Thursday, April 05, 2007

ತೇಜಸ್ವಿ ನನ್ನೊಂದಿಗೇ ಇದ್ದಾರೆ...

ಡಿಪ್ಲೋಮಾ ಎರಡನೇ ವರ್ಷ... ಮಧ್ಯಾಹ್ನದ ಪೀರಿಯಡ್ಡು... ನಿದ್ರೆ ಬರುತ್ತಿದ್ದರೂ ನಿದ್ರೆ ಮಾಡಬಾರದಂತಹ ಕ್ಲಾಸು. ಸಂಜೀವನ್ ಸರ್ ಕ್ಲಾಸು. ಸಂಜೀವನ್ ಸರ್ ಬರೀ ಲೆಕ್ಚರ್ ಕೊಡುತ್ತಿರಲಿಲ್ಲ; ಪಠ್ಯೇತರ ವಿಷಯಗಳ ಬಗ್ಗೆಯೂ ಹೇಳುತ್ತಿದ್ದರು. ಅಂದು ಅವರು ನಮ್ಮನ್ನು ಕೇಳಿದರು: 'ನಿಮ್ಮಲ್ಲಿ ಸಾಹಿತ್ಯಾಸಕ್ತರು ಯಾರಾದರೂ ಇದ್ದೀರಾ? ನೀವು ತೇಜಸ್ವಿಯವರನ್ನು ಓದಿದ್ದೀರಾ?' ಇನ್ನೂ ಓದಿರಲಿಲ್ಲ. ಮನೆಗೆ ಬರುತ್ತಿದ್ದ ಮ್ಯಾಗಜೀನುಗಳನ್ನು ಓದುತ್ತಿದ್ದೆ. ಅಪ್ಪ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳ ಮೇಲೆ ಕಣ್ಣು ಹಾಯಿಸುತ್ತಿದ್ದೆ. ತ್ರಿವೇಣಿಯನ್ನು ಓದಿದ್ದೆ. ಎಂ.ಕೆ. ಇಂದಿರಾರನ್ನು ಓದಿದ್ದೆ. ಭೈರಪ್ಪನವರ ಬಗ್ಗೆ ಕೇಳಿದ್ದರೂ ಎರಡು ಸಾಲು ಹೇಳುತ್ತಿದ್ದೆ. ಆದರೆ ತೇಜಸ್ವಿ ಇನ್ನೂ ನನಗೆ ಸಿಕ್ಕಿರಲೇ ಇಲ್ಲ.

ಆದರೆ ಅಂದಿನ ಕ್ಲಾಸು ಮುಗಿಸಿ ಮನೆಗೆ ಹೊರಡುವ ಮುನ್ನ ಲೈಬ್ರರಿಗೆ ಹೊಕ್ಕೆ. ಕಾಲೇಜಿನ ಎದುರಿಗೇ ಲೈಬ್ರರಿ. ಸೊರಬದ ಲೈಬ್ರರಿಯ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಜಾಲಾಡಿದಾಗ 'ಕಿರಗೂರಿನ ಗಯ್ಯಾಳಿಗಳು' ಪುಸ್ತಕ ಸಿಕ್ಕಿತು. ಮನೆಗೆ ಬಂದು ಇದ್ದಬದ್ದ ಪುಸ್ತಕಗಳನ್ನೆಲ್ಲ ಪಕ್ಕಕ್ಕಿಟ್ಟು ಇದನ್ನು ಓದುತ್ತಾ ಕುಳಿತರೆ ಸಂಜೆಯಾದದ್ದು ಯಾವಾಗ, ರಾತ್ರಿಯಾದದ್ದು ಯಾವಾಗ, ಊಟ ಮಾಡಿದ್ದು ಯಾವಾಗ, ಮಲಗಿದ್ದು ಯಾವಾಗ? ಕನಸಿನಲ್ಲೂ ಆ ಪುಸ್ತಕದ ಪಾತ್ರಗಳು. ಜೋರು ಗಾಳಿಗೆ ಮನೆಯ ಪಕ್ಕದ ಹೆಬ್ಬಲಸಿನ ಮರ ಉರುಳಿ ಬಿದ್ದಿತ್ತು. ಸೋನ್ಸ್ ಉರುಳಿಸಿದ ದಿಮ್ಮಿ ನನ್ನತ್ತಲೇ ಉರುಳಿ ಬರುತ್ತಿತ್ತು. ಅಪ್ಪನ ಸೊಂಟ ಉಳುಕಿಹೋಗಿತ್ತು... ರಹಸ್ಯ ವಿಶ್ವ ನಾನೂ ಕಂಡಿದ್ದೆ.

