Thursday, April 26, 2012

ಮದುವೆಗೆ ಬನ್ನಿ!


ಚಿಕ್ಕಂದಿನಲ್ಲಿ ಬೇಸಿಗೆ-ದಸರಾ ರಜೆಗೆಂದು ತನ್ನ ಅಜ್ಜನ ಮನೆಗೆ ಬರುತ್ತಿದ್ದ ನಮ್ರತಾ ಎಂಬ ಹುಡುಗಿಯ ಜತೆ ಬುಕ್ಕೆಹಣ್ಣಿಗೆ ಬ್ಯಾಣ ಸುತ್ತಿದ್ದು, ಆಡುಮುಟ್ಟದ ಸೊಪ್ಪಿನ ಗಂಪಿನಿಂದ ಇಡ್ಲಿ ಮಾಡಿದ್ದು, ಮರಳಿನಿಂದ ಮನೆ ಕಟ್ಟಿದ್ದು, ಸಿಐಡಿ ಆಟ ಆಡಿದ್ದು..

ಬಾಲಮಂಗಳ, ಚಂದಮಾಮ, ಸಿನೆಮಾಗಳಿಂದ ಪ್ರಭಾವಿತರಾಗಿ, ಭಕ್ತಿ-ಭಾವದಿಂದ ಪ್ರಾರ್ಥಿಸಿದರೆ ದೇವರು ಕಾಣಿಸುತ್ತಾನೆ ಎಂಬ ಫ್ಯಾಂಟಸಿಗೊಳಗಾಗಿ, ನಾನು-ಮಧು-ಗುಂಡ ಗಣಪೆ ಮಟ್ಟಿಯಲ್ಲಿ ಕೂತು ಚಿಗಟೆ ಗಿಡದ ಎಲೆಗಳನ್ನು ತರೆಯುತ್ತ ತಪಸ್ಸು ಮಾಡುತ್ತ ದೇವರು ಇನ್ನೇನು ಪ್ರತ್ಯಕ್ಷವಾಗಿಯೇ ಬಿಡುತ್ತಾನೆ ಎಂದು ಕಾದಿದ್ದು..

"ಲವ್ವಾ? ಮಾಡ್ಬಿಡ್ಬೋದು ಕಣೋ.. ಆದ್ರೆ ಮನೇಲಿ ಗೊತ್ತಾದ್ರೆ ಕಷ್ಟ!" ಅಂತ, ಒಂಬತ್ತನೇ ಕ್ಲಾಸಿನ ನನ್ನ ಬೆಂಚ್-ಮೇಟ್ ದುರ್ಗಪ್ಪನಿಗೆ, ಅವನು ನಮ್ಮದೇ ಕ್ಲಾಸಿನ ಹುಡುಗಿಯೊಬ್ಬಳನ್ನು ತೋರಿಸುತ್ತ "ನೀ ಇವ್ಳುನ್ ಲವ್ ಮಾಡು, ನಾನು -ಅಕಾ- ಆ ಹುಡ್ಗೀನ ಮಾಡ್ತೀನಿ!" ಅಂದಾಗ ಹೇಳಿದ್ದು..

ಸೊರಬದ ಸುರಭಿ ಕಾಂಪ್ಲೆಕ್ಸಿನ ತುತ್ತತುದಿಯನ್ನೇರಿ ನಾನು-ರಾಘು ಅಲ್ಫೆನ್ಲೀಬೆ ಚಾಕ್ಲೇಟು ತಿನ್ನುತ್ತಾ ಪರೀಕ್ಷೆ, ರಿಸಲ್ಟ್ಸು, ಬಿಡಬೇಕಿರುವ ಊರು, ಸೇರಬೇಕಿರುವ ಪೇಟೆ, ಗುರಿ, ಕನಸು, ಜಾಬ್ ಅಪಾರ್ಚುನಿಟೀಸ್, ಹಣ, ಹುಡುಗಿಯರು, ಪ್ರೀತಿ, ಬದುಕುಗಳ ಬಗ್ಗೆ ಮಾತಾಡುತ್ತಿದ್ದುದು..

