"ಸಂಜೆಗೂ ಬೇಸರಕ್ಕೂ ಬಿಡಿಸಲಾಗದ ನಂಟು..."
ಹೌದಲ್ಲ? ಯಾಕೆ ಹಾಗೆ? "ಪಶ್ಚಿಮ ದಿಗಂತದ ಬಣ್ಣ ಕಣ್ಣನ್ನೇ ದಣಿಸುವಷ್ಟು ಮೋಹಕವಾಗಿ ಹಬ್ಬಿದೆ. ಸೂರ್ಯರಶ್ಮಿ ಮಣ್ಣನ್ನೂ ಚಿನ್ನವಾಗಿಸಿದೆ. ಆದರೆ ಒಂದೇ ಕೊರಗು: ಸಂಗಾತಿ ಇಲ್ಲದಿರುವುದು!"
ನಿಸಾರ್ ಅಹ್ಮದರ ಲೇಖನಿಯಿಂದ ಬರೆಯಲ್ಪಟ್ಟ ಈ ಹಾಡು, 'ನಿತ್ಯೋತ್ಸವ' ಕ್ಯಾಸೆಟ್ಟಿನಲ್ಲಿ ಮೈಸೂರು ಅನಂತಸ್ವಾಮಿಯವರ ದನಿಯಲ್ಲಿ ಹಾರ್ಮೋನಿಯಂ ನಾದದೊಂದಿಗೆ ಹೊಮ್ಮುತ್ತಿದ್ದರೆ, ಅದು ಸಂಜೆಯಲ್ಲದಿದ್ದರೂ ಅಲ್ಲಿ ಸಂಜೆ ಕವಿಯುತ್ತದೆ. ಖುಷಿಯಲ್ಲಿದ್ದರೂ ಬೇಸರ ಆವರಿಸಿಕೊಳ್ಳುತ್ತದೆ.
ಸಂಜೆಗೆ ಸಂಗಾತಿ ಇರಬೇಕು. ರಾತ್ರಿಗೆ ಇರದಿದ್ದರೂ ನಡೆಯುತ್ತದೆ, ಸಂಜೆಗೆ ಬೇಕೇ ಬೇಕು. ಅದರಲ್ಲೂ ಜೀವನದ ಸಂಜೆಗೆ. ದಿನವೆಲ್ಲ ದುಡಿದು ದಣಿದಾಗಿದೆ. ಸಂಜೆ ಮನೆಗೆ ಬಂದಾಗ ಕುಡಿಯಲೊಂದು ಬೆಚ್ಚನೆ ಕಾಫಿಯನ್ನು ಅವಳು ತನ್ನ ಅಮೃತ ಹಸ್ತದಿಂದ ಕೊಡಬೇಕು. ಕೊಡುವಾಗ ಅವಳ ಕೈಯ ಹಸಿರು ಗಾಜಿನ ಬಳೆಗಳಲ್ಲಿ ಮುಳುಗುತ್ತಿರುವ ಕೆಂಪು ಸೂರ್ಯನ ರಶ್ಮಿ ಕಣ್ಣು ಹೊಡೆಯಬೇಕು. ಸಂಜೆಯಲೆ ರಾತ್ರಿ ಇಳಿಯಬೇಕು.
ಹಳೆಯ ಕಾಲವೆನ್ನಬೇಡಿ, ಈಗಲಾದರೂ ಅಷ್ಟೆ. ವಾರವೆಲ್ಲ ಆಫೀಸು, ಬ್ಯುಸಿ, ವರ್ಕ್‍ಲೋಡು. ಸಿಕ್ಕುವುದೊಂದು ಭಾನುವಾರ. ಮನೆ ಕ್ಲೀನ್ ಮಾಡುವುದು, ಬಟ್ಟೆ ವಾಶ್ ಮಾಡುವುದು, ಐರನ್ ಮಾಡುವುದು, ಮಧ್ಯಾಹ್ನದ 'ಸ್ಪೆಶಲ್' ಅಡುಗೆ, ಉಂಡಾದಮೇಲೆ ತೆಗೆದ 'ಮದ್ಧಿನ್ ಮೇಲಿನ್ ನಿದ್ದೆ', ನಂತರ ಕುಡಿದ ಕಾಫಿ... ಹೀಗೇ ಸಂಜೆಯಾಗಿದೆ. ಈಗೇನು ಮಾಡುವುದು? ಟಿವಿಯಲ್ಲಿ ಒಂದೂ ಒಳ್ಳೆಯ ಪ್ರೋಗ್ರಾಮ್ ಇಲ್ಲ. ರೂಂಮೇಟ್ ಸಹ ಎಲ್ಲಿಗೋ ಹೊರಟು ನಿಂತಿದ್ದಾನೆ. ಮುಳುಗಿತ್ತಿರುವ ಸೂರ್ಯನನ್ನು ನೋಡುತ್ತಾ ಸುಮ್ಮನೆ ಕುಳಿತಿರಲು ಆಗುವುದಿಲ್ಲ. ಸಿಗುತ್ತಾಳಾ ಅವಳು ಇವತ್ತು? ಬರಬಹುದಾ ಅವಳು ಇವತ್ತು? ಲಗುಬಗೆಯಿಂದ ಸಿದ್ಧಗೊಂಡು, ತಲೆ ಬಾಚಿಗೊಂಡು, ಕಂಕುಳಿಗೆ ಪೌಡರ್ ಹಾಕಿಕೊಂಡು, ಟೀಶರ್ಟ್-ಜೀನ್ಸ್ ತೊಟ್ಟು.. ಪ್ರತಿ ವಾರವೂ ಇದೇ ಕೆಲಸವಾಗಿದೆ. ಹಾಗಾದರೆ ಏನಾದಳು ಅವಳು? ಮೊಬೈಲು ಸ್ವಿಚ್ ಆಫ್. ಬರುತ್ತಾಳೋ ಇಲ್ಲವೋ, ಏನಾದರಾಗಲಿ ನಾನು ಹೋಗುವುದು ಹೋಗುತ್ತೇನೆ...
ಮೂರುಸಂಜೆ: ಅದು ಮೂರು ಬೆಳಕುಗಳ ಸಂಗಮ. ಸೂರ್ಯ ಇನ್ನೂ ಪೂರ್ತಿ ಮುಳುಗಿಲ್ಲ. ಚಂದಿರನ ತಿಂಗಳ ಬೆಳಕಿನ ತುಂತುರು ಅದಾಗಲೇ ಶುರುವಾಗಿದೆ. ಮತ್ತು, ಮನೆ-ಬೀದಿಯ ದೀಪಗಳು ಹೊತ್ತಿಕೊಳ್ಳುತ್ತಿವೆ. ಪಕ್ಕದ ಮನೆಯ ಗೃಹಿಣಿ ತುಳಸಿಕಟ್ಟೆಯ ಎದುರಿಗೆ ಹಣತೆಯನ್ನು ಹಚ್ಚಿಡುತ್ತಿದ್ದಾಳೆ.
ಲಾಲ್‍ಬಾಗು ಪ್ರೇಮಿಗಳಿಂದಲೇ ತುಂಬಿದೆ. ಎಲ್ಲರೂ ಅವರವರ ಸಂಗಾತಿಯೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದಾರೆ. ಆದರೆ ನನ್ನ ಸಂಗಾತಿ ಎಲ್ಲಿ? ಸಂಗಾತಿಯ ಬರವಿಗಾಗಿ ಕಾದೂ ಕಾದೂ ಬೇಸತ್ತ ಜೀವಗಳ ಹೃದಯೋದ್ಘಾರ ಈ ಪದ್ಯ:
ಮತ್ತದೇ ಬೇಸರ; ಅದೇ ಸಂಜೆ; ಅದೇ ಏಕಾಂತ
ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ, ಮನ ವಿಭ್ರಾಂತ!
