Thursday, October 14, 2010

ಹಳಿಗಳನ್ನು ದಾಟುವಾಗ

ಮೂರುಮಲ್ಲಿಗೆ ತೂಕದವಳ ದಾವಣಿಯಲ್ಲಿ ಚಿಟ್ಟೆಗಳಿದ್ದವು..
ಕುಸುಮಕರೆಯ ಸಿಹಿಗನಸನೇ ಉಂಡು ಬೆಳೆದವು-
ರೆಕ್ಕೆ ಬಲಿತಾಗ ಹಾರಲೇ ಇಲ್ಲ; ಮರಳಿ ಕಂಬಳಿ
ಹುಳುಗಳಾಗಿ ಮೈಗೇ ಚುಚ್ಚಿದವು
ಅತ್ತರಿನ ಸಿಡಿಗಾಳಿಗೆ ಒಡ್ಡಿದ ಬಗಲು-
ಹೊಸ ಕಚಗುಳಿಗೆ ಮೈ ನವಿರೇಳಲೇ ಇಲ್ಲ
ಬೋಗುಣಿಯಲ್ಲಿನ ದ್ರಾಕ್ಷಿಗಳನು ಸುತ್ತ ಕೂತ ಜನ
ಹುರಿದು ಮುಕ್ಕುವಾಗ ಸಹ ಬಾರದ ದೇವರು
ಈಗ ಬಂದು ವರವ ಕೇಳು ಎನ್ನುತ್ತಿದ್ದಾನೆ..

ನೈವೇದ್ಯಕ್ಕಿಲ್ಲಿ ಇನ್ನೇನೂ ಉಳಿದಿಲ್ಲ ಬಾಂಧವಾ..
ಮೊಳೆಯಿಂದ ತಲೆಯವರೆಗೂ ಸುತ್ತಿಯಾಗಿದೆ ಜಾಟಿ.
ಬಿಡುವುದಷ್ಟೇ ಬಾಕಿ ಕೈಬೀಸಿ. ತಿರುಗಿ ತಿರುತಿರು ತಿರುಗಿ
ಸತ್ವ ಮುಗಿದು ಒರಗುವವರೆಗೆ ತಿರುಗಲಿ ಬುಗರಿ.
ನುಣುಪು ನೆಲ ಮಲಗಿಸಿಕೊಳ್ವುದು ಹಾಸಿ ಲೇಪು
ನೇವರಿಸುವುದು ಧೂಳಿನೆಲರು, ಗುನುಗಿ ಜೋ-ಲಾಲಿ

ಯೋಚಿಸುತ್ತ ನಿಂತೆ ಯಾಕೆ?
ಹಳಿಗಳನ್ನು ದಾಟುವಾಗ ನಿಧಾನ ಮಾಡಬೇಡ..
ಬೆಣಚುಕಲ್ಲುಗಳ ರಾಶಿ ಮೇಲೆ ಊದ್ದಕೆ ಪವಡಿಸಿರುವ
ಈ ಕಂಬಿಗಳು ಎಲ್ಲೂ ಕೂಡುವುದೇ ಇಲ್ಲವಂತೆ
ಭರ್ರನೆ ಹಾದು ಬರುವ ರೈಲು ನೀನು ಹೆಜ್ಜೆ
ಕದಲಿಸುವ ಮೊದಲೇ ಅಪ್ಪಳಿಸಿಬಿಟ್ಟೀತು

ಎಷ್ಟೊ ಹರಿದಾರಿಯಾಚೆಗಿದೆ ನಿನ್ನ ನಿಲ್ದಾಣ
ಬಂದ ಬಂಡಿಯ ಇಚ್ಛಾನುಸಾರ ನನ್ನ ಪಯಣ
ಮತ್ಯಾವುದೋ ನಿಲ್ಮನೆ, ಇನ್ಯಾವುದೋ ಬಂದರು
ಗೋಗರೆಯದಿರು, ಋಣವಿದ್ದಲ್ಲಿ ಮತ್ತೆ ಸಿಗೋಣ
ಕಾಮನಬಿಲ್ಲನ್ನು ಭೂಮಿಗಿಳಿಸಲು ಸಾಧ್ಯವಾಗುತ್ತದೋ
ನೋಡೋಣ.

20 comments:

ಶಾಂತಲಾ ಭಂಡಿ said...

ಪ್ರತೀ ಸಾಲು ಇಷ್ಟವಾಯ್ತು ಪುಟ್ಟಣ್ಣ. ಬರೆದರೆ ಹಿಂಗೆ ಬರೆದುಬಿಡಬೇಕು.

ಪ್ರೀತಿಯಿಂದ,
-ಪುಟ್ಟಕ್ಕ

Dileep Hegde said...

ಅದ್ಭುತವಾಗಿದೆ..

ದಿವ್ಯಾ said...

