Saturday, August 04, 2007

ಹನಿಯ ಅಸಮಾಧಾನ


'ಇನ್ಮೇಲಿಂದ ಏನೂ ಬರೀಬಾರ್ದು. ಬರಿಯೋದಾದ್ರೆ ಜೋಗಿ ಸರ್ ಹಂಗೆ, ರಶೀದ್ ಸರ್ ಹಂಗೆ, ಅಥ್ವಾ ಸಿಂಧು ಅಕ್ಕನ ಹಂಗೆ ಫುಲ್ ಸೀರಿಯಸ್ಸಾಗಿ ಬರೀಬೇಕು.. ನಾನು ಇದುವರೆಗೆ ಬರೆದಿದ್ದೆಲ್ಲ ಜೊಳ್ಳು.. ಓದಿ ಮರೆತುಹೋಗುವಂಥದ್ದು.. ಛೇ! ನಾನು ಇಷ್ಟರೊಳಗೆ ಓದಿದ್ದು ಏನೂ ಅಲ್ಲ.. ಇನ್ನೂ ತುಂಬಾ ಓದೋದಿದೆ.. ಬರೀ ಓದೋದಲ್ಲ, ಸಾಹಿತ್ಯವನ್ನ ಸ್ಟಡಿ ಮಾಡ್ಬೇಕು.. ಈ ಬ್ಲಾಗು, ಗಾಳ, ರೀಡರ್ರು, ಕಾಮೆಂಟು, ಹಿಟ್ಸು.. ಊಹುಂ, ಇನ್ನು ನನ್ ಕೈಲಾಗಲ್ಲ.. ಎಲ್ಲಾ ಬುಲ್‍ಶಿಟ್' ಎಂದು ನಾಲ್ಕು ಕಾಲಿನ ಬಿಳೀ ಪ್ಲಾಸ್ಟಿಕ್ ಖುರ್ಚಿಯ ಮೇಲೆ ಕುಳಿತ ನಾನು ಸಿಟ್ಟುಮಾಡಿಕೊಂಡು ಪೆನ್ನಿನ ಮೂತಿಯನ್ನು ಕ್ಯಾಪಿನಿಂದ ಮುಚ್ಚಿ ಟೇಬಲ್ಲಿನ ಮೇಲೆ ಬೀಸಾಡುತ್ತೇನೆ. ಪೆನ್ನು ಓರಣವಾಗಿ ಜೋಡಿಸಿಡದ ಪುಸ್ತಕವೊಂದಕ್ಕೆ ಬಡಿದು ಬೌನ್ಸ್ ಆಗಿ ನೆಲಕ್ಕೆ ಬಿದ್ದು ಸಣ್ಣ ಸದ್ದು ಮಾಡಿ ಎಡಕ್ಕೆ ವಾಲಿ ಕಪ್ಪು ಬೆಕ್ಕಿನ ಮರಿಯಂತೆ ಮಲಗಿಕೊಳ್ಳುತ್ತದೆ.

ನಾನದನ್ನು ನೋಡುತ್ತೇನೆ. ಏನೇನೂ ಪಾಪ ಮಾಡಿರದ ಪೆನ್ನು.. ಇಷ್ಟರೊಳಗೆ ಎಂದೂ ಕೈಕೊಡದ ಪೆನ್ನು.. ಹಾಳೆಗೆ ತಾಕಿಸಿದರೆ ಸಾಕು, ತನ್ನೊಡಲ ಕಪ್ಪು ಶಾಯಿಯನ್ನು ಧಾರಾಕಾರ ಸುರಿಸುವ ಪೆನ್ನು.. ಬಿಳಿ ಹಾಳೆಯ ಮೈಮೇಲೆಲ್ಲಾ ಓಡಾಡುತ್ತಾ ಕಚಗುಳಿಯಿಡುವ ಪೆನ್ನು.. ಈಗ ಮೇಜಿನ ಕಾಲಬುಡದಲ್ಲಿ ಬೆಕ್ಕಿನ ಮರಿಯಂತೆ ಮುದ್ದಾಗಿ ಬಿದ್ದುಕೊಂಡಿದೆ.. ಅಲ್ಲಿಂದಲೇ 'ನನ್ನನ್ನು ಎತ್ತಿಕೋ.. ಮ್ಯಾಂವ್ ಮ್ಯಾಂವ್..' ಎನ್ನುತ್ತಿದೆ.. ನನಗೆ ಅದರ ಮೇಲೆ ಮೋಹ ಉಕ್ಕಿ ಬರುತ್ತದೆ.. ಬೆಕ್ಕಿನ ಮರಿಯನ್ನು ಎತ್ತಿಕೊಳ್ಳುತ್ತೇನೆ.. ಅದರ ನೀಳ ಕಾಯದ ಮೇಲೆ ಅಲ್ಲಲ್ಲಿ ಹತ್ತಿರುವ ಧೂಳನ್ನು 'ಉಫ್' ಎಂದು ಊದಿ ಹಾರಿಸುತ್ತೇನೆ.. ಮೈ ಸವರುತ್ತೇನೆ.. ಕ್ಯಾಪು ತೆಗೆದು ಕಣ್ಣೆದುರು ಹಿಡಿದು ಅದರ ಚೂಪು ಮೂತಿಯನ್ನು ದುರುಗುಟ್ಟಿ ನೋಡುತ್ತೇನೆ..

