ಎಲ್ಲ ದಿಕ್ಕಿನಿಂದಲೂ ಸುತ್ತುವರೆದಿರುವ ಕೇಡಿಗಳು. ನಿಗೂಢವೆನಿಸುವ ಬಣ್ಣಬಣ್ಣದ ಗೋಡೆಗಳ ಕೋಣೆಯೊಳಗೆ ನುಗ್ಗಿರುವ ಹೀರೋ. ಸರಕ್ಕನೆ ತಂತಾನೆ ಮುಚ್ಚಿಕೊಳ್ಳುವ ಬಾಗಿಲುಗಳು. ಅಕ್ಕಪಕ್ಕ ಮೂಲೆಯನ್ನೆಲ್ಲ ನೋಡಿದರೂ ಯಾರೂ ಕಾಣದ ನಿರ್ವಾತ. ಫಕ್ಕನೆ ತುಸು ಮೇಲೆ ನೋಡಿದರೆ, ಅಲ್ಲಿ ತನ್ನನ್ನು ಕಟ್ಟಿದ ಹಗ್ಗಗಳಿಂದ ಬಿಡಿಸಿಕೊಳ್ಳಲು ಹೆಣಗುತ್ತಾ, ಹೆಲ್ಪ್ ಹೆಲ್ಪ್ ಎಂದು ಕೂಗುತ್ತಾ, ಕೊಸರಾಡುತ್ತಿರುವ ನಾಯಕಿ. ನಮ್ಮ ಹೀರೋ ಇನ್ನೇನು ಅತ್ತ ಧಾವಿಸಬೇಕು, ಅಷ್ಟೊತ್ತಿಗೆ ಬೆಚ್ಚಿಬೀಳುವಂತೆ ಕೇಳಿಬರುವ ಖಳನ ಅಟ್ಟಹಾಸ. ಗೋಡೆಗೆ ಅಂಟಿಸಿದ ಪಿಕಿಪಿಕಿ ಕೆಂಪು ದೀಪದಿಂದ ಬರುತ್ತಿರುವ ಸ್ವರ. ಯಾರು ವಜ್ರಮುನಿಯೇ? ಧ್ವನಿ ಕೇಳಿದರೆ ಅಲ್ಲ. ಎಲ್ಲ ದಿಕ್ಕಿನಿಂದಲೂ ಬಂಧಿಯಾದಂತೆನಿಸುತ್ತಿರುವ ನಮ್ಮ ನಾಯಕ ಈಗ ಹೇಗೆ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ? ಹೇಗೆ ತನ್ನವರನ್ನು ರಕ್ಷಿಸುತ್ತಾನೆ? ಹೇಗೆ ಆ ಗೂಂಡಾಗಳಿಗೆಲ್ಲ ಮಣ್ಣು ಮುಕ್ಕಿಸುತ್ತಾನೆ?
