ಮೊದಲು ಇಡೀ ಭೂಮಿಯೇ ಸೂರ್ಯನಿಂದ ಸಿಡಿದು ಬಂದ
ಒಂದು ದೊಡ್ಡ ಕಲ್ಲುಬಂಡೆಯಾಗಿತ್ತಂತೆ
ಆಮೇಲೆ ಅದೇನಾಯಿತೋ, ಸೃಷ್ಟಿಗೌಪ್ಯ,
ನದಿ ಸಮುದ್ರ ಗಿಡ ಮರ ಪ್ರಾಣಿ ಪಕ್ಷಿ
ಬೆಟ್ಟ ಬಯಲು ಹಿಮ ಮರಳು ಕೊನೆಗೊಬ್ಬ ಮನುಷ್ಯ
ಈ ಕಲ್ಲುಗಳೇನು ಪೂರ್ತಿ ಕರಗಿದವೇ?
ಕೆಲವು ದೊಡ್ಡ ಬಂಡೆಗಳು ಹಾಗೇ ಉಳಿದವು
ಇನ್ನು ಕೆಲವು ಹದಾ ಸೈಜಿಗೆ ಬಂದು ಉರುಳಿದವು
ಮತ್ತೆ ಹಲವು ಸಣ್ಸಣ್ಣ ಚೂರಾಗಿ ಮರಳಾಗಿ ಮಣ್ಣಾಗಿ
ಗುರುತೇ ಸಿಗದಂತೆ ಬದಲಾಗಿಹೋದವು
ಬದಲಾವಣೆಗೆ ಜಗ್ಗದ ಕೆಲ ಕಲ್ಲುಗಳು
ಏಕಶಿಲಾಪರ್ವತ ಅಂತೆಲ್ಲ ಹೆಸರು ಮಾಡಿದವು
ಈ ಮನುಷ್ಯನೊಬ್ಬ ಅಸಾಮಾನ್ಯ ಪ್ರಾಣಿಯಾಗಿಬಿಟ್ಟ
ಕಲ್ಲುಗಳನ್ನು ಕಡಿದು ಕೆತ್ತಿ ಆಕಾರವೊಂದಕ್ಕೆ ತಂದು
ಕಲ್ಲ ಮೇಲೆ ಕಲ್ಲಿಟ್ಟು ಕಟ್ಟಡಗಳನ್ನು ಕಟ್ಟಿದ
ದೊಡ್ಡ ಕಲ್ಲ ಮೇಲೆ ಸಣ್ಣ ಕಲ್ಲಿಂದ ಜಜ್ಜಿ ಮಸಾಲೆಯರೆದ
ಕಲ್ಲನೊಡೆಯಲೆಂದೇ ಡೈನಮೈಟುಗಳನ್ನು ಕಂಡುಹಿಡಿದ
ದೊಡ್ಡ ಕಲ್ಲುಗಳಿಂದ ದೊಡ್ಡ ಮೂರ್ತಿಗಳನ್ನು ಕೆತ್ತಿದ
ಸಣ್ಣ ಕಲ್ಲುಗಳಿಗೆ ಉಳಿಪೆಟ್ಟು ಕೊಟ್ಟು ಸಣ್ಣಮೂರ್ತಿಗಳನಾಗಿಸಿದ
ಅವುಗಳನ್ನು ದೇವರು ಅಂತಲೂ ಕರೆದ, ಸೃಷ್ಟಿಕರ್ತನೇ ಇವನೆಂದ
ಕಲ್ಲುಗಳಿಂದಲೇ ನೆಲಹಾಸು, ಕಲ್ಲುಗಳಿಂದಲೇ ಬಚ್ಚಲಿಗೆ ಚಪ್ಪಡಿ,
ಕಲ್ಲಿನಿಂದಲೇ ಜಲ್ಲಿ, ಕಲ್ಲಿನಲೇ ಕೊರೆದ ನಾಮಫಲಕ
ಕೊನೆಕೊನೆಗೆ ಏನೋ ಮಾಡಲು ಹೋಗಿ ಏನೇನೋ ಆಗಿ
ಎಲ್ಲಾ ಗೊಂದಲಕ್ಕೊಳಗಾಗಿ ತಲೆಬಿಸಿಯಾಗಿ ಮುಂದೇನೆಂದರಿಯದೆ
ನೆಮ್ಮದಿಯರಸಿ ಸಾವನದುರ್ಗದ ನೆತ್ತಿಗೆ ಚಾರಣ ಹೊರಟ
ಮೊನ್ನೆ ಆ ಪ್ರತಿಭಟನೆ ನಡೆದ ಸ್ಥಳಕ್ಕೆ ಹೋಗಿದ್ದೆ
ರಸ್ತೆ ತುಂಬಾ ಸಣ್ಣ ಸಣ್ಣ ಕಲ್ಲುಗಳು
ತಲೆಯೆತ್ತಿ ನೋಡಿದರೆ ಒಡೆದ ಕಿಟಕಿಗಾಜುಗಳು
ಎತ್ತಲಿಂದಲೋ ಕಲ್ಲೊಂದು ತೂರಿಬಂತು
ಎಲ್ಲಿಯವನೋ ನೀನು ಅಂತೇನೋ ಬೈಗುಳ..
ಜೀವ ಉಳಿದರೆ ಸಾಕೆಂದು ಓಡಿಬಂದೆ.
[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ.]
Monday, November 14, 2016
Monday, October 10, 2016
ಗಮನ
ಇದೊಂದು ತಕ್ಷಣಕ್ಕೆ ನಮ್ಮ ಗಮನಕ್ಕೆ ಬರಲೇ ಇಲ್ಲ:
ಚಿಲಿಪಿಲಿಗುಡುತ್ತಾ ಪುಟುರ್ರನೆ ರೆಕ್ಕೆಬಡಿಯುತ್ತಾ
ಮನೆಯೊಳಕ್ಕೂ ಹೊರಕ್ಕೂ ಹಾರುತ್ತಿದ್ದ ಗುಬ್ಬಿಗಳು
ನಿಧಾನಕ್ಕೆ ಕಮ್ಮಿಯಾಗುತ್ತಾ ಕೊನೆಗೆ ನಿಶ್ಶೇಷವಾದದ್ದು.
ಗುಬ್ಬಿಗಳು ಏಕೆ ಕಾಣೆಯಾದವೆಂದು ಯಾರಿಗೂ ಗೊತ್ತಾಗಲಿಲ್ಲ.
ಕೆಲವರು ಮೊಬೈಲ್ ಸಿಗ್ನಲುಗಳೇ ಕಾರಣವೆಂದರು
ಕೆಲವರು ಸಿಮೆಂಟ್ ಕಟ್ಟಡದಲ್ಲವಕ್ಕೆ ಗೂಡು ಕಟ್ಟಲಾಗದೆಂದರು
ಇನ್ನು ಕೆಲವರು ಇಲೆಕ್ಟ್ರಿಕ್ ತಂತಿಗಳದೇ ದೋಷವೆಂದರು
ಮತ್ತೆ ಕೆಲವರಂದರು: ಅವಕ್ಕೆ ತಿನ್ನಲಿಕ್ಕೇ ಆಹಾರವಿಲ್ಲೆಂದು
ನಿಖರ ಕಾರಣ ಮಾತ್ರ ಕೊನೆಗೂ ತಿಳಿಯಲಿಲ್ಲ
ವಾಸ್ತುಬಾಗಿಲ ಮೇಲಣ ಬಾಗುಫೋಟೋಗಳ ಹಿಂದೆ
ಅವು ಪೇರಿಸುತ್ತಿದ್ದ ಹುಲ್ಲಕಡ್ಡಿಗಳು ಬಿದ್ದು ಆಗುತ್ತಿದ್ದ ಕಸ
ಕಮ್ಮಿಯಾದುದಕ್ಕೆ ಅಮ್ಮ ಖುಷಿಪಟ್ಟಳು
ಗಂಟೆಗೊಮ್ಮೆ ಗುಡಿಸೋದು ತಪ್ಪಿತು ಎಂದಳು
ಕಿಚಪಿಚ ಗಲಾಟೆ ಇಲ್ಲದೆ ಟೀವಿ ನೋಡಲು
ಅನುಕೂಲವಾದುದಕ್ಕೆ ಅಜ್ಜಿಗೆ ಸಂತೋಷವಾಯಿತು
ಒಳಮನೆಯ ಕತ್ತಲಲ್ಲವು ಹಾಕಿದ ಪಿಷ್ಟಿ ಅಕಸ್ಮಾತ್ ಮೆಟ್ಟಿ
ಥೋಥೋಥೋ ಎನ್ನುತ್ತಾ ಬಚ್ಚಲಿಗೋಡುತ್ತಿದ್ದ ಅಪ್ಪ
ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟ
ಗುಬ್ಬಿಗಳು ಇಲ್ಲವಾದುದಕ್ಕೆ ಎಲ್ಲರೂ ನಿರಾಳವಾದಂತಿತ್ತು
ಇನ್ನೊಂದು ನಾವು ಗಮನಿಸಿರಲೇ ಇಲ್ಲ:
ಈ ಧುತ್ತನೆ ಆವರಿಸಿದ ಮೌನಕ್ಕೆ ಗುಬ್ಬಿಗಳೊಂದಿಗೇ ಜತೆಯಾದದ್ದು
ಸಾಯುವ ಮುನ್ನ ಚಿಕ್ಕಪ್ಪ ತಾನೇ ಕೈಯಾರೆ ಮಾಡಿ
ಜಗುಲಿ ಬಾಗಿಲಲ್ಲಿ ನೇತು ಬಿಟ್ಟಿದ್ದ ಗಾಳಿಘಂಟೆಗಳು.
