Wednesday, December 29, 2010

ಇಹವ ಮರೆಸುವ ನಶೆಯ ಬೇಡುತ...

ನನ್ನ ಬೆಂಗಳೂರಿನ ಬ್ಯಾಚುಲರ್ಸ್ ಬಿಡಾರಕ್ಕೆ ಬಂದವರನೇಕರು “ಅರೆ, ನೀನು ಮನೇಲಿ ಟೀವೀನೇ ಇಟ್ಕೊಂಡಿಲ್ವಾ?” ಅಂತ ಕೇಳುತ್ತಾರೆ. ಅದ್ಯಾಕೋ, ಟೀವಿ ನನಗೊಂದು ಅವಶ್ಯಕ ವಸ್ತು ಅಂತ ಇದುವರೆಗೆ ಅನ್ನಿಸಿಯೇ ಇಲ್ಲ. ಇಷ್ಟಕ್ಕೂ ಯಾರಾದರೂ -ಅದರಲ್ಲೂ ನಗರವಾಸಿಗಳು- ಟೀವಿ ಇಟ್ಟುಕೊಳ್ಳುವುದಾದರೂ ಯಾಕೆ ಅಂತ ನಾನು ಯೋಚಿಸಿದ್ದಿದೆ. ಆಗ ನನಗೆ ಹೊಳೆದ ಕೆಲ ಪಾಯಿಂಟುಗಳು ಇವು: (೧) ನಿಮ್ಮ ಮನೆಯಲ್ಲಿ ದಿನವಿಡೀ ಮನೆಯಲ್ಲೇ ಇರುವವರಿದ್ದರೆ, ಐ.ಇ., ಕೆಲಸಕ್ಕೆ ಹೋಗದ ಹೆಂಡತಿ, ವಯಸ್ಸಾದ ತಂದೆ-ತಾಯಿ, ನಿರುದ್ಯೋಗಿ ಸಹೋದರಿ ಅಥವಾ ಸಹೋದರ -ಇವರ ಮನರಂಜನೆಗೆ ಟೀವಿ ಬೇಕಾದೀತು. ಅಥವಾ ನಿಮ್ಮದೇ ಬಿಡುವಿನ ವೇಳೆಯಲ್ಲಿ ಮನರಂಜನೆಗೆ ಬೇರ್ಯಾವುದೇ ಆಕರ ನಿಮಗಿಲ್ಲದಿದ್ದರೆ ಟೀವಿಯ ಮೊರೆ ಹೋಗಬಹುದು. (೨) ನಿತ್ಯದ -ಕ್ಷಮಿಸಿ- ಕ್ಷಣಕ್ಷಣದ ಸುದ್ದಿಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ನಿಮಗಿದ್ದರೆ, ಉದಾಹರಣೆಗೆ, (ಅ) ಶೇರುಪೇಟೆಯಲ್ಲಿ ಇಂಥಾ ಶೇರಿನ ಬೆಲೆ ೧೦.೫೦ಕ್ಕೆ ಎಷ್ಟಿತ್ತು, ೧೦.೫೨ಕ್ಕೆ ಎಷ್ಟಾಯಿತು, (ಬ) ಇಂಥಾ ಶಾಸಕನ ಬೆಲೆ ೧೦.೫೦ಕ್ಕೆ ಎಷ್ಟಿತ್ತು, ೧೦.೫೨ಕ್ಕೆ ಎಷ್ಟಾಯಿತು, (ಕ) ಸರ್ಕಾರದ ಯಾವ ಹಗರಣ ೧೦.೫೦ಕ್ಕೆ ಬಯಲಾಗಿತ್ತು, ೧೦.೫೨ಕ್ಕೆ ಯಾವುದಾಯಿತು, (ಡ) ಬಂಗಾರಪ್ಪ ೧೦.೫೦ಕ್ಕೆ ಯಾವ ಪಕ್ಷದಲ್ಲಿದ್ದರು, ೧೦.೫೨ಕ್ಕೆ ಯಾವುದಕ್ಕೆ ಹಾರಿದರು, ಇತ್ಯಾದಿ. (೩) ನೀವು ಕ್ರಿಕೆಟ್, ಇತ್ಯಾದಿ ಆಟದ ಹುಚ್ಚಿನವರಾಗಿದ್ದರೆ. (೪) ನೀವೇ ನಿತ್ಯ ಟೀವಿಯಲ್ಲಿ ಬರುವವರಾಗಿದ್ದರೆ! ಉದಾ, ನೀವು- ನಟ/ನಟಿ/ ಲೈಮ್‌ಲೈಟಿನಲ್ಲಿರುವ ತಾರೆ, ಸಂದರ್ಶಕ, ಯಾಂಕರು, ಹಳ್ಳಿಗೋ ಕಾಡಿಗೋ ಸುಡುಗಾಡಿಗೋ ಹೋಗೋ ಪ್ಯಾಟೆ ಹುಡ್ಗಿ -ಆಗಿದ್ದರೆ. (೫) ನೀವು ಅಮೃತಾಂಜನದ ವಾಸನೆಯ ವ್ಯಸನಿಯಾಗಿದ್ದರೆ, ಅಂದರೆ, ಟೀವಿ ನೋಡಿ ತಲೆನೋವು ಬರಿಸಿಕೊಂಡು ಅಮೃತಾಂಜನ ಸವರಿಕೊಂಡು ಸುಖ ಅನುಭವಿಸುವ ಜಾತಿಯವರಾಗಿದ್ದರೆ ....ನಿಮಗೆ ಟೀವಿ ಬೇಕಾಗಬಹುದು.

