Monday, December 18, 2006

ಹೊಸ ವರ್ಷದ ಆಶಯ

ನಿನ್ನೆ ರಾತ್ರಿಯ ಕನಸಿನಲ್ಲಿ ಹೊಸವರ್ಷ ಬಂದಿತ್ತು.

ನಾನು ಸುಳ್ಳು ಹೇಳ್ತಿದೀನಿ, ನಾಟಕ ಮಾಡ್ತಿದೀನಿ ಅಂದ್ಕೊಂಡ್ರೇನು? ಇಲ್ರೀ, ನಿಜವಾಗಿಯೂ ಬಂದಿತ್ತು. ನನಗೆ ಆನಂದಾಶ್ಚರ್ಯಗಳು ಒಟ್ಟಿಗೇ ಆದ್ವು. ಒಂಥರಾ ದಿಗ್ಭ್ರಮೆ. ಇದೇನು ನನಸೋ ಕನಸೋ ಅಂತ ಗೊಂದಲ.

ನಾನು ಹೊಸವರ್ಷದ ಬಳಿ ಕೇಳಿದೆ, 'ಇದೇನಿದು, ಇಷ್ಟು ಮುಂಚೆ ಬಂದ್ಬಿಟ್ಯಲ್ಲ?' ಅಂತ. ಅದಕ್ಕೆ ಹೊಸವರ್ಷ 'ಅದಕ್ಕೇನೀಗ? ಏನೋ ಒಂದೆರಡು ವಾರ ಮುಂಚೆ ಬಂದಿದೀನಿ. ಬೆಂಗಳೂರಿನಲ್ಲಿ ಭಯಂಕರ ಟ್ರಾಫಿಕ್ಕು ಅಂತ ಕೇಳಿದ್ದೆ. ಹಾಗಾಗಿ ಸ್ವಲ್ಪ ಮುಂಚೇನೇ ಹೊರಟುಬಿಟ್ಟೆ. ಆದ್ರೆ ಮಜಾ ನೋಡು, ನಂಗೆ ಎಲ್ಲೂ ಟ್ರಾಫಿಕ್ಕೇ ಸಿಗಲಿಲ್ಲ! ಹಾಗಾಗಿ... ಹೆಹ್ಹೆ! ಲೇಟಾಗಿ ಬರೋದಕ್ಕಿಂತ ಮುಂಚೆ ಬಂದಿರೋದು ಒಳ್ಳೇದಲ್ವಾ?' ಎಂದು ಹೇಳಿ ಪ್ಯಾಲಿ ನಗೆಯಾಡಿತು.