2003, ಜುಲೈ 12ರ ಜುಮುರುಮಳೆಯ ಮುಂಜಾನೆ ಬೆಂಗಳೂರಿಗೆ ಬಂದಿಳಿದು, ಸಿಟಿ ಬಸ್‌ಸ್ಟಾಂಡಿನ ದಾರಿ ಕೇಳಿಕೊಂಡು ಹೆಗಲ ಚೀಲದೊಂದಿಗೆ ಹೆಜ್ಜೆ ಹಾಕುತ್ತಿದ್ದಾಗ ನನ್ನ ಜತೆಗೇ ಬಂದಿದ್ದ ಗೆಳೆಯ ದಿನೇಶ ನನ್ನನ್ನು ತಡೆದು ಆಕಾಶದತ್ತ ಬೆರಳು ಮಾಡಿ ತೋರಿಸುತ್ತ "ಅದೇ, ವಿಮಾನ! ಎಷ್ಟ್ ಹತ್ರಕ್ ಹೋಗತ್ತಲ್ಲಾ ಮಾರಾಯಾ ಬೆಂಗ್ಳೂರಲ್ಲಿ!" ಎಂದಿದ್ದು..

ಕೆಲಸ ಹಿಡಿದು, ರೂಮ್ ಮಾಡಿ, ಬೆಂಗಳೂರು ಮತ್ತು ಬದುಕು ಎಂದರೆ ಏನು ಅಂತ ಕಣ್ಬಿಟ್ಟು ನೋಡುತ್ತ, ತಿಳಿಯದೆಲೆ ಕಳೆಯುತ್ತಿರುವ ದಿನಗಳು, ಅರ್ಥವಾಗದೆ ಮುಗಿಯುತ್ತಿರುವ ಘಟನೆಗಳು, ಮುಂದೇನಿದೆಯೆಂದು ತೋರಗೊಡದ ನಾಳೆಗಳೆಂಬ ಬ್ಲೈಂಡ್ ಕರ್ವ್‌ಗಳ ಬಗ್ಗೆ ರಾತ್ರಿ ಎರಡರವರೆಗೆ ಚಿಂತನಾಭಾವದಲ್ಲಿ ಮಾತಾಡುತ್ತಿದ್ದ ರೂಮ್‌ಮೇಟ್ ವಿನಾಯಕ, ಕೊನೆಗೊಂದು ದಿನ "ಇಲ್ಲಲೇ ಭಟ್ಟಾ.. ನಾನು ಬೆಂಗಳೂರು ಬಿಟ್ಟು ವಾಪಾಸ್ ಊರಿಗೆ ಹೋಗ್ತಿದ್ದೀನಿ" ಅಂತ ಪ್ರಕಟಿಸಿದಾಗ ಅವನನ್ನು ತಬ್ಬಿ ಬೀಳ್ಕೊಟ್ಟದ್ದು...

...ಎಲ್ಲಾ ನಿನ್ನೆ-ಮೊನ್ನೆಯೇ ಆಗಿದ್ದಿರಬೇಕು. ಇನ್ನು ಹದಿನೈದು ದಿನದೊಳಗೆ ನನ್ನ ಮದುವೆ! 

