Wednesday, March 03, 2010

ನ್ಯಾಲೆಯ ಮ್ಯಾಲೆ ತೂಗುವ ಮನುಕುಲದ ಬಟ್ಟೆಗಳು

ಒಂದು ಊದ್ದನೆಯ ಹಗ್ಗ ಸಿಕ್ಕರೆ ಏನೇನು ಮಾಡಬಹುದು? ಹಗ್ಗ ತೆಳುವಾಗಿದ್ದರೆ, ಒಂದು ಗಾಳಿಪಟ ಮಾಡಿ ಅದಕ್ಕದನ್ನು ಕಟ್ಟಿ, ಬಯಲಿಗೊಯ್ದು ಹಾರಿಸಿ ಕಾಮನಬಿಲ್ಲನ್ನು ಭೂಮಿಗೆ ಇಳಿಸಬಹುದು. ಇಲ್ಲವೇ ಎರಡು ಬೆಂಕಿಪೊಟ್ಟಣಗಳಿಗೆ ದಾರದ ಎರಡು ತುದಿಗಳನ್ನು ಕಟ್ಟಿ ದೂರದೂರದಲ್ಲಿ ನಿಂತು ಅದನ್ನು ಕಿವಿಗಿಟ್ಟು ಹೃದಯದ ಲಬ್‌ಡಬ್ ಆಲಿಸಬಹುದು. ಹಗ್ಗ ಗಟ್ಟಿಯಿದ್ದರೆ, ಅದರ ಒಂದು ತುದಿಗೆ ಕುಣಿಕೆ ಗಂಟು ಹಾಕಿ, ಗಡಗಡೆಯ ಮೂಲಕ ತೂರಿಸಿ, ಕೊಡಪಾನವನ್ನು ಕುಣಿಕೆಗೆ ಬಿಗಿದು ಬಾವಿಯಲ್ಲಿ ಇಳಿಬಿಟ್ಟು ಪಾತಾಳದಿಂದ ಗಂಗೆಯನ್ನು ಮೇಲೆತ್ತಬಹುದು. ಹಗ್ಗ ತುಂಬಾ ಉದ್ದ ಇದ್ದರೆ? ಮಧ್ಯರಾತ್ರಿಯಲೆದ್ದು ಹಗ್ಗವನ್ನು ಬಯಲಿಗೊಯ್ದು, ಆಕಾಶದಲ್ಲಿ ಮಿನುಗುತ್ತಿರುವ ಎರಡು ತಾರೆಗಳಿಗೆ ಕಟ್ಟಿ ಜೋಕಾಲಿ ಆಡಬಹುದು. ಅತ್ತ ಗಟ್ಟಿಯೂ ಅಲ್ಲ ಇತ್ತ ತೆಳುವೂ ಅಲ್ಲದ ಹಗ್ಗ ಸಿಕ್ಕಿದರೆ? ಆಗ ಅಂಗಳದಲ್ಲಿ ಎರಡು ಕಂಬಗಳನ್ನು ನೆಟ್ಟು, ಆ ಕಂಬಗಳಿಗೆ ಹಗ್ಗವನ್ನು ಅಡ್ಡಡ್ಡ ಕಟ್ಟಿ, ತೊಳೆದ ಬಟ್ಟೆಯನ್ನೆಲ್ಲ ತಂದು ಒಣಹಾಕಬಹುದು. ಹೀಗೆ ಬಟ್ಟೆಯನ್ನು ತೂಗಿಸಿಕೊಂಡು ಬಿಸಿಲಿಗೆ ಸಾರ್ಥಕತೆಯ ಭಾವ ನೀಡುತ್ತಿರುವ ಹಗ್ಗವೇ ‘ನೇಲು’ ಅಥವಾ ‘ನ್ಯಾಲೆ’.