ನನ್ನ ಮನಸಿನೊಳಗೆ ಅನೇಕ ದಿನಗಳಿಂದ ಅದೇನೋ ಅಸಮಾಧಾನದ ಹೊಗೆ ತುಂಬಿಕೊಂಡು ಬಿಟ್ಟಿದೆ. ತುಂಬಾ ನೋವು ಕೊಡುತ್ತಿದೆ. ಏನು ಎಂದು ಸಹ ಅರ್ಥವಾಗುತ್ತಿಲ್ಲ ಸರಿಯಾಗಿ.. ಮಾಡುವ ಕೆಲಸಗಳಲ್ಲಿ ಗಮನವಿರಿಸಲು ಆಗುತ್ತಿಲ್ಲ, ಏನನ್ನೂ ಓದಲಾಗುತ್ತಿಲ್ಲ, ಯೋಚಿಸಲಾಗುತ್ತಿಲ್ಲ, ಸುಮ್ಮನೆ ಕುಳಿತಿರಲೂ ಆಗುತ್ತಿಲ್ಲ.. ಚಡಪಡಿಸುತ್ತಿರುವಂತೆ ಮಾಡುವ ಚಡಪಡಿಕೆ.. ಏನಾಗಿದೆ ನನಗೆ? 'ಲವ್ ಫೇಲ್ಯೂರಾ?' ಕೇಳುತ್ತಾರೆ ಗೆಳೆಯರು. 'ಏಯ್ ಸುಮ್ನಿರ್ರೋ' ಸಿಡುಕುತ್ತೇನೆ ನಾನು.

ನನಗೆ ಒಮ್ಮೆ ಈ ಪೆನ್ನಿನ ಮೂತಿಯಿಂದ ಚುಚ್ಚಿಕೊಳ್ಳಬೇಕೆನಿಸುತ್ತಿದೆ. ಚಕ್ಕನೆ ಕೈಯನ್ನು ಮಡಿಚಿ, ಪೆನ್ನನ್ನು ಮುಷ್ಟಿಯಲ್ಲಿ ಹಿಡಿದು, ಮೂತಿಯನ್ನು ನನ್ನ ಕಡೆಗೇ ಮುಖ ಮಾಡಿ, ಕಣ್ಮುಚ್ಚಿಕೊಂಡು, ವೇಗದಿಂದ ಮೈಗೆಲ್ಲೋ ಚುಚ್ಚಿಕೊಳ್ಳುತ್ತೇನೆ.. ಚುಳ್ಳನೆ ನೋವಾಗುತ್ತದೆ.. ಚುಚ್ಚಿದ ಕೈಯನ್ನು ಹಾಗೇ ಹಿಡಿದುಕೊಂಡಿದ್ದೇನೆ.. ಇಲ್ಲ, ಈ ನೋವು ನನ್ನ ಮನದೊಳಡಗಿರುವ ನೋವನ್ನು ಶಮನ ಮಾಡುವಲ್ಲಿ ಸಫಲವಾಗುತ್ತಿಲ್ಲ.. ಜೋರಾಗಿ ಒತ್ತುತ್ತೇನೆ.. ಊಹೂಂ, ಏನೂ ಆಗುತ್ತಲೇ ಇಲ್ಲ.. 'ಒಂದು ನೋವನ್ನು ಕೊಲ್ಲುವುದಕ್ಕೆ ಅದಕ್ಕಿಂತ ದೊಡ್ಡ ನೋವು ಸಾಕು' ಎಂಬ ನನ್ನ ಆಲೋಚನೆ ಸುಳ್ಳಾಗುತ್ತಿದೆ.. ಅಥವಾ ಆ ಒಳಗಿನ ನೋವು ಈ ಬಾಹ್ಯ ನೋವಿಗಿಂತ ಎಷ್ಟೋ ದೊಡ್ಡದಿದೆ.. ಅದರ ಮುಂದೆ ಇದು ಏನೂ ಅಲ್ಲ..

ನನ್ನ ಮುಚ್ಚಿದ ಕಣ್ಣಿನಿಂದ ನೀರು ಒಸರುತ್ತದೆ.. ಹೀಗೆ ಚುಚ್ಚಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ ಎಂಬ ಅರಿವು ಮೂಡುತ್ತದೆ.. ಕೈಯ ಬಿಗಿಯನ್ನು ಸಡಿಲ ಮಾಡುತ್ತೇನೆ.. ಸುಸ್ತಾದ ಪೆನ್ನು ಜಾರಿ ಮತ್ತೆ ಕೆಳಗೆ ಬೀಳುತ್ತದೆ.. ಕಣ್ಣು ಬಿಡುತ್ತೇನೆ.. ಬಿದ್ದ ಪೆನ್ನಿನ ದೈನ್ಯ ಮುಖವನ್ನು ನೋಡುವ ಆಸೆಯಾಗುವುದಿಲ್ಲ.. ಎಡಗೈಯಲ್ಲಿ ಇನ್ನೂ ಅದರ ಕ್ಯಾಪು ಇದೆ.. ಅದನ್ನು ಮೇಜಿನ ಮೇಲೆ ನಿಧಾನಕ್ಕೆ ಇರಿಸಿ, ಮೊಣಕೈಯನ್ನು ಮೇಜಿಗಾನಿಸಿ, ಬಾಗಿ ಮುಖವಿಟ್ಟು ಮತ್ತೆ ಕಣ್ಮುಚ್ಚಿಕೊಳ್ಳುತ್ತೇನೆ.. ಕನಸು ಬೀಳಿಸಲೆಂದೇ ನಿದ್ರೆ ಬರುತ್ತದೆ..

ಕನಸಿನಲ್ಲಿ ನಾನೊಂದು ನದೀತೀರದತ್ತ ನಡೆದಿದ್ದೇನೆ. ಮೋಡ ಕವಿದ ಮುಗಿಲು.. ಕಾಣದ ಸೂರ್ಯ ಸೂಸುತ್ತಿರುವ ಬೆಳಕು.. ಬೀಸುತ್ತಿರುವ ಮಂದ-ಶೀತಲ-ಮಾರುತ.. ತೀರದಲೊಂದು ಬೋಳು ಮರ.. ನಾನು ಅದರ ಬುಡದಲ್ಲಿ ಕುಕ್ಕರಗಾಲಲ್ಲಿ ಕುಳಿತುಕೊಳ್ಳುತ್ತೇನೆ.. ಅಗಾಧ ವಿಸ್ತಾರದ ಪ್ರಶಾಂತ ನದಿಯನ್ನು ನಿರುಕಿಸುತ್ತೇನೆ.. ಪ್ರಶಾಂತವೆಂಬಂತೆ ಭಾಸವಾಗುತ್ತದೆ ಅಷ್ಟೆ; ಅದರೊಡಲಿನಲ್ಲೂ ಭೋರ್ಗರೆತದ ಮೊರೆತವಿದೆ.. ಪ್ರತಿ ಹನಿಯ ಹೃದಯದಲ್ಲೂ ಓಡಿ ಕನಸಿನ ಸಾಗರವ ಸೇರುವ ಆತುರವಿದೆ.. ಇನ್ನೂ ಎಷ್ಟೋ ದೂರ ಹರಿಯಬೇಕಲ್ಲ ಎಂಬ ಅಸಮಾಧಾನವಿದೆ.. ಆದರೂ ಸ್ವಲ್ಪವೂ ಬೇಸರಿಸಿಕೊಳ್ಳದೆ ಕ್ರಮಿಸುತ್ತಿದೆ ನದಿ.. ಸುಸ್ತಾಯಿತೆನಿಸಿದಾಗ ಮಡುವೊಂದರಲ್ಲಿ ಸ್ವಲ್ಪ ಹೊತ್ತು ನಿಲ್ಲುತ್ತದೆ.. ವಿರಮಿಸಿ ಮತ್ತೆ ಮುಂದುವರೆಯುತ್ತದೆ.. ನನಗೆ ಈ ನದಿಯಿಂದ ಗೊತ್ತಿದ್ದೂ ಗೊತ್ತಿಲ್ಲದಂತಿದ್ದ ಪಾಠವೊಂದನ್ನು ಕಲಿತಂತೆನಿಸುತ್ತದೆ.. ಎಚ್ಚರಾಗುತ್ತದೆ..

