Monday, March 05, 2007

ಹೀಗೊಂದು ವೀಕೆಂಡು

ಈ ಸಲದ ವೀಕೆಂಡನ್ನು ಬಹಳ ಚೆನ್ನಾಗಿ ಕಳೆದೆ. ಇಷ್ಟೊಳ್ಳೆಯ ವೀಕೆಂಡ್ ಅನುಭವಿಸದೇ ತಿಂಗಳುಗಳೇ ಆಗಿದ್ದವೇನೋ? ಈ ಪರಿ ಭಾವಾವೇಶಕ್ಕೆ ಒಳಗಾಗದೆಯೂ.

ಮೊನ್ನೆ ಶನಿವಾರ ಬೆಂಗಳೂರಿಗರೆಲ್ಲ ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು ಮಜಾ ಮಾಡುತ್ತಿದ್ದರು. ನನಗೆ ಯಾರೂ ಎರಚಲಿಲ್ಲವಾದರೂ ನಾನೂ ಎರಚಿಸಿಕೊಂಡವನಷ್ಟೇ ಉನ್ಮಾದದಲ್ಲಿ ತೇಲುತ್ತಿದ್ದೆ. ಈ ಬೆಂಗಳೂರಿಗರು ಎಲ್ಲದರಲ್ಲೂ ಸ್ವಲ್ಪ ಓವರ್ರು. ಇವರು ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ತಿಂಗಳಿಡೀ ಆಚರಿಸುತ್ತಾರೆ (ಕೆಲವೊಮ್ಮೆ ತಿಂಗಳು ಮುಗಿದರೂ ಆರ್ಕೆಸ್ಟ್ರಾದವರ ಮೈಕು ಕೇಳಿಸುತ್ತಿರುತ್ತದೆ). ಚೌತಿ ಮುಗಿದು ಎರಡು ತಿಂಗಳಾದರೂ 'ಗಾಯತ್ರಿನಗರ ಗೆಳೆಯರ ಬಳಗದ ೧೫ನೇ ವರ್ಷದ ಗಣಪತಿ ಉತ್ಸವ' ನಡೆಯುತ್ತಿರುತ್ತದೆ. ಹಬ್ಬಗಳನ್ನಂತೂ ಒಂದನ್ನೂ ಬಿಡದೇ ಆಚರಿಸುತ್ತಾರೆ. ಹೋಳಿಹಬ್ಬ ಆಗಿ ಮೂರು ದಿನ ಆದರೂ ಇವರ ಬಣ್ಣ ಎರಚುವ ಸಂಭ್ರಮ ಮುಗಿದಿರುವುದಿಲ್ಲ. ಇವತ್ತು ಆಫೀಸಿಗೆ ಬರುವಾಗ ಕಾಲೇಜ್ ಹುಡುಗರು ಮುಖಕ್ಕೆಲ್ಲಾ ಬಣ್ಣ ಮೆತ್ತಿಕೊಂಡು ಕುಣಿದಾಡುತ್ತಿರುವುದನ್ನು ನೋಡಿದೆ. ಹುಡುಗಿಯರು ಅಂಜಿಕೊಂಡು ಮೆಲ್ಲಮೆಲ್ಲನೆ ಹೆಜ್ಜೆ ಇಟ್ಟುಕೊಂಡು ಬರುತ್ತಿದ್ದರು (ಪಾಪ!).

