Monday, October 09, 2006

ಪ್ರವಾಸ ಕಥನ: ಚುಕ್ಕಿಗಳ ಊರು ಶಿವನಸಮುದ್ರ

ಅಕ್ಟೋಬರ್ ಎರಡು, ಎರಡ್ಸಾವ್ರದ ಆರರ ಶುಭ್ರ ಮುಂಜಾನೆ ಬೆಂಗಳೂರಿನ ಯಾವ್ಯಾವುದೋ ಬಡಾವಣೆಗಳ ಯಾವ್ಯಾವುದೋ ಬೀದಿಗಳಲ್ಲಿನ ಮನೆಗಳಲ್ಲಿ ಕನಸುಗಳೊಂದಿಗೆ ನಿದ್ರಾಲೋಕದಲ್ಲಿ ಮುಳುಗಿಹೋಗಿದ್ದ ಎಂಟು ಜನ ಗೆಳೆಯರು ಅಲಾರಾಂ ಸದ್ದಿಗೆ ಎಚ್ಚೆತ್ತಾಗ ಆಕಾಶದಲ್ಲಿನ್ನೂ ಚುಕ್ಕಿಗಳ ಸರಭರ ಮುಗಿದಿರಲಿಲ್ಲ. ಆದರೆ ಆಗಲೇ ಚುಕ್ಕಿಗಳ ಊರು ಶಿವನಸಮುದ್ರ ಕರೆಯುತ್ತಿತ್ತು. ಇನ್ನೂ ಹುಟ್ಟಿರದ ಸೂರ್ಯ ದೊಡ್ಡ ಟೆರೇಸು ಮನೆಗಳ ಹಿಂಬದಿಯಿಂದ ಎದ್ದು ಬರಲು ಹೊಂಚು ಹಾಕಿ ಕುಳಿತಿದ್ದ. ಹಕ್ಕಿಗಳೆಲ್ಲಾ 'ತಮಗೆ ಇವತ್ತೂ ಆಫೀಸಿದೆ' ಎಂಬಂತೆ ಆಗಲೇ ಚಿಲಿಪಿಲಿಗುಡುತ್ತಾ ತಮ್ಮ ಗೂಡು ಬಿಟ್ಟು ಸ್ನೇಹಿತರೊಡಗೂಡಿ ಹಾರಟ ಹೊರಟಿದ್ದವು. ನೈಟ್‍ಶಿಫ್ಟ್ ಮುಗಿಸಿದ ನೌಕರರು ನಿದ್ದೆಗಣ್ಣಿನಲ್ಲಿ ಕ್ಯಾಬಿನಿಂದ ಇಳಿಯುತ್ತಿದ್ದರು. ಪೇಪರ್ ಹುಡುಗರು ಆಯುಧಪೂಜೆಯ ಮರುದಿನವಾದ್ದರಿಂದ ಯಾವ ಪೇಪರೂ ಹಂಚುವುದಿರಲಿಲ್ಲವಾದರೂ ಬೆಳಗ್ಗೆ ಮುಂಚೆಯೇ ಎಚ್ಚರಾಗಿ, 'ಥೋ, ಇವತ್ತು ರಜ!' ಅಂತ ಗೊಣಗಿಕೊಂಡು, ಮತ್ತೆ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದರು.

ಸ್ನಾನ ಗೀನ ಮಾಡಿ ರೆಡಿಯಾಗಿ, ಬಟ್ಟೆ ಗಿಟ್ಟೆ ತೊಟ್ಟು ತಲೆ ಬಾಚಿ, ನಿನ್ನೆ ತೊಳೆದಿದ್ದ ಬೈಕೆಳೆದುಕೊಂಡು, ತಮ್ಮ ಗೆಳೆಯನೊಬ್ಬನನ್ನು ಕೂರಿಸಿಕೊಂಡು, 'ಜೈ ಭಜಿರಂಗಬಲಿ!' ಅಂತ ಕಿಕ್ ಹೊಡೆದು ಸ್ಟಾರ್ಟ್ ಮಾಡಿ ಹೊರಟು, ನಾವು ಎಂಟು ಹುಡುಗರು ಬಿಎಚ್‍ಇಎಲ್ ಗೇಟ್ ಬಳಿ ಸೇರಿದಾಗ ಏಳು ಗಂಟೆ ಹತ್ತು ನಿಮಿಷ. ಅಲ್ಲೇ ಬದಿಯ ಚಾ-ದುಖಾನ್‍ನಲ್ಲಿ ಕಟಿಂಗ್ ಚಾಯ್ ಕುಡಿದು, ಬೈಕಿಗೆ ಪೆಟ್ರೋಲು ಕುಡಿಸಿ, ಮೈಸೂರು ರಸ್ತೆಯಲ್ಲಿ ಬೈಕು ಚಲಿಸತೊಡಗಿದರೆ, ಉಲ್ಲಾಸ-ಉತ್ಸಾಹ-ಉನ್ಮಾದಗಳು ಚಕ್ರದ ಪ್ರತಿ ಉರುಳುವಿಕೆಯಲ್ಲೂ ಇಮ್ಮಡಿಯಾಗಿದ್ದವು.


