Showing posts with label Personal. Show all posts
Showing posts with label Personal. Show all posts

Thursday, April 26, 2012

ಮದುವೆಗೆ ಬನ್ನಿ!


ಚಿಕ್ಕಂದಿನಲ್ಲಿ ಬೇಸಿಗೆ-ದಸರಾ ರಜೆಗೆಂದು ತನ್ನ ಅಜ್ಜನ ಮನೆಗೆ ಬರುತ್ತಿದ್ದ ನಮ್ರತಾ ಎಂಬ ಹುಡುಗಿಯ ಜತೆ ಬುಕ್ಕೆಹಣ್ಣಿಗೆ ಬ್ಯಾಣ ಸುತ್ತಿದ್ದು, ಆಡುಮುಟ್ಟದ ಸೊಪ್ಪಿನ ಗಂಪಿನಿಂದ ಇಡ್ಲಿ ಮಾಡಿದ್ದು, ಮರಳಿನಿಂದ ಮನೆ ಕಟ್ಟಿದ್ದು, ಸಿಐಡಿ ಆಟ ಆಡಿದ್ದು..

ಬಾಲಮಂಗಳ, ಚಂದಮಾಮ, ಸಿನೆಮಾಗಳಿಂದ ಪ್ರಭಾವಿತರಾಗಿ, ಭಕ್ತಿ-ಭಾವದಿಂದ ಪ್ರಾರ್ಥಿಸಿದರೆ ದೇವರು ಕಾಣಿಸುತ್ತಾನೆ ಎಂಬ ಫ್ಯಾಂಟಸಿಗೊಳಗಾಗಿ, ನಾನು-ಮಧು-ಗುಂಡ ಗಣಪೆ ಮಟ್ಟಿಯಲ್ಲಿ ಕೂತು ಚಿಗಟೆ ಗಿಡದ ಎಲೆಗಳನ್ನು ತರೆಯುತ್ತ ತಪಸ್ಸು ಮಾಡುತ್ತ ದೇವರು ಇನ್ನೇನು ಪ್ರತ್ಯಕ್ಷವಾಗಿಯೇ ಬಿಡುತ್ತಾನೆ ಎಂದು ಕಾದಿದ್ದು..

"ಲವ್ವಾ? ಮಾಡ್ಬಿಡ್ಬೋದು ಕಣೋ.. ಆದ್ರೆ ಮನೇಲಿ ಗೊತ್ತಾದ್ರೆ ಕಷ್ಟ!" ಅಂತ, ಒಂಬತ್ತನೇ ಕ್ಲಾಸಿನ ನನ್ನ ಬೆಂಚ್-ಮೇಟ್ ದುರ್ಗಪ್ಪನಿಗೆ, ಅವನು ನಮ್ಮದೇ ಕ್ಲಾಸಿನ ಹುಡುಗಿಯೊಬ್ಬಳನ್ನು ತೋರಿಸುತ್ತ "ನೀ ಇವ್ಳುನ್ ಲವ್ ಮಾಡು, ನಾನು -ಅಕಾ- ಆ ಹುಡ್ಗೀನ ಮಾಡ್ತೀನಿ!" ಅಂದಾಗ ಹೇಳಿದ್ದು..

ಸೊರಬದ ಸುರಭಿ ಕಾಂಪ್ಲೆಕ್ಸಿನ ತುತ್ತತುದಿಯನ್ನೇರಿ ನಾನು-ರಾಘು ಅಲ್ಫೆನ್ಲೀಬೆ ಚಾಕ್ಲೇಟು ತಿನ್ನುತ್ತಾ ಪರೀಕ್ಷೆ, ರಿಸಲ್ಟ್ಸು, ಬಿಡಬೇಕಿರುವ ಊರು, ಸೇರಬೇಕಿರುವ ಪೇಟೆ, ಗುರಿ, ಕನಸು, ಜಾಬ್ ಅಪಾರ್ಚುನಿಟೀಸ್, ಹಣ, ಹುಡುಗಿಯರು, ಪ್ರೀತಿ, ಬದುಕುಗಳ ಬಗ್ಗೆ ಮಾತಾಡುತ್ತಿದ್ದುದು..

2003, ಜುಲೈ 12ರ ಜುಮುರುಮಳೆಯ ಮುಂಜಾನೆ ಬೆಂಗಳೂರಿಗೆ ಬಂದಿಳಿದು, ಸಿಟಿ ಬಸ್‌ಸ್ಟಾಂಡಿನ ದಾರಿ ಕೇಳಿಕೊಂಡು ಹೆಗಲ ಚೀಲದೊಂದಿಗೆ ಹೆಜ್ಜೆ ಹಾಕುತ್ತಿದ್ದಾಗ ನನ್ನ ಜತೆಗೇ ಬಂದಿದ್ದ ಗೆಳೆಯ ದಿನೇಶ ನನ್ನನ್ನು ತಡೆದು ಆಕಾಶದತ್ತ ಬೆರಳು ಮಾಡಿ ತೋರಿಸುತ್ತ "ಅದೇ, ವಿಮಾನ! ಎಷ್ಟ್ ಹತ್ರಕ್ ಹೋಗತ್ತಲ್ಲಾ ಮಾರಾಯಾ ಬೆಂಗ್ಳೂರಲ್ಲಿ!" ಎಂದಿದ್ದು..

ಕೆಲಸ ಹಿಡಿದು, ರೂಮ್ ಮಾಡಿ, ಬೆಂಗಳೂರು ಮತ್ತು ಬದುಕು ಎಂದರೆ ಏನು ಅಂತ ಕಣ್ಬಿಟ್ಟು ನೋಡುತ್ತ, ತಿಳಿಯದೆಲೆ ಕಳೆಯುತ್ತಿರುವ ದಿನಗಳು, ಅರ್ಥವಾಗದೆ ಮುಗಿಯುತ್ತಿರುವ ಘಟನೆಗಳು, ಮುಂದೇನಿದೆಯೆಂದು ತೋರಗೊಡದ ನಾಳೆಗಳೆಂಬ ಬ್ಲೈಂಡ್ ಕರ್ವ್‌ಗಳ ಬಗ್ಗೆ ರಾತ್ರಿ ಎರಡರವರೆಗೆ ಚಿಂತನಾಭಾವದಲ್ಲಿ ಮಾತಾಡುತ್ತಿದ್ದ ರೂಮ್‌ಮೇಟ್ ವಿನಾಯಕ, ಕೊನೆಗೊಂದು ದಿನ "ಇಲ್ಲಲೇ ಭಟ್ಟಾ.. ನಾನು ಬೆಂಗಳೂರು ಬಿಟ್ಟು ವಾಪಾಸ್ ಊರಿಗೆ ಹೋಗ್ತಿದ್ದೀನಿ" ಅಂತ ಪ್ರಕಟಿಸಿದಾಗ ಅವನನ್ನು ತಬ್ಬಿ ಬೀಳ್ಕೊಟ್ಟದ್ದು...

...ಎಲ್ಲಾ ನಿನ್ನೆ-ಮೊನ್ನೆಯೇ ಆಗಿದ್ದಿರಬೇಕು. ಇನ್ನು ಹದಿನೈದು ದಿನದೊಳಗೆ ನನ್ನ ಮದುವೆ! 

"ಡೇಟ್ ಫಿಕ್ಸ್ ಆಯ್ತಲೇ.. ಮೇ 9" ಅಂತ ಫೋನಿಸಿದರೆ, "ತಡಿಯೋ, ನಿಂದಕ್ಕಿಂತ ಮುಂಚೆ ನಂದೇ ಆಗೋ ಛಾನ್ಸ್ ಇದ್ದು!" ಅಂತಂದು, ಹಾಗೇ ನನಗಿಂತ ನಾಲ್ಕು ದಿನ ಮೊದಲೇ ಮದುವೆಯಾಗುತ್ತಿರುವ ವಿನಾಯಕ; "ಏನಪ್ಪ.. ಸುಶ್ರುತ ಮದ್ವೆ ಆಗ್ತಿದಾನೆ ಇಷ್ಟ್ ಬೇಗ ಅಂದ್ರೆ ನಂಗೆ ನಂಬಕ್ಕೇ ಆಗ್ತಾ ಇಲ್ಲ" ಎಂದ ದಿನೇಶ; "ಮಗನೇ, ಏಪ್ರಿಲ್ 29ಕ್ಕೇ ನನ್ ಮದ್ವೆ. ನಿನ್ ಮದುವೆಗೆ ಹೆಂಡತಿ ಸಮೇತ ಬರ್ತೀನಿ ನಾನು" ಎನ್ನುವ ರಾಘು; ಕಳೆದ ವರ್ಷ ಉಳವಿಯಲ್ಲಿ ಸಿಕ್ಕು, ತಾನು ಇಟ್ಟುಕೊಂಡಿರುವ ಪುಟ್ಟ ಕ್ಯಾಂಟೀನಿನೊಳಗೆ ಕರಕೊಂಡು ಹೋಗಿ, ಅಲ್ಲೇ ಗೂಡೊಂದರಲ್ಲಿಟ್ಟುಕೊಂಡಿದ್ದ ಎನ್ವಲಪ್‌ನಿಂದ ಫೋಟೋ ಒಂದನ್ನು ಜೋಪಾನವಾಗಿ ಹೊರತೆಗೆದು ತೋರಿಸುತ್ತ, "ಮುಂದಿನ್ ತಿಂಗ್ಳೇ ಲಗ್ನ. ಚನಾಗೈದಾಳನಲೇ?" ಅಂತ ಕೇಳಿದ್ದ ದುರ್ಗಪ್ಪ; ಮೊನ್ನೆಮೊನ್ನೆಯವರೆಗೂ "ಮದುವೆ ಆಗು ಫಾಲೀ.. ಸಖತ್ ಮಜಾ ಇರ್ತು ಲೈಫು" ಅಂತ ಹೇಳುತ್ತಿದ್ದವ, ಈಗ 'ಹ್ಮ್, ಇನ್ನು ಶುರು ನಿನ್ನ ಗ್ರಹಚಾರದ ದಿನಗಳು' ಅನ್ನೋ ಧಾಟಿಯಲ್ಲಿ ಮಾತಾಡ್ತಿರೋ ಮಧು; ಮದುವೆಯಾಗಿ ಬೆಂಗಳೂರಿಗೇ ಬಂದಿದ್ದಾಳೆ ಅಂತ ಗೊತ್ತಿದ್ದೂ, ಕನಿಷ್ಟ ಫೋನಾದರೂ ಮಾಡಿ ಕರೀಬೇಕು ಅಂತ ನಾನು ಶತಾಯಗತಾಯ ಪ್ರಯತ್ನಿಸುತ್ತಿದ್ದರೂ ಇನ್ನೂ ಸಂಪರ್ಕಕ್ಕೆ ಸಿಗದ ನಮ್ರತಾ.

*
ಸೋ, ವಿಷಯ ಇಷ್ಟು. ಬರುವ ಮೇ 9ಕ್ಕೆ ನನ್ನ ಮದುವೆ. ದಿವ್ಯಾ ಎಂಬ ನಿಮಗೂ ಗೊತ್ತಿರೋ ಹುಡುಗಿ ಜತೆ. ನಮ್ಮೂರಲ್ಲಿ, ನಮ್ಮ ಮನೆಯಲ್ಲಿ. ನೀವು ಬರಲೇಬೇಕು, ಬಂದೇ ಬರ್ತೀರ.

ಇವತ್ತು 'ಮೌನಗಾಳ'ದ ಆರನೇ ಹುಟ್ಟುಹಬ್ಬವೂ. "ಅಂತೂ ಇಷ್ಟ್ ವರ್ಷ ಗಾಳ ಹಾಕಿದ್ದೂ ಸಾರ್ಥಕವಾಯ್ತು" ಅಂತ ಕಿಚಾಯಿಸಿದ್ರಾ? ;) ನಿಜ ಹೇಳಬೇಕೂಂದ್ರೆ, ಇದು ಗಾಳಕ್ಕೆ ಸಿಕ್ಕ ಮೀನಲ್ಲ. ಅಥವಾ, ನನಗೆ ಹಾಗೆ ಕರೀಲಿಕ್ಕೆ ಇಷ್ಟವಿಲ್ಲ. ಇವಳು ಗಾಳ ಹಾಕಿ ಕುಳಿತವನ ಪಕ್ಕ ಬಂದು ಕೂತ ಮತ್ಸ್ಯಗಂಧಿ. ಇನ್ನು ಒಂದೇ ಗಾಳದಲ್ಲಿ ನಮ್ಮ ಮೀನುಗಾರಿಕೆ. "ಯಾಕೆ ಪ್ರೀತಿಸ್ತೀಯ?" ಅಂತ ಇಷ್ಟರೊಳಗೆ ನೂರು ಸಲ ಕೇಳಿದ್ದೇನೆ; ಒಂದು ಸಲವೂ ಉತ್ತರಿಸಿಲ್ಲ ಹುಡುಗಿ.