"ಡೇಟ್ ಫಿಕ್ಸ್ ಆಯ್ತಲೇ.. ಮೇ 9" ಅಂತ ಫೋನಿಸಿದರೆ, "ತಡಿಯೋ, ನಿಂದಕ್ಕಿಂತ ಮುಂಚೆ ನಂದೇ ಆಗೋ ಛಾನ್ಸ್ ಇದ್ದು!" ಅಂತಂದು, ಹಾಗೇ ನನಗಿಂತ ನಾಲ್ಕು ದಿನ ಮೊದಲೇ ಮದುವೆಯಾಗುತ್ತಿರುವ ವಿನಾಯಕ; "ಏನಪ್ಪ.. ಸುಶ್ರುತ ಮದ್ವೆ ಆಗ್ತಿದಾನೆ ಇಷ್ಟ್ ಬೇಗ ಅಂದ್ರೆ ನಂಗೆ ನಂಬಕ್ಕೇ ಆಗ್ತಾ ಇಲ್ಲ" ಎಂದ ದಿನೇಶ; "ಮಗನೇ, ಏಪ್ರಿಲ್ 29ಕ್ಕೇ ನನ್ ಮದ್ವೆ. ನಿನ್ ಮದುವೆಗೆ ಹೆಂಡತಿ ಸಮೇತ ಬರ್ತೀನಿ ನಾನು" ಎನ್ನುವ ರಾಘು; ಕಳೆದ ವರ್ಷ ಉಳವಿಯಲ್ಲಿ ಸಿಕ್ಕು, ತಾನು ಇಟ್ಟುಕೊಂಡಿರುವ ಪುಟ್ಟ ಕ್ಯಾಂಟೀನಿನೊಳಗೆ ಕರಕೊಂಡು ಹೋಗಿ, ಅಲ್ಲೇ ಗೂಡೊಂದರಲ್ಲಿಟ್ಟುಕೊಂಡಿದ್ದ ಎನ್ವಲಪ್‌ನಿಂದ ಫೋಟೋ ಒಂದನ್ನು ಜೋಪಾನವಾಗಿ ಹೊರತೆಗೆದು ತೋರಿಸುತ್ತ, "ಮುಂದಿನ್ ತಿಂಗ್ಳೇ ಲಗ್ನ. ಚನಾಗೈದಾಳನಲೇ?" ಅಂತ ಕೇಳಿದ್ದ ದುರ್ಗಪ್ಪ; ಮೊನ್ನೆಮೊನ್ನೆಯವರೆಗೂ "ಮದುವೆ ಆಗು ಫಾಲೀ.. ಸಖತ್ ಮಜಾ ಇರ್ತು ಲೈಫು" ಅಂತ ಹೇಳುತ್ತಿದ್ದವ, ಈಗ 'ಹ್ಮ್, ಇನ್ನು ಶುರು ನಿನ್ನ ಗ್ರಹಚಾರದ ದಿನಗಳು' ಅನ್ನೋ ಧಾಟಿಯಲ್ಲಿ ಮಾತಾಡ್ತಿರೋ ಮಧು; ಮದುವೆಯಾಗಿ ಬೆಂಗಳೂರಿಗೇ ಬಂದಿದ್ದಾಳೆ ಅಂತ ಗೊತ್ತಿದ್ದೂ, ಕನಿಷ್ಟ ಫೋನಾದರೂ ಮಾಡಿ ಕರೀಬೇಕು ಅಂತ ನಾನು ಶತಾಯಗತಾಯ ಪ್ರಯತ್ನಿಸುತ್ತಿದ್ದರೂ ಇನ್ನೂ ಸಂಪರ್ಕಕ್ಕೆ ಸಿಗದ ನಮ್ರತಾ.

*
ಸೋ, ವಿಷಯ ಇಷ್ಟು. ಬರುವ ಮೇ 9ಕ್ಕೆ ನನ್ನ ಮದುವೆ. ದಿವ್ಯಾ ಎಂಬ ನಿಮಗೂ ಗೊತ್ತಿರೋ ಹುಡುಗಿ ಜತೆ. ನಮ್ಮೂರಲ್ಲಿ, ನಮ್ಮ ಮನೆಯಲ್ಲಿ. ನೀವು ಬರಲೇಬೇಕು, ಬಂದೇ ಬರ್ತೀರ.

