Monday, July 20, 2020

ಮಡಿಲು

ಮೊದಲಿನಿಂದಲೂ ನಿನಗೆ ಬಸ್ಸು ಎಂದರೆ ಆಯಿತು
ಒಳಗೆ ಕಾಲಿಟ್ಟವನೇ ಡ್ರೈವರ್ ಬಳಿಗೆ ಓಡಿ
ಸರಳುಗಳ ಬಗ್ಗಿ ದಾಟಿ ಗೇರ್‌ಬಾಕ್ಸ್‌ ಮೇಲೇರಿ ಕೂತುಬಿಡುತ್ತಿದ್ದೆ
ಇಳಿವ ಸ್ಥಳ ಬಂದರೂ ಇಳಿಯೆನೆಂದು ಹಟ ಮಾಡುತ್ತಿದ್ದೆ
ಹಾಯುವ ಬಸ್ಸುಗಳಿಗೆಲ್ಲ ಟಾಟಾ ಮಾಡುತ್ತಿದ್ದೆ
ಊಟದ ತಟ್ಟೆಯನ್ನೇ ಸ್ಟೀರಿಂಗಿನಂತೆ ತಿರುಗಿಸುತ್ತ
ಬುರ್ರನೆ ಓಡುತ್ತಿದ್ದೆ ಜಗುಲಿ ಅಂಗಳ ಹಿತ್ತಿಲು ರಸ್ತೆ

ಅದೊಂದು ಮುಂಜಾನೆ ಮೂಡುಗಾಳಿಯ ಸೆಳೆತಕ್ಕೆ ಸಿಕ್ಕು
ಹೊರಟುಬಿಟ್ಟೆ ಇನ್ನೂ ಮೀಸೆ ಮೂಡದ ಹುಡುಗ ಮನೆ ಬಿಟ್ಟು
ಹಿಡಿದ ಪೆನ್ನು-ಪುಸ್ತಕಗಳ ಜಗಲಿಯಲ್ಲೆ‌ ಬಿಸುಟು
ಎತ್ತ ಹೋದೆ ಎಂದು ಪತ್ತೆ ಹಚ್ಚಲು ವಾರ ಹಿಡಿಯಿತು
ತಿಳಿಯದ ಮಾರ್ಗದ ತಿಳಿಗಿಳಿ ಬಣ್ಣದ ಬಸ್ಸಿನ
ಮೆಟ್ಟಿಲಿನಲಿ ನಿಂತು ನೀನು ಹೊಸಹೊಸ ಊರುಗಳ
ಹೆಸರು ಕೂಗುತ್ತಿದ್ದೆ ಅಂತ ಯಾರೋ ಬಂದು ಹೇಳಿದರು
ಹುಡುಕುವುದ ಬಿಟ್ಟು ಕಾಯಲು ತೊಡಗಿದೆವು

ಆ ಮಾಗೀಚಳಿಯ ಗಢಗಢವ ಎಲ್ಲಿ ಕಂಬಳಿ ಹೊದ್ದು ಕಳೆದೆ
ಬೇಸಿಗೆಯಲಿ ಬಾಯಾರಿದಾಗ ಯಾವ ನಲ್ಲಿಗೆ ಕೈಯೊಡ್ಡಿದೆ
ಮಳೆಗಾಲಕೆ ಜತೆಯಾಗಲು ಛತ್ರಿಯಾದರೂ ಇದೆಯೋ
ಎಂಬ್ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸಲಿಲ್ಲ‌
ಬುಟ್ಟಿಯಲ್ಲಿ ಚೆಂಡುಹೂ ಹೊತ್ತು ದೊಡ್ಡಬ್ಬಕ್ಕೆಂದು ಬಂದ ನೀನು
ಕೈಗಂಟಿದ ಕರಿಯ ತೊಳೆಯಲು ಎಣ್ಣೆ ಹನಿಸಲು ಬಂದರೆ
ಇದು ಹೋಗದ ಬಣ್ಣ ಬಿಡಮ್ಮಾ ಅಂತ ಸೆಟಗೊಂಡುಬಿಟ್ಟೆ