ಮುತ್ತೂರ ತೇರಿನಲಿ ಸಿಕ್ಕ ಸಿರಿಯಲ್ಲ
ಮತ್ಸ್ಯಯಂತ್ರವನಂತು ಬೇಧಿಸಲೆ ಇಲ್ಲ
ಮತ್ಯಾರದೋ ಮದುವೆಯಲ್ಲಿ ಸಿಕ್ಕು ಸೆಳೆದವಳಲ್ಲ
ಮುತ್ತೊಂದ ಬೇಡಿ ನಿಂತಿರುವಳಲ್ಲ?

:)

ಮದುವೆಗೆ ಬನ್ನಿ.

ಪ್ರೀತಿಯಿಂದ,

-ಸುಶ್ರುತ

[ವಿವರಗಳು, ರೂಟ್‌ಮ್ಯಾಪ್, ಇನ್ವಿಟೇಶನ್‌ಗಾಗಿ ಈ ವೆಬ್‌ಸೈಟ್]

Monday, March 16, 2009

ಇವತ್ತು ಬರೆಯದೇ ಇರಲಾರೆ..

"ಭಾಗ್ಯನ್ನ ಮನೆ ತುಂಬಿಸ್ಕ್ಯಂಡಾತು" ಎಂದ ಅಮ್ಮನ ದನಿಯಲ್ಲಿ ಸಂಭ್ರಮವಿತ್ತು. 'ಇಪ್ಪತ್ತೈದು ವರ್ಷದ ಹಿಂದೆ ನೀನು ಈ ಮನೆ ತುಂಬಬೇಕಾದ್ರೂ ಇಷ್ಟೇ ಸಂಭ್ರಮವಿತ್ತಾ ಅಮ್ಮಾ?' ಅಂತ ಕೇಳಬೇಕು ಅಂದುಕೊಂಡೆ, ಅಷ್ಟೊತ್ತಿಗೆ "ಒಲೆ ಮೇಲೆ ಎಂತೋ ಇಟ್ಟಿಕ್ ಬೈಂದಿ.. ಅಪ್ಪನ್ ಹತ್ರ ಮಾತಾಡ್ತಿರು" ಅಂತಂದು, ಅಪ್ಪನಿಗೆ ಫೋನು ಕೊಟ್ಟು ಅಡುಗೆ ಮನೆಗೋಡಿದಳು ಅಮ್ಮ. ಏನೆಲ್ಲ ಕೇಳಬೇಕೆಂದುಕೊಂಡಿದ್ದೆ ಅಮ್ಮನ ಬಳಿ, ಕೇಳಲಾಗಲೇ ಇಲ್ಲ.

ಹಾಗೆ ಒಲೆ ಮೇಲಿಟ್ಟ ಪಾತ್ರೆ ನೆನಪಿಸಿಕೊಂಡು ಒಳಗೋಡಿದ್ದು ಅದೆಷ್ಟು ಸಲವೋ ನನ್ನಮ್ಮ... 'ಅಯ್ಯೋ ಉಕ್ಕಿದರೆ ಉಕ್ಕಿತು, ಸೀದರೆ ಸೀಯ್ತು, ಹೊತ್ತಿದರೆ ಹೊತ್ತಿತು, ಆಮೇಲ್ ನೋಡ್ಕೊಂಡ್ರಾಯ್ತು; ಫಸ್ಟು ಪಿಚ್ಚರ್ ನೋಡು, ಇಲ್ಲಿ ಬಾ ಕೂತ್ಕೋ' ಎಂಬ ನಮ್ಮ ಮಾತು ಅವಳು ಎಂದಾದರೂ ಕೇಳಿದ್ದಿದೆಯಾ? ಅವಳ ಕಾಳಜಿಗೆ ಎಣೆಯಿಲ್ಲ.. ಅಡುಗೆ ಮನೆಯಲ್ಲಿ ಹೊಳೆಯುವ ಪ್ರತಿ ದಬರಿ, ಪ್ರತಿ ಸೌಟು, ಪ್ರತಿ ಲೋಟ, ಪ್ರತಿ ಚಮಚಕ್ಕೂ ಗೊತ್ತು ಅದು. ಕೇಳಿ ನೋಡಿ ಬೇಕಿದ್ದರೆ.

ಆದರೂ... ಇಂಥದ್ದೊಂದು ಆಸ್ತೆಯನ್ನು, ಇಂಥದ್ದೊಂದು ಪ್ರೀತಿಯನ್ನು ಅದು ಹೇಗೆ ತಾನೆ ರೂಢಿಸಿಕೊಂಡೆ ಅಮ್ಮಾ? ಅಥವಾ, ಅದು ಹೆಣ್ಣುಮಕ್ಕಳ ರಕ್ತದಲ್ಲೇ ಇರುತ್ತದಾ? ಇದು ನಮ್ಮ ಮನೆ, ಇವು ನಮ್ಮ ಮನೆಯ ವಸ್ತುಗಳು, ಇವರು ನಮ್ಮವರು -ಎಂದೆಲ್ಲ ಗುರುತಿಸಿಕೊಂಡು, ಗಟ್ಟಿ ಮಾಡಿಕೊಂಡು, ಇವಕ್ಕೆಲ್ಲಾ ಹೊಂದಿಕೊಂಡು, ಇವನ್ನೆಲ್ಲ-ಇವರನ್ನೆಲ್ಲ ಸಲಹುವ ಈ ಗುಣ ಹೇಗೆ ಬಂತದು ನಿಂಗೆ? ಎಷ್ಟು ದಿನ ತಗೊಂಡೆ ಕಲಿಯಲು: ಈ ಮನೆಯ ಸಂಪ್ರದಾಯಗಳು, ಅಡುಗೆಯ ರುಚಿ, ಯಜಮಾನರ ಬೇಕು-ಬೇಡಗಳು, ಮಾವನ ಸಿಡಿಮಿಡಿಗೆ ಕಾರಣಗಳು, ಅತ್ತಿಗೆಯರ ಗಮನಿಸುವಿಕೆ - ಅತ್ತೆಯ ಜೋರುಬಾಯಿಗಳ ಜತೆಗೇ ನಿನ್ನನ್ನು ನೀನು ಸ್ಥಾಪಿಸಿಕೊಳ್ಳಬೇಕಾದ ಅನಿವಾರ್ಯತೆ... ಹೆಪ್ಪಿಗೆ ಎಷ್ಟು ಮಜ್ಜಿಗೆ ಬಿಡಬೇಕು, ಬೆಳಗ್ಗೆ ಬೆಡ್‍ಕಾಫಿಗೆ ಹಾಲೆಷ್ಟು ಎತ್ತಿಡಬೇಕು, ಸಾಕಿದ ನಾಯಿಯ ತಟ್ಟೆಗಿಷ್ಟು ಅನ್ನ ಹಾಕಬೇಕು, ಸದ್ದಾಗದಂತೆ ಹಾಕಿಕೊಳ್ಳಬೇಕು ಕೋಣೆಯ ಬಾಗಿಲ ಚಿಲಕ, ಏಳಬೇಕು ಎಲ್ಲ ಏಳುವ ಮುನ್ನ, ಬಳಿದ ಅಂಗಳದಲ್ಲಿ ದಿನಕ್ಕೊಂದು ಚುಕ್ಕಿರಂಗೋಲಿ, ಗುಡಿಸಿ ಪುಟ್ಟ ಮನೆ - ಜೋಡಿಸಿಟ್ಟು ಎಲ್ಲ ಅಚ್ಚುಕಟ್ಟಾಗಿ, ಎಷ್ಟೆಂದರೂ ತವರಿನದೆಂತನಿಸದ ಬಚ್ಚಲಿನಲ್ಲಿ ಸ್ನಾನ, ಪೂಜೆಯ ಸಮಯಕ್ಕೊಂದು ಹಾಡು, ಹೊತ್ತಿಗೆ ಸರಿಯಾಗಿ ಅಡುಗೆ, ಹೊಸ ಪರಿಚಯದ ಪಕ್ಕದ ಮನೆಯವಳ ಜೊತೆ ಕಳೆದೂ ಸಮಯ, ಇಳಿದರೆ ಸಂಜೆಯಲೆ ರಾತ್ರಿ -ಮೌನ ಸಮ್ಮತಿ.

ಎಷ್ಟು ಮಾಗಿ, ಎಷ್ಟು ಚಳಿ, ಎಷ್ಟು ಮಳೆಗಾಲ, ಅದೆಷ್ಟು ದಾಹ ನೀಗದ ಬೇಸಗೆ, ಇದ್ದಕ್ಕಿದ್ದಂತೆ ಬಂದ ಹಳೇಮಳೆ, ತವರ ನೆನಪು, ಗುಡುಗು, ಅಪ್ಪುಗೆ, ರಾತ್ರಿ, ಕತ್ತಲೆ, ಮುನಿಸು, ತಣಿಸು, ಬೆರಗು, ಕನಸು, ಬೆಳಗು.. ಮೊದಲ ಬಾರಿ ಸಾರಿಗೆ ಉಪ್ಪು ಜಾಸ್ತಿಯಾದಾಗ, ಅದು ಹೇಗೆ ಸಹಿಸಿಕೊಂಡೆ ಅಪ್ಪ ಸಿಡಿಗುಟ್ಟಿದ್ದು? ಮೊದಲ ಬಾರಿ ತನಗಾಗದವರಿಗೆ ನೀನೇನೋ ಕೊಟ್ಟೆ ಅಂತ ಅಜ್ಜಿ ಕೋಪ ತೋರಿದಾಗ ಬೆವರಿದ ನೀನು ಅದು ಹೇಗೆ ಕರಗದೇ ಉಳಿದೆ? ಮೊದಲ ಬಾರಿ ಪೂಜೆಯ ಸಮಯಕ್ಕೆ ದೇವರ ದೀಪ ಹಚ್ಚಿರಲಿಲ್ಲಾಂತ ಅಜ್ಜ ಬಾಯಿ ಮಾಡಿದಾಗ ನೀನು ಸುರಿಸಿದ ಕಣ್ಣೀರು ನೆಲದಲ್ಲಿ ಹಿಂಗಿ ಎಷ್ಟಾಳಕ್ಕೆ ಇಳಿದಿರಬಹುದು ಈಗ?