ಹರಿಯುತ್ತಿದ್ದರೆ ಮಾತ್ರ ಸೇರಬಹುದು ಸಾಗರವನ್ನು... ನಿಂತರೆ ನಿಂತಲ್ಲೇ ಇರುತ್ತೇವೆ... ಅಲ್ಲಲ್ಲಿ ನಿಂತು ಮತ್ತಷ್ಟು ರಭಸವನ್ನು ಒಡಗೂಡಿಸಿಕೊಂಡು, ಮಧ್ಯೆ ಮಧ್ಯೆ ಇನ್ನಷ್ಟು ನದಿಗಳನ್ನು ಸೇರಿಸಿಕೊಂಡು ಮುಂದುವರೆದಾಗಲೇ ಸಾಕಾರದ ಸಾಗರವ ಸೇರಲು ಸಾಧ್ಯವೆಂಬ ಸಾಕ್ಷಾತ್ಕಾರವಾಗುತ್ತದೆ. ಬಗ್ಗಿ ಮತ್ತೆ ಪೆನ್ನನ್ನು ಎತ್ತಿಕೊಳ್ಳುತ್ತೇನೆ.. ಅವಶ್ಯಕತೆಯೇ ಇಲ್ಲದಿದ್ದ ಈ ಬರಹವನ್ನು ಬರೆಯುತ್ತಾ ನನ್ನ ಮೊಬೈಲಿಗೆ ಹ್ಯಾಂಡ್ಸ್‍ಫ್ರೀ ಸಿಕ್ಕಿಸಿ ಎಫ್ಫೆಮ್ಮನ್ನು ಆನ್ ಮಾಡುತ್ತೇನೆ.. ಸ್ಪೀಕರಿನಿಂದ ಹೊರಟ ಹಾಡು ಕಿವಿಯೊಳಗೆ ಮೊಳಗಿ ಕೊನೆಗೆ ಗುನುಗಾಗಿ ನನ್ನ ಬಾಯಿಂದಲೇ ಹೊರಬರುತ್ತದೆ:

ನನ್ನ ಹಾಡು ನನ್ನದು.. ನನ್ನ ರಾಗ ನನ್ನದು.. ನನ್ನ ತಾಳ ನನ್ನದು..

14 comments:

Ranju said...

ಪುಟ್ಟಣ್ಣ,

ಈ ಅಸಮಾಧಾನ, ಸಿಟ್ಟು ಸಿಡುಕು ಎಲ್ಲರಲ್ಲು ಇರುತ್ತೆ ಅನ್ನಿಸುತ್ತೆ. ನಮ್ಮ ಹತ್ತಿರ ಎಲ್ಲದು ಇದ್ದು ಈ ನೆಮ್ಮದಿಗೆ ನಾವು ಊರೆಲ್ಲಾ ಅಲೆಯುತ್ತೇವೆ. ಹತ್ತಿರ ಇದ್ದವರನ್ನು ನೋಯುಸುತ್ತೇವೆ ಅಲ್ದಾ?

