Monday, April 10, 2017

ಭೇದನ

ಬಾಗಿಲಿಗೆ ಅಡ್ಡವಾಗಿ ಬಲೆಯೊಂದ ಕಟ್ಟಿದೆ ಜೇಡ
ನಾನು ಹೋಗಲೇಬೇಕಿರುವ ದಾರಿ
ಬಾಗಿಲಾಚೆ ಕಾಯುತ್ತಿರುವವರು ಬಹಳ
ಸಮಯ ಪರಿಪಾಲನೆಗೆ ಈಗ ಎಂದಿಲ್ಲದ ಮಹತ್ವ
ಹೊತ್ತಿಗೆ ಸರಿಯಾಗಿ ತಲುಪುವುದು ಅತ್ಯಗತ್ಯ

ಜೇಡರಬಲೆಯನ್ನು ಭೇದಿಸಿ ನುಗ್ಗುವುದೇನು ಕಷ್ಟದ ಮಾತಲ್ಲ
ಮೈಗೆ ತಾಕಿಸಿಕೊಳ್ಳದಂತೆ ಒಮ್ಮೆ ಕೈಯಾಡಿಸಿದರೆ ಸಾಕು,
ಬಿಳಿಬಿಳಿಯೆಳೆಗಳು ಮುದ್ದೆಯಾಗಿ ಕಸಸಮಾನ; ದಾರಿ ಸುಗಮ

ಆದರೆ ಎತ್ತಿದ ಕೈಯ ಹಿಂತೆಗೆದುಕೊಳ್ಳುವಂತೆ ಮಾಡುತ್ತಿದೆ
ಬಲೆಯ ಮಧ್ಯೆ ಹೊಂಚಿ ಕುಳಿತಿರುವ ಜೇಡಾಧಿಪತಿ
ಇಲ್ಲ, ನನ್ನಂಥ ದಡೂತಿ ಜೀವಿಯ ಬಲಿಗಾಗಿಯೇನು ಅದು ಕಾದಿಲ್ಲ
ದಾರಿ ತಪ್ಪಿ ಬಂದ ನೊಣ, ರಕ್ತವನ್ನರಸಿ ಬರುತ್ತಿರುವ ನುಸಿ,
ಗುಂಯ್ಗುಡುತ್ತ ಹಾರುವ ನೊರ್ಜು, ಕಪ್ಪು ಹಾತೆ, ಆಯಸ್ಸು ಮುಗಿದ ಹುಳ:
ಹೀಗೇ ಸಾಯಬೇಕೆಂದು ಹಣೆಮೇಲೆ ಬರೆದಿದ್ದರೆ
ಯಾರು ತಾನೇ ತಡೆದಾರು ಕೀಟವ- ಬಲೆಯ ವಿನಹ

ಜೇಡರಬಲೆಗೆ ಆಹುತಿಯಾಗುವ ಆಸಾಮಿ ನಾನಲ್ಲವೆಂಬ
ವಿಶ್ವಾಸದಲ್ಲಿ, ಅತ್ಯಾಕರ್ಷಕವೆನಿಸುತ್ತಿರುವ ಬಲೆಯ
ಹೆಣಿಕೆಯ ಚಂದ ನೋಡುತ್ತ ನಿಂತ ಈ ಘಳಿಗೆ,
ನನ್ನನ್ನು ತಡೆದು ನಿಲ್ಲಿಸಿದ ಶಕ್ತಿ ತನ್ನದೇ ಎಂಬಂತೆ
ಬಾಗಿಲ ಆಚೀಚೆ ಚೌಕಟ್ಟಿಗೆ ಬಿಗಿದ ಎಳೆಗಳನೊಮ್ಮೆಲೇ
ಎಳೆದು ಜಗ್ಗಿ ಇಡೀ ಬಲೆಯೇ ಜೇಡವಾಗಿ ಹೂಂಕರಿಸಿ
ಅಟ್ಟಹಾಸಗೈದಂತೆ ಭಾಸವಾಗಿ ಮೈ ನಡುಗಿ

ಶತ್ರು ಯಾವ ರೂಪದಲ್ಲಿ ಬರುವನೋ ಬಲ್ಲವರಾರು
ಸಮಯದ ಮುಳ್ಳುಗಳು ಸರಸರ ಸರಿವ ಈ ಕಾಲದಲ್ಲಿ
ಯಾರನ್ನೂ ನಂಬುವಂತಿಲ್ಲ. ಕ್ಷಣಕ್ಷಣವೂ
ಬಹಳ ದುಬಾರಿಯಾಗಿರುವಾಗ ಈ ಜಂತು
ರಾತ್ರೋರಾತ್ರಿ ಹೀಗೆ ನನ್ನ ದಾರಿಗಡ್ಡವಾಗಿ ಬಲೆ ಹೆಣೆವ
ಜರೂರತ್ತಾದರೂ ಏನಿತ್ತು? ವಿಳಂಬಸೂತ್ರದಿಂದ
ನನ್ನನ್ನು ಸೋಲಿಸಿ, ಗೆದ್ದ ನಿಲುವಿನಲ್ಲಿ ಅದು ಬೀಗುವಾಗ
ಮೊಸದ ವಾಸನೆಯರಿತು ನಾನಿನ್ನೇನು ಬಲೆತೊಡೆದು
ಮುನ್ನುಗ್ಗಬೇಕೆಂದುಕೊಳ್ಳುತ್ತಿರುವಾಗ

ಹಿಂದಿನಿಂದ ಶರವೇಗದಲ್ಲಿ ಬಂದ ಅಪರಿಚಿತ
ನನ್ನನ್ನೂ ಬಾಗಿಲನ್ನೂ ದಾಟಿ ಬೆನ್ನಿಕ್ಕಿ ಹೋಗಿ
ಕೆಲವೇ ನಿಮಿಷಗಳಲ್ಲಿ ಚಪ್ಪಾಳೆ-ಶಿಳ್ಳೆಗಳ ಸದ್ದೂ
ವಿಜೇತರಿಗೆ ಹಾಕಿದ ಜೈಕಾರ ಘೋಷವೂ ತೇಲಿಬಂದು
ತುಂಡುತುಂಡಾಗಿ ಮುದುಡಿ ಚದುರಿದ ಬಿಂದಿಲು
ನನ್ನ ಮುಖಕ್ಕೆ ಬಂದು ಮೆತ್ತಿದಂತಾಗಿ
ಅಕೋ, ಅವಸರವಸರದಿ ಗೋಡೆಯಲ್ಲಿ ಸರಿಯುತ್ತಿರುವ ಜೇಡ
ಹಾಗೂ ಹಾರಿ ಹಾರಿ ಅದನ್ನು ಹಿಡಿಯಲೆತ್ನಿಸುತ್ತಿರುವ ನಾನು.

2 comments:

ಚಿನ್ಮಯ ಭಟ್ said...

chenagide

said...

ಅಧ್ಬುತವಾಗಿದೆ.. . ಹಳೆಯ ನೆನಪುಗಳು ಹರಿದ ಹಾಳೆಲಿ ನೋಡಿದ ಹಾಗೆ ಅಯ್ತು.
ನನ್ನ ಅಮ್ಮ ಯಾವಗಲೂ ನನಗೆ ಮನೆಯ ಕಸ ಹೊಡಿಯೊ ಕೆಲಸವನ್ನು ಇಡುತಿದ್ದಳು ...
ಜೇಡ ಬಲೆ ನೋಡಿದಾಗ, ಅದನ್ನ ತಗಿಯುವಾಗ ಇದೆ ಯೋಚನೆಗಳು ಬರುತ್ತಿದ್ದವು.