ಶನಿವಾರ ರಾತ್ರಿಯ ಹೊತ್ತಿಗೆ ಬೆಂಗಳೂರಿಗರು ತಮ್ಮ ಮುಖಗಳಿಗೆ ಎಣ್ಣೆ ಹಚ್ಚಿಕೊಂಡು, ಲಕ್ಸ್ ಸೋಪಿನಿಂದ ಬಣ್ಣ ತೊಳೆದುಕೊಳ್ಳುತ್ತಿರುವಾಗ ನಾನು ಟೆರೇಸಿನ ಮೇಲೆ ಚಾಪೆ ಹಾಸಿ ಆಕಾಶ ನೋಡುತ್ತಾ ಮಲಗಿಕೊಂಡಿದ್ದೆ. ಗೆಳೆಯ ಶ್ರೀನಿಧಿಗೆ ಫೋನಾಯಿಸಿದರೆ ಅವನು ಅದೆಲ್ಲೋ ಭುವನಗಿರಿಯ ಬೆಟ್ಟದ ಮೇಲೆ ಚಂದ್ರವೀಕ್ಷಣೆಯಲ್ಲಿ ತೊಡಗಿರುವುದಾಗಿ ಹೇಳಿದ. ನಾವು ಭಾವಜೀವಿಗಳದ್ದು ಇದೊಂದು ಕರ್ಮ! ಬಣ್ಣ ಹಚ್ಚಿಕೊಂಡು ವಿಕಾರಗೊಂಡ ಮುಖಗಳಲ್ಲೂ ಸೌಂದರ್ಯ ಕಾಣುತ್ತದಾ ಅಂತ ಹುಡುಕುತ್ತಿರುತ್ತೇವೆ, ಚಂದ್ರಗ್ರಹಣ ಇದೆ ಇವತ್ತು ರಾತ್ರಿ ಎಂದರೆ -ಅದು ಎಷ್ಟೊತ್ತಿಗಾದರೂ ಇರಲಿ- ಕಣ್ಣಿಗೆ ಎಣ್ಣೆ ಹಾಕಿಕೊಂಡು ನಿದ್ದೆ ಮಾಡದೇ ಆಕಾಶ ನೋಡುತ್ತಾ ಕಾಯುತ್ತೇವೆ! ಮೊನ್ನೆಯ ಚಂದ್ರಗ್ರಹಣ ಇದ್ದದ್ದು ಬೆಳಗಿನ ಜಾವ ಮೂರಕ್ಕೆ. ಅಲ್ಲಿಯವರೆಗೆ ಮಲಗಿ ಅಲಾರ್ಮ್ ಇಟ್ಟುಕೊಂಡು ಎದ್ದು ವೀಕ್ಷಿಸೋಣ ಅಂದುಕೊಂಡೆ. ಆದರೆ ಕಾದಂಬರಿಯೊಂದು ಅರ್ಧ ಓದಿದ ಸ್ಥಿತಿಯಲ್ಲಿತ್ತು. ಸರಿ ಹಾಗಾದ್ರೆ, ಅದನ್ನು ಪೂರ್ತಿ ಮಾಡಿಬಿಡೋಣ ಅಂತ ಅಂದುಕೊಂಡು, ಒಳಬಂದು, ಕಾದಂಬರಿಯ ಪುಟಗಳಲ್ಲಿ ಕಣ್ಣು ಹುದುಗಿಸಿ ಮಲಗಿಕೊಂಡೆ. ಹಾಗೇ ಓದ್ತಾ ಓದ್ತಾ ಅಕಸ್ಮಾತಾಗಿ ನಿದ್ದೆ ಬಂದುಬಿಟ್ಟರೆ ಕಷ್ಟ ಅಂತ ಅಲಾರ್ಮನ್ನೂ ಮೂರು ಗಂಟೆಗೆ ಸೆಟ್ ಮಾಡಿಟ್ಟಿದ್ದೆ.

ಕಾದಂಬರಿ ಮುಗಿದಾಗ ಎರಡು ಗಂಟೆ ನಲವತ್ತೇಳು ನಿಮಿಷ. ಹೊರಬಂದು ನೋಡಿದೆ. ಚಂದಿರನಿಗೆ ಇನ್ನೂ ಯಾರ ನೆರಳೂ ತಾಗಿರಲಿಲ್ಲ. ಮತ್ತೆ ಟೆರೇಸಿನಲ್ಲಿ ಚಾಪೆ ಹಾಸಿ ನನ್ನ ಚಂದ್ರನನ್ನು ವೀಕ್ಷಿಸುತ್ತಾ ಮಲಗಿದೆ. ಕೆಲ ಗೆಳೆಯರಿಗೆ ಮಿಸ್-ಕಾಲ್ ಕೊಟ್ಟು ಎಚ್ಚರ ಮಾಡಿದೆ. ಕೆಲವರಿಂದ ಬೈಗುಳದ ಎಸ್ಸೆಮ್ಮೆಸ್ ವಾಪಸ್ ಬಂತು. ಮಧ್ಯರಾತ್ರಿ ನಿದ್ರೆ ಕೆಡಿಸಿದರೆ ಯಾರಿಗಾದರೂ ನಖಶಿಖಾಂತ ಕೋಪ ಬರುತ್ತದೆ. ಕನಿಷ್ಟ ಮಳ್ಳಂಡೆಯಿಂದ ಮುಖದವರೆಗಂತೂ ಬರುತ್ತದೆ. 'ಒಳ್ಳೆಯ' ಭಾಷೆ ಬಳಸಿದ ಬೈಗುಳ ದೊರೆಯುತ್ತದೆ. ಅವರ ಬೈಗುಳವನ್ನು ನಾನು ಎಂಜಾಯ್ ಮಾಡಿದೆ. ಭಾಷಾಬಳಕೆಯ ಸಾಮರ್ಥ್ಯವನ್ನು ಮೆಚ್ಚಿಕೊಂಡೆ.

