Showing posts with label ಬೆಂಗಳೂರು. Show all posts
Showing posts with label ಬೆಂಗಳೂರು. Show all posts

Monday, January 08, 2024

ಜಸ್ಟ್ ಬ್ಯಾಂಗ್ಲೂರ್

ಯಾರ್ರೀ ಎಂಟ್ನೇ ಮೈಲೀಅಂತ ಕಂಡಕ್ಟರ್ ಕೂಗಿದಾಗ ಹೌಹಾರಿ ಎದ್ದದ್ದು. ಊರಿನಲ್ಲಿ ಬಲ್ಲವರು ಹೇಳಿಕಳುಹಿಸಿದ್ದರು: ಎಂಟನೇ ಮೈಲಿ ಬಂತು ಎಂದರೆ ಬೆಂಗಳೂರು ಬಂತು ಎಂದರ್ಥ. ಅಲ್ಲಿಗೆ ಎಚ್ಚರ ಮಾಡಿಕೊಂಡು ಬ್ಯಾಗ್ ಸರಿ ಮಾಡಿಕೊಂಡು ಕುಳಿತುಕೋ. ಎಂಟನೇ ಮೈಲಿ ಆದಮೇಲೆ ಜಾಲಹಳ್ಳಿ ಕ್ರಾಸ್, ಗೊರಗುಂಟೆಪಾಳ್ಯ, ಯಶವಂತಪುರ, ನವರಂಗ್..... ಸ್ವಲ್ಪವೇ ಹೊತ್ತಿನಲ್ಲಿ ಮೆಜೆಸ್ಟಿಕ್ ಎಂಬ ಲಾಸ್ಟ್‌ ಸ್ಟಾಪ್ ಬಂದೇಬಿಡುವುದು. ಎಚ್ಚರವಾಗಿರು.. ಎಚ್ಚರವಾಗಿರುಎಂಬ ಮಾತನ್ನು ಪದೇಪದೇ ಹೇಳಿದ್ದರು ಮನೆಯಲ್ಲಿ. ಅವರು ಅಷ್ಟು ಸಲ ಹೇಳಿದಮೇಲೆಯೂ ಮೈ ಮರೆಯಲಾದೀತೇ? ಎಂಟನೇ ಮೈಲಿಯೇನು, ತುಮಕೂರು ಬಂದಾಗಲೇ ಬೆಂಗಳೂರು ಬಂತೆಂದು ಚಡಪಡಿಸಿ ಎದ್ದದ್ದು. ಇಷ್ಟಕ್ಕೂ, ಅಷ್ಟೊಂದು ಕನಸುಗಳು, ಅಷ್ಟೊಂದು ಬಯಕೆಗಳು, ಅಷ್ಟೊಂದು ನಿರೀಕ್ಷೆಗಳು, ಅಷ್ಟೊಂದು ಭಯ ಹೊದ್ದುಕೊಂಡು ಮಲಗಿದವರಿಗೆ ನಿದ್ರೆ ಬಂದೀತಾದರೂ ಹೇಗೆ?
 
ಮೆಜೆಸ್ಟಿಕ್ ಎಂಬ ಸಮುದ್ರದಲ್ಲಿ ಬಸ್ಸು ನಮ್ಮನ್ನು ಇಳಿಸಿಯೇಬಿಟ್ಟಿತು. ಎಷ್ಟೊಂದು ಕನಸುಗಳು ನನ್ನೊಂದಿಗೇ ಇಳಿದವು... ಸುತ್ತ ನೋಡಿದರೆ ನನ್ನ ಹಾಗೆಯೇ ಭಯ-ಚಡಪಡಿಕೆ-ಹಂಬಲಗಳನ್ನು ರಾಚಿಕೊಂಡಿದ್ದ ಎಷ್ಟೊಂದು ಜೀವಗಳು ಹರಿದಾಡುತ್ತಿವೆ. ಯಾವ ತೇರು ನೋಡಲು ಬಂದವರು ಇಷ್ಟೆಲ್ಲ ಜನ. ಏನೂ ತಿಳಿಯದಿದ್ದರೂ ಎಲ್ಲ ತಿಳಿದವರಂತೆ ಅದು ಹೇಗೆ ನಡೆಯುತ್ತಿದ್ದಾರೆ ಹುಸಿಗಾಂಭೀರ್ಯದಿಂದ. ಹೆಗಲ ಚೀಲದಲ್ಲಿರುವ ಎರಡು ಅಂಗಿ, ಎರಡು ಪ್ಯಾಂಟು, ಒಂದು ಕೌದಿಗಳನ್ನು ಇವರೆಲ್ಲ ಯಾವ ನಲ್ಲಿಯಿಂದಿಳಿಯುವ ಕಾವೇರಿ ನೀರಿನಲ್ಲಿ ತೊಳೆಯುವರು.  ಒಂದೇ ಪುಟದ ಬಯೋಡೇಟಾ, ಝೆರಾಕ್ಸು ಮಾಡಿಸಿದ ಅಂಕಪಟ್ಟಿ ಮತ್ತು ಯಾರನ್ನೋ ಭೇಟಿ ಮಾಡಿದರೆ ಕೆಲಸ ಕೊಡಿಸುತ್ತಾರಂತೆ ಎಂಬ ಯಾರದೋ ಮಾತಿಗೆ ಈ ಮಹಾಸಾಗರಕ್ಕಿಳಿಯುವಷ್ಟು ಭರವಸೆಯಿತ್ತಲ್ಲ.
 
ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾಗಿ, ಕೆಲಸ, ಸಂಬಳ, ಉಳಿದುಕೊಳ್ಳಲು ಮನೆ ಎಲ್ಲವೂ ಪಕ್ಕಾ ಆದಮೇಲೆಯೇ ಬೆಂಗಳೂರಿಗೆ ಬರುವ ಇಪ್ಪತ್ತು ಪ್ರತಿಶತ ಅದೃಷ್ಟಶಾಲಿಗಳನ್ನು ಬಿಡಿ. ಆದರೆ ಇನ್ನುಳಿದ ಎಂಬತ್ತು ಜನ ಇಲ್ಲಿಗೆ ದಿಕ್ಕೆಟ್ಟು ಬಂದವರು. ದಿಕ್ಕು ಹುಡುಕಲು ಬಂದವರು. ಏನು ಗೊತ್ತಿತ್ತು ನಮಗೆ ಇಲ್ಲಿಗೆ ಬರುವಾಗ? ಅಪ್ಪ-ಅಮ್ಮ ಜೇಬಿಗೆ ತುರುಕಿ ಕಳುಹಿಸಿದ್ದ ನೋಟುಗಳು ಎಷ್ಟು ಕಾಲ ಬಾಳಿಕೆ ಬರುವಂತಿದ್ದವು? ಟೀವಿಯಲ್ಲಿ ನೋಡಿದ್ದ ನಗರದ ಚಿತ್ರ, ಹರುಕುಮುರುಕು ಇಂಗ್ಲೀಷು, ಅರೆಬರೆ ಓದುಗಳ ಜೊತೆ ಒಂದಿಷ್ಟು ಭಂಡತನ ಇಲ್ಲದಿದ್ದರೆ ಈ ನಗರದಲ್ಲಿ ನಾವು ಉಳಿದುಕೊಳ್ಳಲು ಸಾಧ್ಯವಿತ್ತೆ?
 
ಸಿಗ್ನಲ್ಲಿನ್ನಲ್ಲಿ ರಸ್ತೆ ದಾಟುವದನ್ನು ಕಲಿತೆವು, ಫಳಫಳ ಹೊಳೆವ ಹೊದಿಕೆಯ ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ ಸಾಗಿದೆವು, ಮಾಲುಗಳ ಎಸ್ಕಲೇಟರುಗಳನ್ನು ಢವಗುಡುವ ಎದೆಯೊಂದಿಗೆ ಏರಿದೆವು, ಮೂಲೆಯಂಗಡಿಯಲ್ಲಿ ಬನ್ನು ತಿಂದು - ಚಹಾ ಕುಡಿದು ಹೊಟ್ಟೆ ತುಂಬಿಸಿಕೊಂಡೆವು, ಬಿಎಂಟಿಸಿ ಬಸ್ಸೇರಿ ಪ್ರತಿ ಸ್ಟಾಪು ಬಂದಾಗಲೂ ಬಸ್‌ಸ್ಟಾಂಡ್ ಮೇಲಿನ ಹೆಸರನ್ನು ಬಗ್ಗಿಬಗ್ಗಿ ಓದಿ ನಮ್ಮ ಸ್ಟಾಪ್ ಇನ್ನೂ ಬಂದಿಲ್ಲ ಎಂದುಕೊಂಡೆವು, ದಿನಪತ್ರಿಕೆಗಳಲ್ಲಿನ ಜಾಬ್ ಓಪನಿಂಗ್ ಜಾಹೀರಾತುಗಳನ್ನು ಮಾರ್ಕ್ ಮಾಡಿಕೊಂಡು ಫೋನಿಸಿದೆವು, ಚಿತ್ರವಿಚಿತ್ರ ಹೆಸರಿನ ಕಂಪನಿಗಳಿಗೆ ಇಂಟರ್ವ್ಯೂ ಕೊಟ್ಟು ಅವರಿಂದ ವಾಪಸು ಕಾಲ್ ಬರಬಹುದೆಂದು ಕಾದೆವು, ರಾತ್ರಿಯಾಕಾಶದಲ್ಲಿ ನಕ್ಷತ್ರಗಳೊಂದನ್ನೂ ತೋರದ ನಗರ ಬೀದಿಬೀದಿಯಲ್ಲಿ ಝಗಮಗಿಸುವ ರೀತಿಗೆ ಬೆರಗಾದೆವು, ನಾಳೆ ಬೆಳಿಗ್ಗೆಯ ತಿಂಡಿಗೆ ಹಣವಿದೆಯಾ ಅಂತ ಜೇಬು ಮುಟ್ಟಿ ಮುಟ್ಟಿ ನೋಡಿಕೊಂಡೆವು.
 
