Wednesday, November 03, 2010

ಚಳಿ, ದೀಪಾವಳಿ, ಪಿರೂತಿ, ಬ್ಲಾ ಬ್ಲಾ

‘ಕಿಲಾಡಿ ಮಾಡಿದರೆ ದೂತರು ಬರುತಾರೆ.. ಕಿನ್ನರಾ, ಹುಷಾರು’
‘ಏನ್ ಮಾಡ್ತಾರೆ ಅಮ್ಮಾ ದೂತರು? ಯಾರವರು?’
‘ದೂತರು ಇ‌ಇ‌ಇಷ್ಟು ದಪ್ಪಗಿರ್ತಾರೆ.. ಬಿಳೀ ಗಡ್ಡ.. ದೊಗಲೆ ದೊಗಲೆ ಅಂಗಿ.. ಕಪ್ಪು ಪೈಜಾಮ.. ತಲೆಗೊಂದು ಕೋನ್ ಟೊಪ್ಪಿ..’
‘ಹಾನ್! ಗೊತ್ತಾಯ್ತು.. ದೂತರು ಎಂದರೆ ಕ್ರಿಸ್‌ಮಸ್ ತಾತ ಅಲ್ವಾ ಅಮ್ಮಾ?’
‘ಅಲ್ಲ ಅಲ್ಲ.. ಕ್ರಿಸ್‌ಮಸ್ ತಾತ ಅಲ್ಲ.. ದೂತರ ಮುಖ ಕಪ್ಪ್ಪ್‌ಪಗಿರೊತ್ತೆ.. ಅಲ್ಲಲ್ಲಿ ಗುಳಿ ಬಿದ್ದಿರೊತ್ತೆ.. ಅವರು ಚೂರೂ ನಗೆಯಾಡುವುದಿಲ್ಲ.. ಚೇಷ್ಟೆ ಮಾಡಿದ ಪುಟ್ಟನನ್ನ ಎತ್ಕೊಂಡ್ ಹೋಗೀ...’
‘ಹೋಗೀ...?’
‘ಎತ್ಕೊಂಡ್ ಹೋಗಿ.. ತುಂಬಾ ಕಚಗುಳಿ ಇಟ್ಟು.. ಇಲ್ಲೆಲ್ಲ ಇಲ್ಲೆಲ್ಲ..’
‘ಹಿಹಿಹಿಹಿ... ಏಯ್ ಬಿಡಮ್ಮ.. ಬಿಡಮ್ಮಾ.. ಕಿಕಿಕಿಕಿ..’
‘..ಇಲ್ಲೆಲ್ಲ ಹೀಗೆಲ್ಲ ಕಚಗುಳಿ ಇಟ್ಟು ಪುಟ್ಟನನ್ನ ನಗಿಸ್ತಾರೆ..!’

* * *

ಹಕ್ಕಿಗಳೆಲ್ಲ ತಡವಾಗಿ ಏಳುತ್ತಿವೆ. ಈ ಚಳಿಯಲ್ಲಿ ಮುಂಜಾನೆಯೇ ಹೊರಹಾರಹೊರಟರೆ ರೆಕ್ಕೆಗಳೆಲ್ಲ ಮರಗಟ್ಟಿಹೋಗಲಾರವೇ? ಗೂಡಿನೊಳಗೆ ಬೆಚ್ಚಗೆ, ಹುಲ್ಲಿನೊಳಗೆ ಇನ್ನೂ ಇನ್ನೂ ಇನ್ನೂ ಮುದುಡಿಕೊಂಡು, ಅಮ್ಮನ ರೆಕ್ಕೆ ತೆಕ್ಕೆಯಡಿಯಲ್ಲಿ ಮುರುಟಿಕೊಂಡು ಮಲಗಿರಬೇಕು. ಉಹುಂ, ನಿದ್ದೆ ಮಾಡಬಾರದು; ಎಚ್ಚರಿರಬೇಕು.. ಅಮ್ಮನ ಬಿಸಿ ಉಸಿರು, ಅಪ್ಪನ ಗೊರಕೆ ಸದ್ದು, ದೂರ ಹೊರಳಿ ಹೋಗಿರುವ ತಮ್ಮನ ಬೇರ್ಪಡಿಕೆ, ಎಲ್ಲವನ್ನು ಮುಗುಳ್ನಗುತ್ತ ಅನುಭವಿಸುತ್ತ. ಇಷ್ಟು ಮುಂಚೆ ಹೊರಗೆ ಹಾರಿದರೆ ಈ ಇಬ್ಬನಿಯಲ್ಲಿ ಆಹಾರ ಕಂಡೀತಾದರೂ ಹೇಗೆ? ನಾಲ್ಕು ಮಾರಿನ ಮುಂದೆ ಮತ್ತೇನೂ ಕಾಣುವುದಿಲ್ಲ. ಎಲ್ಲಾ ಬಿಳಿ ಬಿಳಿ ಬೆಳ್ಳಗೆ. ಅಲಾರ್ಮಿಗೆ ಬೈದುಕೊಳ್ಳುತ್ತಾ ನೀನು ಏಳುತ್ತೀ ಹಾಸಿಗೆಯಿಂದ..