ತಿಂಗಳ ಬೆಳಕ ತುಂತುರು ಚೆಲ್ಲುತ್ತಿರುವ ಶಶಿ... ಯಾವುದೋ ದೂರದ ದೇಶಕ್ಕೆ ಬೆಳಕು ಕೊಡುತ್ತಿರುವ ರವಿ... ತಿರುಗುತ್ತಿರುವ ಭುವಿ... ಅಲ್ಲೆಲ್ಲೋ ಭುವನಗಿರಿಯ ಬೆಟ್ಟದ ಮೇಲೆ ಕುಳಿತಿರುವ ನಿಧಿ... ಇಲ್ಲಿ 'ಟೆರೇಸುಶಯನ'ನಾಗಿರುವ ನಾನು... ಎಲ್ಲಕ್ಕೂ ಬಂಧವನ್ನು ಬೆಸೆಯುತ್ತಿರುವ ಈ ರಾತ್ರಿ...

ಸದಾ ಸೂರ್ಯನನ್ನು ನೋಡುತ್ತಲೇ ಇರಬೇಕಂತೆ ಚಂದ್ರನಿಗೆ. ಆದರೆ ಈ ಭೂಮಿಗೆ ಅದೇನು ಹೊಟ್ಟೆಕಿಚ್ಚೋ ಅವನ ಮೇಲೆ? 'ಏಯ್, ಇವತ್ತು ನಿಂಗೆ ನೋಡ್ಲಿಕ್ಕೆ ಬಿಡಲ್ಲ' ಅಂತಂದು, ಸೂರ್ಯ-ಚಂದ್ರರ ಮಧ್ಯೆ ತಾನು ಅಡ್ಡ ಬರುತ್ತಾಳಂತೆ ಧಾರಿಣಿ...

ಚಂದ್ರನನ್ನು ಭೂಮಿಯ ನೆರಳು ಪೂರ್ತಿ ಕವಿಯುವವರೆಗೂ ನಾನು ಎಚ್ಚರಿದ್ದು ಆಕಾಶ ನೋಡುತ್ತಿದ್ದೆ. ನಾಲ್ಕೂ ಮುಕ್ಕಾಲರ ಹೊತ್ತಿಗೆ 'ಇನ್ನು ಸಾಕು' ಅನ್ನಿಸಿ, "ಗ್ರಹಣ ಬಿಡದೇ ಏನಾದ್ರೂ ಹೆಚ್ಚು-ಕಮ್ಮಿ ಆದ್ರೆ ನಂಗೆ ತಿಳ್ಸಿ" ಅಂತ ಗೆಳೆಯರಿಗೆ ಒಂದು ಮೆಸೇಜು ಕಳಿಸಿ, ಒಳಬಂದು ಮಲಗಿದೆ.

ಹಾಗೆ ಮಲಗಿದವನಿಗೆ ಎಚ್ಚರಾದದ್ದು ಭಾನುವಾರ ಮಧ್ಯಾಹ್ನ ಹನ್ನೊಂದಕ್ಕೆ ಅಂತ ಎದ್ದ ಕೂಡಲೇ ಗೊತ್ತಾಯಿತು. ಚುರುಗುಡುತ್ತಿರುವ ಹೊಟ್ಟೆಯನ್ನು ಸಮಾಧಾನಗೊಳಿಸಲು ತಿಂಡಿ ತಿನ್ನುವುದೊಂದೇ ಪರಿಹಾರವಾಗಿತ್ತಾದ್ದರಿಂದ, ಹಲ್ಲುಜ್ಜಿ, ಮುಖ ತೊಳೆದು, ಕೆಳಗಿಳಿದು ಹೋಗಿ, ಹೋಟೆಲ್ಲಿನಲ್ಲಿ ತಿಂಡಿ ತಿಂದು, ಒಂದು 'ವಿಜಯ ಕರ್ನಾಟಕ' ಪೇಪರು ತಗೊಂಡು ಬಂದೆ. 'ಎಲ್ಲಿ ಏನು' ಕಾಲಮ್ಮಿನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ೪.೩೦ಕ್ಕೆ ಸಿ. ಅಶ್ವತ್ಥ್, ಎಸ್.ಪಿ.ಬಿ. ಸಂಗಡಿಗರಿಂದ ಸುಗಮ ಸಂಗೀತ ಅಂತ ಇತ್ತು. ಮಿಸ್ ಮಾಡಿಕೊಳ್ಳಬಾರದು ಅಂತ ತೀರ್ಮಾನಿಸಿ ಹೋಗಲು ತಯಾರಾದೆ.