ನ್ಯಾಲೆಯಲ್ಲಿ ಏನಿಲ್ಲ ಏನಿದೆ? ಅಮ್ಮನ ಸೀರೆ, ಅಕ್ಕನ ಪೆಟ್ಟಿಕೋಟು, ಅಪ್ಪನ ಶರ್ಟು ಧರಿಸಿರುವ ಹ್ಯಾಂಗರು, ವಿಮಾನದಂತೆ ಕಾಣುತ್ತಿರುವ ಪುಟ್ಟನ ಅಂಡರ್‌ವೇರು, ಅಜ್ಜನ ಮಾಸಲು ಸಾಟಿಪಂಚೆ. ಕೆಲಸದವಳು ತೊಳೆದು ಒಣಗಿಸಿದ್ದ ಅಜ್ಜಿಯ ದಪ್ಪ ಬೆಡ್‌ಶೀಟು ಒಣಗಿದ್ದು ಇಲ್ಲೇ, ನಾಳೆ ಬೆಳಗ್ಗೆ ಧರಿಸಲು ಬೇಕೆಂದು ಗಟ್ಟಿಯಾಗಿ ಹಿಂಡಿ ಹಾಕಿದ್ದ ಬನೀನಿನ ನೀರು ಆರಿದ್ದು ಇಲ್ಲೇ. ಆಚೆಮನೆ ಗಣಪಯ್ಯ ಕಾಫಿ ಚೆಲ್ಲಿ ಆಗಿದ್ದ ಕಲೆಯನ್ನು ತೊಳೆದು ಒಣಗಿಸಿದ್ದ ಜಮಖಾನ, ಮನೆಗೆ ಬಂದಿದ್ದ ನೆಂಟರ ಮಗುವಿನ ಉಚ್ಚೆ ಪರಿಮಳದ ಬಟ್ಟೆ, ಮುಟ್ಟಾಗಿದ್ದಾಗ ಹೊರಗೆ ಮಲಗಿದ್ದ ಸೊಸೆ ಹೊದ್ದಿದ್ದ ಕಂಬಳಿ -ಎಲ್ಲವೂ ಇಲ್ಲೇ ಒಣಗಿ ಹೊಸದಾಗಿವೆ.

ಮನೆಯಲ್ಲಿ ಬಾಣಂತನವಿದೆ ಎಂದಾದರೆ ಹೊಸದೊಂದು ನ್ಯಾಲೆಯನ್ನೇ ಎಳೆಯಬೇಕಾಗುತ್ತದೆ. ಬಾಣಂತಿಯ ವಸ್ತ್ರಗಳ ಜೊತೆ, ಮಗು ಪದೇ ಪದೇ ಮಾಡಿಕೊಳ್ಳುವ ಹೇಲು-ಉಚ್ಚೆಯ ಬಟ್ಟೆಗಳು, ತೊಟ್ಟಿಲಿನ ಮೆತ್ತೆಗೆ ಹಾಕುವ ವಸ್ತ್ರಗಳು, ಮಗುವಿನ ಗೊಬ್ಬೆ, ಪುಟ್ಟ ಅಂಗಿ-ಚಡ್ಡಿ, ಸ್ವೆಟರು.... ಊಹುಂ, ಇರುವ ನ್ಯಾಲೆ ಸಾಕಾಗುವುದೇ ಇಲ್ಲ. ಯಾರದಾದರೂ ಮನೆಯಲ್ಲಿ ಬಾಣಂತಿಯಿದ್ದಾಳಾ ಅಂತ ಕಂಡುಹಿಡಿಯಲು ಮನೆಯೊಳಗೆ ಹೋಗಬೇಕಾಗಿಯೇ ಇಲ್ಲ, ಹೊರಗಿರುವ ನ್ಯಾಲೆಯನ್ನು ಗಮನಿಸಿದರೆ ಸಾಕು.