ದುಂಬಿಗಳೂ ತಡವಾಗಿ ಏಳುತ್ತಿವೆ.. ಹೂವು ಅರಳುವುದೇ ತಡ ಈಗ. ಸೂರ್ಯನ ಒಲೆಯಲ್ಲಿ ಶಾಖ ಹೆಚ್ಚಾಗಿ, ಮಂಜೆಲ್ಲ ಕರಗಿ, ಕಿರಣಗಳು ಹೂಮೇಲೆ ಬಿದ್ದು, ಅದು ಅರಳುವ ಹೊತ್ತಿಗೆ ಇನ್ನೊಂದು ಗುಕ್ಕು ನಿದ್ರೆ ತೆಗೆಯಬಹುದು. ದುಂಬಿಗಳಿಗಷ್ಟೇ ಗೊತ್ತು ಹೂವುಗಳ ಚಡಪಡಿಕೆ. ಬೇಗ ಅರಳಬೇಕೆಂಬ ತುಡಿತ. ತಮ್ಮೊಡಲಿನ ಕಂಪನ್ನು ಮೂಜಗಕೆಲ್ಲ ಹರಡಬೇಕೆಂಬ ತಪನೆ. ಸಹಾಯಕ್ಕೆ ಬಾರದ ಸೂರ್ಯನ ಬಗ್ಗೆ ಅಸಹನೆ. ನಿನ್ನ ಮುಡಿಯೇರಿ ನನ್ನ ಕಣ್ಸೆಳೆಯುವ ಚಪಲ.

ನೀರೂ ಕಾಯುವುದಿಲ್ಲ ಬೇಗ.. ಕಾಯಿಲ್ ಹಾಕಿಟ್ಟು ಎಷ್ಟೊತ್ತಾಯ್ತು? ಗಡಿಯಾರ ನೋಡಿದ್ದೇ ನೋಡಿದ್ದು. ಗಡಿಯಾರ ನಿಂತು ಹೋಗಿದೆಯೇ ಎಂದು ಪರಿಕಿಸಲು ವಾಚು ನೋಡಿದ್ದು. ಆದರೂ ನಂಬಿಕೆ ಬರದೇ ಮೊಬೈಲು ನೋಡಿದ್ದು. ಹೌದು, ಅರ್ಧ ಗಂಟೆ ಮೇಲಾಯ್ತು. ಇನ್ನೂ ಕಾದಿಲ್ಲ ನೀರು. ಮುಟ್ಟಿ ನೋಡಿದರೆ ಐಸ್ ಮುಟ್ಟಿದಂತೆ. ತಣ್ಣಗೆ. ಹಾಗೇ ತಣ್ಣೀರೇ ಹೊಯ್ದುಕೊಂಡರೆ ನಿನ್ನ ಬಂಗಾರು ಬಣ್ಣದ ಮೈತುಂಬ ಚಳಿಗುಳ್ಳೆಗಳೆದ್ದು, ಮೈಪುಳಕಗೊಂಡು, ನನ್ನ ನೆನಪಾಗಿ... ಬೇಡ ಬೇಡ, ನೀರು ಕಾಯಲಿ ಬಿಡು.

ಬಸ್ಸೂ ತಡವಾಗಿ ಬರುತ್ತದೆ.. ಡ್ರೈವರ್ ಎದ್ದರೂ ಮಂಕಿ ಕ್ಯಾಪ್ ಹಾಕಿದ ಕಂಡಕ್ಟರಿಗಿನ್ನೂ ನಿದ್ದೆ. ಅವನ ಚರ್ಮದ ಚೀಲದೊಳಗೆ ನಾಣ್ಯಗಳೊಂದಿಗೆ ನಿದ್ದೆ ಹೋಗಿರುವ ಪೀಪಳಿ. ನಾಲ್ಕು ಸಲ ಬಟನ್ ಒತ್ತಿದರೂ ಸ್ಟಾರ್ಟಾಗಲು ಒಲ್ಲದ ತಂಡಿ ಬಡಿದ ಎಂಜಿನ್. ಗಾಲಿಗಳಿಗೂ ಒದ್ದೆ ರಸ್ತೆಯ ಮೇಲೆ ಓಡಲು ಸೋಮಾರಿತನ. ನಿನಗೆ ಕಾದೂ ಕಾದೂ ಬೇಸರ. ಆಫೀಸಿನಲ್ಲಿ ಬಾಸ್ ಬೈಯುತ್ತಾರೇನೋ ಅಂತ ಟೆನ್ಷನ್.

