"ಬತ್ತಿದ ಮೊಲೆಯ ತಾಯಂದಿರು ಬಂದೂಕುಗಳ ಹಿಡಿದು ಒಲೆ ಹಚ್ಚಿದರೆ / ಅನ್ನದ ಡಬರಿಯಲಿ ತಮ್ಮದೇ ಕೂಸುಗಳು ಕುದಿಯುತ್ತಿವೆ ಕೊತ ಕೊತ / ಸಣ್ಣ ಕರುಳು, ಬೋಟಿ, ಖಲೀಜ" -ದಂತಹ ಬೆಚ್ಚಿ ಬೀಳಿಸುವ ರೂಪಕಗಳನ್ನು ಕಟ್ಟುವ ಬಾಬು, "ಇನ್ನೆಷ್ಟು ದಿನ ಮಿಸುಕಾಡದ ದೇವರುಗಳ ಮುಂದೆ ಹರಕೆ ಹೊರುವುದು / ಹೊಲಸು ಹಾದಿಗಳ ಮೇಲೆ ಚಿಂದಿಯುಟ್ಟು ಉರುಳುವುದು / ತಲೆ ಬೋಳಿಸಿಕೊಳ್ಳುವುದು / ಸತ್ತ ಮೇಲೂ ಸಾಯುವುದು?" ಅಂತ ಪ್ರಶ್ನಿಸುತ್ತಾರೆ. "ನಮ್ಮವರ ಬಣ್ಣ ರೊಕ್ಕ ಇದ್ದ ಧಣಿಗಳ ತಾಕ ಜೀತಕ್ಕಿಟ್ಟೈತಿ / ಹುಟ್ಟಿದಾಗಿಂದ ಜಾತಿ ಒಲಿಯಾಗ ಬಡತನದ ಬೆಂಕ್ಯಾಗ ಸುಟ್ಟು ಕರಕಲಾಗೈತಿ / ಸಾಯೋಗಂಟ ಅದೇ ನಿಜ ಆಗೈತಿ" ಎಂದು ಬರೆಯುವಾಗ ಅವರಲ್ಲಿರುವ ವಿಷಾದ, "ಹೆಣ್ಣಾಗಿ ಹುಟ್ಟಿ ಭೂಮಿ ಎಂದು ಕರೆಸಿಕೊಳ್ಳುವುದು ಸಾಕು, ಸಿಡಿಯಬೇಕು ಇನ್ನಾದರೂ ಜ್ವಾಲಾಮುಖಿಯಾಗಿ" ಅಂತ ಬರೆವಾಗ ವಿಚಿತ್ರ ಆಶಾವಾದವಾಗುತ್ತದೆ. ಇಂತಹ, ಓದುಗನನ್ನು ಕೆರಳಿಸುವ, ಒರೆಗೆ ಹಚ್ಚುವ, ನಿಟ್ಟುಸಿರಿಡಿಸುವ ಕವನಗಳ ಜತೆಗೇ, ಬಾಬು ಚಂದಿರನಿಗೆ ಲಾಲಿ ಹಾಡಿ ತೂಗುತ್ತಾರೆ, ಮಗಳ ಹಾಡಿಗೆ ಕಿವಿಯಾಗುತ್ತಾರೆ, 'ಪ್ರೀತಿಯೇ ಬೆಟ್ಟವಾದ ನನ್ನಪ್ಪ'ನನ್ನು ಅನಾವರಣಗೊಳಿಸುತ್ತಾರೆ, ತಮ್ಮ ಕಾವ್ಯಕನ್ನಿಕೆಯನ್ನು 'ಬ್ಯಾಸಿಗಿ ಬಿಸಿಲಿಗೆ ತಂಪ ನೆಳ್ಳ ಆಗ್ಯಾಳ' ಎಂದು ಬಣ್ಣಿಸುತ್ತಾರೆ.
ಇಂತಹ ಬಾಬು ಅವರ ಕವನ ಸಂಕಲನದಿಂದ ಆಯ್ದ ಒಂದು ಕವಿತೆ, ಅವರ ಪ್ರೀತಿಗೆ; ನನ್ನ ಹಂಚಿಕೊಳ್ಳುವ ಖುಶಿಗೆ.
