Wednesday, November 24, 2021

ಟಿವಿಯೆಂಬ ಮಾಯಾಪೆಟ್ಟಿಗೆ ಸೂಸುವ ಬೆಳಕಲ್ಲಿ...

ಊರಿನ ಮೊದಲ ಟಿವಿ ಬಂದದ್ದು ನಿಚ್ಛಳವಾಗಿ ನೆನಪಿದೆ. ಎಲ್ಲ ಹೊಸ ವಸ್ತುಗಳಂತೆ ಪಟೇಲರ ಮನೆಗೇ ಬಂದದ್ದು ಮೊದಲ ಟಿವಿ. ಮರ ಹತ್ತುವುದರಲ್ಲಿ ನಿಷ್ಣಾತ ಎಂದು ಹೆಸರಾಗಿದ್ದ ನರಸಿಂಹ ಶೆಟ್ಟಿಗೆ ಆಂಟೆನಾ ಕೂರಿಸುವ ಕೆಲಸ ವಹಿಸಲಾಗಿತ್ತು. ಪಟೇಲರ ಮನೆಯ ಸಮೀಪವಿದ್ದ ಅತಿ ಎತ್ತರದ ಮರದ ಮೇಲೆ ಆಂಟೆನಾ ಕೂರಿಸುವುದು ಅವನ ಜವಾಬ್ದಾರಿಯಾಗಿತ್ತು. ಅಂತಹ ಮರ ಹುಡುಕಿ ಆಂಟೆನಾ ಕೂರಿಸಿದ ಅವನು, ಊರಿನ ಪ್ರತಿ ಮನೆ ಹೊಕ್ಕು, “ನೋಡಿ, ಪಟೇಲ್ರು ಮನಿಗೆ ಟೀವಿ ಬಂತು. ಆಂಟೆನಾ ಕೂರ್ಸಕ್ಕೆ ನನ್ನೇ ಕರ್ದೀರು. ಅದೇ ಅಲ್ ಕಾಣಿ, ಎಷ್ಟ್ ಎತ್ರಕ್ ಕೂರ್ಸೀದೆ” ಅಂತ ಹೇಳಿ, ಎಲ್ಲರಿಂದಲೂ ತನ್ನ ಸಾಹಸಕಾರ್ಯಕ್ಕೆ ಶಹಬ್ಬಾಷ್ ಗಿಟ್ಟಿಸಿಕೊಂಡು ಬಂದಿದ್ದ. ಅವನಾದರೂ ಎಷ್ಟು ಎತ್ತರಕ್ಕೆ ಅದನ್ನು ಕೂರಿಸಿದ್ದ ಎಂದರೆ, ಊರಿನ ಬಹುಪಾಲು ಮನೆಗಳ ಕಟ್ಟೆಯ ಮೇಲೆ ನಿಂತರೆ ಆ ಆಂಟೆನಾ ಕಾಣುತ್ತಿತ್ತು. 
 
ಮಲೆನಾಡಿನ ಒಂದು ಪುಟ್ಟ ಹಳ್ಳಿಯಾದ ನಮ್ಮೂರಿಗೆ ಎಷ್ಟೋ ದೂರದ ದೂರದರ್ಶನ ಕೇಂದ್ರದಿಂದ ಸಿಗ್ನಲ್ ಎಳೆಯಬೇಕೆಂದರೆ ಹಾಗೆ ಅಷ್ಟು ಎತ್ತರದಲ್ಲಿ ಆಂಟೆನಾವನ್ನು ಕೂರಿಸುವುದು ಅನಿವಾರ್ಯವೂ ಆಗಿತ್ತು. ಊರಿಗೆ ಬಂದ ಮೊದಲ ಟಿವಿಯನ್ನು ನಾವೆಲ್ಲಾ ನೋಡಲು ಹೋಗದೇ ಇರಲಾದೀತೇ? ಅವತ್ತಷ್ಟೇ ಡೆಲಿವರಿಯಾದ ಶಿಶು-ಬಾಣಂತಿಯನ್ನು ನೋಡಲು ಹೋಗುವವರಂತೆ ನಾವೆಲ್ಲ ಪಟೇಲರ ಮನೆಗೆ ಧಾಳಿಯಿಟ್ಟೆವು. ನರಸಿಂಹ ಶೆಟ್ಟಿ ಅಷ್ಟು ಕಷ್ಟ ಪಟ್ಟಿದ್ದರೂ, ಸಿಗ್ನಲ್ ಸಾಲದಾಗಿ ಆ ಬ್ಲಾಕ್ ಅಂಡ್ ವೈಟ್ ಟೀವಿಯಲ್ಲಿ ಚಿತ್ರಕ್ಕಿಂತ ಜಾಸ್ತಿ ಚುಕ್ಕಿಗಳೇ ಕಾಣುತ್ತಿತ್ತು. ಆದರೂ ನಾವೆಲ್ಲ ಆ ಅದ್ಭುತ ಮಾಯಾಪೆಟ್ಟಿಗೆಯಲ್ಲಿ ಓಡುವ ಚಿತ್ರಗಳನ್ನು ನೋಡಿ ಆನಂದಿಸಿದೆವು. ಏಕೈಕ ಛಾನೆಲ್ ಆಗಿದ್ದ ದೂರದರ್ಶನದ ನಮಗರ್ಥವಾಗದ ಹಿಂದಿ, ಸಂಜೆಯ ಮೇಲೆ ಬರುತ್ತಿದ್ದ ಕನ್ನಡ, ಭಾನುವಾರದ ಪಿಚ್ಚರುಗಳನ್ನು ಮುಗಿಬಿದ್ದು ನೋಡಿದೆವು. ಎಂದೋ ಥಿಯೇಟರಿಗೆ ಹೋದರೆ ಮಾತ್ರ ನೋಡಲಾಗುತ್ತಿದ್ದ ನಮ್ಮ ನೆಚ್ಚಿನ ಹೀರೋ-ಹೀರೋಯಿನ್ನುಗಳ ಸಿನೆಮಾಗಳು ಈಗ ಮನೆಯಲ್ಲೇ ಪ್ರದರ್ಶನವಾಗುತ್ತಿದ್ದವು. ಜಾಹೀರಾತು ಬಂದಾಗ ಬೈದುಕೊಳ್ಳುತ್ತಾ, ಕರೆಂಟ್ ಹೋದರೆ ಕರೆಂಟಿನವರನ್ನು ಶಪಿಸುತ್ತಾ, ಟಿವಿ ಕೈಕೊಟ್ಟರೆ ನಮ್ಮ ಅದೃಷ್ಟವನ್ನೇ ಹಳಿದುಕೊಳ್ಳುತ್ತಾ, ಟಿವಿಯಿರುವ ಮನೆಯವರು ಬೇಕೆಂದೇ ಟಿವಿ ಹಾಕದಿದ್ದರೆ ಮನಸಲ್ಲೇ ಅವರ ಮೇಲೆ ಆಕ್ರೋಶ ಪಟ್ಟುಕೊಳ್ಳುತ್ತಾ, ಟಿವಿಯೊಳಗೆ ನಿಧಾನಕ್ಕೆ ನಾವು ಹುದುಗತೊಡಗಿದೆವು. 
 
ಬ್ಲಾಕ್ ಅಂಡ್ ವೈಟ್ ಟಿವಿ ಹೋಗಿ ಕಲರ್ ಟಿವಿ ಬಂತು. ಊರಿನ ಹಲವು ಮನೆಗಳಿಗೆ ಟಿವಿ ಬಂದವು. ಜಿಲ್ಲೆ-ತಾಲೂಕು ಕೇಂದ್ರಗಳಲ್ಲಿ ಟಿವಿ ಟವರ್ ಆಯಿತು. ಆಂಟೆನಾಗಳು ಮರದಿಂದ ಇಳಿದು ಮನೆಯ ಕೋಳನ್ನೇರಿದವು. ಬೆಂಗಳೂರು ದೂರದರ್ಶನದಿಂದ ಸಂಜೆಯಿಂದ ಮಾತ್ರ ಪ್ರಸಾರವಾಗುತ್ತಿದ್ದ ಕನ್ನಡ ಕಾರ್ಯಕ್ರಮಗಳು ಈಗ ಮಧ್ಯಾಹ್ನದಿಂದಲೇ ಬರಲು ಶುರುವಿಟ್ಟವು. ಪತ್ರಿಕೆಗಳಲ್ಲಿ ಮಾತ್ರ ನೋಡಿ ಗೊತ್ತಿದ್ದ ಧಾರಾವಾಹಿಗಳು ಟೀವಿಯಲ್ಲೂ ಶುರುವಾಗಿ ಜನರನ್ನು ಮೋಡಿ ಮಾಡತೊಡಗಿದವು. ಫ್ಲಾಶ್‌ಬ್ಯಾಕುಗಳೂ, ಫೈಟಿಂಗ್ ಸೀನುಗಳೂ, ಅರೆಬರೆ ಬಟ್ಟೆಯುಟ್ಟ ಲಲನೆಯರ ನೃತ್ಯಗಳೂ ಇಷ್ಟವಾಗದ ಊರ ಕೆಲವು ವೃದ್ಧರು, “ಮನೆ ಮೇಲೆ ಏಣಿ ಅಡ್ಡ ಸಾಚಿದ್ದ; ಮನೆಯೊಳಗೆ ಗೊಂಬೆ ಕುಣಿತು” ಅಂತ ಹೇಳಿಕೊಂಡು ಓಡಾಡಿದರು.
