Thursday, July 05, 2007

ಹಕ್ಕಿ ಕಥೆ ಮುಂದುವರೆದುದು...!

ಶ್ರೀನಿಧಿಯ ಬ್ಲಾಗಿನಿಂದ ಮುಂದುವರೆದುದು...

ಹಾಗೆ ದಾರಿ ತಪ್ಪಿ ಹೋಗಿದ್ದ ಹಕ್ಕಿಗೆ ಶ್ರೀನಿಧಿ ದಾರಿ ತೋರಿಸಿ ಒಳ್ಳೇ ಕೆಲಸ ಮಾಡಿದ. ಗೂಡಿಗೆ ಹಕ್ಕಿ ಮರಳಿದಾಗ ಹೆಂಡತಿ-ಮಕ್ಕಳಿಗೆ ಆದ ಖುಷಿ ಅಷ್ಟಿಷ್ಟಲ್ಲ.. ನನಗೂ ಪರೀಕ್ಷೆ ಬರೆಯಲು ನೆಮ್ಮದಿಯಾಯ್ತು.. ಹಿಂದಿನ ರಾತ್ರಿ ನಾನು ಕಳುಹಿಸಿದ್ದ ಈ ಮೆಸೇಜನ್ನು ಓದಿ ನನ್ನ ಅನೇಕ ಗೆಳೆಯರು ಟೆನ್ಷನ್ನಿಗೆ ಒಳಗಾಗಿದ್ದರು. ಬೆಳಗಿನಿಂದಲೇ ಕೆಲವರು ಮೆಸೇಜು ಮಾಡಿ 'ಹಕ್ಕಿ ವಾಪಾಸ್ ಬಂತಾ?' ಎಂದೆಲ್ಲ ಕೇಳಿದ್ದರು. ಅಂದು ರಾತ್ರಿ ಎಲ್ಲರಿಗೂ ಮೆಸೇಜು ಕಳುಹಿಸಿದೆ:

ಹಕ್ಕಿ ವಾಪಸಾಗಿದೆ. ಪಾಪ, ದಾರಿ ತಪ್ಪಿ ಹೋಗಿತ್ತಂತೆ ನಿನ್ನೆ, ನನ್ನ ಗೆಳೆಯನೊಬ್ಬ ವಿಳಾಸ ಕೊಟ್ಟು ಕಳುಹಿಸಿದ್ದಾನೆ. ಇವತ್ತು ಗೂಡಿನಲ್ಲಿ ಸಂಭ್ರಮ.. ಸಂಭ್ರಮಕ್ಕೆ ಮತ್ತೂ ಒಂದು ಕಾರಣವಿದೆ: ಇವತ್ತು ಮೊದಲನೇ ಮರಿಯ ಹುಟ್ಟುಹಬ್ಬ! ಸಂಜೆ ಹೊತ್ತು ನಾನು ಅವರೊಟ್ಟಿಗೆ ಸೇರಿ ಸಿಡಿಸಿದ ಪಟಾಕಿ ಸದ್ದು ಕೇಳಿಸಿರ್ಬೇಕಲ್ಲ ನಿಂಗೂ? ಹಾರಿಸಿದ ರಾಕೆಟ್ಟು ಉದುರಿಸಿದ ನಕ್ಷತ್ರಗಳು ಕಾಣಿಸಿರಬೇಕಲ್ಲ ನಿಂಗೂ? ಆ ನಕ್ಷತ್ರಗಳೇ ಗುಡ್ ನೈಟ್ ಎಂದು ರಂಗೋಲಿ ಎಳೆದದ್ದೂ?

