Thursday, September 15, 2016

ಹನಿಕೇಕ್

ಐದು ನಿಮಿಷ ಬಿಟ್ಟು ತಿನ್ನೋಣ
ಎಂದು ತೆಗೆದಿಟ್ಟಿದ್ದ ಹನಿಕೇಕಿಗೆ ಇರುವೆ ಮುತ್ತಿವೆ
ಹಾಗಂತ ಮುನ್ಸೂಚನೆ ಇರಲಿಲ್ಲವೆಂದಲ್ಲ
ಆದರೆ ಕೆಲವೊಮ್ಮೆ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ
ಕುರುಂಜಿ ಹೂವಿಗಾಗಿ ಮತ್ತೆ ಹನ್ನೆರಡು ವರ್ಷ ಕಾಯ್ತೀಯಾ
ಅನ್ನುತ್ತಾನೆ ಜಾಹೀರಾತಿನಲ್ಲಿ ಅಪರಿಚಿತ ನಟ
ಇರುವೆಗಳಿಗೆ ಹೆದರಬಾರದು ಎಂಬುದೂ ಒಪ್ಪುವ ಮಾತಲ್ಲ
ನ್ಯಾಯಾಲಯದಿಂದಲೇ ಅನ್ಯಾಯ ನೀರಿಲ್ಲದ ನೋವು
ಕಲ್ಲು ತೂರಾಟ ಬೆಂಕಿ ಗಲಾಟೆ ಕರ್ಫ್ಯೂ
ಮುಚ್ಚಿದ ಅಂಗಡಿ-ಮುಂಗಟ್ಟುಗಳು -ಇಂತಹ ದಾರುಣ ದಿನದ
ಹಸಿದ ಹೊಟ್ಟೆಯ ಮಧ್ಯಾಹ್ನ ಮೃಷ್ಟಾನ್ನದಂತೆ ಸಿಕ್ಕ
ಒಂದು ಹನಿಕೇಕನ್ನು ದಕ್ಕಿಸಿಕೊಳ್ಳಲಾಗದ ದುಃಖ
ಯಾವ ದುಃಖಕ್ಕೂ ಕಮ್ಮಿಯಲ್ಲ

ಆದರೆ ಇರುವೆಯ ಕಷ್ಟವನ್ನೂ ಕೊಂಚ ನೋಡಬೇಕಲ್ಲ
ಎಷ್ಟು ದಿವಸದಿಂದ ಹಸಿದಿದ್ದವೋ ಏನೋ
ಅವುಗಳ ಆರ್ತನಾದಕ್ಕೆ ಕಿವಿಗೊಡುವವರಾರು
ಇಟ್ಟ ತಟ್ಟೆಗೆ ಮೆತ್ತಿದ ಸಿಹಿಯನ್ನೇ ಮೆಲ್ಲುವ ಅಲ್ಪತೃಪ್ತರೂ
ಅಂತಸ್ತಂತಸ್ತಾಗಿ ಮೇಲೇರುತ್ತಿರುವ ಸಾಹಸಿಗರೂ
ಪದರಪದರಗಳ ನಡುವೆ ಸಿಲುಕಿ ಸೆಣಸುತ್ತಿರುವ ಹೋರಾಟಗಾರರೂ
ಕಿಂಡಿಗಳೊಳಗೆ ತೂರಿ ಒಳಹೊಕ್ಕಿರುವ ಉತ್ಖನನಕಾರರೂ
ಒಂದು ಹನಿಕೇಕಿಗೆ ಇರುವೆ ಮುತ್ತಿದರೆ
ಎಷ್ಟೆಲ್ಲ ನೋಡಲು ಸಿಗುತ್ತದೆ -ಹಸಿವನೇ ಮರೆಸುವಂತೆ.

ಹಾಗಂತ ನೋಡುತ್ತ ಮೈಮರೆಯಬಾರದು
ನಮ್ಮ ಪ್ರಯತ್ನ ನಾವು ಮಾಡಲೇಬೇಕು
ಯಕಃಶ್ಚಿತ್ ಇರುವೆಗಳೊಂದಿಗೆ ಎಂತ ಹೋರಾಟ
ಹಣಿಯುವುದಿದ್ದರೆ ಆನೆಯನ್ನು ಕೆಡವು ಎನ್ನುತ್ತಾರೆ ಕೆಲವರು
ಆದರೆ ಹಸಿದ ಮನುಷ್ಯ ಇರುವೆಗಿಂತ ಕುಬ್ಜ
ಹನಿಕೇಕಿನೆದುರು ಮೃದು ಧೋರಣೆ ಸಲ್ಲದು

ದಡಬಡಿಸಿ ಚಾಕು ಹುಡುಕಿ ಇನ್ನೂ ಶತ್ರುವಿನಾಕ್ರಮಣವಾಗದ
ಭಾಗಗಳ ಜಾಲಾಡಿ ನಾಜೂಕಾಗಿ ಕತ್ತರಿಸಿ
ಮೆದುಮೆದು ಮಲ್ಲಿಗೆ ನೆಲಕ್ಕೆ ಬೀಳದಂತೆ
ನೇರವಾಗಿ ಬಾಯಿಗಿಡಬೇಕು
ಮೋಸ ಮಾಡಿದರೂ ಹಾಗೆ ಮಾಡಬೇಕು
ಇರುವೆಗೂ ತಿಳಿಯದಂತೆ
ಇರುವೆಯೂ ತನ್ನ ತಿಳಿವ ಬೆಳಕಲ್ಲಿ ಗೆದ್ದಂತೆ ಪರಿಭಾವಿಸಿ
ಮೋಸಹೋಗಿದ್ದೇ ತಿಳಿಯದೆ - ಹೊಟ್ಟೆ ತುಂಬಿದ್ದೇ ಗೆಲುವೆಂದುಕೊಂಡು
ನಾನೂ ಇರುವೆಯ ಎದುರು ಗೆದ್ದಿದ್ದೇ ಗೆಲುವೆಂದುಕೊಂಡು.

No comments: