Showing posts with label ಕರ್ವಾಲೋ. Show all posts
Showing posts with label ಕರ್ವಾಲೋ. Show all posts

Wednesday, May 09, 2007

ಗೋಸಮ್ಮೇಳನದ ನಂತರ...

ಸ್ವಲ್ಪ ಮುಂಚೆಯೇ ಎಚ್ಚರಾಯಿತು. ಇನ್ನೂ ಪೂರ್ತಿ ಬೆಳಗಾಗಿಲ್ಲ. ಆದರೆ ಆಗಲೇ ಸಾಕಷ್ಟು ಬೆಳಕಿದೆ. ಮಂದಣ್ಣ ಮೈಮುರಿದೆದ್ದು ಇನ್ನೂ ಮಲಗಿದ್ದ ತನ್ನ ಸಹಕೆಲಸಗಾರರನ್ನು ದಾಟಿ ಆ ಕೊಠಡಿಯಿಂದ ಹೊರಬಂದ. ಯಾಕೋ ಏನೋ? ಮಂದಣ್ಣನಿಗೆ ಹೀಗೆ ಬೆಳಗಾ ಮುಂಚೆ ಎದ್ದಾಗಲೆಲ್ಲ ಇಬ್ಬನಿ ಬೀಳುತ್ತಿದೆ ಎಂದೆನಿಸುತ್ತದೆ. ಮುಂಜಾನೆಯ ಪರಿಸರವೇ ಹಾಗಿರುತ್ತದೆ. ಹಕ್ಕಿಗಳ ಕಲರವವೂ ನಿಶ್ಯಬ್ದದ ಭಾಗವೇ ಆಗಿರುತ್ತದೆ. ಮಂದಣ್ಣ ಬಹಿರ್ದೆಸೆಗೆಂದು ಹೊರಟ.

ಮಂದಣ್ಣನ ಹೆಂಡತಿ ಬಿಟ್ಟುಹೋಗಿ ಆಗಲೇ ವರ್ಷಕ್ಕೆ ಬಂದಿತ್ತು. ಕರ್ವಾಲೋ ಸಾಹೇಬರು ಕೊಡಿಸುತ್ತೀನಿ ಎಂದಿದ್ದ ಕೆಲಸ ಸಹ ಇನ್ನೂ ಆಗಿರಲಿಲ್ಲ. ಬೀಮ್ಯಾನ್ ಆಗಿ ತೆಗೆದುಕೊಳ್ಳಲಿಕ್ಕೆ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ, ಅಲ್ಲಿ ಇಲ್ಲಿ ಜೇನು ಕಿತ್ತುಕೊಂಡು, ಶಿಕಾರಿ ಮಾಡಿಕೊಂಡು ಓಡಾಡಿಕೊಂಡಿದ್ದ ಮಂದಣ್ಣ ತೇಜಸ್ವಿ ತೀರಿಕೊಂಡಮೇಲೆ ಇತ್ತೀಚಿಗೆ ತುಂಬಾ ಮಂಕಾಗಿಬಿಟ್ಟಿದ್ದ. ಯಾರಾದರೂ 'ಯಾಕೋ?' ಎಂದು ಕೇಳಿದರೆ 'ಏನಿಲ್ಲ.. ಸುಮ್ನೇ' ಎನ್ನುತ್ತಿದ್ದ. ಮೂಡಿಗೆರೆ ಬಸ್‍ಸ್ಟಾಂಡಿನಲ್ಲಿ ಏನೂ ಕೆಲಸವಿಲ್ಲದೇ ಅಲೆಯುತ್ತಿದ್ದ ಮಂದಣ್ಣನನ್ನು ಯಾರೋ ಕರೆದು ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಗೋಸಮ್ಮೇಳನದ ಬಗ್ಗೆ ಹೇಳಿದ್ದರು. 'ಹ್ಯಾಗೂ ಏನೂ ಕೆಲಸ ಇಲ್ಲ. ಮಠಕ್ಕಾದ್ರೂ ಹೋಗು. ಒಂದಷ್ಟು ಕೆಲಸ ಮಾಡಿಕೊಂಡು ಊಟ ಮಾಡ್ಕೊಂಡು ಹಾಯಾಗಿರು. ನಿನಗೆ ದನ ಕಾಯೋ ಕೆಲಸ ಏನು ಹೊಸದಲ್ವಲ್ಲ.. ನಿನ್ನ ಇಷ್ಟದ ಕೆಲಸಾನೇ.. ಹೋಗಿ ಅಲ್ಲಿ ಯಾರನ್ನಾದ್ರೂ ಕಂಡು ಗೋಶಾಲೆಯಲ್ಲಿ ಕೆಲಸ ಕೊಡಿ ಅಂತ ಕೇಳು. ಖಂಡಿತ ಕೊಡ್ತಾರೆ' ಎಂದಿದ್ದರು. ಜೇಬಿನಲ್ಲಿದ್ದ ಮೂವತ್ತು ರೂಪಾಯಿ ಖರ್ಚು ಮಾಡಿಕೊಂಡು ಉಟ್ಟಬಟ್ಟೆಯಲ್ಲೇ ಮಠಕ್ಕೆ ಬಸ್ಸು ಹತ್ತಿ ಬಂದಿದ್ದ ಮಂದಣ್ಣ.