ಈ ಮೆಸೇಜು ಅನೇಕರನ್ನು ಸಮಾಧಾನಗೊಳಿಸ್ತು ಅನ್ಸುತ್ತೆ. ತಕ್‍ತಕ್ಷಣ ಸುಮಾರು ರಿಪ್ಲೇಗಳು ಬಂದ್ವು. 'ಹಕ್ಕಿಯ ಮನೆಯಲ್ಲಿ ದೀಪಾವಾಳಿಯೇ? ಹೌದೇ ಹೌದು. ಚಂದ್ರನ ಬಳಿಯಿದ್ದ ನಕ್ಷತ್ರವೂ ಸಂಭ್ರಮಿಸಿ ಸಾಕ್ಷಿ ನುಡಿಯುತ್ತಿದೆ..!' ಅಂತ ನಯ್ನಿ ರಿಪ್ಲೇ ಮಾಡಿದ್ದಳು. ಅವಳು ಹಾಗ್ಯಾಕೆ ಅಂದ್ಲು ಅಂದ್ರೆ, ಅವತ್ತು ಶುಕ್ರಗ್ರಹ ಚಂದ್ರನ ತುಂಬ ಸಮೀಪ ಬಂದಿತ್ತು. ಶ್ರೀ ಮಾಡಿದ ರಿಪ್ಲೇ ಸಹ ಹೆಚ್ಚುಕಮ್ಮಿ ಹಾಗೇ ಇತ್ತು: 'ನಿಧಿ ಹೇಳಿದ, ಹಕ್ಕಿ ವಾಪಾಸ್ ಕಳುಹಿಸಿದೆ ಅಂತ. ಇವತ್ತು ಶುಕ್ರ-ಚಂದ್ರ ಮೀಟ್ ಆಗಿದ್ದು ಇದೇ ಹಕ್ಕಿ ಸುದ್ದಿ ಮಾತಾಡ್ಲಿಕ್ಕೇ ಅಂತೆ? ಒಳ್ಳೇದಾಯ್ತು ಬಿಡು.. ಹಕ್ಕಿ ಸಂಸಾರಕ್ಕೂ ನಿಂಗೂ ಗುಡ್ ನೈಟ್!'

ತಂಗಿ ರಂಜನಾ ಮಾತ್ರ ಸ್ವಲ್ಪ ಜಾಸ್ತೀನೇ ಎಕ್ಸೈಟ್ ಆದವಳಂತೆ ಕಂಡಳು. ಅವಳದೊಂಥರಾ ಹುಚ್ಚು ಕಾಳಜಿ ಎಲ್ಲರ ಬಗ್ಗೆಯೂ, ಎಲ್ಲದರ ಬಗ್ಗೆಯೂ. ಆ ಕಾಳಜಿಯ ನೆರಳು ಹಕ್ಕಿ ಸಂಸಾರದ ಮೇಲೂ ಬೀಳಲಿ ಅಂತ ಬಯಸಿದಳೇನೋ? 'ಆ ಗರ್ಭಿಣಿ ಹಕ್ಕೀನ ಡಾಕ್ಟರ್ ಹತ್ರ ಚೆಕ್ ಅಪ್ ಮಾಡಸ್ತಾ ಇದಾರೋ ಇಲ್ವೋ ವಿಚಾರ್ಸು.. ಯಾವುದೇ ಕಾರಣಕ್ಕೂ ನಿನ್ನ ಸೆಲ್‍ನ ಸೈಲೆಂಟ್ ಮೋಡ್‍ನಲ್ಲಿ ಇಡ್ಬೇಡ. ರಾತ್ರಿ ಏನಾದ್ರು ಹೆಚ್ಚು-ಕಮ್ಮಿ ಆದ್ರೆ ಅವಕ್ಕೆ ಮತ್ಯಾರೂ ಇಲ್ಲ.. ಶ್ರೀನಿಧಿ ಬೇರೆ ತುಂಬಾ ದೂರ.. ಆ ಹಕ್ಕಿ ಹತ್ರ ಕಿವಿಗೆ ಹತ್ತಿ ಇಟ್ಕೊಂಡು ಬೆಚ್ಚಗಿರಲಿಕ್ಕೆ ಹೇಳು.. ಸ್ವೆಟರ್ ಹಾಕ್ಕೊಂಡು ಹುಷಾರಾಗಿರ್ಲಿಕ್ಕೆ ಹೇಳು.. ಬೇಕಿದ್ರೆ ನನ್ನ ಸೆಲ್ ನಂಬರ್ ಕೊಡು..' ಎಂದೆಲ್ಲ ತುಂಬಾ ಆಸ್ಥೆಯಿಂದ ರಿಪ್ಲೇ ಮಾಡಿದ್ದಳು.