ಇಂಟರ್‍ನೆಟ್ಟಿನಲ್ಲಿ Orkut ಅಂತ ಒಂದು friendship building network. ಅದರಲ್ಲಿ 'ಹವ್ಯಕ' ಅಂತ ಒಂದು community. ಆ community ಯಿಂದ ಒಂದುಗೂಡಿದ, ಹತ್ತಿರಾದ ನಾವು ಎಂಟು ಜನ ಹುಡುಗರೇ ಈ ಟೂರಿಗೆ ಹೊರಟಿದ್ದ ಟ್ರೂಪು. ಮೊದಲೇ ಮಾತಾಡಿಕೊಂಡಿದ್ದಂತೆ ಕಾಮತ್ ರೆಸ್ಟುರಾದಲ್ಲಿ ಬೆಳಗಿನ ತಿಂಡಿಗೆ ನಿಲ್ಲಿಸಿದೆವು. ವಡೆ, ಮಸಾಲೆ ದೋಸೆ ಮತ್ತು ಕಾಫಿಯ ಜೊತೆಗೆ ಒಂದೊಂದು ಕೊಟ್ಟೆ ಇಡ್ಲಿಯೂ ಬಿದ್ದಾಗ ಹೊಟ್ಟೆ ಫುಲ್ಲಾಗಿತ್ತು. ತಿಂಡಿಗಿಂತಾ ಚೆನ್ನಾಗಿದ್ದದ್ದು ಕಾಮತ್ ರೆಸ್ಟುರಾ ಮತ್ತು ಅದಕ್ಕಿಂತಾ ಚೆನ್ನಾಗಿದ್ದದ್ದು ಪಕ್ಕದ ಕೊಳದಲ್ಲಿ ಈಜಾಡುತ್ತಿದ್ದ ಹಂಸಪಕ್ಷಿ.

