Friday, December 29, 2006

ಹೊಸ ವರ್ಷದ ಶುಭಾಶಯ"ಏಯ್... ಎರಡ್ಸಾವ್ರದ ಆರು ಹೋಗುತ್ತಿದೆ.. ಟಾಟಾ ಮಾಡು ಬಾರೇ..."
"ಎಲ್ಲೇ?"
"ಅದೇ.... ಅಲ್ಲಿ....!"
"ಓಹ್... ಹೊರಟೇಬಿಡ್ತಾ? ನಿನ್ನೆ ಮೊನ್ನೆ ಬಂದಂಗಿತ್ತಲ್ಲೇ.."
"ಬಂದಿದ್ದೂ ಆಯ್ತು ಹೊರಟಿದ್ದೂ ಆಯ್ತು; ಬೇಗಬೇಗ ಟಾಟಾ ಮಾಡೇ..."

* * *

ಧಾನ್ಯ ದಾಸ್ತಾನಿನ ಗೋಡೌನಿನಲ್ಲಿ ಬಂದಿಯಾಗಿದ್ದ ಹೆಗ್ಗಣವೊಂದು ಗೋಡೆಯಲ್ಲಿ ದೊಡ್ಡದೊಂದು ಕನ್ನ ಕೊರೆಯುತ್ತಿದೆ.. ಬೇಗ ಬೇಗ ಕೊರೆ ದೊಡ್ಡಿಲಿಯೇ: ಹೊಸ ವರ್ಷ ಬರುತ್ತಿದೆ...

ಎರಡು ಬಾರಿ ಕೆಮ್ಮಿ, ಗಂಟಲನ್ನು ಶ್ರುತಿಗೊಳಿಸಿ, ಹಾಡಲು ಕುಳಿತಿದ್ದಾನೆ ಗಾಯಕ.. ಪಲ್ಲವಿ ಮುಗಿದು, ಅನುಪಲ್ಲವಿ ಮುಗಿದು, ಇದು ಎಷ್ಟನೇ ಚರಣ..? ಬೇಗ ಬೇಗ ಹಾಡು ಗೆಳೆಯಾ: ಹೊಸ ವರ್ಷ ಬರುತ್ತಿದೆ...


ಮಗುವನ್ನು ಕಾಲ ಮೇಲೆ ಹಾಕಿಕೊಂಡು, 'ಉಶ್‍ಶ್‍ಶ್‍ಶ್ಶ್...' ಎನ್ನುತ್ತಾ ಕುಳಿತಿದ್ದಾಳೆ ತಾಯಿ; ಉಚ್ಚೆಯನ್ನೇ ಮಾಡುತ್ತಿಲ್ಲ ಪಾಪು! ಬೇಗ ಬೇಗ ಉಚ್ಚೆ ಮಾಡು ಮಗೂ: ಹೊಸ ವರ್ಷ ಬರುತ್ತಿದೆ...

ದನದ ಕೆಚ್ಚಲಿಗೆ ನೀರು ಸೋಕಿ, ಮೊಲೆಗಳನ್ನು ತೊಳೆದು, ದೊಡ್ಡ ಕೌಳಿಗೆಯನ್ನಿಟ್ಟುಕೊಂಡು ಕುಳಿತಿದ್ದಾನೆ ಅಪ್ಪ.. ಸೊರೆಯುತ್ತಲೇ ಇಲ್ಲ ದನ! ಬೇಗ ಬೇಗ ಹಾಲು ಕೊಡು ದನವೇ: ಹೊಸ ವರ್ಷ ಬರುತ್ತಿದೆ...


ನ್ಯಾಲೆಯ ಮೇಲೆ ಬಟ್ಟೆಗಳನ್ನು ನೇತುಹಾಕಿ, ಒಣಗುವುದನ್ನೇ ಕಾಯುತ್ತಾ ಕುಳಿತಿದ್ದಾನೆ ರೂಂಮೇಟ್.. ಅಂಡರ್ ವೇರ್ ಒಣಗುವುದಂತೂ ಯಾವಾಗಲೂ ಲೇಟ್! ಬೇಗ ಒಣಗು ಚಡ್ಡಿಯೇ: ಹೊಸ ವರ್ಷ ಬರುತ್ತಿದೆ...


