ಭಾವಗಳ ಅಭಿವ್ಯಕ್ತಿ ಬಲು ಸುಲಭ ಈಗ.
ಬೆರಳಂಚಲ್ಲಿ ಎಮೋಟಿಕಾನುಗಳು:
ನಗುವೋ, ಮುಗುಳ್ನಗುವೋ, ಗಹಗಹವೋ,
ಅಳುವೋ, ಬೇಸರವೋ, ಕೋಪವೋ,
ಯಾವುದೆಂದರಿಯಲಾಗದ ಬರಿಮೌನವೋ-
ಹುಡುಕಿ ಕಳುಹಿಸಿದರೆ ಖಂಡಾಂತರ ದಾಟಿ
ತಲುಪಬೇಕಾದವರ ತಲುಪುವುದು ಕ್ಷಣದಲ್ಲೇ.
ಓಹೋ, ಅತ್ತಲಿಂದಲೂ
ಪ್ರತಿಕ್ರಿಯೆ ಮರುಕ್ಷಣವೇ.
ವಾದಗಳ ಮಾಡುವುದೂ ಬಲು ಸುಲಭ ಈಗ.
ಬೆರಳಂಚಲ್ಲಿ ಮಾಹಿತಿಗಳ ಸಮೃದ್ಧಿ:
ನಂಬಿದ ಸೂತ್ರಗಳ, ಮೂಗನೇರ ಕಂಡ ದೃಶ್ಯಗಳ,
ಸುಳ್ಳುಗಳ, ನಿಜಗಳ, ಹೇಳಿದ್ದ, ಮಾಡಿದ್ದ, ನೋಡಿದ್ದ,
ಬರೆದಿದ್ದ, ತಿರುಚಿದ್ದ -ಏನು
ಬೇಕೆಂದರದನ್ನ ಕ್ಷಣದಲ್ಲಿ ಹುಡುಕಿ ತೆಗೆದು
ಪ್ರಸ್ತುತಪಡಿಸಿ ಸಮಜಾಯಿಷಿ ನೀಡಿ
ನಿಬ್ಬೆರಗಾಗುವಂತೆ
ದಾಖಲೆಯೊದಗಿಸಿ ಪಟ್ಟು ಸಡಿಲಿಸದೆ ಬಿಗಿಹಿಡಿದು.
ನೋನೋ, ಇಳಿಸಬೇಡಿ ಬಿಲ್ಲು, ಅತ್ತಲಿಂದಿನ್ನೇನು ಬರಲಿದೆ ತಿರುಗುಬಾಣ.
ಸಂಜೆಯಾಯಿತೋ, ಸೂರ್ಯ ಮುಳುಗಿದನೋ,
ಮುಟ್ಟಬೇಕಾದವರಿಗೆ ಮುಟ್ಟಿತೋ, ನಾಟಬೇಕಾದವರಿಗೆ ನಾಟಿತೋ,
ಕೊಡಬೇಕೆಂದುಕೊಂಡದ್ದನ್ನು ಕೊಟ್ಟಾಯಿತೋ-
ಮುಗಿಯಿತು ನಿಮ್ಮ ಕೆಲಸ.
ನಾಳೆ ಬೆಳಗಾದರೆ ಹೊಸ ಎಮೋಟಿಕಾನುಗಳು
ಪರದೆಯ ಮೇಲೆ ಹೊಳೆಯುತ್ತ ನರ್ತಿಸುತ್ತವೆ.
ಪ್ರತಿಪಾದಿಸಲು ಹೊಸ ವಿಷಯ ಸಿದ್ಧವಿರುತ್ತದೆ.
ಹಳೆಧೂಳ ಕೊಡವಿಕೊಂಡು ಮುಂದೆ ಹೋದರಾಯಿತು.
ಯಾರಲ್ಲಿ ಬಿಕ್ಕಳಿಸುತ್ತಿರುವವರು –ನಮ್ಮ ಬಳಿ ಕರ್ಚೀಫ್ ಇಲ್ಲ.
ಯಾರಲ್ಲಿ ರಕ್ತ ಕಾರಿಕೊಂಡು ಬಿದ್ದವರು –ಬ್ಯಾಂಡೇಡ್ ಮೆಡಿಕಲ್ಲಿನಲ್ಲಿ ಸಿಗುತ್ತದೆ.
ಯಾರಲ್ಲಿ ಬಿದ್ದೂಬಿದ್ದು ನಗುತ್ತಿರುವವರು –ಬೀಳಲಿ, ಈಗ ನಮಗೆ ಪುರುಸೊತ್ತಿಲ್ಲ.
ಯಾರಲ್ಲಿ ಹಸಿದು ಅಡ್ಡಾದವರು –ಮೊಬೈಲಲ್ಲೇ ಊಟ ಆರ್ಡರ್ ಮಾಡ್ಬಹುದು,
ಆದರೆ ಅವನಿಗೆ ವಿಳಾಸವಿಲ್ಲವಲ್ಲ.
ಪರರ ಪಾಡು ಕಡೆಗಿರಲಿ, ಈಗಷ್ಟೆ ನಾನು ತಿಂದ ಪಲಾವಿನ ರುಚಿ ಹೇಗಿತ್ತು,
ದಾಟಿ ಬಂದ ಹೂಬನದಲ್ಲಿ ಯಾವ ಕಂಪಿತ್ತು, ಸ್ನಾನ ಮಾಡಿದ ನೀರು
ಎಷ್ಟು ಬೆಚ್ಚಗಿತ್ತು, ಕೇಳಿಸಿದ ದನಿಯಲ್ಲಿ ಎಷ್ಟು ಮಾರ್ದವವಿತ್ತು,
ಆ ಸಾಲ್ಸಾ ನೃತ್ಯದಲದೆಂತ ಸೊಬಗಿತ್ತು –ಅಂತೆಲ್ಲ ಯೋಚಿಸಲೂ ಸಮಯವಿಲ್ಲ.
ಬಟ್ಟೆಯ ಮೇಲೆ ಬಟ್ಟೆಯ ಧರಿಸಿ ಏನೂ
ತಾಕುತ್ತಿಲ್ಲ.
ಕಡುಗಪ್ಪು ಕನ್ನಡಕದ ಮೂಲಕ ಏನೂ
ಕಾಣಿಸುತ್ತಿಲ್ಲ.
ಬಳಿದುಕೊಂಡ ಢಾಳ ಬಣ್ಣ ದಾಟಿ ಏನೂ
ಇಳಿಯುತ್ತಿಲ್ಲ.
ಇಯರ್ಫೋನು ಕಿವಿಯೊಳಗೇ ಹೊಕ್ಕು ಏನೂ
ಕೇಳಿಸುತ್ತಿಲ್ಲ.
ನಿನ್ನೆ ಏನಾಯಿತು ಗೊತ್ತಾ?
ಕನ್ನಡಿಯೊಳಗೆ ನನ್ನನ್ನೇ ನಾನು ನೋಡಿಕೊಂಡು
ಬೆಚ್ಚಿಬಿದ್ದೆ.
1 comment:
Beautiful. :-)
Post a Comment