ಆಮೇಲೆ ತೇಜಸ್ವಿಯವರ ಪುಸ್ತಕಗಳನ್ನು ಒಂದರ ಮೇಲೊಂದರಂತೆ ಓದುತ್ತಾ ಹೋದೆ. ಅವರು ಕಟ್ಟಿಕೊಟ್ಟ, ಎಂದಿಗೂ ಮಾಸಲಾರದ ಚಿತ್ರಣಗಳು ಅವೆಷ್ಟೋ? ಪೇಟೆಯಲ್ಲಿ ವಲ್ಲಗೆ ನಡೆದುಕೊಂಡು ಹೋಗುತ್ತಿರುವ ಕೃಷ್ಣೇಗೌಡನ ಆನೆ, ಜೇನಿನ ಡಬ್ಬಿಯನ್ನೆಲ್ಲ ಮೈಮೇಲೆ ಕೆಡಗಿಕೊಂಡಿರುವ ಮಂದ, ಜೊಲ್ಲು ಸುರಿಸುತ್ತಾ ಮಲಗಿರುವ ಜೂಲುಜೂಲು ಕೂದಲಿನ ಕಿವಿ, ಈಚಲ ಬಯಲಿನಲ್ಲಿ ಸಾಗುತ್ತಾ ಇರುವ ಚಕ್ಕಡಿ, ಸಹ್ಯಾದ್ರಿಯ ಅಂಚಿನಲ್ಲಿ ಕೊನೆಗೂ ಕೈತಪ್ಪಿಹೋದ ಓತಿ.... ಒಂದೇ ಎರಡೇ? ಜುಗಾರಿ ಕ್ರಾಸಿನ ಸುರೇಶನ ಭಯ-ತಲ್ಲಣಗಳನ್ನು ನಾವೂ ಅನುಭವಿಸಿದ್ದು ಸುಳ್ಳೇ? ಬಿರಿಯಾನಿಯ ರುಚಿ ನೋಡಿರದಿದ್ದರೂ ಕರಿಯಪ್ಪ ಮಾಡಿದ ಬಿರಿಯಾನಿಯ ವಾಸನೆಯನ್ನು ಓದಿನಲ್ಲೇ ಆಸ್ವಾದಿಸಿದ್ದು ಸುಳ್ಳೇ? ಬೋಬಣ್ಣನ ಹತಾಶೆ ಕಂಡು ಕಣ್ಣು ತೇವ ಮಾಡಿಕೊಂಡದ್ದು ಸುಳ್ಳೇ? ತಬರನ ಕತೆಯಲ್ಲಿ ನಮ್ಮನ್ನೇ ಕಂಡದ್ದು ಸುಳ್ಳೇ?

ಇವತ್ತೂ ಅಂಥದೇ ಒಂದು ಮಧ್ಯಾಹ್ನ. ಆಗಷ್ಟೇ ಊಟ ಮಾಡಿ ಬಂದಿದ್ದೆ. ಉಳಿದ ಕೆಲಸಗಳನ್ನು ಬೇಗನೆ ಪೂರೈಸಿದರೆ ಅವರಿವರೊಂದಿಗೆ ಚಾಟಿಂಗಾದರೂ ಮಾಡಬಹುದು ಎಂದಾಲೋಚಿಸಿ ಬೇಗಬೇಗನೆ ಕೆಲಸ ಮಾಡುತ್ತಿದ್ದೆ. ಕೀಬೋರ್ಡಿನಲ್ಲಿ ಕುಟ್ಟಿದ್ದು ಮಾನಿಟರಿನ ಪರದೆಯ ಮೇಲೆ ಅಕ್ಷರವಾಗುತ್ತಿತ್ತು. ಫಕ್ಕನೆ ಒಂದು ಪಾಪ್-ಅಪ್ ವಿಂಡೋ ಉದ್ಭವವಾಯಿತು. ಮಾನಿಟರಿನ ಕೆಳಾಗಡೆ ಮೂಲೆಯಲ್ಲಿದ್ದ ಜೀಟಾಕಿನ ಪುಟ್ಟ ಐಕಾನಿನಿಂದ ಎದ್ದು ಬಂದಿದ್ದ ಆ ವಿಂಡೋದಲ್ಲಿ ಶ್ರೀನಿಧಿ ಅಂದ: 'ಬ್ಯಾಡ್ ನಿವ್ಸ್!'

