Monday, December 08, 2014

ಮಾಗಿ

ಚಳಿಗುಳ್ಳೆ ಹೊತ್ತ ಮಾಗಿ ಕೆಂಪು ರಗ್ಗಿನ ಸಂದಿಯಿಂದ ತೂರಿ ಬಂದಿದೆ 
ದೋಸೆಗೆಂದು ಬೀಸಿದ ಕಾಯಿಚಟ್ನಿಯಲ್ಲಿ ಬೆಣ್ಣೆ ಬಂದು ನೆಂಟರೆದುರು ಮುಜುಗರವಾಗಿದೆ
ಗೆಳೆಯ ಕೊಡಿಸಿದ ಕ್ಯಾಡ್ಬರೀ ಸಿಲ್ಕು ಬಚ್ಚಿಟ್ಟ ಗೂಡಲ್ಲೇ ಕಲ್ಲಾಗಿದೆ
ಬಾಟಲಿಯಲ್ಲಿನ ಪ್ಯಾರಶೂಟು ಎಷ್ಟು ಕೊಡವಿದರೂ ಬೀಳದಷ್ಟು ಹೆರೆಗಟ್ಟಿದೆ

ಮುಂಜಾನೆ ಬರುವರ್ಚಕನ ತಣ್ಣನೆ ಕ್ಷೀರಾಭಿಷೇಕವ ನೆನೆದು
ರಾತ್ರಿಯೇ ಹೆದರಿದ ವಿಗ್ರಹವನ್ನು ಗರ್ಭಗುಡಿಯ ನಂದಾದೀಪ ಸಂತೈಸುತ್ತಿದೆ
ಹೊರಗಿನ ಚಳಿ ತಾಳದೆ ಫಾರೆಸ್ಟ್ ರೆಸಾರ್ಟಿನ ಕಿಚನ್ನಿಗೆ ನುಗ್ಗಿದ ಮಿಂಚುಹುಳ
ತನ್ನಂತೆಯೇ ಹೊಟ್ಟೆಯೊಳಗೆ ದೀಪವಿಟ್ಟುಕೊಂಡ ಫ್ರಿಜ್ಜನ್ನು ಕಂಡು ಚಕಿತಗೊಂಡಿದೆ

ಅಜ್ಜನ ಬೊಚ್ಚುಬಾಯಿಂದ ಗೂರಲು ಕೆಮ್ಮಿನೊಡನೆಯೇ ಹೊರಟ ಬೀಡಿಹೊಗೆ
ವಾಕಿಂಗಿಗೆ ಬಂದು ದಿಕ್ಕು ತಪ್ಪಿದ ಕನ್ನಡಕದಜ್ಜಿಯ ಬೆಚ್ಚಗಾಗಿಸಿದೆ
ಹಾಟ್‌ಚಿಪ್ಸ್ ಅಂಗಡಿಯ ದೊಡ್ಡ ಬಾಣಲಿಯ ಕಾದೆಣ್ಣೆಯಲಿ ಸಳಸಳ
ಬೇಯುತ್ತಿರುವ ತೆಳ್ಳಗಿನಾಲೂ ಎಸಳುಗಳು ಸುತ್ತ ನಿಂತವರಿಗೆ ಹಿತವಾಗಿದೆ

ಸಿಗ್ನಲ್ಲಿನಲ್ಲಿ ನಿಂತ ಜಾಕೆಟ್ ಮರೆತ ಬೈಕ್ ಸವಾರನ ನಡುಗುವ ಮೈಯನ್ನು
ಪಕ್ಕ ಬಂದು ನಿಂತ ದಢೂತಿ ಲಾರಿಯ ಎಂಜಿನ್ ಬಿಸಿಗಾಳಿಯಿಂದ ಸವರುತ್ತಿದೆ
ಸುಗ್ಗಿಯ ಭರಾಟೆಯ ಅಂಗಳದಲ್ಲಿ ಅಡಕೆ ಕುಚ್ಚುತ್ತಿರುವಪ್ಪನನ್ನು
ಹಂಡೆ ಕೆಳಗಿನ ಉರಿಸೌದೆಗಳಿಂದೆದ್ದ ಕಿಡಿಗಳು ಚುರುಕಾಗಿಟ್ಟಿವೆ

ಈಗಷ್ಟೆ ಬಿರಿದ ಮೊಗ್ಗಿನೊಳಗೆ ಬಿದ್ದ ಹನಿಯಿಬ್ಬನಿ ಶಲಾಕೆಗೆ ತಾಕಿ
ಪರಾಗರೇಣುಗಳುದ್ರೇಕಗೊಂಡು ತುಂಬಿಯಾಗಮನಕೆ ಕ್ಷಣಗಣನೆ ಶುರುವಾಗಿದೆ
ದೂರದೂರಿನ ಒಂಟಿ ಮನೆಯಲ್ಲಿ ಕೂತ ಗೃಹಿಣಿಯ ಮಡಿಲಲ್ಲೊಂದು ಉಲ್ಲನಿನುಂಡೆಯಿದೆ
ತೀಕ್ಷ್ಣ ಬೆರಳಿನಾಕೆಯ ಕ್ರೋಷಾ ಕಡ್ಡಿಯಲ್ಲಿ ಇಡೀ ಜಗದ ಚಳಿಗೆ ಚಿಕಿತ್ಸೆಯಿದೆ.

3 comments:

sunaath said...

ಮಾಗಿಯ ಚಳಿಗೆ ಕವಿಯ ಲೇಖನಿ
ನಡುನಡುಗಿ ನಿಮಿರಿದೆ;
ಚೆಲುವಾದ ಕವನವೊಂದು
ನಗುತ್ತ ಹೊರಬಂದಿದೆ!

ತುಂಬ ಸುಂದರ ಕವನ.

prashasti said...

NIce !

Subrahmanya said...

ಕಲ್ಪನೆಯ (ಎಥವಾ ವಾಸ್ತವದ) ಹೊಂದಾಣಿಕೆಯಲ್ಲಿ ಕವನವು ಓದಲು ಹಿತವಾಗಿದೆ