ಇವತ್ತು 'ಮೌನಗಾಳ'ದ ಆರನೇ ಹುಟ್ಟುಹಬ್ಬವೂ. "ಅಂತೂ ಇಷ್ಟ್ ವರ್ಷ ಗಾಳ ಹಾಕಿದ್ದೂ ಸಾರ್ಥಕವಾಯ್ತು" ಅಂತ ಕಿಚಾಯಿಸಿದ್ರಾ? ;) ನಿಜ ಹೇಳಬೇಕೂಂದ್ರೆ, ಇದು ಗಾಳಕ್ಕೆ ಸಿಕ್ಕ ಮೀನಲ್ಲ. ಅಥವಾ, ನನಗೆ ಹಾಗೆ ಕರೀಲಿಕ್ಕೆ ಇಷ್ಟವಿಲ್ಲ. ಇವಳು ಗಾಳ ಹಾಕಿ ಕುಳಿತವನ ಪಕ್ಕ ಬಂದು ಕೂತ ಮತ್ಸ್ಯಗಂಧಿ. ಇನ್ನು ಒಂದೇ ಗಾಳದಲ್ಲಿ ನಮ್ಮ ಮೀನುಗಾರಿಕೆ. "ಯಾಕೆ ಪ್ರೀತಿಸ್ತೀಯ?" ಅಂತ ಇಷ್ಟರೊಳಗೆ ನೂರು ಸಲ ಕೇಳಿದ್ದೇನೆ; ಒಂದು ಸಲವೂ ಉತ್ತರಿಸಿಲ್ಲ ಹುಡುಗಿ.

ಮುತ್ತೂರ ತೇರಿನಲಿ ಸಿಕ್ಕ ಸಿರಿಯಲ್ಲ
ಮತ್ಸ್ಯಯಂತ್ರವನಂತು ಬೇಧಿಸಲೆ ಇಲ್ಲ
ಮತ್ಯಾರದೋ ಮದುವೆಯಲ್ಲಿ ಸಿಕ್ಕು ಸೆಳೆದವಳಲ್ಲ
ಮುತ್ತೊಂದ ಬೇಡಿ ನಿಂತಿರುವಳಲ್ಲ?

:)

ಮದುವೆಗೆ ಬನ್ನಿ.

ಪ್ರೀತಿಯಿಂದ,

-ಸುಶ್ರುತ

[ವಿವರಗಳು, ರೂಟ್‌ಮ್ಯಾಪ್, ಇನ್ವಿಟೇಶನ್‌ಗಾಗಿ ಈ ವೆಬ್‌ಸೈಟ್]

29 comments:

ವಾಣಿಶ್ರೀ ಭಟ್ said...

ಧನ್ಯವಾದಗಳು. ದಿವ್ಯನಗಿಂತ ಮೊದಲೇ ನೀವು ಮದುವೆ ಕರೆದಿದ್ದಿರ :) ನಿಮ್ಮ ಬದುಕು ಸುಂದರವಾಗಿರಲಿ...ಕೊನೆಯ ಕವಿತೆ ತುಂಬಾನೇ ಇಷ್ಟ ಆಯಿತು..

Swarna said...

ಅಭಿನಂದನೆಗಳು.
ನಿಮ್ಮ ಗಾಳಕ್ಕಿನ್ನು ಜೋಡಿ ಬಲ ಬಿಡಿ.
ನಮಗೆ ಓದೋದಕ್ಕೆ ಇನ್ನು ಹೆಚ್ಚು ಸಿಗ್ತದೆ:)
ಶುಭವಾಗಲಿ.
ಸ್ವರ್ಣಾ

ವನಿತಾ / Vanitha said...

aahaa..so sweet..:)
Best Wishes to you both from 4 of us:)- VVSS.

ISHWARA BHAT said...

ಆತ್ಮೀಯ ಶುಭಾಶಯಗಳು :) ಯಶಸ್ಸಾಗಲಿ.

ಚರಿತಾ said...

ಸುಶ್ರುತ,

ನಿಮಗೂ, ದಿವ್ಯಾಗೂ ಮದುವೆಯ ಶುಭಾಶಯಗಳು !!

ಮೌನಗಾಳದ ಆರನೇ ಹುಟ್ಟುಹಬ್ಬಕ್ಕೂ ಪ್ರೀತಿಯ ಚಪ್ಪಾಳೆ! :-)


- ಚರಿತಾ

ರಾಘವೇಂದ್ರ ಜೋಶಿ said...

Congrats and happy days ahead..
:-)
-RJ

nenapina sanchy inda said...

