Thursday, June 02, 2016

ಸಾಸ್ವೆ ಮಾವು

ಬಿಗ್‌ಬಜಾರಿನ ಪ್ರಖರ ದೀಪಬೆಳಕಲಿ
ಬೆಲೆಯ ಲೇಬಲ್ಲು ಹೊದ್ದು ಕೂತದ್ದಿಲ್ಲ..
ಮೇಳಗಳ ಮಳಿಗೆಯಲಿ ಮಂತ್ರಿವರ್ಯರ ಬಾಯಿ
ಸಿಹಿಮಾಡಿ ಫೋಟೋಗೆ ಪೋಸು ಕೊಟ್ಟದ್ದಿಲ್ಲ..
ರಟ್ಟಪೆಟ್ಟಿಗೆಯಲಿ ಘನಮಾಡಿ ತುಂಬಿಸಲ್ಪಟ್ಟು
ದೇಶಾಂತರ ರಫ್ತಾದದ್ದೂ ಇಲ್ಲ..
ಬೀದಿಬದಿಯ ತಳ್ಳುಗಾಡಿಯಲಿ ಬೀಳದಂತೆ ಪೇರಿಸ್ಪಟ್ಟು
ಮಾರಾಟವಾಗುವ ಭಾಗ್ಯ ಸಹ ಇಲ್ಲ..

ಕಾನನದ ಮಾಮರವೊಂದು ಮೈತುಂಬ ಪೂತು
ಇಬ್ಬನಿ ಬಿಸಿಲು ಗಾಳಿ ಮಳೆ ಕೋಗಿಲೆಕೂಗನ್ನೆಲ್ಲ ಸಹಿಸಿ
ಗೊಂಚಲುಗಳಲಿ ಮಿಡಿತೂಗಿ ಹಟಹಿಡಿದು ಮಾಗಿ ಹಣ್ಣಾಗಿ
ರಸದುಂಬಿ ಬೀಗಿ ಸಿಹಿಯಾಗಿ ಕೆಂಪಾಗಿ ಸಫಲತೆಯ ಪಡೆದು

ಊರ ಪೋರರಿಗೀಗ ಹಬ್ಬ.. ಹಿತ್ತಿಲ ಹಿಂದಿನ ಕಾಲುದಾರಿಯಲಿ
ಪುಟ್ಟಪಾದಗಳ ಓಡು. ಬಾಗುಮಟ್ಟಿಗಳೂ ತುರುಚಿಗಿಡಗಳೂ ಲೆಕ್ಕಕ್ಕಿಲ್ಲ.
ಮನೆಗಳನು ಮುಚ್ಚಿದರೂ ತೆರೆದೇ ಇರುವ ಈ ಕಾಡದಾರಿ
ಸೈಕಲ್ಲಿನಲ್ಲಿ ಬಂದವರನ್ನೂ ಟಯರ್ ಓಡಿಸಿಕೊಂಡು ಬಂದವರನ್ನೂ
ಒಟ್ಟಿಗೇ ತಲುಪಿಸುತ್ತದೆ ಸಾಸ್ವೆ ಮಾವಿನಮರದ ಬುಡಕೆ..

ತಣ್ಣೆಳಲ ಕೆಳಗೀಗ ಸರೀ ಬಡಿಗೆಗಾಗಿ ಹುಡುಕಾಟ
ಕಲ್ಲಲ್ಲೇ ಬೀಳಿಸುವೆವೆನ್ನುವ ಧೀರರ ಹಾರಾಟ
ಬೀಸಿ ಒಗೆದರೆ, ಪಕ್ಕದೂರ ನಾಚುಪೋರಿಯೂ ಮನಮೆಚ್ಚುವಂತೆ ಫಲಧಾರೆ
ಓಡಿ ಆಯುವ ಭರದಲ್ಲಿ ಚೂರೇ ಕೈತಾಕಿ ಕಣ್ತುಂಬ ಸಂಭ್ರಮತಾರೆ

ಬಡಿದು ಬೀಳಿಸಿ ಹೆಕ್ಕಿ ಗುಡ್ಡೆಹಾಕಿ ಇಡೀ ಹಣ್ಣು ಬಾಯೊಳಗಿಟ್ಟು
ರಸಹೀರಿ ಹೊಟ್ಟೆ ತುಂಬುವವರೆಗೂ ತಿಂದು ಕುಣಿದು ಕುಪ್ಪಳಿಸಿ
ನಾನಾ ಆಟವಾಡಿ ದಣಿದು ಅಲ್ಲೇ ತುಸು ವಿರಮಿಸಿ
ಇನ್ನೂ ಉಳಿದ ಹಣ್ಣುಗಳು ಬಕ್ಕಣದಲ್ಲೂ ಪುಟ್ಟ ಕೈಚೀಲದಲ್ಲೂ
ತುಂಬಿಸಲ್ಪಟ್ಟು ಮನೆ ಸೇರಿ, ಇಂದು ಮಧ್ಯಾಹ್ನದೂಟದ
ಸಾಸ್ವೆಯಲಿ ತೇಲುವ ಪುಟ್ಪುಟ್ಟ ಹಣ್ಣುಗಳು..
ಮೇಯ್ದು ಸಂಜೆ ಕೊಟ್ಟಿಗೆಗೆ ಮರಳಿದ ಗೌರಿ
ಹಾಕಿದ ಸಗಣಿಯಲ್ಲೂ ಪುಟ್ಪುಟ್ಟ ಓಟೆಗಳು.

