Thursday, November 21, 2019

ಗಡ್‌ಬಡ್ ಡಿಲಕ್ಸ್

ತಾಜಾ ಹಣ್ಣುಗಳಿಂದ ಮಾಡಿದ ಅಸಲಿ ಸ್ವಾದದ ಜೆಲ್ಲಿ
ಏಳು ಭಿನ್ನ ಫ್ಲೇವರಿನ ಏಳು ಸ್ಕೂಪ್ ಐಸ್‌ಕ್ರೀಮುಗಳು
ಕಣ್ಣೆದುರೆ ಕತ್ತರಿಸಿದ ರುಚಿರುಚಿ ಹಣ್ಣುಗಳ ಚೂರುಗಳು
ಗೋಡಂಬಿ ದ್ರಾಕ್ಷಿ ಪಿಸ್ತಾ ಟುಟಿಫ್ರೂಟಿ ಇನ್ನೂ ಏನೇನೋ
ಮೇಲೆ ದೋಣಿಯ ಹಾಯಿಯಂತೆ ಸಿಕ್ಕಿಸಿದ ತೆಳುಬಿಸ್ಕತ್ತು
ಗಟ್ಟಿ ಕಾಗದದ ಕಪ್ಪಿನಲ್ಲಿ ಹಾಕಿ ಕಟ್ಟಿ ಕೊಟ್ಟಿದ್ದಾರೆ ಅನಾಮತ್ತು
ಒಂದೇ ಷರತ್ತೆಂದರೆ ಆದಷ್ಟು ಬೇಗ ಮನೆಯ ತಲುಪಬೇಕು

ಸ್ಪೂನು ಹಿಡಿದು ಕುಳಿತಿದ್ದಾಳಲ್ಲಿ ಕಾಯುತ್ತ ಮಡದಿ
ಅಪ್ಪ ತರುವ ಐಚೀಮಿಗಾಗಿ ಬಾಗಿಲ ಬುಡದಲ್ಲೇ ಮಗಳು
ಸೆಖೆಸೆಖೆಯ ಸಂಜೆ ರಸ್ತೆಯಂಚಲ್ಲಿ ಮುಳುಗುತ್ತಿರುವ ಸೂರ್ಯ
ಅಡ್ಡಡ್ಡ ನುಗ್ಗುವ ಅವಸರದ ವಾಹನಗಳು
ಉದ್ದಾರವೆಂದೂ ಆಗದ ನಗರದ ಉದ್ದುದ್ದ ಟ್ರಾಫಿಕ್ಕು
ಎಷ್ಟು ಬೇಗ ಹೆಜ್ಜೆ ಹಾಕಿದರೂ ಕಾಯಲೇಬೇಕು
ಸ್ಟ್ರಾಬೆರಿಯಂತೆನಿಸುತ್ತಿರುವ ಸಿಗ್ನಲ್ಲಿನ ಲೈಟು ಪಿಸ್ತಾ ಆಗಲು

ಇಂತಹ ಧರ್ಮಸಂಕಟದ ಘಳಿಗೆಯಲ್ಲೇ ಸಿಗುತ್ತಾನೆ ಅವನು
ಎದುರಾಗುತ್ತಾನೆ ನಾಲ್ಕು ದಾರಿ ಕೂಡುವ ತಿರುವಿನಲ್ಲಿ ಧುತ್ತನೆ
ಫೋನಿಗೂ ಸಿಗದವನು, ಅದೆಷ್ಟೋ ವರುಷಗಳ ನಂತರ
ಅರೇ ನೀನು ಇಲ್ಲಿ ಹೇಗೆ ಬಾ ಬಾ, ಬದಿಗೆ ಕೈ ಹಿಡಿದೆಳೆಯುತ್ತಾನೆ
ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಇಕ್ಕಳದಲಿ ಸಿಲುಕಿಸಿ