ಅಷ್ಟೇ ಅಲ್ಲ, ಅವಶ್ಯಕತೆಯಿದ್ದರೆ, ಮನೆಯೊಳಗಿರುವವರ ಜಾತಿ, ಧರ್ಮ, ಅಂತಸ್ತು, ಸಂಸ್ಕೃತಿ, ವಯಸ್ಸು -ಎಲ್ಲವಕ್ಕೂ ನ್ಯಾಲೆಯೇ ಬೆಳಕಿಂಡಿಯಾಗಬಲ್ಲದು. ನ್ಯಾಲೆಯಲ್ಲಿ ಮಡಿಪಂಚೆ-ಶಲ್ಯಗಳು, ಕೆಂಪು ಕೆಂಪು ಮಡಿ ಸೀರೆಗಳು ಇದ್ದರೆ ಅಥವಾ ನ್ಯಾಲೆಯಲ್ಲಿ ಕಪ್ಪು ಬುರ್ಕಾಗಳು, ಅಚ್ಚಬಿಳಿ ಜುಬ್ಬಾಗಳು ಇದ್ದರೆ ಅಥವಾ ನ್ಯಾಲೆಯಲ್ಲಿ ಬರೀ ಜೀನ್ಸ್ ಪ್ಯಾಂಟುಗಳು, ಟೀ ಶರ್ಟುಗಳು, ವಿ‌ಐಪಿ ಬನೀನುಗಳು ಇದ್ದರೆ... ಗೊತ್ತಾಗಿಯೇ ಬಿಡುತ್ತದೆ- ಮನೆಯವರು ಇಂಥವರು ಎಂದು. ಮನೆಯೊಳಗೊಬ್ಬ ಹರೆಯದ ಹುಡುಗಿಯಿದ್ದಾಳೆಯೇ ತಿಳಿಯಬೇಕೇ- ನ್ಯಾಲೆಯನ್ನು ಗಮನಿಸಿ ಸಾಕು. ಮನೆಯೊಳಗೊಬ್ಬ ಹಣ್ಣುಹಣ್ಣು ಮುದುಕ ಇದ್ದಾನೆಯೇ ತಿಳಿಯಬೇಕೇ- ನ್ಯಾಲೆಯತ್ತ ದೃಷ್ಟಿ ಹರಿಸಿ ಸಾಕು. ಈ ಮನುಕುಲದೆಲ್ಲ ಸಂಸಾರಗಳ ಒದ್ದೆಬಟ್ಟೆ ಒಣಗಿ ಹಸನಾಗುವುದು ನ್ಯಾಲೆಯೆಂಬ ನಾಲ್ಕು ಮೀಟರ್ ದಾರದ ಮೇಲೇ.

ಎಲ್ಲರ ಮನೆಯ ಬಚ್ಚಲಲ್ಲೂ ಒಂದು ಪುಟ್ಟ ನ್ಯಾಲೆಯಿದೆ. ಹೊರಗೆ ಒಣಗಿಸಲು ಹಿಂಜರಿದವರ ಅಂಡರ್‌ವೇರು, ಪ್ಯಾಂಟಿ, ಬ್ರಾಗಳು ಇಲ್ಲಿ ಮುಚ್ಚಟೆಯಲ್ಲಿವೆ. ಬಚ್ಚಲಿನ ಬಿಸಿನೀರಿನ ಹಬೆ ಬೆರೆತ ಗಾಳಿಯಲ್ಲೇ ಅವು ಒಣಗಿ ಪುನೀತವಾಗಬೇಕಿದೆ. ಸ್ನಾನದ ನಂತರ ಮೈ ಒರೆಸಿಕೊಳ್ಳಲಿಕ್ಕಿರುವ ಟವೆಲ್ಲಿಗೂ ಇಲ್ಲಿ ಸ್ಥಾನ. ಬಾತ್‌ರೂಮ್ ಸಾಂಗುಗಳೆಲ್ಲ ಇದಕ್ಕೆ ಬಾಯಿಪಾಠ. ಮನೆಯವರೆಲ್ಲರ ನಗ್ನ ದೇಹಗಳೂ ಇದಕ್ಕೆ ಪರಿಚಿತ. ಯವ್ವನಿಗನ ಮುಷ್ಟಿಮೈಥುನ, ಹುಡುಗಿ ಬದಲಿಸಿಕೊಂಡ ಸ್ಟೇಫ್ರೀಗಳ ಗುಟ್ಟು ಬಾತ್‌ರೂಮಿನ ನ್ಯಾಲೆಯ ಮೆಮರಿಯಲ್ಲಿ ಸುರಕ್ಷಿತ.