ನನಗೆ ಈ ಯಾವ ನಂಬರೂ ತಾಳೆ ಹೊಂದದ ಕಾರಣ ನಾನು ಟೀವಿ ಇಟ್ಟುಕೊಂಡಿಲ್ಲ ಅಂತ ಅಂದುಕೊಂಡಿದ್ದೇನೆ. ಅಲ್ಲದೇ ಬೆಳಗ್ಗೆ ಮನೆ ಬಿಟ್ಟರೆ ರಾತ್ರಿ ವಾಪಸು ತಲುಪುವ ನಾನು, ಆಮೇಲೆ ಅಡುಗೆ ಮಾಡಿಕೊಂಡು ಉಂಡು, ಪಾತ್ರೆ-ಗೀತ್ರೆ ತೊಳೆದು, ಆ-ಈ ಮ್ಯಾಗಜೀನುಗಳನ್ನು ಓದಿ ಮುಗಿಸಿ, ಪುಸ್ತಕದ ಗೂಡಿನಲ್ಲಿರುವ ಓದದ ಪುಸ್ತಕಗಳನ್ನು ಓದಿ, ಹಾರ್ಡ್‌ಡಿಸ್ಕಿನಲ್ಲಿರುವ ಸಿನೆಮಾ ನೋಡಿ, ಅಷ್ಟರಮೇಲೆ ಬರೆಯುವ ತಲುಬು ಬಂದರೆ ಬರೆದು -ಇಷ್ಟೆಲ್ಲಾ ಮಾಡುವಷ್ಟರಲ್ಲಿ ಬೆಳಗಾಗಲಿಕ್ಕೆ ಇನ್ನು ನಾಲ್ಕೇ ತಾಸಿರುವುದು ಎಂಬ ಸತ್ಯ ಹೊಳೆದು, ಆಹ್- ಇನ್ನು ಟೀವಿ ಎಷ್ಟೊತ್ತಿಗೆ ನೋಡಲಿ, ನಿದ್ರೆ ಎಷ್ಟೊತ್ತಿಗೆ ಮಾಡಲಿ! (ಇದನ್ನೆಲ್ಲಾ ಹೇಳುವುದೂ ಕಷ್ಟ; ಜನ ಮದ್ವೆ ಮಾಡ್ಕೋ ಅಂತಾರೆ!) ಅಲ್ಲದೇ, ನನಗೆ ಜಾಹೀರಾತುಗಳ ಮಧ್ಯದಲ್ಲಿ ಅಷ್ಟಿಷ್ಟು ಸಿನೆಮಾ ನೋಡುವುದಕ್ಕಾಗಲಿ, ಹೇಳಿದ ಸುದ್ದಿಯನ್ನೇ ಹೇಳುವ ನ್ಯೂಸ್‌ಚಾನಲುಗಳನ್ನು ಸಹಿಸಿಕೊಳ್ಳುವುದಕ್ಕಾಗಲೀ, ಹುಚ್ಚುಚ್ಚು ಚರ್ಚೆಗಳ ಕಾಮಿಡಿ ಕಂಡು ಸುಮ್ಮನಿರುವುದಕ್ಕಾಗಲೀ, ಒಂದು ಹಾಡಿನ ಬಂಡಿಯಲ್ಲಿ ಸೋತಿದ್ದಕ್ಕೆ ಪುಟ್ಟ ಮಕ್ಕಳನ್ನು ಜೀವನವೇ ಮುಗಿಯಿತೇನೋ ಎಂಬಂತೆ ತೋರಿಸುವ ರಿಯಾಲಿಟಿ ಶೋಗಳನ್ನು ನೋಡುವುದಕ್ಕಾಗಲಿ, ಸಂಸಾರದ ಸಮಸ್ಯೆಗಳ ಧಾರಾವಾಹಿಗಳನ್ನು ನೋಡಿ ಜೀವನದ ಬಗ್ಗೆ ಜಿಗುಪ್ಸೆ ತಾಳುವುದಕ್ಕಾಗಲೀ ಬಿಲ್‌ಕುಲ್ ಇಷ್ಟವಿಲ್ಲ. ಕ್ರಿಕೆಟ್ಟೊಂದನ್ನು ನಾನೂ ಮಿಸ್ ಮಾಡಿಕೊಳ್ಳುತ್ತಿದ್ದೆನೇನೋ, ಆದರೆ ಬಹಳಷ್ಟು ಮ್ಯಾಚುಗಳು ನನ್ನ ಆಫೀಸಿನ ಸಮಯದಲ್ಲೇ ಇದ್ದು, ಕ್ರಿಕ್ಕಿನ್ಫೋದವನು ಪ್ರತಿ ಬಾಲಿಗೂ ಕಮೆಂಟರಿ ಕೊಟ್ಟು ಉಪಕಾರ ಮಾಡುತ್ತಾನಾದ್ದರಿಂದ -ಟೀವಿ ಇನ್ನೂ ನನ್ನ ಮನೆಗೆ ಪ್ರವೇಶ ಪಡೆದಿಲ್ಲ.

ಆದರೆ ಈ ಟೀವಿ ಇಲ್ಲದಿರುವುದರಿಂದ ನನಗಾಗದಿದ್ದ ಸಾಕ್ಷಾತ್ಕಾರವೊಂದು ಮೊನ್ನೆ ಗೆಳೆಯನ ಮನೆಯಲ್ಲಿ ಟೀವಿ ನೋಡುತ್ತಿದ್ದಾಗ ಆಗಿಹೋಯಿತು! ನನಗೆ ಜೀವನದ ಕಷ್ಟಗಳು ಮತ್ತು ಭವಿಷ್ಯದ ಪ್ರಪಂಚದ ಬಗೆಗೆ ಇದ್ದ ಕೆಲ ಕಲ್ಪನೆಗಳು ಅತಿರಂಜಿತವಾಗಿದ್ದವೇನೋ ಅನ್ನಿಸಲು ಶುರುವಾಗಿಬಿಟ್ಟಿತು. ಈ ಟೀವಿ ಜಾಹೀರಾತುಗಳು ಬಹಳವೇ ಆಕರ್ಷಕವಾಗಿರುತ್ತವೆ. ಅವುಗಳನ್ನು ನೋಡುತ್ತ ನೋಡುತ್ತ ನಾನು ಜೀವನ ಎಂದರೆ ನೀರು ಕುಡಿದಷ್ಟು ಸರಾಗ ಎಂಬಂತಹ ತೀರ್ಮಾನಕ್ಕೆ ಬಂದೆ. ಅಡುಗೆ ಮಾಡುವುದು ಈಗೊಂದು ಸಮಸ್ಯೆಯೇ ಅಲ್ಲ- ಕೈಲಾಶ್ ಕುಕ್ಕರ್, ಮಿಕ್ಸಿ, ಗ್ರೈಂಡರ್, ಜ್ಯೂಸ್ ಮೇಕರ್, ತವಾ -ಏನು ಬೇಕಾದರೂ ಇದೆ. ಒಂದು ನಿಮಿಷದಲ್ಲಿ ಹೊಸ ಸೊಸೆ ಅಡುಗೆ ಮಾಡಿ ಎಲ್ಲರನ್ನೂ ಇಂಪ್ರೆಸ್ ಮಾಡುತ್ತಾಳೆ. ಸೆಖೆಯಾಯಿತೋ ಕೇತಾನ್ ಫ್ಯಾನಿದೆ, ಸುವಾಸನೆಯೂ ಬೇಕೆಂದರೆ ಏಸಿಯಿದೆ. ಸೊಳ್ಳೆ ಬಂತೋ, ಆಲೌಟ್ ಹಚ್ಚಿ. ಸಂತೂರಿನಿಂದ ಸ್ನಾನ ಮಾಡಿದರೆ ನನ್ನ ಮಮ್ಮಿಯೂ ಹುಡುಗಿಯಾಗುತ್ತಾಳೆ. ಕೋಂಪ್ಲಾನ್ ಕುಡಿದರೆ ಮಾವಿನಕಾಯಿ ಕೈಗೇ ಸಿಗುತ್ತದೆ. ತಲೆಹೊಟ್ಟಾದರೆ ಹೆಡ್ಡೆಂಡ್ ಶೋಲ್ಡರ್ಸ್, ತಲೆನೋವಾದರೆ ಮೆಂಥಾಲ್ ಪ್ಲಸ್, ತಲೆಬಿಸಿಯಾದರೆ ನವರತ್ನ ತೈಲ, ತಲೆ ತಿರುಗಿದರೆ ತಂಪು ಪಾನೀಯ. ಏಶಿಯನ್ ಪೇಯಿಂಟ್ಸ್ ಬಳಿದರೆ ಇದ್ದ ಮನೆಯೇ ಹೊಸತಾಗುತ್ತದೆ, ಡೈರಿಮಿಲ್ಕ್ ತಿನ್ನಿಸಿದರೆ ಉದ್ವಿಗ್ನ ಹೆಂಡತಿ ಶಾಂತಳಾಗುತ್ತಾಳೆ, ವ್ಹಿಸ್ಪರ್ ಹಾಕಿಕೊಂಡ ಹೆಣ್ಣುಮಕ್ಕಳು ಕುಣಿದಾಡತೊಡಗುತ್ತಾರೆ, ಏನಾದ್ರೂ ಏಕ್ಸ್ ಸ್ಪ್ರೇ ಮಾಡ್ಕೊಂಡ್ರೋ- ಸೆಕ್ಸೀ ಹುಡ್ಗೀರೆಲ್ಲಾ ನಿಮ್ ಕಡೀಗೇ! ಆಕ್ವಾಗಾರ್ಡಿನ ನೀರು ಕುಡಿದರೆ, ಲೈಫ್‌ಬಾಯ್‌ನಿಂದ ಸ್ನಾನ ಮಾಡಿದರೆ, ಡೆಟ್ಟಾಲ್‌ನಿಂದ ಕೈ ತೊಳೆದರೆ, ಕೋಲ್ಗೇಟ್‌ನಿಂದ ಹಲ್ಲು ತಿಕ್ಕಿದರೆ, ಡಾಬರ್ ಛವನ್‌ಪ್ರಾಶ್ ತಿಂದರೆ -ನಿಮಗೆ ಯಾವ ಖಾಯಿಲೆಯೂ ಬರುವುದಿಲ್ಲ. ವಯಸ್ಸಾದ ಮೇಲೂ ಚಿಂತೆಯಿಲ್ಲ, ಪೆನ್ಷನ್ ಪ್ಲಾನುಗಳಿವೆ. ಸತ್ತರೆ ವಿಮೆಯಿದೆ, ದೂರದೂರಿನ ಮಗನಿಗೆ ಸುದ್ದಿ ಮುಟ್ಟಿಸಲು ಯಾವಾಗಲೂ ಸಿಗುವ ವೋಡಫೋನ್ ನೆಟ್ವರ್ಕ್ ಇದೆ, ಅವನು ಮನೆ ಮುಟ್ಟಲು ಸೂಪರ್‌ಫಾಸ್ಟ್ ಬೈಕು-ಕಾರುಗಳಿವೆ. ಇನ್ನೇನು ಬೇಕು ಬದುಕಿಗೆ?