ಆದರೆ ನನಗೆ ಕೋಪ ಬಂತು. 'ಛೇ! ನೀನು ಇಷ್ಟು ಬೇಗ ಬರ್ತೀಯ ಅಂತ ಗೊತ್ತಿರ್ಲಿಲ್ಲ. ನಾನು ನಿನ್ನನ್ನು ಸ್ವಾಗತಿಸಲಿಕ್ಕೇಂತ ಎಷ್ಟು ತಯಾರಿ ಮಾಡ್ಕೊಂಡಿದ್ದೆ ಗೊತ್ತಾ? ಎಲ್ಲಾ ಹಾಳು ಮಾಡಿಬಿಟ್ಟೆ' ಅಂತ ಬೈದೆ. ಅದಕ್ಕೆ ಹೊಸವರ್ಷ, 'ಹೌದಾ? ಏನೇನು ತಯಾರಿ ಮಾಡ್ಕೊಂಡಿದ್ದೆ?' ಅಂತ ಕೇಳ್ತು. ನಾನೆಂದೆ: 'ಈ ವರ್ಷ ಇಯರೆಂಡನ್ನು ಗ್ರಾಂಡ್ ಆಗಿ ಆಚರಿಸ್ಬೇಕೂಂತ ಮೈಸೂರ್ ರೋಡಲ್ಲಿ ಒಂದು ರೆಸಾರ್ಟ್‍ಗೆ ಬುಕ್ ಮಾಡಿದ್ವಿ ನಾನೂ ನನ್ನ ಫ್ರೆಂಡ್ಸೂ. ಥರ್ಟಿಫಸ್ಟ್ ಇವನಿಂಗೇ ಅಲ್ಲಿಗೆ ಹೋಗಿ, ಎರಡು ಲಾರ್ಜ್ ವ್ಹಿಸ್ಕಿ ಆರ್ಡರ್ ಮಾಡಿ, ಅದರಳೊಗೆ ಐಸನ್ನು ಕರಗಿಸಿ, ನಿಧನಿಧಾನವಾಗಿ ಹೀರ್ತಾ... ತೇಲಿ ಬರೋ ವೆಸ್ಟರ್ನ್ ಮ್ಯೂಸಿಕ್ಕಿನಲ್ಲಿ ಒಂದಾಗ್ತಾ... ಸುಂದರ ಸ್ಲೀವ್‍ಲೆಸ್‍ ಹುಡುಗೀರ ಜೊತೆ ಡಾನ್ಸ್ ಮಾಡ್ತಾ... ಆಹಾ! ಅದರಲ್ಲಿರೋ ಮಜಾ ನಿಂಗೇನು ಗೊತ್ತು? ಗಡಿಯಾರದ ಮುಳ್ಳು ಹನ್ನೆರಡನ್ನು ಮುಟ್ಟುತ್ತಿದ್ದಂತೆಯೇ ಎಲ್ಲರೂ 'ಹೋ' ಎಂದು ಜೋರಾಗಿ ಕೂಗಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಎಲ್ರೂ ಎಲ್ರಿಗೂ 'ಹ್ಯಾಪಿ ನ್ಯೂ ಇಯರ್' ಹೇಳಿ, ತಬ್ಕೊಂಡು..... ಓಹ್! ನಮ್ಮ ಯೋಜನೆಗಳನ್ನೆಲ್ಲಾ ಹಾಳು ಮಾಡಿಬಿಟ್ಟೆ' ಅಂದೆ.

ನನ್ನ ಮಾತನ್ನು ಕೇಳಿ ಹೊಸವರ್ಷ ನಸು ನಕ್ಕಿತು. ಅದರ ನಗು ನನಗೆ ವ್ಯಂಗ್ಯಭರಿತವಾಗಿದ್ದಂತೆ, ಒಂಥರಾ ನಿಗೂಢವಾಗಿದ್ದಂತೆ ಅನ್ನಿಸಿತು. 'ಅಲ್ಲಿಂದ ನಡಕೊಂಡು ಬಂದಿದೀನಿ. ಸುಸ್ತಾಗಿದೆ. ತಣ್ಣಗೆ ಒಂದು ಸ್ನಾನ ಮಾಡಿ ಬರ್ತೀನಿ. ನಿನ್ನ ಹತ್ರ ಸ್ವಲ್ಪ ಮಾತಾಡೋದಿದೆ, ಕೂತಿರು' ಅಂತಂದು ಹೊಸವರ್ಷ ನನ್ನ ಟವೆಲನ್ನು ಎತ್ತಿಕೊಂಡು ಬಾತ್‍ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿತು. ನಾನು ತಕ್ಷಣ ಮೊಬೈಲೆತ್ತಿಕೊಂಡು ಗೆಳೆಯರಿಗೆಲ್ಲ ಫೋನ್ ಮಾಡಿ 'ಅಯ್ಯೋ ಕೆಲಸ ಕೆಟ್‍ಹೋಯ್ತು ಕಣ್ರೋ.. ಹೊಸವರ್ಷ ಆಗಲೇ ಬಂದುಬಿಟ್ಟಿದೆ. ರೆಸಾರ್ಟಿಗೆ ಬುಕ್ ಮಾಡಿದ್ದೆಲ್ಲಾ ಕ್ಯಾನ್ಸೆಲ್ ಮಾಡ್ಸಿ. ಪಟಾಕಿ ತಗೋಳ್ಲಿಕ್ಕೆ ಹೋಗ್ಬೇಡಿ' ಅಂತೆಲ್ಲಾ ಅಂದೆ. ಗೆಳೆಯರು 'ಯಾಕೋ ಹುಚ್ಚು-ಗಿಚ್ಚು ಹಿಡಿದಿದೆಯೇನೋ?' ಅಂತ ಗೇಲಿ ಮಾಡಿ ನಕ್ಕುಬಿಟ್ಟರು. ಇವರಿಗೆ ಹೇಗೆ ಅರ್ಥ ಮಾಡಿಸಬಹುದು ಅಂತಲೇ ನನಗೆ ತಿಳಿಯಲಿಲ್ಲ. ಅಷ್ಟರಲ್ಲಿ ಹೊಸವರ್ಷದ ಸ್ನಾನ ಮುಗಿದು, ಬಾತ್‍ರೂಮಿನಿಂದ ಹೊರಬಂತು. ನಾನು ಫೋನ್ ಕಟ್ ಮಾಡಿ, ಹುಳ್ಳಹುಳ್ಳಗೆ ನಗೆಯಾಡುತ್ತಾ, ಯಥಾಸ್ಥಾನದಲ್ಲಿ ಕುಳಿತೆ.