ಗಾಳಿ ಬಂದಾಗ ಟಿಂಟಿಣಿಗುಡಲೆಂದೇ ಅದನ್ನಾತ ತಯಾರಿಸಿದ್ದರೂ
ಅದರಿಂದ ಸದ್ದು ಮೀಟುತ್ತಿದ್ದುದು ಮಾತ್ರ ಗುಬ್ಬಿಗಳು
ಚಿಕ್ಕಪ್ಪ ಇಲ್ಲವಾದಮೇಲೆ ಅವನ ಮೆಲುದನಿಯನ್ನೇ ಅನುಕರಿಸುವಂತೆ
ಗುಬ್ಬಿಗಳ ಕಾಲು-ರೆಕ್ಕೆಗಳ ಸ್ಪರ್ಶಕ್ಕೆ ದನಿ ಹೊಮ್ಮಿಸುತ್ತಿದ್ದ
ಗಾಳಿಘಂಟೆಗಳು ಚಿಕ್ಕಮ್ಮನೆದೆ ತಂತಿಯನ್ನೂ ಝಲ್ಲೆನಿಸುತ್ತಿದ್ದವಿರಬೇಕು
ನಿಜ, ಇದೊಂದನ್ನು ನಾವು ಗಮನಿಸಿರಲೇ ಇಲ್ಲ:
ಗುಬ್ಬಿಗಳು ಅದೃಶ್ಯವಾಗುತ್ತ ಹೋದಂತೆ ಚಿಕ್ಕಮ್ಮನೂ
ಮೌನಿಯಾಗುತ್ತಾ ಹೋದಳು ಎಂಬುದು.
ಕೋಣೆಯ ಕಿಟಕಿ ಬಳಿ ಕೂತು ಅವಳು
ಗುಬ್ಬಿಗಳಿಗಾಗಿ ಕಾಯುತ್ತಿದ್ದಳು ಎಂಬುದು.
ಅವುಗಳ ಸ್ಪರ್ಶಮಾತ್ರದಿಂದ ಹೊಮ್ಮುವ
ಘಂಟೆನಿನಾದಕ್ಕೆ ಕಿವಿಯಾಗಿದ್ದಳು ಎಂಬುದು.
ಆಹ್ಲಾದದ ಸಿಹಿಗಾಳಿಯಾದರೂ ನೂಕಿದರೆ
ಘಂಟೆಗಳು ಟಿಂಟಿಣಿಗುಟ್ಟಬಹುದೆಂದು ನಿರುಕಿಸುತ್ತಿದ್ದಳು ಎಂಬುದು.
ಹೌದು, ಇದು ನಮ್ಮ ಗಮನಕ್ಕೆ ಬಂದಿರಲೇ ಇಲ್ಲ:
ಗುಬ್ಬಿಗಳ ನಿರ್ಗಮನದೊಂದಿಗೆ ಚಿಕ್ಕಮ್ಮನ
ಸಣ್ಣ ಸಂತಸವೂ ಸಹಗಮನ ಮಾಡಿತ್ತೆಂಬುದು.
ಚಿಲಿಪಿಲಿಗುಡುತ್ತಾ ಪುಟುರ್ರನೆ ರೆಕ್ಕೆಬಡಿಯುತ್ತಾ
ಮನೆಯೊಳಕ್ಕೂ ಹೊರಕ್ಕೂ ಹಾರುತ್ತಿದ್ದ ಗುಬ್ಬಿಗಳು
ನಿಧಾನಕ್ಕೆ ಕಮ್ಮಿಯಾಗುತ್ತಾ ಕೊನೆಗೆ ನಿಶ್ಶೇಷವಾದದ್ದು.
ಗುಬ್ಬಿಗಳು ಏಕೆ ಕಾಣೆಯಾದವೆಂದು ಯಾರಿಗೂ ಗೊತ್ತಾಗಲಿಲ್ಲ.
ಕೆಲವರು ಮೊಬೈಲ್ ಸಿಗ್ನಲುಗಳೇ ಕಾರಣವೆಂದರು
ಕೆಲವರು ಸಿಮೆಂಟ್ ಕಟ್ಟಡದಲ್ಲವಕ್ಕೆ ಗೂಡು ಕಟ್ಟಲಾಗದೆಂದರು
ಇನ್ನು ಕೆಲವರು ಇಲೆಕ್ಟ್ರಿಕ್ ತಂತಿಗಳದೇ ದೋಷವೆಂದರು
ಮತ್ತೆ ಕೆಲವರಂದರು: ಅವಕ್ಕೆ ತಿನ್ನಲಿಕ್ಕೇ ಆಹಾರವಿಲ್ಲೆಂದು
ನಿಖರ ಕಾರಣ ಮಾತ್ರ ಕೊನೆಗೂ ತಿಳಿಯಲಿಲ್ಲ
ವಾಸ್ತುಬಾಗಿಲ ಮೇಲಣ ಬಾಗುಫೋಟೋಗಳ ಹಿಂದೆ
ಅವು ಪೇರಿಸುತ್ತಿದ್ದ ಹುಲ್ಲಕಡ್ಡಿಗಳು ಬಿದ್ದು ಆಗುತ್ತಿದ್ದ ಕಸ
ಕಮ್ಮಿಯಾದುದಕ್ಕೆ ಅಮ್ಮ ಖುಷಿಪಟ್ಟಳು
ಗಂಟೆಗೊಮ್ಮೆ ಗುಡಿಸೋದು ತಪ್ಪಿತು ಎಂದಳು
ಕಿಚಪಿಚ ಗಲಾಟೆ ಇಲ್ಲದೆ ಟೀವಿ ನೋಡಲು
ಅನುಕೂಲವಾದುದಕ್ಕೆ ಅಜ್ಜಿಗೆ ಸಂತೋಷವಾಯಿತು
ಒಳಮನೆಯ ಕತ್ತಲಲ್ಲವು ಹಾಕಿದ ಪಿಷ್ಟಿ ಅಕಸ್ಮಾತ್ ಮೆಟ್ಟಿ
ಥೋಥೋಥೋ ಎನ್ನುತ್ತಾ ಬಚ್ಚಲಿಗೋಡುತ್ತಿದ್ದ ಅಪ್ಪ
ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟ
ಗುಬ್ಬಿಗಳು ಇಲ್ಲವಾದುದಕ್ಕೆ ಎಲ್ಲರೂ ನಿರಾಳವಾದಂತಿತ್ತು
ಇನ್ನೊಂದು ನಾವು ಗಮನಿಸಿರಲೇ ಇಲ್ಲ:
ಈ ಧುತ್ತನೆ ಆವರಿಸಿದ ಮೌನಕ್ಕೆ ಗುಬ್ಬಿಗಳೊಂದಿಗೇ ಜತೆಯಾದದ್ದು
ಸಾಯುವ ಮುನ್ನ ಚಿಕ್ಕಪ್ಪ ತಾನೇ ಕೈಯಾರೆ ಮಾಡಿ
ಜಗುಲಿ ಬಾಗಿಲಲ್ಲಿ ನೇತು ಬಿಟ್ಟಿದ್ದ ಗಾಳಿಘಂಟೆಗಳು.