ಕಲಾಕ್ಷೇತ್ರದ ಬಾಗಿಲಲ್ಲಿ ನನ್ನನ್ನು ತಡೆದು ನಿಲ್ಲಿಸಿದರು: 'ಎಂಟ್ರಿ ವಿತ್ ಪಾಸ್ ಓನ್ಲೀ!' ಅಯ್ಯೋ ಇಲ್ಲಿಯವರೆಗೆ ಬಂದು ವಾಪಾಸ್ ಹೋಗುವಂತಾಯಿತಲ್ಲ ಅಂತ ಬೇಜಾರಾಯಿತು. ಕಲಾಕ್ಷೇತ್ರದ ಪಕ್ಕದಲ್ಲಿ ಒಂದು ಸ್ಕ್ರೀನ್ ಹಾಕಿದ್ದರು. ಆದರೆ ಇನ್ನೂ ಹೊರಗಡೆ ಬಿಸಿಲಿತ್ತಾದ್ದರಿಂದ ಪ್ರಾಜೆಕ್ಟರಿನ ಬೆಳಕು ಸ್ಕ್ರೀನಿನ ಮೇಲೆ ಕಾಣುತ್ತಲೇ ಇರಲಿಲ್ಲ. ಸೌಂಡ್ ಮಾತ್ರ ಕೇಳುತ್ತಿತ್ತು. ಮತ್ತೇನು ಮಾಡುವುದು, ಸ್ವಲ್ಪ ಹೊತ್ತು ಇಲ್ಲಿಯೇ ಕುಳಿತು ನೋಡಿ (ಕೇಳಿ) ಹೋಗೋಣ ಅಂತ ಕುಳಿತೆ. ನನ್ನಂತಹ ಇನ್ನೂ ಅನೇಕ ನಿರ್ಭಾಗ್ಯವಂತರು ಅಲ್ಲಿದ್ದರು. ಅಷ್ಟೊತ್ತಿಗೆ ಗೆಳೆಯ ಸಂತೋಷ ಬಂದ. ಅವನು ಬಂದಮೇಲೆ ನನಗೆ ಮತ್ತೊಮ್ಮೆ ಹುಮ್ಮಸ್ಸು ಬಂತು. ಇಬ್ಬರೂ ಹೋಗಿ ದ್ವಾರಪಾಲಕನ ಬಳಿ ರಿಕ್ವೆಸ್ಟ್ ಮಾಡಿಕೊಂಡೆವು. 'ಸೀಟಿಲ್ಲ ಸಾರ್, ಬೇಕಾದ್ರೆ ನಿಂತ್ಕೊಂಡು ನೋಡಿ. ನಿಮ್ಮಿಬ್ರನ್ನೇ ಒಳಗಡೆ ಬಿಡ್ತಿದೀನಿ ಮತ್ತೆ' ಅಂತಂದು ನಮ್ಮನ್ನು ಒಳಗಡೆ ಬಿಟ್ಟ. ಅವನಿಗೊಂದು ದೊಡ್ಡ ಥ್ಯಾಂಕ್ಸ್ ಹೇಳಿ ನಾವು ಕಲಾಕ್ಷೇತ್ರದ ಉಪ್ಪರಿಗೆ ಏರಿದೆವು. ಅವನು ಹೇಳಿದಂತೆ ಸೀಟೆಲ್ಲ ಭರ್ತಿಯಾಗಿದ್ದವು. ನಾವು ಮೆಟ್ಟಿಲ ಮೇಲೆ ಕುಳಿತೆವು.

ಕಾರ್ಯಕ್ರಮದ ಹೆಸರು 'ಸ್ವರ ಸಮರ್ಪಣೆ'. ಅದು ಸಿ. ಅಶ್ವತ್ಥ್ ತಮ್ಮ ಕುಟುಂಬದವರೊಂದಿಗೆ ತಮ್ಮ ಪ್ರೀತಿಯ ಕವಿಗಳಿಗೋಸ್ಕರ ಏರ್ಪಡಿಸಿದ್ದ ಸನ್ಮಾನ ಸಮಾರಂಭ. ಜಿ.ಎಸ್. ಶಿವರುದ್ರಪ್ಪ, ಚಂದ್ರಶೇಖರ ಕಂಬಾರ, ಬಿ.ಆರ್. ಲಕ್ಷ್ಮಣರಾವ್, ಎಚ್.ಎಸ್. ವೆಂಕಟೇಶಮೂರ್ತಿ, ಡುಂಡಿರಾಜ್, ದೊಡ್ಡರಂಗೇಗೌಡ, ಎಂ.ಎನ್. ವ್ಯಾಸರಾವ್, ಸುಬ್ರಾಯ ಚೊಕ್ಕಾಡಿ, ಎಂ.ಆರ್. ಕಮಲ -ಇವರುಗಳನ್ನು ಅಶ್ವತ್ಥ್ ತಮ್ಮ ಕುಟುಂಬದ ಸದಸ್ಯರಿಂದಲೇ ಸನ್ಮಾನಿಸಿದರು. ಹಿರಿಯರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದ ಮೊದಲ ಹಂತದ ಈ ಆಪ್ತ ಕಾರ್ಯಕ್ರಮದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ, ನರಹಳ್ಳಿ ಬಾಲಸುಬ್ರಹ್ಮಣ್ಯ, ಮತ್ತಿತರು ಭಾಗವಹಿಸಿದ್ದರು. ಪುಸ್ತಕಗಳು, ಸಿಡಿಗಳು ಬಿಡುಗಡೆಯಾದವು.

