Friday, September 01, 2006

ನಾನು ಓದಿದ ಪುಸ್ತಕ (೨)

ದಾಟು: ಜಾತಿ ಸಮಸ್ಯೆಯ ಒಳನೋಟ

ತಿರುಮಲಾಪುರದ ದೇವಸ್ಥಾನದ ಅರ್ಚಕ ವೆಂಕಟರಮಣಯ್ಯನವರ ಮಗಳು ಸತ್ಯಭಾಮಳೂ ಅದೇ ಊರಿನ ಶಾಸಕ ಮೇಲಗಿರಿ ಗೌಡರ ಮಗ ಶ್ರೀನಿವಾಸನೂ ಪ್ರೀತಿಸುತ್ತಿದ್ದಾರೆ, ಸಧ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ತಿಳಿದು ಕೆರಳುವ ಸತ್ಯಳ ತಂದೆ ಬೆಂಗಳೂರಿಗೆ ಹೋಗಿ ಮಗಳಿಗೆ ಚಪ್ಪಲಿಯಲ್ಲಿ ಹೊಡೆದು ಬುದ್ಧಿ ಹೇಳುತ್ತಾರೆ. ಶ್ರೀನಿವಾಸನ ಪೋಷಕರೂ ಮಗನಿಗೆ ಬುದ್ಧಿ ಹೇಳುತ್ತಾರೆ. ಆದರೆ ಸತ್ಯ ನಿರ್ಧಾರ ಬದಲಿಸುವುದಿಲ್ಲ; ಶ್ರೀನಿವಾಸ ನಿರ್ಧಾರ ಬದಲಿಸಿ ಬೇರೆ ಮದುವೆಯಾಗುತ್ತಾನೆ.

ಇತ್ತ ಮಗಳನ್ನು ಚಪ್ಪಲಿಯಲ್ಲಿ ಹೊಡೆದು ಬಂದನಂತರ ವೆಂಕಟರಮಣಯ್ಯರವರನ್ನು ಚಿಂತೆ ಆವರಿಸಿಕೊಳ್ಳುತ್ತದೆ. ವೆಂಕಟರಮಣಯ್ಯನವರಿಗೆ ಒಂದು ಚರಿತ್ರೆ ಇರುತ್ತದೆ. ಅವರ ಹೆಂಡತಿ ಪ್ರಾಯದಲ್ಲೇ ತೀರಿಕೊಂಡಿರುತ್ತಾರೆ. ದೇವಸ್ಥಾನದ ಅರ್ಚಕರಾಗಿದ್ದ ಇವರು ಮೊದಮೊದಲು ಹೆದರಿದರೂ, ಕೊನೆಗೂ ದೈಹಿಕ ವಾಂಛೆಗಳನ್ನು ಗೆಲ್ಲಲಾಗದೆ, ಮಾತಂಗಿ ಎಂಬ ಹರಿಜನರ ವಿಧವೆ ಹೆಂಗಸಿನೊಂದಿಗೆ ಸಂಬಂಧವಿರಿಸಿಕೊಳ್ಳುತ್ತಾರೆ. ಈ ಗೌಪ್ಯ ಸಂಬಂಧಕ್ಕೆ ಸುಮಾರು ಮೂರು ವರ್ಷಗಳ ಕಾಲವಾಗಿರುತ್ತದೆ. ಆಗ ಒಂದು ಎಡವಟ್ಟು ಆಗಿಬಿಡುತ್ತದೆ. ಮಾತಂಗಿ ಗರ್ಭವತಿಯಾಗಿಬಿಡುತ್ತಾಳೆ. ಗುಡಿಯ ಅರ್ಚಕರಿಗೆ ಕೆಟ್ಟ ಹೆಸರು ಬರುವುದನ್ನು ಬಯಸದ ಅವಳು ದೂರದ ಊರೊಂದಕ್ಕೆ ಹೋಗಿ, ಅಲ್ಯಾರೊಂದಿಗೋ ಮದುವೆಯಾಗಿ, ಮಗುವನ್ನು ಹೆತ್ತು ಸಾಕಿಕೊಳ್ಳುತ್ತಾಳೆ. ಇದೆಲ್ಲಾ ಆಗಿದ್ದು ಈಗ ಹದಿನೈದಿಪತ್ತು ವರ್ಷಗಳಾಗಿವೆ.

ಈ ಮಧ್ಯೆ ದೇಶದಲ್ಲಿ ಜಾತಿಮತ ಭೇದವೆಲ್ಲಾ ದೂರವಾಗಬೇಕು ಅಂತ ಕ್ರಾಂತಿಯಾಯಿತು. ಹೊಲೆಯ, ಮಾದಿಗರನ್ನು 'ಹರಿಜನರು' ಅಂತ ಕರೆಯಬೇಕು ಎಂದಾಯಿತು. ಅವರೆಲ್ಲರಿಗೂ ದರಖಾಸ್ತಿನಲ್ಲಿ ಸರ್ಕಾರ ಜಮೀನು ಮಂಜೂರು ಮಾಡಿತು. ಮಂಗಳೂರು ಹೆಂಚಿನ ಮನೆ ಕಟ್ಟಿಸಿಕೊಟ್ಟಿತು. ಹರಿಜನರನ್ನು ಅಸ್ಪೃಷ್ಯರನ್ನಾಗಿ ಕಾಣಬಾರದು ಎಂದರು. ಅವರನ್ನು ದೇವಸ್ಥಾನದೊಳಕ್ಕೆ ಬಿಡುವಂತೆಯೂ ಆಯಿತು.

ಈಗ ವೆಂಕಟರಮಣಯ್ಯನವರಿಗೆ ಇವೆಲ್ಲ ನೆನಪಾಗಿ, ಸತ್ಯಳ ವರ್ತನೆ, ವಾದಗಳೊಂದಿಗೆ ಹೋಲಿಸಿಕೊಳ್ಳುವಂತಾಗಿ, ಗೊಂದಲವಾಗಿ, ಅದೇ ಯೋಚನೆ ಮಾಡಿ ಮಾಡಿ, ಹುಚ್ಚೇ ಹಿಡಿದುಬಿಡುತ್ತದೆ. ಅವರು ಮನೆ ಬಿಟ್ಟು, ದೇವಸ್ಥಾನದ ಪೂಜೆ ಬಿಟ್ಟು, ತೋಟದಲ್ಲಿ ಗುಡಿಸಲೊಂದನ್ನು ಕಟ್ಟಿಕೊಂಡು ಬದುಕಲು ಶುರುವಿಡುತ್ತಾರೆ.