ಭಾನುವಾರದ ಸಿನೆಮಾ ಕೊಡುವ ಕಿಕ್ಕು ಸಾಲದಾಗಿ ವಿಸಿಪಿ ಬಂದಮೇಲೆ, ನಮಗೆ ಬೇಕಾದ ಸಿನೆಮಾವನ್ನು ಬೇಕಾದಾಗ ನೋಡುವ ಸೌಲಭ್ಯ ಬಂತು: ಅದೂ ಜಾಹೀರಾತುಗಳ ಕಾಟವಿಲ್ಲದೆ! ಊರಿಗೊಂದೇ ಟಿವಿಯಾಗಿದ್ದ ಹೊಸದರಲ್ಲಿ, ಪ್ರತಿ ದಿನ ಒಬ್ಬೊಬ್ಬರಂತೆ ಪಾಳಿ ಮಾಡಿಕೊಂಡು, ಪೇಟೆಯಿಂದ ಕ್ಯಾಸೆಟ್ ಬಾಡಿಗೆಗೆ ತಂದು, ಪ್ರತಿರಾತ್ರಿ ಊರವರೆಲ್ಲ ಒಂದು ಮನೆಯಲ್ಲಿ ಸೇರಿ ಸಿನೆಮಾ ನೋಡುವ ಸೌಭಾಗ್ಯ ಬಂತು. ಅದೇ ಜೋಶಿನಲ್ಲಿ ರಾಮಾಯಣ, ಮಹಾಭಾರತ, ಕೃಷ್ಣಾವತಾರ ಮೊದಲಾದ ಸೀರಿಸ್ಸುಗಳನ್ನೂ ಊರವರೆಲ್ಲ ನೋಡಿ ಆನಂದಿಸಿದೆವು. ನಮಗೆ ಅರ್ಥವಾಗುತ್ತಿದೆ ಅಂತ ತೋರಿಸಿಕೊಳ್ಳಲು, ಹಿಂದಿಯಲ್ಲಿದ್ದ ಸಂಭಾಷಣೆಯನ್ನು ಹಿರಿಯರಿಗೆ ಅನುವಾದಿಸಿ ಹೇಳಲು ಪ್ರಯತ್ನಿಸಿ ಕೆಲವು ಹುಡುಗರು, “ರಾಮಾಯಣ-ಮಹಾಭಾರತ ನಮಗೆ ಗೊತ್ತಿದ್ದಷ್ಟು ನಿಮಗೆ ಗೊತ್ತಿಲ್ಲ, ಸುಮ್ನಿರಿ” ಅಂತ ಬೈಸಿಕೊಂಡೆವು. 