“ಈ ಥರ ಎಲ್ಲಾದರ ಬಗ್ಗೇನೂ ವ್ಯಂಗ್ಯ ಮಾಡಬಹುದು” ಅಂದ ಗೆಳೆಯ. ಅದು ನಿಜ. ಆದರೆ ಇವುಗಳ ಬಗ್ಗೆ  ಕನಿಷ್ಟ ವ್ಯಂಗ್ಯವನ್ನಾದರೂ ಮಾಡದಿದ್ದರೆ ನಾನು ಈ ದಿಕ್ಕುತಪ್ಪಿರುವ ಜಗತ್ತಿನಲ್ಲಿ ಆಶಾವಾದಿಯಾಗಿ ಉಳಿಯುವುದಾದರೂ ಹೇಗೆ ಎನ್ನುವುದು ನನ್ನ ಪ್ರಶ್ನೆ. ಎಷ್ಟು ಉಗಿದರೂ ಒರೆಸಿಕೊಳ್ಳುವ, ಒಂದು ಗುಲಗುಂಜಿಯಷ್ಟೂ ಮರ್ಯಾದೆ ಇರುವವರ ಹಾಗೆ ಕಾಣದ ರಾಜಕಾರಣಿಗಳ ಹೊಲಸು, ಲಂಚಕೋರ ಸರ್ಕಾರಿ ಅಧಿಕಾರಿಗಳ ದರ್ಪ, ದಿನಸಿ-ಆಟೋ-ಬ್ಯಾಂಕು-ಹೋಟೆಲ್-ಮಠ-ಐಟಿ-ಮೀಡಿಯಾ-ಆಟ ಎಲ್ಲೆಡೆ ತೋರುವ ಮೋಸ, ಇವತ್ತು ಇಷ್ಟು ಚಂದ ಎದುರಿಗೆ ಮಾತಾಡಿದ ವ್ಯಕ್ತಿಯ ಬಗ್ಗೆ ನಾಳೆ ಬರುವ ಆರೋಪ .....ಇವನ್ನೆಲ್ಲ ಇದ್ದಿದ್ದನ್ನು ಇದ್ದ ಹಾಗೇ - ‘ಲೈಟ್’ ಆಗಿ ತೆಗೆದುಕೊಳ್ಳುವುದು ಹೇಗೆ? ಲೇವಡಿ ಸಹ ಮಾಡದಿದ್ದರೆ, ನಾಳೆ ಇವರುಗಳೊಂದಿಗೇ ವ್ಯವಹರಿಸುವುದಾದರೂ ಹೇಗೆ? ಒಂಥರಾ ಇಡೀ ಜಗತ್ತೇ ದುಡ್ಡಿನ ಹಿಂದೆ ಬಿದ್ದು ಓಡುತ್ತಿರುವಾಗ, ನನ್ನನ್ನು ಬಿಟ್ಟು ಉಳಿದೆಲ್ಲರೂ ಬುದ್ಧಿವಂತರಂತೆ - ವಾಸ್ತವವಾದಿಗಳಂತೆ ಕಾಣುತ್ತಿರುವಾಗ, ನಾನು ಮಾತ್ರ ಭಾವನೆ, ಪ್ರೀತಿ, ಕರುಣೆ, ನಿಷ್ಠೆ, ಪ್ರಾಮಾಣಿಕತೆ ಅಂತೆಲ್ಲ ಆದರ್ಶಗಳನ್ನು ಮೈಮೇಲೆ ಹೇರಿಕೊಂಡು ಹುಚ್ಚನಾಗಿದ್ದೇನೆಯೇ? ಅಥವಾ ಬೇರೊಬ್ಬನ ದೃಷ್ಟಿಯಲ್ಲಿ ನಾನೂ ಭ್ರಷ್ಟನೇ?