ಉಪ್ಪಿಟ್ಟು-ಕಾಫಿಯ ನಂತರ ಏಳೂ ಹದಿನೈದಕ್ಕೆ ಸುಗಮ ಸಂಗೀತ ಕಾರ್ಯಕ್ರಮ ಶುರುವಾಯಿತು. ಅಶ್ವತ್ಥ್, ಎಸ್.ಪಿ., ಸಂಗೀತಾ ಕಟ್ಟಿ, ಎಮ್.ಡಿ. ಪಲ್ಲವಿ, ಸುಪ್ರಿಯಾ ಆಚಾರ್ಯ ಮತ್ತಿತರರು ಗಾನಸುಧೆ ಉಣಿಸಿದರು. ಪ್ರತಿ ಹಾಡು ಮುಗಿದ ಮೇಲೂ ಬೀಳುತ್ತಿದ್ದ ಚಪ್ಪಾಳೆಯ ಜೋರು ಶಬ್ದ ಕಲಾಕ್ಷೇತ್ರದ ಟೆರೇಸಿಗೆ ಹೊಡೆದು ಅಲ್ಲಿ ಗಾಯಗಳಾಗುತ್ತಿದ್ದವು. ಅಶ್ವತ್ಥರ 'ಖದರಿ'ಗೆ ಎಸ್ಪಿಯೇ ದಂಗಾಗಿಹೋದರು. 'ಹೀಗೆ ಹಾಡ್ಲಿಕ್ಕೆ ನನಗೇ ಭಯವಾಗುತ್ತೆ' ಅಂತ ಒಪ್ಪಿಕೊಂಡುಬಿಟ್ಟರು. ಸುಮಾರು ಹತ್ತು-ಹನ್ನೆರಡು ಹಾಡುಗಳಾದ ಮೇಲೆ ಎಸ್.ಪಿ. 'ಮಾವು ಬೇವು' ಅಲ್ಬಮ್ಮಿನ 'ಯಾರಿಗುಂಟು ಯಾರಿಗಿಲ್ಲ' ಗೀತೆಯನ್ನು ಹಾಡಲು ಬಂದರು. ಅರ್ಧ ಹಾಡನ್ನು ತಾವೊಬ್ಬರೇ ಹಾಡಿದಮೇಲೆ ಅಶ್ವತ್ಥರನ್ನೂ 'ಕಮ್ ಅಶ್ವತ್ಥ್‍ಜೀ' ಅಂತ ಕರೆದು, ಇಬ್ಬರೂ ಸೇರಿ ಹಾಡಲು ಶುರುವಿಟ್ಟರು ನೋಡಿ? ಜನಗಳ ಉನ್ಮಾದ ತಾರಕ್ಕೇರಿಬಿಟ್ಟಿತು. ಚಪ್ಪಾಳೆ, ಸಿಳ್ಳೆ, ಕೇಕೆ... ಓಹ್! ಅಶ್ವತ್ಥ್-ಎಸ್.ಪಿ.ಬಿ.ಯವರ ಜುಗಲ್‍ಬಂದಿ ಅದಿನ್ಯಾವ ಪರಿ ಜನರನ್ನು ಖುಷಿಗೊಳಿಸಿತೆಂದರೆ, ಎಲ್ಲರೂ 'ಒನ್ಸ್ ಮೋರ್' 'ಒನ್ಸ್ ಮೋರ್' ಎಂದು ಕೂಗಹತ್ತಿದರು. 'ಜಾಸ್ತಿ ಆದ್ರೆ ಅಜೀರ್ಣ ಆಗೊತ್ತೆ ಸುಮ್ನಿರಿ' ಅಂದು ಸುಮ್ಮನಾಗಿಸಿದರು ಎಸ್ಪಿ. 'ಬಾ ಇಲ್ಲಿ ಸಂಭವಿಸು...' ಕೊನೆಯ ಹಾಡಿನಲ್ಲಂತೂ ಅಶ್ವತ್ಥ್ ಹುಚ್ಚೆಬ್ಬಿಸಿಬಿಟ್ಟರು. ಅವರು ಧ್ವನಿ ಏರಿಸುವ ರೀತಿ, ಧ್ವನಿಯನ್ನು ಹಿಡಿದಿಡುವ ರೀತಿ... ಉಫ್! ಜಸ್ಟ್ ಅಮೇಜ಼ಿಂಗ್. ಹರ್ಷವನ್ನು, ಭಾವಾವೇಶವನ್ನು ತಡೆಯಲಾಗದೆ ನಾವೆಲ್ಲಾ ಕುಣಿದಾಡಿಬಿಟ್ಟೆವು.

