Tuesday, November 03, 2020

ಗೀಚು

ತನ್ನ ಪುಟ್ಟ ಬೆರಳುಗಳಲ್ಲಿ ಪೆನ್ನು ಹಿಡಿದು
ಬರೆಯುತ್ತಿದ್ದಾಳೆ ಮಗಳು ಬಿಳಿಹಾಳೆಯಲ್ಲಿ

ಹೀಗೇ ಒಂದೊಂದಕ್ಷರ ಕಲಿತು
ಆಮೇಲವನ್ನು ಜೋಡಿಸಿ‌ ಪದಗಳಾಗಿಸಿ
ಪದಕೆ‌ ಪದ ಪೋಣಿಸಿ ವಾಕ್ಯ ರಚಿಸಿ
ವಾಕ್ಯದ ಮುಂದೆ ವಾಕ್ಯವನಿಟ್ಟು ಮಹಾಪ್ರಬಂಧ ಬರೆದು

ಈ ನಡುವೆ ಆಕೆಗೆ ಗೀಚುವುದು ಬಿಟ್ಟು ಹೋಗಿರುತ್ತೆ
ಇಷ್ಟು ದಿನ ಗೋಡೆ ನೆಲ ಟೇಬಲು ಅಪ್ಪನ ಪುಸ್ತಕ
ಅಮ್ಮನ ಬಿಳಿಯಂಗಿ ತನ್ನದೇ ಮೈಕೈ-
ಗಳ್ಯಾವುದರಲೂ ಭೇದವೆಣಿಸದೆ
ಮನಸಿಗೆ ಬಂದುದ ಗೀಚುತ್ತಿದ್ದ ಮಗಳು
ಈಗ ಅಕ್ಷರಗಳನರಿತು

ಬರೆವುದ ಕಲಿತ ಮೇಲೆ ಗೀಚುವ ಹಾಗಿಲ್ಲ
ನಡೆವುದ ಕಲಿತ ಮೇಲೆ ಬೀಳುವ ಹಾಗಿಲ್ಲ
ಮಾತು ಕಲಿತ ಮೇಲೆ ತೊದಲುವ ಹಾಗಿಲ್ಲ

ಮುಗ್ದತೆಯ ತೊಡೆಯಲೆಂದೇ ಇರುವ
ಈ ಜಗದ ರೀತಿಗೆ ಬಲಿಯಾದ ಮಗಳು
ಒಂದೊಂದಾಗಿ ಕಲಿಯುತ್ತ ಕಲಿಯುತ್ತ

ಆಮೇಲೆ ನಾವೂ ಈ ಮನೆ ಬದಲಿಸಿ
ಮಾಲೀಕರು ಗೋಡೆಗೆ ಹೊಸ ಬಣ್ಣ ಬಳಿಸಿ
ಇನ್ನೆಂದೂ ಕಾಣಿಸದಂತೆ ನನ್ನ ಮಗಳ ಗೀಚು

ಹಳೇ ಪರಿಚಯ ಹಳೇ ನೆನಪುಗಳ
ಮೆಲುಕು ಹಾಕೋಣವೆಂದು
ಮತ್ತೆ ಆ ಮನೆಗೆ ಬಂದರೆ ಮೊಂದೊಂದು ದಿನ

ಗೋಡೆಯ ಹೊಸ ಬಣ್ಣಪದರದ ಮೇಲೆ
ಹೊಸ ಬಾಡಿಗೆದಾರರ ಮಗುವಿನ ಮುದ್ದುಗೀಚು
ಈಗಾಗಲೇ ದೊಡ್ಡವಳಾಗಿಹೋಗಿರುವ ಮಗಳು
ತನಗಿಂತ ಸಣ್ಣ ವಯಸಿನ ಆ ಮಗುವಿಗೆ
ಗೋಡೆಯ ಮೇಲೆ ಗೀಚಬಾರದೆಂದು
ತಿಳಿ ಹೇಳುತ್ತಿದ್ದಾಳೆ.

1 comment: