ಸೌತೆಯ ಹೂವನ್ನು ನೀನು ಮುಡಿಯುವುದೇ ಇಲ್ಲ
ಸೌತೆಯಷ್ಟೇ ಏಕೆ- ಹಾಗಲ, ಕುಂಬಳ, ತೊಂಡೆ, ಚೀನಿ
ಚಪ್ಪರ - ಅಂಗಳಗಳ ಹಬ್ಬಿ ತುಂಬಿದ ಬಳ್ಳಿಗಳಲ್ಲರಳಿದ
ಹೂರಾಶಿ ಅಲಂಕಾರಕ್ಕೆಂದೆಂದೂ ಅನಿಸಿದ್ದಿಲ್ಲ ನಿನಗೆ.
ನಿರೀಕ್ಷೆಯೇನಿದ್ದರೂ ಅವುಗಳಡಿಯಿಂದ ಮೂಡುವ ಮಿಡಿಗಳೆಡೆಗೆ
ಮಿಡಿ ಬೆಳೆದು ಮೈದುಂಬಿ ಎಳೆಕಾಯಾಗಿ ಜೋತಾಡಿ
ಯಾವುದೋ ಕಾದಂಬರಿಯೋದುತ್ತ ಕಟ್ಟೆಯ ಮೇಲೆ ಕೂತ
ನಿನ್ನರಳುಕಂಗಳ ಸೆಳೆದು ಕೊಯ್ದು ಕತ್ತರಿಸಲ್ಪಟ್ಟು
ಉಪ್ಪು-ಖಾರದೊಂದಿಗೆ ಬೆರೆತು ರುಚಿರುಚಿಯಾಗಿ
ಹಸಿಹಸಿಯಾಗಿ ತಿನ್ನಲ್ಪಟ್ಟು ಭಲೇ ಭಲೇ ಎಂದು
ನಿನ್ನಿಂದ ಹೊಗಳಿಸಿಕೊಂಡು ಚಪ್ಪರಿಸಿದ ನಾಲಿಗೆಯಿಂದ
ಈ ನಡುವೆ ಆ ಸೌತೆಹೂ ಬಾಡಿ ಮುದುರಿ ಉದುರಿದ್ದು
ನಿನಗೆ ತಿಳಿಯಲೇ ಇಲ್ಲ. ನಿಲ್ಲಿಸಿದ್ದ ಪುಟವನ್ನು
ಬುಕ್‌ಮಾರ್ಕ್ ಮೂಲಕ ಗುರುತಿಸಿ ಕಾದಂಬರಿ ಮುಂದುವರೆಸಿದೆ.
ಈಗ ಕೆದಕಿದರೆ ಮಣ್ಣೊಳಗೆ ಮಣ್ಣಾಗಿರುವ ಪಕಳೆಗಳ ಗುರುತೂ ಸಿಗದು.
ಆ ಹೂವೊಳಗಿದ್ದ ಬಂಡು ಹೀರಿ ಮತ್ತೊಂದು ಹೂವಿಗೆ ಹಾರಿದ್ದ
ದುಂಬಿಯೂ ಈಗ ಕಾಣಸಿಗದು:
ಪುಟದಿಂದ ಪುಟಕ್ಕೆ ಚಲಿಸುವ ಬುಕ್‌ಮಾರ್ಕಿನಂತೆ
ಅದೀಗ ಮತ್ಯಾವುದೋ ಹೂದೋಟದಲ್ಲಿರಬಹುದು.
ಅಥವಾ ಈ ಪ್ರದೇಶವನ್ನೇ ತೊರೆದಿರಬಹುದು:
ತನ್ನಿಂದಲೇ ಆದ ಪರಾಗಸ್ಪರ್ಶದ ಅರಿವೇ ಇಲ್ಲದೆ.
ಕಾದಂಬರಿ ಮುಗಿದ ಮೇಲಿನ ಅನಗತ್ಯ ಬುಕ್‌ಮಾರ್ಕಿನಂತೆ.
ಆದರೆ ಆ ದುಂಬಿ ಹೀರಿದ ಜೇನಹನಿ ಅದೋ ಆ ಎತ್ತರದ ಮರದ
ಟೊಂಗೆಗೆ ಕಟ್ಟಿದ ಜೇನುತಟ್ಟಿಯಲ್ಲಿ ಇನ್ನೂ ಇದೆ ಬೆಚ್ಚಗೆ.
ಸಾವಿರ ಕಣ್ಗಳ ನೀರಲ್ಲಿ ನೀರಾಗಿ, ನೆನೆಯುತ್ತ ಅಮ್ಮನ ಮಡಿಲು:
ಹೂವಮ್ಮನ ಒಡಲು.
No comments:
Post a Comment