Friday, April 12, 2024

ಕಿಂಚಿತ್ತು ಮೌನ

ಇಂಥದೇ ಒಂದು ಬಿರುಬಿಸಿಲಿನ ಮಧ್ಯಾಹ್ನ
ಅಚಾನಕ್ಕಾಗಿ ಶೋರೂಮೊಂದರ ಒಳಹೊಕ್ಕ ಆಗಂತುಕ
ಅಲ್ಲಿಟ್ಟಿದ್ದ ನೂರಾರು ಟೀವಿಗಳನ್ನು ನೋಡಿ ಅವಾಕ್ಕಾದ
ಹಲವು ಬ್ರಾಂಡುಗಳು ಹಲವು ಅಳತೆಗಳು
ಒಂದೊಂದಕ್ಕೂ ಒಂದೊಂದು ಬೆಲೆ
ಪ್ರತಿ ಟೀವಿಯಲ್ಲೂ ಬೇರೆಬೇರೆ ದೃಶ್ಯಗಳು

ಕೆಲವು ಟೀವಿಗಳಲ್ಲಿ ದೈನಂದಿನ ಧಾರಾವಾಹಿ, ಸಂಸಾರದಲ್ಲಿ ಕಲಹ
ಮತ್ತೊಂದರಲ್ಲಿ ಯಾವುದೋ ಸಿನೆಮಾ,‌ ಸಮಸ್ಯೆಯಲ್ಲಿ ಹೀರೋ
ತಾಜಾ ಸುದ್ದಿ ತೋರಿಸುವ ಕೆಲವು ಟೀವಿಗಳಲ್ಲಿ ಅಪಘಾತದ ಚಿತ್ರಗಳು
ಮತ್ತೆ ಕೆಲವದರಲ್ಲಿ ಕ್ರಿಕೆಟ್ಟು ಫುಟ್‌ಬಾಲ್ ದೈತ್ಯದೇಹಿಗಳ ಬಡಿದಾಟ

ಒಂದು ಟೀವಿಯನ್ನು ಕೊಂಡೊಯ್ದೇ ಬಿಡೋಣ ಎಂದುಕೊಂಡ
ಸಾ...ರ್, ಇದಕ್ಕೆ ಇಪ್ಪತ್ತು ಪರ್ಸೆಂಟ್ ಡಿಸ್ಕೌಂಟು ಸಾರ್..
ಇದರ ಜೊತೆ ಸೆಟ್‌ಟಾಪ್ ಬಾಕ್ಸ್ ಫ್ರೀ ಸರ್.. ಸ್ಮಾರ್ಟ್ ಟೀವಿ ಸಾರ್,
ಇದನ್ನು ಕೊಂಡರೆ ಒಟಿಟಿಯೆಲ್ಲ ಆರು ತಿಂಗಳು ಪುಕ್ಕಟೆ ಬರ್ತವೇ
ಅಲ್ಟ್ರಾ ಎಚ್‌ಡಿ ಸಾರ್, ಸರೌಂಡ್ ಸೌಂಡು, ಥಿಯೇಟರ್ ಎಫೆಕ್ಟು

ಒಂದು ಟೀವಿಯ ಜತೆಜತೆ ಏನೆಲ್ಲ ಬರುವವು...
ಹಾಡು ನೃತ್ಯ ಹಾಸ್ಯ ಫೈಟಿಂಗ್ ಮರ್ಡರ್ ಮಿಸ್ಟರಿ
ಸಪ್ತಸಾಗರದಾಚೆಯ ಬೆಟ್ಟದಲಿ ಸುರಿಯುತ್ತಿರುವ ಲಾವಾ
ದ ಬಗೆಗಿನ ವಿವರಣೆ ವಿಶ್ಲೇಷಣೆ ಕೌತುಕ
ಇಪ್ಪತ್ನಾಲ್ಕು ಗಂಟೆಯೂ ಬ್ರೇಕಿಂಗ್ ನ್ಯೂಸ್
ಸುಂದರಿಯ ಹಾರುಮುಂಗುರುಳೂ, ಸಣ್ಣ ಮಗುವಿನ ಕಣ್ಣೀರೂ,
ನೀರಿನಿಂದ ಛಂಗನೆ ಜಿಗಿದ ಶಾರ್ಕಿನ ಶಾರ್ಪುಹಲ್ಲೂ
ಹೈ ಡೆಫಿನಿಷನ್ನಿನಲ್ಲಿ ಎಷ್ಟು ಸ್ಪಷ್ಟವಾಗಿ ಕಾಣುವವು...

ಒಂದು ಟೀವಿಯ ಜತೆಗೆ ಎಷ್ಟೊಂದು ಸುದ್ದಿ ವಿವರ ಮನರಂಜನೆಗಳ
ಮೂಟೆ ಕಟ್ಟಿ ಒಯ್ದು ಮನೆಯ ಜಗಲಿಯ ತುಂಬಿಸಿಬಿಡಬಹುದು
ಕದಡಿಬಿಡಬಹುದು ನೀರವವ ರಿಮೋಟಿನೊಂದು ಗುಂಡಿಯಿಂದ

ಯಾವುದನ್ನು ಕೊಳ್ಳಲಿ ಯಾವುದನ್ನು ಕೊಳ್ಳಲಿ
ಇಡೀ ಶೋರೂಮನ್ನು ಮತ್ತೊಂದು ಸುತ್ತು ಹಾಕಿದ ಆಗಂತುಕ
ಹಿಂದಿಂದೇ ಬರುತ್ತಿದ್ದ ಸೇಲ್ಸ್‌‌ಮನ್
ಇತ್ತಲೇ ಇತ್ತು ಬಿಲ್ಲಿಂಗ್ ಕೌಂಟರಿನಲ್ಲಿದ್ದ ಯಜಮಾನನ ಕಣ್ಣು

ಚಲಿಸುವ ಚಿತ್ರಗಳ ತೋರುವ ಸಾಲುಸಾಲು ಪರದೆಗಳ ನಡುವೆ
ಒಂದು ಆಫ್ ಆಗಿದ್ದ ಟೀವಿ..
ಎಲ್ಲ ಟೀವಿಗಳೂ ಮ್ಯೂಟಿನಲ್ಲಿದ್ದರೂ
ಈ ಆಫಾದ ಟೀವಿಮೊಗದಲಿ ಮಾತ್ರ ಶಾಂತಮೌನವಿದ್ದಂತಿತ್ತು

ಕ್ಷಣ ಯೋಚಿಸಿ ಹೇಳಿದ ಆಗಂತುಕ:
ಸಾರ್, ಇದನ್ನೇ ಕೊಡಿ‌.

No comments: