Thursday, November 11, 2010

ಪ್ರೊ. ಜಿ.ವಿ. -ಎರಡು ಮಾತು

ಪ್ರಣತಿಯ ಉದ್ಘಾಟನೆ ಮತ್ತು ಚಿತ್ರಚಾಪ ಬಿಡುಗಡೆ: ಹೊಸ ಸಂಸ್ಥೆ, ಮೊದಲ ಪುಸ್ತಕ ಎಂದಾಗ ಎಲ್ಲರಿಗಿರುವ ಭಯವೇ ನಮಗೂ ಇತ್ತು. ನಾವೇನೋ ಹುಮ್ಮಸ್ಸಿನಲ್ಲಿ ಬರಹ, ಕರೆಕ್ಷನ್ಸು, ಕವರ್ ಪೇಜು, ಒಳಪುಟಗಳಿಗೆ ರೇಖಾಚಿತ್ರಗಳು, ಮುದ್ರಣ, ಇನ್ವಿಟೇಶನ್ನು ಅಂತೆಲ್ಲ ತಯಾರಿ ನಡೆಸಿದ್ದೆವು. ಆದರೆ ಪುಸ್ತಕ ಬಿಡುಗಡೆಗೆ ಯಾರನ್ನು ಕರೆಸುವುದು ಎನ್ನುವ ಗೊಂದಲ ಮಾತ್ರ ದೊಡ್ಡದಾಗಿ ಕಾಡ್ತಿತ್ತು. ಹೇಳಿಕೇಳಿ ನಾವೆಲ್ಲ ಬ್ಲಾಗಿಗಳು. ಅಲ್ಲದೆ ಇನ್ನೂ ಹುಡುಗರು. ಎಲ್ಲೋ ಆಗೀಗ ನಮ್ಮ ಲೇಖನಗಳು-ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿರಬಹುದು ಅಷ್ಟೇ. ಉಳಿದಂತೆ ಹೊರಜಗತ್ತಿಗೆ ನಾವು ಯಾರು ಅಂತಲೇ ಗೊತ್ತಿಲ್ಲ. ಹಾಗಿದ್ದಾಗ, ಈಗ ಇದ್ದಕ್ಕಿದ್ದಂತೆ ಪುಸ್ತಕ ಮಾಡಿದೀವಿ, ಬನ್ನಿ, ಬಿಡುಗಡೆ ಮಾಡಿ ಅಂತ ಕರೆಯೋದಾದರೂ ಹೇಗೆ? ನಮ್ಮ ಪರಿಚಯ ಮಾಡಿಕೊಳ್ಳೋದು ಹೇಗೆ? -ಅಂತೆಲ್ಲ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದೆವು.

ವಸುಧೇಂದ್ರ, ‘ಹಾಗೆಲ್ಲ ಏನೂ ಇಲ್ಲ ಕಣೋ. ಪುಸ್ತಕ ಬಿಡುಗಡೆ ಅಂದ್ರೆ ಯಾರನ್ನ ಕರೆದ್ರೂ ಬರ್ತಾರೆ. ಬೇಕಿದ್ರೆ ಅನಂತಮೂರ್ತಿಗಳನ್ನ ಕರೀರಿ, ಹೊಸ ಹುಡುಗರ ಬೆನ್ನು ತಟ್ಟಲಿಕ್ಕೆ ಅಂತ ಬರ್ತಾರೆ. ಏನೂ ಮುಜುಗರ ಪಟ್ಕೋಬೇಡಿ. ಅರಾಮಾಗಿ ಹೋಗಿ ಕೇಳಿ’ ಅಂತ ಧೈರ್ಯ ತುಂಬಿದ್ರು. ಆದ್ರೂ ನಮಗೆ ಒಳಗೊಳಗೆ ಪುಕುಪುಕು.