ಹೇಳು: ತಿಂಗಳು ನಿಂತು, ವಾಕರಿಕೆ ಶುರುವಾದಾಗ ನಿನ್ನ ಹೃದಯದಲ್ಲಿ ಮಿಡಿದ ಮೊದಲ ಭಾವ ಯಾವುದು..? ತುಂಬಾ ಕಷ್ಟ ಕೊಟ್ಟೆನಾ ಅಮ್ಮಾ ನಾ ನಿನ್ನ ಹೊಟ್ಟೆಯಲ್ಲಿದ್ದಾಗ? ಒದ್ದೆನಾ ನಿನಗೆ? ತಿಂದಿದ್ದೆಲ್ಲಾ ವಾಂತಿಯಾಗುತ್ತಿತ್ತಂತೆ.. ಹಣುಕಿದ ನನ್ನ ಅತ್ತೆ ನಕ್ಕಳಂತೆ.. ತವರಿಗೆ ಸುದ್ದಿ ಮುಟ್ಟಿಸಿದ್ಯಾರು? ಬಂದನಾ ಮಾವ ತಕ್ಷಣ ಓಡೋಡಿ- ತಂಗಿಯನ್ನು ಕಾಣಲು? ಅಣ್ಣ ಬಂದಿದ್ದಾನೆಂದು ಹೆಚ್ಚು ಸಂಭ್ರಮಿಸಲು ಹೋಗಿ ಅಜ್ಜಿಯ ದೊಡ್ಡ ಕಣ್ಣುಗಳ ನೋಟಕ್ಕೆ ಗುರಿಯಾದೆಯಾ? ಹೊಟ್ಟೆಯೊಳಗೆ ಬೆಳೆಯುತ್ತಿದ್ದಾಗ ನಾನು, ಕೆಮ್ಮಣ್ಣು ತಿನ್ನುವ ಬಯಕೆಯಾಯ್ತಾ? ಎಷ್ಟು ನೋವನುಭವಿಸಿದೆ ನನ್ನ ಭುವಿಗೆ ತರಲು? ಕೈತುತ್ತು ಬೇಡವೆಂದು ದೂಡಿದಾಗ ಚಂದಿರನ ಕರೆದದ್ದು ನೀನೇನಾ? ಎದೆಹಾಲ ಸವಿ, ನಿನ್ನ ಮಡಿಲ ಬೆಚ್ಚನೆ ಅನುಭವ, ಮೆತ್ತನೆ ತೊಟ್ಟಿಲ ತೂಗು, ಲಾಲಿಯ ಗಾನದ ಲಹರಿ, ನಿನ್ನ ಮೈಮೇಲೇ ಉಚ್ಚೆ ಹೊಯ್ದದ್ದು... ಊಹೂಂ, ಒಂದೂ ನೆನಪಿಲ್ಲ ನನಗೆ. ಗೌರಿ ಎಂಬ ಹೆಸರಿನ ಹುಡುಗಿ ಬೆಂಕಟವಳ್ಳಿ ಎಂಬ ಹೆಸರಿನ ಗ್ರಾಮದಲ್ಲಿ ಬಿರಿದರಳಿ ಹಸಿಗನಸುಗಳ ಕಂಡು ಮಾಗಿ ಬೆಳೆದು ದೊಡ್ಡೇರಿ ಎಂಬೂರಿನ ಶ್ರೀಧರಮೂರ್ತಿ ಎಂಬ ಹುಡುಗನಿಗೊಲಿದು ಲಗ್ನವಾಗಿ ಬಂದು ಇಂದಿಗೆ ಇಪ್ಪತ್ತೈದು ವಸಂತಗಳು ಆಗಿಹೋದವು -ಎಂಬ ಸಂಗತಿ ಇಷ್ಟೆಲ್ಲಾ ಕಲ್ಪಿಸಿಕೊಳ್ಳುವಂತೆ ಮಾಡುತ್ತಿದೆ ಅಷ್ಟೇ..

ಒಂದು ನಿಮಿಷ ಅಪ್ಪಾ, ಫೋನಿಡಬೇಡ.. ಮಾತನಾಡುವುದಿದೆ ನಿನ್ನ ಬಳಿಯೂ.. ಅಮ್ಮನೇ ಆಗಿದ್ದಳಾ ನಿನ್ನ ಕನಸು? ಹುಡುಗಿ ನೋಡಿ ಬಂದ ರಾತ್ರಿ ಕೂತು ಬರೆದೆಯಾ ಕವನ ಎದೆಯಲ್ಲಿ? ಅಕ್ಷತಾವರ್ಷದಲಿ ತೋಯುತ್ತ ಕಟ್ಟುವಾಗ ತಾಳಿ, ಓಲಗದ ದನಿ ಝೇಂಕಾರವಾಗಿತ್ತಾ? ಮನೆಗೆ ಬಂದ ಹುಡುಗಿ ಬಡತನದ ಚಾಪೆಗೂ ಹೊಂದಿಕೊಳ್ವೆನೆಂದಾಗ ಸೆರೆಯುಬ್ಬಿಬಂತಾ? ಹೌದು ಹೌದು, ಇವಳೇ ನನ್ನವಳು ಎನ್ನಿಸಿತಾ? 'ಅಮ್ಮ ಸ್ವಲ್ಪ ಜೋರು, ಏನಾದ್ರೂ ಅಂದ್ರೆ ಬೇಜಾರಾಗ್ಬೇಡ' ಅಂತ ಎಷ್ಟು ಸಣ್ಣ ದನಿಯಲ್ಲಿ ಹೇಳಿದೆ? ಪೇಟೆಯಿಂದ ತಂದು ಕದ್ದು-ಮುಚ್ಚಿ ಕೊಟ್ಟ ಮೊದಲ ವಸ್ತು ಯಾವುದು? ಥೇಟರಿಗೆ ಹೋಗಿ ಒಟ್ಟಿಗೆ ನೋಡಿದ ಮೊದಲ ಸಿನಿಮಾ ಯಾವುದು? ತವರಿಂದ ತಂದ ಹೂಗಿಡವನ್ನು ನೆಡಬೇಕೆಂದಾಗ ಬುಟ್ಟಿಯಲ್ಲಿ ಗೊಬ್ಬರ ಹೊತ್ತುತಂದು ಕೊಟ್ಟೆಯಂತೆ ಅಂಗಳಕ್ಕೆ? ಅದರಲ್ಲರಳಿದ ಮೊದಲ ಹೂವು ಮುಡಿದಾಗ ಮಡದಿ, ತುಂಬ ಚಂದವೆನಿಸಿದ್ದು ಅವಳೋ ಅಥವಾ ಅವಳ ನಾಚಿಕೆಯೋ? ಅವಳೊಳಗೂ ನಿನ್ನದೊಂದು ಹೂವರಳಿರುವ ಸುದ್ದಿ ತಿಳಿದಾಗ, ಆ ಮೊದಲ ಸಿನಿಮಾದಲ್ಲಿ ನಾಯಕ ಎತ್ತಿಕೊಂಡಂತೆಯೇ ಎತ್ತಿಕೊಳ್ಳಬೇಕಿನಿಸಿತಾ ಅಮ್ಮನನ್ನು?

ನಾನು ಹುಟ್ಟಿದಾಗ, ಯಾರೋ 'ಥೇಟ್ ಅಪ್ಪಂದೇ ಮುಖ' ಎಂದಾಗ, ಎಷ್ಟು ಅಪ್ಪ ಅಪ್ಪ ಅನ್ನಿಸಿರಬಹುದು ನಿನಗೆ.. ಮೊದಲ ಬಾರಿ ನಾನು 'ಪ್ಪ' ಅಂತ ತೊದಲಿದಾಗ ಹಿಗ್ಗಿ ಎಷ್ಟೆತ್ತರಕ್ಕೆ ಎತ್ತಿಕೊಂಡೆ ನನ್ನ? ನಿನಗಿಲ್ಲದಿದ್ದ ಸೌಭಾಗ್ಯವೆಲ್ಲ ನನಗೆ ದೊರಕಲಿ ಎಂದು ಎಲ್ಲೆಲ್ಲೋ ಸಾಲ ಮಾಡಿ ದುಡ್ಡು ಹೊಂದಿಸಿ ಯುನಿಫಾರಂ ಹೊಲಿಸಿ, ಜಾಮಿಟ್ರಿ ಬಾಕ್ಸ್ ಕೊಡಿಸಿ, ಶಾಲೆಗೆ ಸೇರಿಸಿದ ಶ್ರಮಕ್ಕೆ 'ನಿಮ್ ಮಗ ಓದೋದ್ರಲ್ಲಿ ಸಖತ್ ಜೋರಿದಾನೆ' ಎಂಬ ಟೀಚರ್ರ ಪ್ರಶಂಸೆ ಮತ್ತು ವರ್ಷದ ಕೊನೆಯ 'ಕ್ಲಾಸಿಗೇ ಫಸ್ಟ್' ಮಾರ್ಕ್ಸ್ ಕಾರ್ಡ್ ಸಾಟಿಯಾ? ಊಹೂಂ.. ನೀನು ನನಸು ಮಾಡಿಕೊಳ್ಳಲಾಗದ ಕನಸುಗಳನ್ನು ನನ್ನಲ್ಲಿ ಬಿತ್ತಿ ಚಿಗುರಿಸಿ ಅವು ಸಾಕಾರಗೊಳ್ಳುತ್ತಾ ಹೋಗುವುದನ್ನು ಕಂಡು ಖುಶಿಗೊಂಡೆಯಾ? ನನ್ನನ್ನು ಬೆಂಗಳೂರಿಗೆ ಕಳುಹಿಸುವಾಗ ನಿನಗಾದ ಕಳವಳವೆಷ್ಟು? 'ಕೆಲಸ ಸಿಗ್ತು' ಅಂತ ನಾ ಫೋನಲ್ಲಿ ತಿಳಿಸಿದಾಗ ನಿನಗಾದ ನಿರಾಳವೆಷ್ಟು? ನನ್ನ ಮೊದಲ ಕತೆ ಪ್ರಕಟವಾದಾಗ ಹೇಗೆ ಪ್ರತಿಕ್ರಿಯಿಸಿದೆ? ನನ್ನ ಮೊದಲ ಪುಸ್ತಕವನ್ನು 'ಮಗ ಬರ್ದಿದ್ದು' ಅಂತ ಎಷ್ಟು ಜನಕ್ಕೆ ತೋರಿಸಿದೆ?

ಅಮ್ಮಾ, ಹೊರಬೈಲಿನಿಂದ ಸೈಕಲ್ಲಿನಲ್ಲಿ ಬರುತ್ತಿದ್ದ ಅಪ್ಪ ದಾರಿಯಲ್ಲಿ ಎಚ್ಚರತಪ್ಪಿ ಬಿದ್ದಿದ್ದಾನೆ ಎಂಬ ಸುದ್ದಿ ಕೇಳಿ ಎಷ್ಟು ಜೋರಾಗಿ ಓಡಿದೆ ಅಲ್ಲಿಗೆ? ರಕ್ತ ಸೋರುವ ಅವನ ಹಣೆ ಕಂಡಾಗ ನಿನಗೂ ತಲೆಸುತ್ತಿ ಬಂತಲ್ಲ.. ಕೊಟ್ಟಿಗೆಮನೆಗೆ ಬೆಂಕಿ ಬಿದ್ದಾಗ ಮೊದಲು ಓಡಿ ದನಕರುಗಳ ಹಗ್ಗ ಕತ್ತರಿಸಿ ಅವನ್ನು ಹೊರಗೋಡಿಸಿ ಸಮಯಪ್ರಜ್ಞೆ ತೋರಿದ್ದೂ ನೀನೇ ಅಲ್ಲವಾ? ಅಜ್ಜಿ ಹಾಸಿಗೆ ಹಿಡಿದಾಗ ಅವಳ ಸೇವೆ ಮಾಡುವುದು ಸೊಸೆಯ ಕರ್ತವ್ಯ ಎಂಬಂತೆ ನಡೆದುಕೊಂಡೆಯಲ್ಲ.. ಅವಳು ತೀರಿಕೊಂಡಾಗ, ಇನ್ನು ನೀನೇ ಈ ಮನೆಯನ್ನು ಸಂಭಾಳಿಸಬೇಕು ಎಂಬ ಸತ್ಯವನ್ನು ಹೇಗೆ ಮನದಟ್ಟು ಮಾಡಿಕೊಂಡೆ? ಅಪ್ಪಾ, ಜೋರು ಜ್ವರ ಬಂದ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ತಾನೂ ಬರುತ್ತೇನೆಂದು ಅಂಜುಮೋರೆಯಲ್ಲಿ ಹೇಳಿದ ಅಮ್ಮನನ್ನು ಹೇಗೆ ಸಮಾಧಾನಿಸಿದೆ? ನೆಂಟರ ಮನೆ, ಯಕ್ಷಗಾನ ತಾಳಮದ್ದಲೆ, ಬೆಂಗಳೂರು -ಅಂತ ಎಲ್ಲೇ ಒಂದು ರಾತ್ರಿ ಹೊರಗೆ ಉಳಿಯಬೇಕಾದ ಸಂದರ್ಭ ಬಂದಾಗಲೂ ಅಮ್ಮನಿಗೆ ಫೋನ್ ಮಾಡಿ ತಿಳಿಸುವುದನ್ನು ಮರೆತೆಯಾ? ಒಮ್ಮೆಯಾದರೂ..?

ಕೆ‍ಎಸ್‍ನ ಬರೆದರು ಕವಿತೆ:

ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದು ಕನಸ ಕಂಡು
ಮಾತಿಗೊಲಿಯದಮೃತವುಂಡು
ದುಃಖ ಹಗುರವೆನುತಿರೆ,
ಪ್ರೇಮವೆನಲು ಹಾಸ್ಯವೇ?

ಇಪ್ಪತ್ತೈದು ವರ್ಷಗಳ ಹಿಂದೆ ಅಮ್ಮ ನಮ್ಮನೆಗೆ ಬಂದ ಹಾಗೇ, ಇವತ್ತು ಮತ್ತೊಬ್ಬಳು ಬಂದು ಸೇರಿದಳಂತೆ ನಮ್ಮನೆಗೆ.. ಹೆಸರು ಭಾಗ್ಯ.. ಅದು ಅಜ್ಜನ ಮನೆಯಿಂದ ನಮ್ಮನೆಗೆ ಬಂದ ದನವಿನ ಕರು.. ಈ ಇಪ್ಪತ್ತೈದು ವರ್ಷಗಳಲ್ಲಿ ನಮ್ಮಿಬ್ಬರ ಮನೆಗಳ ಮಧ್ಯೆ ಹೀಗೆ ಅದೇನೇನು ಬಂದು-ಹೋಗಿವೆಯೋ.. ವಿನಿಮಯಗಳಾಗಿವೆಯೋ.. ಪ್ರೀತಿಗೆ ಹೇಗೆ ಹಚ್ಚೋಣ ಲೆಕ್ಕ? ಮದುವೆಯೆಂಬುದು ಬರೀ ಒಂದು ಗಂಡು-ಹೆಣ್ಣಿನ ನಡುವಿನದಲ್ಲವಷ್ಟೇ? ದಾಂಪತ್ಯವೆಂಬುದು ಬಂಧವೇ ಆದರೂ ಅದರಲ್ಲಿ ಪ್ರೇಮವೊಂದು ಇದ್ದರೆ ಬಾಳೆಷ್ಟು ಸುಂದರ..

ಭಾಗ್ಯನನ್ನು ಮನೆತುಂಬಿಸಿಕೊಂಡ ಖುಶಿಯಲ್ಲಿದ್ದಾರೆ ಅಲ್ಲಿ ಅಮ್ಮ-ಅಪ್ಪ.. ಸುದ್ದಿ ಕೇಳಿದ ನನಗೂ ಏನೆಲ್ಲ ನೆನಪಾಗಿ ತುಂಬಿಬಂದಿದೆ ಮನಸು.. ಯಾಕೋ, ಕಣ್ಣೂ.

[15.03.2009; ಮಧ್ಯಾಹ್ನ 12:30]

Thursday, February 21, 2008

ಅಮ್ಮ ಬಂದಿದ್ದಳು..

ಅಮ್ಮ ಬಂದಿದ್ದಳು.

ಮಗನ ಪುಸ್ತಕ ಬಿಡುಗಡೆಯಾಗುತ್ತಿರುವುದು ಒಂದು ನೆಪವಾಗಿತ್ತಷ್ಟೇ. ಆದರೆ ಅವಳು ನಿಜವಾಗಿಯೂ ಬಂದದ್ದು ಬೆಂಗಳೂರು ನೋಡುವುದಕ್ಕೆ. ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಗಳೇ ಕಳೆದುಹೋಗಿದ್ದವು. ಮೊದಲೆರಡು ವರ್ಷ ಇದನ್ನು ಅರ್ಥ ಮಾಡಿಕೊಳ್ಳಲಿಕ್ಕೆ, ಇಲ್ಲಿ ಸೆಟಲ್ ಆಗಲಿಕ್ಕೇ ವ್ಯಯವಾಗಿಹೋಯಿತು. ಕಳೆದ ಒಂದು-ಒಂದೂ ವರೆ ವರ್ಷದಿಂದ ನಾನು ಅಮ್ಮನನ್ನು ಬೆಂಗಳೂರಿಗೆ ಬರುವಂತೆ ತುಂಬಾ ತುಂಬಾ ಕರೆಯುತ್ತಿದ್ದೆ. ಆದರೆ ಅವಳು ಮಳೆಗಾಲ, ಸುಗ್ಗಿ, ಅಜ್ಜಂಗೆ ಹುಷಾರಿಲ್ಲೆ, ಇತ್ಯಾದಿ ಏನೇನೋ ಕಾರಣವೊಡ್ಡಿ ಬರುವುದರಿಂದ ತಪ್ಪಿಸಿಕೊಳ್ಳುತ್ತಿದ್ದಳು. ಮುಂದಿನ ಬಾರಿ ಊರಿಗೆ ಹೋದಾಗ ಏನಾದರಾಗಲಿ, ಅಮ್ಮನನ್ನು ಕರೆದುಕೊಂಡೇ ಬರುವುದು ಅಂತಲೂ ಪ್ಲಾನ್ ಮಾಡಿದ್ದೆ. ಈ ಮಧ್ಯೆ ಪದೇ ಪದೇ ಮುಂದೂಡಲ್ಪಡುತ್ತಿದ್ದ ನಮ್ಮ ಪುಸ್ತಕ ಬಿಡುಗಡೆ ಸಮಾರಂಭ ಅಂತೂ ಫೆಬ್ರುವರಿ ಹತ್ತಕ್ಕೆ ಖಾಯಂ ಎಂದಾದಾಗ ನಾನು ಮನೆಗೆ ಫೋನ್ ಮಾಡಿದೆ. ಮೊದಲು ಅಪ್ಪ ತಾನೇ ಬರುವುದಾಗಿ ಹೇಳಿದ. ಆಮೇಲೆ ಬಹುಶಃ ಏನೇನೋ ಮಾಡಿ ಅಮ್ಮನಿಗೆ ಧೈರ್ಯ ತುಂಬಿ ಒಪ್ಪಿಸಿದ್ದಾನೆ. ನನ್ನ ಅಜ್ಜನ ಮನೆಯ ಊರಿನವರೊಬ್ಬರು ಬುಧವಾರ ರಾತ್ರಿ ಬೆಂಗಳೂರಿಗೆ ಹೊರಡುವವರಿದ್ದಾರೆ ಎಂಬ ಸುದ್ಧಿಯನ್ನು ಸಂಗ್ರಹಿಸಿದ್ದಾರೆ. ಅವರ ಜೊತೆಯೇ ಅಮ್ಮನೂ ಹೊರಡುವುದು ಎಂದು ತೀರ್ಮಾನವಾಗಿದೆ. ಆವೊತ್ತು ರಾತ್ರಿ ಅಮ್ಮ ಫೋನ್ ಮಾಡಿ ತಾನೇ ಬರುತ್ತಿರುವುದಾಗಿ ಘೋಷಿಸಿಬಿಟ್ಟಳು! ನನಗಾದ ಸಂಭ್ರಮ ಅಷ್ಟಿಷ್ಟಲ್ಲ.

ಆ ಭಾನುವಾರ ನಾನೂ ನನ್ನ ರೂಂಮೇಟೂ ಸೇರಿ ಇಡೀ ಮನೆಯನ್ನು ಗುಡಿಸಿ, ಸಾರಿಸಿ, ಫಿನಾಯಿಲ್ ಹಾಕಿ ತೊಳೆದು ಸ್ವಚ್ಚ ಮಾಡಿದೆವು. ಹೇಗ್‍ಹೇಗೋ ತುರುಕಿಟ್ಟಿದ್ದ ಬಟ್ಟೆಗಳನ್ನು ಚಂದ ಮಾಡಿ ಮಡಿಚಿ ಜೋಡಿಸಿಟ್ಟೆವು. ಅಂಡರ್‌ವೇರನ್ನು ಎಲ್ಲೆಂದರಲ್ಲಿ ನೇತುಹಾಕಿದರೆ ಕೊಲೆ ಮಾಡುವುದಾಗಿ ರೂಂಮೇಟಿಗೆ ಬೆದರಿಕೆ ಹಾಕಿದೆ. ಹಳೆಯ ನ್ಯೂಸ್‍ಪೇಪರುಗಳನ್ನು ಮಾರಿದೆವು. ನನ್ನ ಲೈಬ್ರರಿಯಲ್ಲಿ ಮನೆ ಮಾಡಿಕೊಂಡಿದ್ದ ಜಿರಲೆಗಳು ಸ್ವರ್ಗದ ದಾರಿ ಹಿಡಿದವು. ಗ್ಯಾಸ್ ಕಟ್ಟೆ ಫಳಫಳನೆ ಹೊಳೆಯಲಾರಂಭಿಸಿತು. ಅಮ್ಮನನ್ನು ಬರಮಾಡಿಕೊಳ್ಳಲಿಕ್ಕೆ ನಮ್ಮ ಮನೆ ಸಜ್ಜಾಗಿ ನಿಂತಿತು!

ಇನ್ನೂ ಬೆಂಗಳೂರಿಗೆ ಪೂರ್ತಿ ಎಚ್ಚರಾಗಿರಲಿಲ್ಲ. ನನ್ನ ಮೊಬೈಲು ರಿಂಗಾಯಿತು. ಹೊದಿಕೆಯೊಳಗೆಲ್ಲೋ ಹುದುಗಿದ್ದ ಕೈ ಹೊರಬಂದು ಶಬ್ದವನ್ನರಸಿ ಮೊಬೈಲನ್ನು ಹಿಡಿದು ಕಿವಿಯ ಬಳಿ ತಂದು ಆನ್ಸರ್ ಬಟನ್ನನ್ನು ಒತ್ತಿತು. "ಅಪ್ಪೀ, ನಾ ಬಂದು ಮುಟ್ಟಿದಿ! ಮೆಜೆಸ್ಟಿಕ್ಕಲ್ಲಿ ಅಮರ್ ಹೋಟ್ಲ್ ಹತ್ರ ಇದ್ದಿ. ಬರ್ತ್ಯಾ?" ಅಮ್ಮ! ನನ್ನ ಅಮ್ಮ! ಇಲ್ಲೇ, ಬಳಿಯ ಮೆಜೆಸ್ಟಿಕ್ಕಿನಿಂದ ಮಾತಾಡುತ್ತಿದ್ದಾಳೆ! ನಾನು ಹೌಹಾರಿ ಎದ್ದೆ. ದಡದಡನೆ ಹಾಸಿಗೆಯನ್ನು ಮಡಿಚಿಟ್ಟು, ಮುಖಕ್ಕೆ ನೀರು ಚುಮುಕಿಸಿಕೊಂಡು, ಕೈಗೆ ಸಿಕ್ಕಿದ ಒಂದು ಪ್ಯಾಂಟು ಸಿಕ್ಕಿಸಿಕೊಂಡು, ಗಾಡಿಯನ್ನು ಕಾಂಪೌಂಡಿನಿಂದ ಹೊರತಂದು ಹೊರಟೆ... ಮುಂಜಾನೆಯ ಗಾಳಿಯನ್ನು ಸುಯ್ಯನೆ ಸೀಳಿಕೊಂಡು ಓಡುತ್ತಿತ್ತು ಬೈಕು.. ಹತ್ತೇ ನಿಮಿಷದಲ್ಲಿ ಮೆಜೆಸ್ಟಿಕ್ಕಿನಲ್ಲಿದ್ದೆ. ಬೈಕು ಪಾರ್ಕ್ ಮಾಡಿ ಅಮರ್ ಹೋಟೆಲ್ ಬಳಿ ಬಂದರೆ ಅಲ್ಲಿ ನಿಂತಿದ್ದಳು ಅಮ್ಮ.. ನನ್ನ ಅಮ್ಮ.. ಮೆರೂನ್ ಬಣ್ಣದ ಸ್ವೆಟರ್ ಹಾಕಿಕೊಂಡಿದ್ದಳು. ದಾರಿತಪ್ಪಿದ ಬೆದರಿದ ಪುಟ್ಟ ಹಕ್ಕಿಯಂತೆ ಕಾಣುತ್ತಿದ್ದಳು. ನನ್ನ ಮುಖ ಕಾಣುತ್ತಿದ್ದಂತೆಯೇ "ಅದೇ! ಅಪ್ಪಿ ಬಂದ!" ಅಂತ ತನ್ನ ಪಕ್ಕದಲ್ಲಿದ್ದ ತವರೂರಿನ ಮಾಬ್ಲೇಶ್ವರಣ್ಣನಿಗೆ ತೋರಿಸಿದಳು. ನಾನು ಅಮ್ಮನ ಬಳಿ ಹೋದೆ. "ಬಸ್ಸಲ್ಲಿ ನಿದ್ದೆ ಬಂತಾ ಅಮಾ?" ಕೇಳಿದೆ. "ನಿದ್ಯಾ? ಒಂದು ನಿಮ್ಷ ಕಣ್ಮುಚ್ಚಿದ್ಲಾ ಕೇಳು ಅವ್ಳುನ್ನ! ಹೊಟ್ಟೆ ತೊಳುಸ್ತಿತ್ತಡ.. ರಾತ್ರಿಡೀ ಕಿಟಕಿ ಹೊರಗೆ ನೋಡ್ಕ್ಯೋತ್ ಕೂತಿದ್ದ. ನೀನು ವಾಪಾಸ್ ಹೋಗಕ್ಕರೆ ಬಲಬದಿ ಸೀಟಲ್ಲೆ ಕೂರ್‍ಸಿ ಕಳ್ಸು. ಈಗ ಹೆಂಗರು ಈ ಕಡೆ ಸೈಡ್ ಪೂರ್ತಿ ನೋಡ್‍ಕೈಂದ. ವಾಪಸ್ ಹೋಗಕ್ಕರೆ ಆ ಕಡೆನು ನೋಡ್ಲಿ!" ಮಾಬ್ಲೇಶ್ವರಣ್ಣ ಹೇಳಿದ. ನಾನು ಜೋರಾಗಿ ನಕ್ಕೆ. ಮೇಷ್ಟ್ರು, ಮನೆಯವರ ಬಳಿ ಕಂಪ್ಲೇಂಟ್ ಮಾಡುವಾಗ ಪಕ್ಕದಲ್ಲಿ ತಲೆ ತಗ್ಗಿಸಿ ನಿಂತಿರುವ ಶಾಲಾಬಾಲಕನಂತೆ ಅಮ್ಮ ಪೆಚ್ಚಾಗಿ ನಿಂತಿದ್ದಳು.