ಗಾಳಿ ಬಂದಾಗ ಟಿಂಟಿಣಿಗುಡಲೆಂದೇ ಅದನ್ನಾತ ತಯಾರಿಸಿದ್ದರೂ
ಅದರಿಂದ ಸದ್ದು ಮೀಟುತ್ತಿದ್ದುದು ಮಾತ್ರ ಗುಬ್ಬಿಗಳು
ಚಿಕ್ಕಪ್ಪ ಇಲ್ಲವಾದಮೇಲೆ ಅವನ ಮೆಲುದನಿಯನ್ನೇ ಅನುಕರಿಸುವಂತೆ
ಗುಬ್ಬಿಗಳ ಕಾಲು-ರೆಕ್ಕೆಗಳ ಸ್ಪರ್ಶಕ್ಕೆ ದನಿ ಹೊಮ್ಮಿಸುತ್ತಿದ್ದ
ಗಾಳಿಘಂಟೆಗಳು ಚಿಕ್ಕಮ್ಮನೆದೆ ತಂತಿಯನ್ನೂ ಝಲ್ಲೆನಿಸುತ್ತಿದ್ದವಿರಬೇಕು
ನಿಜ, ಇದೊಂದನ್ನು ನಾವು ಗಮನಿಸಿರಲೇ ಇಲ್ಲ:
ಗುಬ್ಬಿಗಳು ಅದೃಶ್ಯವಾಗುತ್ತ ಹೋದಂತೆ ಚಿಕ್ಕಮ್ಮನೂ
ಮೌನಿಯಾಗುತ್ತಾ ಹೋದಳು ಎಂಬುದು.
ಕೋಣೆಯ ಕಿಟಕಿ ಬಳಿ ಕೂತು ಅವಳು
ಗುಬ್ಬಿಗಳಿಗಾಗಿ ಕಾಯುತ್ತಿದ್ದಳು ಎಂಬುದು.
ಅವುಗಳ ಸ್ಪರ್ಶಮಾತ್ರದಿಂದ ಹೊಮ್ಮುವ
ಘಂಟೆನಿನಾದಕ್ಕೆ ಕಿವಿಯಾಗಿದ್ದಳು ಎಂಬುದು.
ಆಹ್ಲಾದದ ಸಿಹಿಗಾಳಿಯಾದರೂ ನೂಕಿದರೆ
ಘಂಟೆಗಳು ಟಿಂಟಿಣಿಗುಟ್ಟಬಹುದೆಂದು ನಿರುಕಿಸುತ್ತಿದ್ದಳು ಎಂಬುದು.
ಹೌದು, ಇದು ನಮ್ಮ ಗಮನಕ್ಕೆ ಬಂದಿರಲೇ ಇಲ್ಲ:
ಗುಬ್ಬಿಗಳ ನಿರ್ಗಮನದೊಂದಿಗೆ ಚಿಕ್ಕಮ್ಮನ
ಸಣ್ಣ ಸಂತಸವೂ ಸಹಗಮನ ಮಾಡಿತ್ತೆಂಬುದು.
Thursday, September 15, 2016
ಹನಿಕೇಕ್
ಐದು ನಿಮಿಷ ಬಿಟ್ಟು ತಿನ್ನೋಣ
ಎಂದು ತೆಗೆದಿಟ್ಟಿದ್ದ ಹನಿಕೇಕಿಗೆ ಇರುವೆ ಮುತ್ತಿವೆ
ಹಾಗಂತ ಮುನ್ಸೂಚನೆ ಇರಲಿಲ್ಲವೆಂದಲ್ಲ
ಆದರೆ ಕೆಲವೊಮ್ಮೆ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ
ಕುರುಂಜಿ ಹೂವಿಗಾಗಿ ಮತ್ತೆ ಹನ್ನೆರಡು ವರ್ಷ ಕಾಯ್ತೀಯಾ
ಅನ್ನುತ್ತಾನೆ ಜಾಹೀರಾತಿನಲ್ಲಿ ಅಪರಿಚಿತ ನಟ
ಇರುವೆಗಳಿಗೆ ಹೆದರಬಾರದು ಎಂಬುದೂ ಒಪ್ಪುವ ಮಾತಲ್ಲ
ನ್ಯಾಯಾಲಯದಿಂದಲೇ ಅನ್ಯಾಯ ನೀರಿಲ್ಲದ ನೋವು
ಕಲ್ಲು ತೂರಾಟ ಬೆಂಕಿ ಗಲಾಟೆ ಕರ್ಫ್ಯೂ
ಮುಚ್ಚಿದ ಅಂಗಡಿ-ಮುಂಗಟ್ಟುಗಳು -ಇಂತಹ ದಾರುಣ ದಿನದ
ಹಸಿದ ಹೊಟ್ಟೆಯ ಮಧ್ಯಾಹ್ನ ಮೃಷ್ಟಾನ್ನದಂತೆ ಸಿಕ್ಕ
ಒಂದು ಹನಿಕೇಕನ್ನು ದಕ್ಕಿಸಿಕೊಳ್ಳಲಾಗದ ದುಃಖ
ಯಾವ ದುಃಖಕ್ಕೂ ಕಮ್ಮಿಯಲ್ಲ
ಆದರೆ ಇರುವೆಯ ಕಷ್ಟವನ್ನೂ ಕೊಂಚ ನೋಡಬೇಕಲ್ಲ
ಎಷ್ಟು ದಿವಸದಿಂದ ಹಸಿದಿದ್ದವೋ ಏನೋ
ಅವುಗಳ ಆರ್ತನಾದಕ್ಕೆ ಕಿವಿಗೊಡುವವರಾರು
ಇಟ್ಟ ತಟ್ಟೆಗೆ ಮೆತ್ತಿದ ಸಿಹಿಯನ್ನೇ ಮೆಲ್ಲುವ ಅಲ್ಪತೃಪ್ತರೂ
ಅಂತಸ್ತಂತಸ್ತಾಗಿ ಮೇಲೇರುತ್ತಿರುವ ಸಾಹಸಿಗರೂ
ಪದರಪದರಗಳ ನಡುವೆ ಸಿಲುಕಿ ಸೆಣಸುತ್ತಿರುವ ಹೋರಾಟಗಾರರೂ
ಕಿಂಡಿಗಳೊಳಗೆ ತೂರಿ ಒಳಹೊಕ್ಕಿರುವ ಉತ್ಖನನಕಾರರೂ
ಒಂದು ಹನಿಕೇಕಿಗೆ ಇರುವೆ ಮುತ್ತಿದರೆ
ಎಷ್ಟೆಲ್ಲ ನೋಡಲು ಸಿಗುತ್ತದೆ -ಹಸಿವನೇ ಮರೆಸುವಂತೆ.
ಹಾಗಂತ ನೋಡುತ್ತ ಮೈಮರೆಯಬಾರದು
ನಮ್ಮ ಪ್ರಯತ್ನ ನಾವು ಮಾಡಲೇಬೇಕು
ಯಕಃಶ್ಚಿತ್ ಇರುವೆಗಳೊಂದಿಗೆ ಎಂತ ಹೋರಾಟ
ಹಣಿಯುವುದಿದ್ದರೆ ಆನೆಯನ್ನು ಕೆಡವು ಎನ್ನುತ್ತಾರೆ ಕೆಲವರು
ಆದರೆ ಹಸಿದ ಮನುಷ್ಯ ಇರುವೆಗಿಂತ ಕುಬ್ಜ
ಹನಿಕೇಕಿನೆದುರು ಮೃದು ಧೋರಣೆ ಸಲ್ಲದು
ದಡಬಡಿಸಿ ಚಾಕು ಹುಡುಕಿ ಇನ್ನೂ ಶತ್ರುವಿನಾಕ್ರಮಣವಾಗದ
ಭಾಗಗಳ ಜಾಲಾಡಿ ನಾಜೂಕಾಗಿ ಕತ್ತರಿಸಿ
ಮೆದುಮೆದು ಮಲ್ಲಿಗೆ ನೆಲಕ್ಕೆ ಬೀಳದಂತೆ
ನೇರವಾಗಿ ಬಾಯಿಗಿಡಬೇಕು
ಮೋಸ ಮಾಡಿದರೂ ಹಾಗೆ ಮಾಡಬೇಕು
ಇರುವೆಗೂ ತಿಳಿಯದಂತೆ
ಇರುವೆಯೂ ತನ್ನ ತಿಳಿವ ಬೆಳಕಲ್ಲಿ ಗೆದ್ದಂತೆ ಪರಿಭಾವಿಸಿ
ಮೋಸಹೋಗಿದ್ದೇ ತಿಳಿಯದೆ - ಹೊಟ್ಟೆ ತುಂಬಿದ್ದೇ ಗೆಲುವೆಂದುಕೊಂಡು
ನಾನೂ ಇರುವೆಯ ಎದುರು ಗೆದ್ದಿದ್ದೇ ಗೆಲುವೆಂದುಕೊಂಡು.
ಎಂದು ತೆಗೆದಿಟ್ಟಿದ್ದ ಹನಿಕೇಕಿಗೆ ಇರುವೆ ಮುತ್ತಿವೆ
ಹಾಗಂತ ಮುನ್ಸೂಚನೆ ಇರಲಿಲ್ಲವೆಂದಲ್ಲ
ಆದರೆ ಕೆಲವೊಮ್ಮೆ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ
ಕುರುಂಜಿ ಹೂವಿಗಾಗಿ ಮತ್ತೆ ಹನ್ನೆರಡು ವರ್ಷ ಕಾಯ್ತೀಯಾ
ಅನ್ನುತ್ತಾನೆ ಜಾಹೀರಾತಿನಲ್ಲಿ ಅಪರಿಚಿತ ನಟ
ಇರುವೆಗಳಿಗೆ ಹೆದರಬಾರದು ಎಂಬುದೂ ಒಪ್ಪುವ ಮಾತಲ್ಲ
ನ್ಯಾಯಾಲಯದಿಂದಲೇ ಅನ್ಯಾಯ ನೀರಿಲ್ಲದ ನೋವು
ಕಲ್ಲು ತೂರಾಟ ಬೆಂಕಿ ಗಲಾಟೆ ಕರ್ಫ್ಯೂ
ಮುಚ್ಚಿದ ಅಂಗಡಿ-ಮುಂಗಟ್ಟುಗಳು -ಇಂತಹ ದಾರುಣ ದಿನದ
ಹಸಿದ ಹೊಟ್ಟೆಯ ಮಧ್ಯಾಹ್ನ ಮೃಷ್ಟಾನ್ನದಂತೆ ಸಿಕ್ಕ
ಒಂದು ಹನಿಕೇಕನ್ನು ದಕ್ಕಿಸಿಕೊಳ್ಳಲಾಗದ ದುಃಖ
ಯಾವ ದುಃಖಕ್ಕೂ ಕಮ್ಮಿಯಲ್ಲ
ಆದರೆ ಇರುವೆಯ ಕಷ್ಟವನ್ನೂ ಕೊಂಚ ನೋಡಬೇಕಲ್ಲ
ಎಷ್ಟು ದಿವಸದಿಂದ ಹಸಿದಿದ್ದವೋ ಏನೋ
ಅವುಗಳ ಆರ್ತನಾದಕ್ಕೆ ಕಿವಿಗೊಡುವವರಾರು
ಇಟ್ಟ ತಟ್ಟೆಗೆ ಮೆತ್ತಿದ ಸಿಹಿಯನ್ನೇ ಮೆಲ್ಲುವ ಅಲ್ಪತೃಪ್ತರೂ
ಅಂತಸ್ತಂತಸ್ತಾಗಿ ಮೇಲೇರುತ್ತಿರುವ ಸಾಹಸಿಗರೂ
ಪದರಪದರಗಳ ನಡುವೆ ಸಿಲುಕಿ ಸೆಣಸುತ್ತಿರುವ ಹೋರಾಟಗಾರರೂ
ಕಿಂಡಿಗಳೊಳಗೆ ತೂರಿ ಒಳಹೊಕ್ಕಿರುವ ಉತ್ಖನನಕಾರರೂ
ಒಂದು ಹನಿಕೇಕಿಗೆ ಇರುವೆ ಮುತ್ತಿದರೆ
ಎಷ್ಟೆಲ್ಲ ನೋಡಲು ಸಿಗುತ್ತದೆ -ಹಸಿವನೇ ಮರೆಸುವಂತೆ.
ಹಾಗಂತ ನೋಡುತ್ತ ಮೈಮರೆಯಬಾರದು
ನಮ್ಮ ಪ್ರಯತ್ನ ನಾವು ಮಾಡಲೇಬೇಕು
ಯಕಃಶ್ಚಿತ್ ಇರುವೆಗಳೊಂದಿಗೆ ಎಂತ ಹೋರಾಟ
ಹಣಿಯುವುದಿದ್ದರೆ ಆನೆಯನ್ನು ಕೆಡವು ಎನ್ನುತ್ತಾರೆ ಕೆಲವರು
ಆದರೆ ಹಸಿದ ಮನುಷ್ಯ ಇರುವೆಗಿಂತ ಕುಬ್ಜ
ಹನಿಕೇಕಿನೆದುರು ಮೃದು ಧೋರಣೆ ಸಲ್ಲದು
ದಡಬಡಿಸಿ ಚಾಕು ಹುಡುಕಿ ಇನ್ನೂ ಶತ್ರುವಿನಾಕ್ರಮಣವಾಗದ
ಭಾಗಗಳ ಜಾಲಾಡಿ ನಾಜೂಕಾಗಿ ಕತ್ತರಿಸಿ
ಮೆದುಮೆದು ಮಲ್ಲಿಗೆ ನೆಲಕ್ಕೆ ಬೀಳದಂತೆ
ನೇರವಾಗಿ ಬಾಯಿಗಿಡಬೇಕು
ಮೋಸ ಮಾಡಿದರೂ ಹಾಗೆ ಮಾಡಬೇಕು
ಇರುವೆಗೂ ತಿಳಿಯದಂತೆ
ಇರುವೆಯೂ ತನ್ನ ತಿಳಿವ ಬೆಳಕಲ್ಲಿ ಗೆದ್ದಂತೆ ಪರಿಭಾವಿಸಿ
ಮೋಸಹೋಗಿದ್ದೇ ತಿಳಿಯದೆ - ಹೊಟ್ಟೆ ತುಂಬಿದ್ದೇ ಗೆಲುವೆಂದುಕೊಂಡು
ನಾನೂ ಇರುವೆಯ ಎದುರು ಗೆದ್ದಿದ್ದೇ ಗೆಲುವೆಂದುಕೊಂಡು.
Wednesday, September 07, 2016
ಕರ್ಮಣ್ಯೇವಾಧಿಕಾರಸ್ತೇ
ಲೋಕಲ್ ರೈಲುಗಳು ಮಾತ್ರ ನಿಲ್ಲುವ
ಸಣ್ಣ ಪಟ್ಟಣದ ಸ್ಟೇಷನ್ನಿನ ತಡರಾತ್ರಿಯ ನೀರವದಲ್ಲಿ
ಬ್ಯಾಂಡ್‌ಸೆಟ್ ತಂಡವೊಂದರ ಐವರು ಸಮವಸ್ತ್ರಧಾರಿಗಳ ಗುಂಪು
ಪ್ಲಾಟ್‌ಫಾರ್ಮಿನ ಮೂಲೆಯಲ್ಲಿ ಕೂತಿದೆ.
ಎಲ್ಲಿಂದ ಬಂದವರೋ, ಎಲ್ಲಿಗೆ ಹೊರಟವರೋ-
ಕಾಯುತ್ತ ಕೂತು ಬಹಳ ಹೊತ್ತಾದ ಕುರುಹಂತೆ
ಎಲ್ಲರೂ ತೂಕಡಿಸುತ್ತಿದ್ದಾರೆ.
ಅತ್ತ ದಿಕ್ಕಿಂದ ಕ್ಷೀಣ ಸದ್ದಿನೊಡನೆ ಬರುವ
ಯಾವ ಬೆಳಕೇ ಕಂಡರೂ ಧಿಗ್ಗನೆ ಎಚ್ಚರಗೊಂಡು
ದಡಬಡಿಸಿ ತಮ್ಮ ಸಲಕರಣೆಗಳನೆಲ್ಲ ಬಗಲಿಗೇರಿಸಿ
ಸುಸ್ತು ತುಂಬಿದ ನಿದ್ರೆಗಣ್ಣನ್ನು ಇಷ್ಟಗಲ ಮಾಡಿಕೊಂಡು
ಪ್ಲಾಟ್‌ಫಾರ್ಮಿನ ತುದಿಗೆ ಹೋಗಿ ನಿಲ್ಲುವರು.