ಅಲ್ಲಲ್ಲಿ ನಿಲ್ಲಿಸುತ್ತಾ, ಡ್ರೈವರ್ ಬದಲಿಸುತ್ತಾ, ದಾರಿ ವಿಚಾರಿಸುತ್ತಾ, ಕೆಟ್ಟ ರಸ್ತೆಯನ್ನು ಬೈದುಕೊಳ್ಳುತ್ತಾ ನಾವು ಶಿವನ ಸಮುದ್ರ ಮುಟ್ಟುವಷ್ಟರಲ್ಲಿ ಹನ್ನೊಂದೂ ಕಾಲು. ಕಾವೇರಿ ನದಿ ಇಲ್ಲಿ ಕವಲಾಗಿ ಒಡೆದು, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಜಲಪಾತಗಳನ್ನು ಉಂಟುಮಾಡಿದೆ. ಎರಡೂ ಜಲಪಾತಗಳೂ ಒಂದಕ್ಕೊಂದು ಎದುರು-ಬದುರು ಇವೆ. ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಸಾಗಿ, ಮದ್ದೂರಿನಿಂದ ಎಡಕ್ಕೆ ಕೊಳ್ಳೇಗಾಲ ರಸ್ತೆಯಲ್ಲಿ ಸುಮಾರು ಎಪ್ಪತ್ತು ಕಿ.ಮೀ. ಚಲಿಸಿದರೆ, ನಿಮಗೆ ಮೊದಲು ಸಿಗುವುದು ಭರಚುಕ್ಕಿ ಜಲಪಾತ. ಅಲ್ಲಿಂದ ಐದು ಕಿ.ಮೀ. ಸುತ್ತುವರಿದುಕೊಂಡು ಬಂದರೆ ಗಗನಚುಕ್ಕಿ ಕಾಣುತ್ತದೆ. ಭರಚುಕ್ಕಿಯನ್ನು ನೋಡುವಾಗ ಗಗನಚುಕ್ಕಿ ನಿಮ್ಮ ಕಾಲಡಿಗೇ ಇರುತ್ತದೆ; ಆದರೆ ನೋಡಲಾಗುವುದಿಲ್ಲ. ಹಾಗೆಯೇ ಇಲ್ಲಿಂದ ಭರಚುಕ್ಕಿಯನ್ನು ನೋಡುವಾಗ ಅದರ ಭಾರೀ ಪ್ರಮಾಣದ ಅರಿವು ಆಗುವುದೇ ಇಲ್ಲ. ಇಲ್ಲಿದ್ದಾಗ ಗಮನ ಸೆಳೆಯುವುದು ದೂರದಲ್ಲಿನ ಮುದಿ ಒಂಟಿ ಮರ. ಈ ಮರ ಅದೆಷ್ಟೋ ವರ್ಷಗಳಿಂದ ಜಲಪಾತದ ಭೋರ್ಗರೆತವನ್ನು ಕೇಳುತ್ತಾ ಕೇಳುತ್ತಾ ಸರ್ವಸಂಗಪರಿತ್ಯಾಗಿಯಾದಂತೆ ತನ್ನ ಎಲೆಗಳನ್ನೆಲ್ಲಾ ಉದುರಿಸಿ ಬೋಳಾಗಿ ನಿಂತಿದೆ. ಪಕ್ಕದಲ್ಲಿನ ಚಿಕ್ಕಪುಟ್ಟ ಗಿಡ-ಮರಗಳ್ಯಾವೂ ಇದರ ಕಷ್ಟ ವಿಚಾರಿಸುವುದಿಲ್ಲ. ಅದು ಪ್ರವಾಸಿಗರಿಗೆಲ್ಲಾ ತನ್ನ ಕತೆಯನ್ನು ಹೇಳುತ್ತದೆ. ಈ ಮರ ಕಾವೇರಿ ವಿವಾದವಾದಾಗ ಸಹ ಇಲ್ಲೇ ಇತ್ತು. ಆಗ ಕಾವೇರಿ ಬೇಸರದಿಂದ ಇಲ್ಲಿ ಧುಮ್ಮಿಕ್ಕುವುದನ್ನು ಕಣ್ಣಾರೆ ಕಂಡನಂತರ, ಅದಕ್ಕೆ ಈ ಇಹಲೋಕದ ಬಗ್ಗೆ ಬೇಸರ ಮೂಡಿ, ಪ್ರತಿಭಟನೆ ವ್ಯಕ್ತಪಡಿಸಲೆಂದು ತನ್ನೆಲ್ಲಾ ಎಲೆಗಳನ್ನು ಉದುರಿಸಿದ್ದಂತೆ. ಆದರೆ ಮತ್ತೆ ಎಲೆಗಳು ಚಿಗುರಲೇ ಇಲ್ಲ.ಭರಚುಕ್ಕಿಯನ್ನು ನೋಡಿ, ಮನಸಾರೆ ದಣಿದು, ಪೆಪ್ಸಿ ಕುಡಿದು, ಫೋಟೋ ಕ್ಲಿಕ್ಕಿಸಿಕೊಂಡು ನಾವು ಮತ್ತೆ ಬೈಕು ಹತ್ತಿ ಗಗನಚುಕ್ಕಿಯತ್ತ ಹೊರಟೆವು. ದಾರಿ ಮಧ್ಯೆ ಒಂದು ಕಡೆ ನಿಲ್ಲಿಸಿದೆವು. ಅಲ್ಲಿ ಕಾವೇರಿಯ ನೀರು backwaterನಂತೆ ನಿಂತಿದೆ. ಇಲ್ಲ, ನಿಂತಿಲ್ಲ, (ನದಿ ನಿಲ್ಲುವುದುಂಟೆ?), ಹರಿಯುತ್ತಿದೆ, ನಿಧಾನವಾಗಿ ಹರಿಯುತ್ತಿದೆ. ನಿಂತಲ್ಲೇ ಹರಿಯುತ್ತಿದೆ. ಅದರಲ್ಲೊಂದು ಬಕಪಕ್ಷಿ. ಕತ್ತನ್ನಷ್ಟೇ ಎತ್ತಿ ಸುತ್ತ ನೋಡಿ ಮತ್ತೆ ಮುಳುಗಿಬಿಡುತ್ತೆ ಗತ್ತಿನಲ್ಲಿ. ಇಲ್ಲಿ ಮುಳುಗಿ ಎಲ್ಲೋ ಏಳುತ್ತದೆ. ಅದರ ಫೋಟೊ ತೆಗೆಯುವಷ್ಟರಲ್ಲಿ ಸಾಕುಬೇಕಾಗಿತ್ತು ನಮಗೆ!