ಬೆಂಗಳೂರು ನಮ್ಮನ್ನು ಬಿಟ್ಟುಕೊಡಲಿಲ್ಲ. , ಯಾರ್ಯಾರಿಗೋ ಕೆಲಸ ಕೊಟ್ಟಿದೀನಂತೆ, ನಿಂಗೆ ಇಷ್ಟು ಟ್ಯಾಲೆಂಟ್ ಇದೆ, ಬಾ ನಂಜೊತೆಅಂತ ಕರೆದುಕೊಂಡು ಹೋಗಿ ಉದ್ಯೋಗ ಕೊಡಿಸಿತು. ಮೊದಲ ಸಂಬಳ ಬಂದಾಗ ಅಮ್ಮನಿಗೆ ಸೀರೆ ಕೊಂಡೂ ಉಳಿಯಿತಲ್ಲ ಹಣ. ಪೀಜಿ, ಅಲ್ಲಿಂದ ಸಣ್ಣ ರೂಮು, ನಂತರ ಒನ್  ಬಿಎಚ್‌ಕೆ, ಸ್ವಂತ ಅಡುಗೆ, ರೂಂಮೇಟ್ಸು, ರೆಡಿಮಿಕ್ಸ್ ಸಾರು, ವೀಕೆಂಡ್ ದರಬಾರು, ಹುಡುಗಿಯ ಎಸ್ಸೆಮ್ಮೆಸ್ಸು, ಪಿಕ್‌ಪಾಕೆಟ್ ಆದ ನೋವು ಎಷ್ಟೆಲ್ಲ ಅನುಭವಗಳನ್ನು ಕೊಟ್ಟಿತು ನಗರ. ಫಸ್ಟ್ ಡೇ ಫಸ್ಟ್ ಶೋ ನೋಡಿದ ನೆಚ್ಚಿನ ಹೀರೋ ಸಿನೆಮಾ, ಅಂತರಜಾಲ ಜಾಲಾಡಿ ಪತ್ತೆಹಚ್ಚಿದ ಬೆಟ್ಟಕ್ಕೆ ಹೋದ ವೀಕೆಂಡ್ ಟ್ರೆಕ್ಕು, ಇಎಂಐನಲ್ಲಿ ಕೊಂಡ ಮೊದಲ ಟೂವ್ಹೀಲರು, ಕಾಫಿಡೇಯ ದುಬಾರಿ ಬಿಲ್ಲು, ‘ಬಯ್ ಟೂ ಗೆಟ್ ವನ್ ಫ್ರೀ ಆಫರಿನಲಿ ಕೊಂಡ ಜೀನ್ಸು, ಮೆಟ್ರೋ ಪಾಸು, ಹೇಗೋ ಉಳಿಸಿದ ನಾಲ್ಕು ಕಾಸು...  ಬೆಂಗಳೂರು ನಿಧನಿಧಾನಕ್ಕೆ ನಮ್ಮನ್ನು ಗಟ್ಟಿ ಮಾಡಿತು. ಶಕ್ತರನ್ನಾಗಿಸಿತು. ಎಂದೋ ದಿಕ್ಕೆಟ್ಟು ಕುಳಿತ ಘಳಿಗೆ ಯಾರೋ ಬಂದು ಮುಂದೇನಯ್ಯಾ ನಿನ್ನ ಕಥೆ?’ ಅಂತ ಕೇಳಿದರೆ, ‘, ಬೆಂಗಳೂರಲ್ಲೇ ಬದುಕಿದೀನಿ, ನಂಗ್ಯಾಕೆ ಭಯ? ಎಲ್ಲಾದರೂ ಹೋಗಿ ಹೆಂಗಾದರೂ ಬದುಕ್ತೀನಿ ಬಿಡಯ್ಯಾಅಂತ ಹೇಳುವಷ್ಟು ಧೈರ್ಯವನ್ನು ಕೊಟ್ಟಿತು.
 
ಮೆಜೆಸ್ಟಿಕ್ಕಿನ ರಶ್ಶಿನಲ್ಲಿ, ಸಿಲ್ಕ್‌ಬೋರ್ಡಿನ ಟ್ರಾಫಿಕ್ಕಿನಲ್ಲಿ, ಮಲ್ಲೇಶ್ವರದ ಎಂಟನೇ ಕ್ರಾಸಿನ ಅಂದದ ಹುಡುಗಿಯರಲ್ಲಿ, ಎಂಜಿ ರಸ್ತೆಯ ತಳುಕುಬಳುಕಿನಲ್ಲಿ, ಎಲೆಕ್ಟ್ರಾನಿಕ್ ಸಿಟಿಯ ಫಾರೀನ್ ಗತ್ತಿನಲ್ಲಿ, ಮಾರತ್ತಹಳ್ಳಿಯ ತಮಿಳುಗನ್ನಡದಲ್ಲಿ, ಗಾಂಧಿಬಜಾರಿನ ಮುಗ್ಧ ಸೌಂದರ್ಯದಲ್ಲಿ, ಲಾಲ್‌ಭಾಗಿನ ಫಲಪುಷ್ಪ ಪ್ರದರ್ಶನದಲ್ಲಿ, ಕೆಆರ್ ಮಾರ್ಕೆಟ್ಟಿನ ಮುಂಜಾನೆಯ ತಾಜಾ ಹೂವು-ಹಣ್ಣು-ತರಕಾರಿಗಳಲ್ಲಿ ಬೆಂಗಳೂರು ತನ್ನನ್ನು ತಾನು ತೆರೆದಿಟ್ಟುಕೊಂಡಿತು.  ಒನ್ನೆಂಡಾಫ್ ಆಗುತ್ತೆ ಸಾರ್ಆಟೋಗಳೂ, ಇಡ್ಲಿ-ಸಾಂಬಾರ್ ಡಿಪ್ಪಿನ ದರ್ಶಿನಿಗಳೂ, ಭಾನುವಾರದ ಪುಸ್ತಕ ಬಿಡುಗಡೆಗಳೂ, ಅಣ್ಣಮ್ಮನುತ್ಸವದ ತಮಟೆ ಸದ್ದೂ ನಮ್ಮ ಬದುಕಿನ ಭಾಗವಾಯಿತು.  ಬೆಂಗಳೂರು ನಿಧನಿಧಾನಕ್ಕೆ ನಮ್ಮದುಆಯ್ತು. ಎಷ್ಟರ ಮಟ್ಟಿಗೆ ಎಂದರೆ, ಯಾರೋ ಉತ್ತರ ಭಾರತದ ಟೆಕ್ಕಿ, ‘ಐ ಹೇಟ್ ದಿಸ್ ಸಿಟಿ ಯಾರ್.. ಇಲ್ಲಿನ ಟ್ರಾಫಿಕ್ಕು, ಗಲಾಟೆ, ಕೆಟ್ಟ ರಸ್ತೆಗಳು...ಅಂತೇನಾದರೂ ಭಾಷಣ ಕೊಡಲು ಶುರು ಮಾಡಿದರೆ ಅವನನ್ನು ಮಧ್ಯದಲ್ಲೇ ತಡೆದು, ‘ಇದು ನಮ್ಮೂರು, ಯಾರು ನಿನಗೆ ಇಲ್ಲಿಗೆ ಬರಲು ಹೇಳಿದ್ದು?’ ಅಂತ ದಬಾಯಿಸುವಷ್ಟು ನಾವು ಬೆಂಗಳೂರಿಗರು ಆದೆವು.
 
ಬೆಂಗಳೂರು ನಮ್ಮನ್ನು ಕೆಂಪು ಸಿಗ್ನಲ್ಲಿನಲ್ಲಿ ತಡೆದು ನಿಲ್ಲಿಸಿತು, ಹಸಿರಾಗಿ ಮುಂದೆ ತಳ್ಳಿತು, ಕಾಣದ ವೈರಸ್ಸು ಬಂದಾಗ ಊರಿಗೆ ಓಡಿಸಿತು, ಮತ್ತೆ ವಾಪಸು ಕರೆಸಿತು, ವಿದ್ಯಾರ್ಥಿ ಭವನದಲ್ಲಿ ಕೂರಿಸಿ ಮಸಾಲೆ ದೋಸೆ ತಿನ್ನಿಸಿತು, ಬೈಟೂ ಕಾಫಿ ಕುಡಿಸಿತು. ನಮಗೆ ಕೆಲಸ ಕೊಟ್ಟಿತು, ಸಂಬಳ ಕೊಟ್ಟಿತು, ಹೊಸಹೊಸ ಅನುಭವಗಳನ್ನು ಕೊಟ್ಟಿತು, ಸಂಸಾರ ಹೂಡಿಕೊಟ್ಟಿತು, ಬದುಕು ಕಟ್ಟಿಕೊಳ್ಳುವ ಕಲೆಯನ್ನು ಹೇಳಿಕೊಟ್ಟಿತು.
 
ಕೋಟ್ಯಂತರ ಜನಗಳಿಗೆ ಏನೆಲ್ಲ ಕೊಟ್ಟ ಬೆಂಗಳೂರು, ತಾನೇನೂ ಮಾಡಿಲ್ಲವೆಂಬಂತೆ ಸುಮ್ಮನೆ ಇದೆ. ತನ್ನ ಫ್ಲೈಓವರಿನ ಕಾಲುಗಳನ್ನು ಅಲ್ಲಾಡಿಸದಂತೆ ನಿಂತಿದೆ, ರಸ್ತೆತುಂಬ ನಿಂತ ಮಳೆನೀರನ್ನು ಬೆಳಗಾಗುವುದರೊಳಗೆ ಹಿಂಗಿಸಿದೆ, ಬೇರಿಳಿಯಲೂ ಅವಕಾಶವಿಲ್ಲದ ಮೇಫ್ಲವರಿನ ಮರಗಳಲ್ಲಿ ಕೆಂಪನೆ ಹೂವರಳಿಸಿದೆ, ಮನೆಮನೆಗಳಿಂದ ಕಸ ಸಂಗ್ರಹಿಸಿ ದೊಡ್ಡ ಲಾರಿಯಲ್ಲಿ ಹೇರಿ ನಗರದ ಆಚೆ ಹಾಕಿದೆ, ಹಸಿದು ಬಂದವರಿಗೆ ನಡುರಾತ್ರಿಯಲ್ಲೂ ರಸ್ತೆಬದಿಯ ತಳ್ಳುಗಾಡಿಯಲ್ಲಿ ತಟ್ಟೆಇಡ್ಲಿ ತಿನ್ನಿಸಿದೆ. ಮತ್ತು, ತನ್ನ ಕಾಂತತ್ವಶಕ್ತಿಯನ್ನು ಇನ್ನೂ ಕಳೆದುಕೊಳ್ಳದ ಈ ನಗರ, ಆಕಾಂಕ್ಷಿಗಳನ್ನೆಲ್ಲ ತನ್ನೆಡೆಗೆ ಸೆಳೆಯುತ್ತಲೇ ಇದೆ. 
 
[ಕನ್ನಡ ಪ್ರಭ ದೀಪಾವಳಿ ವಿಶೇಷಾಂಕ-2023ರ 'ನನ್ನ ಬೆಂಗಳೂರು' ಸರಣಿಗಾಗಿ ಬರೆದದ್ದು]
 