ವಾಪಸು ಬರುವ ದಾರಿಯಲ್ಲಿ ನನಗನ್ನಿಸಿತು: ಕನ್ನಡಿಗರಿಗೆ ಕನ್ನಡದ ಬಗ್ಗೆ ಪ್ರೀತಿಯಿಲ್ಲ ಎಂಬುದೆಲ್ಲಾ ಸುಳ್ಳೇ ಸರಿ. ಹಿಂದೆ ಅಶ್ವತ್ಥರ 'ಕನ್ನಡವೇ ಸತ್ಯ' ಕಾರ್ಯಕ್ರಮಕ್ಕೂ ನಾನು ಹೋಗಿದ್ದೆ. ಪ್ಯಾಲೇಸ್ ಗ್ರೌಂಡ್ಸ್ ತುಂಬಿ ಹೋಗಿತ್ತು: ಅಷ್ಟು ಜನ! ಸುಮಾರು ಎಪ್ಪತ್ತೈದು ಸಾವಿರ ಜನ ಸೇರಿದ್ದರು. ಮತ್ತೆ ಆ ಕಾರ್ಯಕ್ರಮಕ್ಕೇನು ಯಾವುದೇ ರಾಜಕೀಯ ಮುಖಂಡರಾಗಲೀ, ಚಿತ್ರನಟ-ನಟಿಯರಾಗಲೀ ಬಂದಿರಲಿಲ್ಲ. ಆದರೂ ಅಷ್ಟೊಂದು ಜನ, ಭಾವಗೀತೆಗಳನ್ನು ಕೇಳಲೆಂದೇ ಬಂದಿದ್ದರು. ಇತ್ತೀಚೆಗೆ ಬೇಂದ್ರೆ, ಅಡಿಗ, ನಿಸಾರ್‌ರ ಕಾವ್ಯ ವಾಚನ ಕಾರ್ಯಕ್ರಮಗಳು ನಡೆದವಲ್ಲ? ಅದಕ್ಕೂ ಜನ ಕಿಕ್ಕಿರಿದು ಸೇರಿದ್ದರು. 'ಕನ್ನಡ ಅಳಿದು ಹೋಗುತ್ತದೆ' ಎಂಬ ಭಯಗಳೆಲ್ಲಾ ಸುಳ್ಳೇನೇನೋ ಅನ್ನಿಸುತ್ತದೆ ಕೆಲವೊಮ್ಮೆ. ಕನ್ನಡಿಗರು ಕನ್ನಡ ಚಲನಚಿತ್ರಗಳನ್ನು ನೋಡುವುದಿಲ್ಲ ಅನ್ನುತ್ತಾರೆ ಕೆಲವರು. ಯಾಕೆ ನೋಡುವುದಿಲ್ಲ? 'ಮುಂಗಾರು ಮಳೆ'ಯಂತಹ ಒಳ್ಳೆಯ ಚಿತ್ರಗಳು ಬಂದರೆ ನೋಡಿಯೇ ನೋಡುತ್ತಾರೆ. ಭೈರಪ್ಪನವರ ಹೊಸ ಕಾದಂಬರಿ ಬಿಡುಗಡೆಯಾಗಿ ತಿಂಗಳೊಳಗೆ ನಾಲ್ಕು ಬಾರಿ ಮರುಮುದ್ರಣ ಕಂಡಿದೆ ಅಂದರೆ ಏನು ತಮಾಷೆಯೇ? ಸದಭಿರುಚಿಯ, ಒಳ್ಳೆಯ, ಮುದ ನೀಡುವ, ಖುಷಿ ಕೊಡುವ ಏನನ್ನು ಕೊಟ್ಟರೂ ಜನ ಸ್ವೀಕರಿಸುತ್ತಾರೆ. ಕೊಡಬೇಕಾದರೆ ನೋಡಿಕೊಂಡು ಕೊಡಬೇಕಷ್ಟೇ.

'ಸ್ವರ ಸಮರ್ಪಣೆ'ಯಲ್ಲಿ ಹೊಡೆದ ಚಪ್ಪಾಳೆಯಿಂದಾಗಿ ನನ್ನ ಕೈ ಇನ್ನೂ ಉರಿಯುತ್ತಿದೆ. ತುಂಬಿಕೊಂಡಿರುವ ಭಾವೋನ್ಮಾದ ಬಹಳ ದಿನಗಳಿಗೆ ಸಾಕಾಗುವಷ್ಟಿದೆ. ಒಂದು ಒಳ್ಳೆಯ ವೀಕೆಂಡು ಕಳೆದ ಖುಷಿಯಲ್ಲಿ ಮನೆಯ ಮೆಟ್ಟಿಲು ಹತ್ತಿದೆ. ಬಟ್ಟೆ ತೊಳೆಯುವುದಿತ್ತು.

- - - - - - - - - - - -
Related article: ಗ್ರಹಣ ಮತ್ತು ಚಂದ್ರ

20 comments:

ಸಿಂಧು Sindhu said...

u missed SLB's talk.. :(

Pramod P T said...