ನೀನು "ಇನ್ ಮೇಲೆ ಬ್ಲಾಗ್ ನಲ್ಲಿ ಬರಿತ್ನಿಲ್ಲೆ" ಅಂಥಾ ಹೇಳಿದಾಗ ನಂಗೆ ತುಂಬಾ ಬೇಜಾರು ಆಗಿತ್ತು. ನಾನು ಇನ್ನು ಬ್ಲಾಗ್ಸ್ ಓಪನ್ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲಾ ಅನ್ಕೊಂಡೆ. ನಾನು ನೀನು ಹತ್ತಿರ ಆಗಿದ್ದೆ ಈ ನಿನ್ನ ಬರವಣಿಗೆಗಳಿಂದ.
ನಾವು ನಮ್ಮನ್ನ ಬೇರೆಯವರಿಗೆ ಹೋಲಿಸಿಕೊಂಡಾಗಲೇ ನಮ್ಮ ನೆಮ್ಮದಿ ಹಾಳಾಗಕೆ ಶುರು ಆಗುತ್ತೆ.ನಾನು ಡಬಲ್ ಗ್ರಾಜ್ಯೂಯೆಟ್ ಅಲ್ಲಾ, ನಾನು ಇಂಜಿನಿಯರಿಂಗ್ ಓದಿಲ್ಲಾ ನಾನು ಅವಳಷ್ಟು ಚಂದ ಇಲ್ಲಾ ಅನ್ಕೊಂಡಾಗೆಲ್ಲಾ ನನ್ನ ನೆಮ್ಮದಿ ಹಾಳು ಆಗುತ್ತೆ.ನಾವು ನಾವಾಗಿ ಇರಬೇಕು. ’ಸುಶ್ರುತ’ ಅನ್ನುವ ಇನ್ನೊಬ್ಬ ಈ ಜಗತ್ತಲ್ಲಿ ಯಾರು ಇಲ್ಲಾ. ಬೇರೆಯವರೊಂದಿಗೆ ನಿನ್ನ ಹೋಲಿಸಿಕೊಳ್ಳಬೇಡ.
ಬರಿಯದು ಮಾತ್ರ ಬಿಡ ಬೇಡ.

ನಿನ್ನ ತಂಗಿ love you.

Anonymous said...

"ಇನ್ಮೇಲಿಂದ ಏನೂ ಬರೀಬಾರ್ದು"

ದಯವಿಟ್ಟು ಇದೊಂದ್ ಮಾಡ್ಬೇಡಿ ಆಯ್ತಾ ನೀವೇ ಹೇಳ್ದಾಗೆ ಹರಿಯುತ್ತಿದ್ದರೆ ಮಾತ್ರ ಸೇರಬಹುದು ಸಾಗರವನ್ನು...... ಆದ್ದರಿಂದ ಬರೀತಾ ಇರಿ please......

ಸಿಂಧು sindhu said...

ಪ್ರೀತಿಯ ಸು,

ಸುಶ್ರುತ ಒಬ್ಬನೇ. ಅವರಿವರ ಹಾಗೆ ಬರೆಯುವವನಲ್ಲ. ಇಷ್ಟು ಸಾಕು ನಿನ್ನ ಬರಹದ ಬಗ್ಗೆ. ಇಲ್ಲಾಂದರೆ ಒಂದು ಉದ್ದ ಬ್ಲಾಗೇ ಬರೀಬೇಕಾಗುತ್ತೆ.

ನೀನು ಗುಲಾಬಿಗಿಡದಲ್ಲಿ ಮೊಗ್ಗು ಮೂಡಿ ಹೂವಾಗುವ ಪ್ರಕ್ರಿಯೆಯನ್ನು ಗಮನಿಸಿಯೇ ಇರುತ್ತೀಯ. ಕಟ್ ಮಾಡಿದ ಹಿಳ್ಳಿನ ಸಂದಿಯಲ್ಲಿ ಹೌದೋ ಅಲ್ಲವೋ ಅನ್ನುವ ಹಾಗೆ ಮೂಡಿದ ಒಂದು ಪುಟಾಣಿ ಸಾಸಿವೆಯಂಥ ಉಬ್ಬು ನಿಧಾನವಾಗಿ ಬೆಳೆದು,ಅದರ ಹಸಿರು ಕವಚ ಸ್ವಲ್ಪ ಸ್ವಲ್ಪವೇ ಬಿರಿದು, ಮೊಗ್ಗಿನ ತುದಿ ಮಾತ್ರ ಚೂರು ಅರಳಿ ನಂತರ, ಒಂದೊಂದೇ ಸುತ್ತಿನ ಪಕಳೆಗಳು ಅರಳುತ್ತಾ ಚಂದವಾಗಿ ಬಿರಿದ ಹೂವು ಅರಳುತ್ತದೆ. ಇದು ಒಂದು ದಿನಕ್ಕೆ ಆಗುವುದಿಲ್ಲ, ಇದ್ದಕ್ಕಿದ್ದಂತೆಯೂ ಆಗುವುದಿಲ್ಲ. ಇದಕ್ಕೆ ಪ್ರಯತ್ನವೂ ಬೇಕಿಲ್ಲ. ಆಗುವುದನ್ನು ಆಗಗೊಡುವ ಸಹಜ ತಾಳ್ಮೆ. ಅಷ್ಟೇ.

ಹನಿ,ಮೊಗ್ಗು,ಜಲದ ಒರತೆ,ಮೊದಲ ಅಕ್ಷರ ಎಲ್ಲದರ ಗುರಿಯೂ ಜಲಧಾರೆ,ಕಡಲು,ಹೊಳೆ,ಚಂದ ಕಾವ್ಯ ... ಆದರೆ ಸಮಯ ಬೇಕು. ಆಗೇ ಆಗುತ್ತೆ.

ನಿನ್ನ ಜೀವನ ಪ್ರೀತಿ, ಮತ್ತು ನಿನ್ನೆಡೆಗೆ ಇರುವ ನಮ್ಮೆಲ್ಲರ ಪ್ರೀತಿ ನಿನ್ನ ಬರಹವನ್ನ ನಿನ್ನ ಆಸೆಗಳನ್ನ ಕೈ ಹಿಡಿದು ನಡೆಸುತ್ತವೆ. ಪ್ರೀತಿಸಿ ಆದರಿಸಿದ ಬದುಕು ಬೆನ್ನಿಗಿರುತ್ತೆ.

ಬರಿ, ಬರಿ, ಇನ್ನೂ ಬರಿ..

ಅಕ್ಕ

ವಿ.ರಾ.ಹೆ. said...

"ನನ್ನ ಹಾಡು ನನ್ನದು.. ನನ್ನ ರಾಗ ನನ್ನದು.. ನನ್ನ ತಾಳ ನನ್ನದು.."

ಇದರಲ್ಲೇ ಇದೆ ನಿನ್ನ ಅಸಮಾಧಾನಕ್ಕೆ ಉತ್ತರ.

ನೀನು ಯಾರ ಹಾಗೂ ಬರೆಯುವುದು ಬೇಡ. ನೀನು ಸುಶ್ರುತನ ಹಾಗೇ ಬರಿ. ಸುಶ್ರುತನೆ ಇನ್ನೂ improved ಸುಶ್ರುತ ಆಗಬೇಕೆ ಹೊರತು ಸುಮ್ಮನೇ ಅಸಮಾಧಾನ ಬೇಡ.

ಗಂಭೀರವಾಗಿ ಬ್ಲಾಗಿನಿಂದ ಆಚೆಗೂ ಕಾಲಿಟ್ಟರೆ ಅಲ್ಲಿಯೂ ನಿನ್ನ ಹೆಜ್ಜೆಗಳಿಗೆ ಗುರುತನ್ನು ಮೂಡಿಸುವುದು ಸಾಧ್ಯವಿದೆ.

Anonymous said...

:( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :( :(
-SHREE

ಶ್ರೀನಿಧಿ.ಡಿ.ಎಸ್ said...

:):):):):):):):):):):):):):):):):):):):):):):):):):):):):):):):):):):):):):)

ಶ್ರೀನಿಧಿ. :)

ಭೂಮಿ-ಸಾಗರ said...

ಯಾಕ್ರೀ, ಹೀಗೆ ಹೆದರಿಸ್ತೀರಾ ? ಅದು ಹ್ಯಾಗೆ ಬರೀದಲೆ ಇರಕ್ಕಾಗುತ್ತೆ ನಿಮಗೆ! ನೋಡೋಣ :-)

veena said...