ಶಾಪಿಂಗಿಗೆ ಹೋದ ಗೆಳೆಯ ಸ್ವೀಟು, ಕೇಕು, ಪಟಾಕಿ.. ಎಲ್ಲಾ ತಂದಿದ್ದಾನೆ. ಆದರೆ ಹೊಸ ಕ್ಯಾಲೆಂಡರು ತರುವುದನ್ನೇ ಮರೆತುಬಿಟ್ಟಿದ್ದಾನೆ! ಮತ್ತೆ ಓಡಿಸಿಯಾಗಿದೆ ಪೇಟೆಯೆಡೆಗೆ. ಬೇಗ ಬಾ ಗೆಳೆಯಾ: ಹೊಸ ವರ್ಷ ಬರುತ್ತಿದೆ...


ಭಟ್ಟರು ಗಂಧ ತೇಯ್ದು, ದೇವರನ್ನು ತೊಳೆದು, ಹೂವೇರಿಸಿ, ಕುಂಕುಮ-ಅರಿಶಿನ ಹಚ್ಚಿ, ಊದುಬತ್ತಿ ಬೆಳಗಿ, ಕಾಯಿ ಓಡೆದು, ನೈವೇದ್ಯ ಮಾಡಿ.... ಅಯ್ಯೋ, ಅವೆಲ್ಲಾ ಇರಲಿ ಭಟ್ರೇ, ಬೇಗ ಮಂಗಳಾರತಿ ಮಾಡಿ: ಹೊಸ ವರ್ಷ ಬರುತ್ತಿದೆ...

*
* *

ಅಗೋ.... ಹೊಸ ವರ್ಷ ಬಂದೇಬಿಟ್ಟಿತು..! ಕೊರೆದೂ ಕೊರೆದು ಕೊನೆಗೂ ಗೋಡೆಯಲ್ಲೊಂದು ಸಣ್ಣ ಕಿಂಡಿಯನ್ನು ಮಾಡಿಯೇಬಿಟ್ಟಿದೆ ಹೆಗ್ಗಣ. ಆ ಸಣ್ಣ ಕಿಂಡಿಯಿಂದಲೇ ತೂರಿ ಬರುತ್ತಿದೆ ಹೊಸ ವರ್ಷದ ಆಶಾಕಿರಣ; ಹೊಸ ಬೆಳಕು. ಮಗು ಹಾರಿಸಿದ ಉಚ್ಚೆ ಇಡೀ ಭುವಿಯನ್ನೇ ಒದ್ದೆ ಮಾಡಿದೆ. ಕೌಳಿಗೆ ತುಂಬಿದರೂ ಮುಗಿದಿಲ್ಲ ದನದ ಕೆಚ್ಚಲಿನ ಹಾಲು. ಅಪ್ಪ ಕೂಗುತ್ತಿದ್ದಾನೆ: 'ಏಯ್, ಇನ್ನೊಂದು ಗಿಂಡಿ ತಗಂಬಾರೇ..' ಅಮ್ಮ ಅಡುಗೆ ಮನೆಯಿಂದಲೇ ಉತ್ತರಿಸುತ್ತಿದ್ದಾಳೆ: 'ಸಾಕು ನಮಗೆ; ಉಳಿದಿದ್ದನ್ನು ಕರುವಿಗೆ ಬಿಡಿ.' ಒಣಗಿದ ಚಡ್ಡಿಯ ಮೇಲೆ ಹೊಸ ಪ್ಯಾಂಟೇರಿಸುತ್ತಿದ್ದಾನೆ ರೂಂಮೇಟ್. ಗೆಳೆಯನಂತೂ ಓಡೋಡಿ ಬರುತ್ತಿದ್ದಾನೆ. ಅವನ ಕೈಯಲ್ಲಿ ಪೂರ್ತಿ ಮುನ್ನೂರಾ ಅರವತ್ತೈದು ದಿನಗಳುಳ್ಳ ಕ್ಯಾಲೆಂಡರಿದೆ. ದೇವರಿಗೇ ಆಶ್ಚರ್ಯವಾಗುವಷ್ಟು ದಕ್ಷಿಣೆ ಬಿದ್ದಿದೆ ಭಟ್ಟರ ಮಂಗಳಾರತಿ ಹರಿವಾಣದಲ್ಲಿ.