ಇಲ್ಲಿಗೆ ಬಂದಮೇಲೆ ಎಲ್ಲವೂ ಸರಾಗವಾಯಿತು. ಮಾಡಲಿಕ್ಕೆ ಸಿಕ್ಕಾಪಟ್ಟೆ ಕೆಲಸವಿದ್ದುದರಿಂದ 'ಎಷ್ಟು ಜನ ಇದ್ರೂ ಬೇಕು ಬಾರಪ್ಪಾ. ಕೆಲಸ ಮಾಡು, ಊಟ ಮಾಡು, ಆಮೇಲೆ ಕೂಲೀನೂ ಕೊಡ್ತೀವಿ' ಅಂತಂದು ಮಠದ ಕಾರ್ಯಕರ್ತರು ಅವನನ್ನು ತಮ್ಮ ಜೊತೆ ಸೇರಿಸಿಕೊಂಡಿದ್ದರು. ಇನ್ನೂ ಗೋಸಮ್ಮೇಳನಕ್ಕೆ ಒಂದು ವಾರ ಇತ್ತು. ಚಪ್ಪರಕ್ಕೆ ಗುಂಡಿ ತೋಡುವುದು, ನೀರಿನ ಪೈಪು ಎಳೆಯುವುದು, ಅಲ್ಲೆಲ್ಲೋ ಕಟ್ಟೆ ಕಟ್ಟುವುದು, ಹೀಗೆ ಮಂದಣ್ಣ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡ. ತಾನು ಹಿಂದೆಲ್ಲೂ ಕಂಡಿರದಿದ್ದ ಅನೇಕ ಬಗೆಯ ಹೊಸ ಹಸುಗಳನ್ನು ಕಂಡು ಹಿರಿಹಿರಿ ಹಿಗ್ಗಿದ. ಅವುಗಳ ಮೈದಡವಿ ಹೊಸ ರೋಮಾಂಚನ ಅನುಭವಿಸಿದ.

ಒಂಭತ್ತು ದಿನಗಳ ಗೋಸಮ್ಮೇಳನ ಅದ್ಧೂರಿಯಾಗಿ ನಡೆಯಿತು. ದಿನವೂ ಬರುತ್ತಿದ್ದ ಲಕ್ಷಗಟ್ಟಲೆ ಜನಗಳ ಮಧ್ಯೆ ಮಂದಣ್ಣ ಕಳೆದುಹೋಗಿದ್ದ. ಅವನನ್ನು ತೋಟದಲ್ಲಿ ಕಟ್ಟಿಹಾಕಿದ್ದ ಮಲೆನಾಡು ಕಗ್ಗ ದನಗಳ ಉಸ್ತುವಾರಿ ನೋಡಿಕೊಳ್ಳಲಿಕ್ಕೆ ನಿಯಮಿಸಿದ್ದರು. ಅವುಗಳಿಗೆ ಹೊತ್ತುಹೊತ್ತಿಗೆ ಹಿಂಡಿ, ಹತ್ತಿಕಾಳು, ನೀರು, ಅಕ್ಕಚ್ಚು ಕೊಟ್ಟುಕೊಂಡು ಬರುವ ಜನಗಳನ್ನು ನೋಡುತ್ತಾ ಮಂದಣ್ಣ ಆರಾಮಾಗಿದ್ದ. ಆಗಲೇ ಬಂದು ಹದಿನೈದು ದಿನಗಳಾಗಿತ್ತಾದ್ದರಿಂದ ಅವನಿಗೆ ಇಲ್ಲಿನ ಕೆಲಸಗಾರರೆಲ್ಲರೂ ಹೆಚ್ಚೂಕಮ್ಮಿ ಪರಿಚಯವಾಗಿಬಿಟ್ಟಿದ್ದರು. ಕಾರ್ಗಡಿಯವಳೇ ಆದ ರಂಗಮ್ಮ ಎಂಬುವವಳು ಮಾತ್ರ 'ಮಂದಣ್ಣಾ ಮಂದಣ್ಣಾ' ಎಂದು ಕರೆಯುತ್ತಾ ಅದೇಕೋ ಇವನ ಹತ್ತಿರವೇ ಸುಳಿಯುತ್ತಿರುತ್ತಿದ್ದಳು. ದಪ್ಪ ಮೂಗುತಿಯ ರಂಗಮ್ಮ ಸುಮ್ಮನೇ ನಗುವಾಗ ಕಾಣುವ ಅವಳ ಹಳದಿ ಹಲ್ಲುಗಳ ನಡುವಿನ ಬಿರುಕುಗಳಲ್ಲಿ ಮಂದಣ್ಣನಿಗೆ ಹೊಸ ಆಸೆಗಳ ಬ್ರಹ್ಮಾಂಢ ಕಾಣಿಸುತಿತ್ತು.