ಪ್ರೇಮಭಂಗವಾಗಿ, ವಿಷಯ ಬಹಿರಂಗವಾಗಿ, ಸಮಾಜದಲ್ಲಿ ಹೆಸರು ಕಳೆದುಕೊಂಡು, ಅದರಿಂದಾಗಿ ಕೆಲಸ ಕಳೆದುಕೊಂಡು, ಸೀರೆ ಅಂಗಡಿಯೊಂದರಲ್ಲಿ ಕೂಲಿ ಮಾಡಿಕೊಂಡಿದ್ದ ಸತ್ಯ ಅಪ್ಪನ ಪರಿಸ್ಥಿತಿಯ ಸುದ್ಧಿ ಕೇಳಿ ಊರಿಗೆ ಧಾವಿಸುತ್ತಾಳೆ. ತೋಟದ ಗುಡಿಸಲಿನಲ್ಲಿ ಹುಚ್ಚು ಹಿಡಿದಿದ್ದ ತಂದೆ ವೆಂಕಟರಮಣಯ್ಯ, ಸತ್ಯಳಿಗೆ ಯಜ್ನೋಪವೀತ ಧಾರಣೆ ಮಾಡುತ್ತಾರೆ. 'ಇನ್ನು ಮೇಲೆ ಹೋಮ, ಹವನ ಮಾಡು' ಅಂತ ಭೋದಿಸುತ್ತಾರೆ. ಅವರ ಹುಚ್ಚು ಹುಚ್ಚು ಮಾತುಗಳ ಸಹಾಯದಿಂದಲೇ ಸತ್ಯ ಮಾತಂಗಿಯ ಜತೆಗಿನ ಗೌಪ್ಯ ಸಂಬಂಧದ ಇತಿಹಾಸವನ್ನು ಪತ್ತೆ ಮಾಡುತ್ತಾಳೆ. ಅವರನ್ನು ಮಾನಸಿಕ ರೋಗ ತಜ್ನರ ಬಳಿಗೊಯ್ದು ಕಾಯಿಲೆ ವಾಸಿ ಮಾಡಿಸಿಕೊಂಡು ಬರಬೇಕು ಎಂಬ ಪ್ರಯತ್ನಗಳು ನಡೆಯುತ್ತಿರುವಾಗಲೇ ವೆಂಕಟರಮಣಯ್ಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಸತ್ಯ ತಾನು ಇನ್ನು ಇದೇ ಗುಡಿಸಲಿನಲ್ಲಿ ಬದುಕಬೇಕು ಅಂತ ತೀರ್ಮಾನಿಸುತ್ತಾಳೆ. ಅಪ್ಪ ಬರೆದಿಟ್ಟಿದ್ದ ವಿಲ್ ಅವಳ ನೆರವಿಗೆ ಬರುತ್ತದೆ. ತಾನು ಶೂದ್ರಳಂತೆ ಬದುಕಬೇಕಂತ ನಿರ್ಧರಿಸುತ್ತಾಳೆ. ಮಾತಂಗಿಗಿಂತ ಶೂದ್ರಳಾಗಬೇಕೆಂದುಕೊಳ್ಳುತ್ತಾಳೆ.
ಅತ್ತ ಶ್ರೀನಿವಾಸನ ಹೆಂಡತಿ ಹೆರಿಗೆಯ ಸಮಯದಲ್ಲಿ ತೀರಿಕೊಳ್ಳುತ್ತಾಳೆ. ಶ್ರೀನಿವಾಸ ಒಬ್ಬಂಟಿಯಾಗುತ್ತಾನೆ. ಸತ್ಯಳ ನೆನಪು ಕಾಡಲಾರಂಭಿಸುತ್ತದೆ. ಅವನಿಗೆ ಮತ್ತೊಂದು ಮದುವೆ ಮಾಡುವ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ಅವನ ಪೋಷಕರು 'ಹೋಗಲಿ, ಸತ್ಯಳನ್ನೇ ಮಾಡಿಕೋ ಹಾಗಾದರೆ' ಅನ್ನುತ್ತಾರೆ. ಆದರೆ ಈ ಬಾರಿ ಸತ್ಯಳೇ ಮದುವೆಯನ್ನು ನಿರಾಕರಿಸುತ್ತಾಳೆ ಮತ್ತು ಹರಿಜನರ ಬೆಟ್ಟಯ್ಯನ ಮಗಳು ಮೀರಾಳನ್ನು ಮಾಡಿಕೋ ಎಂದು ಶ್ರೀನಿವಾಸನಿಗೆ ಸಲಹೆ ಕೊಡುತ್ತಾಳೆ. ಅವಳು ಕೊಟ್ಟ ಸಲಹೆಯೇ ಗಟ್ಟಿಯಾಗಿ ಶ್ರೀನಿವಾಸನಿಗೆ ಮೀರಾಳ ಮೇಲೆ ಎಂಥದೋ ಆಕರ್ಷಣೆ ಉಂಟಾಗಿ ಪ್ರೇಮ ಶುರುವಾಗುತ್ತದೆ. ಅವರಿಬ್ಬರೂ ಮದುವೆ ಮಾಡಿಕೊಳ್ಳುವುದು ಅಂತ ತೀರ್ಮಾನಿಸುತ್ತಾರೆ.