ಛಾಯಚಿತ್ರ ಚೆನ್ನಾಗಿದೆ ಯಾರು ಸೆರೆಹಿಡಿದದ್ದನ್ನು?

Sushrutha Dodderi said...

ranju,

Thank you very much for your love, care and inspiring words dear.

nishchith,

ಹ್ಮ್.. ನೋಡೋಣ..

ಸಿಂಧು,

ಗುಲಾಬಿ ಮೊಗ್ಗಿನಷ್ಟು ತಾಳ್ಮೆ 'ಹನಿ'ಗೆ ಇದ್.. .. .. .. :( ಎನಿವೇ, ಥ್ಯಾಂಕ್ಸ್ ಅಕ್ಕಾ..

ವಿಕಾಸ್,

ಬ್ಲಾಗಿನಿಂದಾಚೆ... ...? :o ತಾಳ್ಮೆ ಇಂಪಾರ್ಟೆಂಟು ಅಂತ ಹೇಳ್ಲಿಲ್ವಾ ಅಕ್ಕ ಮೇಲೆ? :)
ಆಶಯಕ್ಕೆ ಧನ್ಯವಾದ.

SHREE,

ಹ್ಮ್.. :( :( :(

ಶ್ರೀನಿಧಿ,

ನಗ್ತೀಯೇನೋ ನನ್ ಮಗ್ನೇ? ;x

poornima,

ಏನ್ರೀ, ಅವಾಜಾ? ;O

vee,

ನಿಮ್ ಬ್ಲಾಗು ನೋಡೇ ಇರ್ಲಿಲ್ಲ.. ಈಗ ನೋಡ್ತಿದೀನಿ.. ಚೆನ್ನಾಗಿದೆ..

ಚಿತ್ರ ಯಾರು ಸೆರೆಹಿಡಿದದ್ದು ಅಂತ ಗೊತ್ತಿಲ್ಲ.. ಅದು ನನ್ ಚಿತ್ರ ಅಲ್ಲ.. ಇಂಟರ್ನೆಟ್ಟಿನಲ್ಲಿ ಹುಡುಕಿದಾಗ ಸಿಕ್ಕಿದ್ದು ಅಷ್ಟೇ..

Sandeepa said...

ಓಹೋ!!
ಹಂಗೂ ಒಂದು ನಿರ್ಧಾರ ಮಾಡಿದ್ಯನೋ?!!

ಗೊತ್ತಿರ್ಲೇ ಇಲ್ಲೆ!!

ಹೋಗ್ಲಿ ಬಿಡು..

ಏನೂ ಇಲ್ದಿದ್ದವ್ರೇ ಏನೇನೋ ಆಯ್ದ್ವಡ, ನಿಂಗೇನಾತಲೇ??

anyways, welcome back:)

ಉಡುರಾಜಂ ಕಳೆಗುಂದಿ ಪೆರ್ಚದಿಹನೇ, ನ್ಯಗ್ರೋಧ ಬೀಜಂ ಕೆಲಂ
ಸಿಡಿದುಂ ಪೆರ್ಮರನಾಗದೇ, ಎಳೆಗರುಂ ಎತ್ತಾಗದೇ ಲೋಕದೊಳ್
ಮಿಡಿ ಪಣ್ಣಾಗದೇ ದೇವನೊಲ್ಮೆಯದಿರಲ್, ಕಾಲಾನುಕಾಲಕ್ಕೆ ತಾಂ
ಬಡವಂ ಬಲ್ಲಿದನಾಗನೇ ಹರಹರ ಶ್ರೀಚೆನ್ನ ಸೋಮೇಶ್ವರ!

Sushrutha Dodderi said...

Alpazna,

ಸೋಮೇಶ್ವರ ಶತಕ ಬರ್ದು ಸ್ಪೂರ್ತಿ ತುಂಬೋದಕ್ಕೆ ಟ್ರೈ ಮಾಡಿದ್ದಕ್ಕೆ ಥ್ಯಾಂಕ್ಸ್ ಸಂದೀಪ...

Shiv said...

ಸುಶ್,

ಗುರುಗಳೇ..ತುಂಬಾ ದಿವಸ ಆಯ್ತು ಮೌನಗಾಳದ ಕಡೆಗೆ ಬಂದಿಲ್ಲಾ ಅಂತಾ ಬಂದರೆ ಹೀಗೆ ವಿರಾಗಿ ತರ ಪೆನ್ ಬಿಸಾಕಿ ಇನ್ಮೇಲೇ ಬರಿಯೋದಿಲ್ಲಾ ಅನ್ನೋದೇ..