ದೋಸ್ತಾ ನಿನ್ನ ಜತೆ ಮಾತನಾಡಬಾರದೆಂದಿಲ್ಲ
ನೀನು ಮತ್ತೆ ಸಿಕ್ಕಿದ್ದು ಖುಷಿಯೇ
ಆದರೀಗ ನಾನು ಗಡಿಬಿಡಿಯಲ್ಲಿರುವೆ
ಚೀಲದಲ್ಲಿ ಐಸ್‌ಕ್ರೀಮು ಕರಗುತ್ತಿದೆ
ಮನೆಯಲ್ಲಿ ಅಸಹನೆ ಹೆಚ್ಚಾಗುತ್ತಿದೆ
ಇದೊಂದು ಸಲ ಬಿಟ್ಟುಕೊಡು
ಇಕೋ ನನ್ನ ಮೊಬೈಲ್ ನಂಬರ್ ತಕೋ
ಯಾವಾಗ ಬೇಕಿದ್ದರೂ ಕಾಲ್ ಮಾಡು

ಊಹುಂ, ಪುಣ್ಯಕೋಟಿಗೆ ಮಾತೇ ಹೊರಡುವುದಿಲ್ಲ
ನಮ್ಮ ದೋಸ್ತಿಗಿಂತ ಐಸ್‌ಕ್ರೀಮು ಹೆಚ್ಚಾ ಎಂದಾನು
ಹೆಂಡತಿ-ಮಕ್ಕಳ ಜೊತೆ ತಿನ್ನೋದು ಇದ್ದಿದ್ದೇ,
ಈಗ ನಾವೇ ತಿನ್ನೋಣ ಬಾ ಎಂದಾನು
ಧಿಕ್ಕರಿಸಿ ಹೊರಟರೆ ತಪ್ಪಿಹೋಗಬಹುದು
ಮತ್ತೆ ಸ್ನೇಹವ ಗಟ್ಟಿಯಾಗಿಸಲಿರುವ ಅವಕಾಶ
ಸಿಕ್ಕವನ ಜತೆ ನಿಂತಿರೋ, ಕರಗಿಹೋಗುವುದು
ಗಟ್ಟಿಯಿದ್ದಾಗಲೇ ಮುಗಿಸಬೇಕಿರುವ ರಸಭಕ್ಷ್ಯ

ಕೈಯಲ್ಲಿದ್ದುದು ಬಾಯಿಗೆ ಸೇರಲೂ ಅದೃಷ್ಟ ಬೇಕೋ ಹರಿ
ಆರಂಗುಲ ದೂರ; ಇನ್ನೇನು ದಕ್ಕಿತೆಂದು ಬೀಗಿದರೆ
ಅತ್ಯಾಪ್ತ ಗೆಳೆಯನೇ ಎದುರಾಗುವನು ಅರ್ಬುತನಾಗಿ
ಕರಗಿ ಪಾಯಸವಾದ ಐಸ್‌‍ಕ್ರೀಮ್ ಅಣಕಿಸುವುದು
ಬಣ್ಣರಸದಲ್ಲಿ ತೇಲುವ ಒಣಹಣ್ಣಕಣ್ಣುಗಳಿಂದ
ಬಿಟ್ಟೂಬಿಡದೆ ರಿಂಗಾಗುತ್ತಿರುವ ಫೋನು
ಸಾರುವುದು ಮನೆಯಲ್ಲಿನ ಕಾತರದುರಿಶಾಖವ
ಬಾನಲ್ಲಿ ಹಲವು ಫ್ಲೇವರಿನ ಕಿರಣಗಳನುಂಡ ಚಂದ್ರ
ತಣ್ಣಗೆ ನಗುವನು ಶ್ಯಮಂತಕಮಣಿಯ ಹೊಳಪಿನಲ್ಲಿ.

1 comment:

sunaath said...

ಪ್ರಾಪಂಚಿಕ ಸಂಕಟಗಳು!