ಮಳೆಗಾಲದಲ್ಲಿ ಅಂಗಳ-ಟೆರೇಸುಗಳಲ್ಲಿನ ನ್ಯಾಲೆಗಳಿಗೆ ಬೇಸರ. ಸುರಿವ ಧೋ ಮಳೆಯಲ್ಲಿ ನಡುಗುತ್ತ ತನ್ನ ನೀಳ ಮೈಯ ಊದ್ದಕ್ಕೂ ಸ್ನಾನ ಮಾಡಿಕೊಳ್ಳುವ ಇದು ಮುಗಿಲಲ್ಲಿ ದಟ್ಟೈಸಿರುವ ಮೋಡಗಳತ್ತ ದೈನೇತಿ ಕಣ್ಣಲ್ಲಿ ನೋಡುತ್ತದೆ. ಗೆಳೆಯ ಸೂರ್ಯ ಎಲ್ಲಿಗೆ ಹೋದ ಎಂದು ಹುಡುಕುತ್ತದೆ. ತನ್ನ ನಿರುಪಯುಕ್ತ ಸ್ಥಿತಿಯಿಂದಾಗಿ ಈಗ ಮನೆಯೊಳಗೇ ಎಳೆಯಲ್ಪಟ್ಟಿರುವ ಟೆಂಪರರಿ ನ್ಯಾಲೆಯನ್ನು ಇದು ಅಸೂಯೆಯ ಕಣ್ಗಳಿಂದ ನೋಡುತ್ತದೆ. ಎಷ್ಟು ಬೇಗ ಮಳೆಗಾಲ ಮುಗಿದೀತೋ, ತನಗೆ ಮತ್ತೆ ಬೆಲೆ ಬಂದೀತೋ ಎಂದು ಕಾಯುತ್ತದೆ. ಆದರೆ, ತುಂತುರು ಮಳೆಯ ನಂತರ ಸಾಲು ಸಾಲು ಮಳೆನೀರ ಮಣಿಗಳನ್ನು ಧರಿಸಿ ಚಂದ ಕಾಣುವಾಗ ಮಾತ್ರ, ನ್ಯಾಲೆ ತನ್ನಂದಕ್ಕೆ ತಾನೇ ಮರುಳಾಗಿಬಿಡುತ್ತದೆ. ಬೀಸುಗಾಳಿಗೆ ಮಣಿಗಳು ಉದುರುವಾಗ ನ್ಯಾಲೆ ಕಣ್ಣೀರು ಹಾಕುವಂತೆ ಕಾಣುತ್ತದೆ.

ನ್ಯಾಲೆಗಳಿಗೆ ಕ್ಲಿಪ್ಪು ಮತ್ತು ಹ್ಯಾಂಗರುಗಳೆಂಬ ಇಬ್ಬರು ಸಖಿಯರು. ಕ್ಲಿಪ್ಪು ತಬ್ಬಿದರೆ ಹ್ಯಾಂಗರು ಜಗ್ಗುತ್ತದೆ. ಅಂಗಳವೇ ಇಲ್ಲದ ನಗರದ ಮನೆಗಳಲ್ಲಿ ಟೆರೇಸಿನಲ್ಲೇ ನ್ಯಾಲೆಗಳು. ಟೆರೇಸಿನ ನ್ಯಾಲೆಗಳಿಗೆ ಕ್ಲಿಪ್ಪು ಕಡ್ಡಾಯ. ಅದಿಲ್ಲದಿದ್ದರೆ ಒಣಗಿಸಿದ ಬಟ್ಟೆ ಹಾರಿಯೇ ಹೋಗಿತ್ತದೆ- ಮೋರಿಗೋ, ರಸ್ತೆಗೋ, ಪಕ್ಕದ ಟೆರೇಸಿಗೋ, ಗುಲಾಬಿ ಗಿಡದ ಟೊಂಗೆಗೋ. ಕರ್ಚೀಫುಗಳಂತೂ ಕಳೆದೇ ಹೋಗುತ್ತವೆ. ಅಂಗಿಗಳನ್ನು ಒಣಗಿಸಲಿಕ್ಕೆ ಹ್ಯಾಂಗರಿದ್ದರೆ ಒಳ್ಳೆಯದು. ಕಡಿಮೆ ಜಾಗ ಸಾಕು. ಹ್ಯಾಂಗರಿನಲ್ಲಿ ನೇತಾಡುತ್ತಿರುವ ಅಪ್ಪನ ಅಂಗಿಯನ್ನು ಸಡನ್ನಾಗಿ ನೋಡಿದರೆ ಅಪ್ಪನೇ ಅದರೊಳಗಿರುವಂತೆ ಭಾಸವಾಗುತ್ತದೆ.