ಛೆ! ಈ ಬಾರಿಯೂ miss ಆಗೋಯ್ತಲ್ಲಾ..!
ಸುಶ್ರುತರವರೇ ತುಂಬಾ....ಅಯ್ಯೊ.. ಇನ್ನೇನ್ ಹೇಳೊದ್ ಬಿಡಿ...ನಿಮ್ಗೆ ಗೊತ್ತೇ ಇದೆ :)

subrahmanya said...

ಅದ್ಬುತವಾದ ಬರಹ ಗೆಳೆಯ ತುಂಬಾ ಸಂತೋಷವಾಯಿತು ಓದಿ, ಮುಂದಿನ ಸಲ್ದಿಂದ ನಮಗೂ ತಿಳ್ಸು ಮಾರಾಯ ಅಂತಹ ಕಾರ್ಯಕ್ರಮಗಳಿಗೆ... ನಾವು ಬರ್ತಿವಿ...

ಹಷ೯ ಚರಿತ್ರೆ said...

Anna... illi nange hotte uritaa aitalee.....

che... naseebu illa bidu :(

amar m said...

ಹಾ!!! ಸೊಗಸಾಗಿಗೆ ಕಳೆದಿದ್ದಿಯಾ ಬಿಡು , ಹಾ ಭೈರಪ್ಪನವರ ಕಾರ್ಯಕ್ರಮ miss ಮಾಡಿಕೊಂಡೆ no problem ..... ನಾನು ಅವ್ರ ಮಾತುಗಳನ್ನ ನಿನಗೆ ಮತ್ತೆ ಕೇಳಿಸಬಲ್ಲೆ ...ಅನ್ನುತಾ.

ಗೆಳೆಯ
ಅಮರ

ಸುಶ್ರುತ ದೊಡ್ಡೇರಿ said...

@ ಸಿಂಧು

ಎಂಥ ಮಾಡ್ಲಿ..? ಒಂದನ್ನು ಪಡೆಯಲು ಹೋದ್ರೆ ಮತ್ತೊಂದು ಮಿಸ್ ಆಗ್ತು.... ಊssಮ್..! :(

ಸುಶ್ರುತ ದೊಡ್ಡೇರಿ said...

@ pramod p t

ಮುಂದಿನ್ಸಲ ಮಿಸ್ ಮಾಡ್ಕೋಬೇಡಿ ಆಯ್ತಾ? ನಾನು ಹೋಗೋದಿದ್ರೆ ನಿಮ್ಮನ್ನೂ ಕರೀತೀನಿ.

ಸುಶ್ರುತ ದೊಡ್ಡೇರಿ said...

@ subrahmanya

ಖಂಡಿತ ಹೇಳೋಣ. Actually ನಾನೇ ಹೋಗೋದು ಗ್ಯಾರೆಂಟಿ ಇರ್ಲಿಲ್ಲ... ಹಾಗಾಗಿ ಯಾರನ್ನೂ ಕರೀಲಿಕ್ಕೆ ಆಗ್ಲಿಲ್ಲ... ಅಲ್ದೇ ಫ್ರೀ ಎಂಟ್ರಿ ಇದೆಯೋ ಇಲ್ವೋ ಗೊತ್ತಿರ್ಲಿಲ್ಲ.. ಸೋ..., ನೆಕ್ಸ್ಟ್ ಟೈಮ್ ಎಲ್ಲಾ ಒಟ್ಟಿಗೇ ಹೋಗೋಣ..

ಸುಶ್ರುತ ದೊಡ್ಡೇರಿ said...

@ ಹರ್ಷ

ಯಾಕೆ ಬೇಜಾರ್ ಮಾಡ್ಕ್ಯಳ್ತೆ...? ಭುವನೇಶ್ವರದಲ್ಲೇ ಅಶ್ವತ್ಥ್ ತಂಡದವ್ರಿಗೆ ಒಂದು ಪ್ರೋಗ್ರಾಮ್ ಅರೇಂಜ್ ಮಾಡಕ್ಕೆ ಹೇಳನ ಬಿಡು...

ಸುಶ್ರುತ ದೊಡ್ಡೇರಿ said...

@ amar m

ನೀವು ಭೈರಪ್ಪನವರ ಭಾಷಣಾನ ರೆಕಾರ್ಡ್ ಮಾಡಿದ್ದು ಭಾಳ ಒಳ್ಳೇದಾಯ್ತು. ಸಿಕ್ಕಾಗ ಇಸ್ಕೋತೀನಿ ಸಿಡಿ... ಥ್ಯಾಂಕ್ಸ್... So, ಭಾಳಾ ಲಾಸೇನು ಆಗ್ಲಿಲ್ಲ ನಂಗೆ ಹಂಗಾದ್ರೆ...?! :-)

ರಾಧಾಕೃಷ್ಣ ಆನೆಗುಂಡಿ. said...