Monday, January 31, 2022

ತಾರಸಿಯಿಂದ ಕಂಡ ಮಹಾನಗರ


ಮಲೆನಾಡಿನ ಪುಟ್ಟ ಹಳ್ಳಿಯಿಂದ ಬಂದ ನಮಗೆ ಇಡೀ ಬೆಂಗಳೂರು ಸುತ್ತಿದರೂ ಒಂದೇ ಒಂದು ಸೋಗೆಯ ಮನೆ ಅಥವಾ ಹೆಂಚಿನ ಮನೆ ಕಾಣದಿದ್ದುದು ಸೋಜಿಗದ ಸಂಗತಿಯಾಗಿತ್ತು. ಬೆಂಗಳೂರನ್ನು ನೋಡಲೆಂದು ನಾನು ಮೊದಲ ಸಲ ಇಲ್ಲಿಗೆ ಹೊರಟಾಗ ಅಪ್ಪ, ‘ಎಂಜಿ ರೋಡು ನೋಡೋದಕ್ಕೆ ಮರೀಬೇಡ. ಅಲ್ಲಿಗೆ ಹೋದರೆ ಬೇರೆಯದೇ ಲೋಕಕ್ಕೆ ಹೋದಹಾಗೆ ಆಗುತ್ತೆ. ಪೆಟ್ಟಿಗೆ-ಪೆಟ್ಟಿಗೆಗಳ ಹಾಗೆ ಪಕ್ಕಪಕ್ಕದಲ್ಲಿ ಅಚ್ಚುಕಟ್ಟಾಗಿ ಕಟ್ಟಿರುವ ಆರ್‌ಸಿಸಿ ಕಟ್ಟಡಗಳು, ಎಲ್ಲಾ ನೀಟಾಗಿ ತುಂಬಾ ಚೆನ್ನಾಗಿದೆ’ ಅಂತ ಹೇಳಿದ್ದ. ಅವನಾದರೋ ಎಷ್ಟೋ ವರ್ಷಗಳ ಹಿಂದೆ ನೋಡಿದ್ದ ಬೆಂಗಳೂರಿನ ಚಿತ್ರವನ್ನು ಕಣ್ಮುಂದೆ ಇಟ್ಟುಕೊಂಡು ಹೇಳಿದ್ದು; ಆದರೆ ನಾನು ಬೆಂಗಳೂರಿಗೆ ಬರುವ ಹೊತ್ತಿಗೆ ಇಡೀ ಬೆಂಗಳೂರೇ ಎಂಜಿ ರೋಡಿನ ಹಾಗೆ ಆಗಿತ್ತು. ಎಲ್ಲ ಏರಿಯಾಗಳಲ್ಲೂ ಎಂಜಿ ರೋಡಿನ ಹಾಗೆ ಚಂದದ ಥಳಥಳ ಕಟ್ಟಡಗಳು, ಅಲ್ಲಲ್ಲಿ ತಲೆಯೆತ್ತತೊಡಗಿದ್ದ ಮಾಲುಗಳು, ಸಂಜೆಯಾಯಿತೆಂದರೆ ಝಗಮಗ ದೀಪಗಳು, ತಳುಕುಬಳುಕು ತುಂಬಿ ತುಳುಕುವ ಬೀದಿಯಲ್ಲಿ ಜನರು ‘ಶಾಪಿಂಗ್’ ಹೆಸರಿನಲ್ಲಿ ಚೆಂದನೆಯ ಬ್ಯಾಗು ಹಿಡಿದು ಓಡಾಡುವರು. ಹೀಗಾಗಿ ಎಂಜಿ ರೋಡು ಬಹಳ ಭಿನ್ನವಾಗಿಯೇನು ಕಾಣಲಿಲ್ಲ.

ಆದರೆ ಅಪ್ಪ ನೋಡಲು ಹೇಳಿದ್ದ ಪಟ್ಟಿಯಲ್ಲಿದ್ದ ಯುಟಿಲಿಟಿ ಬಿಲ್ಡಿಂಗಿನ ಮೇಲೇರಿದಾಗ ಮಾತ್ರ ನಾನು ದಂಗಾಗಿಬಿಟ್ಟೆ. ಇಪ್ಪತ್ತೈದು ಮಹಡಿಗಳ ಕಟ್ಟಡವನ್ನು ಹೊಕ್ಕು ಲಿಫ್ಟಿನ ಗುಂಡಿಯದುಮಿದ್ದೇ ಆಕಾಶಕ್ಕೆ ನೆಗೆಯುವ ರಾಕೆಟ್ಟಿನಂತೆ ಅದು ನನ್ನನ್ನು ಮೇಲಕ್ಕೊಯ್ದಿತು. ಹೆದರಿ ಎರಡೂ ಕೈಗಳನ್ನು ಲಿಫ್ಟಿನ ಕವಚಗಳಿಗೆ ಒತ್ತಿ ಹಿಡಿದೆ.  ಎದೆಯ ಡವಡವ ಕಿವಿಗೆ ಕೇಳುವಷ್ಟು ಜೋರಾಗಿತ್ತು. ಕೊನೆಯ ಮಹಡಿಯಲ್ಲಿ ಲಿಫ್ಟು ನಿಂತು, ನಾನು ಸಾವರಿಸಿಕೊಳ್ಳುತ್ತಾ ನಿಧಾನಕ್ಕೆ ಹೊರಗೆ ಹೆಜ್ಜೆಯಿಟ್ಟರೆ, ಆಕಾಶದಲ್ಲಿ ತೇಲುತ್ತಿರುವಂತೆ ಭಾಸ. ಮೂರು ವರ್ಷಕ್ಕೊಮ್ಮೆ ಮಾರಿಜಾತ್ರೆಗೆ ಬರುವ ತೊಟ್ಟಿಲಲ್ಲಿ ಕುಳಿತು ನೋಡಿದ್ದು ಬಿಟ್ಟರೆ ಇಷ್ಟು ಎತ್ತರದಿಂದ ಜಗತ್ತನ್ನು ನೋಡುತ್ತಿದ್ದುದು ಇದೇ ಮೊದಲ ಸಲವಾಗಿತ್ತು. ಎದೆ ಇನ್ನೂ ತಾರಕದಲ್ಲಿ ಬಡಿದುಕೊಳ್ಳುತ್ತಲೇ ಇತ್ತು. ನಿಧಾನಕ್ಕೆ ಪ್ಯಾರಾಪಿಟ್ಟಿನ ಅಂಚಿಗೆ ಬಂದೆ. ಮುಂದೆ ನೋಡಿದರೆ, ಬೆಂಗಳೂರಿಗೆ ಬೆಂಗಳೂರೇ ಕಾಣುತ್ತಿದೆಯೇನೋ ಎಂಬಂತೆ ಇಡೀ ನಗರ ಕಣ್ಮುಂದೆ ಹರಡಿಕೊಂಡಿತ್ತು. ಹಸಿರು ಮರಗಳು, ಕೆಂಪು ಹೂಗಳು, ಬಿಳಿಯ ಕಟ್ಟಡಗಳು, ಅಲ್ಲಲ್ಲೇಳುತ್ತಿರುವ ಹೊಗೆ, ದೂರದಲ್ಲಿ ಹಾರುತ್ತಿರುವ ಹಕ್ಕಿಗಳು.... ಆಹಾ! ರುದ್ರಭಯಂಕರವಾಗಿದ್ದ ಆ ದೃಶ್ಯ ಮೈ ನವಿರೇಳಿಸುವ ಹಾಗಿತ್ತು. ಇನ್ನೂ ಧೈರ್ಯ ಮಾಡಿ, ಪ್ಯಾರಾಪಿಟ್ಟಿನ ಅಂಚನ್ನು ಕೈಯಲ್ಲಿ ಹಿಡಿದು, ಬಗ್ಗಿ ನೋಡಿದೆ: ಓಹೋ! ಇರುವೆಗಳ ಹಾಗೆ ಚಲಿಸುತ್ತಿರುವ ವಾಹನಗಳು, ಕುಬ್ಜ ಕೀಟಗಳಂತೆ ಕಾಣುತ್ತಿರುವ ಮನುಷ್ಯರು, ಅಕ್ಕಪಕ್ಕದ ಚಿಕ್ಕ ಕಟ್ಟಡಗಳ ಟೆರೇಸಿನಲ್ಲಿ ಒಣಗಿಸಿರುವ ಬಟ್ಟೆಗಳು... ಅಬ್ಬಬ್ಬಾ ಅಂತ ನಾನು ಆಶ್ಚರ್ಯ ಪಡುತ್ತಿರುವಾಗಲೇ, ಯಾರೋ ಸಿಬ್ಬಂದಿ ಹಿಂದಿನಿಂದ ಕೂಗುತ್ತ ಬಂದರು: “ರೀ ಯಾರ್ರೀ ನೀವು? ಯಾರ್ರೀ ನಿಮ್ಮನ್ನ ಇಲ್ಲಿಗೆ ಬರೋಕೆ ಬಿಟ್ಟಿದ್ದು? ಟೆರೇಸಿಗೆ ಯಾರಿಗೂ ಎಂಟ್ರೀನೇ ಇಲ್ಲ, ಹ್ಯಾಗ್ರೀ ಬಂದ್ರಿ?” ಅಂತ ಬೈಯುತ್ತ, ನನ್ನ ಕೈ ಹಿಡಿದು ಲಿಫ್ಟಿನ ಬಳಿಗೆ ಕರೆದೊಯ್ದ. ಅಂದು ಭಾನುವಾರವಾದ್ದರಿಂದ, ನಾನು ಹೋದ ಸಮಯದಲ್ಲಿ ಅಲ್ಲಿ ಸೆಕ್ಯುರಿಟಿಯವರಾಗಲೀ ಬೇರೆ ಕೆಲಸದವರಾಗಲೀ ಯಾರೂ ಇರಲಿಲ್ಲವಾದ್ದರಿಂದ, ಅದು ಹೇಗೋ ನಾನು ತಿಳಿಯದೇ ಬೆಂಗಳೂರಿನ ಅಂದಿನ ಅತಿ ಎತ್ತರದ ಕಟ್ಟಡದ ಟೆರೇಸಿಗೆ ಬಂದುಬಿಟ್ಟಿದ್ದೆ. ಹಾಗೆ ಬರುವಂತಿಲ್ಲ ಅಂತ ನನಗೆ ಗೊತ್ತೂ ಇರಲಿಲ್ಲ. ಆದರೆ ಅಂದು ಆ ಟೆರೇಸಿನ ಮೇಲಿಂದ ನೋಡಿದ ಆ ದೃಶ್ಯ ಮಾತ್ರ ಎಂದೂ ಮರೆಯುವುದಿಲ್ಲ.

ಬೆಂಗಳೂರಿನಲ್ಲೇ ನನ್ನ ಮುಂದಿನ ಬದುಕು ಎಂಬುದು ನಿಶ್ಚಯವಾದಮೇಲೆ ನಾನೂ ಒಂದು ಬಾಡಿಗೆ ಮನೆ ಹುಡುಕುವುದು ಅನಿವಾರ್ಯವಾಯಿತು. ಬ್ಯಾಚುಲರುಗಳು ದುಬಾರಿ ಬಾಡಿಗೆಯ ದೊಡ್ಡ ಮನೆಗೆ ಹೋಗಲಾದೀತೇ? ಸಣ್ಣ ರೂಮೊಂದನ್ನು ಹುಡುಕತೊಡಗಿದೆ. ಕಿಷ್ಕಿಂದೆಯಂತಹ ನಗರದ ಲಕ್ಷೋಪಲಕ್ಷ ಮನೆಗಳಲ್ಲಿ ನನಗೊಂದು ಕೋಣೆ ಸಿಗುವುದು ಕಷ್ಟವಾಗಲಿಲ್ಲ. ಈ ನಗರದಲ್ಲಿ ಹೆಂಚಿನ ಮನೆಗಳೇ ಇಲ್ಲವೆಂದೆನಷ್ಟೇ? ಇಂತಹ ಮನೆಗಳಲ್ಲಿ ಟೆರೇಸಿನ ಮೇಲೆ ನೀರಿನ ಟ್ಯಾಂಕು ಇಡಲು ಸ್ವಲ್ಪ ಎತ್ತರದ ಕಟ್ಟಣೆಯನ್ನು ಕಟ್ಟುತ್ತಾರೆ. ಅಂತಹ ಕಟ್ಟಣೆಯನ್ನೇ ಕೆಲವರು ಸಣ್ಣ ರೂಮಾಗಿ ಪರಿವರ್ತಿಸಿ ನನ್ನಂತಹ ಅಬ್ಬೇಪಾರಿ ಬ್ಯಾಚುಲರುಗಳಿಗೆ ಬಾಡಿಗೆಗೆ ಕೊಟ್ಟುಬಿಡುವರು. ಅಂತಹುದೊಂದು ರೂಮು ನನಗಾಗಿ ಬಾಗಿಲು ತೆರೆದು ಸ್ವಾಗತಿಸಿತು. ನಾಲ್ಕನೇ ಮಹಡಿಯಲ್ಲಿದ್ದ ಆ ರೂಮು ನಾಲ್ಕು ಜನ ಬಂದರೆ ಹಿಡಿಸುವಂತಿರಲಿಲ್ಲವಾದರೂ ಎದುರಿಗೆ ವಿಶಾಲವಾದ ಟೆರೇಸು ಇದ್ದುದರಿಂದ, ನಾನು ರೂಮಿಗಷ್ಟೇ ಬಾಡಿಗೆ ಕೊಡುವುದಾದರೂ ಇಡೀ ಟೆರೇಸನ್ನು ಬಳಸಿಕೊಳ್ಳುವ ಸ್ವಾತಂತ್ರ್ಯ ಸಿಕ್ಕಿತು. ಈ ಟೆರೇಸಿನಿಂದ ಮಹಾನಗರದ ಸೌಂದರ್ಯವನ್ನು ನೋಡುವುದು ಅಂದಿನಿಂದ ನಿತ್ಯಸುಖವಾಯಿತು.