ನನ್ನ ಡಿಪ್ಲೋಮಾ ಮುಗಿದಮೇಲೆ ಕೆಲಸಕ್ಕೆ ಸೇರಿಕೊಂಡುಬಿಟ್ಟೆನಲ್ಲ? ಆಮೇಲೆ ಅದೇನೇನೋ ಕೋರ್ಸುಗಳನ್ನು ಮಾಡುತ್ತಾ ಸಮಯ ಕಳೆದೆ. ಈಗ, ತೀರಾ ಪುರುಸೊತ್ತು ಮಾಡಿಕೊಂಡು 'ಒಂದು ಡಿಗ್ರಿ ಸರ್ಟಿಫಿಕೇಟ್ ತಗಳುವಾ' ಅಂತ ಮನಸು ಮಾಡಿದೆ. ಪರೀಕ್ಷೆಗೆ ಕಟ್ಟಿದೆ. ಕ್ಲಾಸಿಗೆ ಹೋಗಿ ಕೂತು ಕೇಳುವಷ್ಟು ವ್ಯವಧಾನ ನನ್ನಲ್ಲಿ ಉಳಿದಿದ್ದಂತೆ ಕಾಣಲಿಲ್ಲವಾದ್ದರಿಂದ ಕರೆಸ್ಪಾಂಡೆನ್ಸ್ ಕೋರ್ಸು ತಗೊಂಡಿದ್ದೆ. ಓದಲಿಕ್ಕೆ ಮೂಡಂತೂ ಸ್ವಲ್ಪವೂ ಇರಲಿಲ್ಲ.. ಆದರೂ ಎಕ್ಸಾಮಿಗೆ ಎರಡು ದಿನವಿರಬೇಕಾದರೆ ಜ್ಞಾನೋದಯವಾದಂತಾಗಿ ಓದಲು ಶುರು ಮಾಡಿದ್ದೆ. ಎಲ್ಲೆಲ್ಲೋ ಹರಿದು ಹೋಗುತ್ತಿದ್ದ ಮನಸ ಕುದುರೆಯನ್ನು ಕಡಿವಾಣ ಹಾಕಿ ನಿಲ್ಲಿಸುವುದೇ ಒಂದು ಸವಾಲಾಗಿತ್ತು. ಮಧ್ಯದಲ್ಲಿ ಪೀಂಗುಟ್ಟುವ ಮೊಬೈಲು ಬೇರೆ! ಓದಲು ಬಹಳ ಇದ್ದುದರ ಟೆನ್ಷನ್ನಿಗೆ ನನಗೆ ನಿದ್ರೆ ಬರುತ್ತಿರಲಿಲ್ಲ. ಹೀಗಾಗಿ ಅವತ್ತು ರಾತ್ರಿ ಸುಮ್ನೇ ಮೊಬೈಲು ಕೈಗೆತ್ತಿಕೊಂಡು ಹೊರಗಡೆ ಹೋದೆ. ಅಲ್ಲಿ ಮರದಲ್ಲಿ ಒಂದು ಹಕ್ಕಿ ಗೂಡು ಕಾಣ್ತು. ಹೊಳೆದ ಏನೋ ಲಹರಿಯನ್ನು ಹಾಗೇ ಟೈಪಿಸಿ ಗೆಳೆಯರಿಗೆಲ್ಲ ಕಳುಹಿಸಿದ್ದೆ. ಆ ಅಂತಹ ಮೆಸೇಜೊಂದು ಹೀಗೆ ಬೆಳೆಯುತ್ತಿರುವ ಸೊಗ ಕಂಡು ನನಗೆ ಅಚ್ಚರಿ...