ಈಗ ಗೋಸಮ್ಮೇಳನ ಮುಗಿದು ನಾಲ್ಕು ದಿನಗಳಾಗಿದ್ದರೂ ಮಂದಣ್ಣನಿಗೆ ವಾಪಸು ಊರಿಗೆ ಹೋಗುವ ಮನಸ್ಸಾಗದೇ ಇರುವುದಕ್ಕೆ ಕಾರಣ ರಂಗಮ್ಮನೆಡೆಗಿನ ಸೆಳೆತವಷ್ಟೇ ಆಗಿರದೆ ಈ ಮಠದ ಪರಿಸರವೂ ಆಗಿತ್ತು. ಈ ಪರಿಸರದಲ್ಲೇ ಏನೋ ಒಂದು ಆಕರ್ಷಣೆಯಿತ್ತು. ಅಲ್ಲದೇ ಊರಿಗೆ ಹೋಗಿ ಮಾಡಲಿಕ್ಕೆ ಕೆಲಸವೇನೂ ಇರಲಿಲ್ಲ. ಹೀಗಾಗಿ ಮಂದಣ್ಣ ನಿಶ್ಚಿಂತೆಯಿಂದ ಇಲ್ಲೇ ಉಳಿದುಬಿಟ್ಟಿದ್ದ. ಇವನಷ್ಟೇ ಅಲ್ಲದೇ ಇನ್ನೂ ಅನೇಕ ಕೆಲಸಗಾರರು ಇಲ್ಲಿಯೇ ತಂಗಿದ್ದರು. ಮಠದವರು ಇವರಿಗಾಗಿಯೇ ಗುರುಕುಲದ ಕೊಠಡಿಯೊಂದನ್ನು ಬಿಟ್ಟುಕೊಟ್ಟಿದ್ದರು. ಅಷ್ಟು ದೊಡ್ಡ ಸಮ್ಮೇಳನ ಮುಗಿದಿದೆ ಅಂದಮೇಲೆ ಅದು ಸೃಷ್ಟಿಸಿದ ತ್ಯಾಜ್ಯವೂ ಅಷ್ಟೇ ಇರುತ್ತದೆ. ಹಾಕಿರುವ ಚಪ್ಪರವನ್ನು ತೆಗೆಯಬೇಕು. ತಾತ್ಕಾಲಿಕ ವ್ಯವಸ್ಥೆಗಾಗಿ ಮಾಡಿದ್ದ ನಲ್ಲಿಗಳು, ಹಾಕಿದ್ದ ಶಾಮಿಯಾನಾಗಳು, ನಿರ್ಮಿಸಿದ್ದ ಜೋಪಡಿಗಳು, ಕಟ್ಟಿದ್ದ ಕಟ್ಟೆಗಳು, ನಿಲ್ಲಿಸಿದ್ದ ಕಂಬಗಳು ಎಲ್ಲವನ್ನೂ ಕಿತ್ತು ಮಟ್ಟ ಮಾಡಬೇಕಿತ್ತು. ಕಸ ವಿಲೇವಾರಿ ಮಾಡಬೇಕಿತ್ತು. ಜೋರು ಮಳೆ ಹಿಡಿಯುವುದರ ಒಳಗೆ ಸೋಗೆಯನ್ನೆಲ್ಲಾ ಸುರಕ್ಷಿತ ಜಾಗಕ್ಕೆ ಸಾಗಿಸಬೇಕು. ಇನ್ನೂ ಸಾಕಷ್ಟು ಕೆಲಸಗಳಿದ್ದವು. ಮಂದಣ್ಣ ಇತರೆ ಕೆಲಸಗಾರರೊಂದಿಗೆ ಈ ಕೆಲಸಗಳನ್ನು ಮಾಡಿಕೊಂಡು ಇದ್ದ.