ಕೆಳಗಿನ ಮೂರು ಮಹಡಿಗಳಲ್ಲಿದ್ದ ಮನೆಗಳ ಸಂಸಾರಗಳ ಚೂರುಪಾರನ್ನು ಓರೆಗಣ್ಣಲ್ಲಿ ಕಿಟಕಿಯಿಂದ ನೋಡುತ್ತ, ನಾನ್ಯಾವಾಗ ಹೀಗಾಗುವುದೋ ಎಂದುಕೊಳ್ಳುತ್ತ, ಮೆಟ್ಟಿಲು ಹತ್ತಿ ಮೇಲೆ ಬಂದುಬಿಟ್ಟರೆ ಸಮತಲದೊಂದು ಸ್ವರ್ಗ ನನ್ನನ್ನೇ ಕಾಯುತ್ತಿರುತ್ತಿತ್ತು. ರೂಮಿನೊಳಗಿನ ಕೆಲಸಗಳನ್ನು ಮುಗಿಸಿದರೆ ಉಳಿದ ಸಮಯವನ್ನೆಲ್ಲ ಟೆರೇಸಿನಲ್ಲೇ ಕಳೆಯಬಹುದು. ಮೂಲೆಯಲ್ಲಿರುವ ಪಾಟುಗಳಲ್ಲಿ ನಳನಳಿಸುತ್ತಿರುವ ಒಂದಷ್ಟು ಗಿಡಗಳು, ಅಡ್ಡಾದಿಡ್ಡಿ ಎಳೆದ ತಂತಿಗಳಲ್ಲಿ ಒಣಗುತ್ತಿರುವ ಕೆಳಗಿನ ಮನೆಗಳವರ ಬಟ್ಟೆಗಳು, ಅಲ್ಲಲ್ಲಿ ಪ್ಯಾರಾಪಿಟ್ಟಿಗೆ ಬಡಿದಿದ್ದ ಡಿಶ್ಶುಗಳು, ಅಷ್ಟೆತ್ತರಕ್ಕೆ ಬೆಳೆದಿದ್ದ ಪಕ್ಕದ ಮನೆಯ ತೆಂಗಿನ ಮರದ ತಲೆ-ಗಳೆಲ್ಲ ಆ ಟೆರೇಸಿನ ಭಾಗವೇ ಆಗಿದ್ದವು. ಟೆರೇಸಿನ ಮೂಲೆಗೆ ನಿಂತು ಸುಂಯ್ಯನೆ ಬೀಸುವ ಗಾಳಿಗೆ ಮೈಯೊಡ್ಡಿ ಕೈ ಬಿಚ್ಚಿ ಕಣ್ಮುಚ್ಚಿ ನಿಂತರೆ ನಾನೇ ಟೈಟಾನಿಕ್ ಹೀರೋ ಆದಂತೆ, ಇಡೀ ಮನೆ ಹಡಗಿನಂತೆ ಚಲಿಸುತ್ತಿರುವಂತೆ ಭ್ರಮೆಯಾಗುತ್ತಿತ್ತು. ಕೇಟ್ ವಿನ್ಸ್‌ಲೆಟ್ ಒಬ್ಬಳು ಬಾಕಿಯಿದ್ದಳು ಅಷ್ಟೇ.

ಈ ಟೆರೇಸಿನ ಅಕ್ಕಪಕ್ಕದ ಮನೆಗಳು ಆಗೀಗ ತಮ್ಮ ಕಿಟಕಿ ತೆರೆದು ತಮ್ಮೊಡಲ ಸಂಸಾರದ ಪ್ರದರ್ಶನ ಮಾಡಿಸುತ್ತಿದ್ದವು. ಯಾರದೋ ಅಡುಗೆಮನೆಯೊಳಗೆ ತಯಾರಾಗುತ್ತಿರುವ ಬಿಸಿಬಿಸಿ ರೊಟ್ಟಿ, ಯಾರದೋ ಮನೆಯೊಳಗಿನ ದೊಡ್ಡ ಟಿವಿಯಲ್ಲಿ ಪ್ರದರ್ಶಿತವಾಗುತ್ತಿರುವ ಧಾರಾವಾಹಿ, ಮತ್ಯಾರೋ ಕರ್ಟನ್ ಸರಿಸಿದಾಗ ಕಂಡ ಬೆಡ್‌ರೂಮಿನ ದೃಶ್ಯ, ಇನ್ಯಾರೋ ಬಾತ್‌ರೂಮಿನ ಕಿಟಕಿಯನ್ನು ಸಿಟ್ಟಿನಿಂದ ಧಡ್ಡನೆ ಹಾಕಿಕೊಂಡ ಸದ್ದು ಎಲ್ಲವೂ ಟೆರೇಸಿನಿಂದ ನಿತ್ಯಕಾವ್ಯ. ನಾನು ನೋಡಬೇಕೆಂದು ನೋಡದಿದ್ದರೂ ಅವರುಗಳು ತಪ್ಪು ತಿಳಿದುಕೊಂಡು ಸಿಡಿಮಿಡಿಗೊಳ್ಳುತ್ತಿದ್ದರು.  ಆ ಟೆರೇಸಿನ ತುದಿಗೆ ಹೋಗಿ ಬಗ್ಗಿದರೆ, ನಮ್ಮ ಮನೆಯೆದುರಿನ ರಸ್ತೆಯಲ್ಲಿ ವಾಹನಗಳೂ ತರಕಾರಿ ಮಾರುವವರೂ ಜನಸಾಮಾನ್ಯರೂ ಚಲಿಸುತ್ತಿರುವ ವಿಹಂಗಮ ದೃಶ್ಯ ಕಾಣುತ್ತಿತ್ತು. ದೂರದಲ್ಲಿರುವ ತರಾತುರಿಯ ಮುಖ್ಯರಸ್ತೆಯಲ್ಲಿ ಸಾಗುವ ದೊಡ್ಡ ವಾಹನಗಳೂ, ಬಿ‌ಎಂಟಿಸಿ ಬಸ್ಸುಗಳೂ, ಕಸದ ಲಾರಿಗಳೂ, ಸೈರನ್ ಕೂಗುತ್ತ ಹೋಗುವ ವೇಗದ ಆಂಬುಲೆನ್ಸುಗಳೂ ಕಾಣುತ್ತಿದ್ದವು. ಸದ್ದು ಬಂತೆಂದು ತಲೆಯಿತ್ತಿದರೆ, ಚುಕ್ಕಿಯಂತಹ ವಿಮಾನಗಳು ನನ್ನ ಮೇಲೆ ಪುಷ್ಪವೃಷ್ಟಿಗೈಯುವ ಯಾವ ಕರುಣೆಯನ್ನೂ ತೋರದೇ ತಮ್ಮ ಪಾಡಿಗೆ ತಾವು ಸಾಗುತ್ತಿದ್ದವು.

ರಾತ್ರಿಯಾಯಿತೆಂದರೆ ನಗರವು ದೀಪಾವಳಿಯ ಲಕ್ಷದೀಪೋತ್ಸವಕ್ಕೆ ಹಚ್ಚಿಟ್ಟ ಹಣತೆಗಳಂತಾಗಿಬಿಡುತ್ತಿತ್ತು. ಎಷ್ಟು ಕತ್ತೆತ್ತಿ ನೋಡಿದರೂ ಮುಗಿಯದ ದೀಪಗಳು ಆಕಾಶದ ನಕ್ಷತ್ರಗಳೊಂದಿಗೆ ಪೈಪೋಟಿಗೆ ಬಿದ್ದವಂತೆ ಮಿನುಗುವವು. ಅಕ್ಷಯವಾದ ಈ ಹರಹಿನಲ್ಲಿ ಎಲ್ಲಿ ನನ್ನ ಮನೆ? ಎಲ್ಲಿ ಅವಳ ಮನೆ? ಎಲ್ಲಿ ನನ್ನ ಆಫೀಸು? ಒಂದು ಬೆಳಕಿನ ದಾರ ಹಿಡಿದು, ಸೂಜಿಯಿಂದ ಈ ಚುಕ್ಕಿಗಳನ್ನೆಲ್ಲ ಜೋಡಿಸಿ ಹೊಲಿದುಬಿಟ್ಟರೆ, ದೊಡ್ಡ ಬಲೆಯಂತಾಗುವ ರಚನೆಯಿಂದ ನಗರವನ್ನೇ ಸೆರೆಹಿಡಿದೆತ್ತಿ ಬೇರೆಡೆಗೆ ಒಯ್ಯಬಹುದು ಎಂಬ ಕಲ್ಪನೆ ಬಂದು ರೋಮಾಂಚಿತನಾದೆ. ಆಗಸದಲ್ಲಿ ವಯ್ಯಾರ ಮಾಡುತ್ತ ಚಲಿಸುತ್ತಿದ್ದ ಉಪಗ್ರಹವೊಂದು ನನ್ನ ಕಲ್ಪನೆಗೆ ಭೇಷ್ ಎಂದಿತು.

ಇಂತಹ ಟೆರೇಸುಗಳೇ ನಗರದ ಎಷ್ಟೋ ಪ್ರೇಮಾಂಕುರಗಳಿಗೆ ಹಾಟ್‌ಸ್ಪಾಟುಗಳು. ವೀಡಿಯೋ ಕಾಲ್ಸ್ ಬರುವ ಮೊದಲು, ಈ ಟೆರೇಸಿನಲ್ಲಿ ನಿಂತಿರುವ ಅವನೂ ಆ ಟೆರೇಸಿನಲ್ಲಿ ನಿಂತಿರುವ ಅವಳೂ ಪರಸ್ಪರ ನೋಡಿಕೊಳ್ಳುತ್ತಾ, ತಮ್ತಮ್ಮ ಮೊಬೈಲಿನಲ್ಲಿ ಮಾತಾಡಿಕೊಳ್ಳುತ್ತ, ಕೈಸನ್ನೆ-ಬಾಯ್ಸನ್ನೆಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರೆ, ನಡುವಿನ ಮನೆಗಳೂ ರಸ್ತೆಗಳೂ ಮರಗಳೂ ಕಣ್ಮುಚ್ಚಿಕೊಂಡು ಸಹಕರಿಸುವವು. ಅವಳು ಕಳುಹಿಸಿದ ಫ್ಲೈಯಿಂಗ್ ಕಿಸ್ಸನ್ನು ತೆಂಗಿನ ಮರದ ಗಾಳಿ ಸುರಕ್ಷಿತವಾಗಿ ಅವನಿಗೆ ತಲುಪಿಸುವುದು. ಅಪರೂಪಕ್ಕೆ ಅವನು ಬರೆದ ಪ್ರೇಮಪತ್ರವು ರಾಕೆಟ್ಟಾಗಿ ಸಾಗಿ ಅವಳ ಮನೆಯ ಟೆರೇಸು ತಲುಪುವುದು. ಹೃದಯಗಳ ಭಾಷೆಗೆ ನಗರವು ಎರಡು ಟೆರೇಸುಗಳ ನಡುವೆ ಅದೃಶ್ಯ ಸೇತುವೆಯ ಕಲ್ಪಿಸಿ ಪ್ರೇಮಿಗಳನ್ನು ಪೊರೆಯುವುದು.

ಜಾಗತೀಕರಣ ಜಾಸ್ತಿಯಾದಂತೆ ನಗರದ ಕಟ್ಟಡಗಳ ಎತ್ತರವೂ ಜಾಸ್ತಿಯಾಗತೊಡಗಿದವು. ಒಂದೋ ಎರಡೋ ಇದ್ದ ಗಗನಚುಂಬಿ ಕಟ್ಟಡಗಳು ಈಗ ನಗರದಾದ್ಯಂತ ತಲೆಯೆತ್ತಿ ನಿಂತವು. ಆ ಕಟ್ಟಡಗಳಿಗೆ ಹೊಳೆವ ಗಾಜಿನ ಹೊದಿಕೆಗಳು. ಸೂರ್ಯನ ಬೆಳಕನ್ನು ಪ್ರತಿಫಲಿಸುವ ಈ ತಳುಕಿನ ಗಾಜುಗಳು ತಮ್ಮೊಳಗಿನದೇನನ್ನೂ ತೋರಗೊಡುವುದಿಲ್ಲ. ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸುಗಳಲ್ಲಿ ಮೇಲ್ಮಹಡಿಯ ಮನೆಗಳಿಗೇ ಹೆಚ್ಚಿನ ಬೆಲೆ. ದೀಪಾವಳಿಯ ದಿವಸ ಸಿಡಿಮದ್ದುಗಳ ಚಂದವನ್ನು ನೋಡಲು ಟೆರೇಸಿಗೇ ಬರಬೇಕು. ಆಕಾಶಕ್ಕೆ ನೆಗೆದು ಸಿಡಿದ ರಾಕೆಟ್ಟುಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುವವು. ದೂರದಲ್ಲಿ ಸಾಗುತ್ತಿರುವ ಮೆಟ್ರೋ ರೈಲು ಕಿಟಕಿಕಿಟಕಿಗಳಿಂದ ಬೆಳಕನ್ನು ಸೂಸುತ್ತಾ ತನ್ನದೇ ರೀತಿಯಲ್ಲಿ ಹಬ್ಬವನ್ನಾಚರಿಸುವುದು.

ನಗರದ ರಸ್ತೆಯಲ್ಲಿ ಬೈಕುಗಳೂ, ಕಾರುಗಳೂ, ಬಸ್ಸುಗಳೂ, ಆಟೋಗಳೂ ತಮ್ಮದೇ ವೇಗದಲ್ಲಿ ಓಡುತ್ತಿವೆ. ಇಕ್ಕೆಲದ ಕಟ್ಟಡಗಳ ಟೆರೇಸಿನಲ್ಲಿ ನಿಂತ ಬಿಡುವಿರುವ ಜನ ತಮ್ಮನ್ನು ನೋಡುತ್ತಿದ್ದಾರೆಂಬ ಪರಿವೆಯೇ ಅವಕ್ಕಿಲ್ಲ. ಅವಸರವೇ ಮೈವೆತ್ತಿರುವ ವಾಹನಗಳು ರಸ್ತೆಯಲ್ಲಿ ನಿಲ್ಲುತ್ತಲೇ ಇಲ್ಲ. ಬಿಸಿಲಿದ್ದರೆ ಬೈದುಕೊಂಡೂ, ಮಳೆ ಬಂದರೆ ತೊಯ್ದುಕೊಂಡೂ, ಚಳಿಯಾದರೆ ನಡುಗಿಕೊಂಡೂ ಚಲಿಸುತ್ತಲೇ ಇವೆ. ಹೊಸಹೊಸ ಬಣ್ಣಗಳನ್ನು ಬಳಿದುಕೊಳ್ಳುತ್ತಾ ನಗರ ಬೆಳೆಯುತ್ತಲೇ ಇದೆ. ತಾರಸಿಯ ಮೇಲಿಂದ ವೀಕ್ಷಿಸುತ್ತಿರುವ ಸಾವಿರಾರು ಬೆರಗಿನ ಕಣ್ಣುಗಳಿಂದ ಹೊರಟ ಬೆಳಕು ಸರ್ಚ್‌ಲೈಟಿನಂತೆ ನಗರವನ್ನು ಕಾಯುತ್ತಿದೆ.

['ಉದಯವಾಣಿ' ಪತ್ರಿಕೆಗೆ 50 ವರ್ಷ ತುಂಬಿದ ಸಂಭ್ರಮದಲ್ಲಿ ಹೊರತಂದಿರುವ 'ಸುವರ್ಣ ಸಂಪದ' ವಿಶೇಷಾಂಕದಲ್ಲಿ ಪ್ರಕಟಿತ.]

Thursday, February 21, 2008

ಅಮ್ಮ ಬಂದಿದ್ದಳು..

ಅಮ್ಮ ಬಂದಿದ್ದಳು.

ಮಗನ ಪುಸ್ತಕ ಬಿಡುಗಡೆಯಾಗುತ್ತಿರುವುದು ಒಂದು ನೆಪವಾಗಿತ್ತಷ್ಟೇ. ಆದರೆ ಅವಳು ನಿಜವಾಗಿಯೂ ಬಂದದ್ದು ಬೆಂಗಳೂರು ನೋಡುವುದಕ್ಕೆ. ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಗಳೇ ಕಳೆದುಹೋಗಿದ್ದವು. ಮೊದಲೆರಡು ವರ್ಷ ಇದನ್ನು ಅರ್ಥ ಮಾಡಿಕೊಳ್ಳಲಿಕ್ಕೆ, ಇಲ್ಲಿ ಸೆಟಲ್ ಆಗಲಿಕ್ಕೇ ವ್ಯಯವಾಗಿಹೋಯಿತು. ಕಳೆದ ಒಂದು-ಒಂದೂ ವರೆ ವರ್ಷದಿಂದ ನಾನು ಅಮ್ಮನನ್ನು ಬೆಂಗಳೂರಿಗೆ ಬರುವಂತೆ ತುಂಬಾ ತುಂಬಾ ಕರೆಯುತ್ತಿದ್ದೆ. ಆದರೆ ಅವಳು ಮಳೆಗಾಲ, ಸುಗ್ಗಿ, ಅಜ್ಜಂಗೆ ಹುಷಾರಿಲ್ಲೆ, ಇತ್ಯಾದಿ ಏನೇನೋ ಕಾರಣವೊಡ್ಡಿ ಬರುವುದರಿಂದ ತಪ್ಪಿಸಿಕೊಳ್ಳುತ್ತಿದ್ದಳು. ಮುಂದಿನ ಬಾರಿ ಊರಿಗೆ ಹೋದಾಗ ಏನಾದರಾಗಲಿ, ಅಮ್ಮನನ್ನು ಕರೆದುಕೊಂಡೇ ಬರುವುದು ಅಂತಲೂ ಪ್ಲಾನ್ ಮಾಡಿದ್ದೆ. ಈ ಮಧ್ಯೆ ಪದೇ ಪದೇ ಮುಂದೂಡಲ್ಪಡುತ್ತಿದ್ದ ನಮ್ಮ ಪುಸ್ತಕ ಬಿಡುಗಡೆ ಸಮಾರಂಭ ಅಂತೂ ಫೆಬ್ರುವರಿ ಹತ್ತಕ್ಕೆ ಖಾಯಂ ಎಂದಾದಾಗ ನಾನು ಮನೆಗೆ ಫೋನ್ ಮಾಡಿದೆ. ಮೊದಲು ಅಪ್ಪ ತಾನೇ ಬರುವುದಾಗಿ ಹೇಳಿದ. ಆಮೇಲೆ ಬಹುಶಃ ಏನೇನೋ ಮಾಡಿ ಅಮ್ಮನಿಗೆ ಧೈರ್ಯ ತುಂಬಿ ಒಪ್ಪಿಸಿದ್ದಾನೆ. ನನ್ನ ಅಜ್ಜನ ಮನೆಯ ಊರಿನವರೊಬ್ಬರು ಬುಧವಾರ ರಾತ್ರಿ ಬೆಂಗಳೂರಿಗೆ ಹೊರಡುವವರಿದ್ದಾರೆ ಎಂಬ ಸುದ್ಧಿಯನ್ನು ಸಂಗ್ರಹಿಸಿದ್ದಾರೆ. ಅವರ ಜೊತೆಯೇ ಅಮ್ಮನೂ ಹೊರಡುವುದು ಎಂದು ತೀರ್ಮಾನವಾಗಿದೆ. ಆವೊತ್ತು ರಾತ್ರಿ ಅಮ್ಮ ಫೋನ್ ಮಾಡಿ ತಾನೇ ಬರುತ್ತಿರುವುದಾಗಿ ಘೋಷಿಸಿಬಿಟ್ಟಳು! ನನಗಾದ ಸಂಭ್ರಮ ಅಷ್ಟಿಷ್ಟಲ್ಲ.

ಆ ಭಾನುವಾರ ನಾನೂ ನನ್ನ ರೂಂಮೇಟೂ ಸೇರಿ ಇಡೀ ಮನೆಯನ್ನು ಗುಡಿಸಿ, ಸಾರಿಸಿ, ಫಿನಾಯಿಲ್ ಹಾಕಿ ತೊಳೆದು ಸ್ವಚ್ಚ ಮಾಡಿದೆವು. ಹೇಗ್‍ಹೇಗೋ ತುರುಕಿಟ್ಟಿದ್ದ ಬಟ್ಟೆಗಳನ್ನು ಚಂದ ಮಾಡಿ ಮಡಿಚಿ ಜೋಡಿಸಿಟ್ಟೆವು. ಅಂಡರ್‌ವೇರನ್ನು ಎಲ್ಲೆಂದರಲ್ಲಿ ನೇತುಹಾಕಿದರೆ ಕೊಲೆ ಮಾಡುವುದಾಗಿ ರೂಂಮೇಟಿಗೆ ಬೆದರಿಕೆ ಹಾಕಿದೆ. ಹಳೆಯ ನ್ಯೂಸ್‍ಪೇಪರುಗಳನ್ನು ಮಾರಿದೆವು. ನನ್ನ ಲೈಬ್ರರಿಯಲ್ಲಿ ಮನೆ ಮಾಡಿಕೊಂಡಿದ್ದ ಜಿರಲೆಗಳು ಸ್ವರ್ಗದ ದಾರಿ ಹಿಡಿದವು. ಗ್ಯಾಸ್ ಕಟ್ಟೆ ಫಳಫಳನೆ ಹೊಳೆಯಲಾರಂಭಿಸಿತು. ಅಮ್ಮನನ್ನು ಬರಮಾಡಿಕೊಳ್ಳಲಿಕ್ಕೆ ನಮ್ಮ ಮನೆ ಸಜ್ಜಾಗಿ ನಿಂತಿತು!