ಅಯ್ಯೋ ನಾನು ಬಂದಿದೆ ಕಾರ್ಯಕ್ರಮಕ್ಕೆ ನಿಮ್ಮನ್ನ ಮಿಸ್ ಮಾಡಿದೆ ಮಾರಾಯರೇ. ೮ ನೇ ದಿನಾಂಕದಂದು ಲಂಕೇಶ್ ಬಗ್ಗೆ ಕಾರ್ಯಕ್ರಮ ಇದೇ ವೇದಿಕೆಯಲ್ಲಿದೆ, ನೀವೂ ಬನ್ನಿ

ಸುಶ್ರುತ ದೊಡ್ಡೇರಿ said...

@ ರಾಧಾಕೃಷ್ಣ ಆನೆಗುಂಡಿ

ಹೌದಾ? ನೀವೂ ಬಂದಿದ್ರಾ? ಎಲ್ಲಿ ಕೂತಿದ್ರಿ? ಛೇ! ಮೀಟ್ ಆಗ್ಬೋದಿತ್ತು... ಹೋಗ್ಲಿ ಬಿಡಿ, ಮತ್ತೊಮ್ಮೆ ಸಿಗೋಣ.

ಲಂಕೇಶ್ ಕಾರ್ಯಕ್ರಮ ಎಂಟನೇ ತಾರೀಖು? ಅಯ್ಯೋ ಗುರುವಾರ! ಆಫೀಸಿನಲ್ಲಿ ಬ್ಯುಸಿ ಇರ್ತೀನಿ... ನೋಡೋಣ, ಆದ್ರೆ ಬರ್ತೀನಿ. ಎಷ್ಟೊತ್ತಿಗೆ ಅಂತ ಹೇಳಲೇ ಇಲ್ಲ?

Gubbacchi said...

I didn't know about the program...I really missed it :(

ಸುಶ್ರುತ ದೊಡ್ಡೇರಿ said...

@ gubbacchi

ಗುಬ್ಬಚ್ಚಿ, ಬೇಜಾರ್ ಮಾಡ್ಕೋಬೇಡಿ. ಮುಂದಿನ್ ಸಲದ ಪ್ರೋಗ್ರಾಮಿಗೆ ನಿಮ್ಮನ್ನೂ ಕರೀತೀನಿ ಓಕೇ? :)

ರಾಧಾಕೃಷ್ಣ ಆನೆಗುಂಡಿ. said...

tomarow 4 o clock
9900239680

Jagdish said...

wow ! thanks for this good read..nice to read your kannada. by the way, how to write kannada in blog?

ಸುಶ್ರುತ ದೊಡ್ಡೇರಿ said...

@ jagadish

Thanx for your comments. To write Kannada in Blog, u first need to download Baraha Software from www.baraha.com. After installing the software, u can easily write in Kannada using Unicode option.

ಜ್ಯೋತಿ said...

ಬರಹದಿಂದ ಯೂನಿಕೋಡ್ option ಮಾತ್ರ ಅಲ್ಲ, BARAHA IME-1.0 ಅಂತ ಇದೆ, ಅದರ ಮೂಲಕ ನೇರವಾಗಿ ಯೂನಿಕೋಡ್'ನಲ್ಲೇ ಬರೆಯಬಹುದು.

Shiv said...

ಸುಶ್ರುತ,
ಬೆಂಗಳೂರಿಗರ ಬಗೆಗಿನ ಮಾತುಗಳಲ್ಲಿ ರಾಜೋತ್ಸವ,ಗಣಪತಿ ಹಬ್ಬದ ಜೊತೆಗೆ ಅಲ್ಲಿನ ಅಣ್ಣಮ್ಮ ದೇವಿ ಉತ್ಸವ ಸೇರಿಸಬೇಕಿತ್ತು !

ಅಂತು ಅಶ್ವಥ್ 'ಸ್ವರ ಸಮರ್ಪಣೆ' ಯಲ್ಲಿ ಪೂರ್ತಿ ಮಿಂದು ಬಂದಿರಿ..

ರಾಗಿಗುಡ್ಡದ ಮರದ ಹತ್ತಿರ ಮತ್ತೆ ಹೋಗಿದ್ದಿರಾ?

Srikanth.K.S(ಶ್ರೀಕಾಂತ) said...

ಜಗದೀಶ ಅವರ ಪ್ರಶ್ನೆಗೆ ನನ್ನದೊಂದು ಉತ್ತರ- baraha ಇಲ್ಲದಿದ್ರೆ ಹೀಗೆ ಮಾಡಬಹುದು.
http://demo.vishalon.net/KannadaTypePad.htm
ಇಲ್ಲಿ ಕನ್ನಡ ಬರೆದು , ನಂತರ paste ಮಾಡಬಹುದು.ಇಲ್ಲಿ ಎನನ್ನೂ install ಮಾಡುವ ಗೋಜಿಲ್ಲ.