ನನ್ನ ಹ್ರೂತ್ಪೂರ್ವಕ (gottu spelling wrong) ಆಶೀರ್ವಾದ ಕಣೋ ಹುಡಗ ಆನ್ಡ್ ಹುಡುಗಿ...ನನ್ನ ಪ್ರೀತಿಯ ಇಬ್ಬರು ಮಕ್ಕಳು...ಬೆಂಗಳೂರಿಗೆ ಬಂದ ಮೇಲೆ ಭೆಟ್ಟಿಯಾಗುವಾ..enjoy every moment Dear Divya and Sushrutha!!
love
malathakka

PARAANJAPE K.N. said...

ನನ್ನ ವೈಯ್ಯಕ್ತಿಕ ಸಮಸ್ಯೆಗಳ ಸುಳಿಯಲ್ಲಿ ಮದುವೆಗೆ ಬರಲಾಗುತ್ತಿಲ್ಲ. ಆದರೆ ನಿಮ್ಮೀರ್ವರಿಗೂ ನನ್ನ ಶುಭ ಹಾರೈಕೆ ಎ೦ದೆ೦ದೂ ಇದೆ. ಶುಭವಾಗಲಿ. ವೈವಾಹಿಕ ಜೀವನದ ಸವಿ ಅನವರತ ಸಿಹಿಯಾಗಿರಲಿ, ಬದುಕಿನ ಬ೦ಡಿ ಸುಮುಖವಾಗಿ ಸಾಗಲಿ, ಸವಿನೆನಪುಗಳ ಮೆರವಣಿಗೆ ಎ೦ದೆ೦ದೂ ಹಸಿರಾಗಿರಲಿ, ಖುಷಿಯ ಕ್ಷಣಗಳ ಅಕ್ಷಯ ಪಾತ್ರೆ ನಿಮಗೆ ಲಭಿಸಲಿ ಎ೦ದು ಪ್ರೀತಿಯಿ೦ದ ಹಾರೈಸುವೆ.

sunaath said...

ದಿವ್ಯಗಂಧಾ ಜೊತೆಗೆ ನಿಮ್ಮ ಕನಸುಗಳೆಲ್ಲ ಸಾಕಾರಗೊಳ್ಳಲಿ!
ನಿಮ್ಮಿಬ್ಬರಿಗೂ ಶುಭಾಶಯಗಳು.

ಶ್ರೀವತ್ಸ ಕಂಚೀಮನೆ. said...

ಬದುಕಿಗೆ ಹೊಸ ಬಣ್ಣದ ಮೆರಗು ಮೂಡುವ ಕಾಲ...

'ನನ್ನ'ದೆಂದಿರುವುದೆಲ್ಲವನ್ನೂ 'ನಮ್ಮ'ದೆಂದಾಗಿಸಿಕೊಂಡು ಹೊಸ ಕನಸುಗಳನ್ನು ಜಂಟಿಯಾಗಿ ನೇಯುವ ಮತ್ತು ಜಂಟಿಯಾಗಿಯೇ ನನಸಾಗಿಸಿಕೊಳ್ಳುವ ಹಂಬಲದಿಂದ...

ಉಳಿದ ಬಾಳ ದಾರಿಯ ತಗ್ಗು ದಿಣ್ಣೆಗಳಲೆಲ್ಲ ಜೊತೆಯಾಗಿ ಹೆಗಲು ತಬ್ಬಿ ನಡೆವ ಒಲವ ಬಯಕೆಯಿಂದ...
ಮದುವೆಯೆಂಬ ಮಧುರ ಬಂಧದಿಂದ ಬಾಂಧವ್ಯ ಬೆಸೆದುಕೊಂಡು ಜಗದ ಖುಷಿಗಳನೆಲ್ಲ ಸೂರೆಗೊಳ್ಳ ಹೊರಟ ನಿಮಗೂ ಮತ್ತು ದಿವ್ಯಾರಿಗೂ ಹಾರ್ದಿಕ ಶುಭಾಶಯಗಳು...

ಬದುಕು ಹಸನಾಗಲಿ - ಒಲವು, ನಲಿವುಗಳಿಂದ...