ಬಹಿರ್ದೆಸೆಗೆಂದು ಮಂದಣ್ಣ ಟಾಯ್ಲೆಟ್ಟೊಂದನ್ನು ಹೊಕ್ಕ. ಈಗ ಮಠದ ಆವರಣದಲ್ಲಿ ಒಟ್ಟು ಮೂರು ಸಾವಿರ ಟಾಯ್ಲೆಟ್ಟುಗಳಿವೆ! ದಿನವೂ ಒಂದೊಂದಕ್ಕೆ ಹೋದರೂ ಎಲ್ಲಾ ಟಾಯ್ಲೆಟ್ಟುಗಳಿಗೆ ಹೋಗಲಿಕ್ಕೆ ಎಂಟು ವರ್ಷ ಬೇಕು! ಮಂದಣ್ಣನಿಗೆ ಈ ವಿಚಾರ ಹೊಳೆದು ನಗು ಬಂತು. ಇಷ್ಟಕ್ಕೂ ಎಂಟು ವರ್ಷ ತಾನು ಇಲ್ಲೇ ಇರುತ್ತೇನಾ? -ಕೇಳಿಕೊಂಡ ಮಂದಣ್ಣ. ಉತ್ತರ ಹೊಳೆಯಲಿಲ್ಲ. ಎಲ್ಲಕ್ಕೂ ಹೆಚ್ಚಾಗಿ ಆ ಬಿಂಕದ ಸಿಂಗಾರಿ ರಂಗಮ್ಮನ ನಡವಳಿಕೆಯೇ ಮಂದಣ್ಣನಿಗೆ ಅರ್ಥವಾಗದ ಪ್ರಶ್ನೆಯಾಗಿತ್ತು.

ಬಹಿರ್ದೆಸೆ ಮುಗಿಸಿದ ಮಂದಣ್ಣ ಈ ಮುಂಜಾನೆಯ ಪರಿಸರದಲ್ಲಿ ಒಂದು ಸುತ್ತು ಓಡಾಡಿಕೊಂಡು ಬಂದರೆ ಚೆನ್ನಾಗಿರುತ್ತದೆ ಎಂದೆನಿಸಿ 'ಪರಿಕ್ರಮ ಪಥ'ದಲ್ಲಿ ಚಲಿಸತೊಡಗಿದ. ಸಮ್ಮೇಳನಕ್ಕೆಂದೇ ನಿರ್ಮಿಸಿದ ಹಾದಿ ಇದು. ಮಠದ ಮುಖ್ಯದ್ವಾರದಿಂದ ಶುರುವಾಗುವ ಈ ಹಾದಿಯಲ್ಲೇ ಸಾಗಿದರೆ ಮೊದಲು ಸಿಗುವುದು ಭಜನಾ ಮಂದಿರ. ಅದು ಈಗ ಖಾಲಿ ಹೊಡೆಯುತ್ತಿದೆ. ರಾತ್ರಿ ಬಂದುಹೋದ ಮಳೆಗೆ ಕಟ್ಟೆಯೆಲ್ಲಾ ಕಿತ್ತುಹೋಗಿದೆ. ಮುಂದೆ ಸಾಗಿದರೆ ಸಿಗುವುದು ವೃಂದಾವನೀ. ಒಂಭತ್ತು ದಿನಗಳ ಕಾಲ ಎಡಬಿಡದೆ ತೇಲುತ್ತಿತ್ತು ಕೊಳಲ ಗಾನ ಇಲ್ಲಿ... ಹುಲ್ಲು ಚಪ್ಪರ ಹೊದಿಸಿದ ಆ ಗುಡಿಸಲಿನಂತ ಕಟ್ಟೆಯ ಮಧ್ಯದಲ್ಲಿರುವ ಮರ ಇನ್ನೂ ತೂಕಡಿಸುತ್ತಿತ್ತು. ಇವನು ಹೋಗಿ ಕೆಮ್ಮಿದ್ದೇ ಅದಕ್ಕೆ ಎಚ್ಚರವಾಗಿಬಿಟ್ಟಿತು. ಮಂದಣ್ಣನಿಗೆ ಅದರ ಕಷ್ಟ ಅರ್ಥವಾಯಿತು. ಪ್ರಕೃತಿಯ ಮಾತು ಅರ್ಥ ಮಾಡಿಕೊಳ್ಳುವುದರಲ್ಲಿ ಮಂದಣ್ಣನಿಗಿಂತ ನಿಷ್ಣಾತರು ಮತ್ಯಾರಿದ್ದಾರೆ ಹೇಳಿ? ಮರ ಹೇಳಿತು: 'ರಾತ್ರಿಯಿಡೀ ನಿದ್ರೆಯಿಲ್ಲ ಕಣೋ ಮಂದಣ್ಣಾ... ಒಂಭತ್ತು ದಿನ ಕೊಳಲ ದನಿ ಕೇಳೀ ಕೇಳೀ ನನಗೆ ಹುಚ್ಚೇ ಹಿಡಿದುಬಿಟ್ಟಿದೆ. ಆ ವೇಣುವಾದನ ಹರಿದು ಬರುತ್ತಿದ್ದಾಗ ಎಂಥಾ ನಿದ್ರೆ ಬರುತ್ತಿತ್ತು ಅಂತೀಯಾ..? ಈಗ ಆ ದನಿಯಿಲ್ಲ.. ತುಂಬಾ ಬೇಸರವಾಗುತ್ತಿದೆ ಮಂದಣ್ಣಾ..' ಮಂದಣ್ಣ ಸುಮ್ಮನೆ ಒಮ್ಮೆ ಆ ಮರದ ಕಾಂಡವನ್ನು ತಬ್ಬಿ, ಸವರಿ ಮುಂದೆ ನಡೆದ.

ವಸ್ತು ಸಂಗ್ರಹಾಲಯವನ್ನು ಆಗಲೇ ತೆರವುಗೊಳಿಸಲಾಗಿತ್ತು. ಅಲ್ಲಿ ಈಗ ಕೇವಲ ಕಂಬಗಳು ಇದ್ದವು. ಪಕ್ಕದಲ್ಲಿದ್ದ ಗೋಲೋಕದಲ್ಲಿ ದನಗಳು ಇನ್ನೂ ಅಲ್ಲೇ ಇದ್ದರೂ ಅವುಗಳ ಎದುರಿನ ಬೋರ್ಡುಗಳನ್ನು ಕಿತ್ತುಹಾಕಿದ್ದರು. ಪಕ್ಕದ ದೇವಸ್ಥಾನದ ದೇವರು ಮಾತ್ರ ಇನ್ನೂ ಬರಬೇಕಿರುವ ಅರ್ಚಕರಿಗಾಗಿ ಕಾಯುತ್ತಿದ್ದಂತಿದ್ದ. ಗರ್ಭಗುಡಿಯ ಕತ್ತಲೆಗೆ ಒಂದು ಕೈಮುಗಿದು ಮಂದಣ್ಣ ಗೋಶಾಲೆಯತ್ತ ನಡೆದ.

