Thursday, January 13, 2011

ಹಕ್ಕಿ ಸಾಕುವುದು...

ಹಕ್ಕಿ ಸಾಕುವುದು ಹೇಗೆ ಅಂತ ನನಗೆಲ್ಲಿ ಗೊತ್ತಿತ್ತು?
ಅಪ್ಪನ ಜೊತೆ ಹೋಗಿದ್ದಾಗ ತೋಟಕ್ಕೆ,
ಪುಟ್ಟಗೆ ಕೂತಿತ್ತು ಸ್ವಾಂಗೆ ಅಟ್ಲಿನ ಮಡಿಲಲ್ಲಿ
ಪೆಟ್ಟಾದ ಹಕ್ಕಿ. ಚಿಂವಿಚಿಂವಿ ಗುಟ್ಟುತ್ತಿದ್ದದರ ಆರ್ತಕ್ಕೆ
ಮನ ಕರಗಿ, ಕೊಕ್ಕ ಕೆಂಪು - ಮೈಯ ಹಸುರಿಗೆ ಪ್ರೀತಿಯುಕ್ಕಿ
ಎತ್ತಿ ಹೊಂಬಾಳೆಯಲ್ಲಿಟ್ಟುಕೊಂಡು ತಂದೇಬಿಟ್ಟೆ
ಮನೆಗೆ.

ಹಕ್ಕಿಯ ಬೇಕುಬೇಡಗಳೊಂದೂ ಗೊತ್ತಿರಲಿಲ್ಲ..
ಚಿಂವಿಚಿಂವಿ ಗದ್ದಲ ಮೂರು ದಿನಕ್ಕೆ ಬೇಸರ ಬಂದು,
ವಿಚಾರಿಸಲು ಸಮಯ ವಿಳಂಬ; ಗಾಯಕ್ಕೆ ನನಗೆ ತಿಳಿಯದ ಮುಲಾಮು;
ಸಮಾಧಾನಕ್ಕೆ ಶಬ್ದಗಳು ಸಿಗದೇ ಪರಿತಾಪ.

ಕರೆದುತಂದದ್ದಕ್ಕೆ ಸಾಕುವುದೇ ಶಿಕ್ಷೆ ಎಂದಿತು ಹಕ್ಕಿ.
ಅಪ್ಪ ಗುರುಗುಟ್ಟಿದ; ಅಮ್ಮ ಕಾಳಿಗೆ ಕಾಸು ಕೊಡಲಿಲ್ಲ.
ಹೊರಲಾರದ, ಹೊರಹಾಕಲಾರದ ಇಬ್ಬಂದಿಯಲ್ಲಿ
ತಪ್ಪು ಯಾರದು ಅಂತ ತಿಳಿಯದೇ ಕಂಗಾಲು ನಾನು.

ಒಂದು ಹಕ್ಕಿ ಸಾಕುವುದು ಇಷ್ಟೆಲ್ಲ ಕಷ್ಟ ಅಂತ ನನಗೆಲ್ಲಿ ಗೊತ್ತಿತ್ತು..?
“ಚೆಲುವು ಚೆಂದ, ಒಲವಿಗರ್ತಿ, ಆಟಕ್ಕಾದರ, ಸ್ಪರ್ಷಕ್ಕೆ ಪುಳಕ,
ರೆಕ್ಕೆ ಬೀಸಿದರೆ ಭಾವರೋಮಾಂಚ, ಚಿಲಿಪಿಲಿಯೋ- ಉಪಮಾತೀತ;
...ಆದರೆ,” ಅಜ್ಜ ತಡೆದು ಹೇಳಿದ,
“..ಹಿಡಿದು ಸಾಕಿದ ದಿನದಿಂದ ನಿನಗಿಲ್ಲ ಹಾರಾಟ; ವಿಹಂಗಮ ನೋಟ.”

ಹಕ್ಕಿ ಸಾಕುವ ಕಷ್ಟ ನನಗೆ ಗೊತ್ತೇ ಇರಲಿಲ್ಲ.

13 comments:

Pataragitti (ಪಾತರಗಿತ್ತಿ) said...

ರೆಕ್ಕೆ ಬೀಸಿದರೆ ಭಾವರೋಮಾಂಚ..
ಗುರುವೇ..ಯಾವ ಹಕ್ಕಿ ಬಗ್ಗೆ ತಮ್ಮ ಕವನ ಇದು :)

nenapina sanchy inda said...

ಮೀನು ಸಾಕೋದೆ best ಕಣೋ ತಮ್ಮಾ
:-)
ಮಾಲತಿ ಎಸ್

Unknown said...

ಮೇಲ್ನೋಟಕ್ಕೆ ವಾಚ್ಯದಂತೆ ತೋರುವ ಕೆಲವು ಪದ-ವ್ರುನ್ದಗಳಲ್ಲಿನ ಅಂತರ್ಗತವಾದ ಅರ್ಥದಲ್ಲಿ ಕೆಲವನ್ನು ಹೆಕ್ಕುವುದಾದರೆ,
ಈ ಹಕ್ಕಿ ಎನ್ನುವುದು ನಮ್ಮಿಷ್ಟದ ಪ್ರೀತಿಯೋ, ಪ್ರೆಮದ್ದೋ ಸಂಕೇತ. "ಬೇಕು ಬೇಡ ಗಳೂ ಗೊತ್ತಿರಲಿಲ್ಲ" ಎನ್ನುವಲ್ಲಿ ಅರ್ಥವಾಗದ ಸಂಬಂಧಗಳ ಛಾಯೆ ಇದೆ, "ಗಾಯಕ್ಕೆ ನನಗೆ ತಿಳಿಯದ ಮುಲಾಮು"- ನಿಜ ಜೀವನದಲ್ಲಿಯೂ ಹಾಗೇ, ನಮಗಿಷ್ಟವಾದ, ನಾವಿಷ್ಟಪತ್ತುಕೊಂಡು, ಆಸೆ ಇಂದ ಎದೆಗೊತ್ತಿಕೊಂಡು ಬಂದ "ಹಕ್ಕಿಗೆ" ಎಲ್ಲಿ ಪೆಟ್ಟಾಗಿದೆ, ಯಾವ ಮುಲಾಮು ಹಚ್ಚಬೇಕು, ಎನ್ನುವುದೇ ಗೊತ್ತಿರುವುದಿಲ್ಲ. ಅರಿಯದ ಮುಲಾಮು ಹಚ್ಚಿ, ಕಾಣದ ಕೈ ಗೆ ಮುಗಿದು, ಕೈ ಚೆಲ್ಲಿರುತ್ತೇವೆ. "ತಪ್ಪು ಯಾರದು ಅಂತ ತಿಳಿಯದೆ" ಕಂಗಾಲಾಗಿರುತ್ತೇವೆ. ಕೊನೆಗೆ ನಿಡುಸುಯ್ಯುವುದು -"ಒಂದು ಹಕ್ಕಿ ಸಾಕುವುದು ಇಷ್ಟೆಲ್ಲಾ ಕಷ್ಟ ಅಂತ ನನಗೆಲ್ಲಿ ಗೊತ್ತಿತ್ತು..?" . ಒಲವಿಗೆ, ಸ್ಪರ್ಶಕ್ಕೆ, ಜಂಟಿ-ಜಳಕದ ಪುಳಕಕ್ಕೆ..... ಕೊನೆಗೊಂದು ದಿನ ಅನ್ನಿಸುವುದು "ಹಿಡಿದು ಸಾಕಿದ ದಿನದಿಂದ ನಿನಗಿಲ್ಲ ಹಾರಾಟ".
-D.M.Sagar

VENU VINOD said...

ಬಹಳ ದಿನಗಳಿಂದ ಈಚೆ ಬಂದಿರಲಿಲ್ಲ...ಇಲ್ಲಿ ಈಗ ನೋಡಿದರೆ ಹೊಸ ಕವನ..ಹೊಸರ್ಥಗಳನ್ನು ಹುಟ್ಟಿಸುವ ರಚನೆ..ಚೆನ್ನಾಗಿದೆ

ಸಾಗರದಾಚೆಯ ಇಂಚರ said...

tumba hosa arthagalannu huttu haakuttade nimma kavana
chennagide

Parisarapremi said...

hakki na yaaraadru saaktaaara.... aparaadha kaNree...