ಹೊಸವರ್ಷ ನನ್ನ ಎದುರಿಗೆ ಬಂದು ಕುಳಿತುಕೊಂಡು ಮಾತನಾಡಲಾರಂಭಿಸಿತು: 'ನೋಡು ಗೆಳೆಯಾ, ಈ ತರಹದ ಆಡಂಭರಗಳೆಲ್ಲ ನಿಮ್ಮಂಥವರಿಗೆ ಮಾತ್ರ. ಫೂಟ್‍ಪಾತಿನ ಮೇಲೆ ಸೆಕೆಂಡ್ಸ್ ಮಾರುವವರು, ಮೆಜೆಸ್ಟಿಕ್ಕಿನ ಫ್ಲೈಓವರಿನ ಮೇಲೆ ಬ್ಯಾಟರಿ, ಕೀಚೈನು, ಮೊಬೈಲ್ ಕವರ್ರು, ಕರ್ಚೀಫು, ಬೂಟಿನ ಹಿಮ್ಮಡ, ಬೇಯಿಸಿದ ಮೊಟ್ಟೆ, ಕಡಲೆಕಾಯಿಗಳನ್ನು ಮಾರುವವರನ್ನು ಹೋಗಿ ನೋಡು. ಕೆ.ಆರ್. ಮಾರ್ಕೆಟ್ಟಿನ ಇಕ್ಕಟ್ಟಿನಲ್ಲಿ ತರಕಾರಿ ಮಾರುವವರನ್ನು ನೋಡು. ಹೋಟೆಲ್ಲುಗಳಲ್ಲಿ ಟೇಬಲ್ ಕ್ಲೀನ್ ಮಾಡುವ ಹುಡುಗರನ್ನು ನೋಡು. ಕಸ ಎತ್ತುವ, ಚರಂಡಿ ದುರಸ್ಥಿ ಮಾಡುವ ಕಾರ್ಪೋರೇಷನ್ ಕೆಲಸಗಾರನ್ನು ನೋಡು. ಅವರುಗಳ ಬಳಿ ಹೋಗಿ ಕೇಳು: 'ನೀವು ಹೊಸವರ್ಷವನ್ನು ಹೇಗೆ ಸ್ವಾಗತಿಸುತ್ತೀರಿ?' ಅಂತ. ಅವರು ಜೋರಾಗಿ ನಕ್ಕುಬಿಡುತ್ತಾರೆ. ಅವರು ನಿಮ್ಮಂತೆ ರೆಸಾರ್ಟುಗಳಲ್ಲಿ ಚಿಲ್ಡ್ ಬಿಯರ್ ಕುಡಿಯುವವರಲ್ಲ, ಕೇಕ್ ಕತ್ತರಿಸುವವರಲ್ಲ, ರಾಕೆಟ್ಟುಗಳನ್ನು ಹಾರಿಸಿ 'ಹೋ' ಎಂದು ಕೂಗುವವರಲ್ಲ. ಹೊಸವರ್ಷದ ದಿನ ಅವರ ಮನೆಯಲ್ಲಿ ಸ್ವೀಟ್ ಮಾಡುವುದಿಲ್ಲ. ಅವರು ಹೊಸವರ್ಷಕ್ಕೇಂತ ಕ್ಯಾಲೆಂಡರು ಸಹ ಕೊಳ್ಳುವುದಿಲ್ಲ. ನಿನಗೆ ಗೊತ್ತಾ ಬ್ರದರ್, ನೀನು ಹೊಸವರ್ಷದ ಸಂಭ್ರಮಕ್ಕೆಂದು ಖರ್ಚು ಮಾಡುವ ಹಣವನ್ನು ಒಬ್ಬೊಬ್ಬರಿಗೆ ಒಂದೊಂದು ರೂಪಾಯಿಯಂತೆ ಹಂಚುತ್ತಾ ಬಂದರೂ ಸಾಕಾಗದಷ್ಟು ಭಿಕ್ಷುಕರು ಬರೀ ಈ ಬೆಂಗಳೂರಿನಲ್ಲಿದ್ದಾರೆ...'