ಹಕ್ಕಿ ಕತೆಯನ್ನು ಮುಂದುವರಿಸಲೇಬೇಕಿತ್ತು. ಮರುದಿನ ರಾತ್ರಿ ಎಲ್ಲರಿಗೂ ಕಳುಹಿಸಿದೆ:

ಆ ಗಂಡುಹಕ್ಕಿ ಹೆಂಡತಿಯನ್ನು ಎಷ್ಟು ಪ್ರೀತಿ ಮಾಡುತ್ತೆ ಗೊತ್ತಾ? ತನ್ನ ರೆಕ್ಕೆ ಚಾದರ ಹೊದಿಸಿ ಹೆಂಡತಿಯನ್ನು ಮುಚ್ಚಿ ಮುದ್ದಿಸುವುದನ್ನು ನೀವೊಮ್ಮೆ ನೋಡಬೇಕು.. ಆಗ ಮರಿಗಳೆಲ್ಲ 'ಅಮ್ಮ ಎಲ್ಲಿ?' ಅಂತ ಅರೆಕ್ಷಣ ಗಾಭರಿಯಾಗುತ್ತವೆ.. ಗೂಡಿನಲ್ಲಿ ಅರಸುತ್ತವೆ ಅವು: ಅಡುಗೆ ಮನೆ, ದೇವರ ಕೋಣೆ, ಮೇಲ್ಮೆತ್ತು, ಎಲ್ಲ... 'ಅಪ್ಪಾ ನೀನು ನೋಡಿದ್ಯಾ?' ಎಂದರೆ ಅಪ್ಪ ಗಂಭೀರವಾಗಿ 'ಇಲ್ವಲ್ಲ!' ಎನ್ನುತ್ತಾನೆ. ಕೊನೆಗೆ ಅವು ಗೂಡಿನಿಂದ ಹೊರಗಿಣುಕುತ್ತವೆ. ಕಂಡ ನನ್ನ ಬಳಿ 'ನೀ ನೋಡಿದ್ಯಾ?' ಅಂತ ಕೇಳ್ತವೆ...

ಅಷ್ಟು ಕಳುಹಿಸಿದ್ದಷ್ಟೇ. ರಂಜು ರಿಪ್ಲೇ ಮಾಡಿದ್ಲು: 'ಅಣ್ಣಾ, ಆಮೇಲೆ ಮುಂದೆ ಹೇಳು: ನಿಂಗೆ ಗೊತ್ತಿದ್ರೂ 'ಇಲ್ಲ' ಅಂತ ಹೇಳ್ತೀಯ.. ನಿನಗೂ ನಿನ್ನವಳು ನೆನಪಾಗ್ತಾಳೆ...'

ಹೌದಲ್ಲ, ನನಗೆ ನನ್ನವಳೇ ನೆನಪಾಗ್ತಾಳೆ... ಹೀಗೇ ಅಲ್ವಾ ನಾನು ಅವಳಿಗೆ ಬೆಚ್ಚನೆ ಚಾದರ ಹೊದಿಸಿ, ಚುಕ್ಕು ತಟ್ಟಿ, ಮುಂಗುರುಳು ಹಿಂದಕ್ಕೆ ಸರಿಸಿ... ಹೌದೌದು... ನನಗೆ ಅವಳೇ ನೆನಪಾಗ್ತಾಳೆ... ಹಕ್ಕಿ ಹಾಡುತ್ತಿದ್ದರೆ ಅವಳ ಹಾಡು, ಹಕ್ಕಿ ಹಾರುತ್ತಿದ್ದರೆ ಅವಳ ನಡೆ, ಹಕ್ಕಿ ಗುಟುಕು ನೀಡುತ್ತಿದ್ದರೆ, ಹಕ್ಕಿ ನಿದ್ರೆ ಮಾಡುತ್ತಿದ್ದರೆ, ಹಕ್ಕಿ ಗೂಡಿಗೆ ಬಾರದಿದ್ದರೆ... ಏನೇ ಮಾಡಿದರೂ, ಏನೇ ಆದರೂ ಅವಳೇ ನೆನಪಾಗ್ತಾಳೆ... ಏನೂ ಆಗದಿದ್ದರೂ ಅವಳೇ ನೆನಪಾಗ್ತಾಳೆ... ಕನಸಲ್ಲ, ನಿಜ; ನಿಜವಲ್ಲ, ಕನಸು...

