Saturday, September 02, 2006

ಕಾಣೆಯಾದವರ ಪಟ್ಟಿಯಲ್ಲಿ ನಾನು!

ಗೆಳತಿ ನಿಮ್ಮಿ ಬರೆದುಕೊಟ್ಟ ಆಟೋಗ್ರಾಫಿನ ಕೊನೆಯ ಸೆಂಟೆನ್ಸುಗಳು ಹೀಗಿದ್ದವು:

"Be a good human, be a good student, be a good son, be a good husband, be a good father, be a good citizen... then only your life is worth living"

ಇವು ಕೇವಲ ಆಟೋಗ್ರಾಫ್ ಆಗಿರದೆ, ನನಗೆ ಕೊಡುವ advise ಆಗಿರದೆ, ನೇರವಾಗಿ ನನ್ನ roleಗಳ ಬಗ್ಗೆ ನನಗೇ ಪರಿಚಯ ಮಾಡಿಕೊಡುವ ಪ್ರಯತ್ನವೂ ಆಗಿತ್ತು ಅಂತ ಅನ್ನಿಸೊತ್ತೆ.

ನಿಜ, ನಾವೆಲ್ಲಾ ಬದುಕುವ ಒಂದೇ ಒಂದು ಬದುಕಿನಲ್ಲಿ ಎಷ್ಟೆಲ್ಲಾ ಪಾತ್ರಗಳನ್ನು ನಿರ್ವಹಿಸುತ್ತೇವೆ! ಅಪ್ಪನಿಗೆ ಮಗ, ಅಜ್ಜಿಗೆ ಮೊಮ್ಮಗ, ಮಾವನಿಗೆ ಅಳಿಯ, ಮಾವನ ಮಗಳಿಗೆ ಭಾವಯ್ಯ, ಹೆಂಡತಿಗೆ ಗಂಡ, ಮಗನಿಗೆ ಅಪ್ಪ, ಮೊಮ್ಮಗನಿಗೆ ಅಜ್ಜ! ಊರ ಜನರಿಗೆ ಗ್ರಾಮಸ್ಥ, ಬೇರೆ ಊರಿಗೆ ಹೋದರೆ ನೆಂಟ, ಹೊಸ ಊರಿಗೆ ಹೋದರೆ ಅತಿಥಿ, ಆಫೀಸಿನಲ್ಲಿ ಮ್ಯಾನೇಜರ್ರು, ಆಳಿಗೆ ಯಜಮಾನ, ಅಂಗಡಿಯವನಿಗೆ ಕಸ್ಟಮರ್ರು.... ಹೀಗೇ.

ಈಗ ನನ್ನನ್ನೇ ತೆಗೆದುಕೊಳ್ಳಿ: ಅಪ್ಪ 'ಪಾಪು' ಅನ್ನುತ್ತಾನೆ, ಅಮ್ಮ 'ಅಪ್ಪಿ' ಅನ್ನುತ್ತಾಳೆ, ಮಾವ 'ಗುಂಡ' ಅನ್ನುತ್ತಾನೆ, ಊರ ಹುಡುಗರೆಲ್ಲ 'ಸೂರು' ಅನ್ನುತ್ತಾರೆ, ಪ್ರೀತಿಯ ಕೆಲವು ಗೆಳೆಯರು 'ಸುಶಿ' ಅನ್ನುತ್ತಾರೆ, ಆಫೀಸಿನಲ್ಲಿ ನಾನು 'ಮಿಸ್ಟರ್ ಸುಶ್ರುತ್', ಆಫೀಸಿಗೆ ಬರುವ client ಗಳಿಗೆ 'ಸರ್'!

ಇಷ್ಟೆಲ್ಲಾ designationಗಳ ಮಧ್ಯೆ 'ನಾನು' ಕಳೆದುಹೋಗಿದ್ದೇನೇನೋ ಅಂತ ಒಮ್ಮೊಮ್ಮೆ ಭಯವಾಗುತ್ತದೆ. ಇವುಗಳೆಲ್ಲದರ ಮಧ್ಯೆ 'ನಾನು' ಯಾರು ಎಂಬ ಪ್ರಶ್ನೆ ಒಮ್ಮೊಮ್ಮೆ ಎದ್ದುಬಿಡುತ್ತದೆ. ಅಥವಾ ಇವೆಲ್ಲವೂ ಸೇರಿದರೇ ನಾನಾ? ಹಾಗೆನಿಲ್ಲ; ಇದರಲ್ಲಿ ಒಂದೆರಡು ಪಾತ್ರಗಳನ್ನು ತೆಗೆದರೂ ನಾನು ನಾನಾಗೇ ಇರುತ್ತೇನಲ್ಲಾ, ಎಲ್ಲವನ್ನೂ ತೆಗೆದರೂ.... ಅರೆ! ಹಾಗಾದರೆ ನಾನೆಲ್ಲಿ?

'ನಾನು' ಯಾರು?

1 comment:

ಶಾಂತಲಾ ಭಂಡಿ (ಸನ್ನಿಧಿ) said...

ಸುಶ್ರುತ...
ಹೌದು , ಕೆಲವೊಮ್ಮೆ ಜೀವನದಲ್ಲಿ ಎಲ್ಲ ಪಾತ್ರಗಳನ್ನು ನಿಭಾಯಿಸುವ ಭರದಲ್ಲಿ ನಮಗೆ ನಾವಾಗಲು ಅವಕಾಶವೇ ಸಿಗುವುದಿಲ್ಲ. ಬೇರೆ ಬೇರೆ ಪಾತ್ರದೊಳಗೆ ಕಳೆದು ಹೋಗುವ ಮುನ್ನ ಮತ್ತೆ ನಾನು ನನಗೇನಾಗಬೇಕು ಎಂಬುದರ ಬಗ್ಗೆ ಯೋಚಿಸಲು ತೊಡಗಿದ್ದೇನೆ ಈ ಲೇಖನ ಓದಿದ ಮೇಲೆ. ತುಂಬಾ ಚೆನ್ನಾಗಿದೆ. ಸರಳವಾಗಿದ್ದರೂ ಸುಂದರ ಸಂದೇಶ ಹೊತ್ತ ಬರಹ.