'ಏನು?' ಅಂತ ಕೇಳಿದೆ.

'ತೇಜಸ್ವಿ ತೀರಿಕೊಂಡರಂತೆ!'

ಅರ್ಥವಾಗಲಿಲ್ಲ. ಮತ್ತೊಮ್ಮೆ ಕೇಳಿದೆ. ಮತ್ತೆ ಮತ್ತೆ ಕೇಳಿದೆ. ನನಗೆ ಆ ವಿಷಯ ಪೂರ್ತಿ ತಲೆಗೆ ಹೋಗುವಷ್ಟರಲ್ಲಿ ಮೂರ್ನಾಕು ವಿಂಡೋಗಳು ಪಾಪ್ ಆಗಿ 'ಬ್ಯಾಡ್ ನಿವ್ಸ್' 'ಬ್ಯಾಡ್ ನಿವ್ಸ್' ಅನ್ನತೊಡಗಿದವು. ಮೊಬೈಲೂ ವೈಬ್ರೇಟ್ ಆಗತೊಡಗಿತು.

ತೇಜಸ್ವಿ ಸತ್ತು ಹೋಗಿದ್ದಾರಾ? ಅದು ಹೇಗೆ ಸಾಧ್ಯ? ನನ್ನ ಕಣ್ಣ ಮುಂದೇ ಇದ್ದಾರಲ್ಲ ಇನ್ನೂ ಕುಬಿ, ಇಯಾಲ, ಗೌರಿ, ಪ್ಯಾರ, ಯೆಂಗ್ಟ, ದಾನಮ್ಮ, ಕರ್ವಾಲೋ, ಇಂಗ್ಲಿಷ್ ಗೌಡ... ಕಣ್ಣೆದುರಿಗೇ ಓಡುತ್ತಿದೆಯಲ್ಲಾ ಇನ್ನೂ ಖುದ್ದೂಸ್ ಎಕ್ಸ್‍ಪ್ರೆಸ್... ಇಡೀ ಊರಿಗೆ ಊರೇ ಹೊತ್ತಿ ಉರಿಯುತ್ತಿರುವಾಗ, ದಟ್ಟ ಹೊಗೆ ಕವಿದಿರುವಾಗ, ಇವರಿಬ್ಬರೇ ಪ್ರೇಮಿಗಳು ಬೆಟ್ಟದ ಮೇಲೆ.. ಮೇಲೆ....

ತೇಜಸ್ವಿ ನನ್ನೊಂದಿಗೆ ಅಮರವಾಗಿದ್ದಾರೆ... ಅವರು ಸೃಷ್ಟಿಸಿದ ಪಾತ್ರಗಳೊಂದಿಗೆ ಜೀವಂತವಾಗಿದ್ದಾರೆ... ಕಗ್ಗಾಡಿನ ಮಧ್ಯೆ ಹಸಿರಾಗಿದ್ದಾರೆ... ರತ್ನಮಾಲ ಹೊಳೆಯಲ್ಲಿನ ಕೆಂಪು ವಜ್ರದಂತೆ...

ಎಲ್ಲೋ ಓದಿದ್ದೆ: ಕುವೆಂಪುರವರ ಅತ್ಯುತ್ತಮ ಕೃತಿ 'ತೇಜಸ್ವಿ'ಯಂತೆ! ಅಲ್ಲ ಅನ್ನುವುದು ಹೇಗೆ? ಸರ್, ನಿಮಗೊಂದು ಭಾವಪೂರ್ಣ ಶ್ರದ್ಧಾಂಜಲಿ.