ನ್ಯಾಲೆಯ ಮೇಲೆ ಗುಬ್ಬಚ್ಚಿ ಕೂತರೆ ನೋಡಲು ಚಂದ. ನ್ಯಾಲೆಗೂ ಆಗ ಆನಂದ. ಕೂತ ಹಕ್ಕಿಯನ್ನು ಸುವ್ವಿ ಸುವ್ವಾಲೆಯೆಂದು ಹಾಡುತ್ತಾ ಇದು ತೂಗುತ್ತಿದ್ದರೆ ಮನೆಯೊಳಗಿನ ಜೋಳಿಗೆಯಲ್ಲಿನ ಕಂದ ನಿದ್ದೆ ಹೋಗಬೇಕು. ತನ್ನನ್ನು ತೂಗಿದ ನ್ಯಾಲೆಗೆ ಗುಬ್ಬಚ್ಚಿ ಎಂದೂ ಕೃತಜ್ಞ. ಗುಬ್ಬಚ್ಚಿಗೂ ನ್ಯಾಲೆಗೂ ಭಲೇ ಗೆಳೆತನ. ವಜೆಯ ಬೆಡ್‌ಶೀಟು, ರಗ್ಗುಗಳನ್ನು ಒಣಗಿಸಿದಾಗ ತಾಳಲಾರದೆ ಪೂರ್ತಿ ಜಗ್ಗಿಹೋಗುವ ನ್ಯಾಲೆಯ ನೋವನ್ನು ಅರ್ಥ ಮಾಡಿಕೊಳ್ಳುವ ಗುಬ್ಬಚ್ಚಿ, ಆಗ ಅಲ್ಲಿಗೆ ಬಂದು, "ಇನ್ನೇನು ಸ್ವಲ್ಪ ಹೊತ್ತು, ಒಣಗಿಹೋಗುತ್ತೆ, ಒಯ್ದುಬಿಡುತ್ತಾರೆ, ನೀನು ನಿರಾಳವಾಗಬಹುದು.." ಅಂತೆಲ್ಲ ಸಮಾಧಾನ ಮಾಡುತ್ತದೆ. ಬೆಡ್‌ಶೀಟು, ರಗ್ಗುಗಳಿಂದ ನ್ಯಾಲೆಯ ಕಣ್ಣೀರು ಧಾರಾಕಾರ ಹರಿಯುತ್ತದೆ. "ಈಗೆಲ್ಲ ವಾಷಿಂಗ್ ಮಶೀನುಗಳ ಡ್ರೈಯರುಗಳಲ್ಲೇ ಒಣಗುತ್ತವಂತೆ ಬಟ್ಟೆ" ಎಂದರೆ ನ್ಯಾಲೆ, "ಛೇ ಬಿಡು, ಅವಕ್ಕೆ ನಿನ್ನನಾಲಂಗಿಸುವ ಭಾಗ್ಯವಿಲ್ಲ ಅಷ್ಟೇ" ಅಂತ ಉತ್ತರಿಸುತ್ತದೆ ಗುಬ್ಬಚ್ಚಿ.

ನಮ್ಮ ದೈನಿಕದ ಅವಶ್ಯಕತೆಗಳನ್ನು ಸಂಬಾಳಿಸಲಿಕ್ಕೆ ಸದ್ದಿಲ್ಲದೆ ಸಹಾಯ ಮಾಡುವ ಈ ದಾರ ಯಾವ ಊರಿನ ಯಾವ ತಿರುವಿನ ಯಾರ ಮನೆಯ ಯಾರ ಕೈಗಳಲ್ಲಿ ಹೊಸೆಯಲ್ಪಟ್ಟಿತು? ಹಾಸ್ಟೆಲ್ಲು, ಹಾಸ್ಪಿಟಲ್ಲು, ಜೈಲುಗಳಲ್ಲಿ ಮೀಟರುಗಟ್ಟಲೆ ಅಡ್ಡಾದಿಡ್ಡಿ ಎಳೆಯಲ್ಪಟ್ಟಿರುವ ನ್ಯಾಲೆಯ ತಂತಿಗಳು ಯಾವ ಕಾರ್ಖಾನೆಯಲ್ಲಿ ತಯಾರಾದವು? ಉರಿಬಿಸಿಲು, ಸುರಿಮಳೆ, ಘೋರ ಚಳಿಗಳಲ್ಲೂ ಹೊರಗೇ ಉಳಿದು ನಮ್ಮನ್ನು ಒಳಗೆ ನೆಮ್ಮದಿಯಲ್ಲಿಟ್ಟ ಬಟ್ಟೆಗಳ ನೂಲುಗಳಲ್ಲಿ ಆ ಬೆಚ್ಚನೆಯ ಭಾವ ತುಂಬಿದ ನ್ಯಾಲೆಗಳಿಗೆ ಹೇಗೆ ಹೇಳೋಣ ಕೃತಜ್ಞತೆ?

