುಟ್ಟುಹೆಸರು.  ವಾಲ್ಮೀಕಿಯ ಅಪರಾವತಾರವೆಂದೇ ಕರೆಯಲ್ಪಡುವ ಅವರು, ವೈರಾಗ್ಯ ದೀಕ್ಷೆ ಹೊತ್ತ ನಂತರ, ಗುರು ನರಹರಿದಾಸ ಮತ್ತು ಶೇಷ ಸನಾತನರ ಮೂಲಕ, ಸಂಸ್ಕೃತವನ್ನೂ, ವೇದ-ವೇದಾಂಗಗಳನ್ನೂ, ಜ್ಯೋತಿಷ್ಯವನ್ನೂ, ಮೂಲ ರಾಮಾಯಣವನ್ನೂ, ಹಿಂದೂ ಸಂಸ್ಕೃತಿಯನ್ನೂ ಅಧ್ಯಯನ ಮಾಡಿದರು. ಚಿತ್ರಕೂಟದ ತಮ್ಮ ಮನೆಯ ಬಳಿ ರಾಮಾಯಣದ ಕಥೆಯನ್ನು ಹೇಳುತ್ತಾ ಬಹುಕಾಲ ಕಳೆದರು.

ನಂತರ ಅವರು ವಾರಣಾಸಿ, ಪ್ರಯಾಗ, ಅಯೋಧ್ಯೆ, ಬದರಿ, ದ್ವಾರಕೆ, ರಾಮೇಶ್ವರ, ಮಾನಸ ಸರೋವರ ...ಹೀಗೆ ದೇಶಾದ್ಯಂತ ಯಾತ್ರೆ ಕೈಗೊಂಡರು.  ತಂಗಿದೆಡೆಯೆಲ್ಲ ರಾಮಾಯಣದ ಕಥೆ ಹೇಳುವರು. ತಮ್ಮ ಕೃತಿಗಳಲ್ಲಿ ತುಳಸೀದಾಸರು ಹೇಳಿಕೊಳ್ಳುವಂತೆ, ವಾರಣಾಸಿಯಲ್ಲಿ ಅವರು ಪಾರಾಯಣ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ಪ್ರತಿದಿನವೂ ತಮ್ಮ ಪಾರಾಯಣ ಕೇಳಲು ಮೊಟ್ಟಮೊದಲು ಬಂದು ಕೂತು, ಕಟ್ಟಕಡೆಯಲ್ಲಿ ತೆರಳುವುದನ್ನು ಗಮನಿಸಿದರು. ಒಂದು ದಿನ ಅವನನ್ನು ಹಿಂಬಾಲಿಸಿದರು. ಆತ ಕಾಡಿನೆಡೆಗೆ ತೆರಳುತ್ತಿರುವುದನ್ನು ಕಂಡು ಇವರ ಅನುಮಾನ ಬಲವಾಯಿತು. ಅವನ ಕಾಲು ಹಿಡಿದು ತನ್ನ ನಿಜರೂಪ ತೋರಿಸುವಂತೆ ಬೇಡಿಕೊಂಡರು. ತುಳಿಸೀದಾಸರ ಅನುಮಾನದಂತೆ ಆತ ಸಾಕ್ಷಾತ್ ಹನುಮಂತನಾಗಿದ್ದ.  ತುಳಸೀದಾಸರು ತನಗೆ ರಾಮನ ದರ್ಶನ ಮಾಡಿಸುವಂತೆ ಹನುಮನಲ್ಲಿ ಬೇಡಿಕೊಂಡರು. ಆಗ ಹನುಮ ತುಳಸೀದಾಸರಿಗೆ ವಾಪಸು ಚಿತ್ರಕೂಟಕ್ಕೆ ತೆರಳುವಂತೆ ಸೂಚಿಸುತ್ತಾನೆ. ಅಲ್ಲಿ ತುಳಸೀದಾಸರಿಗೆ ರಾಮ ಒಂದು ಮಗುವಿನ ರೂಪದಲ್ಲಿ ದರ್ಶನವೀಯುತ್ತಾನೆ. ನಂತರ ಪ್ರಯಾಗದಲ್ಲಿ ತುಳಸಿಗೆ ಯಾಜ್ನವಲ್ಕ್ಯರ, ಭಾರದ್ವಾಜ ಮುನಿಗಳ ಸಂದರ್ಶನವೂ ಆಗುತ್ತದೆ.