ಪೋಂಕನೆ ಸದ್ದು ಮಾಡುತ್ತ ಹಳಿಗಳ ಮೇಲೆ ಹಾಯುವ
ಎಕ್ಸ್‌ಪ್ರೆಸ್ ರೈಲಿನ ರಭಸದಲ್ಲೇ ಇರುವ ನಿರ್ದಯೆಗೆ ಕಂಗಾಲಾಗುವರು.
ಮತ್ತದೇ ಮೂಲೆಗೆ ಸರಿದು ಅದದೇ ಜಾಗದಲ್ಲಿ
ತಮ್ಮ ಬಗಲ ಚೀಲಗಳನ್ನಿರಿಸಿ ಕುಕ್ಕರಿಸುವರು.
ಎಲ್ಲಿ ಯಾರ ಮದುವೆ ದಿಬ್ಬಣವೋ,
ಯಾರ ಶವಯಾತ್ರೆಯೋ,
ಯಾವ ರಾಜಕಾರಣಿಯ ವಿಜಯದ ಮೆರವಣಿಗೆಯೋ,
ಯಾವ ದೇವರ ಪಲ್ಲಕ್ಕಿಯುತ್ಸವವೋ,
ಯಾವ ಮಠಾಧಿಪತಿಗೆ ಪೂರ್ಣಕುಂಭ ಸ್ವಾಗತವೋ-
ತಮ್ಮ ಉಸಿರನ್ನೂ ಕಸುವನ್ನೂ ಅರ್ಪಿಸಿ
ಸದ್ದಲ್ಲೇ ಸಂಭ್ರಮ ಹೆಚ್ಚಿಸಿ, ಟಪ್ಪಾಂಗುಚ್ಚಿ ಕುಣಿಸಿ ಧೂಳೆಬ್ಬಿಸಿ,
ಪಡೆದು ರಿಯಾಯಿತಿ ಜತೆ ಕೊಟ್ಟ ಹಣ,
ಈಗ ಈ ನಿಲ್ದಾಣದ ಮೌನದಲ್ಲಿ ಚಳಿಗೆ ಗಢಗಢ
ನಡುಗುತ್ತ ಹಳಿಗಳನ್ನೇ ನೋಡುತ್ತ ಕೂತಿರುವರು.
ಅವರ ಬಾಜೂ ಇರುವ ಕ್ಲಾರಿಯೋನೆಟ್ಟು-
ಟ್ರಂಪೆಟ್ಟುಗಳೊಳಗೆ ಇನ್ನೂ ಸಿಕ್ಕಿಕೊಂಡಿರುವ ಉಸಿರು,
ಕಿವಿಯಿಟ್ಟು ಕೇಳಿದರೆ ಬಟ್ಟೆಚೀಲದಲ್ಲಿನ ಡ್ರಮ್ಮುಗಳಿಂದ
ಇನ್ನೂ ಹೊಮ್ಮುತ್ತಿರುವ ಡಂಕ್ಕಣಕ ಧ್ವನಿ,
ಅವರ ಯೂನಿಫಾರ್ಮು-ಟೋಪಿಗಳ ಮೇಲೆ ಕೂತಿರುವ
ಧೂಳಿನಲ್ಲಿ ಇನ್ನೂ ಅಡಗಿರುವ ಟಪ್ಪಾಂಗುಚ್ಚಿಯ ಹೆಜ್ಜೆಲಯ-
ಯಾವುದೂ ಈ ನಿಶ್ಶಬ್ದವ ಕಲಕುವ ಗೋಜಿಗೆ ಹೋಗುತ್ತಿಲ್ಲ.
ಆದರೂ, ಹಳಿಗಳಾಚೆಯಿಂದ ಅನಾಮತ್ ಹಾರಿಬಂದು
ಡ್ರಮ್ಮಿಗೆ ಬಡಿದ ಜೀರುಂಡೆ ಹೊಮ್ಮಿಸಿದ ಶಬ್ದ ತಡೆಯಲು
ಯಾರಿಂದಲೂ ಸಾಧ್ಯವಾಗಿಲ್ಲ.
ಕೆಲವರು ಹೇಳುವುದುಂಟು: ಈ ಬ್ಯಾಂಡ್‌ಸೆಟ್ಟಿನವರು
ಅವಕಾಶವಾದಿಗಳೆಂದು. ಅದು ಸುಳ್ಳೇ ಇರಬೇಕು.
ಹಾಗಿದ್ದಿದ್ದರೆ, ಈ ದರವೇಶಿ ನಿಲ್ದಾಣದಲ್ಲಿ
ಗಂಟೆಗಟ್ಟಲೆ ಕಾಯುವ ಬದಲು ತಮ್ಮ ಚೀಲಗಳಿಂದ
ಬ್ಯಾಂಡ್‌ಸೆಟ್ ಹೊರತೆಗೆದು ಸ್ಟೇಶನ್ ಮಾಸ್ತರನೂ,
ಅಳಿದುಳಿದ ಪ್ರಯಾಣಿಕರೂ ಬೆಚ್ಚಿಬೀಳುವಂತೆ ಗದ್ದಲವೆಬ್ಬಿಸಿ
ಯಾವುದಾದರೂ ರೈಲು ನಿಲ್ಲುವಂತೆ ಮಾಡಿ
ಅದನ್ನೇರಿ ಇಲ್ಲಿಂದ ಈಗಾಗಲೇ ಜಾಗ ಖಾಲಿ ಮಾಡಿರುತ್ತಿದ್ದರು.
ಇವರು ಅವಕಾಶ ಕೊಟ್ಟಾಗ ವಾದ್ಯ ನುಡಿಸುವವರು ಅಷ್ಟೇ.
ಸಂದರ್ಭವಿಲ್ಲವೆಂದರೆ ತಮ್ಮ ಪೀಪಿಯ ಮೂತಿಗೆ ಬಿರಡೆ ಹಾಕಿ
ಡ್ರಮ್ಮಿನ ಕಡ್ಡಿಗಳನ್ನು ಚೀಲದೊಳಗಿರಿಸಿ, ಹೀಗೆ
ಅನಂತದತ್ತ ದಿಟ್ಟಿನೆಟ್ಟು ಯಾವುದೋ ಲೋಕದಿಂದ ಬರುವ
ರೈಲಿಗಾಗಿ ಕೂತಲ್ಲೆ ಜೋಲಿ ಹೊಡೆಯುತ್ತಾ ಇಡೀರಾತ್ರಿ ಕಾಯುವರು:
ಕೆಲವೇ ಗಂಟೆ ಮೊದಲು ತಾವಿದ್ದ ಜಾಗದ ಸಂಭ್ರಮಕ್ಕೋ
ದುಃಖಕ್ಕೋ ಗದ್ದಲಕ್ಕೋ ಶಾರೀರವಾದುದ ಮರೆತು,
ಏನನ್ನೂ ಅಂಟಿಸಿಕೊಳ್ಳದೆ, ಹಗುರವಾಗಿಯೇ ಉಳಿದು.
Tuesday, September 06, 2016
ಶಿಕ್ಷಕರ ದಿನದಂದು ಪಿ.ಟಿ. ಮೇಷ್ಟ್ರು ನೆನಪಾಗಿ...