Lakshmi Shashidhar Chaitanya said...

sush,

noDi, hingoo aagatte ondondh sarti lifealli ;)

ವಿಕ್ರಮ ಹತ್ವಾರ said...

Liked the last two poems. This one seems inspired by Tirumalesh?

Great going.....

Sushrutha Dodderi said...

@ Pataragitti,
ಯಾವ್ದೋ ಒಂದು ಹಕ್ಕಿ ಬಿಡಿ ಶಿವು.. ;)

ಮಾಲ್ತಕ್ಕ,
ಹೆಹೆ.. ದಟ್ಸ್ ಟ್ರೂ!

DMS,
ಥ್ಯಾಂಕ್ಸ್ ಮಂಜಣ್ಣಾ.. ಫಾರ್ ದಿಸ್ ಎಲಾಬರೇಶನ್..

ವೇಣು, ಸಾಗರ,
ಧನ್ಯವಾದಗಳು. :-)

ಅರುಣ್,
ಸುಮ್ನಿರಪ್ಪ..

ಲಕ್ಷ್ಮಿ,
ಅಲ್ವಾ? ;) ಲೈಫ್ ಇಸ್ ವೆರಿ ಅನ್ನೆಕ್ಸ್‌ಪೆಕ್ಟೆಬಲ್..

ಹತ್ವಾರ್,
ಥ್ಯಾಂಕ್ಯೂ ಬ್ರೋ! ’ಗೊತ್ತಿಲ್ಲ, ಯಾವ್ಯಾವ ಪದ್ಯದಲ್ಲಿ ಯಾರ್ಯಾರು ಇಣುಕ್ತಾರೋ, ಆ ಜಗನ್ನಿಯಾಮಕನಿಗೇ ಗೊತ್ತು ಕಣ್ರೀ!’ ;)

ದುರಹಂಕಾರಿ said...

ಮೊದಲ ಓದಿನಲ್ಲಿ ನೇರ ಅರ್ಥ ಮಾತ್ರ ಸಿಕ್ಕಿತ್ತು.. ಅ೦ತರ್ಸೌ೦ದರ್ಯಕ್ಕೆ ಮಾರುಹೊಗದಿರಲಾಗಲಿಲ್ಲ. :)

ಕುತೂಹಲದಿಂದ ಪ್ರತಿಸ್ಪಂದನಗಳ ಉಪಲೋಕ ಹೊಕ್ಕು ನೋಡಿದರೆ.... "ಇದು ಯಾವ ಹಕ್ಕಿ ಗುರುವೇ!" ಎಂಬ ಉದ್ಘಾರ! ತಕ್ಷಣವೇ ಅಂತರಾರ್ಥದ ಹೊಳಹು ಸಿಕ್ಕಿತು.. ಆ ಮಗದೊಂದು ಅರ್ಥದಲ್ಲಿ ನನದೆ ಕೆಲವು ದುಗುಡ-ದುಮ್ಮಾನಗಳಿಗೆ ಏನೋ ಒಂದು ರೀತಿಯ ಸಮಾಧಾನ, salvation, ಸ್ಪಷ್ಟತೆ ಎಲ್ಲವೂ..

ಹಕ್ಕಿ ಎಂದರೆ ನನ್ನದೇ ಮನಸು, ಹಕ್ಕಿ ಎಂದರೆ ನನ್ನ ಮೋಹ, ಕಾಮ, ಕ್ರೋಧ.. ಎಲ್ಲದರ ವಸ್ತುಗಳು..

