Wednesday, January 20, 2021

ಕಂಪನ


ನೀವು ಗಮನಿಸಿದ್ದೀರೋ ಇಲ್ಲವೋ
ವಿಲ್ ಬರೆಸುವವರ ಕೈ ಸಣ್ಣಗೆ ನಡುಗುತ್ತಿರುತ್ತದೆ
ಅಂಬಾಸಿಡರ್ ಕಾರಿನ ಗೇರಿನಂತೆ
ಅವರ ಬಳಿ ಗಟ್ಟಿಯಾಗಿ ಮಾತಾಡಬೇಡಿ
ಗಾಜಿನ ಕವಚದ ಅವರ ಹೃದಯ
ಫಳ್ಳನೆ ಒಡೆದು ಹೋಗಬಹುದು
ಕುರ್ಚಿಗೊರಗದೆ ಕೂತು ತುಸುವೆ ಬಾಗಿ
ಮೆಲುದನಿಯಲವರಾಡುವ ಮಾತು ಕೇಳಿಸಿಕೊಳ್ಳಿ:

ಅಷ್ಟೆಲ್ಲ ಮಾಡಿದರೂ ತನ್ನನು ತಾತ್ಸಾರ ಮಾಡುವ
ಹಿರಿಮಗನ ಬಗೆಗಿನ ಅವರ ಅಸಮಾಧಾನ
ವಿದೇಶದಲ್ಲಿದ್ದರೂ ಆಗೀಗ ಫೋನು ಮಾಡುವ
ಕಿರಿಮಗನೆಡೆಗೆ ಅದೇನೋ ಅಭಿಮಾನ
ಈಗಾಗಲೇ ಹಿಸ್ಸೆ ತೆಗೆದುಕೊಂಡು ಬೇರಾಗಿರುವ
ಮಧ್ಯದ ಮಗನ ಬಗ್ಗೆ ಸಿಡುಕು
ಹೆಣ್ಣುಮಕ್ಕಳನ್ನೆಲ್ಲ ಒಳ್ಳೇ ಕಡೆ ಸೇರಿಸಿದ್ದೇನೆ
ಎನ್ನುವಾಗ ನೆಮ್ಮದಿಯ ಸಣ್ಣನಗೆ

ಯಾವುದಕ್ಕೂ ಟಿಶ್ಯೂ ರೆಡಿಯಿಟ್ಟುಕೊಂಡಿರಿ:
ನಾಲ್ಕು ವರ್ಷದ ಹಿಂದೆ ಗತಿಸಿದ
ಹೆಂಡತಿಯ ಬಗ್ಗೆ ಹೇಳುವಾಗ
ಫಕ್ಕನೆ ಕಣ್ಣೀರೂ ಉಕ್ಕೀತು
ಆ ಟಿಶ್ಯೂವನ್ನೇನು ಅವರು ಬಳಸುವುದಿಲ್ಲ
ಮಂಜುಗಟ್ಟಿದ ಕನ್ನಡಕ ತೆಗೆದು
ತಮ್ಮದೇ ಕರವಸ್ತ್ರದಿಂದ ಒರೆಸಿಕೊಂಡು...

ನಿಮ್ಮ ಕತೆ ಬೇಡ, ಆಸ್ತಿ ವಿಲೇವಾರಿ ಬಗ್ಗೆ
ಹೇಳಿ ಸಾಕು ಅಂತೆಲ್ಲ ರೇಗಬೇಡಿ
ರಿಟೈರಾದ ದಿನ ಸಹೋದ್ಯೋಗಿಗಳು
ಹಾರ ಹಾಕಿ ಮಾಡಿದ ಸನ್ಮಾನದ ಬಗ್ಗೆ
ಅವರಿಗೆ ಹೇಳಿಕೊಳ್ಳಬೇಕಿದೆ, ಕೇಳಿಸಿಕೊಳ್ಳಿ

ಕೆಲಸ ಮುಗಿಸಿ ನಿಮ್ಮ ಕಚೇರಿಯಿಂದ
ಹೊರಟಾಗ ಅವರ ಜತೆಗೇ ತೆರಳಿ
ಮೆಟ್ಟಿಲು ಇಳಿಯುವಾಗ ಕೈ ಹಿಡಿದುಕೊಳ್ಳಿ
ಬೇಡ ಬೇಡ ಎನ್ನುತ್ತಲೇ ವಾಲುದೇಹವನ್ನು
ಸಂಬಾಳಿಸಿಕೊಳ್ಳುತ್ತ ಕೈಚೀಲದಲ್ಲಿನ
ಕಾಗದ ಪತ್ರಗಳನ್ನು ಜೋಪಾನ ಮಾಡುತ್ತಾ...

ಆಮೇಲವರು ರಸ್ತೆಯ ತಿರುವಿನಲ್ಲಿ
ಕರಗಿಹೋಗುವರು ಪಶ್ಚಿಮದ ರವಿಯ ಹಾಗೆ

ನೀವು ವಾಪಸು ಕಚೇರಿಗೆ ಬಂದಾಗ
ಅರೆ, ಅದ್ಯಾಕೆ ನಿಮ್ಮ ಕೈ ಸಣ್ಣಗೆ ನಡುಗುತ್ತಿದೆ
ಅದ್ಯಾಕೆ ಹಾಗೆ ನಿರ್ವಾತವನ್ನು ತುಂಬಿಸಿಬಿಡುವವರ ಹಾಗೆ
ಹಳೆಯ ಹಿಂದಿ ಹಾಡುಗಳಿಗೆ ತಡಕಾಡುತ್ತಿದ್ದೀರಿ
ಎಂದೂ ಇಲ್ಲದವರು ಅದ್ಯಾಕೆ ಲಗುಬಗೆಯಿಂದ ಹೆಂಡತಿಗೆ
ಫೋನು ಮಾಡಿ ಏನು ಮಾಡ್ತಿದೀ ಅಂತೆಲ್ಲ ವಿಚಾರಿಸ್ತಿದೀರಿ
ಅದ್ಯಾಕೆ ಮಕ್ಕಳ ಫೋಟೋಗಳನ್ನು
ಸ್ಕ್ರಾಲ್ ಮಾಡಿ ಮಾಡಿ ನೋಡುತ್ತಿದ್ದೀರಿ
ಅದ್ಯಾಕೆ ಹಾಗೆ ನೀರು ಕುಡಿಯುತ್ತಿದ್ದೀರಿ
ಅದ್ಯಾಕೆ ಅದ್ಯಾಕೆ... 

2 comments:

Unknown said...

ಆಪ್ತಕವಿತೆ. ನಮ್ಮದೇ ಬದುಕು .ಟಿಶ್ಶೂ ಕೈಯ್ಶಲ್ಲಿ ಬೇಕು ನಾಳೆಗಳ ಅನಿರೀಕ್ಷಿತ ತಿರುವಿನಲ್ಲಿ ಜೊತೆಯಾಗಲು

Unknown said...

Beautifully expressed.