ಮರುದಿನ ಒಂದು ಪುಟ್ಟ ಅಪಘಾತವಾಯ್ತು. 'ಇವತ್ತೊಂದು ಪುಟ್ಟ ಅವಘಢವಾಯ್ತು. ಮಳೆ ಬರುವ ಸೂಚನೆ ಇದ್ದುದರಿಂದ ಗಂಡುಹಕ್ಕಿ ಹೊರಗಡೆ ಹೋಗದೆ ಗೂಡಿನಲ್ಲೇ ಇದ್ದುಕೊಂಡು ಮರಿಗಳಿಗೆ ಹಾರಾಟ ಪ್ರಾಕ್ಟೀಸ್ ಮಾಡಿಸುತ್ತಿತ್ತು. ಸಂಜೆ ಮಳೆ ಬಿತ್ತಲ್ಲ, ರೆಂಬೆಯೆಲ್ಲ ಒದ್ದೆಯಾಗಿತ್ತು.. ಜಾರುತ್ತಿತ್ತು.. ಅದೇನೋ ಹೆಚ್ಚುಕಮ್ಮಿಯಾಗಿ ಮರಿಹಕ್ಕಿಯೊಂದು ಜಾರಿ ಬಿದ್ದುಬಿಟ್ಟಿತ್ತು!! ಇಲ್ಲ, ಭಯ ಪಡಬೇಕಿಲ್ಲ. ಸ್ವಲ್ಪ ತರಚು ಗಾಯ ಆಗಿದೆ ಅಷ್ಟೇ. ಸೊಪ್ಪಿನ ರಸ ಬಿಟ್ಟಿದ್ದೇವೆ. ಉರಿ ಕಮ್ಮಿಯಾಗಿದೆಯಂತೆ.. ನಗುನಗ್ತಾ ಎಲ್ರಿಗೂ ಗುಡ್ ನೈಟ್ ಹೇಳಿದೆ ಮರಿಹಕ್ಕಿ.. ಮಲಗಿ ನೀವು..'

ಹಕ್ಕಿ ಕತೆ ಅನೇಕರನ್ನು ಮೋಡಿ ಮಾಡಿದ್ದು ಅವರ ರಿಪ್ಲೇಗಳಿಂದಲೇ ಗೊತ್ತಾಗುತ್ತಿತ್ತು. ರಂಜನಾ ಹೇಳಿದ್ಲು 'ಅಣ್ಣಾ ನಂಗೆ ಆ ಹಕ್ಕೀನ ನೋಡ್ಬೇಕು ಅನ್ನಿಸ್ತಿದೆ..' ಅಂತ. ನಾನೆಂದೆ 'ನಮ್ಮನೆಗೆ ಬಾ, ತೋರಿಸ್ತೀನಿ.. 'ನನ್ ತಂಗಿ' ಅಂತ ಪರಿಚಯ ಮಾಡಿ ಕೊಡ್ತೀನಿ.. ಹೆಣ್ಣು ಹಕ್ಕಿ ನಿಂಗೆ ಕಣ ಕೊಟ್ಟು, ಕುಂಕುಮ ಹಚ್ಚಿ ಕಳ್ಸುತ್ತೆ..' ಅಂತ. 'ಏಯ್ ನಂಗೆ ಆಸೆ ಜಾಸ್ತಿ ಮಾಡ್ಬೇಡ ಪ್ಲೀಸ್' -ಆ ಕಡೆಯಿಂದ ರಿಪ್ಲೇ. ಸಮಾಧಾನ ಮಾಡಿದೆ ನಾನು: 'ಮಲ್ಕೋ.. ಆ ಹಕ್ಕಿ ಬಂದು ತನ್ನ ರೆಕ್ಕೆ ಚಾಮರದಿಂದ ನಿಂಗೆ ಗಾಳಿ ಬೀಸ್ತಾ ಜೋಗುಳ ಹಾಡ್ತಾ ಇದೆ ಅಂತ ಕಲ್ಪಿಸಿಕೋ.. ಹಾಯಾಗಿ ನಿದ್ರೆ ಬರುತ್ತೆ' ಅಂತ. ಅದ್ಕೆ ಅವಳಂದ್ಲು: 'ಥ್ಯಾಂಕ್ಸ್.. ಆದ್ರೆ ಬೇಡ, ಆ ಹಕ್ಕಿಗೆ ಆಹಾರ ಹುಡುಕಿ ಸುಸ್ತಾಗಿರೊತ್ತೆ. ಪಾಪ, ನಂಗೆ ಗಾಳಿ ಬೀಸ್ತಾ ಕೂತ್ರೆ ಮತ್ತೂ ಸುಸ್ತಾಗತ್ತೆ.. ಅದು ತನ್ನ ಹೆಂಡತಿ ಒಟ್ಟಿಗೆ ಹಾಯಾಗಿ ನಿದ್ರೆ ಮಾಡ್ಲಿ. ಬೇಕಾದ್ರೆ ನಾನೇ ಗಂಡ, ಹೆಂಡತಿ, ಮಕ್ಕಳಿಗೆಲ್ಲ ಗಾಳಿ ಬೀಸಿ ನಿದ್ರೆ ಮಾಡಿಸ್ತೀನಿ' ಅಂತ.