ಸಾಸ್ವೆ ಮಾವಿನಹಣ್ಣು ಯಾವ ಮಾರ್ಕೆಟ್ಟಿನಲ್ಲೂ ಸಿಗುತ್ತಿಲ್ಲ...
ಆಪೋಸು ರಸಪುರಿಗಳ ನೀಟಾಗಿ ಕತ್ತರಿಸಿ ಸಿಪ್ಪೆ ಸಹ ತೆಗೆದು
ಪಿಂಗಾಣಿ ಬಟ್ಟಲಲಿ ಜೋಡಿಸಿ ಟೇಬಲಿನ ಮೇಲಿಟ್ಟಿದ್ದಾರೆ ಚಮಚದೊಂದಿಗೆ..
ಏಸಿಯಿಂದ ಬಂದ ತಂಪುಗಾಳಿಯಲ್ಲಿ ತೇಲಿಬರುತ್ತಿದೆ ಆ
ಕಾಡಮಾವಿನ ಮರದ ಸಾಸ್ವೆಹಣ್ಣಿನ ರುಚಿಯ ನೆನಪು..
ನೂರುಮರ ನಡುವೆ ಹೆಸರಿಲ್ಲದೆ ಹಸಿರಾಗಿ ತೂಗುವ ತುಂಬುತರು..
ಕಾಡುತ್ತಿದೆ ಆ ಕಾಡಹಾದಿ.. ಯಾರಾದರೂ ತಂದುಕೊಟ್ಟಿದ್ದರೆ
ರಾತ್ರಿಯಡುಗೆಗೆ ಸಾಸ್ವೆಗಾಗುತ್ತಿತ್ತು ಎಂದು ನಿಟ್ಟುಸಿರಿಡುವ ಅಮ್ಮ.

2 comments:

ತೇಜಸ್ವಿನಿ ಹೆಗಡೆ said...

As usual Lovely poem.. Sasve madka tinnakaatu :)

ಸಿಂಧು sindhu said...

ಇವತ್ತು ಓದಿದೆ.
ಊರಿನಿಂದ ಬೆಂಗಳೂರಿಗೆ ಶಿಫ್ಟ್ ಆದ ಮೇಲಿಂದ ನನ್ನ ಅಮ್ಮ ಪ್ರತೀ ಬೇಸಗೆಯಲ್ಲೂ ಊರಿಗೆ ಹೋಗಿ ಎಲ್ಲಿ ಸಿಗುತ್ತೋ ಅಲ್ಲಿಂದ ಸುಮಾರು ತಂದು ಶೀಂ ಒರಟೆ ಮಾಡಿ ಇಟ್ಕಳ್ತಾ ಇದ್ದ.
ಯಾವಾಗ ನೆನಪಾದ್ರೆ ಆವಾಗ ಸಾಸ್ವೆ ಮಾಡ್ತ ಮತ್ತು ನಂಗೆ ಮರೆಯದ ಕರೆಯ ಇರ್ತು.
ನಿಂಗವೂ ಹಂಗೇ ಮಾಡ್ಲಕ್ಕು. :)

ಕವಿತೆ ಅಗ್ದೀ ಬೆಸ್ಟು. ವನಸುಮ ಕವಿತೆಗೊಂದು ಈ ಕಾಲದ ಈಕ್ವಿವೇಲೆಂಟೇನೋ ಅನ್ನುವಷ್ಟು ಕಣೋ.
ಇದನ್ನೆಲ್ಲ ತಿನ್ನುತ್ತಲೇ ಬೇಸಿಗೆ ಕಳೆದವರಿಗೆ ಒಂದು ಬೇಸಿಗೆಯ ಮಧ್ಯಾಹ್ನದಲ್ಲಿ ಸಾಸ್ವೆ ಉಂಡ ರೀತಿ ಅನುಸ್ತು. ಇದೆಲ್ಲ ಗೊತ್ತಿಲ್ದೆ ಇದ್ದವರಿಗೂ ಸಹ ಬಾಯಲ್ಲಿ ನೀರೂರಿಸುವ ಹಾಗೆ ಪಂಚೇದ್ರಿಯಗಳನ್ನ ಬಡಿದೆಬ್ಬಿಸುವ ಕವಿತೆ.
ಆಗ ಈಗ ಸ್ನೇಹಿತರ ಕಾರಣದಿಂದ ಇದರ ರುಚಿ ನೋಡಿದವರಿಗಂತೂ ಈಗಿಂದೀಗಲೇ ತಿನ್ನಲೇಬೇಕೆನ್ನಿಸುವ ಹುಕೀ ಹುಟ್ಟಿಸುವ ಕವಿತೆ.

ಇಡೀ ಕವಿತೆ ಮತ್ತೆ ಓದಿ ಈ ಸಾಲಿನಲ್ಲಿ ಕುಂತುಬಿಟ್ಟಿರುವೆ.
"ನೂರುಮರ ನಡುವೆ ಹೆಸರಿಲ್ಲದೆ ಹಸಿರಾಗಿ ತೂಗುವ ತುಂಬುತರು..
ಕಾಡುತ್ತಿದೆ ಆ ಕಾಡಹಾದಿ.. ಯಾರಾದರೂ ತಂದುಕೊಟ್ಟಿದ್ದರೆ"

ಹೆಂಗಲ್ಲ ನಾವು?! ಆ ಕಾಡುಹಾದಿ ಕಾಯುತ್ತಲೇ ಇರುತ್ತದೆ ಎಂಬ ಭರವಸೆಯಲ್ಲಿ ನಗರದ ವರ್ತುಲ ರಸ್ತೆಗಳಲ್ಲಿ ನಮ್ಮ ನಾಗಾಲೋಟ.