ಬೆಳದಿಂಗಳಲ್ಲಿ ತೋಯುತ್ತ ತಂಗಾಳಿಯೊಂದಿಗೆ ಮಾತನಾಡುತ್ತ ತೂಗುತ್ತಿದೆ ಹೊರಗೆ ನೇಲು.. ಕಪ್ಪು ಆಗಸದ ಬಿಳಿ ಬಿಳಿಯ ನಕ್ಷತ್ರಗಳ ಕೈಬೀಸಿ ಕರೆಯುತ್ತಿದೆ ತುದಿಯಲ್ಲಿ ಒಂದು ಯಾರದೋ ವೇಲು..

24 comments:

ಯಜ್ಞೇಶ್ (yajnesh) said...

ಸೂಪರಾಗಿ ಬರೆದಿದ್ದೀಯ...

ಚಿತ್ರಾ said...

ಸುಶ್ರುತ ,

ಚೊಲೋ ಇದ್ದು ಈ " ನ್ಯಾಲಾಯಣ ! " ಯಾರೂ ಅಷ್ಟಾಗಿ ಲಕ್ಷ್ಯ ಕೊಡದ ' ನ್ಯಾಲೆ 'ನಿನ್ನ ಪದಗಳಲ್ಲಿ ಹೊಸ ಅರ್ಥ , ಪ್ರಾಮುಖ್ಯ ಕಂಡುಕೊಂಡಿದೆ .
ಇತ್ತೀಚಿನ ಫ್ಲ್ಯಾಟುಗಳಲ್ಲಿ ಒಂದು ಬಾಲ್ಕನಿಯೂ ಗತಿ ಇಲ್ಲದಾಗಲೂ ಕಿಡಕಿಯ ಹೊರಗೆ ಗ್ರಿಲ್ ಗಳಿಗೇ ಕಟ್ಟಿಕೊಂಡ ನ್ಯಾಲೆಗಳು ಒಣಗಿಸಿದ ಬಟ್ಟೆಗಳ ಪ್ರದರ್ಶನವನ್ನು ಎಗ್ಗಿಲ್ಲದೆ ಮಾಡುತ್ತವೆ ! ಇನ್ನೂ ಕೆಲವೆಡೆ ಗ್ರಿಲ್ಲೇ ನ್ಯಾಲೆಯ ರೂಪ ತಳೆಯುತ್ತದೆ ! ಮತ್ತೆ ಇತ್ತೀಚೆ ಟೆರೆಸಿನಲ್ಲಿ ನ್ಯಾಲೆ ಕಟ್ಟಲಾಗದ ಮನೆಗಳಲ್ಲಿ , ಬಟ್ಟೆ ಒಣಗಿಸಲು ಮಡಚಿ ಇಡಬಹುದಾದ ಸ್ಟ್ಯಾಂಡ್ ಬಂದಿರುವುದರಿಂದ ನ್ಯಾಲೆ ಸ್ವಲ್ಪ ಕಮ್ಮಿಯಾಗಿದೆ.
ಏನೇ ಆದರೂ ಬಟ್ಟೆ ತೊಳೆದ ತಕ್ಷಣ ಒಣಗಿಸಲು ಕಣ್ಣುಗಳು ' ನ್ಯಾಲೆ' ಯನ್ನೇ ಅರಸುತ್ತವೆ !!
ಸೊಗಸಾದ ಬರಹ !