ನಮ್ಮೂರಿಗೆ ಟೀವಿ ಬಂದಿದ್ದ ಹೊಸದರಲ್ಲಿ, ಪಟೇಲರ ಮನೆಯ ಜಗಲಿಯಲ್ಲಿ, ಭಾನುವಾರದ ಸಂಜೆಗಳಲ್ಲಿ ಕಂಡುಬರುತ್ತಿದ್ದ ಸಾಮಾನ್ಯ ದೃಶ್ಯ. ವೃದ್ಧರು-ಕಿರಿಯರು-ಮಕ್ಕಳೆನ್ನದೆ ಎಲ್ಲರೂ ಜಮಾಯಿಸಿ ನೋಡುತ್ತಿದ್ದ ಈ ಸಿನೆಮಾಗಳಲ್ಲಿ ಮಿಂಚುತ್ತಿದ್ದ, ಪತ್ತೇದಾರಿ ಮಾಡಿ ತಪ್ಪಿತಸ್ಥರನ್ನು ಪತ್ತೆ ಹಚ್ಚುತ್ತಿದ್ದ, ಖಳನಾಯಕರಿಗೆ ಬಿಸಿಬಿಸಿ ಕಜ್ಜಾಯವುಣಿಸುತ್ತಿದ್ದ, ಚಂದದ ನಟಿಯರೊಡನೆ ಕುಣಿಯುತ್ತಿದ್ದ, ಸಂಪತ್ತಿಗೆ ಸವಾಲ್ ಹಾಕುತ್ತಿದ್ದ, ಚಪ್ಪಾಳೆ ತಟ್ಟುವಂತಹ ಮಾತುಗಳನ್ನಾಡುತ್ತಿದ್ದ, ಮೈಕನ್ನು ಎಡಗೈಯಿಂದ ಬಲಗೈಗೆ ಹಾರಿಸಿ ಹಿಡಿದು ಹೊಸಬೆಳಕೂ ಎಂದು ಹಾಡುತ್ತಿದ್ದ, ಅತ್ತ ಇತ್ತ ಸುತ್ತ ಮುತ್ತ ಕಾಂತಿಯನ್ನು ಚೆಲ್ಲುತ್ತಿದ್ದ, ನಟಸಾರ್ವಭೌಮನೇ ಆಗಿದ್ದ ನಾಯಕ: ಡಾಕ್ಟರ್ ರಾಜ್‌ಕುಮಾರ್! ಟೀವಿ ನಮ್ಮೂರಿಗೆ ಲಗ್ಗೆಯಿಡುವ ಹೊತ್ತಿಗೆ, ಎಳೆಯರಾಗಿದ್ದ ನಮಗೆ, ಅದಾಗಲೇ ಆಯ್ಕೆಗಳಿದ್ದವು. ಬಹಳಷ್ಟು ಹೊಸ ಹೀರೋಗಳು ಬಂದಿದ್ದರು. ಯಾರು ಚೆನ್ನಾಗಿ ಫೈಟ್ ಮಾಡುವರೋ ಅವರೇ ನಮ್ಮ ನೆಚ್ಚಿನ ಹೀರೋ ಆಗುತ್ತಿದ್ದರು. ಆದರೆ ರಾಜ್ ಬಿಟ್ಟುಕೊಡಲಿಲ್ಲ: ಗೋವಾದಲ್ಲಿ ಸಿಐಡಿಯಾಗಿ ಮ್ಯಾಜಿಕ್ ಮಾಡಿ ಮೋಡಿ ಮಾಡಿದರು. ಜೇಡರಬಲೆಯಲ್ಲಿ ಸಿಲುಕಿದರೂ ಗನ್ ಹಿಡಿದು ಡಿಶೂಂ ಮಾಡಿದರು. ತೂಗುದೀಪ ಶ್ರೀನಿವಾಸ್ ವಿಕಟ ನಗೆಗೈದರೆ ಮುಗುಳ್ನಗೆಯಲ್ಲೇ ಆತನ ಜಯಿಸಿದರು. ನರಸಿಂಹರಾಜು ಜತೆಗೆ ತಾವೂ ನಗಿಸಿದರು. ಪಂಡರೀಬಾಯಿ ‘ಏನೂಂದ್ರೆ’ ಅಂತ ಕರೆದರೆ ಮುದ್ದು ಬರುವಂತೆ ತಿರುಗಿ ನೋಡಿದರು. ಮನೆಗೆ ಬಂದ ನಾವು, ‘ನೀನೂ ಅಪ್ಪನನ್ನ ಹಾಗೇ ಕರೀಬೇಕು’ ಅಂತ ಅಮ್ಮನನ್ನು ಪೀಡಿಸಿ ಮಜಾ ತಗೊಂಡೆವು.