ಆದರೆ ಶ್ರೀನಿವಾಸನ ಮನೆಯಿಂದ ಈ ಬಗ್ಗೆ ತೀವ್ರವಾದ ವಿರೋಧ ಬರುತ್ತದೆ. ಬೆಟ್ಟಯ್ಯನವರೂ ಮನಸ್ಪೂರ್ತಿಯಿಂದ ಒಪ್ಪಿಕೊಳ್ಳುವುದಿಲ್ಲ. ಎಷ್ಟೇ ಬುದ್ಧಿ ಹೇಳಿದರೂ ಸರಿಹೋಗದ ಶ್ರೀನಿವಾಸನನ್ನು ತಹಬಂದಿಗೆ ತರಲು ಅವನ ತಂದೆ ಉಪಾಯ ಮಾಡಿ ಸತ್ಯಳ ಅಣ್ಣ ವೆಂಕಟೇಶನನ್ನು ಈ ಕೆಲಸಕ್ಕೆ ನೇಮಿಸುತ್ತಾರೆ. ವೆಂಕಟೇಶ ಶ್ರೀನಿವಾಸನನ್ನು ಕಂಡು 'ಸತ್ಯ ಮೀರಾಳ ಅಣ್ಣ ಮೋಹನದಾಸನನ್ನು ಮದುವೆಯಾಗುತ್ತಿದ್ದಾಳೆ. ನಿನಗೆ ಈ ರೀತಿ ದಡ ಕಾಣಿಸಿ ಅವನನ್ನು ಮದುವೆಯಾಗುವ ಪ್ಲಾನು ಅವಳದು' ಎಂದು ಸುಳ್ಳು ಹೇಳಿ ಕಿವಿ ತಿರುಚುತ್ತಾನೆ. ಸದರಿ ಮೋಹನದಾಸ -ಬೆಟ್ಟಯನವರ ಮಗ- ತಲತಲಾಂತರದಿಂದ ತಮ್ಮನ್ನು ಕೀಳಾಗಿ ಕಾಣುತ್ತಾ ಬಂದಿರುವ ಮೇಲುಜಾತಿಯವರ ಮೇಲೆ ಸದಾ ಕೆಂಡ ಕಾರುವ, ಇವೆಲ್ಲಾ ತೊಲಗಬೇಕಾದರೆ ಕ್ರಾಂತಿಯಾಗಬೇಕು, ಮೇಲು ಜಾತಿಯವರ ಮೇಲೆ ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕು ಎಂಬ ತತ್ವವುಳ್ಳ ತರುಣ. 'ಜಾತಿ ಬೇಧವೆಲ್ಲಾ ಸುಳ್ಳು' ಎಂಬ ವಾದವನ್ನು ನಂಬಿದ್ದ ಮತ್ತು ಎಂದೂ ಜಾತಿ ಬೇಧ ಮಾಡದ ಸತ್ಯಳೊಂದಿಗೆ ಅವನಿಗೆ ಪರಿಚಯ ಬೆಳೆಯುತ್ತದೆ. ಅವನ ಅನೇಕ ತತ್ವಗಳನ್ನು ಸತ್ಯ ಒಪ್ಪದಿದ್ದರೂ, ಅವನು ಒತ್ತಾಯಿಸಿದ ಕಾರಣ, ಈ ಜಾತಿಪದ್ಧತಿ, ಹರಿಜನ, ಅಸ್ಪೃಷ್ಯತೆ, ಸಮಾನತೆ -ಇವುಗಳನ್ನೆಲ್ಲಾ ಸಮೀಕರಿಸಿ ಒಂದು ಪುಸ್ತಕ ಬರೆದು ಮೋಹನದಾಸನಿಗೆ ಕೊಡಲು ಒಪ್ಪಿರುತ್ತಾಳೆ. ಇದೇ ಕಾರಣಕ್ಕೆ ಅವಳ ತೋಟದ ಮನೆಗೆ ಪದೇ ಪದೇ ಬಂದು ಹೋಗುತ್ತಿದ್ದ ಮೋಹನದಾಸನ ಬಗ್ಗೆ ತಿಳಿದಿದ್ದ ಶ್ರೀನಿವಾಸ, ಈಗ 'ಸತ್ಯ ಅವನನ್ನೇ ಮದುವೆಯಾಗುತ್ತಿದ್ದಾಳಂತೆ' ಎಂಬ ಸುಳ್ಳು ಸುದ್ಧಿಯನ್ನು ಸುಲಭವಾಗಿ ನಂಬುತ್ತಾನೆ. ತನ್ನಂತಹ ತನ್ನನ್ನೇ ನಿರಾಕರಿಸಿ ಆ ಮಾದಿಗನನ್ನು ಕಟ್ಟಿಕೊಳ್ಳಲು ಹೊರಟಿರುವ ಸತ್ಯಳ ಬಗ್ಗೆ ದ್ವೇಷ ಬೆಳೆಯುತ್ತದೆ. 'ತಾನು ಮಾದಿಗನಿಂತ ಕೀಳಾ?' ಅಂತ ಕೇಳಿಕೊಳ್ಳುತ್ತಾನೆ. ಮೀರಾಳೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಳ್ಳುತ್ತಾನೆ. ಮೀರಾ ಈ ಅವಮಾನ, ಅನ್ಯಾಯವನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮತ್ತು ಶ್ರೀನಿವಾಸ ಅಕ್ಷರಶಃ ಹುಚ್ಚನೇ ಆಗಿಬಿಡಿತ್ತಾನೆ.