ಶಾಲೆಯಲ್ಲಿರುತ್ತಿದ್ದಾಗ ನಿಮ್ಮ ನೆಚ್ಚಿನ ಮೇಷ್ಟ್ರು ಯಾರಾಗಿದ್ದರು? ತಿಪ್ಪರಲಾಗ ಹೊಡೆದರೂ
ಬಿಡಿಸಲಾಗದ ಲೆಕ್ಕಗಳನ್ನು ಬಿಡಿಸಲು ಹೇಳುತ್ತಿದ್ದ ಗಣಿತದ ಮೇಷ್ಟ್ರೇ? ಎಷ್ಟೇ ಉರು ಹೊಡೆದರೂ ಮರೆಯುವ
ಇಸವಿಗಳನ್ನು ನೆನಪಿಡಲು ಹೇಳುತ್ತಿದ್ದ ಇತಿಹಾಸದ ಮೇಷ್ಟ್ರೇ? ಮುಟ್ಟಲೇ ಹೇಸಿಗೆಯಾಗುವ ಕಪ್ಪೆಯನ್ನು ಕತ್ತರಿಸಲು
ಹೇಳುತ್ತಿದ್ದ ವಿಜ್ಞಾನ ಶಿಕ್ಷಕರೇ? ಮೀನಿಂಗು, ಸಿನಾನಿಮ್ಮು, ಪ್ಯಾಸಿವ್ ವಾಯ್ಸು, ನೆಗೆಟಿವ್ ಸೆಂಟೆನ್ಸು
ಅಂತೆಲ್ಲ ನಾಲಿಗೆ, ಪೆನ್ನು, ತಲೆಗಳಿಗೆ ಕಷ್ಟ
ಕೊಡುತ್ತಿದ್ದ ಇಂಗ್ಲೀಷ್ ಮೇಡಮ್ಮೇ? ಲಘು, ಗುರು, ಛಂದಸ್ಸು, ಸಮಾಸ, ವ್ಯಾಕರಣ, ರಾಘವಾಂಕನ ಕಾವ್ಯ ಅಂತೆಲ್ಲ
ಹೇಳುತ್ತ ಮಧ್ಯಾಹ್ನದ ತರಗತಿಯಲ್ಲಿ ಬೋರು ಹೊಡೆಸುತ್ತಿದ್ದ ಕನ್ನಡ ಬೋಧಕರೇ?
ಅಥವಾ- ಬಿಳೀ ಅಂಗಿ, ಬಿಳೀ ಪ್ಯಾಂಟು, ಬಿಳ್‌ಬಿಳೀ ಶೂ ಧರಿಸಿ ಬರುತ್ತಿದ್ದ, ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಅಕೋ ಮೂಲೆಯಲ್ಲಿ ಅಟೆನ್ಷನ್ ಪೊಸಿಷನ್ನಿನಲ್ಲಿ
ನಿಂತಿರುತ್ತಿದ್ದ, ಇಳಿಬಿಸಿಲಿನ ಆಟದ
ತರಗತಿಗಳಲ್ಲಿ ದೊಡ್ಡ ಬಯಲಿಗೆ ಕರೆದೊಯ್ದು, ನಿಮ್ಮನ್ನೇ ಕಂಬ ಹತ್ತಿಸಿ ನಿಮ್ಮಿಂದಲೇ ನೆಟ್ ಕಟ್ಟಿಸಿ ನಿಮ್ಮಿಂದಲೇ ಸರ್ವ್ ಮಾಡಿಸಿ
ವಾಲಿಬಾಲ್ ಆಡಿಸುತ್ತಿದ್ದ, ಫುಟ್‌ಬಾಲಿನ ನಾಭಿಗೆ ಬಾಲದ ನಾಝಲ್ ಒತ್ತಿ ಹಿಡಿದು ಸೈಕಲ್ ಪಂಪಿನಿಂದ ಗಾಳಿ ಹೊಡೆಯಲು
ಹೇಳುತ್ತಿದ್ದ, ಗೋಲ್‌ಪಾಯಿಂಟ್‌ವರೆಗೆ
ನಿಮ್ಮೊಂದಿಗೇ ಬಾಲಿನ ಹಿಂದೆ ಓಡಿ ಬರುತ್ತಾ ಪಾಸ್ ಮಾಡುವ ಟ್ರಿಕ್ ಹೇಳಿಕೊಡುತ್ತಿದ್ದ, ‘ಇವತ್ತು ನಂಗೆ ಓಡ್ಲಿಕ್ಕೆ
ಆಗಲ್ಲ’ ಅಂದ ಹುಡುಗಿಯ ಸಣ್ಣ ಮುಖ ನೋಡಿಯೇ ವಿಷಯ ಅರ್ಥ ಮಡಿಕೊಳ್ಳುತ್ತಿದ್ದ, ಅಷ್ಟೊಳ್ಳೆಯ ಪಿಟಿ-ಮೇಷ್ಟ್ರೇ?
ನೀವೇನಾದರೂ ಅಕೌಂಟ್ಸನ್ನೋ ಕಾಮರ್ಸನ್ನೋ ನಿಮ್ಮ ಉದ್ಯೋಗದ ಕ್ಷೇತ್ರವನ್ನಾಗಿ
ತೆಗೆದುಕೊಂಡವರಾಗಿದ್ದರೆ, ಮೂಲಸೂತ್ರಗಳನ್ನು ಎಂದೂ ಮರೆಯದಂತೆ ಹೇಳಿಕೊಟ್ಟಿದ್ದಕ್ಕೆ ಹೈಸ್ಕೂಲಿನ ಗಣಿತದ ಮೇಷ್ಟ್ರಿಗೆ
ನೀವು ಕೃತಜ್ಞರಾಗಿರಬಹುದು. ಇಲ್ಲವೇ, ಒಂದ್ಯಾವುದೋ ತರಗತಿಯಲ್ಲಿ ಭಗತ್‌ಸಿಂಗನ ಶೌರ್ಯದ ಕತೆಯನ್ನು ಮೈನವಿರೇಳಿಸುವಂತೆ ಹೇಳಿದ
ಇತಿಹಾಸದ ಮೇಷ್ಟ್ರ ಪಾಠ ನಿಮಗೆ ಇನ್ನೂ ನೆನಪಿರಬಹುದು. ಜೀವಶಾಸ್ತ್ರ ತೆಗೆದುಕೊಳ್ಳುತ್ತಿದ್ದ
ಅವಿವಾಹಿತ ಟೀಚರ್ರು, ‘ಮಾನವ ಜೀವಿಯಲ್ಲಿ ಸಂತಾನಪ್ರಕ್ರಿಯೆ’ ಎಂಬ ಅಧ್ಯಾಯವನ್ನು ಅತ್ಯಂತ ಮುಜುಗರ ಪಟ್ಟುಕೊಂಡು
ಓದಿಹೇಳಿದ್ದು ಮರೆತಿಲ್ಲದಿರಬಹುದು. ಸಂಸ್ಕೃತ ಪಂಡಿತರು ‘ಹೇಲತಾ, ಹೇಲತೇ, ಹೇಲತಾಃ’ವನ್ನು ಕಂಠಪಾಠ ಮಾಡಿಸುತ್ತಿದ್ದುದು ನೆನಪಾದರೆ ಈಗಲೂ ನಗು ಬರಬಹುದು. ಎಲ್ಲ
ಶಿಕ್ಷಕರೂ ಒಂದಲ್ಲಾ ಒಂದು ದಿನ, ಒಂದಲ್ಲಾ ಒಂದು ಘಳಿಗೆಯಲ್ಲಿ ನೆನಪಿಗೆ ಬರಬಹುದು.