ಗಗನಚುಕ್ಕಿಯ ವೀಕ್ಷಣಾಸ್ಥಳವನ್ನು ನಾವು ಮುಟ್ಟಿದಾಗ ಮಧ್ಯಾಹ್ನದ ಒಂದೂ ವರೆ. ಹೋದಮೇಲೇ ಗೊತ್ತಾದದ್ದು: ನಾವು ಭರಚುಕ್ಕಿಯನ್ನು ನೋಡಲು ನಿಂತ ಜಾಗದ ಕೆಳಗೇ ಗಗನಚುಕ್ಕಿ ಇತ್ತು ಎಂಬುದು! ಭರಚುಕ್ಕಿಯ ಎದುರುಮನೆಯಲ್ಲೇ ಗಗನಚುಕ್ಕಿಯ ಭೋರ್ಗರೆತ. ಗಗನಚುಕ್ಕಿ ಸ್ಲಿಮ್ಮಾಗಿ ಆದರೆ ಬಲು ಎತ್ತರದಿಂದ ಧುಮುಕುತ್ತಾಳಾದರೆ, ಭರಚುಕ್ಕಿ ಅಗಾಧ ಪ್ರಮಾಣದ ನೀರಿನೊಂದಿಗೆ ಕಂದಕಕ್ಕಿಳಿಯುತ್ತಾಳೆ. ಕೆಳಗಿಳಿದ ಮೇಲೆ ಇಬ್ಬರೂ ಮತ್ತೆ ಒಂದಾಗಿ ಮುಂದೆ ಸಾಗುತ್ತಾರೆ. ಮುಸ್ಲಿಮರ ದರ್ಗಾ ಇರುವ ಪ್ರದೇಶವಾದ್ದರಿಂದಲೋ ಏನೋ, ಇಲ್ಲಿ ಸ್ವಲ್ಪವೂ cleanness ಇಲ್ಲ. ಕಾಲಿಡುವಾಗ ನೋಡಿಕೊಂಡು ಇಡಬೇಕು. ಅಲ್ಲೇ ದರ್ಗಾದ ಪಕ್ಕದಲ್ಲಿ ಹಾದುಹೋದರೆ, ಕೆಳಗಿಳಿಯಲಿಕ್ಕೆ ಒಂದು ಕಾಲ್ದಾರಿ ಇದೆ. ನಾವು ಅಲ್ಲೇ ನಿಂತು ಸ್ವಲ್ಪ ಹೊತ್ತು ವೀಕ್ಷಿಸಿ, ಕೆಳಗಿಳಿದು ಹೋದೆವು. ಮೊದಲು ಸ್ನಾನ ಮಾಡಬೇಕು ಎಂದಾಯಿತು. ಎಲ್ಲಿ ಸ್ನಾನ ಮಾಡುವುದು ಅಂತ ಹುಡುಕಿ ಹುಡುಕಿ, ಕೊನೆಗೆ ಸರ್ವಾನುಮತದಿಂದ ಒಂದು ಜಾಗಕ್ಕೆ ಹೋಗಿ, ಬಟ್ಟೆ ಬಿಚ್ಚಿ, ಬರ್ಮುಡಾ ತೊಟ್ಟು, ನೀರಿಗಿಳಿದರೆ.... ನೀರಿನ ತಂಪಿಗೆ ಆಹಾ! ಸ್ವರ್ಗಸುಖ! ನಾವು ನೀರಿನಲ್ಲೇ ಸುಮಾರು ಮೂರು ತಾಸು ಇದ್ದೆವು. ಮಧ್ಯೆ ಒಮ್ಮೆ ಹೊರಬಂದು ಚಕ್ಲಿ ಕಂಬಳದಲ್ಲಿ ಉಳಿದಿದ್ದ ಚಕ್ಲಿಯನ್ನೆಲ್ಲಾ ತಿಂದೆವು. ಪೆಪ್ಸಿ ಕುಡಿದೆವು. ಕತೆ ಹೊಡೆದೆವು. ಮತ್ತೆ ನೀರಿಗಿಳಿದೆವು. ಫೋಟೋ ತೆಗೆಸಿಕೊಂಡೆವು. ಒಬ್ಬರು ಮತ್ತೊಬ್ಬರಿಗೆ ನೀರು ಸೋಕಿಕೊಂಡೆವು. ಜೋಕು ಮಾಡಿಕೊಂಡೆವು.... ಹಾಗೆಯೇ ಸಮಯ ಕಳೆಯಿತು.ವಾಪಸು ಹೊರಟೆವು. ಬಟ್ಟೆ ಧರಿಸಿ ಮೇಲೆ ಹತ್ತಿ ಬಂದೆವು. ಬಂದಮೇಲೆ ಕೆಳಗೆ ನೋಡಿದರೆ, ಬಹಳಷ್ಟು ಜನ ಭರಚುಕ್ಕಿ ಜಲಪಾತದ ಸಮೀಪದಲ್ಲೇ ನಿಂತು ವೀಕ್ಷಿಸುತ್ತಿರುವುದು ಕಂಡುಬಂತು. ನಾವೂ ಅಲ್ಲಿಗೆ ಹೋಗಬೇಕು ಅನ್ನಿಸಿತು. ತುಂಬಾ ಸುಸ್ತಾಗಿತ್ತಾದರೂ ಮತ್ತೆ ಕೆಳಗಿಳಿದೆವು. ಸಾಹಸ ಮಾಡಿ, 'ಜಂಪ್' ಮಾಡಿ, ಧೈರ್ಯವಿಲ್ಲದವರಿಗೂ ಧೈರ್ಯ ತುಂಬಿ, ಭರಚುಕ್ಕಿಯ ಸಮೀಪ ಹೋಗಿ ನಿಂತು ನೋಡುತ್ತೇವೆ: ಏನದು ಜಲರಾಶಿ.. ಅಲ್ಲಿ ನೀರಲ್ಲ, ಸಮುದ್ರವೇ ಧುಮ್ಮಿಕ್ಕುತ್ತಿತ್ತು. ನಾನಂತೂ ಒಂದು ಕ್ಷಣ ಮೂಕವಿಸ್ಮಿತನಾಗಿ ನಿಂತುಬಿಟ್ಟೆ. ಕಾವೇರಿ ಉನ್ಮತ್ತಳಂತೆ ಭರದಿಂದ ಎದುರಿಗಿನ ಗಗನಚುಕ್ಕಿ ನಾಚುವಂತೆ ರುದ್ರಾವತಾರ ತಾಳಿ ಧುಮುಕುತ್ತಿದ್ದಳು. ಕಿವಿಗಡಚಿಕ್ಕುವಂತಹ ಭೋರ್ಗರೆತ. ನೀರು ಕೆಳಗೆ ಬಿದ್ದು ಸಿಡಿದ ಹನಿಗಳು ಮೋಡದಂತೆ ಗಗನವನ್ನೇ ಮುಟ್ಟಿದ್ದವು.