ಬದಲಾದ ಬೆಂಗಳೂರಿನ ಹವೆ ಪಕ್ಷಿ ಸಂಕುಲದ ಮೇಲೂ ಪರಿಣಾಮ ಬೀರಿದ್ದು ಸುಳ್ಳಲ್ಲ! ಮರುದಿನದ ನನ್ನ ಮೆಸೇಜಿನಲ್ಲಿ ಅದು ಕಾಣಿಸಿಕೊಂಡಿತ್ತು: ಬಸುರಿ ಹಕ್ಕಿಗೆ ಸಣ್ಣಗೆ ಜ್ವರ ಬಂದಿದೆ. ಗಂಡಹಕ್ಕಿ ಇವತ್ತೂ ಮನೆಯಲ್ಲೇ ಉಳಿದಿದೆ. ಬಿಸಿಬಿಸಿ ಮೆಣಸಿನ ಸಾರು ಮಾಡಿದೆ ಅಡುಗೆಗೆ. 'ದಿನಾ ನೀವು ಮನೆಯಲ್ಲೇ ಇದ್ರೆ ಊಟದ ಗತಿ ಏನು?' ಎಂದು ಆತಂಕ ವ್ಯಕ್ತಪಡಿಸಿದ ಅಮ್ಮನಿಗೆ ಮರಿಹಕ್ಕಿಗಳು 'ನಾವು ಹೋಗಿ ಆಹಾರ ತರ್ತೀವಿ ಬಿಡಮ್ಮಾ' ಎಂದಿದ್ದಾವೆ.. ಭಾವುಕನಾದ ಅಪ್ಪ ಮರಿಗಳನ್ನೆಲ್ಲಾ ಒಮ್ಮೆ ತಬ್ಬಿ 'ಇನ್ನೂ ಚೆನ್ನಾಗಿ ಹಾರೋದನ್ನ ಕಲೀಬೇಕು ನೀವು.. ನನ್ನ ಜೊತೆ ಬಂದು ಕಾಡಿನ ಪರಿಚಯ ಮಾಡ್ಕೋಬೇಕು.. ಆಮೇಲೆ ನೀವು ಸ್ವತಂತ್ರವಾಗಿ ಹಾರಾಡಬಹುದು' ಎಂದಿದ್ದಾನೆ...