ಕೊನೆಗೆ ಅರುಣ, ಪ್ರೊ. ಜಿ. ವೆಂಕಟಸುಬ್ಬಯ್ಯನವರ ಹೆಸರನ್ನ ಸೂಚಿಸಿದ. ‘ಅವರು ತನ್ನ ತಾಯಿಗೆ ಪರಿಚಯ. ಆ ಮೂಲಕ ಪರಿಚಯ ಮಾಡ್ಕೋಬಹುದು ನಮ್ಮನ್ನ. ಏನಾದ್ರಾಗ್ಲಿ, ಹೋಗಿ ಕೇಳೋದು ಕೇಳೋಣ’ ಅಂತ. ಆದ್ರೆ ಜಿ.ವಿ. ಹೆಸರು ಕೇಳಿ ನಮಗೆ ಭಯ ಇನ್ನೂ ಜಾಸ್ತಿ ಆಯ್ತು! ಜಿ.ವಿ. ಅಂದ್ರೆ ನಿಘಂಟು ತಜ್ಞ. ನಾವು ಬರೆದಿರೋದರಲ್ಲಿ ಏನಾದ್ರೂ ತಪ್ಪುಗಳಿದ್ರೆ ಅಲ್ಲೇ ಓದಿ ಸರಿಯಾಗಿ ಬೈದು, ‘ಇಂತಾ ಪುಸ್ತಕ ಮಾಡ್ಲಿಕ್ಕೆ ನಾಚ್ಕೆ ಆಗಲ್ವಾ?’ ಅಂತಂದು ಕಳುಹಿಸಿಬಿಟ್ರೆ? ಆದರೆ ನಮಗೆ ಗತ್ಯಂತರವಿರಲಿಲ್ಲ. ಲೈಮ್‌ಲೈಟಿನಲ್ಲಿರೋ, ಯುವ ಸಾಹಿತಿಗಳನ್ನ ಕೇಳಿ ಇಲ್ಲಾ ಅನ್ನಿಸಿಕೊಳ್ಳೋದಕ್ಕಿಂತ ಇದು ವಾಸಿ ಎನ್ನಿಸಿ, ಜಿ.ವಿ.ಯವರನ್ನೇ ಕರೀಲಿಕ್ಕೆ ಮನಸು ಮಾಡಿದೆವು.

ಮೊದಲು ಅರುಣ ಮತ್ತೆ ವಿಜಯಾ ಜಿ.ವಿ.ಯವರ ಮನೆಗೆ ಫೋನ್ ಮಾಡಿ ಪರಿಚಯ ಹೇಳಿಕೊಂಡು ಒಂದು ದಿನ ಹೋಗಿ ಪುಸ್ತಕದ ಹಸ್ತಪ್ರತಿ ಕೊಟ್ಟುಬಂದ್ರು. “ಏನ್ ಹೇಳಿದ್ರೂರಿ ಜೀವಿ?” ಅಂತ ನಾವೆಲ್ಲ ಒಕ್ಕೊರೊಲಿನಿಂದ ಕೇಳಿದೆವು. “ಏನೂ ಹೇಳ್ಲಿಲ್ಲ ಇನ್ನೂ. ಏನ್ ಮಾಡ್ತಿದೀರಾ ನೀವೆಲ್ಲ ಅಂತ ಕೇಳಿದ್ರು. ಯಾವಾಗಿಂದ ಬರೀತಿದೀರಾ, ಏನು ಓದ್ತೀರಾ, ಯಾರು ನಿಮ್ಮ ಇಷ್ಟದ ಸಾಹಿತಿ ಅಂತೆಲ್ಲ ಕೇಳಿದ್ರು. ನಂಗೆ ಮೊದಲೇ ಟೆನ್ಷನ್ನು, ಅಡಿಗರನ್ನ ಓದ್ತಿರ್ತೀನಿ ಅಂತ ಹೇಳಿದೆ. ಅಡಿಗರ ಕಾವ್ಯದಲ್ಲಿ ಏನು ಇಷ್ಟ ಅಂತ ಕೇಳಿದ್ರು. ಅಯ್ಯೋ, ಅದೆಲ್ಲ ನಂಗೇನ್ ಗೊತ್ತು? ಇಷ್ಟ ಆಗಿದ್ದೆಲ್ಲ ಓದೋವ್ನು ನಾನು! ಏನೋ, ತೋಚಿದ್ದು ಹೇಳಿದೆ ಬೆವರ್ತಾ.. ಆಮೇಲೆ ಅವರೇ ಅಡಿಗರ ಕಾವ್ಯದ ಬಗ್ಗೆ ಸುಮಾರು ಹೊತ್ತು ಮಾತಾಡಿದ್ರು. ನಿಮ್ಮಂತ ಹುಡುಗರು ಓದ್ತಿರೋದು, ಬರೀತಿರೋದು ಖುಶಿ ವಿಷಯ ಅಂತ ಹೇಳಿದ್ರು” ಅಂತ ಹೇಳಿದ ಅರುಣ. “ಹಾಗಾದ್ರೆ ಬರ್ತಾರಂತಾ ಪ್ರೋಗ್ರಾಮಿಗೆ?” ಕೇಳಿದ್ವು. “ಹೂನಪ್ಪಾ. ಖುಶಿಯಿಂದ ಒಪ್ಪಿಕೊಂಡ್ರು” ಅಂತ ಅರುಣ ಹೇಳಿದಾಗ ನಮಗೆಲ್ಲ ನಿರಾಳ.