ಗೌತಮ್ ಹೆಗಡೆ said...

maraya dod namaskara ninge.intha vishayada baggenoo hingella udduddakke bardyala:)nice bro:)

PARAANJAPE K.N. said...

ಸೊಗಸಾದ ವಿಶಿಷ್ಟ ಶೈಲಿಯ ಬರಹ,

ವಿ.ಆರ್.ಭಟ್ said...

Something unusual, good !

Annapoorna Daithota said...

ಚೆನ್ನಾಗಿದೆ :)

ಭಾಳಾ ದಿನ ಆಯ್ತು, ಸುಶ್ರುತ ಏನೂ ಬರ್‍ದೇ ಇಲ್ವಲ್ಲಾ ಅಂದ್ಕೊತಿದ್ದೆ, ಅಷ್ಟ್ರಲ್ಲಿ, ಒಂದು ಒಳ್ಳೆ ಲೇಖನ ಬಂತು :)

Annapoorna Daithota said...

ಚೆನ್ನಾಗಿದೆ :)

Subrahmanya Bhat said...

ಚೆನ್ನಾಗಿದೆ. "ಬಾಣಂತನವಿದೆ ಎಂದು ತಿಳಿಯಲು ಒಳಗೆ ಹೋಗಬೇಕಾದ್ದಿಲ್ಲ...ನ್ಯಾಲೆ ನೋಡಿದರೆ ಸಾಕು" ..ಸಕ್ಕತ್

umesh desai said...

ಸುಶ್ರುತ ಕಾಣದ ವಸ್ತು ಇಲ್ಲ ಅಂತ ಸಾಬೀತಾತು ಛಲೊಅದ ಯಾರೂ ವಿಚಾರಮಾಡದ ತಲೆಕೆಡಿಸಿಕೊಳ್ಳದ ವಸ್ತು ನಿನ್ನ ಕೈಯ್ಯಲ್ಲಿ
ಹೇಗೆ ಅರಳಿದೆ ನೋಡು...

ಸಿಂಧು Sindhu said...

ಸು,
ಒಳ್ಳೆಯ ಪ್ರಬಂಧ.
ಗುಬ್ಬಚ್ಚಿ ಮತ್ತು ನ್ಯಾಲೆಯ ಸಂಬಂಧ ಸೊಗಸಾಗಿ ಬಂದಿದೆ.
’ನೇಲು ’ ನಾನು ಮೊದಲ ಬಾರಿಗೆ ಕೇಳಿದ ಪದ. ನೇಲು-ವೇಲಿನ ರೈಮ್ ಚೆನ್ನಾಗಿ ಬೈಂದು.

ಇನ್ನೂ ಹಿಂಗೆ ಚೊಲೊಚೊಲೋದನ್ನ ರಾಶಿ ಬರಿ.

ಪ್ರೀತಿಯಿಂದ
ಸಿಂಧು

ಶಾಂತಲಾ ಭಂಡಿ said...

ಪುಟ್ಟಣ್ಣಾ...
ತುಂಬ ಇಷ್ಟ ಆತು.

ಸುಮ said...

ಚನಾಗಿದ್ದು :)

shreeshum said...

ಲಾಯ್ಕಿದ್ದೋ. ನಂದಿನಿ ಹಾಲಿನ ಕವರ್ರು ಕ್ಲಿಪ್ ಹಾಕಿ ಒಣಗಿಸದು ಒಂದು ಬಿಟ್ಟೊತು ನೋಡು. ಇನ್ನು ದುರ್ಬೀನು ಹಾಕ್ಯಂಡು ಹುಡ್ಕಿರು ಒಂದೂ ಬಿಡ್ಲೆ

Nisha said...

Chennagide, unusual topic.

Sree said...

very poetic, cute:) thumba ishta aaytu, except the cliched idea in the last line!

Anonymous said...

:)

Anonymous said...

ಕ್ರಾಫ್ಟೆಡ್ ಬರಹ. ಬಹಳ ಇಷ್ಟವಾಯ್ತು.

ಸಂದೀಪ್ ಕಾಮತ್ said...