ಓಹ್..ಹಂಗೆಲ್ಲಾ ಯೋಚನೆ ಬೇಡ ಸಾರ್..

ನಿಮ್ಮ ಪೆನ್ನು ಎತ್ತಿಕೊಂಡು ಮೊದಲಿನ ತರನೇ ನಮಗೆ ನಿಮ್ಮ ಆಟೋಗ್ರಾಪ್ ಹುಡುಗಿ ಕತೆ, ಸಿದ್ದರ ಬೆಟ್ಟದ ಕತೆ..ನಡು ನಡುವೆ ಮುತ್ತಿನ ವೃತ್ತಾಂತದ ಬಗ್ಗೆ ಬರೀತಾ ಇರೀ...

We like you as you are !

Sushrutha Dodderi said...

@ shiv

ಶಿವು ನೀವು ಹನಿಮೂನ್ ಮುಗಿಸಿ ಮತ್ತೆ ಬ್ಲಾಗ್ಲೋಕಕ್ಕೆ ಹಾಜರಾಗಿರುವುದು ತುಂಬಾ ಖುಷಿ ವಿಷ್ಯ. ನೀವು ಹೀಗೆ ಪ್ರೋತ್ಸಾಹಿಸ್ತೀರಿ ಅಂದ್ರೆ ನಂಗೂ ಬರೀದೇ ಇರ್ಲಿಕ್ಕೆ ಆಗಲ್ಲ.. ಅಥ್ವಾ, ಊಹೂಂ, ನಂಗೇ ಬರೀದೇ ಇರ್ಲಿಕ್ಕೆ ಆಗ್ತಾನೇ ಇಲ್ಲ.. ಅದು ಪ್ರಾಬ್ಲಂ! ಹೀಗಾಗಿ,ಗಾಳಗಾರಿಕೆ ಮುಂದುವರೆಯುತ್ತಿದೆ ಇನ್ನೂ..!

Supreeth.K.S said...

ಎಲ್ಲೋ ಓದಿದ ನೆನಪು...
ಬಹುಶಃ ನಾ.ಕಸ್ತೂರಿ ಇರಬೇಕು, ತಾವು ಬರೆಯೋದು ಯಾರಿಗಾಗಿ, ಯಾಕಾಗಿ ಎಂದು ಒಮ್ಮೆ ವೈರಾಗ್ಯ ತಾಳಿದ್ದಾಗ ಅವರ ಗುರುಗಳೊಬ್ಬರು ಹೇಳಿದರಂತೆ. "ಸುಮ್ಮನೆ ಬರೆದು ಬಿಸಾಕುತ್ತಿರಯ್ಯ... ಸತ್ವವಿದ್ದರೆ ಅವು ತಮಗೆ ತಾವೇ ಉಳಿದುಕೊಳ್ಳುತ್ತವೆ ಇಲ್ಲ ನಾಶವಾಗ್ತವೆ..." ಎಂದು.
ನಮ್ಮ ಬರಹಗಳ ಬಗ್ಗೆ ಇತರರ ಅಭಿಪ್ರಾಯಗಳನ್ನು ಬಹಳ ಗಂಭೀರವಾಗಿ ಹಾಗೂ ತುಂಬಾ ವೈಯಕ್ತಿಕವಾಗಿ ಪರಿಗಣಿಸುವುದರಿಂದ, ಇಲ್ಲವೇ ನಮ್ಮದೇ ಆದ ಕಂಫರ್ಟ್ ಜೋನ್ ಮಾಡಿಕೊಂಡು ಹೊರಗೆ ಬರಲು ಧೈರ್ಯ ಸಾಲದಾದಾಗ ಹೀಗೆ ನಾವು ಧೈರ್ಯಗೆಡುತ್ತೆವೆ ಅನ್ನಿಸುತ್ತದೆ.
ಬರೆಯುವುದ ನಿಲ್ಲಿಸಬೇಡಿ...ಅಂತಷ್ಟೇ ಹೇಳುವುದಿತ್ತು..