Tuesday, July 24, 2007

ಕೋಗಿಲೆಯ ವಿಷಾದ

ನನ್ನ ಹಾಡೆಂದರೆ ಎಲ್ಲರಿಗೂ ಇಷ್ಟ
ನನಗಷ್ಟೇ ಗೊತ್ತು ನನ್ನ ಕಷ್ಟ

* *

ದಟ್ಟಡವಿಯಲೊಂದು ಒಂಟಿ ಒಣಮರ
ರೆಂಬೆಯ ಮೇಲೆ ಕುಳಿತಿದ್ದ ಅವನು
ಕಣ್ಣಲೇನೋ ಅಸಹನೆ..
ನನ್ನಲೇನೋ ಮಿಡಿತ;
ಎದೆಯಲೇನೋ ತುಡಿತ..

ಜೊತೆಗೆ ಕರೆದೊಯ್ದು,
ಹಣ್ಣು ಕೊಟ್ಟು ಸಂತೈಸಿ
ಕಣ್ಣಲಿ ಕಣ್ಣಿಟ್ಟು ಪ್ರೀತಿಬೀಜ ಹುಟ್ಟಿಸಿ
ಅದನವನ ಎದೆಯ ಕವಾಟದಲಿ ಹುದುಗಿಸಿಟ್ಟು
ಅದು ಮೊಳಕೆಯೊಡೆದು ಬಳ್ಳಿಯಾಗಿ
ಕೊನೆಗೆ ನಿವೇದನೆಯ ಹೂವಾಗಿ
ಅವನಿಂದಲೇ ಹೊರಬಂದಾಗ ನನಗೆಷ್ಟು ಸಂಭ್ರಮ..!

ಕಣ್ಣರಳಿಸಿ, ಕಾಲ್ಕೆದರಿ, ಕೊಕ್ಕು ತಿವಿಯುತ್ತಾ
ಮೇಲೆರಗಿ ಬಂದರವನು ನನ್ನ ಮೈಯೆಲ್ಲಾ ಅದುರು.

ಅಂದು ಗೂಡಿನಲ್ಲಿ ಮೈಥುನದ ಆಟ..
ಕಣ್ಮುಚ್ಚಿ, ಕಟಿ ಬಿಗಿದು, ಮೈ ಸೆಟೆದು,
ಸೇರಿ ಬೆರೆತು, ಬೆರೆತು ಬೆವರಿ, ಗಟ್ಟಿಯುಸಿರುಬಿಟ್ಟು
...ಆಟ ಮುಗಿಯುವುದರೊಳಗೆ ರೆಕ್ಕೆಯ ಪುಕ್ಕಗಳೆಲ್ಲಾ ಅಸ್ತವ್ಯಸ್ತ;
ಗೂಡೆಲ್ಲಾ ನುಜ್ಜುಗುಜ್ಜು;
ನೋಡಿ ನಾಚಿ ನಸುನಕ್ಕ ಹಸಿರು ಎಲೆ, ಮಿಣುಕು ಹುಳ...

* *

ಅವನ ಹೃದಯದಲಿ ಇನ್ನೂ ಮೂರು ಕವಾಟಗಳಿವೆ,
ಅದರಲ್ಲಿ ಪ್ರೀತಿಬೀಜ ನೆಡಲು ಬೇರೆ ಹಕ್ಕಿಗಳು ಕಾಯುತಿವೆ
ಎಂಬ ಸತ್ಯ ಸಹ ಗೊತ್ತಿಲ್ಲದ ಮುಗ್ದೆ ನಾನು..
ಅಂದು ಬೆಳಕು ಹರಿಯುವ ಮುನ್ನವೇ ಅವನು
ಹಾರಿ ಪರಾರಿಯಾದಾಗಲೇ ಆದದ್ದು ನನಗೆ ವಾಸ್ತವದ ಅರಿವು..

* *

ಆದರೆ ಅವನ ವೀರ್ಯ ನನ್ನ ರೆಕ್ಕೆ ಮುಚ್ಚಿದ್ದ
ಪುಟ್ಟ ಹೊಟ್ಟೆಯಲ್ಲಿ ಮೊಟ್ಟೆಯಾಗಿ ಬೆಳೆದು
ನಾನದನ್ನು ಹೊತ್ತು ಹಾರಿ, ಹೆಣಗಿ ವಾಯಸನ ಗೂಡರಸಿ
ಕದ್ದು ಪ್ರಸವಿಸಿ ಅಲ್ಲಿಂದ ಎದ್ದು ಹಾರಿ ಬರುವಾಗ
ನಿಟ್ಟುಸಿರು ಬಿಟ್ಟರೂ ತೀರದ ಆಯಾಸ.