ಪಕ್ಕದ ಊರಿನ ರಮೇಶ ಎಂಬುವವನು ಎದುರಾದ. "ಏನ್ಲಾ ಇಷ್ಟು ಬೇಗ ಎದ್ದು ಎಲ್ಲಿಗಯ್ಯಾ ಹೊರಟಿದೀಯಾ?" ಕೇಳಿದ ಮಂದಣ್ಣ. "ಸಾಗರಕ್ಕೆ ಹೋಗೋದಿತ್ತು ಮಂದಣ್ಣ. ಸ್ವಲ್ಪ ಕೆಲ್ಸ ಐತೆ" ಎಂದ ರಮೇಶ, "ಅಲ್ಲಾ ಮಂದಣ್ಣಾ, ನಿಂಗೆ ಗೊತ್ತೈತಾ? ಮಠದ ಸ್ವಾಮಿಗಳು ದುಡ್ಡು ತಿಂದಿದಾರೆ ಅಂತೆಲ್ಲಾ ಪೇಪರ್ನಾಗೆ ಬರ್ದಿದಾರೆ ಕಣಣ್ಣಾ.. ನೀನೇ ನೋಡಿದ್ಯಲ್ಲ, ಎಷ್ಟೊಂದು ಜನ ಎಷ್ಟೊಂದು ಹಣ ಕೊಟ್ಟವರೆ.. ಇಲ್ಲಿ ಖರ್ಚು ಮಾಡಿರೋದಕ್ಕಿಂತ ಡಬ್ಬಲ್ ಹಣ ಬಂದೈತಂತೆ ಮಠಕ್ಕೆ.. ಏನು ಮಾಡ್ತಾರೋ ಏನೋ..? ಆಮೇಲೇ.." ಮಾತನ್ನು ಮಧ್ಯದಲ್ಲೇ ತುಂಡರಿಸಿದ ಮಂದಣ್ಣ, "ಏಯ್ ಸುಮ್ನಿರೋ ರಮೇಶಾ.. ಏನೇನೋ ಹೇಳ್ಬೇಡ.. ಅವ್ರು ಬರೆದ್ರಂತೆ, ಇವ್ನು ಓದಿದ್ನಂತೆ.. ಸುಮ್ನಿರು ಸಾಕು.. ಹಾಗೆಲ್ಲಾ ಎಲ್ಲಾ ಕಡೆ ಹೇಳ್ಕೋಂತಾ ಹೋಗ್ಬೇಡಾ" "ಅಯ್ಯೋ ನಂಗೇನ್ ಗೊತ್ತು ಮಂದಣ್ಣ.. ನಾನೇನು ಕಂಡಿದೀನಾ? ಪೇಪರ್‌ನವ್ರು ಬರ್ದಿದಾರೆ ಅಂತ ಹೇಳ್ದೆ ಅಷ್ಟೇ. ಅಲ್ದೇ ಅದೇನೋ ವೈಜ್ಞಾನಿಕ ಸಂಶೋಧನೆ ಮಾಡಿದ್ರಂತಲ್ಲ ಹಿಂದಿನ ವರ್ಷ, ಅದೆಲ್ಲ ಸುಳ್ಳು ಅಂತನೂ ಬರ್ದಿದಾರೆ..! ಅದಿರ್ಲೀ, ನೀನು ಯಾವಾಗ ವಾಪಸ್ ಊರಿಗೆ ಹೋಗ್ತಿದೀಯಾ?" "ಹೋಗ್ಬೇಕು ರಮೇಶಾ.. ನಮ್ ತೇಜಸ್ವಿ ಸರ್ ಇದ್ದಿದಿದ್ರೆ ನನ್ನನ್ನ ಇಲ್ಲಿಗೆಲ್ಲ ಬರ್ಲಿಕ್ಕೇ ಬಿಡ್ತಿರ್ಲಿಲ್ಲ.. 'ಅವ್ಕೆಲ್ಲಾ ಏನಕ್ ಹೋಗ್ತೀಯ ಮುಂಡೇಮಗ್ನೇ, ತೋಟದಲ್ಲಿ ಒಂದು ಜೇನು ಕಟ್ಟಿದೆ. ಪೆಟ್ಟಿಗೆಗೆ ತುಂಬ್ಕೊಡು ಬಾ' ಅಂತಿದ್ರು.. ಅಲ್ದೇ ಈಗ ಕರ್ವಾಲೋ ಸಾಯೇಬ್ರೂ ಅದೇನೋ ಕೆಲ್ಸ ಅಂತ ಫಾರಿನ್ನಿಗೆ ಹೋದ್ರಲ್ಲ.. ನಂಗೆ ಅಲ್ಲಿ ಏನೂ ಕೆಲ್ಸ ಇಲ್ಲ.. ಅವ್ರು ಇದ್ದಿದಿದ್ರೆ ನೀನು ಅದೇನೋ ಅಂದ್ಯಲ್ಲ, ವೈಜ್ಞಾನಿಕ ಅಂತ, ಅದರ ಬಗ್ಗೆ ಕರೆಕ್ಟಾಗಿ ಹೇಳಿರೋರು.. ಕರ್ವಾಲೋ ಸಾಯೇಬ್ರು ಅಂದ್ರೆ ಏನು ಸಾಮಾನ್ಯ ಅಲ್ಲಪ್ಪಾ... ಆವಾಗ ಒಂದ್ಸಲ ನಾನೂ, ತೇಜಸ್ವಿ ಸರ್ರೂ, ಕರ್ವಾಲೋ ಸಾಯೇಬ್ರೂ ಸೇರಿ ಒಂದು ಓತಿಕ್ಯಾತ ಹಿಡಿಲಿಕ್ಕೇಂತ...." ಮಂದಣ್ಣ ಶುರುಮಾಡಿದ್ದ. ಅಷ್ಟರಲ್ಲಿ ರಮೇಶ "ಮಂದಣ್ಣ, ನಂಗೆ ನಿನ್ ಕಥೆ ಎಲ್ಲಾ ಕೇಳ್ಲಿಕ್ಕೆ ಟೈಮಿಲ್ಲ. ಬಸ್ಸು ಹೊಂಟೋಯ್ತದೆ. ನಾಳೆ ಸಿಗ್ತೀನಿ.." ಎಂದವನೇ ಕಾರ್ಗಡಿಯ ದಾರಿ ಹಿಡಿದ.