ನಾನು ಸುಮ್ಮನೆ ತಲೆ ತಗ್ಗಿಸಿ ಕುಳಿತಿದ್ದೆ. ಏನೋ ತಪ್ಪು ಮಾಡಲು ಹೊರಟಿದ್ದ ನನ್ನನ್ನು ತಡೆದಂತಾಯಿತು. ನನ್ನ ಕೋಪ, ಆವೇಶ, ಅಸಮಾಧಾನಗಳೆಲ್ಲಾ ತಣ್ಣಗಾಗಿದ್ದವು. 'ಹಾಗಾದರೆ ನನ್ನನ್ನು ಈಗ ಏನು ಮಾಡು ಅಂತೀಯಾ?' ತಗ್ಗಿದ ದನಿಯಲ್ಲಿ ಕೇಳಿದೆ.

'ಅದನ್ನೂ ನಾನೇ ಹೇಳಬೇಕಾ?' ಎಂದು ಹೊಸವರ್ಷ ಎದ್ದು ನಿಂತಿತು. 'ಅರೆ, ತಾಳು ಹೊರಡಬೇಡ...' ಅಂದೆ. 'ಇಲ್ಲ, ನಾನು ಹೊರಟೆ. ನಿನ್ನಂತಹ ಇನ್ನೊಂದಿಷ್ಟು ಜನರಿಗೆ ಇದೇ ಮಾತುಗಳನ್ನು ಹೇಳಬೇಕಿದೆ. ನೀನೂ ನಿನ್ನ ಗೆಳೆಯರಿಗೆ ತಿಳಿಹೇಳು. ಮತ್ತೆ ಸಿಗೋಣ. ಒಂದನೇ ತಾರೀಖು ಬರ್ತೀನಲ್ಲ!' ಎಂದು ಹೇಳಿ ಹೊರಟೇಬಿಟ್ಟಿತು. 'ಏ.. ನಿಲ್ಲು..' ಅಂತ ನಾನು ಕೂಗಿಕೊಂಡೆ.