ಯಾವುದರ ಬಗ್ಗೆ ಬೇಕಾದ್ರೂ ಭಾವನೆಗಳು ಉಕ್ಕುವಂತೆ ಬರೆಯಬಲ್ಲ ನಿನ್ನ ಪ್ರತಿಭೆಗೆ ಹ್ಯಾಟ್ಸ್ ಆಫ್ ಡ್ಯೂಡ್!

Ashok Uchangi said...

ಅದ್ಬುತ ಕಲ್ಪನೆ...!
ನ್ಯಾಲೆಗಳು ಒಳ್ಳೆಯ ನರ್ತಕಿಯರೂ ಹೌದು!ಇಳಿಬಿಟ್ಟ ಒದ್ದೆಬಟ್ಟೆಗಳನ್ನು ಗಾಳಿಗೆ ತೂಗಾಡಿಸುತ್ತಾ ಇವು ನರ್ತಿಸುವುದನ್ನು ನೋಡಲು ಮಜವೋ ಮಜ!

ಅಂದ ಹಾಗೆ ನನ್ನ ಬ್ಲಾಗ್ ನಲ್ಲಿ ಯುಗಾದಿಯ ಕಲ್ಪನೆಗೆ ಚಿತ್ರವನ್ನು ಹಾಕಿದ್ದೇನೆ...ನಿಮ್ಮೆಲ್ಲಾ ಬ್ಲಾಗ್ ಗೆಳೆಯರು ಇಲ್ಲಿಗೊಮ್ಮೆ ಭೇಟಿನೀಡಿ ಯುಗಾದಿಯ ಚಿಂತನೆಯನ್ನು,ನಿಸರ್ಗದ ವಿಸ್ಮಯವನ್ನು ಕಥೆ,ಕವಿತೆ,ಹಾಡು,ಪದಪುಂಜಗಳೊಂದಿಗೆ ಎಲ್ಲರೊಂದಿಗೂ ಹಂಚಿಕೊಳ್ಳಲು ಭೇಟಿ ನೀಡಲಿ ಎಂಬುದು ನನ್ನ ಆಕಾಂಕ್ಷೆ...ನೀವು ಬನ್ನಿ....ನಿಮ್ಮ ಸ್ನೇಹಿತರನ್ನೂ ಕರೆತನ್ನಿ...*!!
ಅಶೋಕ ಉಚ್ಚಂಗಿ
http://mysoremallige01.blogspot.com

Apoorva chandra said...

i...nimma blog nodide, tumbaa chennagide ishta aaythu....haage friend request kaliside, naanu tumkur nalli MBBS final yr maadthaa iddene , swantha ooru d.k. dharmasthalada pakka....even i like writing reading n muzic just like u :)

http://apoorvamagic.blogspot.com is my blog....

idishtu nanna bagge, as per ur rule 1 :)

ಜಲನಯನ said...

ನ್ಯಾಲೆಯ ಕಥೆ..ಬಾಂಬೆಯಲ್ಲಿರುವವರಿಗೆ ಇನ್ನೂ ಚೆನ್ನಾಗಿ ಗೊತ್ತಿರುತ್ತೆ...ಹಹಹ ..ಸುಶೄತ್ ಚನ್ನಾಗಿ ಮೂಡಿದೆ ನಿಮ್ಮ ವಿಶ್ಲೇಷಿತ ಬರಹ..

ವಿ.ಆರ್.ಭಟ್ said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

ಸುಶ್ರುತ ದೊಡ್ಡೇರಿ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಥ್ಯಾಂಕ್ಸ್!

ಶ್ರೀಶಂ & ಅಶೋಕ್,

ಥ್ಯಾಂಕ್ಸ್, ನೀವು ಇನ್ನೊಂದೆರಡು ’ಪಾಯಿಂಟ್ಸ್’ ಸೇರಿಸಿದಿರಿ ನನ್ನ ಪ್ರಬಂಧಕ್ಕೆ. :-)

ಮತ್ತೆ, ಎಲ್ಲರಿಗೂ ಯುಗಾದಿಯ ಶುಭಾಶಯಗಳು.

ಅನಿಕೇತನ ಸುನಿಲ್ said...

Sush......
En bariteeya maaraya..superb....ninna nota olanotagalige mookanagiddene..;-)