ಆಮೇಲ್ಯಾರೋ ಅಂದರು: ದೂರದ ನಗರಕೆ ಸಾಗುವ
ರಾತ್ರಿಬಸ್ಸಿನಲ್ಲಿ ನಿನ್ನ ಪಾಳಿಯಂತೆ; ಅದು ನೀನೇ ಆಯ್ದ ದಾರಿಯಂತೆ
ತಪ್ಪಿಯೂ ಕಣ್ಣು ಮುಚ್ಚದೆ ಹೆದ್ದಾರಿಯ ಕತ್ತಲ ಸೀಳುವ
ಪ್ರಖರ ದೀಪಧಾರೆಯ ನಿರುಕಿಸುತ್ತ ನಿಂತಿರುತ್ತೀಯಂತೆ
ಹಗಲೂ ಮಲಗದೆ ವಾಹನದ ಕೊಳೆ ತೊಳೆಯುವೆಯಂತೆ
ಘಮಗುಡುವ ಅಗರಬತ್ತಿ ಹಚ್ಚಿ ಬೆಳಗುವೆಯಂತೆ
ವಾರಗೆಯ ಹುಡುಗರ ಜತೆ ಹಂಚಿಕೊಂಡು ಚಹ
ಜೋಕುಗಳಿಗೆ ನಕ್ಕು ಅವರಲ್ಲೊಬ್ಬನಾಗಿರುವೆಯಂತೆ
ನಗರಕ್ಕೆ ಹೊರಟ ಪಕ್ಕದೂರ ಶ್ಯಾಮಭಟ್ಟರನ್ನು 'ನಮ್ಮೂರೋರು'
ಅಂತ ಹೇಳಿ ಉಚಿತವಾಗಿ ಕರೆದುಕೊಂಡು ಹೋದೆಯಂತೆ
ಡ್ರೈವರಣ್ಣನ ಮನವೊಲಿಸಿ ಆಗೀಗ ನೀನೇ ಬಸ್ಸು ಓಡಿಸುವೆಯಂತೆ

ಈಗ್ಯಾಕೆ ಹೀಗೆ ಎಲ್ಲ ಕಳಕೊಂಡವನಂತೆ ಮಳೆ ನೋಡುತ್ತ ನಿಂತೆ
ನಿನ್ನ ಮಾಲೀಕರು ಬಸ್ಸು ನಿಲ್ಲಿಸಿಬಿಟ್ಟ ಸುದ್ದಿ ತಿಳಿಯಿತು
ಜಗವೇ ಹೆದರಿ ನಿಂತಿರುವಾಗ ನಿನ್ನ ಬಸ್ಸಿನದೇನು ಲೆಕ್ಕ
ಅಲ್ಲಿ ನೋಡು, ಆ ಕೆರೆಕೋಡಿಯ ಬಳಿಯಲಿ ನಿಲ್ಲು
ಹೆದ್ದಾರಿಯಲಿ ಸಾಗುವಾಗಿನ ಭರ್ರನೆ ಶಬ್ದ ಅಲ್ಲೂ ಕೇಳ್ವುದು
ಡಾಬಾದಲಿ ಸಿಗುವ ಖಡಕ್ಕು ಚಹಾ ನಾನೇ ಬತ್ತಿಸಿ ಕೊಡುವೆ
ಪಾರ್ಸೆಲ್ ಪೊಟ್ಟಣದ ಚಿತ್ರಾನ್ನವ ಇಲ್ಲೇ ಮಾಡಿ ಕೊಡುವೆ
ನಿನ್ನ ಹಳೆಯ ಗೆಳೆಯರೆಲ್ಲ ಈಗಿಲ್ಲಿ ಕ್ರಿಕೆಟ್ ಆಡುತ್ತಾರೆ,
ನೀನೂ ಅವರೊಂದಿಗೆ ಸೇರಿಕೋ
ಈ ಕಾಲವೂ ಕಳೆವುದು ಮಗನೇ ಬಲುಬೇಗ,
ಬೇಕಿದ್ದರೆ ಮತ್ತೆ ಮರಳುವೆಯಂತೆ ನಿನ್ನಾಸೆ ದಾರಿಗೆ- ಹೆದ್ದಾರಿಗೆ
ಇಕೋ, ರಾತ್ರಿಯಲಿ ನಿದ್ರೆ ಬರುವಂತೆ
ತಲೆಗೆ ಹರಳೆಣ್ಣೆ ಹಾಕಿ ತಟ್ಟುವೆ, ಹತ್ತಿರ ಬಾ.

1 comment:

sunaath said...

Beautiful and complex poem.