ಬೆಳಿಗ್ಗೆಯ ವಾರ್ತೆಯ ನಂತರ, ಮಧ್ಯಾಹ್ನದ ಊಟದ ಸಮಯದಲ್ಲಿ, ರಾತ್ರಿ ಕರೆಂಟು ಹೋದಾಗ –ರೇಡಿಯೋ ಹಚ್ಚಿದರೆ ಸಾಕು, ರಾಜ್ ಹಾಡುತ್ತಿದ್ದರು: ಖುದ್ದು ನಮಗೇ ಎಂಬಂತೆ. ಬಾನಿಗೊಂದು ಎಲ್ಲೆ ಎಲ್ಲಿದೇ... ಪೇಟೆಗೆ ಹೋದರೆ, ಬಸ್‌ಸ್ಟಾಂಡ್ ಗೋಡೆಯ ಮೇಲೆ, ದೊಡ್ಡ ಮರದ ಕಾಂಡದ ಮೇಲೆ, ವಾಹನಗಳ ಬೆನ್ನಮೇಲೆ, ಎಲ್ಲಿ ನೋಡಿದರೂ ಅಣ್ಣನೇ. ನಾಟಕಕ್ಕೆಂದು ಹೋದರೆ ಅಲ್ಲೂ ಜ್ಯೂನಿಯರ್ ರಾಜ್‌ಕುಮಾರ್! ಭರಪೂರ ಶಿಳ್ಳೆ.
ರಾಜ್‌ಹೊಸ ಸಿನೆಮಾ ಬಂದಾಗಲೆಲ್ಲ ಅಪ್ಪ ನೆನಪು ಮಾಡಿಕೊಂಡು ಹೇಳುತ್ತಿದ್ದ: ‘ಮಯೂರ’ ಸಿನೆಮಾವನ್ನು ತಾನು ಹನ್ನೆರಡು ಸಲ ಟಾಕೀಸಿಗೆ ಹೋಗಿ ನೋಡಿದ್ದನ್ನು. ತನ್ನ ಗೆಳೆಯನೊಬ್ಬ ಆ ಸಿನೆಮಾವನ್ನು ನೋಡಲೆಂದೇ ನೂರು ದಿನ ಸಾಗರಕ್ಕೆ ಬಸ್ ಹಿಡಿದು ಹೋಗಿತ್ತಿದ್ದುದನ್ನು. ‘ಸಂಪತ್ತಿಗೆ ಸವಾಲ್’ ಚಿತ್ರದ ಯಶಸ್ಸಿನ ಸಮಾರಂಭಕ್ಕೆಂದು ದಾವಣಗೆರೆಗೆ ಅಣ್ಣಾವ್ರು ಬಂದಾಗ ಹೂವಿನ ಹಾಸಿನ ಮೇಲೆ ಅವರನ್ನು ನಡೆಸಿದ್ದನ್ನು. ಆತ ಅದೆಷ್ಟು ಸಿಂಪಲ್ ಮನುಷ್ಯ, ಹೇಗೆ ಯಾರ ಜೊತೆಗಾದರೂ ಖುಷಿಖುಷಿಯಿಂದ ಮಾತಾಡುತ್ತಿದ್ದರು, ಬಿಳಿ ಅಂಗಿ-ಬಿಳಿ ಪಂಚೆ ತೊಟ್ಟು, ತಮ್ಮ ಹೆಸರಿಗೆ ಅನ್ವರ್ಥವಾಗುವಂತೆ ಬದುಕಿದರು, ಗೋಕಾಕ್ ಚಳವಳಿಯನ್ನು ತಾವೇ ಮುನ್ನಡೆಸಿದರು, ಹೇಗೆ ಎಲ್ಲರಿಗೂ ಆದರ್ಶವಾದರು ಎಂಬುದನ್ನು. ‘ಬಂಗಾರದ ಮನುಷ್ಯ’ ಬಿಡುಗಡೆಯಾಗಿ ವರ್ಷಗಟ್ಟಲೆ ಥಿಯೇಟರುಗಳಲ್ಲಿ ಓಡಿದಾಗ ಪತ್ರಿಕೆಯೊಂದರಲ್ಲಿ ಬಂದಿತ್ತಂತೆ: ಇನ್ನೂ ಈ ಸಿನೆಮಾ ನೋಡದವರು ಕನ್ನಡಿಗರೇ ಅಲ್ಲ ಎಂದು.