ನಮ್ಮೆಲ್ಲರ ಆರೈಕೆಯಿಂದಾಗಿ ಬಸುರಿ ಹಕ್ಕಿ ಬಲುಬೇಗನೆ ಚೇತರಿಸಿಕೊಂಡಿತು. ನಮ್ಮ ಆರೈಕೆ ಅನ್ನುವುದಕ್ಕಿಂತ ಗಂಡಹಕ್ಕಿಯ ಪ್ರೀತಿ ಎಂದರೇ ಹೆಚ್ಚು ಸೂಕ್ತವೇನೋ? ಮರುದಿನ ಗೆಳೆಯರಿಗೆ ನಾನು ಹಕ್ಕಿ ಅರಾಮಾಗಿರುವ ಸುದ್ದಿಯನ್ನು ಮೆಸೇಜಿಸಿದೆ: ಬಸುರಿ ಹಕ್ಕಿಯ ಜ್ವರ ಕಮ್ಮಿಯಾಗಿದೆ. ಆದ್ರೂ ಕಾದಾರಿದ ನೀರನ್ನೇ ಕುಡಿಯುವಂತೆ ಹೇಳಿದ್ದೇವೆ ನಾವೆಲ್ಲ. ಈಗ ಹೀಗೇ ಹೊರಗಡೆ ಹೋಗಿದ್ನಲ್ಲ, ಗೂಡಿನಿಂದ ಪಿಸುಮಾತು ಕೇಳಿಸುತ್ತಿತ್ತು: 'ಹುಟ್ಟುವ ಮರಿಗೆ ಏನಂತ ಹೆಸರಿಡೋಣ?' 'ಅದು ಹೆಣ್ಣೋ ಗಂಡೋ ಎಂಬುದೇ ಇನ್ನೂ ಗೊತ್ತಿಲ್ಲ..!' 'ನಾ ಹೇಳ್ತೀನಿ, ಈ ಸಲ ಹೆಣ್ಣೇ ಆಗೋದು..' 'ಅದು ಹ್ಯಾಗೆ ಹೇಳ್ತೀಯಾ?' 'ನಿನ್ನ ಮುಖದಲ್ಲಿನ ಕಳೆಯೇ ಹೇಳ್ತಿದೆ, ಹೊಟ್ಟೆಯೊಳಗಿನ ಮೊಟ್ಟೆಯೊಳಗಿಂದ ಹೊರಬರಲಿರುವ ಜೀವ ಹೆಣ್ಣು ಅಂತ' (ತುಂಟ ನಗು) 'ಥೂ! ಸಾಕು, ಮಲಗಿ..!' 'ಹಹ್ಹ! ಗುಡ್ ನೈಟ್'

ಎಲ್ಲಾ ಕಲ್ಪನೆಯಷ್ಟೇ ಎನ್ನಬೇಡಿ.. ಹಕ್ಕಿಗಳ ಲೋಕದಲ್ಲಿ ಹೀಗೆಲ್ಲಾ ಆಗೊತ್ತಾ ಅನ್ಬೇಡಿ.. ಹಕ್ಕಿ ಹೊಟ್ಟೆಯಲ್ಲಿ ಒಂದಲ್ಲ, ಎರಡ್ಮೂರು ಮೊಟ್ಟೆಗಳೂ ಇರಬಹುದು ಎಂದು ವಿಜ್ಞಾನದ ಮಾತಾಡ್ಬೇಡಿ.. ಎಲ್ಲಾ ಸಾಧ್ಯತೆಯಿದೆ.. ನೋಡುವ ಕಣ್ಣಿದ್ದರೆ.. ಕೇಳುವ ಕಿವಿಯಿದ್ದರೆ.. ಅನುಭವಿಸುವ ಹೃದಯವಿದ್ದರೆ.. ಶ್ರೀ ಅವತ್ತೆಲ್ಲೋ ರಿಪ್ಲೇನಲ್ಲಿ ಹೇಳಿದ್ದಳು: 'ಈ ಹಕ್ಕಿ ಸಂಸಾರದಿಂದಾಗಿ ಬದುಕೆಷ್ಟು ಸುಂದರ!' ಅಂತ. ಹೌದಲ್ವಾ? ಎಷ್ಟೊಂದು ಸುಂದರ ಅಲ್ವಾ?

ಹೀಗೆ, ಅಸ್ತಿತ್ವದಲ್ಲೇ ಇಲ್ಲದ ಹಕ್ಕಿಯೊಂದು ಭಾವಜೀವಿಗಳ ಮೊಬೈಲಿನಿಂದ ಮೊಬೈಲಿಗೆ ಎಸ್ಸೆಮ್ಮೆಸ್ಸಾಗಿ ಹಾರಾಡುತ್ತಿದೆ.. 'ಅಸ್ತಿತ್ವದಲ್ಲಿ ಇಲ್ಲ' ಅಂತ ಹೇಳೋದೂ ತಪ್ಪೇ! ಯಾಕಿಲ್ಲ? ಖಂಡಿತ ಇದೆ ಆ ಹಕ್ಕಿ.. ನೋಡಿ, ನಿಮ್ಮ ಕಣ್ಣೆದುರೂ ಹಾರಾಡ್ತಾ ಇಲ್ವಾ ಅದು ಈಗ..? ನಿಜ ಹೇಳಿ..? :)

...ಹಕ್ಕಿ ಕತೆ ಮುಂದುವರೆಯುತ್ತದೆ...!

