ಪರಿಷೆಯ ನಂತರ ವ್ಯಾಪಾರಿಗಳೆಲ್ಲ ತಮ್ಮ ಗುಡಾರದೊಂದಿಗೆ
ಗದ್ದಲವನ್ನೂ ಬಳುಗಿ ಕೊಂಡೊಯ್ವರು. ಜಾತ್ರೆ ನಡೆದಿತ್ತೆಂಬುದಕ್ಕೆ ಕುರುಹಾಗಿ
ಅಲ್ಲಲ್ಲಿ ಉಳಿದ ಕಡಲೆಕಾಯಿಯ ಸಿಪ್ಪೆ, ಬೋಂಡ ತಿಂದೆಸೆದ ಕಾಗದದ
ಚೂರುಗಳನ್ನೂ ಮರುದಿನ ಕಸ ಗುಡಿಸುವವರು ಎತ್ತೊಯ್ದು
ಪೇಟೆ ಬೀದಿಯಲ್ಲೀಗ ಬರೀ ಮೌನ. ಮತ್ತು ಅಂಗಡಿಯವರು ಟಾರ್ಪಲ್
ಕಟ್ಟಲು ತೋಡಿದ ಸಣ್ಣ ಗುಂಡಿಗಳು, ಪಕ್ಕದಲ್ಲೆದ್ದ ಮಣ್ಣ ಹೆಂಟೆ.
ಪರಿಷೆಯಲ್ಲಿ ಮೊಮ್ಮಗನಿಗೆ ಅಜ್ಜ ಕೊಡಿಸಿದ ಆಪಲ್ ಬಲೂನು
ಮನೆಗೆ ಬರುವಷ್ಟರಲ್ಲಿ ಒಡೆದಿದೆ. ಬೊಗಸೆ ಜಾಸ್ತಿಯೇ ಹಾಕಿಸಿಕೊಂಡು ತಂದ
ಖಾರಾ-ಮಂಡಕ್ಕಿ ಎರಡು ದಿನಕ್ಕೆ ಮೆತ್ತಗಾಗಿದೆ. ದೊಡ್ಡ ತೊಟ್ಟಿಲಲ್ಲಿ ಕೂತು
ಅಷ್ಟು ನಕ್ಕಿದ್ದ ದಂಪತಿ ಮನೆಗೆ ಬಂದಮೇಲೆ ನಗುವನ್ನೇ ಮರೆತಂತಿದ್ದಾರೆ.
ತೊಟ್ಟು ನೋಡಿದ ಹೊಸ ಸರ ಕನ್ನಡಿಯ ಬಿಂಬಕ್ಕಾಗಲೇ ಬೇಸರ ಬಂದಿದೆ.
ಪರಿತ್ಯಕ್ತನಿಗೆ ಪರಿಷೆಯಲ್ಲಿ ನೂರಾರು ನೆಂಟರು. ಪರಸ್ಪರ ಪರಿಚಯವೇ
ಇಲ್ಲದವರ ಆಸುಪಾಸು ಮೈಕೈ ತಗುಲಿಸುತ್ತ ತನ್ನದೇ ಪೋಷಾಕಿನಲ್ಲಿ
ಓಡಾಡುವ ಅವನು ಹೊದ್ದಿದ್ದ ಉನ್ಮಾದಗಂಬಳಿ ಜಾತ್ರೆಯಂಗಳದ ಗಡಿ ದಾಟುತ್ತಲೇ
ಮೈಯಿಂದ ಕಳಚಿ ಬೀಳ್ವುದು. ಮತ್ತೆ ಮೂಲೆ ದರ್ಶಿನಿಯ ತಟ್ಟೆಯಿಡ್ಲಿ,
ನಾಲ್ಕನೇ ಫ್ಲೋರಿನ ಸಿಂಗಲ್ ರೂಮಿನ ಸುಗ್ಗಿದ ಹಾಸಿಗೆ, ನಿದ್ದೆ ಮಾಡಗೊಡದ
ಕಿವಿಯಲ್ಲಿ ಮೊರೆಯುವ ಸಾವಿರ ಪೀಪಿಗಳ ಸದ್ದು.
ಒಂಟಿ ಬಕೀಟು ಒಂಟಿ ಜಗ್ಗಿನ ಪುಟ್ಟ ಬಚ್ಚಲಲ್ಲಿ ನಿಂತು
ಅದೆಷ್ಟು ನೀರೆರೆದುಕೊಂಡರೂ ತೊಲಗದ ಈ ಪೀಪಿಮೊರೆತ,
ಸಿಟಿಬಸ್ಸಿನ ಸದ್ದು, ತನ್ನ ಗಾರ್ಮೆಂಟ್ಸ್ ಫ್ಯಾಕ್ಟರಿಯ ಸಾಲುಸಾಲು
ಹೊಲಿಗೆ ಯಂತ್ರಗಳ ಗಲಾಟೆಯ ನಡುವೆಯೂ ಕಳೆಯದೆ ಬರುವುದು.
ಮಧ್ಯಾಹ್ನದ ತಿಂಡಿಡಬ್ಬಿಗಳ ಟಿಂಟಿಣಿಗಳೆದುರೂ ಜ್ಯೇಷ್ಠತೆ ಮೆರೆವುದು.
ಊಟವಾದದ್ದೇ ತೇಲಿಬರುವ ನಿದ್ದೆಜೋಂಪು ಎಲ್ಲರನ್ನಾವರಿಸುವಾಗ,
ಪರಿಷೆಯ ಹೋಕರೆಲ್ಲ ಎತ್ತಲೋ ನೋಡುತ್ತಿದ್ದಾಗ ಚೌಕಾಶಿ ಮಾಡದೇ ಕೊಂಡಿದ್ದ
ನವಿಲ ಚಿತ್ರದ ಹೇರ್‌ಬ್ಯಾಂಡನ್ನು ಪರಿತ್ಯಕ್ತ ಈಗ ತನ್ನ ಟೇಬಲ್ಲಿನ ಮೇಲಿಡುವನು.
ಅಲ್ಲೇ ಬಟ್ಟೆರಾಶಿಯ ನಡುವೆಯೆಲ್ಲೋ ಕೂತಿರುವ ಹಳೆಹುಡುಗಿ
ಇತ್ತ ಹಾಯ್ವುದನ್ನೇ ಕಾಯುತ್ತ ಕಿವಿಗಳೆರಡನ್ನೂ ಗಟ್ಟಿಮುಚ್ಚಿ ಕೂರುವನು.
3 comments:
ಪರಿಷೆಯ ವ್ಯಾಪಾರಿಗಳು ತಮ್ಮೊಂದಿಗೆ ಗಲಾಟೆಯನ್ನೂ ಕೊಂಡೊಯ್ದರು.. ! ವಾವ್
ಪರಿಷೆಯ ವ್ಯಾಪಾರಿಗಳು ತಮ್ಮೊಂದಿಗೆ ಗಲಾಟೆಯನ್ನೂ ಕೊಂಡೊಯ್ದರು.. ! ವಾವ್
ಪರಿಷೆಯ ವ್ಯಾಪಾರಿಗಳು ತಮ್ಮೊಂದಿಗೆ ಗಲಾಟೆಯನ್ನೂ ಕೊಂಡೊಯ್ದರು.. ! ವಾವ್
Post a Comment