* *

ಒಂಟಿ ಒಣಮರದ ಮೇಲೆ ಈಗ ನಾನು..
ಮತ್ಯಾರದೋ ಗೂಡಿನ ಬೆದೆಯಲ್ಲಿ ನನ್ನ ಅವನು..
ಯಾರದೋ ರೆಕ್ಕೆಯಡಿಯ ಕಾವಿಗೆ ಬೆಳೆದು ಹೊರಬರುವ ನನ್ನ ಕಂದಮ್ಮಗಳು..
ರೆಕ್ಕೆ ಬಲಿತು ಹಾರಿ ಎದುರಿಗೇ ಹಾದುಹೋದರೂ
ಮಕ್ಕಳನ್ನೇ ಗುರುತಿಸಲಾಗದ ತಾಯಿಯ ಅಸಹಾಯಕತೆ..
ಹೆತ್ತ ತಾಯಿಯ ಋಣ ದೊಡ್ಡದೋ,
ಕಾವು ಕೊಟ್ಟು ಮರಿ ಮಾಡಿ ಹಾರಾಟ ಕಲಿಸಿದ ಪೋಷಕರ ವಾತ್ಸಲ್ಯ ದೊಡ್ಡದೋ
ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿಲ್ಲ ಉತ್ತರ..
ಎಲೆ ಹಣ್ಣಾಗಿ ಬೀಳುತ್ತದೆ; ಮಿಣುಕು ಹುಳ ನಿದ್ರೆ ಹೋಗುತ್ತದೆ..

ಮತ್ತೆ ವಸಂತ.. ಚಿಗುರುವ ಮಾವು..
ಹಾಡಲೇಬೇಕಾದ ನನ್ನ ಅನಿವಾರ್ಯತೆ...

* *

ನನ್ನ ಹಾಡೆಂದರೆ ಎಲ್ಲರಿಗೂ ಇಷ್ಟ
ನನಗಷ್ಟೇ ಗೊತ್ತು ನನ್ನ ಕಷ್ಟ

4 comments:

Shree said...

ಹಕ್ಕಿ ಎಕ್ಸ್-ಪರ್ಟು...!!!

Our sweetest songs are those that tell of saddest thoughts... - Shelley

Anonymous said...

ಪುಟ್ಟಣ್ಣ,

ಕೋಗಿಲೆ ವಿಷಾದ ಸಕತ್ ಆಗಿ ಇದೆ. ಎಲ್ಲಾ ಚಂದದ, ಅಂದದ ಹಿಂದೂ ಒಂದೋಂದು ವಿಷಾದ ಇರುತ್ತೋ ಎನೋ?
"ಅವನ ಹೃದಯದಲಿ ಇನ್ನೂ ಮೂರು ಕವಾಟಗಳಿವೆ,
ಅದರಲ್ಲಿ ಪ್ರೀತಿಬೀಜ ನೆಡಲು ಬೇರೆ ಹಕ್ಕಿಗಳು ಕಾಯುತಿವೆ
ಎಂಬ ಸತ್ಯ ಸಹ ಗೊತ್ತಿಲ್ಲದ ಮುಗ್ದೆ ನಾನು..
ಅಂದು ಬೆಳಕು ಹರಿಯುವ ಮುನ್ನವೇ ಅವನು
ಹಾರಿ ಪರಾರಿಯಾದಾಗಲೇ ಆದದ್ದು ನನಗೆ ವಾಸ್ತವದ ಅರಿವು.." ಈ ಲೈನ್ಸ್ ತುಂಬಾ ಇಷ್ಟ ಆಯಿತು.

Sushrutha Dodderi said...

@ shree

ಶೆಲ್ಲಿ ಹೇಳಿದ್ದು ಎಷ್ಟೊಂದು ಸತ್ಯ ಅಲ್ವಾ?
>> ಹಕ್ಕಿ ಎಕ್ಸ್-ಪರ್ಟು -ಬಿರುದು ಪ್ರಧಾನ ಸಮಾರಂಭ ಯಾವಾಗ?? :)

@ ranju

Thanx ರಂಜು. 'ಕೋಗಿಲೆ'ಯ ವಿಷಾದ ಕಮ್ಮಿಯಾಗಲಿ ಅಂತ ಹಾರೈಸಿಬಿಡ್ತೇನೆ..

Anonymous said...

ಪುಟ್ಟಣ್ಣ,

ಹ್ಮ್! ನಮಗೂ ಅದೇ ಆಸೆ. ಆದಷ್ಟು ಬೇಗ ಈ ಕೋಗಿಲೆ ವಿಷಾದ ಕಮ್ಮಿ ಆಗಲಿ ಅಂಥ.