12 comments:

Parisarapremi said...

nannadoo ondu shraddhaanjali... namma god father ge...

http://speaktonature.blogspot.com/2007/04/blog-post.html

ಸಿಂಧು sindhu said...

ನಿಜ.
ದು:ಖದ ವಿಷಯ.

Anonymous said...

ಪ್ರಿಯ ಸುಶ್ರುತ
ನೀವು ತೇಜಸ್ವಿಯವರಿಗೆ ಬರೆದ ಶೃದ್ಡಾಂಜಲಿ ಜೀವಂತವಾಗಿದೆ
ನನಗಂತೂ ಏನು ಬರೆಯಲೂ ತೋಚುತ್ತಿಲ್ಲ.
ರಶೀದ್

Anonymous said...

ಕೆಸರೂರಿನ ಲಂಟಾನದ ಕಗ್ಗಾಡಲ್ಲಿ ಜೀವಂತವಾಗಿರಬಹುದು ತೇಜಸ್ವಿ...ಆದರೆ ನಮ್ಮಂಥ ತಬರರಿಗೆ ನಿಲುಕಿಯಾರೇ ಅವರು?

Shiv said...

ಸುಶ್ರುತ,

ನಿಜ..ಕುವೆಂಪು ಅವರ ಅತ್ಯುನ್ನತ ಕೃತಿ ಪೂರ್ಣಚಂದ್ರರೇ..

ನನ್ನದೊಂದು ನುಡಿ-ನಮನ ನನ್ನ ಬ್ಲಾಗಿನಲ್ಲಿ
http://chittey.blogspot.com

Mahantesh said...

ಸುಶ್ರುತ,
ನಿಜ..ಕುವೆಂಪು ಅವರ ಅತ್ಯುನ್ನತ ಕೃತಿ ಪೂರ್ಣಚಂದ್ರರೇ..
ಅವರ ಒಂದು ಕೃತಿ ಒದಿದರೇ, ಎಲ್ಲಾ ಒದಬೇಕು ಅನ್ನೊ ಭಾವನೆ ಸುಳ್ಳಲ್ಲ....

ನನ್ನದೊಂದು ನುಡಿ-ನಮನ ನನ್ನ ಬ್ಲಾಗಿನಲ್ಲಿ
http://mahantesh-bec1.blogspot.com

ಸಿಂಧು sindhu said...

ಸು, ಒಂದು ಆಪ್ಟರ್ ಥಾಟ್..
ತೇಜಸ್ವಿ - ಸರಾಗವಾಗಿ ಹರಿದು ಹೋಗಬಹುದಾಗಿದ್ದ ನದಿಯೊಂದು, ಕಾಡಿನ ವಿಸ್ಮಯ ಹುಡುಕುತ್ತಾ ಹೋಗಿ, ಬಂಡೆಗಲ್ಗಳ ಕೊರೆದು, ಜಗದ ಅಚ್ಚರಿಗಳನೆಲ್ಲ ಮುತ್ತು ಹನಿಗಳಾಗಿ ಸಿಡಿಸಿ, ಹನಿಗಳಲ್ಲಿ ಹಗುರಾಗಿಯೂ, ಒಟ್ಟು ಧಾರೆಯಲ್ಲಿ ಅಗಾಧವಾಗಿಯೂ ಕಾಣಿಸುವ ಜಲಪಾತದಂತಹ ಚೇತನ. - ಅವರನ್ನು ಕುವೆಂಪು ಅವರ ಕೃತಿ ಎಂದು ಭಾವಿಸುವ ಅಭಿಪ್ರಾಯವೇ ಸರಿಯಲ್ಲ ಅನ್ನಿಸುತ್ತದೆ. ಅವರು ಕುವೆಂಪು ರಸ ಸಿದ್ದ್ದಿಯನ್ನು ಉಂಡು ಬೆಳೆದರೂ, ಅವರ ಅಭಿವ್ಯಕ್ತಿಯೇ ಬೇರೆ, ಭಿನ್ನ ಸ್ವತಂತ್ರ.
ನಾನು ಅವರನ್ನ ತುಂಬ ಪ್ರೀತಿಸುತ್ತೇನೆ. ಅವರ ಬರಹ ನುಡಿಗಳಿಗಿಂತಾ ಹೆಚ್ಚಾಗಿ ಅವರ ಕೆಲಸ್, ಬದುಕು, ನಡವಳಿಕೆಗಾಗಿ.. ತೇಜಸ್ವಿಯೆದುರು ಈ ಮಾತು ಹೇಳಿದ್ರೆ ಅಯ್ಯೊ ಮುಂಡೇವಾ, ಬೇರೆ ಕೆಲ್ಸ ಕಾರ್ಯ ಇಲ್ವೇನ್ರಾ ಅಂತ ನಕ್ ಬಿಡ್ತಿದ್ರು ಅನ್ಸುತ್ತೆ. ನಿಂಗೇನನ್ಸುತ್ತೆ.. ಸೆಕೆಂಡ್ ಥಾಟ್ ...