ಆದರೆ ನಮ್ಮ ಸ್ಮೃತಿಪಟಲದಲ್ಲಿ ಅವರೊಬ್ಬ ಪಿಟಿ-ಮೇಷ್ಟ್ರು ಸಹ ಇದ್ದಾರಾ? ಅಥವಾ ಹೈಸ್ಕೂಲು
ಮುಗಿಯುತ್ತಿದ್ದಂತೆ ಹೆಚ್ಚುಕಮ್ಮಿ ನಿಂತೇಹೋದ ಗುಂಡು ಎಸೆತ, ಜಾವಲಿನ್ ಥ್ರೋ, ಕೋಕೋ, ಕಬ್ಬಡ್ಡಿ, ರಿಲೇ ಆಟಗಳ ಹಾಗೆ ಅವರೂ ನಮ್ಮ
ನೆನಪಿನ ಕೋಶದಿಂದ ಮರೆಯಾಗಿಹೋದರಾ? ಶಾಲೆಯ ದಿನಗಳು ಮುಗಿದು ಕಾಲೇಜು ಸೇರುವಷ್ಟರಲ್ಲಿ ಆ ಎಲ್ಲ ಆಟಗಳನ್ನು ಬಿಟ್ಟು, ಊರಲ್ಲಿ ಹುಡುಗರನ್ನು
ಸಂಘಟಿಸಿಕೊಂಡು ಕ್ರಿಕೆಟ್ಟೊಂದೇ ಸರ್ವಶ್ರೇಷ್ಠ ಆಟವೆಂಬಂತೆ ಆಡುತ್ತಾ, ವಿದ್ಯಾಭ್ಯಾಸ ಮುಗಿದು
ದುಡಿಯುವವರಾದಮೇಲಂತೂ ಯಾವ ಆಟ ಆಡುವುದಕ್ಕೂ ಸಮಯವಿಲ್ಲವೆಂಬಂತೆ ಬಿಜಿಯಾಗಿ, ಭಾರತದ ಕ್ರಿಕೆಟ್ ಇದ್ದಾಗಲೆಲ್ಲಾ
ಟೀವಿಯಲ್ಲಿ ಮುಳುಗಿ, “ನಮ್ ಕೋಹ್ಲಿ ಮುಂದೆ ನಿಮ್ ತೆಂಡೂಲ್ಕರ್ ಏನು ಮಹಾ?” ಎಂದು ಕೇಳುವ ಹೊಸ ಹುಡುಗರಿಗೆ ಉತ್ತರಿಸಲು ತಿಳಿಯದೇ ಒದ್ದಾಡುತ್ತಾ, ಬೊಜ್ಜು ಬೆಳೆಸಿಕೊಂಡು ಓಡಾಡುವ
ಅಂಕಲ್-ಆಂಟಿಯರಾಗಿಬಿಟ್ಟೆವಾ? ಇವತ್ತು ನಾವು ಟೀವಿಯಲ್ಲಿ ನೋಡುವ ಏಷ್ಯನ್, ಕಾಮನ್‌ವೆಲ್ತ್, ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ತಮ್ತಮ್ಮ ದೇಶವನ್ನು
ಪ್ರತಿನಿಧಿಸುತ್ತಾ, ಪದಕವನ್ನು ಗೆಲ್ಲಲ್ಲೇಬೇಕು ಅಂತ ಒದ್ದಾಡುತ್ತಾ, ಸೋತಾಗ ದುಃಖದಿಂದ – ಗೆದ್ದಾಗ ಆನಂದದಿಂದ ಕಣ್ಣೀರಿಡುತ್ತಾ, ಗೆಲುವೊಂದನ್ನೇ ಮಂತ್ರವಾಗಿಸಿಕೊಂಡು
ಬೆವರು ಹರಿಸುತ್ತಿರುವ ಕ್ರೀಡಾಪಟುಗಳ ಸಾಧನೆಯ ಹಾದಿಯಲ್ಲಿ ಇದ್ದಿರಬಹುದಾದ ಒಬ್ಬ ಮೆಡ್ಲಿಸ್ಕೂಲ್-ಹೈಸ್ಕೂಲ್
ಸ್ಪೋರ್ಟ್ಸ್ ಟೀಚರನ್ನು ನಾವು ಕಲ್ಪಿಸಿಕೊಂಡೆವಾ?
ಎಂದೂ ಅಪ್ರಿಯರಾಗಿರಲಿಲ್ಲ ನಮಗೆ ಪಿಟಿ-ಮೇಷ್ಟ್ರು. ಯಾವತ್ತೂ ಹೊಡೆಯಲಿಲ್ಲ. ಯಾವಾಗಲೂ
ಹೆದರಿಸಲಿಲ್ಲ. ಎಲ್ಲೂ ಪ್ರಶ್ನೆಪತ್ರಿಕೆಯಲ್ಲಿ ಕಷ್ಟದ ಪ್ರಶ್ನೆಗಳನ್ನು ಹೆಣೆದು ನಮ್ಮನ್ನು ಫೇಲ್
ಮಾಡಲಿಲ್ಲ. ನೋಟ್ಸ್ ಬರೆಸಲಿಲ್ಲ, ಹೋಮ್‌ವರ್ಕ್ ಕೊಡಲಿಲ್ಲ. ಪಿಟಿ-ಮೇಷ್ಟ್ರು ನಮಗೆ ಆಟ ಹೇಳಿಕೊಟ್ಟರು. ನಮ್ಮನ್ನು ಓಡಿಸಿದರು.
ನಮ್ಮೊಂದಿಗೆ ಆಟವಾಡಿದರು. ನಮಗೆ ಕವಾಯತು ಮಾಡಿಸಿದರು. ‘ಕಮಾನ್, ಯು ಕ್ಯಾನ್ ಡೂ ಇಟ್’ ಎಂದು ಹುರಿದುಂಬಿಸಿದರು. ‘ಲೆಫ್ಟ್-ರೈಟ್ ಲೆಫ್ಟ್-ರೈಟ್’ ಎಂದು ಕೂಗುತ್ತಾ ನಮ್ಮ
ಹೆಜ್ಜೆಗಳಿಗೆ ಶಿಸ್ತು ಕಲಿಸಿದರು. ತಮ್ಮ ಉಸಿರನ್ನು ವಿಷಲ್‌ನ ಶಬ್ದ ಹೊರಡಿಸಲು ಖರ್ಚು ಮಾಡಿದರು.
ನಮ್ಮ ದೇಹಗಳನ್ನು ಹಗುರು ಮಾಡಿದರು.
ಪಿಟಿ-ಮೇಷ್ಟ್ರು ನಮ್ಮನ್ನು ಯಾವ್ಯಾವುದೋ ಊರಲ್ಲಿ ನಡೆಯುವ ಕ್ರೀಡಾಕೂಟಗಳಿಗೆ
ಸಮವಸ್ತ್ರದಲ್ಲಿ ಕರೆದುಕೊಂಡು ಹೋದರು. ಹತ್ತಾರು ಶಾಲೆಗಳ ಹುಡುಗ-ಹುಡುಗಿಯರೊಂದಿಗೆ ನಾವು
ಬೆರೆತೆವು. ನಮ್ಮ ಮೇಷ್ಟ್ರು ಬೇರೆ ಶಾಲೆಯ ಪಿಟಿ-ಮೇಷ್ಟ್ರುಗಳೊಂದಿಗೆ ಕೈ ಕುಲುಕಿ ಮಾತಾಡುವುದನ್ನು
ಹೆಮ್ಮೆಯಿಂದ ನೋಡಿದೆವು. ಪಕ್ಕದೂರ ಶಾಲೆಯ ಹುಡುಗರೊಂದಿಗೆ ನಾವು ಕಬ್ಬಡ್ಡಿ ಆಡುವಾಗ ನಮ್ಮ
ಮೇಷ್ಟ್ರು ಔಟಾದ ಹುಡುಗರೊಂದಿಗೆ ನಿಂತು ಶಕ್ತಿಯಾದರು. ದಡಿಯ ಎದುರಾಳಿ ಎರಗಿ ಬಂದಾಗ ‘ಬಕಾಪ್’
ಅಂದು ಧೈರ್ಯ ತುಂಬಿದರು. ಉದ್ದಜಿಗಿತದ ದೂರವನ್ನು ಪಟ್ಟಿ ಹಿಡಿದು ಅಳೆದರು. ಬಿದ್ದು ಮಾಡಿಕೊಂಡ
ಮಳ್ಳಂಡೆ ಗಾಯಕ್ಕೆ ಟಿಂಚರ್ ಹಚ್ಚಿದರು. ವಿದ್ಯಾರ್ಥಿನಿಯರ ರಿಲೇಯಲ್ಲಿ ಓಡಿ ಸುಸ್ತಾಗಿ ಬಂದ
ಹುಡುಗಿಗೆ ಗ್ಲುಕೋಸು ತಿನ್ನಿಸಿದರು. ಕೋಕೋ ಆಟದಲ್ಲಿ ತಾವೇ ಕಂಬವಾಗಿ ನಿಂತ ಅವರನ್ನು ನಾವು ಪ್ರದಕ್ಷಿಣೆ
ಹಾಕಿದೆವು.