ತುಳಸೀದಾಸರು ಸುಪ್ರಸಿದ್ಧ ರಾಮಚರಿತಮಾನಸವನ್ನು ಬರೆಯಲು ಪ್ರಾರಂಭಿಸಿದ್ದು 1631ರ ವಿಕ್ರಮ ಸಂವತ್ಸರದ ರಾಮನವಮಿಯಂದು. ಭಾರತ ಆಗ ಮೊಘಲರ ಆಳ್ವಿಕೆಯಲ್ಲಿತ್ತು. ಸುಮಾರು ಎರಡೂವರೆ ವರ್ಷದ ಅವಧಿಯಲ್ಲಿ ಅಯೋಧ್ಯೆ, ವಾರಣಾಸಿ ಮತ್ತು ಚಿತ್ರಕೂಟಗಳಲ್ಲಿ ರಾಮಚರಿತಮಾನಸ ರಚಿಸಲ್ಪಟ್ಟಿತು. ತುಳಸೀದಾಸರು ಸಂಸ್ಕೃತದಲ್ಲಿ ಪಾರಂಗತರಾಗಿದ್ದರೂ, ರಾಮಚರಿತಮಾನಸವನ್ನು ಅವರು ಅವಧಿ ಎಂಬ ಪೂರ್ವಭಾರತದ ಜನರ ಆಡುಭಾಷೆಯಲ್ಲಿ (ಹಿಂದಿಯ ಪ್ರಾದೇಶಿಕ ಭಾಷೆ) ಬರೆದರು. ಇದರಿಂದಾಗಿ ಆಗಿನ ಕಾಲದ ಸಂಸ್ಕೃತ ವಿದ್ವಾಂಸರ ಟೀಕೆಗೂ ಗುರಿಯಾಗಿದ್ದರು.  ಆದರೆ ತುಳಸೀದಾಸರ ಬಯಕೆ ಪುಣ್ಯಕಥೆ ರಾಮಾಯಣವನ್ನು ಅತಿಸಾಮಾನ್ಯ ಮನುಷ್ಯನಿಗೂ ತಲುಪಿಸುವುದಾಗಿತ್ತು. ಹೀಗಾಗಿ ಅವರು ತಮ್ಮ ನಿಲುವಿಗೆ ನಿಷ್ಠರಾಗಿ ಕಾವ್ಯರಚನೆ ಮುಂದುವರೆಸಿದರು. ಏಳು ಕಾಂಡಗಳಲ್ಲಿ ರಚಿಸಲ್ಪಟ್ಟಿರುವ, ವಾಲ್ಮೀಕಿ ರಾಮಾಯಣದ ಅವತರಿಣಿಕೆಯಾಗಿರುವ ರಾಮಚರಿತಮಾನಸದ ವಿಶೇಷತೆಯೆಂದರೆ, ಪ್ರತಿ ಸಾಲಿನಲ್ಲೂ ’, ’, ಅಥವಾ ಅಕ್ಷರ ಇದ್ದೇ ಇದೆ. ತನ್ಮೂಲಕ ತುಳಸೀದಾಸರು ತಮ್ಮ ಪ್ರಾಣದೇವರಾದ ಸೀತಾರಾಮರು ಪ್ರತಿ ಸಾಲಿನಲ್ಲೂ ಇರುವಂತೆ ನೋಡಿಕೊಂಡಿದ್ದಾರೆ.  ಮೂರೂವರೆ ಶತಮಾನದ ಹಿಂದೆ ಬರೆಯಲ್ಪಟ್ಟಿದ್ದರೂ ಸಹ ಇವತ್ತಿಗೂ ಅದು ಭಾರತೀಯ ಕಾವ್ಯ ಪರಂಪರೆಯ ಅತ್ಯುತ್ತಮ ಕೃತಿ ಎಂದು ಪರಿಗಣಿಸಲ್ಪಡುತ್ತದೆ. ಇವತ್ತಿಗೂ ಲಕ್ಷಾಂತರ ರಾಮಭಕ್ತರಿಂದ ಹಾಡಲ್ಪಡುತ್ತದೆ.