ನಾನು ಯೋಚಿಸುತ್ತಿದ್ದೆ: ಅದೆಲ್ಲೋ ತಲಕಾವೇರಿಯಲ್ಲಿ ಹುಟ್ಟಿದ ಕಾವೇರಿ ಹರಿಯುತ್ತಾ ಹರಿಯುತ್ತ ಇಲ್ಲಿಗೆ ಬಂದು ಹೀಗೆ ಧುಮ್ಮಿಕ್ಕುವ ಪರಿ... ಇದ್ಯಾವ ಸಂಕಲ್ಪ? ಅಷ್ಟು ದೂರದಿಂದ ಜೊತೆಯಾಗಿ, ಒಂದಾಗಿ (ಒಂದೇ ಆಗಿ) ಬಂದು ಇಲ್ಲಿ ಸ್ವಲ್ಪ ದೂರ ಬೇರ್ಪಟ್ಟು, ಬೇರ್ಪಟ್ಟಿದ್ದಕ್ಕೇ ಬೇಸರಗೊಂಡು, ಇಷ್ಟೆತ್ತರದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡು, ಆದರೂ ಸಾಯದೆ, ಮತ್ತೆ ಒಂದಾಗಿ ಮುಂದೆ ಸಾಗುವ ವಿಸ್ಮಯ... ಇದ್ಯಾವ ಮಾಯೆ? ಏನು ಮರ್ಮ? ಪ್ರಕೃತಿಯ ಈ ರಮಣೀಯ ಸೌಂದರ್ಯಕ್ಕೆ ಎಣೆ ಎಲ್ಲಿದೆ? ಇದರ ಮುಂದೆ ನಾವೆಲ್ಲಾ ಚುಕ್ಕಿಗಳೇ ಅಲ್ಲವೆ?