೨೦೧೦ರ ಇಡೀ ವರ್ಷದ ನ್ಯೂಸ್‌ಪೇಪರುಗಳನ್ನು ತಿರುವಿ ಹಾಕಿದರೆ, ಪ್ರತಿದಿನ ಒಂದಲ್ಲಾ ಒಂದು ಹಗರಣ - ಒಂದಲ್ಲಾ ಒಂದು ಕ್ಷೇತ್ರದಲ್ಲಿ ಇದ್ದೇ ಇತ್ತು. ಅದಿಲ್ಲದಿದ್ದರೆ ದುರಂತ. ಖುಶಿಯ ಸುದ್ದಿ ಓದಿದ್ದು ನೆನಪಿಗೇ ಇಲ್ಲದಷ್ಟು. ಅದೇನು ಮಾಧ್ಯಮಗಳೇ ಅವನ್ನು ನಮ್ಮ ಕಣ್ಣಿಗೆ ರಾಚುವಂತೆ ಕಟ್ಟಿಕೊಟ್ಟವೋ ಅಥವಾ ನಮಗೇ ಅವನ್ನು ಚಪ್ಪರಿಸಿಕೊಂಡು ಸವಿಯುವುದು ಅಭ್ಯಾಸವಾಗಿಹೋಯಿತೋ, ಅರಿಯೆ. ನಾಳೆ ಏನಾದರೂ ಸಂತಸದ ವಾರ್ತೆಯಿರಬಹುದು ಅಂತ ಕಾತರಿಸುವುದಕ್ಕೂ ಇವತ್ತು ಭರವಸೆಯೇ ಉಳಿದಿಲ್ಲವಾಗಿದೆ.