ಎಲ್ಲರಿಗೂ ಖುಷಿ; ಎಲ್ಲರಿಗೂ ಸಂಭ್ರಮ; ಎಲ್ಲರಿಗೂ ಸಡಗರ.. ಏಕೆಂದರೆ, ಹೊಸ ವರ್ಷ ಬಂದಿದೆ! ಈ ಮಧ್ಯೆ, ಹಾಡುತ್ತಿರುವವನನ್ನು ಎಲ್ಲರೂ ಮರೆತೇ ಬಿಟ್ಟಿದ್ದಾರೆ. ಆತ ಹಾಡುವುದನ್ನು ಒಂದು ಕ್ಷಣ ನಿಲ್ಲಿಸಿಬಿಟ್ಟಿದ್ದಾನೆ. ತಕ್ಷಣ ಎಲ್ಲರಿಗೂ ಅರಿವಾಗಿದೆ. ಎಲ್ಲಾ ಅವನ ಬಳಿ ಹೋಗಿ ಹೇಳುತ್ತಿದ್ದಾರೆ:


"ಹಾಡು ಗೆಳೆಯಾ, ಮುಂದುವರೆಸು. ಹಾಡು ಹಳೆಯದಾದರೇನು, ಭಾವ ಹೊಸತಿದ್ದರೆ ಸಾಕು.."

ಹೊಸ ವರ್ಷದ ಹೊಸ ಕ್ಯಾಲೆಂಡರು ನಿಮ್ಮ ಬದುಕಿನ ಹಾಡಿಗೆ - ಹಾದಿಗೆ ಹೊಸ ಭಾವ ಬೆರೆಸಲಿ ಎಂದು ಹಾರೈಸುತ್ತೇನೆ.

ನೂತನ ವರ್ಷದ ಶುಭಾಶಯಗಳು.

9 comments:

ಶ್ರೀನಿಧಿ.ಡಿ.ಎಸ್ said...

ಕಾಯ್ತಾ ಇದಿದ್ದಿ, ಸುಶ್ ಏನ್ ಬರಿತ ಅಂತ! :) ಒಳ್ಳೆಯ ಬರಹ ಎಂದಿನಂತೆ! ನಿನಗೂ ಹೊಸ ವರುಷದ ಶುಭಾಶಯಗಳು!

ಸುಶ್ರುತ ದೊಡ್ಡೇರಿ said...

@ ಶ್ರೀನಿಧಿ...

ಹಹ್ಹಹ್ಹ! ಥ್ಯಾಂಕ್ಯೂ ಬ್ರದರ್.

Shiva said...

ಪ್ರಿಯ ಸುಶ್ರುತ, ನಾನು ನಿಮ್ಮ ಪುಟಕ್ಕೆ ಹೊಸಬ. ಚೆನ್ನಾಗಿ ಬರೆಯುತ್ತೀರಿ. ಹೊಸ ವರ್ಷದ ಶುಭಾಶಯಗಳು.
ವ೦ದನೆಗಳು
ಶಿವ

Mahantesh said...

nimagu saha hosa varshada subhashayagaLu

ಸುಶ್ರುತ ದೊಡ್ಡೇರಿ said...

@ shiva, mahantesh

Thank U very much frenz

ಮನಸ್ವಿನಿ said...

ಸುಶ್ರುತ,

ನಿನಗೂ ಹೊಸ ವರ್ಷದ ಶುಭಾಶಯಗಳು. ಒಳ್ಳೆಯದಾಗಲಿ.

ಸುಶ್ರುತ ದೊಡ್ಡೇರಿ said...

@ ಮನಸ್ವಿನಿ

ಧನ್ಯವಾದಗಳು.

Shiv said...

ಸುಶ್ರುತ,

ಬಹಳ ಸೊಗಸಾಗಿದೆ..
ಹೆಗ್ಗಣದ ಬಿಲಕ್ಕೂ,ಹಾಲಿನ ಗಿಂಡಿಗೂ,ಕ್ಯಾಲೆಂಡರ್‍ಗೂ,ಅಂಡರ್‍ವೇರ್,ಮಂಗಳಾರತಿಗೂ ಲಿಂಕ್ ಮಾಡಿದ ರೀತಿ ತುಂಬಾ ಚೆನ್ನಾಗಿದೆ.

ಹೊಸ ವರುಷದ ಶುಭಾಶಯಗಳು!

ಸುಶ್ರುತ ದೊಡ್ಡೇರಿ said...

@ shiv

ಧನ್ಯವಾದಗಳು ಶಿವು.... :)