Tuesday, May 26, 2020

ಕೊರೋನಾ ಕಾಲದ ಕನವರಿಕೆಗಳು

-ಬೆಕ್ಕು-

ಮಾಳಬೆಕ್ಕೊಂದು ಬಾಗಿಲು ತೆರೆದಿರುವ ಸಮಯ ನೋಡಿ
ಸದ್ದಿಲ್ಲದೆ ಒಳಬಂದು ಮನೆಯನ್ನೆಲ್ಲ ಸುತ್ತಾಡಿ
ಬಂದ ದಾರಿಯಿಂದಲೇ‌ ಹೊರಟುಹೋಯಿತು
ಅಡುಗೆಮನೆಯ ಕಟ್ಟೆಯ ಮೇಲೂ
ಊಟದಮನೆಯ ಮೇಜಿನ ಮೇಲೂ
ಚೂರೇ ತೆರೆದ ಕಪಾಟಿನೊಳಗೂ
ಏನೂ ಸಿಗಲಿಲ್ಲ ಅದಕ್ಕೆ

ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ
ಅಂತೇನು ಎಂದೂ ಅದನ್ನು ನಾನು ಆದರಿಸದಿದ್ದರೂ
ಸಾಧಾರಣ ದಿನಗಳಾಗಿದ್ದರೆ ಹಸಿದ ಮುಸುಡಿ ನೋಡಿ
ಒಂದು ಕುಡ್ತೆ ಹಾಲಾದರೂ ಕೊಡುತ್ತಿದ್ದೆ
ಒಮ್ಮೆ ಎತ್ತಿ ಆಡಿಸಿ ಬಿಡುತ್ತಿದ್ದೆ ಹೊರಗೆ

ಆದರೀಗ ಕೇಡುಗಾಲ, ಬೇಕೆಂದಾಗ ಬೀದಿಗಿಳಿವ ಹಾಗಿಲ್ಲ
ಇರುವ ಅರ್ಧ ಗಿಂಡಿ ಹಾಲನ್ನೇ ಕಾಪಾಡಿಕೊಳ್ಳಬೇಕು
ಮಧ್ಯಾಹ್ನದ ಚಹಾಕ್ಕೆ ಸಂಜೆಯ ಕಾಫಿಗೆ ರಾತ್ರಿ ಮಗಳಿಗೆ
ಉಳಿಸಬೇಕು ಬೊಗಸೆ ನಾಳೆಯ ಬೆಡ್‌ಕಾಫಿಗೆ

ಈ ಕಷ್ಟಕಾಲದಲ್ಲಿ ಇರುವುದನ್ನೇ
ಹಂಚಿ ಉಣ್ಣಬೇಕು ಎನ್ನುವರು
ಆದರೆ ಈ ಕಳ್ಳಬೆಕ್ಕನ್ನು ನಂಬುವುದು ಹೇಗೆ
ಯಾರ್ಯಾರ ಮನೆ ಹೊಕ್ಕು ಬಂದಿದೆಯೋ
ಎಂತೆಂಥ ಪ್ರದೇಶಗಳ ಪ್ರವೇಶಿಸಿ ಬಂದಿದೆಯೋ
ಎಂತೆಂಥವರು ಹಿಡಿದು ಮುದ್ದಿಸಿದ್ದಾರೋ
ಎಲ್ಲಿ ಸೋಂಕಿತರು ಎಲ್ಲಿ ಶಂಕಿತರು ಎಲ್ಲಿ ಗುಣಮುಖರು
ಎಲ್ಲರನ್ನೂ ಎಲ್ಲದನ್ನೂ ಶಂಕೆಯಿಂದಲೇ
ನೋಡುವಂತಾಗಿರುವ ಜೀವಭಯದ ಈ ದಿನಗಳಲ್ಲಿ

ಇಲ್ಲಾ, ಆ ಬೆಕ್ಕು ಒಳ್ಳೆಯದೇ ಇರಬಹುದು
ದುರುದ್ಧೇಶವೊಂದೂ ಇರಲಾರದು ಅದಕ್ಕೆ
ಸೊಕ್ಕೂ ಇಳಿದಿರಬಹುದು ಹಸಿವಿನ ಈ ಋತುವಿನಲ್ಲಿ
ಆದರೂ ಹಿಡಿ ಅನ್ನವಿಕ್ಕಲು ನಾನು ಮುಂದಾಗಲಿಲ್ಲ ಯಾಕೆ
ಮನೆ ಮಗಳು ಮಡದಿ ಮುಂದಿನ ದಿನಗಳು
ಭೀಕರ ದೃಶ್ಯಗಳೆಲ್ಲ ಕಣ್ಮುಂದೆ ಬಂದು
ಕೈ ನಡುಗಿ ಮನಸು ಹಿಂಜರಿದು ಹೆಜ್ಜೆ ಮುಂದಿಡದೆ