ಹೀಗಿದ್ದಾಗಲೂ ಹೊಸ ವರ್ಷ ಬಂದಿದೆ. ಹೊಸ ಕನಸು ಕಾಣಬೇಕಿದೆ. ಹೊಸ ಹಾಡು ಕೇಳಬೇಕಿದೆ. ಹೊಸ ಗಾಳಿಗೆ ಮೈಯೊಡ್ಡಬೇಕಿದೆ. ಹೊಸ ಸ್ಪರ್ಷಕ್ಕೆ ರೋಮಾಂಚಗೊಳ್ಳಬೇಕಿದೆ. ಬತ್ತಿದ ಪುಪ್ಪುಸಗಳಲಿ ಹೊಸ ಉಸಿರು ತುಂಬಬೇಕಿದೆ. ಮನೆಯ ಬಾಗಿಲಿಗೆ ತೋರಣ ಕಟ್ಟಬೇಕಿದೆ. ಅಂಗಳದಲ್ಲಿ ರಂಗೋಲಿ ಹಾಕಬೇಕಿದೆ. ದಾರಿ ಸಾರಿಸಿ ಎಲ್ಲ ಒಪ್ಪ ಮಾಡಬೇಕಿದೆ. ಹೊಸ ಬಟ್ಟೆಯುಟ್ಟು ಸಿಹಿಯಡುಗೆ ಮಾಡಿ ಹೊಸದೇನಕ್ಕೋ ಕಾಯಬೇಕಿದೆ.

ಇಸವಿ ಎರಡುಸಾವಿರದ ಹನ್ನೊಂದು ಎಲ್ಲರ ಮನಸಿಗೂ ಹಿತ ತರಲಿ. ಇಹವ ಮರೆಸುವ ನಶೆ ಕೊಡಲಿ. ಇನಿತು ಕಹಿಗೆ ಬೊಗಸೆ ಸಿಹಿಯಿರಲಿ. ಶುಭಾಶಯಗಳು.

18 comments:

shwetha said...

ಧನ್ಯವಾದಗಳು..ಏನೇ ಆದರೂ ನಾವುಗಳು ನಂಬಿಕೆ ಕಳೆದುಕೊಳ್ಳುವುದಿಲ್ಲ.. ಹೊಸ ವರ್ಷ ಹೊಸ ಕನಸುಗಳಿಗೆ, ಹೊಸ ಭಾವನೆಗಳಿಗೆ, ಹೊಸ ಆಶಯಗಳಿಗೆ ನಾಂದಿಯಾಗುವುದೆಂಬ ಭರವಸೆ ಮಾನಸಿನ ಒಂದು ಮೂಲೆಯಲ್ಲಿ ಇದ್ದೇ ಇರುತ್ತದೆ ಅಲ್ಲವೇ? ಬರವಣಿಗೆ ಸೊಗಸಾಗಿದೆ... ನಿಮಗೂ ಕೂಡ ಹೊಸ ವರ್ಷದ ಶುಭಾಶಯಗಳು...

ಚುಕ್ಕಿಚಿತ್ತಾರ said...