6 comments:

Unknown said...

ಚೆನ್ನಾಗಿದೆ ಹಕ್ಕಿ ಕಥೆ [:o]

ಅನಿಕೇತನ said...

ನೋಡುವ ಕಣ್ಣಗಳಿದ್ದರೆ ಜಗತ್ತು ಎಷ್ಟೊಂದು ಸುಂದರ ಅಲ್ವಾ !

ಸಿಂಧು sindhu said...

ಚನಾಗಿದೆ.

ಸುಪ್ತದೀಪ್ತಿ suptadeepti said...

ಅಸ್ಥಿತ್ವ ಅನ್ನುವ ಸ್ಥಿತಿಯೇ ಇಲ್ಲ ಅನ್ನಲೇ?
ನಿಮ್ಮ ಹಕ್ಕಿ, ಅದರ ಸಂಸಾರ, ಮನೆ-ಮಕ್ಕಳು ಎಲ್ಲವೂ ಚೆನ್ನಾಗಿವೆ. ಹಕ್ಕಿ ಸಂಸಾರದ ಜೊತೆಗೆ ನಂಟು ಹೊಂದಿರುವ ನಿಮ್ಮ-ನಮ್ಮೆಲ್ಲರನ್ನೂ ದೇವರು ಚೆನ್ನಾಗಿಟ್ಟಿರಲಿ. ಇಂತಹ ಹಕ್ಕಿಗಳ ಸಂಖ್ಯೆ ಸಾವಿರವಾಗಲಿ. ನಗರದ ಸದ್ದುಗಳ ನಡುವೆ ಅವರುಗಳ ಸಂಗೀತವಿರಲಿ.... ಧನ್ಯವಾದಗಳು.

Anonymous said...

ಹೇಯ್ ಪುಟ್ಟಣ್ಣ,
ನಿನ್ನ ಹಕ್ಕಿಯ ಕಲ್ಪನೆಯ ಕಥೆ ನನ್ನ ಮನಸ್ಸನ್ನು ತಟ್ಟಿತ್ತು.
ಅದು ಬರಿಯ ಕಲ್ಪನೆ ಅಂಥ ಮನಸ್ಸು ಒಪ್ಪಿಕೊಳ್ಳಲು ತಯಾರೆ ಇಲ್ಲೆ. ಇವತ್ತಲ್ಲಾ ನಾಳೆ ಅದನ್ನಾ ನಾನು ನೋಡ್ತಿ ಅಂತಾನೆ ನಂಬಿಕೆ.

ಇಗೊಂದು ನಾಲ್ಕೈದು ದಿನದಿಂದ ನೀನು ಹಕ್ಕಿ ಮೆಸೆಜ್ ಕಳಿಸ್ತಾ ಇಲ್ಲೆ ಎಂತಕ್ಕೆ. ನಾನು ಚುಂಚುನಾ ತುಂಬಾ ಹಚ್ಚಿಕೊಂಡಿದ್ದಿ ಮುಂದುವರೆಸು ಕಥೆನಾ.

Sushrutha Dodderi said...

ಮೆಚ್ಚಿಕೊಂಡವರೆಲ್ಲರಿಗೂ ಧನ್ಯವಾದಗಳು. ಹಕ್ಕಿ ಸಂಸಾರಕ್ಕೆ ನಿಮ್ಮೆಲ್ಲರ ಬಗ್ಗೆಯೂ ಹೇಳಿದ್ದೇನೆ. ಎಲ್ಲ ಹಕ್ಕಿಗಳೂ ಖುಷಿಯಾಗಿವೆ. ಮತ್ತು,

ಹಕ್ಕಿ ಕತೆ ಮುಂದುವರೆಯುತ್ತದೆ...!