ಮಾವಿನ ಸೀಸನ್ನಿಗೆ ಕಾಯದ ಜಾಹೀರಾತಿನ
ನಟಿ ತಲೆಯೆತ್ತಿ ಕುಡಿಯುತ್ತಿದ್ದಾಳೆ ಮಾಜಾ
ಹೂದಾನಿಯಲ್ಲಿನ ಪ್ಲಾಸ್ಟಿಕ್ ಹೂವಿಗೆ ಬಂದಿದೆ
ದಿಕ್ಕು ತಪ್ಪಿದ ಒಂದು ಮರಿದುಂಬಿ
ಟೆರೇಸ್ ಗಾರ್ಡನಿನ ಪುಟ್ಟ ಪಾಟಲ್ಲಿ ಬೆಳೆದ
ಮಲ್ಲಿಗೆ ನರುಗಂಪ ಬೀರುತ್ತಿದೆ
ಫ್ಲೈಓವರಿನ ಕಂಬಗಳಿಗೆ ಹಬ್ಬಿಸಿದ
ಬಳ್ಳಿಗಳು ಹಸಿರ ಸೂಸುತ್ತಿವೆ
ಸ್ಪ್ರಿಂಕ್ಲರಿನಿಂದ ಚಿಮ್ಮಿದ ನೀರನ್ನೇ ಮಳೆಯೆಂದು
ಭಾವಿಸಿದ ವಸುಂಧರೆ ಗಂಧ ಹೊಮ್ಮಿಸುತ್ತಿದೆ
ಟೋನು ಬದಲಿಸಿದ ಅಲಾರ್ಮು ಬೆಳಬೆಳಗ್ಗೆ
ಕೋಗಿಲೆಯಂತೆಯೇ ಕೂಗುತ್ತಿದೆ ಪಂಚಮದಲ್ಲಿ
ಹಬ್ಬಕ್ಕೆಂದು ತೊಳೆದು ಹಾಕಿದ ಪ್ಲಾಸ್ಟಿಕ್ ತೋರಣ
ಮನೆಯ ಬಾಗಿಲಲ್ಲಿ ನಳನಳಿಸುತ್ತಿದೆ
ಸನ್‌ಸ್ಕ್ರೀನ್ ಲೇಪಿಸಿಕೊಳ್ಳುತ್ತ ಹೊಸ್ತಿಲಲ್ಲಿ ನಿಂತಿರುವ
ಹೊಸ ಸಂವತ್ಸರ ಮುದ್ದಾಗಿದೆ.
ಹೇಮಲಂಬ
ವರ್ಷದಲ್ಲಿ ನಿಮಗೆ ಬಾಯಾರಿದಾಗೆಲ್ಲ ಕುಡಿಯಲು ಸಬ್ಸೇ ಶುದ್ಧ ಪಾನಿಯೇ ಸಿಗಲಿ. ಸಂತೂರ್
ಮಮ್ಮಿ ಗೋದ್ರೇಜ್ ಹೇರ್‌ಡೈ ಹಾಕಿದ ಅಪ್ಪನನ್ನು ಕಂಡು ನಾಚಿಕೊಳ್ಳಲಿ. ಸೋಪಿನ ನೀರಲ್ಲಿ
ಮುಳುಗೆದ್ದ ಅಂಗಿಯ ಕಲೆ ಮಾಯವಾಗಲಿ. ಟೀ ಕುಡಿಯುತ್ತಿದ್ದಂತೆಯೇ ಜ್ವರ ಇಳಿಯಲಿ.
ಕತ್ತಲಲ್ಲಿ ತೆಗೆಯಲೆಣಿಸಿದ ಸೆಲ್ಫಿಗೂ ನಿಮ್ಮ ಮೊಬೈಲು ಬೆಳಕು ತೋರಲಿ. ದಿನಗಳು
ಮತ್ತಷ್ಟು ಚಂದವಾಗಲಿ. ಶುಭಾಶಯಗಳು.
No comments:
Post a Comment