ಕದ ಹಾಕುವುದು ಸದ್ದಡಗುವ ಮುನ್ಸೂಚನೆ.
ದೀಪ ನಿಧಾನಕೆ ಡಿಮ್ಮಾಗುತ್ತಾ ಪೂರ್ತಿ
ಕತ್ತಲಾವರಿಸಿದಮೇಲೆ
ಅಂಬಲದ ತುಂಬ ಮೌನದೊಡೆತನ, ಹೆಚ್ಚೆಂದರೆ ಪಿಸುಮಾತು.
ಆಮೇಲೆ ನಾಟಕವೋ ಸಿನಿಮಾವೋ ಶುರುವಾಗುವುದು ಸರಿಯೇ;
ಆದರೆ, ಆಶ್ಚರ್ಯ ನನಗೆ: ಈ ಕದ ಹಾಕುವ – ದೀಪವಾರುವ ಪ್ರಕ್ರಿಯೆ
ಪ್ರತಿ ಸಲ ಮೌನದ ಕರೆಯಾಗುವ ರೀತಿಗೆ.
ಅಂತೂ ಅವತ್ತು ನಗರ ದಾಟುತ್ತಿದ್ದಂತೆಯೇ ನೈಟ್‌ಬಸ್ಸಿನ
ಕದ ಹಾಕಲ್ಪಟ್ಟು,
ಆವಾರದಲ್ಲಿ ತುಂಬಿದ್ದ ಬೆಳಕೆಲ್ಲ ಆರಿ
ನೀವಿನ್ನು ಮಲಗಬೇಕೂ
ಎಂಬ ಚಾಲಕನ ಮೌನ ತಾಕೀತಿಗೆ ಬೆದರಿ ಪ್ರಯಾಣಿಕರೆಲ್ಲ ಹರಟೆ ನಿಲ್ಲಿಸಿ
ಸೀಟು ಹಿಂದೆ ಮಾಡಿಕೊಂಡು ಕಣ್ಮುಚ್ಚಿಕೊಂಡು
ನಿದ್ರಿಸಲೆಣಿಸುತ್ತಾ...
ಆದರೆ ಅವಳು ಮಾತ್ರ ಯಾಕೆ ಹಾಗೆ ಕಣ್ಬಿಟ್ಟುಕೊಂಡು...
ಎಲ್ಲರಿಂದ ಬೇರ್ಪಟ್ಟವಳಂತೆ, ಜನರಲ್ ವಾರ್ಡಿನ ನಿದ್ರೆ ಬಾರದ ರೋಗಿಯಂತೆ...
ಚಿರಂತನ ತಿಮಿರದಲ್ಲಿ ಮುಳುಗಿದವಳಂತೆ...
ಕತ್ತಲಾದಾಗಲಾದರೂ ಕಣ್ಮುಚ್ಚು. ಕಹಿಯನ್ನೂ, ಆತಂಕವನ್ನೂ,
ಜಗತ್ತನ್ನೂ ಮರೆ. ಹಾಗೆ ಕಿಟಕಿಯಿಂದ ಹೊರಗೆ ನಿರುಕಿಸಬೇಡ.
ಹಾಯುವ ವಾಹನಗಳ ಕೋರೈಸುವ ಬೆಳಕು
ನಿನ್ನ ಎದೆಬಡಿತ ಕಿತ್ತುಕೊಂಡಾವು. ಎವೆಯಿಕ್ಕು.
-ಎಂದೆಷ್ಟೇ ಅನುನಯದಿಂದ ಹೇಳಿದರೂ
ರೆಪ್ಪೆಯಲ್ಲಾಡಿಸದೆ,
ಸೀಟಿಗೊರಗದೆ, ಚೂರೂ ಕದಲದೆ. ಹಾ! ಅವಳದದೆಂಥ ಹಟ.
ಆ ಅಪರಿಚಿತೆಯ ಕಣ್ಣಲ್ಲಿ ಪ್ರಜ್ವಲಿಸುತ್ತಿದ್ದ ಹಾಯ್ವ
ವಾಹನಗಳ ಬೆಳಕು
ಈಗ ಈ ಕೋಣೆಯಲ್ಲಿ ನನ್ನ
ನಿದ್ರೆಗೆಡಿಸುತ್ತಿರುವಾಗ
ಅವಳ ಹೃದಯದಲ್ಲಿದ್ದ ಕತ್ತಲೆಯ ಮೇಲೊಂದು ಕವಿತೆ
ಬರೆಯಬೇಕಿದೆ.
ಕವಿತೆಯೇನು, ಕಲ್ಪನೆಯ ಸ್ವಚ್ಛಂದದಲ್ಲಿ
ಕತೆಯೂ ಬರೆದೇನು.
ಸುತ್ತ ಕತ್ತಲಾವರಿಸಿದೆ, ರಂಗದ ಮೇಲೆ ಅಲ್ಲಲ್ಲಿ ಬೆಳಕಿದೆ.
ಅವಳ ಜೀವನದ ಪಾತ್ರಧಾರಿಗಳೆಲ್ಲ ಅಲ್ಲಿದ್ದಾರೆ.
ಅವರು ಹೆಜ್ಜೆಯಿಟ್ಟೆಡೆಗೆಲ್ಲ ಬೆಳಕೂ
ಚಲಿಸುತ್ತಿದೆ.
ಇನ್ನೇನು, ಅವಳೆದೆಯ ಘನೀಕೃತ ಮೌನಕ್ಕೆ
ಕಾರಣರಾರು,
ದೀಪವಾರಿಸಿದ ಗಾಳಿ ಯಾವ ದಿಕ್ಕಿನದು,
ಬಾಗಿಲು ಮುಚ್ಚಿದ ಕೈಯಲ್ಲೆಂಥ ಹೊಳೆವ
ಉಂಗುರವಿತ್ತು
ಎಂದೆಲ್ಲ ಕಲ್ಪಿಸಿ ಬರೆದು ನಿರೂಪಿಸಬಲ್ಲೆ.
ಅಷ್ಟರಲ್ಲಿ ಚಕ್ಕನೆ ಹಿಂದಿಂದ ಕದ ತೆರೆದು ಬಂದವರಾರು?
ಶುರುವಲ್ಲೇ ಇದೆಂಥ ತಿರುವು?
ಶುರುವಲ್ಲೇ ಇದೆಂಥ ತಿರುವು?
2 comments:
ಒಂದು ಘನ ಮೌನವನ್ನು ಮಾತುಗಳಲ್ಲಿ ಹಿಡಿದಿಟ್ಟ ಸಾಲುಗಳು ಇಷ್ಟವಾದವು.
ಕಳೆದ ಒಂದು ಉಂಗುರ,ಶಬ್ಧವಾಗದ ಮಾತು, ಮುಚ್ಚಿದ ಕದ ... ಎಷ್ಟೆಲ್ಲಾ ಹೇಳುತ್ತವೆ.
ಆಲಿಸಿದ ನಿಮಗೆ ಧನ್ಯವಾದಗಳು
ಸುಶ್ರುತ,
ಚೆಂದದ ಸಾಲುಗಳು
ಕದ ತೆರೆದ ನಂತರದ ಸಂಚಿಕೆ ಬರಲಿ ...
Post a Comment