ಹೊರಗೆ ಮಳೆ ಬಂದ ದಿನ, ಈ ದೈಹಿಕ ಶಿಕ್ಷಣದ ಮೇಷ್ಟ್ರು ನಮ್ಮನ್ನು ಕ್ಲಾಸ್‌ರೂಮಿನೊಳಗೇ ಕೂರಿಸಿಕೊಂಡು ದೇಶವಿದೇಶಗಳ
ಕ್ರೀಡಾಪಟುಗಳ ಸಾಧನೆಯ ಕಥೆ ಹೇಳಿದರು. ಮಿಲ್ಕಾಸಿಂಗ್ ಫ್ಲೈಯಿಂಗ್ ಸಿಖ್ ಆದ ಕಥೆಯನ್ನೂ, ಬ್ಲಾಕ್ ಪೀಲೆ ಹೇಗೆ ಫುಟ್‌ಬಾಲ್
ಪ್ರಿಯರಿಗೆ ಜ್ವರ ಹಿಡಿಸಿದ್ದ ಎಂಬುದನ್ನೂ, ಮೊಹಮ್ಮದ್ ಅಲಿ ಬಾಕ್ಸಿಂಗಿನ ದಂತಕಥೆಯಾದ ಪರಿಯನ್ನೂ, ಮಣಿಪುರದ ಒಂದು ಸಣ್ಣ ಹಳ್ಳಿಯಿಂದ ಬಂದ ಮೇರಿಕೋಮ್ ವಿಶ್ವ
ಮಟ್ಟಕ್ಕೆ ಏರಿದ ಸಾಹಸವನ್ನೂ ಮೈಜುಮ್ಮೆನಿಸುವಂತೆ ವಿವರಿಸಿ ಹೇಳಿದರು. “ಬರೀ ಕ್ರಿಕೆಟ್
ಕ್ರಿಕೆಟ್ ಅಂತ ಒಂದೇ ಜಪ ಮಾಡ್ಬೇಡ್ರೋ.. ಕ್ರಿಕೆಟ್ ಅಲ್ಲದೇನೂ ಬಹಳಷ್ಟು ಆಟಗಳು ಇವೆ
ಜಗತ್ತಲ್ಲಿ. ಅವುಗಳ ಕಡೇನೂ ಗಮನ ಹರಿಸಿ” ಅಂತ ಕಿವಿಮಾತು ಹೇಳಿದರು.
ಆಟೋಟಗಳಲ್ಲಿ ಮುಂದಿರುವ, ಲಘು ಶರೀರದ ಹುಡುಗ-ಹುಡುಗಿಯರು ಪಿಟಿ-ಮೇಷ್ಟ್ರಿಗೆ ಹೆಚ್ಚು ಪ್ರಿಯರಾಗುತ್ತಿದ್ದರು. ಆ
ವಿದ್ಯಾರ್ಥಿಗಳಿಗಾದರೂ ಅಷ್ಟೇ, ಪಿಟಿ-ಮೇಷ್ಟ್ರು ಉಳಿದೆಲ್ಲರಿಗಿಂತ ಅಚ್ಚುಮೆಚ್ಚು. ಶಾಲಾ ಮಟ್ಟದಲ್ಲಿ ಗೆದ್ದ
ವಿದ್ಯಾರ್ಥಿಗಳನ್ನು ವಲಯ ಮಟ್ಟಕ್ಕೆ, ವಲಯ ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳನ್ನು ತಾಲೂಕು-ಜಿಲ್ಲಾ ಮಟ್ಟಗಳಿಗೆ ಪಿಟಿ-ಮೇಷ್ಟ್ರು
ಬಸ್ಸಿನಲ್ಲಿ ಕರೆದುಕೊಂಡು ಹೋಗುವರು. ಅಲ್ಲಿ ಆ ವಿದ್ಯಾರ್ಥಿಯ ಲಗೇಜುಗಳನ್ನು ತಾವೇ ಹೊತ್ತು ಅವನ
ಜತೆಜತೆಗೆ ನಡೆವರು. ಅಲ್ಲಿಂದ ತನ್ನ ವಿದ್ಯಾರ್ಥಿ ಗೆದ್ದು ತಂದ ಪದಕಗಳನ್ನು ಹೆಮ್ಮೆಯಿಂದ ಇಡೀ
ಶಾಲೆಗೆ ತೋರಿಸುವರು. ಬಡ ವಿದ್ಯಾರ್ಥಿಯೊಬ್ಬ ಆಟದಲ್ಲಿ ಸಮರ್ಥನಿದ್ದಾನೆ ಎನಿಸಿದರೆ ತಮ್ಮದೇ
ದುಡ್ಡಿನಲ್ಲಿ ಅವನಿಗೆ ಸ್ಪೋರ್ಟ್ಸ್ ಶೂ ಕೊಡಿಸುವರು. ಸಣ್ಣ ಸಾಧನೆಗಳಿಗೂ ಬೆನ್ನು ತಟ್ಟುವರು. ಸೋಲುಗಳಿಗೆ
ಖಿನ್ನರಾಗದೇ ದೊಡ್ಡ ಗಮ್ಯಗಳೆಡೆಗೆ ಹೇಗೆ ನಡೆಯುವುದು ಎಂದು ಹೇಳಿಕೊಡುವರು.
ಇವತ್ತು ವಿಕಾಸ್ ಗೌಡ ಡಿಸ್ಕಸ್ ಎಸೆವ ಕಸುವಿನಲ್ಲಿ, ಸೈನಾ ನೆಹ್ವಾಲ್ ಸರ್ವ್ ಮಾಡುವಾಗಿನ ಚಾಕಚಕ್ಯತೆಯಲ್ಲಿ, ಅಭಿನವ್ ಬಿಂದ್ರಾ ದೃಷ್ಟಿ
ಕದಲಿಸದಂತೆ ಗುರಿ ಇಡುವಲ್ಲಿ, ದೀಪಾ ಕರ್ಮಕಾರ್, ಸಾಕ್ಷಿ ಮಲಿಕ್, ಪಿವಿ ಸಿಂಧು ಮುಂತಾದವರು ದೇಶಕ್ಕೆ ಹೆಮ್ಮೆ ತಂದಿರುವಲ್ಲಿ –ಹಿಂದೆಲ್ಲೋ ಅವರುಗಳ ಶಾಲಾದಿನಗಳಲ್ಲಿ
ಅವರ ಪ್ರತಿಭೆಯನ್ನು ಗುರುತಿಸಿ ಹುರಿದುಂಬಿಸಿದ ಪಿಟಿ-ಮೇಷ್ಟ್ರು ಸಹ ಇರುತ್ತಾರೆ. ಸುಸ್ತಾಗಿ
ನಿಂತ ಬಾಲಕನಿಗೆ ನೀರು-ಗ್ಲುಕೋಸು ಕೊಟ್ಟು ಪ್ರೋತ್ಸಾಹದ ಮಾತನ್ನಾಡಿರುತ್ತಾರೆ. ಶಿಸ್ತಿನ ಮೊದಲ
ಪಾಠ ಮಾಡಿರುತ್ತಾರೆ. ಈಗ ಟೀವಿಯ ಮುಂದೆ ಕೂತಿರುವ ಆ ಮೇಷ್ಟ್ರು, ತನ್ನ ವಿದ್ಯಾರ್ಥಿ ಯಾವುದೋ ದೇಶದಲ್ಲಿ ಕ್ರೀಡಾಂಗಣದಲ್ಲಿ ಆಡಿ
ಗೆಲ್ಲುತ್ತಿರುವುದನ್ನು ನೋಡಿ, “ನನ್ ಸ್ಟುಡೆಂಟು.. ನನ್ ಸ್ಟುಡೆಂಟು” ಅಂತ ಹೆಮ್ಮೆಯಿಂದ ತುಂಬುಗಣ್ಣಾಗಿ
ಅಕ್ಕಪಕ್ಕದವರನ್ನೆಲ್ಲ ಕರೆದು ತೋರಿಸಿರುತ್ತಾರೆ.
ನಮಗೆ ಅಕ್ಷರ-ವಿದ್ಯೆ ಹೇಳಿಕೊಟ್ಟ ಗುರುಗಳನ್ನು ನೆನೆಯುವ ಶಿಕ್ಷಕರ ದಿನದ ಈ ಸಂದರ್ಭದಲ್ಲಿ, ನಮ್ಮ ಶಾಲಾದಿನಗಳ ಶನಿವಾರದ
ಮುಂಜಾನೆಗಳ ಚಳಿ ಓಡಿಸುತ್ತಿದ್ದ, ನಮಗೆ ವಿವಿಧ ಆಟಗಳನ್ನು ಕಲಿಸಿದ, ನಮ್ಮೊಂದಿಗೇ ಕಲೆತು ಆಟವಾಡಿದ, ಸದಾ ಉತ್ಸಾಹದ ನಗು ಬೀರುತ್ತಿರುತ್ತಿದ್ದ ಪಿಟಿ-ಮೇಷ್ಟ್ರನ್ನೂ ನೆನಪು ಮಾಡಿಕೊಳ್ಳೋಣ.
ಅವರಿಗೊಂದು ಶುಭಾಶಯ ಹೇಳೋಣ.
[ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ]
Subscribe to:
Posts (Atom)