ಎಲ್ಲರಿಗಿಂತ ನೀನೇ ಲೇಟೇನೋ ಅಂದುಕೊಂಡು ಆಫೀಸಿಗೆ ಕಾಲಿಟ್ಟರೆ ಅಂಗಣವೆಲ್ಲ ಬಿಕೋ ಬಿಕೋ.. ಪಾರ್ಕಿಗೆ ಜಾಗಿಂಗಿಗೆ ಹೋಗಿದ್ದ ಬಾಸ್ ಮುದ್ದು ಅಳಿಲಿನ ಮೀಸೆ ಮೇಲೆ ನಿಂತಿದ್ದ ಇಬ್ಬನಿಹನಿಯನ್ನು ನೋಡುತ್ತ ಮೈಮರೆತು ನಿಂತುಬಿಟ್ಟಿದ್ದರಂತೆ.. ಕಲೀಗುಗಳೆಲ್ಲ ಹೊಸದಾಗಿ ಮದುವೆಯಾದವರು: ಹೇಗೆ ತಾನೆ ಬಂದಾರು ಅಷ್ಟು ಮುಂಚೆ? ಸಿಸ್ಟಮ್ ಆನ್ ಮಾಡಿದರೆ ಕಿಂಗ್‌ಫಿಷರ್ ಹಕ್ಕಿಯ ಬ್ಯಾಕ್‌ಗ್ರೌಂಡಿನ ಮೇಲೆ ಪುಟ್ಟ ಪುಟ್ಟ ಐಕಾನುಗಳು. ನಿನ್ನ ಪುಟ್ಟ ಬೆರಳುಗಳಿಂದ ಅದುಮಿದರೆ ಮೌಸೂ ಉಲಿಯುತ್ತದೆ ಹಿತವಾಗಿ ಕ್ಲಿಕ್. ತೆರೆದುಕೊಂಡ ವಿಂಡೋದಲ್ಲಿ ನನ್ನದೇ ಮೇಯ್ಲ್: "ಚಿನಕುರುಳಿ ಹುಡುಗಿಗೆ ಗುಡ್ ಮಾರ್ನಿಂಗ್! ಪಿಂಕ್ ಡ್ರೆಸ್ಸಲ್ಲಿ ಚನಾಗ್ ಕಾಣ್ತಿದೀಯ. ಇನ್ನು ಆರು ದಿನ ನಾನಿರಲ್ಲ. ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗ್ತಿದೀನಿ. ಅಷ್ಟು ದಿನಕ್ಕೆ ಬೇಕಾದಷ್ಟು ಪ್ರೀತೀನ ಇಕೋ ಈ ಮೇಯ್ಲಲ್ಲೇ ಕೊಡ್ತಿದೀನಿ: ತುಂಬಿಸಿಕೋ. ಹ್ಯಾಪಿ ದಿವಾಲಿ. ಲವ್ಯೂ!"

ಡ್ರೆಸ್ಸಿನ ಪಿಂಕನ್ನೂ ಮೀರಿ ಏರಿದ ಮುಖದ ಕೆಂಪಿಗೆ ತುಟಿಯಂಚ ಮುಗುಳ್ನಗೆ ಮ್ಯಾಚ್ ಆಗುತ್ತದೆ. ಟಕಟಕನೆ ಟೈಪಿಸುತ್ತೀಯ ಎಸ್ಸೆಮ್ಮೆಸ್ ಮೊಬೈಲಿನಲ್ಲಿ: "ಥ್ಯಾಂಕ್ಯೂ ಕಣೋ ಗೂಬೆ.. ನಿಂಗೂ ಹ್ಯಾಪಿ ದೀಪಾವಳಿ. ಊರಲ್ಲಿ ಮಜಾ ಮಾಡು. ಲವ್ಯೂ!" ಗಾವುದಗಳಾಚೆಗಿನ ನನ್ನೂರಲ್ಲಿ ಸಿಗ್ನಲ್ಲನ್ನೇರಿ ಬರುತ್ತದೆ ಸಂದೇಶ ಟಿಣ್ ಟಿಣ್. ನಾನು ಹೊದಿಕೆಯಡಿಯಿಂದ ಕೈತೆಗೆದು ಮೊಬೈಲಿಗಾಗಿ ತಡಕಾಡುತ್ತೇನೆ.