ಈ ಮಧ್ಯೆ ಸತ್ಯ ಬರೆದ ಪುಸ್ತಕ ಕ್ರಾಂತಿಯನ್ನೇ ಉಂಟುಮಾಡುತ್ತದೆ. ಮೋಹನದಾಸನ ನೇತೃತ್ವದಲ್ಲಿ ಎಲ್ಲೆಡೆಯಲ್ಲೂ ಹರಿಜನರು ಸಂಘಗಳನ್ನು ಕಟ್ಟಿಕೊಂಡು ಹೋರಾಟಕ್ಕಿಳಿಯುತ್ತಾರೆ. ದೇವಸ್ಥಾನಗಳಿಗೆ ನುಗ್ಗುತ್ತಾರೆ. ಹೋಟೆಲುಗಳಿಗೆ ನುಗ್ಗುತ್ತಾರೆ. ಅವರ ಕ್ರಾಂತಿಯಾತ್ರೆ ತಿರುಮಲಾಪುರಕ್ಕೂ ಬರುತ್ತದೆ. ಜನಗಳ ತೀವ್ರ ಪ್ರತಿರೋಧದ ನಡುವೆಯೂ ಅವರು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಆದರೆ ಮಂಗಳಾರತಿಯ ಸಂದರ್ಭದಲ್ಲಿ ಮೋಹನದಾಸನಿಗೆ ಅಂತಃಪ್ರಜ್ನೆ ಕೆಲಸ ಮಾಡಿ ಮೂರ್ಚೆ ತಪ್ಪಿ ಬಿದ್ದುಬಿಡುತ್ತಾನೆ.

ಎಚ್ಚರಾಗಿ ಎದ್ದು ಊರುಬಿಟ್ಟು ಹೋದವನಿಗೆ ತನ್ನ ಊರಲ್ಲೇ ತನಗಾದ ಈ ಅವಮಾನವನ್ನು ಸಹಿಸಲಾಗದೆ, ದೇವಸ್ಥಾನವನ್ನೇ, ಮೇಲ್ಜಾತಿಯ ಜನಗಳನ್ನೇ, ಇಡೀ ಊರನ್ನೇ ನಾಶ ಮಾಡುವ ಸಂಚು ಹೂಡುತ್ತಾನೆ. ಡೈನಾಮೈಟ್ ಇಟ್ಟು ಕೆರೆಯನ್ನು ಉಡಾಯಿಸಿಬಿಡುತ್ತಾನೆ. ಇಡೀ ಊರು ಜಲಪ್ರಳಯಕ್ಕೊಳಗಾಗುತ್ತದೆ. ಸತ್ಯ ಮೂಕವಿಸ್ಮಿತಳಾಗಿ ದೂರ ನಿಂತು ನೋಡುತ್ತಾಳೆ.