ಆಮೇಲೊಂದು ದಿನ, ಕಾರ್ಯಕ್ರಮಕ್ಕೆ ಒಂದು ವಾರ ಮುಂಚೆ, ನಾವು ಚಿತ್ರಚಾಪದಲ್ಲಿ ಬರೆದಿದ್ದ ಐದೂ ಗೆಳೆಯರು ವಿಜಯಾ ಜೊತೆ ಜಿ.ವಿ. ಮನೆಗೆ ಹೋದ್ವು. ಎಲ್ಲರಿಗೂ ಭಯ. ಈಗಾಗ್ಲೇ ಜಿ.ವಿ. ನಮ್ಮ ಹಸ್ತಪ್ರತಿ ಓದಿರ್ತಾರೆ. ಏನು ಹೇಳ್ತಾರೋ ಏನೋ ಅಂತ. ಪುಟ್ಟ ಮನೆಯ ಕದ ತೆರೆದ ಬಿಳಿ ವಸ್ತ್ರಧಾರಿ ನಮ್ಮೆಲ್ಲರಿಗಿಂತ ಕುಳ್ಳಗಿದ್ದರು. ಆಹ್ವಾನ ಪತ್ರಿಕೆ ಕೊಟ್ವಿ. “ಪ್ರಣತಿ -ಹೆಸರು ಯಾರು ಇಟ್ಟಿದ್ದು?” ಕೇಳಿದ್ರು ಜಿ.ವಿ. ಇದ್ದುದರಲ್ಲೇ ನಮ್ಮಲ್ಲಿ ವಿಜಯಾ ಧೈರವಂತೆ! ಮಾತಾಡಿದ್ಲು. ಆಮೇಲೆ ಜಿ.ವಿ. ನಮ್ಮೆಲ್ಲರ ಬಗ್ಗೆ ವಿಚಾರಿಸಿದ್ರು. “ಚನಾಗಿದೆ. ಓದಿದೆ ಎಲ್ಲಾನೂ. ಚಿತ್ರಚಾಪ ಅನ್ನೋ ಹೆಸರೂ ಅರ್ಥಪೂರ್ಣವಾಗಿದೆ....” ಅಂತೆಲ್ಲ ಸುಮಾರು ಹೊತ್ತು ಮಾತಾಡಿದ್ರು. ನಮಗೆ ಸ್ವಲ್ಪ ಧೈರ್ಯ ಬಂತು. “ಕಾರ್ಯಕ್ರಮದ ದಿನ ನಮಗೆ ಒಂದಷ್ಟು ಸಲಹೆಗಳನ್ನೂ ಕೊಡಿ ಸರ್.. ನಮ್ಮ ಹಾಗೇ ಸುಮಾರು ಹೊಸ ಬರಹಗಾರರು ಬಂದಿರ್ತಾರೆ ಅಲ್ಲಿ” ಅಂತ ಕೇಳಿಕೊಂಡ್ವು. “ಖಂಡಿತ ಖಂಡಿತ.. ಆದ್ರೆ.. ಕಾರ್ಯಕ್ರಮದ ದಿನ ಏನಾದ್ರೂ ವಾಹನಕ್ಕೆ ವ್ಯವಸ್ಥೆ ಮಾಡ್ಲಿಕ್ಕೆ ಆಗತ್ತಾ? ಕಾಲು ನೋವು. ಅದಿಲ್ಲಾಂದ್ರೆ ನೆಡ್ಕೊಂಡೇ ಬರ್ತಿದ್ದೆ..!” ಅಂತ ಅದೆಷ್ಟು ಸಣ್ಣ ದನಿಯಲ್ಲಿ ಕೇಳಿದ್ರು ಅಂದ್ರೆ, “ಅಯ್ಯೋ ಖಂಡಿತ ಸರ್.. ಕಾರ್ ಕಳುಹಿಸ್ತೀವಿ” ಅಂತ ಎಲ್ಲರೂ ಒಟ್ಟಿಗೇ ಹೇಳಿದೆವು ನಾವು.