ನಿಮಗೂ, ಎಲ್ಲರಿಗೂ ಬರಲಿರುವ ಹೊಸವರ್ಷಕ್ಕೆ ಹಾರ್ದಿಕ ಶುಭಾಶಯಗಳು.
ಈ ಉತ್ಪ್ರೇಕ್ಷೆ ತು೦ಬಿದ ಜಾಹೀರಾತುಗಳು, ನ್ಯೂಸುಗಳು ಇವುಗಳ ನಡುವೆ ನಿಜ ಯಾವುದು ಅ೦ತ ಹುಡುಕುವುದು ಕಷ್ಟ ಆಗಿಬಿಟ್ಟಿದೆ.ಯಾವುದನ್ನು ಎಷ್ಟು ನ೦ಬಬೇಕು ಗೊತ್ತಾಗದು.
ಪ್ರತೀ ವರ್ಷ ಹೊಸ ಕನಸು ಕಾಣುವುದೇನೋ ನಿಜ, ಆದರೆ ಹೊರಕಣ್ಣಿಗೆ ಕನ್ನಡಕ ಬರುವುದೇ ಹೊರತೂ ಒಳಗಣ್ಣು ವಿಸ್ತಾರವಾಗದು.
ತು೦ಬಾ ಚ೦ದಕ್ಕೆ ಬರೆದಿದ್ದೀರಿ.ವಿಜಯಕರ್ನಾಟಕದಲ್ಲಿ ಬಿಳೀ ಹಾಳೆಯ ಮೇಲೆ ಬರೆದ ಚಿತ್ರವೂ ತು೦ಬಾ ಚೆನ್ನಾಗಿತ್ತು.
ವ೦ದನೆಗಳು.

ದಿವ್ಯಾ said...

nice write up...adre eno touch missing kano...:-(..ninna ella barahada haagilla idu...

umesh desai said...

೨೦೧೧ ರ ಶುಭಾಶಯಗಳು. ನಮ್ಮ ಮನೆಯಲ್ಲಿ ತದ್ವಿರುದ್ಧ ಒಂದೇ ರಿಮೋಟ್ ಗಾಗಿ ನಾನು ನನ್ನ ಮಗಳು ಹೊಡೆದಾಡುತ್ತಿರುತ್ತೇವೆ...ಹೊಸವರುಷ ದಲ್ಲಿ ಹೋಳಿಗೆ ಊಟ ಹಾಕಸ್ರಿ..

ವಿ.ರಾ.ಹೆ. said...

hmm... ವಸಿ ಸಮಾಧಾನ ಮಾಡ್ಕಬೇಕು.

ಹೊಸ ಕ್ಯಾಲೆಂಡರ್ ಗೆ ಶುಭಾಶಯಗಳು.

ಅಪ್ಪ-ಅಮ್ಮ(Appa-Amma) said...

ಹೊಸ ವರ್ಷದ ಶುಭಾಶಯಗಳು !
ರಂಗೋಲಿ,ತೋರಣ,ಸಿಹಿ ಅಡುಗೆ,ಹೊಸತನ..
ಎಲ್ಲಾ ಬರಲಿ !

sunaath said...

ಗುರೂ,
ಹೊಸ ಟೀವಿ ತಕ್ಕೊಳಪ್ಪ!
ಹೊಸ ವರ್ಷದ ಶುಭಾಶಯಗಳು.

Shweta said...

hmm..This is a fact.
Materialistic aagta iddu jeevna annistu ...

ಅನಿಕೇತನ ಸುನಿಲ್ said...

ಗೆಳೆಯ,
ಬರಹ ಖುಷಿ ಕೊಟ್ಟಿತು.
ನಿನಗು ನಿನ್ನ ಆಶಯಗಳೆಲ್ಲವಕ್ಕೂ ಮತ್ತಷ್ಟು ಹೊಸತನ ತುಂಬಿ ಬರಲಿ,ಪ್ರೀತಿ ಮತ್ತಷ್ಟು ಹಿತನೀಡಲಿ,ಎಲ್ಲ ಸವಿಭಾವಗಳು ಬೆಚ್ಚಗೇ ಉಳಿಯಲಿ.
ಶುಭಾಶಯಗಳೊಂದಿಗೆ,
ಪ್ರೀತಿಯಿಂದ,
ಸುನಿಲ್.

ಸುಧೇಶ್ ಶೆಟ್ಟಿ said...

Happy new year Sush....

Chennagi barede.... nanna maneyalli ninne TV thandru :P ammanige boru antha... :) modalidda TV gujurige biddu varushagaLaagiddavu.. namma maneyalli TV agathya antha yaarigoo anisidde illa ammanige boru anisuvavarege :)

shridhar said...

ನಶಾ ಹಿ ನಶಾ ಹೈ ...

ಹೊಸ ವರ್ಷದ ಶುಭಾಶಯಗಳು.

ಶರಶ್ಚಂದ್ರ ಕಲ್ಮನೆ said...

ಇಂದಿನ ಪರಿಸ್ಥಿತಿನ ವಿಡಂಬನಾತ್ಮಕವಾಗಿ ಚನ್ನಾಗಿ ತಿಳಿಸಿದ್ದೆ ಸುಶ್.. ನಿನಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು :)

manaseeee said...