4 comments:

Annapoorna Daithota said...

ನಾನೂ ಪುಸ್ತಕಗಳನ್ನು ಓದುತ್ತೇನೆ.... ಆದರೆ ಈ ರೀತಿ ಟಿಪ್ಪಣಿ ಮಾಡುವಂಥಾ ಒಳ್ಳೆ ಬುದ್ಧಿ ಇಲ್ಲ ನಂಗೆ.... :)
ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಸುಶ್ರುತ.... ನಾನೂ ಹೀಗೆ ಮಾಡಬೇಕು ಅನ್ನುವ ಉತ್ಸಾಹ ಮೊಳೆಯುತ್ತಿದೆ ನಂಗೆ... :)

Sushrutha Dodderi said...

ಅನ್ನಪೂರ್ಣಾರವರೆ,

ಇಷ್ಟಕ್ಕೂ ನಾನು ಟಿಪ್ಪಣಿ ಯಾಕೆ ಮಾಡುತ್ತೀನಿ ಅಂದ್ರೆ, ನನಗೆ ತನ್ಮೂಲಕ ಆ ಪುಸ್ತಕದಿಂದ ಹೊರಬರಲಿಕ್ಕೆ ಅನುಕೂಲ ಆಗುತ್ತೆ. ಒಂದು ಪುಸ್ತಕವನ್ನು ಓದಿ, ಅದರ ಬಗ್ಗೆ ಟಿಪ್ಪಣಿಯನ್ನೋ, ನನಗಿಷ್ಟವಾದ ಕೆಲ ಸಾಲುಗಳನ್ನೋ ಒಂದುಕಡೆ ಬರೆದಿಟ್ಟುಬಿಟ್ಟರೆ ನಾನು ಅಷ್ಟರ ಮಟ್ಟಿಗೆ ನಿರಾಳನಾದಂತೆ. ಅದಿಲ್ಲದಿದ್ದರೆ 'ದಾಟು'ವಿನಂತಹ ಪುಸ್ತಕದಿಂದ ಹೊರಬರುವುದಕ್ಕೆ ನಿಜಕ್ಕೂ ಕಷ್ಟ. Especially, ನನ್ನಂಥವರಿಗೆ..!

ಧನ್ಯವಾದಗಳು.

Anonymous said...

ಹಲೋ ಸುಶ್ರುತಾರವರಿಗೆ
ಎಸ್ ಎಲ್ ಭೈರಪ್ಪನವರ ಕಾದಂಬರಿಗಳನ್ನು ಒದಲು ತುಂಬಾ ಇಷ್ಟ ಅವರ 'ದಾಟು' ಪುಸ್ತವನ್ನ ಓದಿರಲಿಲ್ಲ ಅದನ್ನು ಓದುವ ಅವಕಾಶ ಓದಗಿಸಿಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್...

ಶಾಂತಲಾ ಭಂಡಿ (ಸನ್ನಿಧಿ) said...

ಸುಶ್ರುತ...
ಓದಿದ ಪುಸ್ತಕಗಳ ಬಗ್ಗೆ ಬರೆಯುವ ನಿನ್ನ ಹವ್ಯಾಸ ಎಲ್ಲ ಓದುಗರಿಗೆ ಓದುವ ಕಾರ್ಯಕ್ಕೆ ದಾರಿ ತೋರಿಸುವಂತಿದೆ. ಹೀಗೆಯೇ ಇನ್ನೊಂದಿಷ್ಟು ಬರಲಿ.