ಜಿ.ವಿ. ಕಾರ್ಯಕ್ರಮದ ದಿನ ಹೇಳಿದ ಸಮಯಕ್ಕೆ ಬಂದರು. ಪ್ರಣತಿಯನ್ನ ಉದ್ಘಾಟಿಸಿದರು, ಚಿತ್ರಚಾಪವನ್ನ ಬಿಡುಗಡೆ ಮಾಡಿದ್ರು. ನಂತರ ನಮ್ಮೈವರ ಬರಹಗಳ ಬಗ್ಗೆಯೂ ವಿವರವಾಗಿ ಮಾತಾಡಿದ್ರು. ಕನ್ನಡದ ಬಗ್ಗೆ, ಸಾಹಿತ್ಯದ ಬಗ್ಗೆ, ನಗರದ ಜನಗಳ ಭಾಷೆಯ ಬಗ್ಗೆ ಅವರಾಡಿದ ಮೌಲಿಕ ನುಡಿಗಳಿಗೆ ಪ್ರೇಕ್ಷಕರೆಲ್ಲ ತಲೆದೂಗಿದರು. “ಇಲ್ಲಿಯ ಬರಹಗಳನ್ನ ನಾನು ಒಂದಲ್ಲ, ಎರಡು ಸಲ ಓದಿದೆ. ಇವರೆಲ್ಲರಿಗೂ ಉತ್ತಮ ಭವಿಷ್ಯವಿದೆ” ಎಂದಾಗಲಂತೂ ನಮಗಾದ ಸಂತೋಷ ಅಷ್ಟಿಷ್ಟಲ್ಲ. ವಯಸ್ಸು ನೂರಕ್ಕೆ ಸಮೀಪಿಸುತ್ತಿರುವ ಹಿರಿಯರೊಬ್ಬರ ಈ ಹಾರೈಕೆಗಿಂತ ನಮಗಾದರೂ ಇನ್ನೇನು ಬೇಕಿತ್ತು? ಜಿ.ವಿ. ನಮಗೆಲ್ಲ ಹಸ್ತಾಕ್ಷರ ಕೊಟ್ಟರು, ನಾವು ಫೋಟೋ ಬೇಕೆಂದಲ್ಲೆಲ್ಲ ನಿಂತು ಸಹಕರಿಸಿದರು, ಪುಸ್ತಕ ಬಿಡುಗಡೆಯ ನಂತರವಿದ್ದ ಸಂಗೀತ ಕಾರ್ಯಕ್ರಮ ಮುಗಿಯುವವರೆಗೂ ಕೂತಿದ್ದರು.

ಚಿತ್ರಚಾಪ ಬಿಡುಗಡೆ ಸಂದರ್ಭದಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯ
ನಂತರವೂ ಅಷ್ಟೇ. ನಮ್ಮ ಕಾರ್ಯಕ್ರಮಗಳಿಗೆ ಅವರನ್ನು ಕರೆಯಲು ಹೋದಾಗಲೆಲ್ಲ ಆತ್ಮೀಯವಾಗಿ ಸ್ವಾಗತಿಸುವರು, ಯಾವುದೇ ಹಮ್ಮು-ಬಿಮ್ಮು ತೋರಿಸದೆ ನಮ್ಮೊಂದಿಗೆ ಮಾತಾಡುವರು. ನಾವು ಕೇಳುವ ಕನ್ನಡದ ಕುರಿತಾದ, ವ್ಯಾಕರಣದ ಕುರಿತಾದ, ಶಬ್ದಪ್ರಯೋಗದ ಕುರಿತಾದ ಪ್ರಶ್ನೆಗಳಿಗೆ ತಕ್ಷಣ ಉತ್ತರಿಸುವರು.