ಕಣ್ಣನೇ ತಣಿಸುವ ಈ ಪಡುವಣ ಬಾನ್ಬಣ್ಣಗಳು
ಮಣ್ಣನೇ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗಗಾನ
ಚಿನ್ನ, ನೀನಿಲ್ಲದೆ ಭಿಮ್ಮೆನ್ನುತಿದೆ ರಮ್ಯೋದ್ಯಾನ!
ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆನ್ನುತಿದೆ ಹಾ! ಸಂದೇಹ
ಮುತ್ತಿದಾಲಸ್ಯವ, ಬಿಗಿ ಮೌನವ ಹೊಡೆದೋಡಿಸು ಬಾ
ಮತ್ತೆ ಆ ಸಮತೆ ಹಿರಿ ಬೇಲಿಯ ಸರಿ ನಿಲ್ಲಿಸು ಬಾ
ಬಣ್ಣ ಕಳೆದೊಡವೆಯ ತೆರ ಮಾಸುತಲಿದೆ ಸೂರ್ಯಾಸ್ತ
ನೋಡಗೋ! ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ..
ವೆಚ್ಚವಾಗುತ್ತಿದೆ ಸವಿಚಣಗಳ ಧನ ದುಂದಾಗಿ
ನಲಿವಿನ ಗಳಿಕೆಗೆ ಬಳಸವುಗಳನು ಒಂದೊಂದಾಗಿ
//ಹಾಡು ಕೇಳಿ//
* * *
ಸಂಜೆಯ ಬಗ್ಗೆ ಒಳ್ಳೊಳ್ಳೆಯ ಪದ್ಯಗಳಿವೆ. ಕವಿ ಎಚ್.ಎಸ್. ವೆಂಕಟೇಶಮೂರ್ತಿ ದ್ವಾಪರಯುಗಕ್ಕೇ ಕರೆದೊಯ್ಯುತ್ತಾರೆ ಈ ಕವಿತೆಯಲ್ಲಿ:
ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಬೃಂದಾವನದ ಕಡೆ
ತಾಳೆಯ ಮರಗಳು ತಲೆಯ ತೂಗುತಿವೆ ಕೆದರುತ ಇರುಳ ಜಡೆ
ಅಂಜಿಕೆಯಾಗುವ ಮುನ್ನವೆ ಸಾಗುವ ಬೃಂದಾವನದ ಕಡೆ
ದಟ್ಟಡವಿಯಲಿ ಪುಟ್ಟ ಬಾಲಕರು; ಕತ್ತಲು ಇಳಿಯುತಿದೆ
ಮಲ್ಲಿಗೆ ಬಣ್ಣದ ಹಸುಗಳಿಗೆಲ್ಲ ಕಪ್ಪನು ಬಳಿಯುತಿದೆ
ಕೃಷ್ಣ ಕಪಿಲೆಯರು ಕಾಣುವುದಿಲ್ಲ; ಅಂಜಿಕೆ ಬೆಳೆಯುತ್ತಿದೆ
ಅಂಜದಿರೆನುವನು ನಂದಕುಮಾರ ಮುರಳಿಯ ತುಟಿಗಿಡುತ
ಅಭಯ ನಾದವನು ಬಯಲಲಿ ತುಂಬಿದ ಕೊಳಲ ಉಸಿರು ಬಿಡುತ
ಇರುಳ ಬಾನಿನಲಿ ತೇಲುತ ಬಂತು ಹುಣ್ಣಿಮೆ ಬೆಳ್ಳಿ ರಥ
ಎಲ್ಲಿ ನೋಡಿದರೂ ಬೆಳದಿಂಗಳ ಮಳೆ ಮಿದುವಾಯಿತು ನೆಲವು
ಹಾಲಿನ ಬಟ್ಟಲ ಎತ್ತಿ ಹಿಡಿಯುತಿದೆ ಕೂ ಎನ್ನುತ ಕೊಳವು
ಬೆಣ್ಣೆಯ ಮೆತ್ತಿದ ತುಟಿಯನೊರೆಸುತಿದೆ ಆ ಯಮುನಾಂಚಲವು
ಗೋಪಬಾಲಕರು ಕುಣಿಯುತಲಿಹರು ಕೊಳಲುಲಿ ಕೇಳುತ್ತಾ
ಮರೆತ ಸಾಲುಗಳ ಒರತೆಯ ಬಗೆದು ಗೀತವ ಪಲುಕುತ್ತಾ