ಇನ್ನೂ ಬೆಂಗಳೂರಿಗೆ ಪೂರ್ತಿ ಎಚ್ಚರಾಗಿರಲಿಲ್ಲ. ನನ್ನ ಮೊಬೈಲು ರಿಂಗಾಯಿತು. ಹೊದಿಕೆಯೊಳಗೆಲ್ಲೋ ಹುದುಗಿದ್ದ ಕೈ ಹೊರಬಂದು ಶಬ್ದವನ್ನರಸಿ ಮೊಬೈಲನ್ನು ಹಿಡಿದು ಕಿವಿಯ ಬಳಿ ತಂದು ಆನ್ಸರ್ ಬಟನ್ನನ್ನು ಒತ್ತಿತು. "ಅಪ್ಪೀ, ನಾ ಬಂದು ಮುಟ್ಟಿದಿ! ಮೆಜೆಸ್ಟಿಕ್ಕಲ್ಲಿ ಅಮರ್ ಹೋಟ್ಲ್ ಹತ್ರ ಇದ್ದಿ. ಬರ್ತ್ಯಾ?" ಅಮ್ಮ! ನನ್ನ ಅಮ್ಮ! ಇಲ್ಲೇ, ಬಳಿಯ ಮೆಜೆಸ್ಟಿಕ್ಕಿನಿಂದ ಮಾತಾಡುತ್ತಿದ್ದಾಳೆ! ನಾನು ಹೌಹಾರಿ ಎದ್ದೆ. ದಡದಡನೆ ಹಾಸಿಗೆಯನ್ನು ಮಡಿಚಿಟ್ಟು, ಮುಖಕ್ಕೆ ನೀರು ಚುಮುಕಿಸಿಕೊಂಡು, ಕೈಗೆ ಸಿಕ್ಕಿದ ಒಂದು ಪ್ಯಾಂಟು ಸಿಕ್ಕಿಸಿಕೊಂಡು, ಗಾಡಿಯನ್ನು ಕಾಂಪೌಂಡಿನಿಂದ ಹೊರತಂದು ಹೊರಟೆ... ಮುಂಜಾನೆಯ ಗಾಳಿಯನ್ನು ಸುಯ್ಯನೆ ಸೀಳಿಕೊಂಡು ಓಡುತ್ತಿತ್ತು ಬೈಕು.. ಹತ್ತೇ ನಿಮಿಷದಲ್ಲಿ ಮೆಜೆಸ್ಟಿಕ್ಕಿನಲ್ಲಿದ್ದೆ. ಬೈಕು ಪಾರ್ಕ್ ಮಾಡಿ ಅಮರ್ ಹೋಟೆಲ್ ಬಳಿ ಬಂದರೆ ಅಲ್ಲಿ ನಿಂತಿದ್ದಳು ಅಮ್ಮ.. ನನ್ನ ಅಮ್ಮ.. ಮೆರೂನ್ ಬಣ್ಣದ ಸ್ವೆಟರ್ ಹಾಕಿಕೊಂಡಿದ್ದಳು. ದಾರಿತಪ್ಪಿದ ಬೆದರಿದ ಪುಟ್ಟ ಹಕ್ಕಿಯಂತೆ ಕಾಣುತ್ತಿದ್ದಳು. ನನ್ನ ಮುಖ ಕಾಣುತ್ತಿದ್ದಂತೆಯೇ "ಅದೇ! ಅಪ್ಪಿ ಬಂದ!" ಅಂತ ತನ್ನ ಪಕ್ಕದಲ್ಲಿದ್ದ ತವರೂರಿನ ಮಾಬ್ಲೇಶ್ವರಣ್ಣನಿಗೆ ತೋರಿಸಿದಳು. ನಾನು ಅಮ್ಮನ ಬಳಿ ಹೋದೆ. "ಬಸ್ಸಲ್ಲಿ ನಿದ್ದೆ ಬಂತಾ ಅಮಾ?" ಕೇಳಿದೆ. "ನಿದ್ಯಾ? ಒಂದು ನಿಮ್ಷ ಕಣ್ಮುಚ್ಚಿದ್ಲಾ ಕೇಳು ಅವ್ಳುನ್ನ! ಹೊಟ್ಟೆ ತೊಳುಸ್ತಿತ್ತಡ.. ರಾತ್ರಿಡೀ ಕಿಟಕಿ ಹೊರಗೆ ನೋಡ್ಕ್ಯೋತ್ ಕೂತಿದ್ದ. ನೀನು ವಾಪಾಸ್ ಹೋಗಕ್ಕರೆ ಬಲಬದಿ ಸೀಟಲ್ಲೆ ಕೂರ್‍ಸಿ ಕಳ್ಸು. ಈಗ ಹೆಂಗರು ಈ ಕಡೆ ಸೈಡ್ ಪೂರ್ತಿ ನೋಡ್‍ಕೈಂದ. ವಾಪಸ್ ಹೋಗಕ್ಕರೆ ಆ ಕಡೆನು ನೋಡ್ಲಿ!" ಮಾಬ್ಲೇಶ್ವರಣ್ಣ ಹೇಳಿದ. ನಾನು ಜೋರಾಗಿ ನಕ್ಕೆ. ಮೇಷ್ಟ್ರು, ಮನೆಯವರ ಬಳಿ ಕಂಪ್ಲೇಂಟ್ ಮಾಡುವಾಗ ಪಕ್ಕದಲ್ಲಿ ತಲೆ ತಗ್ಗಿಸಿ ನಿಂತಿರುವ ಶಾಲಾಬಾಲಕನಂತೆ ಅಮ್ಮ ಪೆಚ್ಚಾಗಿ ನಿಂತಿದ್ದಳು.

ಮಹಾಬಲೇಶ್ವರಣ್ಣನಿಗೆ ಥ್ಯಾಂಕ್ಸ್ ಹೇಳಿ, ವಾಪಸು ಹೋಗುವುದರೊಳಗೆ ನಮ್ಮನೆಗೊಮ್ಮೆ ಬಂದು ಹೋಗುವಂತೆ ಕರೆದು, ಅಮ್ಮನ ದೊಡ್ಡ-ವಜ್ಜೆ ಏರ್‌ಬ್ಯಾಗನ್ನು ತೆಗೆದುಕೊಂಡೆ. ಅಮ್ಮ ನನ್ನ ಹಿಂದೆಯೇ ಬಂದಳು. ನನ್ನ ಹೊಸ ಬೈಕು ಹತ್ತುವಾಗ "ಇದು ಅಪ್ಪನ್ ಬೈಕ್ ತರ ಇಲ್ಲೆ, ಸಿಕ್ಕಾಪಟ್ಟೆ ಎತ್ತರ" ಎಂದಳು. ಲೇಡೀಸ್ ಹ್ಯಾಂಡ್ ಇಲ್ಲದ್ದರಿಂದ ಎಲ್ಲಿ ಹಿಡಕೊಳ್ಳುವುದು ಅಂತ ಗೊಂದಲಕ್ಕೆ ಬಿದ್ದಳು. ನನ್ನ ಹೆಗಲನ್ನೆ ಹಿಡಕೋ ಎಂದೆ. "ನಿಧಾನ ಓಡ್ಸು" ಎಂದಳು. ಬ್ಯಾಗನ್ನು ಪೆಟ್ರೋಲ್ ಟ್ಯಾಂಕಿನ ಮೇಲಿಟ್ಟುಕೊಂಡು ನಿಧಾನವಾಗಿ ಹೊರಟರೆ ಇನ್ನೂ ಶುರುವೇ ಆಗದಿದ್ದ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಬೈಕು ಓಡುವಾಗ ಅಮ್ಮ ಹಿಂದೆ ಕಣ್ಮುಚ್ಚಿ ಕೂತಿದ್ದಳು.

ಅಮ್ಮನಿಗೆ ಮನೆ ತೋರಿಸಿದೆ. ಕಾಯ್ಲ್ ಹಾಕಿ ನೀರು ಕಾಯಿಸುವುದನ್ನು ಹೇಳಿಕೊಟ್ಟೆ. ಕಾಫಿಪುಡಿ ಯಾವ ಡಬ್ಬಿಯಲ್ಲಿದೆ ಎಂದು ತೋರಿಸಿಕೊಟ್ಟೆ. ಈಳಿಗೆ ಮಣೆ ಇಲ್ಲದೆ ಚಾಕುವಿನಲ್ಲಿ ತರಕಾರಿ ಹೆಚ್ಚಲು ಹೆದರಿದ್ದಕ್ಕೆ ನಾನೇ ಹೆಚ್ಚಿಕೊಟ್ಟೆ. ಅಮ್ಮ ಊರಿಂದ ಕೊಬ್ರಿ ಮಿಠಾಯಿ ಮಾಡಿಕೊಂಡು ಬಂದಿದ್ದಳು. ನೆಲ್ಲಿಸಟ್ಟು ತಂದಿದ್ದಳು. ಹಲಸಿನ ಹಪ್ಪಳ ತಂದಿದ್ದಳು. 'ಓಹೋ! ಮಗನ ಮನೇಲಿ ಅಡುಗೆ-ಗಿಡುಗೆ ಮಾಡಿಕೊಂಡು ಹದಿನೈದು ದಿನ ಇದ್ದು ಹೋಗಿ..' ಎಂದ ಓನರ್ರಿಗೆ 'ಇಲ್ಲ, ನಮ್ಮ ಮಾವನವ್ರಿಗೆ ಅರಾಮಿರಲ್ಲ.. ಒಂದು ವಾರ ಅಷ್ಟೇ. ಹೋಗ್ಬೇಕು ಊರಿಗೆ' ಎಂದಳು ಅಮ್ಮ.