ಮಹಾಬಲೇಶ್ವರಣ್ಣನಿಗೆ ಥ್ಯಾಂಕ್ಸ್ ಹೇಳಿ, ವಾಪಸು ಹೋಗುವುದರೊಳಗೆ ನಮ್ಮನೆಗೊಮ್ಮೆ ಬಂದು ಹೋಗುವಂತೆ ಕರೆದು, ಅಮ್ಮನ ದೊಡ್ಡ-ವಜ್ಜೆ ಏರ್‌ಬ್ಯಾಗನ್ನು ತೆಗೆದುಕೊಂಡೆ. ಅಮ್ಮ ನನ್ನ ಹಿಂದೆಯೇ ಬಂದಳು. ನನ್ನ ಹೊಸ ಬೈಕು ಹತ್ತುವಾಗ "ಇದು ಅಪ್ಪನ್ ಬೈಕ್ ತರ ಇಲ್ಲೆ, ಸಿಕ್ಕಾಪಟ್ಟೆ ಎತ್ತರ" ಎಂದಳು. ಲೇಡೀಸ್ ಹ್ಯಾಂಡ್ ಇಲ್ಲದ್ದರಿಂದ ಎಲ್ಲಿ ಹಿಡಕೊಳ್ಳುವುದು ಅಂತ ಗೊಂದಲಕ್ಕೆ ಬಿದ್ದಳು. ನನ್ನ ಹೆಗಲನ್ನೆ ಹಿಡಕೋ ಎಂದೆ. "ನಿಧಾನ ಓಡ್ಸು" ಎಂದಳು. ಬ್ಯಾಗನ್ನು ಪೆಟ್ರೋಲ್ ಟ್ಯಾಂಕಿನ ಮೇಲಿಟ್ಟುಕೊಂಡು ನಿಧಾನವಾಗಿ ಹೊರಟರೆ ಇನ್ನೂ ಶುರುವೇ ಆಗದಿದ್ದ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಬೈಕು ಓಡುವಾಗ ಅಮ್ಮ ಹಿಂದೆ ಕಣ್ಮುಚ್ಚಿ ಕೂತಿದ್ದಳು.

ಅಮ್ಮನಿಗೆ ಮನೆ ತೋರಿಸಿದೆ. ಕಾಯ್ಲ್ ಹಾಕಿ ನೀರು ಕಾಯಿಸುವುದನ್ನು ಹೇಳಿಕೊಟ್ಟೆ. ಕಾಫಿಪುಡಿ ಯಾವ ಡಬ್ಬಿಯಲ್ಲಿದೆ ಎಂದು ತೋರಿಸಿಕೊಟ್ಟೆ. ಈಳಿಗೆ ಮಣೆ ಇಲ್ಲದೆ ಚಾಕುವಿನಲ್ಲಿ ತರಕಾರಿ ಹೆಚ್ಚಲು ಹೆದರಿದ್ದಕ್ಕೆ ನಾನೇ ಹೆಚ್ಚಿಕೊಟ್ಟೆ. ಅಮ್ಮ ಊರಿಂದ ಕೊಬ್ರಿ ಮಿಠಾಯಿ ಮಾಡಿಕೊಂಡು ಬಂದಿದ್ದಳು. ನೆಲ್ಲಿಸಟ್ಟು ತಂದಿದ್ದಳು. ಹಲಸಿನ ಹಪ್ಪಳ ತಂದಿದ್ದಳು. 'ಓಹೋ! ಮಗನ ಮನೇಲಿ ಅಡುಗೆ-ಗಿಡುಗೆ ಮಾಡಿಕೊಂಡು ಹದಿನೈದು ದಿನ ಇದ್ದು ಹೋಗಿ..' ಎಂದ ಓನರ್ರಿಗೆ 'ಇಲ್ಲ, ನಮ್ಮ ಮಾವನವ್ರಿಗೆ ಅರಾಮಿರಲ್ಲ.. ಒಂದು ವಾರ ಅಷ್ಟೇ. ಹೋಗ್ಬೇಕು ಊರಿಗೆ' ಎಂದಳು ಅಮ್ಮ.

ಪುಸ್ತಕ ಬಿಡುಗಡೆಯಲ್ಲಿ ನಾನು ಮಾತಾಡಿದ್ದು ನೋಡಿ ಅಮ್ಮ ಖುಷಿಯಾಗಿದ್ದಳು. ಮನೆಗೆ ಫೋನ್ ಮಾಡಿದ್ದಾಗ ಅಪ್ಪನ ಬಳಿ 'ಅಪ್ಪಿ ಚನಾಗ್ ಮಾತಾಡಿದ.. ನಾ ಅಂವ ಮಾತಾಡಿದ್ದೇ ನೋಡಿರ್ಲೆ' ಅಂದಳು. ಅಮ್ಮನನ್ನು ಬೆಂಗಳೂರಿನ ನೆಂಟರ ಮನೆಗಳಿಗೆ ಕರೆದೊಯ್ದೆ. ಸಿಗ್ನಲ್ಲುಗಳಲ್ಲಿ ರಸ್ತೆ ದಾಟುವುದು ಹೇಗೆ ಎಂದು ಹೇಳಿಕೊಟ್ಟೆ. ಅಜ್ಜನ ಮನೆಗೆ ಹೋಗುವಾಗ ನನ್ನ ಕೈ ಹಿಡಕೊಂಡು 'ಎರಡೂ ಕಡೆ ನೋಡ್ಕ್ಯಂಡು ದಾಟವು' ಎನ್ನುತ್ತಾ ಸಾಗರದಲ್ಲಿ ರಸ್ತೆ ದಾಟಿಸುತ್ತಿದ್ದ ಅಮ್ಮನ ನೆನಪಿನ ಚಿತ್ರವನ್ನು ಕಣ್ಮುಂದಿಟ್ಟುಕೊಂಡು, ಈ ಬಾರಿ ನಾನು ಅಮ್ಮನ ಕೈಹಿಡಿದು ರಸ್ತೆ ದಾಟಿಸಿದೆ. ಮೆಜೆಸ್ಟಿಕ್ಕಿನ ಫ್ಲೈಓವರ್ರಿನ ಮೇಲ್ಗಡೆ ನಿಲ್ಲಿಸಿಕೊಂಡು 'ಈ ಕಡೆ ಸಿಟಿ ಬಸ್‍ಸ್ಟ್ಯಾಂಡು, ಆ ಕಡೆ ಕೆ.ಎಸ್.ಆರ್.ಟಿ.ಸಿ ಬಸ್‍ಸ್ಟ್ಯಾಂಡು, ಹೀಗೇ ಹೋದ್ರೆ ರೈಲ್ವೇ ಸ್ಟೇಶನ್ನು, ಆ ಕಡೆ ಗಾಂಧಿನಗರ' ಅಂತ ತೋರಿಸಿದೆ. ಸಿಗ್ಮಾ ಮಾಲ್‍ಗೆ ಕರೆದುಕೊಂಡು ಹೋಗಿ ಎಸ್ಕಲೇಟರ್ ಬಳಿ ಹೋಗಿ ನಿಂತರೆ ಹೆದರಿಕೊಂಡು ನಿಂತುಬಿಟ್ಟಳು. ಹತ್ತೋದೇ ಇಲ್ಲ ಎಂದಳು. ಕೈ ಹಿಡಿದುಕೊಂಡು 'ನೋಡೂ, ಹೀಗೆ ಮೆಟ್ಲು ಬರ್ತಿದ್ದಂಗೆ ಎರಡೂ ಹೆಜ್ಜೆನೂ ಇಟ್ಬಿಡು, ತಂತಾನೇ ಮೇಲೆ ಹೋಗ್ತು.. ಹೆದ್ರಡ' ಎಂದೆ. ಮೆಟ್ಟಿಲು ಮೇಲೇರುತ್ತಿದ್ದಾಗ ಅವಳ ಎದೆ ಡವಗುಟ್ಟುತ್ತಿದ್ದುದು ನಡುಗುತ್ತಿದ್ದ ಕೈಯಿಂದಲೇ ಗೊತ್ತಾಗುತ್ತಿತ್ತು. ಬಿಗ್ ಬಜಾರಿನಲ್ಲಿ ಶಾಪಿಂಗ್ ಮಾಡೋದು ಎಂದರೆ ಹೇಗೆ ಅಂತ ತೋರಿಸಿದೆ. 'ಶೆಟ್ರ್ ಅಂಗಡೀಲಿ ಪಟ್ಟಿ ಹಿಡ್ಕಂಡ್ ಸಾಮಾನ್ ಹಾಕ್ಸೋ ರಗಳೇನೆ ಇಲ್ಲೆ.. ನಮ್ಗೇನು ಬೇಕೋ ಎಲ್ಲ ಈ ಗಾಡಿಲಿ ಇಟ್ಕಂಡು ಹೋಗಿ ಲಾಸ್ಟಿಗೆ ಬಿಲ್ ಮಾಡ್ಸಿದ್ರೆ ಆತು.. ದುಡ್ ಕೊಡೋದೂ ಬ್ಯಾಡ; ಕಾರ್ಡ್ ಕೊಟ್ರೆ ಸಾಕು' ಎಂದೆ.