ಸಾಕುವುದೆಂಬ ಶಿಕ್ಷೆ/ಅನುಭೂತಿಯನ್ನ ಗಮನದಲ್ಲಿಟ್ಟುಕೊಂಡೇ ಅದನ್ನ ಮನೆಗೆ ತರಬೇಕೋ ಬೇಡವೋ ಅನ್ನೋದರ ನಿರ್ಧಾರವಾಗಬೇಕು..,
"ಇದು ಹಸು, ಇದನ್ನು ಸಾಕು, ಹಾಲು ನೀಡುತ್ತದೆ; ಇದು ಹಕ್ಕಿ, ಇದನ್ನು ಹಾಗೆ ಸ್ವಚ್ಚಂದ ಬಿಟ್ಟು ನೋಡು, ನಿನಗೆ ನೆಮ್ಮದಿ ಇರುತ್ತದೆ.." ಅಂತ ಏನೋ ಅನ್ನಿಸಿದ ಹಾಗೆ.. :)

ಹಕ್ಕಿ ಸಾಕುವುದು ಎಂಬ ಉಪಮೆ/ಪ್ರತಿಮೆ ನೀಡಿ, ವಿವರಿಸಿದ ನಿಮಗೆ ಧನ್ಯವಾದಗಳು.

ದುರಹಂಕಾರಿ said...

@hathwara:

possible inspiration source detected! c:
ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ
ಎಂದು ನನಗೆ ಗೊತ್ತಿರಲಿಲ್ಲ.
ಒಂದು ಬೆಕ್ಕಿನ ಕಣ್ಣುಗಳು ಇಷ್ಟು ಅನಾಥವಾಗಿರುತ್ತವೆ
ಎಂದು ನನಗೆ ಗೊತ್ತಿರಲಿಲ್ಲ
ಒಂದು ಬೆಕ್ಕಿನ ಕಣ್ಣುಗಳಲ್ಲಿ ಇಷ್ಟೊಂದು ವಿಷಾದವಿರುತ್ತದೆ
ಒಂದು ನನಗೆ ಗೊತ್ತಿರಲಿಲ್ಲ.

http://avadhi.wordpress.com/2010/04/20/ಜೋಗಿ-ಬರೆದಿದ್ದಾರೆ-ತಿರುಮಲ/


:)

Sushrutha Dodderi said...

@ ದುರಹಂಕಾರಿ,
ಥ್ಯಾಂಕ್ಸ್, ನಿಮ್ಮ ಪ್ರತಿಕ್ರಿಯೆಗೆ. ಚನಾಗ್ ಬರೀತೀರಾ ನೀವು.

ನೀವು ಹುಡುಕಿದ inspiration source ನೋಡಿದೆ. ಅದನ್ನ ಬಹಳ ಹಿಂದೆಯೇ ಓದಿದ ನೆನಪು. ತಿರುಮಲೇಶ್ ನನ್ನಿಷ್ಟದ ಕವಿಯೂ ಹೌದು. ಆದರೆ ನನ್ನ ಕವಿತೆ ಅದರಿಂದಲೇ ಪ್ರಭಾವಿತವಾಗಿದೆಯಾ ಇಲ್ಲವಾ ಗೊತ್ತಿಲ್ಲ. ಬರೆಯುವ ಗಳಿಗೆಯಲ್ಲೇನು ಅದು ನೆನಪಾಗಿರಲಿಲ್ಲ. ಆದರೆ ಸುಪ್ತ ಮನಸಿನಲ್ಲಿ ನನಗೇ ತಿಳಿಯದಂತೆ ನಾನು ಹಿಂದೆ ಓದಿದ ಯಾವುದೋ ಸಾಹಿತ್ಯದ ನೆರಳು ಕವಿದಿದ್ದಿರಬಹುದು ಎಂಬ ಅನುಮಾನವನ್ನು ನಾನೂ ತಳ್ಳಿಹಾಕಲಾರೆ. ಹೀಗಾಗಿಯೇ ನನ್ನ ಕವಿತೆಗಳಿಗೆ ಬರಬಹುದಾದ ಪ್ರತಿಕ್ರಿಯೆಗಳ ಬಗ್ಗೆ ನನಗೆ ಸದಾ ಕುತೂಹಲ. :-)

ಅಂದಹಾಗೆ, ನಿಮ್ಮ ಡಿಸ್‌ಪ್ಲೇ ನೇಮ್ ಚನಾಗಿಲ್ಲ. ದಯವಿಟ್ಟು ಬದಲಿಸಿ.

Unknown said...

ಎಲ್ಲವೂ ಮೊದಲ ಸಲವೇ ಚೆನ್ನ.,