ರಾಜ್ ಅಪಹರಣವಾದಾಗ ನಾವು ಕಾಲೇಜಿಗೆ ಹೋಗುತ್ತಿದ್ದೆವು. ಎಲ್ಲೆಲ್ಲು ಆವರಿಸಿದ ಮೌನ. ಪ್ರತಿದಿನ ಪತ್ರಿಕೆಗಳಲ್ಲಿ-ಟೀವಿಗಳಲ್ಲಿ ಅದೇ ಸುದ್ದಿ. ಇನ್ನೂ ನ್ಯೂಸ್‌ಛಾನೆಲ್ಲುಗಳ ಆರ್ಭಟ ಶುರುವಾಗಿರದ ಆ ದಿನಗಳಲ್ಲಿ ಸಂಜೆಯ ಟೀವಿ ವಾರ್ತೆ ನೋಡಲು ಎಲ್ಲರ ಮನೆಗಳಲ್ಲೂ ನುಗ್ಗು. ಎಲ್ಲರಿಗೂ ಆತಂಕ, ತಣಿಯದ ಬಾಧಕ. ಕಾಡಿಗೆ ನುಗ್ಗುವ ಧೀರರು, ಇಳಿಸಂಜೆಯ ರೇಡಿಯೋ ಸಂದೇಶಗಳು, ಇಲ್ಲಸಲ್ಲದ ಗಾಳಿಸುದ್ದಿಗಳು. ನೂರೆಂಟು ದಿನಗಳ ನಂತರ ಅವರು ಬಿಡುಗಡೆಯಾಗಿ ಬಂದಮೇಲೆಯೇ ಎಲ್ಲರೂ ನಿಟ್ಟುಸಿರಾದದ್ದು. ರಾಜ್ ಆಮೇಲೆ ಸಿನೆಮಾ ಮಾಡಲೇ ಇಲ್ಲ. ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾಗ ಇಡೀ ನಾಡೇ ಕಣ್ಣೀರಾಯಿತು.
ರಾಜ್ ಇಲ್ಲವಾಗಿ ಹತ್ತು ವರ್ಷಗಳೇ ಕಳೆದಿವೆ ಈಗ. ಹೊಸಹೊಸ ಹೀರೋಗಳು, ಥರಥರದ ಪ್ರಯೋಗಗಳು, ಯಾವ್ಯಾವುದೋ ದೇಶಗಳಲ್ಲಿ ನಡೆವ ಚಿತ್ರೀಕರಣಗಳು, ಬಿಡುಗಡೆಗೂ ನಾನಾ ವಿಶೇಷಗಳು. ಚಿತ್ರರಂಗ ಏನೆಲ್ಲ ಮಾಡಿದೆ, ನಾವು ಏನೆಲ್ಲ ನೋಡಿದ್ದೇವೆ. ಈ ಎಲ್ಲದರ ನಡುವೆ, ಅಣ್ಣಾವ್ರ ಹಳೆಯ ಸಿನೆಮಾವೊಂದು ಬಣ್ಣ ಹಚ್ಚಿಕೊಂಡು ಮತ್ತೆ ಬರುತ್ತಿದೆ ಎಂದಾದರೆ ಕುತೂಹಲದಿಂದ ಎದುರು ನೋಡುತ್ತೇವೆ. ಯುಟ್ಯೂಬಿನಲ್ಲಿ ಆರ್‌ಎಜೆಕೆ ಎಂದು ಟೈಪ್ ಮಾಡಿದರೆ ಸಾಕು, ಅವರ ಸಿನೆಮಾಗಳನ್ನೂ, ಹಾಡುಗಳನ್ನೂ, ಡೈಲಾಗುಗಳನ್ನೂ ಸೂಚಿಸುತ್ತದೆ ತಂತ್ರಾಂಶ. ಸುಮ್ಮನೆ ಕ್ಲಿಕ್ ಮಾಡಿ: ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು -ರಾಜ್ ಹಾಡತೊಡಗುತ್ತಾರೆ ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ. ರಾಜ್ ಡೈಲಾಗುಗಳ ಡಬ್‌ಸ್ಮಾಶ್‌ಗಳು ಸೂಪರ್‌ಹಿಟ್. ಹಾರ್ಡ್‌ಡಿಸ್ಕ್ ಹೊಕ್ಕು ಭಾಗ್ಯದ ಲಕ್ಷ್ಮೀ ಬಾರಮ್ಮಾ ಎಂದು ಕರೆದರೆ, ರಾಜ್ ಬಂದು ‘ಏನು ಮಾಯವೋ ಏನು ಮರ್ಮವೋ’ ಎನ್ನುತ್ತಾ ನಮ್ಮನ್ನು ನಗಿಸುತ್ತಾರೆ. ‘...ಆಆಆ ಜಾರಿಣಿಯ ಮಗ’ –ಎಂದವರು ಅವುಡು ಕಚ್ಚಿ ಇತ್ತ ತಿರುಗಿದರೆ ನಮ್ಮ ಮೈ ರೋಮಾಂಚಗೊಳ್ಳುತ್ತದೆ.