ನನಗೆ ತಟ್ಟನೆ ಎಚ್ಚರಾಯಿತು. ದಢಬಡಿಸಿ ಎದ್ದು ಕುಳಿತೆ. ಕಿಟಕಿಯಲ್ಲಿ ಹೊಸ ಬೆಳಗಿನ ಬಿಸಿಲು ಕಾಣಿಸಿತು. ಕ್ಯಾಲೆಂಡರು ನೋಡಿದೆ: ಇನ್ನೂ ಡಿಸೆಂಬರಿನಲ್ಲಿಯೇ ಇತ್ತು. ಗಡಿಯಾರ ನೋಡಿದೆ: ಏಳು ಗಂಟೆಯನ್ನೂ ದಾಟಿ ಓಡುತ್ತಿತ್ತು ಮುಳ್ಳು.

[ಈ ಲೇಖ, 'ವಿಕ್ರಾಂತ ಕರ್ನಾಟಕ ' ಪತ್ರಿಕೆಯ ಈ ವಾರದ (22.12.2006) ಸಂಚಿಕೆಯಲ್ಲಿ ಪ್ರಕಟವಾಗಿದೆ. ಅವರಿಗೆ ನನ್ನ ಕೃತಜ್ಞತೆಗಳು.]

12 comments:

ಶ್ರೀನಿಧಿ.ಡಿ.ಎಸ್ said...

ಸುಶ್,

ಹೊಸ ವರ್ಷಕ್ಕೊಂದು ಹೊಸ ಆಯಾಮ ನೀಡಿದ್ದೆ ನೋಡು. ನನ್ ಮನಸ್ಸಲ್ಲಿರೋದನ್ನ, ನೀನು ಬರಹಕ್ಕಿಳಿಸಿದ್ದೀಯಾ. ಈ ತರಹದ ಹೊಸ ಹೊಸ ಆಲೋಚನೆಗಳು, ಹುಟ್ಟುತ್ತಿರಲಿ, ನನ್ನಂತಹ ಕೆಲವರಾದರೂ ಅದನ್ನ ಪೋಷಿಸುತ್ತೇವೆ!

ಸುಶ್ರುತ ದೊಡ್ಡೇರಿ said...

@ ಶ್ರೀನಿಧಿ..

ಅವತ್ತೆಲ್ಲೋ ಬಸ್ಸಲ್ಲಿ ಹೋಗ್ತಾ ಇರಕ್ಕರೆ ಸಡನ್ನಾಗಿ ಹೊಳೆದ 'ಆಯಾಮ' ಇದು. ತಕ್ಷಣ ರೂಮಿಗೆ ಹೋಗಿ ಬರೆದಿಟ್ಟಿ. ಬರೆದ ಮೇಲೆ 'ಅರೆ! ಚನಾಗಿದ್ದಲ..!' ಅಂತ ನನಗೇ ಅನ್ನಿಸಿದ್ರಿಂದ 'ವಿಕ್ರಾಂತ ಕರ್ನಾಟಕ'ಕ್ಕೆ ಕಳಿಸಿದಿ. ನಿನ್ನ ಪೋಷಣೆ, ಪ್ರೋತ್ಸಾಹ ಹೀಗೇ ಇರಲಿ ಫ್ರೆಂಡ್...

vikas said...

ಸುಶ್, ಬಹಳ ಚೆನ್ನಾಗಿದೆ ಲೇಖನ. ನನಗೂ ಕೂಡ ಇದೇ ತರಹ ಅನ್ನಿಸಿ ಬಹಳ ವರ್ಷಗಳೆ ಆಗಿದೆ.. ಅದಕ್ಕೆ ನಾನು ಹೊಸವರ್ಷ, ಇತ್ಯಾದಿ ಅರ್ಥವಿಲ್ಲದ ಪಾರ್ಟಿಗಳಿಗೆ, ಆಚರಣೆಗಳಿಗೆ ನನ್ನನ್ನು ತೊಡಗಿಸಿಕೊಳ್ಳುವುದನ್ನು ಬಿಟ್ಟಿದ್ದೇನೆ.
ನೀನು ಪತ್ರಿಕೆಗೆ ಕಳಿಸಿದ್ದು ಒಳ್ಳೆಯದಾಯಿತು. ನಿನ್ನ ಇನ್ನೂ ಹಲವು ಲೇಖನಗಳು ಪತ್ರಿಕೆಗಳಿಗೆ ಕಳಿಸುವಂತಿವೆ.. ಇದೇ ರೀತಿ ಬರುತ್ತಿರಲಿ... ಆಲ್ ದಿ ಬೆಸ್ಟ್ :)

ಸುಶ್ರುತ ದೊಡ್ಡೇರಿ said...