* * *

-ಪಾಪಪ್ರಜ್ಞೆ-

ಹಸಿದು ಬಂದ ಬೆಕ್ಕು ಹಸಿದುಕೊಂಡೇ ಹೊರಗೋಡಿತು
ಹಾಗೆ ಮನೆಬಾಗಿಲಿಗೆ ಬಂದವರಿಗೆ ಇಲ್ಲಾ
ಎನ್ನುವುದು ನಮ್ಮ ಸಂಸ್ಕೃತಿಯಲ್ಲ
ಅಯ್ಯೋ ಸಂಸ್ಕೃತಿ ಗಿಂಸ್ಕೃತಿಗಳ ಮಾತು ಬಿಡಿ ಸ್ವಾಮಿ
ಬದುಕಿಕೊಂಡರೆ ಸಾಕಾಗಿದೆ
ರಸ್ತೆ ತುಂಬಾ ಜನ
ಮುಕ್ತ ಸಂಚಾರ
ಮೈಮೇಲೇ ಎರಗುವ ಮಂದಿ
ಎಲ್ಲರಿಗೂ ಏನೇನೋ ಕಾರ್ಯಕಾರಣ
ಇವರ್ಯಾರನ್ನೂ ಎಂದೂ ತಡೆದಿರಲಿಲ್ಲ ನಾವು
ಈಗ ಏನಿದು ಪಿರಿಪಿರಿ
ನನ್ನ ಪ್ರಕಾರ ಅವರದು ತಪ್ಪು
ಅವರ ಪ್ರಕಾರ ನನ್ನದು ತಪ್ಪು

ಅರೆ, ಆ ಬೆಕ್ಕು ಎಲ್ಲಿ ಹೋಯಿತು
ಬಾಗಿಲಿನಿಂದ ಹೊರಗೋಡಿದ್ದು
ಸಣ್ಣ ಕಿಟಕಿಯಿಂದ ನುಸುಳಿ
ಹಾಗೇ ಕಟಾಂಜನ ಹತ್ತಿ
ಮೆ
ಟ್ಟಿ
ಲಿ
ಳಿ
ದು
ಪ್ಯಾರಾಪಿಟ್ಟಿನ ಪುಟ್ಟ ಕಟ್ಟೆಯಮೇಲೆ
ಹೆ ಜ್ಜೆ ಯ ಮೇ ಲೊಂ ದ್ಹೆ ಜ್ಜೆ ಯ ನಿ ಕ್ಕು ತ
ಮತ್ತೊಂದು ಮನೆಗೆ ಹೋಯಿತೇ
ಅಲ್ಲದಕ್ಕೆ ಆಹಾರ ಸಿಕ್ಕಿತೇ
ಮತ್ತೆ ರಸ್ತೆಗಿಳಿಯಿತೇ
ಈ ಜನಜಂಗುಳಿಯಲ್ಲಿ
ಸಾವಿರ ಕಾಲುಗಳ ನಡುವೆ ಜಾಗ ಮಾಡಿಕೊಂಡು
ನುಸುಳಿ ನುಸುಳಿ ನುಸುಳಿ
ಒಂದು ಮಾಳಬೆಕ್ಕು

ಈಗ ಮತ್ಯಾರದೋ ಮನೆಯೊಳಗೋ
ಅಥವಾ ತಿರುಗಿ ನನ್ನದೇ ಮನೆಯೊಳಗೋ
ಅಥವಾ ನನ್ನ ಮನದೊಳಗೋ

ಟೀವಿಯಲ್ಲಿ ದೃಶ್ಯಗಳು
ಉದ್ದುದ್ದ ಕ್ಯೂ ನಿಂತ ಮಂದಿ
ಅರ್ಧ ಲೀಟರು ಉಚಿತ ಹಾಲಿಗೆ
ಜನಧನ ಖಾತೆಯ ಐನೂರು ರೂಪಾಯಿಗೆ
ತವರಿಗೆ ತೆರಳುವ ಕನಸಿಗೆ

* * *

-ಚಾರಣ-

ಅನಿವಾರ್ಯವಿರಲಿಲ್ಲ
ಅವಶ್ಯಕತೆಯಂತೂ ಅಲ್ಲವೇ ಅಲ್ಲ
ಆದರೂ ನಡೆಯುತ್ತಿದ್ದೆವು ಭಾರಬ್ಯಾಗು ಬೆನ್ನಿಗೇರಿಸಿ

ದಣಿಯಲೆಂದೇ ನಡೆದದ್ದು
ಮಣಿಯಲೆಂದೇ ಬೆಟ್ಟವೇರಿದ್ದು
ಡೆಕತ್ಲಾನಿನಲ್ಲಿ ಕೊಂಡ ಶೂ
ಅಮೆಜಾನಿನಿಂದ ತರಿಸಿದ ಹೈಕಿಂಗ್ ಬ್ಯಾಗ್
ಉಪ್ಪು ಸೇರಿಸಿ ಹುರಿದ ಗೋಡಂಬಿ
ಚಪ್ಪರಿಸಲು ಮತ್ತಷ್ಟು ಕುರುಕಲು ತಿಂಡಿ
ಸುಸ್ತು ಮರೆಸಲು ಜೋಕು ದಂಡಿದಂಡಿ