ಪುಟ್ಟ ತಳ್ಳುಗಾಡಿಯಂತಹ ಅಂಗಡಿಯಲ್ಲಿ ಟೋಪಿ ಹಾಕಿಕೊಂಡವನೊಬ್ಬ ಏನೋ ಮಾರುತ್ತಿದ್ದುದನ್ನು ನೋಡಿ 'ಅದೇನು?' ಅಂದಳು. 'ಅದು ಸ್ವೀಟ್ ಕಾರ್ನ್' ಎಂದು ಹೇಳಿ, ಒಂದು ರೆಗ್ಯುಲರ್ ಕಪ್ ತಗೊಂಡು ತಿನ್ನಿಸಿದೆ. 'ಇಷ್ಟು ಸಣ್ಣ ಲೋಟಕ್ಕೆ ನಲ್ವತ್ತು ರೂಪಾಯಿಯಾ? ಎಂಥಿದ್ದು ಇದ್ರಲ್ಲಿ? ಸುಮ್ನೆ ದುಡ್ ದಂಡ' ಎಂದಳು. ಗುಂಡಿ ಒತ್ತಿ ಲಿಫ್ಟ್‍ಗೆ ಕಾಯತೊಡಗಿದೆ. ಬಾಗಿಲು ತೆರೆದುಕೊಂಡಕೂಡಲೇ ಒಳನುಗ್ಗಿ ಅಮ್ಮನನ್ನು 'ಬಾ' ಅಂತ ಒಳಗೆಳೆದುಕೊಂಡೆ. ತಕ್ಷಣ ಬಾಗಿಲು ಮುಚ್ಚಿಕೊಂಡು ನಾವು ಕೆಳಹೋಗತೊಡಗಿದಾಗ ಅಮ್ಮನ ಕೈಯಲ್ಲಿದ್ದ ಸ್ವೀಟ್‍ಕಾರ್ನ್ ಕಪ್ಪು ಬೀಳುವಂತಾಗಿ 'ಅಯ್ಯೋ ಇದೆಂಥಾತು?' ಎಂದಳು. 'ನಾವೀಗ ಲಿಫ್ಟಲ್ಲಿದ್ದು! ಕೆಳಗಡೆ ಹೋಗ್ತಾ ಇದ್ದು' ಎಂದೆ. ಅಮ್ಮ ಕಂಗಾಲಾದಳು. 'ನಾನು ಎಸ್.ಟಿ.ಡಿ. ಬೂತ್ ಒಳಗೆ ಕರ್ಕಂಡ್ ಬಂದೆ ಅಂದ್ಕಂಡಿ' ಎಂದಳು.

ಅಮ್ಮನ ಕಣ್ಗಳೊಳಗೆ ವಿಧಾನಸೌಧ ಪ್ರತಿಫಲಿಸುತ್ತಿದ್ದಾಗ 'ಇಲ್ಲೇ ನೋಡು.. ನಮ್ಮ ಮಂತ್ರಿಗಳೆಲ್ಲ ಕೂತು ದಾದಾಗಿರಿ ಮಾಡೋದು' ಎಂದು ನಕ್ಕೆ. ಅಕ್ಕಪಕ್ಕದವರೆಲ್ಲ ನಮ್ಮನ್ನೇ ನೋಡಿದರು. ಆಮೇಲವಳನ್ನು ಕರೆದುಕೊಂಡು ಹೈಕೋರ್ಟಿನ ಕೆಂಪು ತೋರಿಸುತ್ತಾ ಕಬ್ಬನ್ ಪಾರ್ಕಿನ ಹಸಿರಿನೊಳಗೆ ನುಗ್ಗಿದೆ. 'ಇಲ್ಲೆಂತ ಮರಗಿಡ ನೋಡದು! ನಮ್ಮೂರ್ ಕಾಡು ಇದ್ರಕಿಂತ ಎಷ್ಟೋ ಚೊಲೋ ಇದ್ದು. ನೆಡಿ ಹೋಪನ!' ಎಂದಳು. ಇದ್ದುದರಲ್ಲೇ ಲಾಲ್‍ಭಾಗಿನ ಹೂಗಿಡಗಳು ಅವಳಿಗೆ ಇಷ್ಟವಾಯಿತು. ಗುಲಾಬಿ ತೋಟ ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡಳು. ಯಾವುದೋ ಹೂವು ನೋಡುತ್ತ 'ಇದ್ರದ್ದೊಂದು ಹೆರೆ ಕೊಡ್ತಿದ್ವೇನ.. ನಮ್ಮನೆ ಅಂಗಳದಲ್ಲಿ ಇಲ್ಲೇ ಇಲ್ಲೆ ಈ ಥರದ್ದು' ಎಂದಳು. ಒಳ್ಳೆಯದೊಂದು ಹೋಟೆಲ್ಲಿಗೆ ಕರೆದೊಯ್ದು ಊಟ ಮಾಡಿಸಿದೆ. ಫಿಂಗರ್ ಬೌಲ್‍ನಲ್ಲಿ ಕೈ ತೊಳೆದದ್ದು ಸರಿಯಾಗದೆ ವಾಶ್ ಬೇಸಿನ್ ಬಳಿ ಹೋದಳು. ಅದೇ ಸಂದರ್ಭದಲ್ಲಿ ನಾನು ಅವಳಿಗೆ ಕಾಣದಂತೆ ಬಿಲ್ ದುಡ್ಡು ಕೊಟ್ಟೆ. ಬೆಂಗಳೂರಿನ ಟ್ರಾಫಿಕ್ಕಿಗಾದರೂ ಅವಳು ಹೆದರಿದಳೋ ಇಲ್ಲವೋ, ಆದರೆ ಇಸ್ಕಾನಿನ ಬಂಗಾರದ ಶೋಕೇಸಿನೊಳಗಿನ ಕೃಷ್ಣಾರಾಧೆಯರೆದುರು ಮಾತ್ರ ಅಮ್ಮ ಕೈಮುಗಿಯುವುದನ್ನೂ ಮರೆತು ಸುಮ್ಮನೆ ನೋಡುತ್ತ ನಿಂತುಬಿಟ್ಟಳು. ನನಗಂತೂ ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ'ದ ಅಮ್ಮನೇ ನನ್ನ ಅಮ್ಮನಲ್ಲಿ ಕಾಣುತ್ತಿದ್ದಳು. ಎಲ್ಲ ಅಮ್ಮಂದಿರೂ ಹೀಗೇನೇನೋ ಅಂದುಕೊಂಡೆ.

ಒಂದು ದಿನ ಮಾತ್ರ ಅಮ್ಮನನ್ನು ಮನೆಯಲ್ಲಿ ಒಬ್ಬಳನ್ನೇ ಬಿಟ್ಟು ಆಫೀಸಿಗೆ ಹೋಗಿದ್ದೆ. ವಾಪಸು ಬರುವ ಹೊತ್ತಿಗೆ, ನನ್ನ ತೊಳೆಯಬೇಕಿದ್ದ ಬಟ್ಟೆಗಳನ್ನೆಲ್ಲ ತೊಳೆದುಹಾಕಿ, ಸಾಂಬಾರು ಬಟ್ಟಲಿನ ಖಾಲಿ ಹೊಡೆಯುತ್ತಿದ್ದ ಕುಳಿಗಳೊಳಗೆ ಎಲ್ಲವನ್ನೂ ಮಟ್ಟಸವಾಗಿ ತುಂಬಿಸಿಟ್ಟು, ನನ್ನ ಬಾಚಣಿಗೆಯಲ್ಲಿ ಸಿಕ್ಕಿಕೊಂಡಿದ್ದ ಕಸವನ್ನೆಲ್ಲ ಚೊಕ್ಕ ಮಾಡುತ್ತ ಕೂತಿದ್ದಳು. 'ಅಮ್ಮಾ ಎಂಥಕಮ್ಮ ಇದ್ನೆಲ್ಲ ಮಾಡಕ್ ಹೋದೆ.. ಒಂದು ದಿನ ಆರಾಮಾಗಿ ಮನೇಲಿರು ಅಂತ ಬಿಟ್ಟಿಕ್ ಹೋಗಿದ್ದಲ್ದಾ?' ಎಂದು ನಾನು ಸಿಡಿಗುಟ್ಟಿದರೆ, 'ಮನೇಲಿ ಸುಮ್ನೆ ಕೂತ್ಕಂಡು ಎಂಥ ಮಾಡ್ಲಾ ನಾನು? ಬೇಜಾರ್ ಬಂದುಹೋಗ್ತು.. ಊರಲ್ಲಾದ್ರೆ ಅಡಕೆ ಸುಲಿಯಕ್ಕೆ ಹೋಗ್ಲಕ್ಕು, ತೋಟಕ್ ಹೋಗಿ ಬರ್ಲಕ್ಕು, ಹಿತ್ಲಿಗೆ ಹೋಗಿ ಗೇರ್‌ಪೀಠ ಹೆಕ್ಲಕ್ಕು, ಕೊಟ್ಟಿಗೆ ಕೆಲಸ ಇರ್ತು.... ಇಲ್ಲಿ ಎಂತೆಂತು ಕೆಲ್ಸಿಲ್ಲೆ! ಅಕ್ಕಪಕ್ಕದ ಮನೆಯವ್ರು ಯಾರಾದ್ರೂ ಮಾತಾಡಕ್ಕೆ ಬರ್ತ್ವನ ಅಂದ್ರೆ ಅದೂ ಇಲ್ಲೆ.. ಇದೆಂಥ ಬೆಂಗ್ಳೂರೇನ!' ಎಂದಳು ಅಮ್ಮ. 'ಅದ್ಕೇನಮ್ಮ, ಇಲ್ಲಿ ಹೆಂಗಸ್ರು ಗಂಡಸ್ರು ಎಲ್ಲಾ ಕೆಲಸಕ್ಕೆ ಹೋಗ್ತ' ಎಂದೆ. 'ಹೂಂ, ಹೌದಪ್ಪಾ.. ನೀನೂ ಕೆಲ್ಸಕ್ಕೆ ಹೋಗೋ ಹುಡುಗೀನೇ ಮದುವೆ ಮಾಡ್ಕ್ಯ! ಅದಿಲ್ಲೇಂದ್ರೆ ನನ್ ಸೊಸಿಗೆ ಮನೇಲ್ ಕೂತ್ಗಂಡು ಹುಚ್ ಹಿಡಿತು ಅಷ್ಟೇ!' ಎಂದಳು. ಅಷ್ಟೊತ್ತಿಗೆ ಮೊಬೈಲು ಪೀಂಗುಟ್ಟಿತು. 'ಅತ್ಗೇನ ಅಮ್ಮಂಗೆ ಪರಿಚಯ ಮಾಡ್ಸಿಕೊಟ್ಯಾ?' ಅಂತ ಮಧು ಎಸ್ಸೆಮ್ಮೆಸ್ ಮಾಡಿದ್ದ. ಸುಮ್ನೇ ಒಂದು ಸ್ಮೈಲೀ ಹಾಕಿ ರಿಪ್ಲೇ ಮಾಡಿದೆ.

ಚಿಕ್ಕಪೇಟೆಯ ಸ್ಯಾರಿ ಸೆಂಟರೊಂದಕ್ಕೆ ಕರೆದೊಯ್ದು ಅಮ್ಮನಿಗೆ ಸೀರೆ ಕೊಡಿಸಿದೆ. 'ಅದು ಚನಾಗಿಲ್ಲೆ, ಇದು ಚನಾಗಿಲ್ಲೆ, ಇದ್ನ ತಗಂಡ್ ಹೋದ್ರೆ ವೀಣತ್ತೆ ಎಂತ ಹೇಳ್ತ್ಲೇನ, ಮಡಿ ಸೀರೆ ಥರ ಕಾಣ್ತು ಅನ್ಸ್ತು, ಇದು ಪ್ಯೂರ್ ರೇಶ್ಮೆ ಹೌದಾ ಅಲ್ದಾ, ಇಷ್ಟೆಲ್ಲ ರೇಟ್ ಕೊಟ್ಟು ಇಲ್ಲಿ ತಗಳಕ್ಕಿಂತ ಸಾಗರದಲ್ಲಿ ತಗಂಡ್ರ್‍ಏ ಚೀಪಾಗ್ತು' ಎಂದೇನೇನೋ ಗೊಣಗುತ್ತಲೇ ಅಂತೂ ಅಮ್ಮ ಒಂದು ಸೀರೆ ಕೊಂಡಳು. ಮನೆಗೆ ಬಂದಮೇಲೂ ಅದನ್ನು ನಾಕ್ನಾಕು ಬಾರಿ ತೆರೆದು ನೋಡಿ ಸವರಿ 'ಚನಾಗಿದ್ದು ಅಲ್ದನಾ?' ಎಂದು ಕೇಳಿದಳು. 'ಹೈಕ್ಲಾಸ್ ಇದ್ದು ಬಿಡು ಚಿಕ್ಕೀ' ಎಂದು ನನ್ನ ರೂಂಮೇಟೂ ಶಿಫಾರಸು ಮಾಡಿದಮೇಲೇ ಅವಳಿಗೆ ಸ್ವಲ್ಪ ಸಮಾಧಾನ ಆಗಿದ್ದು!