@ Vikas

ಹೌದು ಬ್ರದರ್. ಪ್ರಪಂಚವನ್ನೆಲ್ಲಾ ಸರಿ ಮಾಡುತ್ತೀನಿ ಅಂತ ಹೊರಡುವುದರ ಬದಲು ನಾವು ನಾವು ಸರಿಯಾಗೋಣ ಅಲ್ಲವಾ? ಇದ್ದಲ್ಲೇ ಕಾರ್ಯನಿರತರಾಗೋಣ. ಧನ್ಯವಾದಗಳು.

ಮನಸ್ವಿನಿ said...

ಸುಶ್ರುತ,

ಒಳ್ಳೆಯ ವಿಚಾರ.

ಸುಶ್ರುತ ದೊಡ್ಡೇರಿ said...

@ ಮನಸ್ವಿನಿ

ಹೂಂ. ವಿಚಾರ ಒಳ್ಳೇದೇ; ಆದ್ರೆ ಪಾಲಿಸುವವರು ಎಷ್ಟು ಜನ? At least ನಾನು?

ಧನ್ಯವಾದಗಳು.

Mahantesh said...

oLLeya lekhana saar...

ಸುಶ್ರುತ ದೊಡ್ಡೇರಿ said...

@ mahantesh

ಮಹಾಂತೇಶರಿಗೆ ಸುಸ್ವಾಗತ. ಧನ್ಯವಾದಗಳು ಸಾರ್... ಬರುತ್ತಿರಿ...

Shiv said...

ಸುಶ್ರುತ,

ಹೊಸ ವರ್ಷದ ಈ ಪಬ್ಬು-ಪಾರ್ಟಿ-ದೊಂದು ವೆಚ್ಚಗಳ ಹುಚ್ಚುತನಗಳ ನಡುವೆ ಒಂದೆರಡು ನಿಮಿಷ ಬಿಡುಮಾಡಿಕೊಂಡು ನಿಮ್ಮ ಈ ಲೇಖನ ಓದಿದರೆ, ಆ ದುಂದುವೆಚ್ಚಗಾರರಿಗೆ ಸ್ಪಲ್ಪನಾದರೂ ನಿಜ ಅರ್ಥವಾದೀತೇ?

ಇರಲಿ..ತುಂಬಾ ಸೊಗಸಾಗಿ ಮೂಡಿ ಬಂದಿದೆ..ನಿಮ್ಮ ಮೌನಗಾಳ ಹೀಗೆ ಸಾಗ್ತ ಇರಲಿ

ಸುಶ್ರುತ ದೊಡ್ಡೇರಿ said...

@ shiv

ನನ್ನ ಆಶಯ ಎಷ್ಟು ಜನಕ್ಕೆ ಅರ್ಥವಾಗುತ್ತದೋ ಅಷ್ಟೇ ಲಾಭ ಅಂದುಕೊಳ್ಳುತ್ತೇನೆ! ಧನ್ಯವಾದಗಳು.

ranjana said...

hai sushrutha,
Naanu hosa varsha agi 3 months ada mele odtha iddi.
Nimma Kanasu thumba chanagi iddu.

Nangu e new year party, valentine's day idara celebration galalli yavude artha kanadille.
innu baritha iri.

ಸುಶ್ರುತ ದೊಡ್ಡೇರಿ said...

@ ranjana

Thanx. Late aagiddakke thondre enu ille bidu, mundina varshakke 'apply' madkyandre aathu :)