I liked the last lines... simply super... :-)

ನನ್ನೊಳಗಿನ ಕನಸು.... said...

very meaningful sentences. ಎಷ್ಟೊ ಹರಿದಾರಿಯಾಚೆಗಿದೆ ನಿನ್ನ ನಿಲ್ದಾಣ
ಬಂದ ಬಂಡಿಯ ಇಚ್ಛಾನುಸಾರ ನನ್ನ ಪಯಣ
ಮತ್ಯಾವುದೋ ನಿಲ್ಮನೆ, ಇನ್ಯಾವುದೋ ಬಂದರು
ಗೋಗರೆಯದಿರು, ಋಣವಿದ್ದಲ್ಲಿ ಮತ್ತೆ ಸಿಗೋಣ
ಕಾಮನಬಿಲ್ಲನ್ನು ಭೂಮಿಗಿಳಿಸಲು ಸಾಧ್ಯವಾಗುತ್ತದೋ
ನೋಡೋಣ I liked it

Kanthi said...

nice poem.

sunaath said...

ಕವನದಲ್ಲೇ ಕಾಮನಬಿಲ್ಲನ್ನು ಇಳಿಸಬಲ್ಲ ಧೀರನಿಗೆ, ಧರೆಯ ಮೇಲೆ ಇಳಿಸುವದೂ ಸಾಧ್ಯವಾಗುವದು. Good luck!

Venkatakrishna.K.K. said...

ಸುಂದರ ಕವನ.ಇಷ್ಟವಾಯ್ತು..

ಪ್ರಗತಿ ಹೆಗಡೆ said...

nice thought...

Subrahmanya said...

ನಿಮ್ಮ ಕವನಗಳನ್ನು ಓದುವುದೇ ಒಂದು ಮಧುರವಾದ ಬಂಧುರ.

Rohit KG said...

Awesome lines...Take a bow,Sush!

Radhika Nadahalli said...

ಚಂದದ ಕವನ. ಸೆಳೆದ ಸಾಲು : ಮೂರುಮಲ್ಲಿಗೆ ತೂಕದವಳ ದಾವಣಿಯಲ್ಲಿ ಚಿಟ್ಟೆಗಳಿದ್ದವು..

kanasu said...

wow!

ಶರಶ್ಚಂದ್ರ ಕಲ್ಮನೆ said...

ಸುಶ್,
ಕವನ ತುಂಬಾ ಇಷ್ಟ ಆತು. ಕೊನೆಯ ಸಾಲು ಸೂಪರ್ :)

ಅಪ್ಪ-ಅಮ್ಮ(Appa-Amma) said...

ಸೂಪರ್ ಸೂಶ್ರುತ !
ಸಕತ್ ಆಗಿದೆ ಕವನ
ಹೀಗೆ ಬರಲಿ ಕವನಧಾರೆ

ಸಾಗರದಾಚೆಯ ಇಂಚರ said...

ತುಂಬಾ ಸುಂದರ ಸಾಲುಗಳಿವು
ಮೊದಲ ಸಾಲೆ ಸೆಳೆದುಬಿಡುತ್ತದೆ ಓದುಗರನ್ನು

ದೀಪಸ್ಮಿತಾ said...

ಸೊಗಸಾಗಿದೆ ಸಾಲುಗಳು. ಒಟ್ಟಿಗೆ ಇದ್ದರೂ ಎಂದೆಂದೂ ಕೂಡುವುದಿಲ್ಲ ಹಳಿಗಳು

ಚರಿತಾ ಭಟ್ said...

ತುಂಬಾ ಚೆನ್ನಾಗಿದೆ.

phonon said...

"ರೆಕ್ಕೆ ಬಲಿತಾಗ ಹಾರಲೇ ಇಲ್ಲ; ಮರಳಿ ಕಂಬಳಿ
ಹುಳುಗಳಾಗಿ ಮೈಗೇ ಚುಚ್ಚಿದವು" The rest of the icons have been used by various poets before, however, this one is unique, novel and new.-D.M.Sagar

ಸುಶ್ರುತ ದೊಡ್ಡೇರಿ said...

ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಥ್ಯಾಂಕ್ಸ್. ಕವಿತೆಗಳೆಡೆಗಿನ ನಿಮ್ಮ ಪ್ರೀತಿ ಹೀಗೇ ಇರಲಿ.

ಸೀತಾರಾಮ. ಕೆ. / SITARAM.K said...

ತೂಗಿಸಿ ತೂಗಿಸಿ ಹೆಣೆದ ಶಬ್ದಜಾಲ ಮಾಂತ್ರಿಕ ಮೋಡಿಗೊಳಪಡಿಸಿ, ಕಣ್ಣಕಟ್ಟಿ ಗಿರಿ ಗಿರಿ ಸುತ್ತಿಸಿ ಬಿಟ್ಟಂತಿದೆ ಒಂದು ಅಪೂರ್ವ ಅನುಭವದೊಂದಿಗೆ.