ಆದರೆ ಒಂದು ಕೊರಗು ಉಳಿದೇ ಹೋಗಿತ್ತು
ಎಡಕುಮರಿಯ ಸುರಂಗಮಾರ್ಗದಲಿ ಹಾಯುವ
ಆ ಹಳಿಗಳ ಮೇಲೊಮ್ಮೆ ನಡೆಯಬೇಕೆಂಬುದು..
ಹಾಗೆಯೇ ದೂಧ್‌ಸಾಗರ್ ಜಲಪಾತವನ್ನು
ಹಳಿಗಳ ಮೇಲೆ ನಡೆದುಹೋಗಿಯೇ ನೋಡಬೇಕೆಂದು

ಇವತ್ತು ಪೇಪರಿನಲ್ಲಿ ಹೆಣಗಳು
ಹಳಿಗಳ ಮೇಲೆ ಮಲಗಿಯೇ ಜೀವ ಬಿಟ್ಟವರು
ಪಕ್ಕದಲ್ಲೊಂದಷ್ಟು ಒಣ ರೊಟ್ಟಿಚೂರು

ಅಲ್ಲಾ ಆ ಬೆಕ್ಕು ಬಯಸಿದ್ದಾದರೂ ಏನನ್ನ
ಒಂದು ಹಿಡಿ ಹಾಲು-ಅನ್ನ
ಇಷ್ಟಕ್ಕೂ ಅದು ಆ ಬೆಕ್ಕಿನ ಹಕ್ಕು:
ಅಷ್ಟೆಲ್ಲ ದಿನ ನನ್ನ ಮಗಳನ್ನು ಆಡಿಸಿದ್ದಕ್ಕೆ
ಮೃದುಮೈಯ ಬೆಚ್ಚನೆ ಸ್ಪರ್ಶ ಕೈಗೊದಗಿಸಿದ್ದಕ್ಕೆ
ಉಗುರಿನಿಂದೊಮ್ಮೆಯೂ ಪರಚದೆ ಬಿಟ್ಟಿದ್ದಕ್ಕೆ

ಏ ಸಾಕು ಬಿಡಿ ಗುರುಗಳೇ
ಅಷ್ಟೆಲ್ಲ ತಲೆಬಿಸಿ ಮಾಡ್ಕೊಂಡ್ರೆ ಹ್ಯಾಗೆ
ಉಂಡಾಡಿ ಜೀವ, ನಮ್ಮನೇಲಿಲ್ದಿದ್ರೆ ಮತ್ತೊಂದ್ಮನೆ
ಹಿಂಗೇ ಮುಂದುವರೆದ್ರೆ ನಮ್ ಲೈಫೂ ಕಷ್ಟಾನೇ ಇದೆ
ನಾವು ಯಾರ ಮನೆ ಬಾಗಿಲಿಗೆ ಹೋಗೋಣ
ತಳುಕು ಹಾಕ್ಬೇಡಿ ಹಾಗೆಲ್ಲ ಯಾವುದನ್ನು ಯಾವುದಕ್ಕೋ

* * *

-ಪ್ರಾರ್ಥನೆ-

ಇಂದಿನಿಂದ ದೇವಾಲಯಗಳಲ್ಲಿ ಆನ್‌ಲೈನ್ ದರ್ಶನ
ಅವರವರ ಮನೆಯಿಂದಲೆ ನೈವೇದ್ಯ
ಯುಪಿಐ ಮೂಲಕ ಕಾಣಿಕೆ
ಕೊರಿಯರಿನಲ್ಲಿ ಪ್ರಸಾದ

ಮೃಗಖಗಾದಿಗಳಿಗೆಲ್ಲ ಅಲ್ಲಲ್ಲೆ ಆಹಾರವಿತ್ತ
ಕಾಗಿನೆಲೆಯಾದಿಕೇಶವರಾಯನೇ,
ಇದನೆಲ್ಲ ಬೇಗ ಮುಗಿಸು
ಆ ಬೆಕ್ಕು ಹಸಿವಿನಿಂದ ಕಂಗೆಡದಿರಲಿ
ಕಳುಹಿಸಿಕೊಡು ಶ್ರಮಿಕ ಎಕ್ಸ್‌ಪ್ರೆಸ್ಸಿನಲ್ಲಿ ಹೇಗಾದರೂ
ಕೊನೆಗೊಳಿಸು ಈ ಶಂಕಾಪ್ರವೃತ್ತಿಯ ನನ್ನಿಂದ
ಹಾರ್ದಿಕ ನಗುವ ಮರಳಿಸು ಎದೆಯೊಳಗೆ
ಹಂಚಿ ತಿನಲುಗೊಡು ಸಹಪಂಕ್ತಿಯಲಿ ಕೂತು ಇದ್ದದ್ದ.