ನಮಗೂ ಅದೇ ಬೇಕಾಗಿದೆ. ಆಫೀಸು ಮುಗಿಸಿ ಮನೆಗೆ ಬಂದು ಟೀವಿ ಹಾಕಿದರೆ ದೇವತಾ ಮನುಷ್ಯನೊಬ್ಬ ಬರಬಾರದೇ ಎನಿಸುತ್ತದೆ. ಕೆಂಪಂಗಿ ತೊಟ್ಟು ನಗುನಗುತಾ ನಲೀ ಎಂದು ಉತ್ಸಾಹದ ಬುಗ್ಗೆಯಂತೆ ಯಾರಾದರೂ ಸಕ್ಕರೆ ಹಂಚಲಿ ಎನಿಸುತ್ತದೆ. ಸುಸ್ತಾಗಿ ಬಂದ ಹೆಂಡತಿಯ ಬಯಕೆಯೂ ಅದೇ: ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ ಅಂತ ಹಾಡಬಾರದೇ ಗಂಡ! ಸಿಟ್ಟಾದ ಈ ಸತ್ಯಭಾಮೆಯನ್ನು ಅನುನಯಿಸುವುದಾದರೂ ಹೇಗೆ? ರಾಜ್ ಹೇಳಿಕೊಟ್ಟಿದ್ದಾರೆ. ಒಡಹುಟ್ಟಿದವರೊಂದಿಗೆ ಹೇಗೆ ಬಾಳಬೇಕೆಂಬುದಕ್ಕೆ ರಾಜ್ ಬಳಿಯಿದೆ ಸೂತ್ರ. ಸಜ್ಜನಿಕೆ ಬಿಟ್ಟುಕೊಡದೆಯೂ ಅನ್ಯಾಯದ ವಿರುದ್ಧ ಹೋರಾಡುವುದು ಹೇಗೆ? ರಾಜ್ ಸಿನೆಮಾ ನೋಡಿ ಸಾಕು. ಅದಕ್ಕೇ ಅವರು ಅಂದೂ, ಇಂದೂ, ಮುಂದೂ ಪ್ರಸ್ತುತ. ಸದಾ ಮಿನುಗಬಲ್ಲ ಧ್ರುವತಾರೆ. ಯಾವಾಗ ಬಯಸಿದರೂ ಬರುವ ಶ್ರಾವಣ. ಬಿಸಿಲುಮಳೆಯಿಲ್ಲದಿದ್ದರೂ ಮೂಡಬಲ್ಲ ಕಾಮನಬಿಲ್ಲು.
[ಡಾ। ರಾಜಕುಮಾರ್ ಹುಟ್ಟುಹಬ್ಬಕ್ಕಾಗಿ ಬರೆದದ್ದು . ವಿಶ್ವವಾಣಿಯ ವಿರಾಮದಲ್ಲಿ ಪ್ರಕಟಿತ. ]
No comments:
Post a Comment