ತುಂಬಾ ಹೊತ್ತು ಅಲ್ಲೇ ಇದ್ದು ನಾವು ಹೊರಟೆವು. ಅಷ್ಟು ಹೊತ್ತೂ ಇರದಿದ್ದ ಹಸಿವು ಆಗ ಕಾಣಿಸಿಕೊಂಡಿತ್ತು. ಏನನ್ನಾದರೂ ತಿನ್ನಬೇಕಿತ್ತು. ಮದ್ದೂರಿನವರೆಗೂ ಯಾವುದೇ ಒಳ್ಳೆಯ ಹೋಟಿಲಿರಲಿಲ್ಲವಾದ್ದರಿಂದ, ಮದ್ದೂರ್ ಟಿಫಾನೀಸ್‍ಗಾಗಿಯೇ ಕಾಯಬೇಕಾಯಿತು. ಜನಪ್ರಿಯ ಮದ್ದೂರು ವಡೆ ತಿಂದು, ಈರುಳ್ಳಿ ದೋಸೆ ತಿಂದು, ಕಾಫಿ ಕುಡಿದು, ಸಂಜೆ ಐದೂವರೆಗೆ 'ಮಧ್ಯಾಹ್ನದ ಊಟ' ಮುಗಿಸಿದೆವು. ಮತ್ತೆ ಬೈಕು ಹತ್ತುವಷ್ಟರಲ್ಲಿ ಕತ್ತಲಾವರಿಸುತ್ತಿತ್ತು.

ಹೆಡ್‍ಲೈಟ್ ಆನ್ ಮಾಡಿ ಹೊರಟರೆ ರಸ್ತೆಯ ತುಂಬಾ ಚುಕ್ಕಿಗಳೋ ಚುಕ್ಕಿಗಳು. ದೂರದ ರಸ್ತೆ ದೀಪಗಳೂ ಚುಕ್ಕಿಗಳು. ಕತ್ತೆತ್ತಿ ಮೇಲೆ ನೋಡಿದರೆ ಆಗಸದಲ್ಲೂ ಚುಕ್ಕಿಗಳು. ಮಧ್ಯೆ ಮಧ್ಯೆ ನಿಲ್ಲಿಸುತ್ತಾ, ಹಿಂದಿದ್ದವರು ಬರುವತನಕ ಕಾಯುತ್ತಾ, ಶರವೇಗದಲ್ಲಿ ಸಾಗುತ್ತಿದ್ದರೆ, ಮಧ್ಯೆ ಬಂದ ಸಣ್ಣ ಮಳೆ ಯಾವ ಲೆಕ್ಕ? ಬೆಂಗಳೂರಿನ ದೀಪಗಳು ಚುಕ್ಕಿಗಳಾಗಿ ಕಾಣುತ್ತಿತ್ತು. ಬೆಂಗಳೂರಿಗೆ ಪ್ರವೇಶಿಸುತ್ತಿದ್ದಂತೆಯೇ, ರಸ್ತೆಬದಿಯ ಟೀ ಅಂಗಡಿಯೊಂದರಲ್ಲಿ ಎಲ್ಲರೂ ಟೀ ಕುಡಿದು, ಅಲ್ಲೇ ಎಲ್ಲರಿಗೂ ಬೈಬೈ ಹೇಳಿ ಹೊರಟೆವು. ಮತ್ತು ಸಿಗ್ನಲ್ಲುಗಳ ಊರಿನ ಟ್ರಾಫಿಕ್ಕಿನಲ್ಲಿ ಕಳೆದುಹೋದೆವು.

16 comments:

ಶ್ರೀನಿಧಿ.ಡಿ.ಎಸ್ said...

ಚೆನ್ನಾಗಿ ಬರದ್ದೆ ಸುಶ್,
ಮಮೂಲಿಯ "ಪ್ರವಾಸ ಕಥನ"ದ ಶೈಲಿಯಿಂದ ಹೊರಗೆ ಬಂದು ಬರದ್ದೆ! ಒಂದೆರಡು ಫೋಟೊ ಹಾಕಿದಿದ್ರೆ ಚೊಲೊ ಆಗಿತ್ತೇನ.. ಅದ್ರೂ, ನಿನ್ನ ಬರಹ ದ ರೂಪಕಗಳು ಸಾಕು ಬಿಡು!

ಶ್ರೀನಿಧಿ.ಡಿ.ಎಸ್ said...

ಚೆನ್ನಾಗಿ ಬರದ್ದೆ ಸುಶ್,
ಮಾಮೂಲಿಯ "ಪ್ರವಾಸ ಕಥನ"ದ ಶೈಲಿಯಿಂದ ಹೊರಗೆ ಬಂದು ಬರದ್ದೆ! ಒಂದೆರಡು ಫೋಟೊ ಹಾಕಿದಿದ್ರೆ ಚೊಲೊ ಆಗಿತ್ತೇನ.. ಅದ್ರೂ, ನಿನ್ನ ಬರಹ ದ ರೂಪಕಗಳು ಸಾಕು ಬಿಡು!

ಸುಶ್ರುತ ದೊಡ್ಡೇರಿ said...