Sushrutha Dodderi said...

@ ಸಿಂಧು

'ಕುವೆಂಪುರವರ ಅತ್ಯುತ್ತಮ ಕೃತಿ ತೇಜಸ್ವಿ' ಅನ್ನೋದು ಒಂದು ಹೇಳಿಕೆ ಅಷ್ಟೇ. ತೇಜಸ್ವಿಯೇನು ಅಪ್ಪನ ನೆರಳಲ್ಲಿ ಬೆಳಕಿಗೆ ಬಂದವರಲ್ಲ. ಕುವೆಂಪು ಒಂದು ಮರ; ತೇಜಸ್ವಿ ಒಂದು ಮರ. ತೇಜಸ್ವಿಯ ಅಪ್ಪ ಕುವೆಂಪು ಆಗಿದ್ರಿಂದ ತೇಜಸ್ವಿ ಅಷ್ಟೊಂದು ಫೇಮಸ್ ಆದ್ರು ಅಂತಾನೂ ಅಲ್ಲ. ಹಾಗಂತ ಆ ಹೇಳಿಕೆ ಕುವೆಂಪುರವರನ್ನು degrade ಮಾಡುವ ಉದ್ದೇಶವೂ ಅಲ್ಲ. May be, thats a controversial statement. Leave that.

ಅವತ್ತೆಲ್ಲೋ ಟಿ.ಎನ್. ಸೀತಾರಾಂ ಮಾತಾಡುತ್ತಿದ್ದರು: 'ಒಂದಲ್ಲ, ಎರಡು ಜ್ಞಾನಪೀಠ ಪ್ರಶಸ್ತಿಗೆ ಅರ್ಹರು ತೇಜಸ್ವಿ' ಅಂತ! Again, one more controversial statement!

Second thought, no... ತೇಜಸ್ವಿಯವರನ್ನ ಅಳೆಯಲಿಕ್ಕೆ, ಅವರ ಬಗ್ಗೆ ಮಾತಾಡಲಿಕ್ಕೆ ನಾವ್ಯಾರು? ನಾವು ಅವರ ಕೃತಿಗಳನ್ನು ಓದಿ ಖುಷಿಪಟ್ಟವರು. ಅವರ ಜೀವನ ವಿಧಾನವನ್ನು ಕಂಡು (ಕಂಡಂತೆ) ಮೆಚ್ಚಿಕೊಂಡವರು. ಈಗ ಅವರಿಲ್ಲ. ಮುಂದೆ ಅವರಿಂದ ನಿರೀಕ್ಷಿಸಬಹುದಾಗಿದ್ದ ಸಾಹಿತ್ಯವಿಲ್ಲ. ಇರುವುದನ್ನೇ ಮತ್ತೆ ಮತ್ತೆ ಓದಿಕೊಂಡು ಆನಂದಿಸಬೇಕಾದ ಅನಿವಾರ್ಯತೆ... ಅವರ ಕೃತಿಗಳನ್ನು ಓದದವರಿಗೆ ಕೊಡಬಹುದುದಷ್ಟೇ ನಾವು ಮಾಡಬಹುದಾದ ಕೆಲಸ ಅನ್ನಿಸುತ್ತೆ...