ಅಮ್ಮನನ್ನು ವಾಪಸು ಕಳುಹಿಸಿಕೊಡಲಿಕ್ಕೆ ನನ್ನ ಮನಸಿನ್ನೂ ತಯಾರಾಗಿರಲೇ ಇಲ್ಲ. ಆದರೆ ಆಗಲೇ ವಾರವಾಗಿಬಿಟ್ಟಿತ್ತು. ಅಜ್ಜನನ್ನು ನೋಡಿಕೊಳ್ಳುವುದಕ್ಕೆ ಮತ್ತು ಅಡುಗೆ ಮಾಡಿ ಹಾಕಲಿಕ್ಕೆಂದು ಮನೆಗೆ ಬಂದಿದ್ದ ವೀಣತ್ತೆ ತಾನು ನಾಳೆ ವಾಪಸು ಹೋಗುತ್ತಿರುವುದಾಗಿ ಹೇಳಿದಳು ಫೋನಿನಲ್ಲಿ. ಅಮ್ಮ ಇವತ್ತು ರಾತ್ರಿ ಹೊರಡಲೇಬೇಕಿತ್ತು. ಗಜಾನನ ಬಸ್ಸು ಬಂದು, ಏರ್‌ಬ್ಯಾಗನ್ನು ಡಿಕ್ಕಿಯಲ್ಲಿರಿಸಿ, ಅಮ್ಮನನ್ನು ಹತ್ತಿಸಿ, ಪುಶ್‍ಬ್ಯಾಕ್ ಸೀಟನ್ನು ಹಿಂದೆ ಮಾಡಿಕೊಟ್ಟು ಕೂರಿಸಿ, ವಾಂತಿ ಬಂದರೆ ಕವರಿನಲ್ಲಿಯೇ ಮಾಡುವಂತೆ ಹೇಳಿ, ಹೋಗ್ಬಾ ಎಂದು ನಾನು ಕೆಳಗಿಳಿದೆ. ಬಸ್ಸು ಹೊರಟು ನಾನು ಕೈ ಬೀಸುವಾಗ ಯಾವ್ಯಾವುದೋ ಸಿನೆಮಾಗಳ ಇಂಥದೇ ಸೀನುಗಳೆಲ್ಲ ಕಣ್ಮುಂದೆ ಬಂದು ನಿಂತಿದ್ದವು. ಆದರೆ ಕಣ್ಣು ತುಂಬಿಕೊಂಡಿದ್ದರಿಂದ ಅವು ಸರಿಯಾಗಿ ಕಾಣುತ್ತಿರಲಿಲ್ಲ.

ಬೆಳಗ್ಗೆ ಎಂಟೂವರೆಗೆ ಮನೆಗೆ ಫೋನ್ ಮಾಡಿದರೆ ಅಜ್ಜ ಎತ್ತಿಕೊಂಡು 'ಅಪ್ಪ ಕರ್ಕಂಬರಕ್ಕೆ ಬಸ್‍ಸ್ಟ್ಯಾಂಡಿಗೆ ಹೋಯ್ದ.. ಈಗ ಹೋತು ಕಾಣ್ತು ಪಾಳಾ ಬಸ್ಸು.. ಅದೇ ಅಲ್ಲಿ ಡಾಕ್ಟ್ರು ಮನೆ ಹತ್ರ ಬರ್ತಾ ಇದ್ದಂಗೆ ಕಾಣ್ತಪ' ಎಂದ. ಏರ್‌ಬ್ಯಾಗ್ ಹಿಡಿದ ಅಪ್ಪನ ಪಕ್ಕ ಅಮ್ಮ ನಿಧಾನವಾಗಿ ನಡೆದುಕೊಂಡು, ಎದುರಿಗೆ ಸಿಕ್ಕಿ 'ಓಹೋಹೋಹೋ! ಬೆಂಗ್ಳೂರಿಗ್ ಹೋಗ್ಬಂದಾತಾ ಸವಾರಿ?' ಎಂದು ಕೇಳಿರಬಹುದಾದ ಸರೋಜಕ್ಕನಿಗೆ ಬೆಂಗಳೂರಿನ ಕಥೆಯನ್ನೆಲ್ಲ ಹೇಳುತ್ತ, ಆಮೇಲೆ ರತ್ನಾವತಿ ಚಿಕ್ಕಿ ಒತ್ತಾಯ ಮಾಡಿದಳು ಅಂತ ಹಾಗೇ ಅವಳ ಮನೆ ಹೊಕ್ಕು ಮಗ ಕೊಡಿಸಿದ ರೇಶ್ಮೆ ಸೀರೆ ತೋರಿಸಿ, ಚಂದ್ರಕ್ಕನ ಮನೆ ಹುಡುಗ್ರಿಗೆ ಸ್ವೀಟ್ಸ್ ಕೊಟ್ಟು... ಎಲ್ಲಾ ಮಾಡಿಕೊಂಡು ಅಮ್ಮ ಮನೆ ಮುಟ್ಟುವ ಹೊತ್ತಿಗೆ ಇನ್ನೂ ಅರ್ಧ ತಾಸಾದರೂ ಬೇಕು ಬಿಡು ಎಂದುಕೊಳ್ಳುತ್ತಾ 'ಸರಿ ಹಂಗಾದ್ರೆ, ಅಮ್ಮನ ಹತ್ರ ಸಂಜೆ ಫೋನ್ ಮಾಡಕ್ ಹೇಳು' ಎಂದು ಅಜ್ಜನಿಗೆ ಹೇಳಿ ಫೋನಿಟ್ಟೆ. ಆಫೀಸಿಗೆ ಹೊರಡಲು ತಯಾರಾಗತೊಡಗಿದೆ. ಮನೆ ಮತ್ತು ಮನ ಎರಡೂ ಬಿಕೋ ಎನ್ನುತ್ತಿದ್ದವು.

Monday, November 13, 2006

ಒಂದು ಹುಟ್ಟು, ಒಂದು ಮದುವೆ ಮತ್ತು ಒಂದು ಸಾವು..

"ಚೆಲುವ ಬಿದಿರ ತೊಟ್ಟಿಲಲ್ಲಿ
ನಗುವ ಮಗುವ ಕಂಡೆ"

ಅಂತ ಬರೆದರು ಕೆ‍ಎಸ್‍ನ. ಮೊನ್ನೆ ನಮ್ಮ ಬಾಸ್‍ ತಂದೆಯಾದರು. ಮಗುವನ್ನು ನೋಡಿಕೊಂಡುಬರಲು ನಾನು ನನ್ನ colleagues ಜೊತೆ ಆಸ್ಪತ್ರೆಗೆ ಹೋಗಿದ್ದೆ. ಬಾಸ್ ತುಂಬಾ ಖುಷಿಯಲ್ಲಿದ್ದರು. ಸ್ವೀಟ್ ಕೊಟ್ಟರು. ನಾನು ಇದೇ ಸಂದರ್ಭ ಅಂತ 'ಸರ್, ಸ್ವೀಟ್ ಸಾಕಾಗಲ್ಲ, ಟ್ರೀಟ್ ಬೇಕು' ಅಂದೆ. 'ಓ, ಅದಕ್ಕೇನಂತೆ, ಕೊಡುಸ್ತೀನಿ' ಅಂದ್ರು. ಬೆಡ್ಡಿನಲ್ಲಿ ಮಲಗಿದ್ದ ಬಾಸ್-ಮಿಸ್ಸಸ್‍ಗೆ ಕಂಗ್ರಾಟ್ಸ್ ಹೇಳಿದೆ. ತೊಟ್ಟಿಲಲ್ಲಿ ಮಗು ನಿದ್ದೆ ಹೋಗಿತ್ತು. 'ಯಾರ ಹಾಗಿದಾಳಪ್ಪ?' ಅಂದ್ರು ಬಾಸ್ ಅತ್ತೆ. ಹೆಚ್ಚೆಸ್ವಿ ತಮ್ಮ ಮೊಮ್ಮೊಗಳ ಕುರಿತು ಬರೆದ 'ಸೋನಿ ಪದ್ಯಗಳು' ನೆನಪಾಗುತ್ತಿತ್ತು ನನಗೆ...


***

ಮೊನ್ನೆ ಸಿಂಧು ಅಕ್ಕನ ಮದುವೆಯ receptionಗೆ ಹೋಗಿದ್ದೆ. ತನ್ನನ್ನು ತಾನೇ 'ಅಕ್ಕ' ಅಂತ ಕರೆದುಕೊಂಡ ಮಹಾದೇವಿ ಈಕೆ! ಮದುವೆಗೆ ನನ್ನ ಪ್ರೀತಿಯ ಲೇಖಕ ಜಯಂತ ಕಾಯ್ಕಿಣಿ ಬಂದಿದ್ದರು. ಊಟದ ಸಮಯದಲ್ಲಿ ಜಯಂತ್ ಮಾತಿಗೆ ಸಿಕ್ಕಿದರು. ಈ ಮೊದಲು ಒಮ್ಮೆ ಸಪ್ನಾ ಬುಕ್‍ಹೌಸ್‍ನಲ್ಲಿ ಜಯಂತ್ ಸಿಕ್ಕಿದ್ದರು. ಅದನ್ನು ನೆನಪಿಸಿ, 'ನಾನು..ಸುಶ್ರುತ.. ಅವತ್ತು ಸಪ್ನಾದಲ್ಲಿ ಸಿಕ್ಕಿದ್ನಲ್ಲ...' ಅಂದೆ. 'ಓಹ್, ಹೌದು, ಕರೆಕ್ಟ್!' ಅಂದ್ರು. (ನಿಜವಾಗ್ಯೂ ನೆನಪಾಯ್ತೋ ಸುಳ್ಳೇ ಹೂಂ ಅಂದ್ರೋ ನಂಗಂತೂ ಡೌಟು!). ಕೊನೆಗೆ ಜಯಂತ್ ಜೊತೆಯೇ ತುಂಬಾ ಹೊತ್ತು ಮಾತಾಡಿದೆ. 'ಸರ್ ನೀವು ನಮಗೆ continuous ಆಗಿ ಓದ್ಲಿಕ್ಕೆ ಸಿಗ್ಬೇಕು, ಯಾವ್ದಾದ್ರೂ ಪತ್ರಿಕೆಗೆ ಬರೀರಿ' ಅಂದೆ. 'ಸಧ್ಯದಲ್ಲೇ ಪ್ರಜಾವಾಣಿಗೆ ಬರೀತೀನಿ. ಡಾ| ರಾಜಕುಮಾರ್ ಬಗ್ಗೆ 'ನಮಸ್ಕಾರ' ಸರಣಿಯಲ್ಲಿ ಈಟೀವಿಯಲ್ಲಿ ನಾಡಿದ್ದು ಭಾನುವಾರದಿಂದ ನನ್ನ ಪ್ರೋಗ್ರಾಮ್ ಒಂದು ಬರುತ್ತೆ, ನೋಡಿ' ಅಂದರು. ಅದೂ ಇದು ಮಾತಾಡಿದ್ವಿ.

ಅಕ್ಕನ ಮದುವೆಯ reception hallನಲ್ಲಿ ಕೇಳಿಬರುತ್ತಿದ್ದ 'ಮೈಸೂರು ಮಲ್ಲಿಗೆ' ಮತ್ತಿತರ ಭಾವಗೀತೆಗಳು ಕಿವಿಗಿಂಪಾಗಿದ್ದವು. ಅಕ್ಕನಿಗೆ ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ಪುಸ್ತಕವನ್ನು present ಮಾಡಿದೆ.