@ ಶ್ರೀನಿಧಿ....

Thanx ಚಾರಣಿಗ. ಫೋಟೊ post ಮಾಡ್ಲಿಕ್ಕೆ ನಂಗ್ಯಾಕೋ ಆಗ್ತಾನೇ ಇಲ್ಲೆ. Upload ಆಗ್ತಾನೇ ಇಲ್ಲೆ. ಎಂತಕ್ಕೇನ ಗೊತ್ತಿಲ್ಲೆ..

vikas said...

ಸುಶ್ರುತ.. ಚೆನ್ನಾಗಿದೆ..

ಎಲ್ಲಾ ಮರೆತು ಹೋಗುವ ಮೊದಲು ಮತ್ತೊಮ್ಮೆ ಪ್ರವಾಸ ಮಾಡಿ ಬಂದ ಹಾಗೆ ಆಯ್ತು. ಒಂದೆರ್ಡು ಫೋಟೊ ಹಾಕಲ್ಲೆ ಪ್ರಯತ್ನಿಸು... ಧನ್ಯವಾದ :)

ಸುಶ್ರುತ ದೊಡ್ಡೇರಿ said...

@ Vikas

Thanx bro. ಆದಷ್ಟು ಬೇಗ ಫೋಟೋ ಹಾಕ್ತಿ..

kalgargiri said...

ಚೆನ್ನಾಗಿ ಬ೦ದಿದೆ ಕಥನ..... photo ಹಾಕಿದ್ರೆ ಇನ್ನೂ ಒಳ್ಳೇದಿತ್ತು...........

ಸುಶ್ರುತ ದೊಡ್ಡೇರಿ said...

@ kalgarGiri

Thanx Giri.. 'ಬಹುಜನಗಳ ಅಪೇಕ್ಷೆಯ ಮೇರೆಗೆ' ಸಧ್ಯದಲ್ಲೇ ಫೋಟೋ ಹಾಕಲಾಗುವುದು!

vikas said...

ಸುಮ್ ಸುಮ್ನೆ..

backwater = ಹಿನ್ನೀರು
cleanliness = ಸ್ವಚ್ಛತೆ

ಸುಶ್ರುತ ದೊಡ್ಡೇರಿ said...

@ vikas

ಗೊತ್ತಿರ್ಲಿಲ್ಲ ಅಂತ ಅಲ್ಲ, ಕೆಲವೊಮ್ಮೆ ಬರಹವನ್ನು attractive (ಆಕರ್ಷಕ) ಆಗಿಸಲು English words use ಮಾಡಬೇಕಾಗುತ್ತದೆ (Sorry, ಆಂಗ್ಲಭಾಷೆಯ ಶಬ್ದಗಳನ್ನು ಬಳಸಬೇಕಾಗುತ್ತದೆ).

ಇಷ್ಟಾಗ್ಯೂ, ನಿನ್ನ ಕನ್ನಡ ಪ್ರೀತಿಗೆ ನಮೋನಮಃ!

(Sorry=ಕ್ಷಮಿಸಿ) !!!

vikas said...

back water, cleanliness ivu ಅನಗತ್ಯವಾಗಿ ಬಳಸಲ್ಪಟ್ಟ ಪದಗಳು ಎಂದು ನನ್ನ ಅನಿಸಿಕೆ..
ಇದರಿಂದ ಬರಹಕ್ಕೆ ಯಾವುದೇ ಹೆಚ್ಚಿನ ಆಕರ್ಷಣೆ ಬರುವುದಿಲ್ಲ.

ಅದೇ ನೋಡು friendship building community ಅಂತ ಬರ್ದಿದೀಯಾ..ಅದು ಒ.ಕೆ. ಇಲ್ಲಾ ಅಂದ್ರೆ ಅದನ್ನು ಕನ್ನಡದಲ್ಲಿ ಬರೆಯಲು ಹೋದ್ರೆ ಬಹಳ ಕೃತಕವೆನಿಸುತ್ತದೆ...

ಆದ್ದರಿಂದ ಅನಗತ್ಯವಾಗಿ ಎಲ್ಲಾ ಕಡೆ english words use ಮಾಡೋ ಬದಲು ಸಾಧ್ಯವಾಗುವಲ್ಲೆಲ್ಲಾ ಕನ್ನಡ ಪದಗಳನ್ನು ಉಪಯೋಗಿಸು..

ಇದು ಆದೇಶವಲ್ಲ.. ಭಿನ್ನಹ .. ಅಷ್ಟೇ.. :)

ಸುಶ್ರುತ ದೊಡ್ಡೇರಿ said...