ಪುಸ್ತಕ ಬಿಡುಗಡೆಯಲ್ಲಿ ನಾನು ಮಾತಾಡಿದ್ದು ನೋಡಿ ಅಮ್ಮ ಖುಷಿಯಾಗಿದ್ದಳು. ಮನೆಗೆ ಫೋನ್ ಮಾಡಿದ್ದಾಗ ಅಪ್ಪನ ಬಳಿ 'ಅಪ್ಪಿ ಚನಾಗ್ ಮಾತಾಡಿದ.. ನಾ ಅಂವ ಮಾತಾಡಿದ್ದೇ ನೋಡಿರ್ಲೆ' ಅಂದಳು. ಅಮ್ಮನನ್ನು ಬೆಂಗಳೂರಿನ ನೆಂಟರ ಮನೆಗಳಿಗೆ ಕರೆದೊಯ್ದೆ. ಸಿಗ್ನಲ್ಲುಗಳಲ್ಲಿ ರಸ್ತೆ ದಾಟುವುದು ಹೇಗೆ ಎಂದು ಹೇಳಿಕೊಟ್ಟೆ. ಅಜ್ಜನ ಮನೆಗೆ ಹೋಗುವಾಗ ನನ್ನ ಕೈ ಹಿಡಕೊಂಡು 'ಎರಡೂ ಕಡೆ ನೋಡ್ಕ್ಯಂಡು ದಾಟವು' ಎನ್ನುತ್ತಾ ಸಾಗರದಲ್ಲಿ ರಸ್ತೆ ದಾಟಿಸುತ್ತಿದ್ದ ಅಮ್ಮನ ನೆನಪಿನ ಚಿತ್ರವನ್ನು ಕಣ್ಮುಂದಿಟ್ಟುಕೊಂಡು, ಈ ಬಾರಿ ನಾನು ಅಮ್ಮನ ಕೈಹಿಡಿದು ರಸ್ತೆ ದಾಟಿಸಿದೆ. ಮೆಜೆಸ್ಟಿಕ್ಕಿನ ಫ್ಲೈಓವರ್ರಿನ ಮೇಲ್ಗಡೆ ನಿಲ್ಲಿಸಿಕೊಂಡು 'ಈ ಕಡೆ ಸಿಟಿ ಬಸ್‍ಸ್ಟ್ಯಾಂಡು, ಆ ಕಡೆ ಕೆ.ಎಸ್.ಆರ್.ಟಿ.ಸಿ ಬಸ್‍ಸ್ಟ್ಯಾಂಡು, ಹೀಗೇ ಹೋದ್ರೆ ರೈಲ್ವೇ ಸ್ಟೇಶನ್ನು, ಆ ಕಡೆ ಗಾಂಧಿನಗರ' ಅಂತ ತೋರಿಸಿದೆ. ಸಿಗ್ಮಾ ಮಾಲ್‍ಗೆ ಕರೆದುಕೊಂಡು ಹೋಗಿ ಎಸ್ಕಲೇಟರ್ ಬಳಿ ಹೋಗಿ ನಿಂತರೆ ಹೆದರಿಕೊಂಡು ನಿಂತುಬಿಟ್ಟಳು. ಹತ್ತೋದೇ ಇಲ್ಲ ಎಂದಳು. ಕೈ ಹಿಡಿದುಕೊಂಡು 'ನೋಡೂ, ಹೀಗೆ ಮೆಟ್ಲು ಬರ್ತಿದ್ದಂಗೆ ಎರಡೂ ಹೆಜ್ಜೆನೂ ಇಟ್ಬಿಡು, ತಂತಾನೇ ಮೇಲೆ ಹೋಗ್ತು.. ಹೆದ್ರಡ' ಎಂದೆ. ಮೆಟ್ಟಿಲು ಮೇಲೇರುತ್ತಿದ್ದಾಗ ಅವಳ ಎದೆ ಡವಗುಟ್ಟುತ್ತಿದ್ದುದು ನಡುಗುತ್ತಿದ್ದ ಕೈಯಿಂದಲೇ ಗೊತ್ತಾಗುತ್ತಿತ್ತು. ಬಿಗ್ ಬಜಾರಿನಲ್ಲಿ ಶಾಪಿಂಗ್ ಮಾಡೋದು ಎಂದರೆ ಹೇಗೆ ಅಂತ ತೋರಿಸಿದೆ. 'ಶೆಟ್ರ್ ಅಂಗಡೀಲಿ ಪಟ್ಟಿ ಹಿಡ್ಕಂಡ್ ಸಾಮಾನ್ ಹಾಕ್ಸೋ ರಗಳೇನೆ ಇಲ್ಲೆ.. ನಮ್ಗೇನು ಬೇಕೋ ಎಲ್ಲ ಈ ಗಾಡಿಲಿ ಇಟ್ಕಂಡು ಹೋಗಿ ಲಾಸ್ಟಿಗೆ ಬಿಲ್ ಮಾಡ್ಸಿದ್ರೆ ಆತು.. ದುಡ್ ಕೊಡೋದೂ ಬ್ಯಾಡ; ಕಾರ್ಡ್ ಕೊಟ್ರೆ ಸಾಕು' ಎಂದೆ.

ಪುಟ್ಟ ತಳ್ಳುಗಾಡಿಯಂತಹ ಅಂಗಡಿಯಲ್ಲಿ ಟೋಪಿ ಹಾಕಿಕೊಂಡವನೊಬ್ಬ ಏನೋ ಮಾರುತ್ತಿದ್ದುದನ್ನು ನೋಡಿ 'ಅದೇನು?' ಅಂದಳು. 'ಅದು ಸ್ವೀಟ್ ಕಾರ್ನ್' ಎಂದು ಹೇಳಿ, ಒಂದು ರೆಗ್ಯುಲರ್ ಕಪ್ ತಗೊಂಡು ತಿನ್ನಿಸಿದೆ. 'ಇಷ್ಟು ಸಣ್ಣ ಲೋಟಕ್ಕೆ ನಲ್ವತ್ತು ರೂಪಾಯಿಯಾ? ಎಂಥಿದ್ದು ಇದ್ರಲ್ಲಿ? ಸುಮ್ನೆ ದುಡ್ ದಂಡ' ಎಂದಳು. ಗುಂಡಿ ಒತ್ತಿ ಲಿಫ್ಟ್‍ಗೆ ಕಾಯತೊಡಗಿದೆ. ಬಾಗಿಲು ತೆರೆದುಕೊಂಡಕೂಡಲೇ ಒಳನುಗ್ಗಿ ಅಮ್ಮನನ್ನು 'ಬಾ' ಅಂತ ಒಳಗೆಳೆದುಕೊಂಡೆ. ತಕ್ಷಣ ಬಾಗಿಲು ಮುಚ್ಚಿಕೊಂಡು ನಾವು ಕೆಳಹೋಗತೊಡಗಿದಾಗ ಅಮ್ಮನ ಕೈಯಲ್ಲಿದ್ದ ಸ್ವೀಟ್‍ಕಾರ್ನ್ ಕಪ್ಪು ಬೀಳುವಂತಾಗಿ 'ಅಯ್ಯೋ ಇದೆಂಥಾತು?' ಎಂದಳು. 'ನಾವೀಗ ಲಿಫ್ಟಲ್ಲಿದ್ದು! ಕೆಳಗಡೆ ಹೋಗ್ತಾ ಇದ್ದು' ಎಂದೆ. ಅಮ್ಮ ಕಂಗಾಲಾದಳು. 'ನಾನು ಎಸ್.ಟಿ.ಡಿ. ಬೂತ್ ಒಳಗೆ ಕರ್ಕಂಡ್ ಬಂದೆ ಅಂದ್ಕಂಡಿ' ಎಂದಳು.

ಅಮ್ಮನ ಕಣ್ಗಳೊಳಗೆ ವಿಧಾನಸೌಧ ಪ್ರತಿಫಲಿಸುತ್ತಿದ್ದಾಗ 'ಇಲ್ಲೇ ನೋಡು.. ನಮ್ಮ ಮಂತ್ರಿಗಳೆಲ್ಲ ಕೂತು ದಾದಾಗಿರಿ ಮಾಡೋದು' ಎಂದು ನಕ್ಕೆ. ಅಕ್ಕಪಕ್ಕದವರೆಲ್ಲ ನಮ್ಮನ್ನೇ ನೋಡಿದರು. ಆಮೇಲವಳನ್ನು ಕರೆದುಕೊಂಡು ಹೈಕೋರ್ಟಿನ ಕೆಂಪು ತೋರಿಸುತ್ತಾ ಕಬ್ಬನ್ ಪಾರ್ಕಿನ ಹಸಿರಿನೊಳಗೆ ನುಗ್ಗಿದೆ. 'ಇಲ್ಲೆಂತ ಮರಗಿಡ ನೋಡದು! ನಮ್ಮೂರ್ ಕಾಡು ಇದ್ರಕಿಂತ ಎಷ್ಟೋ ಚೊಲೋ ಇದ್ದು. ನೆಡಿ ಹೋಪನ!' ಎಂದಳು. ಇದ್ದುದರಲ್ಲೇ ಲಾಲ್‍ಭಾಗಿನ ಹೂಗಿಡಗಳು ಅವಳಿಗೆ ಇಷ್ಟವಾಯಿತು. ಗುಲಾಬಿ ತೋಟ ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡಳು. ಯಾವುದೋ ಹೂವು ನೋಡುತ್ತ 'ಇದ್ರದ್ದೊಂದು ಹೆರೆ ಕೊಡ್ತಿದ್ವೇನ.. ನಮ್ಮನೆ ಅಂಗಳದಲ್ಲಿ ಇಲ್ಲೇ ಇಲ್ಲೆ ಈ ಥರದ್ದು' ಎಂದಳು. ಒಳ್ಳೆಯದೊಂದು ಹೋಟೆಲ್ಲಿಗೆ ಕರೆದೊಯ್ದು ಊಟ ಮಾಡಿಸಿದೆ. ಫಿಂಗರ್ ಬೌಲ್‍ನಲ್ಲಿ ಕೈ ತೊಳೆದದ್ದು ಸರಿಯಾಗದೆ ವಾಶ್ ಬೇಸಿನ್ ಬಳಿ ಹೋದಳು. ಅದೇ ಸಂದರ್ಭದಲ್ಲಿ ನಾನು ಅವಳಿಗೆ ಕಾಣದಂತೆ ಬಿಲ್ ದುಡ್ಡು ಕೊಟ್ಟೆ. ಬೆಂಗಳೂರಿನ ಟ್ರಾಫಿಕ್ಕಿಗಾದರೂ ಅವಳು ಹೆದರಿದಳೋ ಇಲ್ಲವೋ, ಆದರೆ ಇಸ್ಕಾನಿನ ಬಂಗಾರದ ಶೋಕೇಸಿನೊಳಗಿನ ಕೃಷ್ಣಾರಾಧೆಯರೆದುರು ಮಾತ್ರ ಅಮ್ಮ ಕೈಮುಗಿಯುವುದನ್ನೂ ಮರೆತು ಸುಮ್ಮನೆ ನೋಡುತ್ತ ನಿಂತುಬಿಟ್ಟಳು. ನನಗಂತೂ ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ'ದ ಅಮ್ಮನೇ ನನ್ನ ಅಮ್ಮನಲ್ಲಿ ಕಾಣುತ್ತಿದ್ದಳು. ಎಲ್ಲ ಅಮ್ಮಂದಿರೂ ಹೀಗೇನೇನೋ ಅಂದುಕೊಂಡೆ.