ಹಸುಗಳ ಕೊರಳಿನ ಗಂಟೆಯಲುದಿಸಿ ನಾದಕೆ ಸಿಲುಕುತ್ತಾ;
ತಾರಾಲೋಕವ ನಿಲುಕುತ್ತಾ
//ಹಾಡು ಕೇಳಿ//
* * *
ಅಡಿಗರಂತೂ ಅಡಿಗಡಿಗೂ ನೆನಪಾಗಿ ಕಾಡುತ್ತಾರೆ. 'ಆವರಣ'ದಿಂದ ಹೊರಬರುವ ಪ್ರಯತ್ನವಾಗಿ ಮೊನ್ನೆ 'ಅಂಕಿತ'ದಿಂದ ಗೋಪಾಲಕೃಷ್ಣ ಅಡಿಗರ ಸಮಗ್ರ ಕಾವ್ಯವನ್ನು ಕೊಂಡುತಂದೆ. ಎಷ್ಟೊಂದು ಉದ್ದುದ್ದ ಕವಿತೆಗಳನ್ನು ಬರೆದಿದ್ದಾರೆ ಅಡಿಗರು. ಅಲ್ಲದೇ ಅವರು ಒಂದೊಂದು ಕವಿತೆಯನ್ನೂ ಬರೆಯಲಿಕ್ಕೆ ತೆಗೆದುಕೊಂಡ ಸಮಯ ಅಚ್ಚರಿಗೊಳಿಸುತ್ತದೆ. ಕೆಲವೊಂದು ಕವಿತೆ ಬರೆಯಲಿಕ್ಕೆ ಅವರು ಮೂರು-ನಾಲ್ಕು ತಿಂಗಳು ತೆಗೆದುಕೊಂಡಿದ್ದಾರೆ! ಆದರೆ ಅವು ಎಷ್ಟೊಂದು ಅದ್ಭುತವಾಗಿವೆ. ಸಂಕಲನದಿಂದ ಆಯ್ದ ಒಂದು ಕವಿತೆ ಇಲ್ಲಿದೆ. ಶೀರ್ಷಿಕೆ: 'ಒಂದು ಸಂಜೆ'.
ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು; ಸರಿಯಿತು ಕೆಂಪು ಸಂಜೆಯ ಕದಪಲಿ
ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು
ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು
ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು;
ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು
ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು,
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು
//ಹಾಡು ಕೇಳಿ//
ಅದೆಷ್ಟು ಚೆನ್ನಾಗಿ ಬರೆಯುತ್ತಾರೆ ಅಡಿಗರು! ಒಂದು ಸಂಜೆ ಮೌನ ನೆಲವನ್ನು ತಬ್ಬಿತಂತೆ. ನೆಲ ಪುಳಕಗೊಂಡಿತಂತೆ. ಅದನ್ನು ನೋಡಿ ಬಾನು ನಾಚಿತಂತೆ. ಸಂಜೆಯ ಕೆಂಪಿನಡಿಯಲ್ಲಿ ಅಡಗಿತಂತೆ. ಹಕ್ಕಿಗಳು 'ಸೋಬಾನ' ಹಾಡಿದವಂತೆ..... ನೆಲವು ತಣಿಯಿತು, ಬೆವರು ಹನಿಯಿತು, ಭಾಷ್ಪ ನೆನೆಸಿತು ಹುಲ್ಲನು...
ಇಲ್ಲ, ಸಂಗಾತಿ ಇರಲೇಬೇಕು ಸಂಜೆಗೆ.