ಈ ಹಿರಿಯರಿಗೆ, ಮೇಧಾವಿಗೆ, ನಿರಹಂಕಾರಿಗೆ, ಶಬ್ದಬ್ರಹ್ಮಗೆ ಈಗ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಅವರೊಂದಿಗೆ ಕಳೆದ ಕ್ಷಣಗಳನ್ನು ನೆನೆದಾಗಲೆಲ್ಲ ಇವರಿಗಿಂತ ಸೂಕ್ತರು ಮತ್ಯಾರಿದ್ದರು ಈ ಸ್ಥಾನಕ್ಕೆ ಎಂದೆನಿಸುತ್ತದೆ. ಪ್ರೊ. ಜಿ. ವೆಂಕಟಸುಬ್ಬಯ್ಯರಿಗೆ ನನ್ನ ಮತ್ತು ಪ್ರಣತಿಯ ಅಭಿವಂದನೆ, ನಮಸ್ಕಾರ.

9 comments:

ಮಹೇಶ ಭಟ್ಟ said...

ಪ್ರೊಫೆಸರ್ ಜಿ.ವಿ. ಯವರಿಗೆ ಅಭಿನಂದನೆಗಳು

umesh desai said...

ಸುಶ್ರುತ ಹಿರಿಯ "ಜೀವಿ" ಅವರೊಡನೆ ನಿಮ್ಮೊಡನಾಟವನ್ನು ನೆನೆಸಿಕೊಂಡು ಹೇಳಿದ್ದಕ್ಕೆ ಧನ್ಯವಾದಗಳು.ಸಾಹಿತ್ಯಸಮ್ಮೇಳನ ಅಧ್ಯಕ್ಷ ಪದವಿಗೊಂದು ಗರಿಮೆ ಬಂದಿದೆ....ಅಭಿನಂದನೆಗಳು ಜೀವಿ ಅವರಿಗೆ.

nenapina sanchy inda said...

Very sweet write up bro!!
:-)
ms

ಶಾಂತಲಾ ಭಂಡಿ said...

ಪ್ರೊ.ಜಿ.ವಿ. ಅವರಿಗೆ ನನ್ನದೂ ವಂದನೆ, ಅಭಿನಂದನೆ.

ಜಲನಯನ said...

ಸುಶ್ರೂತ ’ಜೀವಿ’ ಯವರಿಗೆ ಬೆಂಗಳೂರಿನ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆರಿಸಿರುವುದು ತುಂಬಾ ಸಂತೋಷದ ಸಂಗತಿ...ಅವರಿಗೆ ನಮ್ಮ ಅಭಿನಂದನೆಗಳು..ಒಳ್ಳೆಯ ಸಕಾಲಿಕ ಲೇಖನ..

ಶರಶ್ಚಂದ್ರ ಕಲ್ಮನೆ said...

ಜಿ.ವಿ. ಅವರ ಬಗ್ಗೆ ಸ್ವಲ್ಪ ದಿನದ ಹಿಂದೆ 'ಸುಧಾ' ದಲ್ಲಿ ಒದ್ದಿದ್ದಿ, ಅವ್ರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಕೇಳಿ ಸಂತೋಷ ಆತು. :)

Vijaya said...

:-) am speechless!

ಅಪ್ಪ-ಅಮ್ಮ(Appa-Amma) said...

ಜಿವಿಯವರೊಡನೆ ನಿನ್ನ ಒಡನಾಟವನ್ನು ಆತ್ಮೀಯವಾದ ಶೈಲಿಯಲ್ಲಿ ಹಂಚಿದ್ದು ಇಷ್ಟವಾಯ್ತು..

ಜಿವಿಯರಿಗೆ ಅಭಿನಂದನೆಗಳು

ಸೀತಾರಾಮ. ಕೆ. / SITARAM.K said...

ಜಿವಿ ಯವರ ಬಗ್ಗೆ ತುಂಬಾ ಆಪ್ತವಾಗಿ ಬರೆದು ಪರಿಚಯಿಸಿದ್ದಿರಾ..
ಧನ್ಯವಾದಗಳು.