* * *

ವರುಷಗಳ ಹಿಂದೆ ಬರೆದು ಅರ್ಧಕ್ಕೇ ಬಿಟ್ಟಿದ್ದ ಲಹರಿ.  ಯಾಕೋ ಈಗ ಈ ಚಳಿಗೆ ಈ ಹವೆಗೆ ಈ ಇದಕ್ಕೆ ಮತ್ತು ಹೊಸದೇನನ್ನೂ ಬರೆಯಲಾಗದ ಬಿಜಿಗೆ, ಸ್ವಲ್ಪ ಸೋಮಾರಿತನಕ್ಕೆ ಸೂಟ್ ಆಗುತ್ತದೆ ಎನ್ನಿಸಿತು; ಕೊನೆಯಲ್ಲಿಷ್ಟು ತೀಡಿ ಪೋಸ್ಟ್ ಮಾಡಿದ್ದೇನೆ. ಈ ದೀಪಾವಳಿಗೆ ಇಷ್ಟೇ.

ಶುಭಾಶಯಗಳೂ..

8 comments:

ಮನಸಿನ ಮಾತುಗಳು said...

:-) :-) :-)

ninguu habbada chubhaachaya... :-)njooy...:-)

Shiv said...

ಸುಶ್ರುತ,

ಚೆಂದದ ಬರವಣಿಗೆ..

ಮುಂದಿನ ಗಣಪತಿ ಹಬ್ಬಕ್ಕೆ ಗೆಜ್ಜೆಸರ ಮಾಡುವ ಸೊಸೆ ಬರುತ್ತಾಳೆಂದು ನೀನು ಅಮ್ಮನಿಗೆ ಹೇಳಿದ್ದು..ಪಿಂಕ್ ಚೂಡಿಧಾರಿ ಪಿರೂತಿ ಬಗ್ಗೆ ಹೇಳಿದ್ದು..ಯಾಕೋ ಒಟ್ಟಿಗೆ ನೆನಪಾದವು :)

ದೀಪಾವಳಿ ಶುಭಾಶಯಗಳು !

ಮಹೇಶ ಭಟ್ಟ said...

ಜೀವನದ ಅತಿ ಸುಂದರ ಘಳಿಗೆಗಳನ್ನು ಹಿಡಿದಿಟ್ಟಿದ್ದೀರಿ.

umesh desai said...

ದೀಪಾವಳಿಹಬ್ಬದ ಶುಭಾಶಯಗಳು ಸುಶ್ರುತ.
ಛಳಿಯ ವರ್ಣನೆ ಸೊಗಸಾಗಿದೆ

ಶರಶ್ಚಂದ್ರ ಕಲ್ಮನೆ said...

ನಿನಗೂ ದೀಪಾವಳಿಯ ಶುಭಾಶಯಗಳು :) "ಅವನ ಚರ್ಮದ ಚೀಲದೊಳಗೆ ನಾಣ್ಯಗಳೊಂದಿಗೆ ನಿದ್ದೆ ಹೋಗಿರುವ ಪೀಪಳಿ." "ಟಕಟಕನೆ ಟೈಪಿಸುತ್ತೀಯ ಎಸ್ಸೆಮ್ಮೆಸ್ ಮೊಬೈಲಿನಲ್ಲಿ: "ಥ್ಯಾಂಕ್ಯೂ ಕಣೋ ಗೂಬೆ.. ನಿಂಗೂ ಹ್ಯಾಪಿ ದೀಪಾವಳಿ. ಊರಲ್ಲಿ ಮಜಾ ಮಾಡು. ಲವ್ಯೂ!" ಗಾವುದಗಳಾಚೆಗಿನ ನನ್ನೂರಲ್ಲಿ ಸಿಗ್ನಲ್ಲನ್ನೇರಿ ಬರುತ್ತದೆ ಸಂದೇಶ ಟಿಣ್ ಟಿಣ್. ನಾನು ಹೊದಿಕೆಯಡಿಯಿಂದ ಕೈತೆಗೆದು ಮೊಬೈಲಿಗಾಗಿ ತಡಕಾಡುತ್ತೇನೆ." ಈ ಸಾಲುಗಳು ತುಂಬಾ ಇಷ್ಟ ಆತು :)

ಚಿನ್ಮಯ said...

ತುಂಬಾ ಚಂದ ಬರೀತೆ ಸುಶ್ರುತ!
ನಿನ್ನೆ ತಾನೇ ನಿನ್ನ ಹಳೆಯ ಬ್ಲಾಗ್ ಸುಮಾರು ಓದಿದ್ದೆ. ನನಗಂತೂ ರಾಶಿ ಇಷ್ಟ ಆತು!

ದೀಪಾವಳಿ ಶುಭಾಶಯಗಳು!

ಸೀತಾರಾಮ. ಕೆ. / SITARAM.K said...

ಯಾವದೋ ಅನೂಹ್ಯ ಪ್ರಪಂಚದಲ್ಲಿ ಮಧುರವಾಗಿ ತಿರುಗಾಡಿಸಿದ೦ತಿತ್ತು...

@spn3187 ಕನ್ನಡಿಗ ಶಿವಕುಮಾರ ನೇಗಿಮನಿ said...

tumba funny-yagide