ವರುಷವಿಡೀ ಕೆಟ್ಟಸುದ್ದಿಗಳನ್ನು ಓದಿದ್ದೂ ನಿಜ. ಮತ್ತವುಗಳ ನಡುವೆಯೇ ನಾಳೆಯ ಕನಸುಗಳ ಕಾಣುತ್ತಿದ್ದೇವೆ ಎನ್ನೋದು ಸತ್ಯ. ಲೇಖನ ಇಷ್ಟ ಆಯ್ತು ಸರ್..

Ultrafast laser said...

ಇತ್ತೀಚಿನ ದಿನಗಳಲ್ಲಿ ನೀನು ಬರೆದ ಉತ್ತಮ ಬರಹ ಎಂದು ನನ್ನ ಅಭಿಮತ. ಸರಳ, ಸುಸಂಸ್ಕೃತ, ನನ್ನಂತೆಯೇ ಆಧುನಿಕ ಸಂಕೀರ್ಣ ಜಗತ್ತಿನವನಲ್ಲದ ನಿನ್ನ ಈ ವಿಡಂಬನಾತ್ಮಕ ಬರಹ ಇಂದಿನ ಬಹುತೇಕ ಪಟ್ಟಣ-ಮೂಲದ ಯಂತ್ರ-ಬದ್ದ ಮನೋಭೂಮಿಕೆಯ ಬ್ಲಾಗರುಗಳಲ್ಲಿ ಕಾಣಬರದು. -D.M.Sagar

ಗುಬ್ಬಚ್ಚಿ ಸತೀಶ್ said...

ಟಿವಿ ವಿಡಂಬನೆ ಚೆನ್ನಾಗಿದೆ. ಮೂರ್ಖರ ಪೆಟ್ಟಿಗೆ ಇವತ್ತು ಜಾಣರ ಪೆಟ್ಟಿಗೆ ಅಂತಾ ಆಗಿರುವುದು ವಿಪರ್ಯಾಸವೇ ಸರಿ. ಅಂದಾಗೆ ಕಳೆದ ಹಲವು ವರ್ಷಗಳಿಂದ ನಮ್ಮನೇಲೂ ಟಿವಿ ಇಲ್ಲ.

shivu.k said...

ಟಿ.ವಿ ಬಗ್ಗೆ ಬರೆದ ಅಭಿಪ್ರಾಯವೇ ನನ್ನದೂ ಕೂಡ..ಅದಕ್ಕೆ ನಾನು ರೇಡಿಯೋ ಮೊರೆಹೋಗಿದ್ದೇನೆ. ಅದರಲ್ಲಿ ಪ್ರಶ್ನೆಗೆ ಉತ್ತರಿಸಿದರೆ ಪಿವಿಅರ್ ಸಿನಿಮಾ ಟಿಕೆಟ್ ಇತ್ಯಾದಿ ಸಿಗುತ್ತದೆ. ಜಾಹೀರಾತನ್ನು ನೋಡಲು ಇಷ್ಟಪಡುವುದು ಯಾಕೆಂದರೆ ಹತ್ತು ಸೆಕೆಂಡಿನಲ್ಲಿ ಅದೆಷ್ಟು ಅದ್ಬುತ ಫೋಟೊಗ್ರಫಿ, ಸಂಕಲನ, ನೆರಳು-ಬೆಳಕು ಹೊಂದಾಣಿಕೆ ಸೆಕೆಂಡಿನಲ್ಲಿ ಮಾಯವಾಗುವ ಎಕ್ಸ್‍ಪ್ರೆಷನ್...ಬಣ್ಣ ಬಣ್ಣದ ಹುಡುಗಿಯರು..ಇತ್ಯಾದಿಗಳು.

ಒಟ್ಟಾರೆ ಚೆಂದದ ಲೇಖನ. ಹೊಸವರ್ಷಕ್ಕೆ ಶುಭಾಶಯಗಳು. ನೀವು ಅಂದುಕೊಂದಿದ್ದೆಲ್ಲಾ ಆಗಲಿ.

ಸಾಗರದಾಚೆಯ ಇಂಚರ said...

Sir
tumbane chennagide
keep it up

ರಾಜ್ said...

bahala chenda untu maarayre., manassige muda kotta nimage hosa varshada shubhashayagalu