(ಮದುವೆಯ ಕರೆಯೋಲೆ ಬರೆದ ರೀತಿ ತುಂಬಾ ಇಷ್ಟವಾಯಿತು...)

kanaada raaghava said...

ಕನ್ನಡ ಸಾಹಿತ್ಯದ ಒಂದು ಹೊಸ ಪ್ರಕಾರ - ಲಲಿತ ಕರೆಯ! ಜೀವನದಲ್ಲೊಮ್ಮೆ ಮಾತ್ರ ಬರೆಯಲು ಅವಕಾಶ (t&c apply)!

ನೂರ್ಕಾಲ ಬಂಗಾರದಂಥ ಬದುಕನ್ನು ಬಾಳಿ!

shridhar said...

Congrats Sushruta ...Happy Married Life ...

shridhar said...

Dosta Maduve Photos post madalle maryadado ..

Sree said...

awww! cho queet! ಮುಂದಿರುವ ದಾರಿಯಲಿ ಹೂನಗೆ ಚೆಲ್ಲಿರಲಿ:) bestestttt wishes:)

ವಿಕ್ರಮ ಹತ್ವಾರ said...

hmn....hange vishaya :) congrats and wish you both all the best!!

ಅನಂತ said...

ಸುಶ್ರುತ, ಶುಭ ಹಾರೈಕೆಗಳು.. ಒಳ್ಳೆಯದಾಗಲಿ.. ;o)

Keshav Kulkarni said...

ಮೌನಗಾಳಕ್ಕೆ ಆಡದ ಮಾತುಗಳು!
ಎಂಥಾ ಸುಂದರ ಪ್ರತಿಮೆ!!

ಶುಭವಾಗಲಿ!

ನಿಮ್ಮಿಬ್ಬರ ಬ್ಲಾಗುಗಳ ಮದುವೆಯೂ ಆಗಿಬಿಡಲಿ!

- ಕೇಶವ ಕುಲಕರ್ಣಿ

Subrahmanya said...

ಎಲ್ಲಾ ಒಳ್ಳೇದಾಗ್ಲಿ :)

Shrinidhi Hande said...

ಅಭಿನಂದನೆಗಳು.

prashasti said...

Super memories !! :-)
Abinandanegalu :-) nimma vaivahika jeevana shubhapradavAgali eMdu haaraike :-)

Ravi Hegde said...

ಸುಶ್ರುತ, ಶುಭ ಹಾರೈಕೆಗಳು.

Digwas hegde said...

ಶುಭಹಾರೈಕೆಗಳು.

ಶ್ವೇತ said...

Ibbaru kannaba blaagigala maduve; tumbane romantic agide :-)
Congratulations Divya and Sushrutha. Nimma vaivahika jeevana sukhamayavagirali.

ಸುಧೇಶ್ ಶೆಟ್ಟಿ said...

thumba chennagi barediddeeri ibbaroo :) vaah annuva haage :)

congrats and good luck gaLu ibbarigoo :)

ಉಷಾ... said...

Just loved it...

ಮುತ್ತೂರ ತೇರಿನಲಿ ಸಿಕ್ಕ ಸಿರಿಯಲ್ಲ
ಮತ್ಸ್ಯಯಂತ್ರವನಂತು ಬೇಧಿಸಲೆ ಇಲ್ಲ
ಮತ್ಯಾರದೋ ಮದುವೆಯಲ್ಲಿ ಸಿಕ್ಕು ಸೆಳೆದವಳಲ್ಲ
ಮುತ್ತೊಂದ ಬೇಡಿ ನಿಂತಿರುವಳಲ್ಲ?

nimma hosa baaLu hasanaagali

kanasu said...

Maduve aitu... inna hosa rasadoutana (hosa blogpostu) sigatte anta kaadu kaadu sakaitu!! :(

Suma Udupa said...

Congrats!! :)

ಚುಕ್ಕಿ(ಅಕ್ಷಯ ಕಾಂತಬೈಲು) said...

chanda ide .congrats

ಚುಕ್ಕಿ(ಅಕ್ಷಯ ಕಾಂತಬೈಲು) said...

chanda ide.congrats