ಅಮ್ಮ ಸುಟ್ಟ ರೊಟ್ಟಿ
- ವಿ. ಹರಿನಾಥ ಬಾಬು
ಅಮ್ಮ ಬೆಳಗೆದ್ದು ರೊಟ್ಟಿ ಸುಡುವುದೆಂದರೆ
ನಮಗೆ ಪಂಚಪ್ರಾಣ
ಕತ್ತಲು ತುಂಬಿದ ಗುಡಿಸಲಿಗೆ
ಒಲೆಯ ಬೆಂಕಿಯೇ ಬೆಳಕು
ಸುಟ್ಟು ಸುಟ್ಟು ಕರ್ರಗಾದ
ಬಿಳಿ ಮೂರು ಕಲ್ಲು,
ಮೇಲೊಂದು ಕರ್ರಾನೆ ಕರಿ ಹೆಂಚು
ಒಲೆಯೊಳಗೆ ಹಸಿ ಜಾಲಿ
ಮುಳ್ಳು ಕಟ್ಟಿಗೆ ಒಟ್ಟಿ
ಹೊಗೆಯೊಳಗೆ ಉಸಿರು ಕಟ್ಟಿ
ಮನೆಯೊಳಗೆ ಉಸಿರೆರೆದವಳು
ಅಮ್ಮ, ಕಾಲು ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಕೊಣಿಗೆಯಲಿ ಹಿಟ್ಟರವಿ
ಆಸೆಯ ಒಡ್ಡು ಕಟ್ಟಿ
ಹಗಲೆಲ್ಲ ದುಡಿದ ಮೈ ಬಸಿದ ಬೆವರು
ಹದಕೆ ಕಾಯಿಸಿದ ಎಸರು
ಸುರುವಿ ಒರೊಟೊರಟ ಕೈಯಿಲೆ
ಮೆತ್ತ ಮೆತ್ತಗೆ ಕಲಸಿ
ಗಾಲಿಯಂಗೆ ಗುಂಡಗೆ ನುಣ್ಣನೆಯ
ಮೂರ್ತಿ ಮಾಡಿದವಳು
ಅಮ್ಮ, ಕೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಎದೆಯ ತುಡಿತಗಳ ಮಿಡಿತ
ಹದವಾಗಿ ಮೆದುವಾಗಿ
ಲಯಬದ್ಧವಾಗಿ ಹಿಟ್ಟ
ತಟ್ಟಿದರೆ ದುಂಡ ದುಂಡಗೆ
ಹುಣ್ಣಿಮೆಯ ಚಂದಿರ
ಕಾದ ಕರಿಹೆಂಚಿನ ಮೇಲೆ
ಆಕಡೀಕಡೆ ಸುಟ್ಟು
ಹೊಟ್ಟೆಗಿಟ್ಟು
ರಟ್ಟೆಗೆ ಬಲವ ಕೊಟ್ಟವಳು
ಅಮ್ಮ, ಮೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಜೀವ ಜೀವದ ಸಾರ
ಕುಸಿವೆಣ್ಣೆ ಒಣಕಾರ
ಈರುಳ್ಳಿ ಹಸಿಮೆಣಸು
ಬೆಳ್ಳುಳ್ಳಿ ಉಂಚೆತೊಕ್ಕು
ದಿನಕೊಂದು ಹೊಸ ರುಚಿಯ
ರೊಟ್ಟಿಯೊಳಗೇ ಸುತ್ತಿ
ಉಣಬಡಿಸಿ
ಸುತ್ತೇಳು ಲೋಕವ ತೋರಿದವಳು
ಅಮ್ಮ, ಜೀವ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಕಟ್ಟಿಗೆಯೊಟ್ಟಿಗೆ ಸುಟ್ಟು
ಹೊಗೆಯೊಳಗೆ ಕುದ್ದು
ಹೆಂಚಂತೆ ಕಾದು
ರೊಟ್ಟಿಯಾಗಿ ಬೆಂದ
ಒಲೆಯ ಮುಂದಿನ ಅಮ್ಮನ ಮುಖ
ನಿಗಿ ನಿಗಿ ಕೆಂಡ!
['ಬೆಳಕ ಹೆಜ್ಜೆಯನರಸಿ'; ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ.]