***

ಮೊನ್ನೆ Bangalore Book Fairನಿಂದ ಒಂದಷ್ಟು ಪುಸ್ತಕಗಳನ್ನು ಕೊಂಡುತಂದೆ. ತಂದ ಪುಸ್ತಕಗಳಿಗೆಲ್ಲ ಬೈಂಡ್ ಹಾಕಿ, ಮೇಲೆ ಹೆಸರು ಬರೆದು ಇಡುವುದು ನನ್ನ ರೂಢಿ. ನಿನ್ನೆ ಹಾಗೇ ಹೆಸರು ಬರೆಯುತ್ತಾ ಕೂತಿದ್ದೆ. ಅಷ್ಟರಲ್ಲಿ ನಮ್ಮ ಕೆಳಗಡೆ ಮನೆಯ ಆಂಟಿ 'ಸುಪ್ರೇಶ್' ಅಂತ ಕರೆದರು. ಅವರು ನನ್ನನ್ನು ಕರೆಯುವುದೇ ಹಾಗೆ. ನಾನೂ ಅದನ್ನು rectify ಮಾಡಲು ಹೋಗಿಲ್ಲ. ಏಕೆಂದರೆ 'ಸುಶ್ರುತ' ಎಂಬ ನನ್ನ ಹೆಸರನ್ನು ಸರಿಯಾಗಿ ಕರೆಯುವವರ ಸಂಖ್ಯೆ ತುಂಬಾ ಕಮ್ಮಿ. Pronunciation problem! ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ. ನಾನೂ ತಲೆ ಕೆಡಿಸಿಕೊಳ್ಳಲಿಕ್ಕೆ ಹೋಗುವುದಿಲ್ಲ. (ಎಷ್ಟೂಂತ ಕೆಡಿಸಿಕೊಳ್ಳಲಿ ನಾನಾದರೂ!)

ಆಂಟಿ ಕರೆದಾಗ ನಾನು ಕಾರಂತರ 'ಅಳಿದ ಮೇಲೆ' ಕಾದಂಬರಿಗೆ ಸ್ಕೆಚ್‍ಪೆನ್ನಿನ್ನಲ್ಲಿ ಹೆಸರು ಬರೆಯುತ್ತಿದ್ದೆ. 'ಏನ್ ಆಂಟಿ?' ಎನ್ನುತ್ತಾ ಹೊರಬಂದೆ. ಆಂಟಿ ನನ್ನನ್ನೇ ದುರುದುರು ನೋಡಿದರು. 'ಅಂಕಲ್ ಹೋಗ್ಬಿಟ್ರು ಗೊತ್ತಾಗ್ಲಿಲ್ವಾ ನಿಮ್ಗೆ?' ಅಂದ್ರು. ನನಗೆ ಒಮ್ಮೆಲೇ ಅರ್ಥವಾಗಲಿಲ್ಲ. ಈ ಆಂಟಿ ಮತ್ತು ಅಂಕಲ್ (actually ಅವರು ಅಜ್ಜ-ಅಜ್ಜಿ: ಅಂಕಲ್‍ಗೆ ಸುಮಾರು ಅರವತ್ತು ವರ್ಷ; ಆಂಟಿಗೆ ಐವತ್ತು ಛೇಂಜ್) ನಮ್ಮ ಮನೆಯ ಥರ್ಡ್ ಫ್ಲೋರಿನಲ್ಲಿರುವ ಒಂಡು ಡಬ್ಬಲ್ ಬೆಡ್‍ರೂಮ್ ಹೌಸಿನಲ್ಲಿ ಬಾಡಿಗೆಗಿದ್ದಾರೆ. ಅವರಿಗೆ ಗಂಡುಮಕ್ಕಳು ಇಲ್ಲದ್ದರಿಂದ ಮತ್ತು ಹೆಣ್ಣುಮಕ್ಕಳಿಗೆ ಮದುವೆಯಾಗಿದೆಯಾದ್ದರಿಂದ, ಅಂಕಲ್ ಮತ್ತೆ ಆಂಟಿ ಇಬ್ಬರೇ ಇಲ್ಲಿ ಇರುವುದು. ಅಂಕಲ್ ಆದ್ರೂ ತುಂಬಾ ಉತ್ಸಾಹದಿಂದಿರುವವರು. ಮನೆಗೆ Worldspace Radio, Tata Sky TV ಎಲ್ಲಾ ಹಾಕಿಸಿಕೊಂಡಿದ್ದಾರೆ. 'ರಿಟೈರ್ಡ್ ಲೈಫಪ್ಪ. ಅವಾಗ್ಲಂತೂ ಏನೂ ಮಾಡ್ಲಿಕ್ಕೆ ಆಗ್ಲಿಲ್ಲ; ಈಗ ಎಲ್ಲಾ ಇದೆ, ಎಂಜಾಯ್ ಮಾಡೋಣ ಅಂತಿದೀನಿ' ಅಂದಿದ್ರು ನನ್ಹತ್ರ ಒಮ್ಮೆ.

ಆಂಟಿ ನನ್ನ ಬಳಿ 'ಅಂಕಲ್ ಹೋಗಿದ್ದು ನಿಮಗೆ ಗೊತ್ತೇ ಇಲ್ವಾ, ಮೊನ್ನೇನೆ ಹೋಗ್ಬಿಟ್ರು' ಅಂದ್ರು. 'ಎಲ್ಲಿಗೆ?' ಅಂತ ಕೇಳ್ಲಿಕ್ಕೆ ಹೊರಟವನು ಬಾಯಿಗೆ ಬೀಗ ಹಾಕಿಕೊಂಡೆ. ನನಗೆ ಅವರು ಸತ್ತುಹೋಗಿರಬಹುದು ಎಂಬ ಕಲ್ಪನೆಯೇ ಬರಲಿಲ್ಲ. ಏಕೆಂದರೆ ಆಂಟಿಯ ಹಣೆಯ ಕುಂಕುಮ, ಕೊರಳ ಕರಿಮಣಿ ಸರ ಎಲ್ಲಾ ಹಾಗೇ ಇತ್ತು. ಅಲ್ಲದೇ ಅವರು ನಗುನಗುತ್ತಾ ಮಾತನಾಡುತ್ತಿದ್ದರು. ನಾನು ಮತ್ತೆ ಮತ್ತೆ ಆಂಟಿಯನ್ನೇ ನೋಡಿದೆ. 'ಮೊನ್ನೆ ಬೆಳಗ್ಗೆ ಒಂಬತ್ತೂ ವರೆ ಹೊತ್ತಿಗೆ ಹೋಗ್ಬಿಟ್ರಪ್ಪ. ತುಂಬಾ ಜನಗಳು ಸೇರಿದ್ರು, ನಿಮಗೆ ನಿಜವಾಗ್ಯೂ ಗೊತ್ತೇ ಇಲ್ವಾ?' ಅಂದ್ರು. ಈಗ ನಾನು ಸ್ವಲ್ಪ convince ಆದೆ. 'ಓ, ಹೌದಾ ಆಂಟಿ... ಅಯ್ಯೋ, ನಂಗೆ ಗೊತ್ತೇ ಇಲ್ವಲ್ಲ... ಅರೆ.. ಹೆಂಗಾಯ್ತು..' ಅಂತೆಲ್ಲ ಹಲುಬಿದೆ.

ಈ ಬೆಂಗಳೂರು ಇದೆಂತಾ ಊರೋ ಏನೋ. ಕೆಳಗಡೆ ಮನೆಯಲ್ಲಿ ಒಂದು ಸಾವು ಸಂಭವಿಸಿದರೆ ಮೇಲ್ಗಡೆ ಮನೆಯಲ್ಲಿರುವವರಿಗೆ ಅದು ತಿಳಿಯುವುದು ಮೂರು ದಿನಗಳ ನಂತರ! ನಾನು ಬೆಳಗ್ಗೆ ಎಂಟೂ ಮೂಕ್ಕಾಲಿಗೆ ಆಫೀಸಿಗೆ ಹೊರಟುಬಿಡುತ್ತೇನೆ. ಮತ್ತೆ ವಾಪಸು ಬರುವಷ್ಟರಲ್ಲಿ ಎಂಟಾಗಿರುತ್ತದೆ. ಅಲ್ಲದೇ ನಾನು ಈಗ ಮೂರು ದಿನಗಳಿಂದ ಸ್ವಲ್ಪ ಬ್ಯುಸಿ ಇದ್ದುದರಿಂದ ರೂಮಿನಲ್ಲಿರುತ್ತಿದ್ದುದೇ ಕಮ್ಮಿ. ಹೀಗಾಗಿ ನನಗೆ ಅಂಕಲ್ ತೀರಿಕೊಂಡ ಸುದ್ದಿ ತಿಳಿದೇ ಇರಲಿಲ್ಲ. ಅಂಕಲ್‍ಗೆ ಸ್ವಲ್ಪ ಅರಾಮಿಲ್ಲ ಎಂಬುದು ನನಗೆ ಗೊತ್ತಿತ್ತು. ಅವರ ಮನೆಯ ಹೊರಗಡೆ ಮೊನ್ನೆ ತುಂಬಾ ಚಪ್ಪಲಿಗಳು ಕಂಡರೂ ಯಾರೋ ನೆಂಟರು ಬಂದಿರಬಹುದು ಅಂತಷ್ಟೇ ಅಂದುಕೊಂಡಿದ್ದೆ.

ಆಂಟಿ 'ಇವರೇನು ನಗುನಗ್ತಾ ಇದಾರಲ ಅಂದ್ಕೋಬೇಡಪ್ಪಾ.. ಮೂರು ದಿನಗಳಿಂದ ಅತ್ತೂ ಅತ್ತೂ ಕಣ್ಣೀರೆಲ್ಲ ಬತ್ತಿಹೋಗಿದೆ' ಅಂದ್ರು. 'ಅಯ್ಯೋ ಹಾಗೇನಿಲ್ಲ ಬಿಡಿ ಆಂಟಿ.. ಸಮಾಧಾನ ಮಾಡ್ಕೋಬೇಕು.. ಏನ್ಮಾಡ್ಲಿಕ್ಕಾಗೊತ್ತೆ...' ಅಂತ ಏನೇನೋ ಅಂದೆ. ನನಗೆ ಇಂತಹ ಸಂದರ್ಭಗಳಲ್ಲಿ ಮಾತನಾಡುವುದಕ್ಕೆ ತೋಚುವುದೇ ಇಲ್ಲ. 'ಇನ್ನು ನೀವು ಒಬ್ರೇ ಇರ್ತೀರ ಆಂಟಿ?' ಅಂತ ಕೇಳಿದೆ. 'ನನ್ನ ಹೆಣ್ಣುಮಕ್ಳು ತಮ್ಮನೇಲೇ ಇರು ಬಾ ಅಂತ ಕರೀತಿದಾರೆ... ಏನ್ಮಾಡ್ಬೇಕು ಅಂತಾನೇ ಗೊತ್ತಾಗ್ತಿಲ್ಲ..' ಅಂದರು. ಅಷ್ಟರಲ್ಲಿ ಅವರ ಹೆಣ್ಣುಮಗಳೊಬ್ಬರು ಮೇಲೆ ಬಂದು ಅವರನ್ನು ಕರೆದುಕೊಂಡು ಕೆಳಗೆ ಹೋದರು.

ಕಾರಂತರ 'ಅಳಿದ ಮೇಲೆ' ಪುಸ್ತಕ ನನ್ನ ಕೈಯಲ್ಲೇ ಇತ್ತು.


***

ಈ ಬ್ಲಾಗ್ ಶುರುಮಾಡುವಾಗ ಇಂತಹ personal ಆದ ವಿಷಯಗಳನ್ನು ಇಲ್ಲಿ ಬರೆಯಬಾರದು ಅಂತ ಅಂದುಕೊಂಡಿದ್ದೆ. ಈ ಬ್ಲಾಗನ್ನು ನನ್ನ ಖಾಸ್‍ಬಾತ್‍ ಮಾಡಬಾರದು ಅನ್ನುವುದು ನನ್ನ ಉದ್ದೇಶವಾಗಿತ್ತು. ಆದರೆ ಇವತ್ತು ಬೆಳಗ್ಗೆ ಒಂದು ಎಸ್ಸೆಮ್ಮೆಸ್ ಬಂತು: ಸಂತೋಷ ಮತ್ತು ದುಃಖಗಳು ಇರುವುದೇ ಹಂಚಿಕೊಳ್ಳುವುದಕ್ಕಾಗಿ ಅಂತ. ಆಮೇಲೆ ಇದನ್ನೆಲ್ಲಾ ಟೈಪ್ ಮಾಡಿ upload ಮಾಡಿದೆ.