ಸಿಂಧು sindhu said...

ಸುಶ್ರುತ,
ನನ್ನ ಪ್ರತಿಕ್ರಿಯೆ ಕೂಡಾ - 'ಕುವೆಂಪುರವರ ಅತ್ಯುತ್ತಮ ಕೃತಿ ತೇಜಸ್ವಿ' ಅನ್ನೋದು ಒಂದು ಹೇಳಿಕೆ ಅಷ್ಟೇ.- ಆ ಹೇಳಿಕೆಯ ಬಗ್ಗೆ ಮಾತ್ರ.ಆದರ ಹೊರತಾಗಿ ನಿನ್ನ ಭಾವಪೂರ್ಣ ಶೃದ್ಧಾಂಜಲಿ ನಂಗೆ ತುಂಬ ಹಿಡಿಸಿತು. ತೇಜಸ್ವಿ ಒಬ್ಬ ಸ್ವತಂತ್ರ ಅನನ್ಯ ಪ್ರತಿಭೆ ಅಂತ ಅವರನ್ನು ಇಷ್ಟ ಪಡುವ ನಾವೆಲ್ಲ, ಗೊತ್ತಿದ್ದೂ ಯಾಕೆ ಅವ್ರನ್ನ ಕುವೆಂಪುರ ಶ್ರೇಷ್ಠ ಕೃತಿ ಅಂತ ಕರೀಬೇಕೂಂತ ನನ್ನ ಅನಿಸಿಕೆ.

ತೇಜಸ್ವಿಯವರನ್ನು ಅಳೆಯುವ ಮತ್ತು ಮೌಲ್ಯಮಾಪನ ಮಾಡುವ ಕೆಲಸ ನಾನು ಮಾಡಿಲ್ಲ. ನಿನ್ನ ಬರಹವನ್ನು ಹಗುರಾಗಿಸುವ ಉದ್ದೇಶವೂ ನನಗಿಲ್ಲ. ಅವರ ಚೇತನವನ್ನು ಇಂತಹುದೇ, ಇದರಿಂದಲೇ, ಇವರಿಂದಲೇ ಅಂತ ಕಟ್ಟಿಡಬಹುದಾದ ಯಾವ ಸ್ತುತಿ/ನಿಂದೆಗಳೂ ನನ್ನನ್ನು ಕಾಡುತ್ತವೆ. ಹಾಗಾಗಿ ಬರೆದೆನಷ್ಟೇ.

ಅವರ ಬರಹ ಮತ್ತು ಬದುಕು, ಕನ್ನಡವನ್ನು ಪ್ರೀತಿಸುವ ನಮಗೆಲ್ಲ ಆಹ್ಲಾದದ ತಂಗಾಳಿಯಾಗಿ, ಗೊಂದಲದ ಬಿಸಿಲಿಗೆ ನೆರಳಾಗಿ ಸದಾ ಇರುತ್ತದೆ.

shrutha said...

nimma maathu ...nijakku arthapoorna miditha

Chandra Kengatte said...

Poorna Chandra Tejaswi Tammade aada ondu Chaapannu ee Namma Kannada Sahitya dalli Srishtisiddaru. Kevala Namma Kuvempu navara Maga endu gurutisikolladde tammade aada lekhanagalinda Tamma Hesarannu Jagattige Tiliyuva haage madida mahaan Lekhaka. Avaru Prakrutiya Varna vaibhava da Bagge Jeeva Janthugala bagge Bareda aneka Lekhanagalu Eshto Dinadinda kaadu nodi tilidu Bareda adaralle R & D Madidanthe Eve.. Entaha Obba Mahan Malenadina Lekhaka nannu Kaledu Kondiddeve.. Avarige Ella Samasta Kannadigara paravagi Shraddanjali yannu Koruva............

Vens said...

Hi guys let me paste this link where I wrote my concern abut tejaswi in astroshiv's blogspot. pls sorry i dint write in kannada here.. next time will. how to write here in this website i dint get.
any way go through the link pls.
http://astroshiva.wordpress.com/2007/04/05/remembering-tejaswi/