@ vikas

ಭಿನ್ನಹವನ್ನು ಮನ್ನಿಸಲಾಗಿದೆ. ಖಂಡಿತ ಮುಂದಿನ ಬರಹಗಳಲ್ಲಿ ಪರಭಾಷಾ ಶಬ್ದಗಳ ಬಳಕೆಯನ್ನು avoid (ತಡೆಹಿಡಿ?) ಮಾಡುತ್ತೇನೆ!

vikas said...

ಈಗ ನೋಡು.. ಬರಹಕ್ಕೆ ಸೂಪರ್ ಕಳೆ ಬಂತು...ಫೋಟೋ ಮಸ್ತ್ ಮಸ್ತ್...ಖಾಲಿ ಜಲಪಾತದ್ದು ಒಂದು ಫೋಟೊ ಹಾಕು.. ಇನ್ನೂ 'attractive' ಆಗ್ತು... :)

Alpazna said...

ಅದ್ಭುತ ಸುಶೃತ, ಅದ್ಭುತ!
ಒಳ್ಳೆಯ ಬರವಣಿಗೆ. ಬಹಳಾ ಚೆನ್ನಾಗಿ ಬರದ್ದೆ.
keep it up!

ನೀನು ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ರೀತಿ,
ಅವುಗಳಿಗೆ ನೀನು ತೋರಿಸುವ ಪ್ರೀತಿ,
ವಿಶಿಷ್ಟವಾದ ನಿನ್ನ ಬರವಣಿಗೆಯ ರೀತಿ,
ಇವೆಲ್ಲವೂ ನನಗೆ ಅತ್ಯಂತ ಪ್ರೀತಿ.

ಸಣ್ಣಪುಟ್ಟ ವಿವರಗಳನ್ನು ನೀನು ಬಳಸುವ ಬಗೆ,
ವಿಭಿನ್ನವಾದ ನಿನ್ನ ದೃಷ್ಟಿಕೋನ (ಉದಾ: ಆ ಒಂಟಿ
ಮರವನ್ನು ನೀನು ನೋಡಿದ್ದು, ಹಾಗು ಅದರ ಬಗ್ಗೆ ಬರೆದಿದ್ದು).
ಇವೆಲ್ಲವೂ ತುಂಬಾ ಚೆನ್ನಾಗಿವೆ.

ಫೋಟೊಗಳು ಚೆನ್ನಾಗಿ ಬಂದಿದ್ದು, ಬ್ಲಾಗಿಗೆ ಕಳೆತಂದಿವೆ.
ಉಳಿದ ಫೋಟೊಗಳಿಗೆ link ಕೊಟ್ಟರೆ ಚೆನ್ನಿತ್ತು, ಇರಲಿ.

ಪುರುಸೊತ್ತಿದ್ದಾಗೆ ನನ್ನ ಬ್ಲಾಗಿಗೊಂದು ಭೇಟಿ ಕೊಡು.

ಟಾಟ

ಸುಶ್ರುತ ದೊಡ್ಡೇರಿ said...

@ alpazna

Thanx Sandeepa. ನೀನು ನಿನ್ನ blogನಲ್ಲಿ ಬರೆದ ಇದೇ ಪ್ರವಾಸದ ಕಥನವೂ ತುಂಬಾ ಚೆನ್ನಾಗಿದೆ. ನಿನ್ನ ಪ್ರೀತಿ-ರೀತಿ-ನೀತಿಗಳು ನನ್ನ ಮೇಲೆ ಸದಾ ಹೀಗೇ ಇರಲಿ ಎಂಬುದಷ್ಟೇ ನನ್ನ ವಿನಂತಿ.

ಅಂದ್ಹಾಗೆ, ನನ್ನ ಹೆಸರು ಸುಶೃತ ಅಲ್ಲ, ಸುಶ್ರುತ :)

Alpazna said...

sorry ಸುಶ್ರುತ,

ಕಣ್fuse ಆ(ಹೋ)ಗ್ಬುಟ್ಟಿತ್ತು!

balakrishna said...

ಚನ್ನಾಗಿ ಮೂಡಿಬಂದಿದೆ ನಿಮ್ಮ ಪ್ರವಾಸ ಬರಹ...

ಬಾಳದಾರಿಯಲ್ಲಿ ಅಲೆಯುತ್ತ ನನ್ನ ಗೂಡಿಗೊಮ್ಮೆ ಬಂದು ಹೋಗಿ.
ಸ್ವಾಮಿ..

http://www.gubbacchi-goodu.blogspot.com/
http://alemaari-baduku.blogspot.com/
http://baaladaari.blogspot.com/