ರಾಮಚರಿತಮಾನಸವಲ್ಲದೇ, ಬದುಕನ್ನೂ-ಜಗವನ್ನೂ ಎರಡೆರಡೇ ಸಾಲುಗಳಲ್ಲಿ ಕಟ್ಟಿಕೊಡುವ ಐನೂರಕ್ಕೂ ಹೆಚ್ಚು ದೋಹಾಗಳನ್ನೂ, ಭಗವಾನ್ ಕೃಷ್ಣನೆಡೆಗಿನ ಭಕ್ತಿಗೀತೆಗಳನ್ನೂ ತುಳಸಿ ರಚಿಸಿದರು. ಅವರ ರಾಮಸ್ತುತಿ ಗೀತಾವಲಿ ಹಿಂದೂಸ್ತಾನೀ ಗಾಯಕರ ಅಚ್ಚುಮೆಚ್ಚು. ಅವರ ವಿನಯಪತ್ರಿಕಾ’, ಷಡ್ವೈರಿಗಳಿಂದ ಕೂಡಿದ ಕಲಿಯುಗದ ಭಕ್ತನೊಬ್ಬ ರಾಮನ ಆಸ್ಥಾನದಲ್ಲಿ ನಿಂತು ಅಹವಾಲು ಸಲ್ಲಿಸುವ ರೀತಿಯಲ್ಲಿರುವ ಅತ್ಯುತ್ಕೃಷ್ಟ ಕಾವ್ಯ. ಅದು ಪ್ರಪಂಚದ ಹಲವು ಭಾಷೆಗಳಿಗೆ ಅನುವಾದವಾಗಿದೆ.  ಹನುಮಾನ್ ಚಾಲೀಸಾವಂತೂ ಪ್ರತಿಮನೆಯ ಭಜನೆಯಾಗಿರುವುದು ಸತ್ಯ.

ಹದಿನಾರನೇ ಶತಮಾನದಲ್ಲಿ ಬಾಳಿದ್ದ ತುಳಸೀದಾಸರು ಅವರ ಕಾಲಾನಂತರವೂ ಉಳಿದಿರುವುದು ಅವರ ಕಾವ್ಯದ ಮೂಲಕ. ಅವರ ಪ್ರತಿ ರಚನೆಯಲ್ಲೂ ರಾಮಭಕ್ತಿ ಎದ್ದು ಕಾಣುತ್ತದೆ. ರಾಮಾಯಣವನ್ನು ತಮ್ಮ ಪ್ರವಚನಗಳ ಮೂಲಕ, ಬರಹದ ಮೂಲಕ ಜನಮಾನಸಕ್ಕೆ ತಲುಪಿಸಿದ ಕೀರ್ತಿ ತುಳಸೀದಾಸರದ್ದು. ಅವರು ನಮ್ಮ ದೇಶ ಕಂಡ ಅತ್ಯುತ್ತಮ ಕವಿಗಳಲ್ಲಿ ಒಬ್ಬರಾಗಿ ಇಂದಿಗೂ ಪ್ರಸ್ತುತ.

['ಧರ್ಮಭಾರತೀ' ಪತ್ರಿಕೆಗಾಗಿ ಬರೆದದ್ದು.] 

1 comment:

Suma Udupa said...

Good info. Thanks! Hanuman Chalisa Tulasi dasaru baredaddu endu gottiralilla.