ಮಂದಣ್ಣ ಗೋಶಾಲೆಗೆ ಹೋಗುತ್ತಿದ್ದಂತೆಯೇ ಎತ್ತುಗಳು, ದನಗಳು ಅವುಗಳ ಪುಟ್ಟ ಕರುಗಳು ಎದ್ದುನಿಂತವು. ಅಮೃತಮಹಲ್ ದನ ಅದೇಕೋ ತುಂಬಾ ಉಚ್ಚಿಕೊಂಡಿತ್ತು. ಎಲ್ಲಾ ಜಾನುವಾರುಗಳದ್ದೂ ಮೈತೊಳೆಯಬೇಕು ಎಂದುಕೊಂಡ ಮಂದಣ್ಣ. ಗೋಸಮ್ಮೇಳನ ಮುಗಿದ ಎರಡು ದಿನಗಳಿಗೆ ಹುಟ್ಟಿದ್ದ ಕರುವೊಂದು ತನ್ನ ತಾಯಿಯೆಡೆಗೆ ಓಡಲು ಕಣ್ಣಿ ಜಗ್ಗುತ್ತಿತ್ತು. 'ತನ್ನ ತಾಯ ಹಾಲನ್ನು ಕರು ಕುಡಿಯದಂತೆ ಮಾಡುತ್ತೇವೆ ನಾವು.. ನಮ್ಮಷ್ಟು ಕೃತಘ್ನರು ಬೇರೆ ಯಾರಾದರೂ ಇದ್ದಾರಾ..?' -ಗುರುಗಳು ಹೇಳಿದ್ದು ಮಂದಣ್ಣನಿಗೆ ನೆನಪಾಯಿತು. ತಕ್ಷಣ ಆ ಕರುವಿನತ್ತ ಧಾವಿಸಿದ ಅವನು ಅದರ ಕಣ್ಣಿ ಕಳಚಿದ. ನಾಲ್ಕೇ ಹೆಜ್ಜೆಗೆ ಓಡಿ ತಾಯಿಯನ್ನು ಸೇರಿದ ಕರು ಕೆಚ್ಚಲಿಗೆ ಬಾಯಿ ಹಾಕಿತು. ಕರುವ ಬಾಯ ಜೊಲ್ಲು ತಗುಲಿದ ರೋಮಾಂಚನಕ್ಕೆ ತಾಯಿ ತಕ್ಷಣ ಸೊರೆಯಿತು. ಕತ್ತು ಹಿಂದೆ ತಿರುಗಿಸಿ ಕರುವಿನ ಮೈಯನ್ನು ನೆಕ್ಕತೊಡಗಿತು. ಕರು ಬಾಲವನ್ನು ನಿಮಿರಿಸಿಕೊಂಡು ಹಾಲು ಕುಡಿಯುತ್ತಿತ್ತು.. 'ಕುಡಿ ಕುಡಿ.. ನಿನಗೆ ತೃಪ್ತಿಯಾಗುವವರೆಗೆ ಕುಡಿ..' ಮಂದಣ್ಣ ಮನಸಿನಲ್ಲೇ ಅಂದುಕೊಂಡ. ಮೊಲೆಯ ತೊಟ್ಟಿನಿಂದ ಹೊರಚಿಮ್ಮಿದ ಹಾಲಿನಲ್ಲಿ ಮಂದಣ್ಣನಿಗೆ ರಂಗಮ್ಮನ ಮುಖ ಕಾಣಿಸತೊಡಗಿತು...