ಒಂದು ದಿನ ಮಾತ್ರ ಅಮ್ಮನನ್ನು ಮನೆಯಲ್ಲಿ ಒಬ್ಬಳನ್ನೇ ಬಿಟ್ಟು ಆಫೀಸಿಗೆ ಹೋಗಿದ್ದೆ. ವಾಪಸು ಬರುವ ಹೊತ್ತಿಗೆ, ನನ್ನ ತೊಳೆಯಬೇಕಿದ್ದ ಬಟ್ಟೆಗಳನ್ನೆಲ್ಲ ತೊಳೆದುಹಾಕಿ, ಸಾಂಬಾರು ಬಟ್ಟಲಿನ ಖಾಲಿ ಹೊಡೆಯುತ್ತಿದ್ದ ಕುಳಿಗಳೊಳಗೆ ಎಲ್ಲವನ್ನೂ ಮಟ್ಟಸವಾಗಿ ತುಂಬಿಸಿಟ್ಟು, ನನ್ನ ಬಾಚಣಿಗೆಯಲ್ಲಿ ಸಿಕ್ಕಿಕೊಂಡಿದ್ದ ಕಸವನ್ನೆಲ್ಲ ಚೊಕ್ಕ ಮಾಡುತ್ತ ಕೂತಿದ್ದಳು. 'ಅಮ್ಮಾ ಎಂಥಕಮ್ಮ ಇದ್ನೆಲ್ಲ ಮಾಡಕ್ ಹೋದೆ.. ಒಂದು ದಿನ ಆರಾಮಾಗಿ ಮನೇಲಿರು ಅಂತ ಬಿಟ್ಟಿಕ್ ಹೋಗಿದ್ದಲ್ದಾ?' ಎಂದು ನಾನು ಸಿಡಿಗುಟ್ಟಿದರೆ, 'ಮನೇಲಿ ಸುಮ್ನೆ ಕೂತ್ಕಂಡು ಎಂಥ ಮಾಡ್ಲಾ ನಾನು? ಬೇಜಾರ್ ಬಂದುಹೋಗ್ತು.. ಊರಲ್ಲಾದ್ರೆ ಅಡಕೆ ಸುಲಿಯಕ್ಕೆ ಹೋಗ್ಲಕ್ಕು, ತೋಟಕ್ ಹೋಗಿ ಬರ್ಲಕ್ಕು, ಹಿತ್ಲಿಗೆ ಹೋಗಿ ಗೇರ್‌ಪೀಠ ಹೆಕ್ಲಕ್ಕು, ಕೊಟ್ಟಿಗೆ ಕೆಲಸ ಇರ್ತು.... ಇಲ್ಲಿ ಎಂತೆಂತು ಕೆಲ್ಸಿಲ್ಲೆ! ಅಕ್ಕಪಕ್ಕದ ಮನೆಯವ್ರು ಯಾರಾದ್ರೂ ಮಾತಾಡಕ್ಕೆ ಬರ್ತ್ವನ ಅಂದ್ರೆ ಅದೂ ಇಲ್ಲೆ.. ಇದೆಂಥ ಬೆಂಗ್ಳೂರೇನ!' ಎಂದಳು ಅಮ್ಮ. 'ಅದ್ಕೇನಮ್ಮ, ಇಲ್ಲಿ ಹೆಂಗಸ್ರು ಗಂಡಸ್ರು ಎಲ್ಲಾ ಕೆಲಸಕ್ಕೆ ಹೋಗ್ತ' ಎಂದೆ. 'ಹೂಂ, ಹೌದಪ್ಪಾ.. ನೀನೂ ಕೆಲ್ಸಕ್ಕೆ ಹೋಗೋ ಹುಡುಗೀನೇ ಮದುವೆ ಮಾಡ್ಕ್ಯ! ಅದಿಲ್ಲೇಂದ್ರೆ ನನ್ ಸೊಸಿಗೆ ಮನೇಲ್ ಕೂತ್ಗಂಡು ಹುಚ್ ಹಿಡಿತು ಅಷ್ಟೇ!' ಎಂದಳು. ಅಷ್ಟೊತ್ತಿಗೆ ಮೊಬೈಲು ಪೀಂಗುಟ್ಟಿತು. 'ಅತ್ಗೇನ ಅಮ್ಮಂಗೆ ಪರಿಚಯ ಮಾಡ್ಸಿಕೊಟ್ಯಾ?' ಅಂತ ಮಧು ಎಸ್ಸೆಮ್ಮೆಸ್ ಮಾಡಿದ್ದ. ಸುಮ್ನೇ ಒಂದು ಸ್ಮೈಲೀ ಹಾಕಿ ರಿಪ್ಲೇ ಮಾಡಿದೆ.

ಚಿಕ್ಕಪೇಟೆಯ ಸ್ಯಾರಿ ಸೆಂಟರೊಂದಕ್ಕೆ ಕರೆದೊಯ್ದು ಅಮ್ಮನಿಗೆ ಸೀರೆ ಕೊಡಿಸಿದೆ. 'ಅದು ಚನಾಗಿಲ್ಲೆ, ಇದು ಚನಾಗಿಲ್ಲೆ, ಇದ್ನ ತಗಂಡ್ ಹೋದ್ರೆ ವೀಣತ್ತೆ ಎಂತ ಹೇಳ್ತ್ಲೇನ, ಮಡಿ ಸೀರೆ ಥರ ಕಾಣ್ತು ಅನ್ಸ್ತು, ಇದು ಪ್ಯೂರ್ ರೇಶ್ಮೆ ಹೌದಾ ಅಲ್ದಾ, ಇಷ್ಟೆಲ್ಲ ರೇಟ್ ಕೊಟ್ಟು ಇಲ್ಲಿ ತಗಳಕ್ಕಿಂತ ಸಾಗರದಲ್ಲಿ ತಗಂಡ್ರ್‍ಏ ಚೀಪಾಗ್ತು' ಎಂದೇನೇನೋ ಗೊಣಗುತ್ತಲೇ ಅಂತೂ ಅಮ್ಮ ಒಂದು ಸೀರೆ ಕೊಂಡಳು. ಮನೆಗೆ ಬಂದಮೇಲೂ ಅದನ್ನು ನಾಕ್ನಾಕು ಬಾರಿ ತೆರೆದು ನೋಡಿ ಸವರಿ 'ಚನಾಗಿದ್ದು ಅಲ್ದನಾ?' ಎಂದು ಕೇಳಿದಳು. 'ಹೈಕ್ಲಾಸ್ ಇದ್ದು ಬಿಡು ಚಿಕ್ಕೀ' ಎಂದು ನನ್ನ ರೂಂಮೇಟೂ ಶಿಫಾರಸು ಮಾಡಿದಮೇಲೇ ಅವಳಿಗೆ ಸ್ವಲ್ಪ ಸಮಾಧಾನ ಆಗಿದ್ದು!

ಅಮ್ಮನನ್ನು ವಾಪಸು ಕಳುಹಿಸಿಕೊಡಲಿಕ್ಕೆ ನನ್ನ ಮನಸಿನ್ನೂ ತಯಾರಾಗಿರಲೇ ಇಲ್ಲ. ಆದರೆ ಆಗಲೇ ವಾರವಾಗಿಬಿಟ್ಟಿತ್ತು. ಅಜ್ಜನನ್ನು ನೋಡಿಕೊಳ್ಳುವುದಕ್ಕೆ ಮತ್ತು ಅಡುಗೆ ಮಾಡಿ ಹಾಕಲಿಕ್ಕೆಂದು ಮನೆಗೆ ಬಂದಿದ್ದ ವೀಣತ್ತೆ ತಾನು ನಾಳೆ ವಾಪಸು ಹೋಗುತ್ತಿರುವುದಾಗಿ ಹೇಳಿದಳು ಫೋನಿನಲ್ಲಿ. ಅಮ್ಮ ಇವತ್ತು ರಾತ್ರಿ ಹೊರಡಲೇಬೇಕಿತ್ತು. ಗಜಾನನ ಬಸ್ಸು ಬಂದು, ಏರ್‌ಬ್ಯಾಗನ್ನು ಡಿಕ್ಕಿಯಲ್ಲಿರಿಸಿ, ಅಮ್ಮನನ್ನು ಹತ್ತಿಸಿ, ಪುಶ್‍ಬ್ಯಾಕ್ ಸೀಟನ್ನು ಹಿಂದೆ ಮಾಡಿಕೊಟ್ಟು ಕೂರಿಸಿ, ವಾಂತಿ ಬಂದರೆ ಕವರಿನಲ್ಲಿಯೇ ಮಾಡುವಂತೆ ಹೇಳಿ, ಹೋಗ್ಬಾ ಎಂದು ನಾನು ಕೆಳಗಿಳಿದೆ. ಬಸ್ಸು ಹೊರಟು ನಾನು ಕೈ ಬೀಸುವಾಗ ಯಾವ್ಯಾವುದೋ ಸಿನೆಮಾಗಳ ಇಂಥದೇ ಸೀನುಗಳೆಲ್ಲ ಕಣ್ಮುಂದೆ ಬಂದು ನಿಂತಿದ್ದವು. ಆದರೆ ಕಣ್ಣು ತುಂಬಿಕೊಂಡಿದ್ದರಿಂದ ಅವು ಸರಿಯಾಗಿ ಕಾಣುತ್ತಿರಲಿಲ್ಲ.

ಬೆಳಗ್ಗೆ ಎಂಟೂವರೆಗೆ ಮನೆಗೆ ಫೋನ್ ಮಾಡಿದರೆ ಅಜ್ಜ ಎತ್ತಿಕೊಂಡು 'ಅಪ್ಪ ಕರ್ಕಂಬರಕ್ಕೆ ಬಸ್‍ಸ್ಟ್ಯಾಂಡಿಗೆ ಹೋಯ್ದ.. ಈಗ ಹೋತು ಕಾಣ್ತು ಪಾಳಾ ಬಸ್ಸು.. ಅದೇ ಅಲ್ಲಿ ಡಾಕ್ಟ್ರು ಮನೆ ಹತ್ರ ಬರ್ತಾ ಇದ್ದಂಗೆ ಕಾಣ್ತಪ' ಎಂದ. ಏರ್‌ಬ್ಯಾಗ್ ಹಿಡಿದ ಅಪ್ಪನ ಪಕ್ಕ ಅಮ್ಮ ನಿಧಾನವಾಗಿ ನಡೆದುಕೊಂಡು, ಎದುರಿಗೆ ಸಿಕ್ಕಿ 'ಓಹೋಹೋಹೋ! ಬೆಂಗ್ಳೂರಿಗ್ ಹೋಗ್ಬಂದಾತಾ ಸವಾರಿ?' ಎಂದು ಕೇಳಿರಬಹುದಾದ ಸರೋಜಕ್ಕನಿಗೆ ಬೆಂಗಳೂರಿನ ಕಥೆಯನ್ನೆಲ್ಲ ಹೇಳುತ್ತ, ಆಮೇಲೆ ರತ್ನಾವತಿ ಚಿಕ್ಕಿ ಒತ್ತಾಯ ಮಾಡಿದಳು ಅಂತ ಹಾಗೇ ಅವಳ ಮನೆ ಹೊಕ್ಕು ಮಗ ಕೊಡಿಸಿದ ರೇಶ್ಮೆ ಸೀರೆ ತೋರಿಸಿ, ಚಂದ್ರಕ್ಕನ ಮನೆ ಹುಡುಗ್ರಿಗೆ ಸ್ವೀಟ್ಸ್ ಕೊಟ್ಟು... ಎಲ್ಲಾ ಮಾಡಿಕೊಂಡು ಅಮ್ಮ ಮನೆ ಮುಟ್ಟುವ ಹೊತ್ತಿಗೆ ಇನ್ನೂ ಅರ್ಧ ತಾಸಾದರೂ ಬೇಕು ಬಿಡು ಎಂದುಕೊಳ್ಳುತ್ತಾ 'ಸರಿ ಹಂಗಾದ್ರೆ, ಅಮ್ಮನ ಹತ್ರ ಸಂಜೆ ಫೋನ್ ಮಾಡಕ್ ಹೇಳು' ಎಂದು ಅಜ್ಜನಿಗೆ ಹೇಳಿ ಫೋನಿಟ್ಟೆ. ಆಫೀಸಿಗೆ ಹೊರಡಲು ತಯಾರಾಗತೊಡಗಿದೆ. ಮನೆ ಮತ್ತು ಮನ ಎರಡೂ ಬಿಕೋ ಎನ್ನುತ್ತಿದ್ದವು.