 
ನೀಳಕಾಯದ ಆಂಟೆನಾಗಳ ಕಾಲ ಕಳೆದು ಡಿಶ್ಶುಗಳು ಊರಿಗೆ ಲಗ್ಗೆಯಿಟ್ಟವು. ನಗರಕ್ಕೆ ಹೋದಾಗ ನೋಡಿದ್ದ ಕೇಬಲ್ ಟಿವಿಯಲ್ಲಿ ಎಷ್ಟೊಂದು ಛಾನೆಲ್ಸ್ ಬರುತ್ತೆ, ನಮ್ಮಲ್ಲಿ ಬರೋಲ್ಲ ಅಂತ ಬೇಸರ ಪಟ್ಟುಕೊಂಡಿದ್ದ ಹಳ್ಳಿಗರಿಗೂ ವರವಾಗುವಂತೆ ಬಂದ ಈ ಡಿಶ್ಶುಗಳು, ಹತ್ತಾರು ಭಾಷೆಗಳ ನೂರಾರು ಛಾನೆಲ್ಲುಗಳ ಅಸಂಖ್ಯ ಕಾರ್ಯಕ್ರಮಗಳನ್ನು ತೋರಿಸುತ್ತಾ ಮನೆಮನೆಗಳಲ್ಲಿ ಮನರಂಜನೆಯ ಮಹಾಪೂರವೇ ಶುರುವಾಯಿತು. ಅಂಗಳದಲ್ಲೊಬ್ಬರು – ಟಿವಿಯ ಮುಂದೊಬ್ಬರು ಕುಳಿತು, ಬೇಕಾದ ಛಾನೆಲ್ಲುಗಳಿಗಾಗಿ ಬೇಕಾದ ಕಡೆ ಡಿಶ್ಶು ತಿರುಗಿಸುತ್ತ – ಒಳಗೆ ಕುಳಿತವರು ನಿರ್ದೇಶನ ಕೊಡುವ ದೃಶ್ಯ ಸಾಮಾನ್ಯವಾಯಿತು. ಧಾರಾವಾಹಿ ನಟಿಯರ - ವಾರ್ತಾವಾಚಕಿಯರ ಚಂದದ ಸೀರೆಗಳನ್ನು ನೋಡಿ ಕರುಬುವ ಗೃಹಿಣಿಯರೂ, ಪ್ರತಿ ರಾತ್ರಿ ವಾರ್ತೆಗಳನ್ನು ನೋಡಿ ಜಗತ್ತಿನ ವರ್ತಮಾನಗಳನ್ನೆಲ್ಲ ತಿಳಿದುಕೊಂಡೆ ಎಂದು ಭಾವಿಸಿ ಬೀಗುವ ಗೃಹಸ್ಥರೂ, ಫೈಟಿಂಗ್ ದೃಶ್ಯಗಳನ್ನು ನಕಲು ಮಾಡುವ ಮಕ್ಕಳೂ, ಪ್ರೀತಿಸಿದವರಿಗೆ ಪ್ರಪೋಸು ಮಾಡುವ ಟ್ರೈನಿಂಗು ಪಡೆದ ಯುವಕರೂ ಟಿವಿಯನ್ನು ಹೆಚ್ಚೆಚ್ಚು ಮೆಚ್ಚಲು ಹಿಡಿದರು. ಕ್ರಿಕೆಟ್ ಮ್ಯಾಚುಗಳು ಲೈವ್ ಬರಲು ಪ್ರಾರಂಭವಾಗಿ, ಜನ ದಿನಗಟ್ಟಲೆ ಟಿವಿಗಂಟಿ ಕೂರುವುದೂ, ರಿಮೋಟಿಗಾಗಿ ಮನೆಯವರು ಕಿತ್ತಾಡಿಕೊಳ್ಳುವುದೂ ಶುರುವಾಯಿತು. ಧಾರಾವಾಹಿ ನೋಡಲೋಸುಗವೇ ನಮ್ಮ ನಿತ್ಯದ ಕೆಲಸಗಳ ಸಮಯವನ್ನು ಮಾರ್ಪಾಟು ಮಾಡಿಕೊಂಡೆವು. ಮನೆಯ ಜಗಲಿಯಲ್ಲೋ ಹಾಲಿನಲ್ಲೋ ಪ್ರತಿಷ್ಠಾಪಿಸಲ್ಪಟ್ಟ ಟಿವಿ ನಮ್ಮೆಲ್ಲರನ್ನೂ ಒಟ್ಟಿಗೆ ಕೂರಿಸುವ, ನಗಿಸುವ, ಅಳಿಸುವ, ಕುಣಿಸುವ, ತಿಳಿಸುವ, ಮನ ತಣಿಸುವ ಮಾಧ್ಯಮವಾಗಿ ಉನ್ನತ ಸ್ಥಾನವನ್ನಲಂಕರಿಸಿತು. 
 
ವಿಸಿಪಿ-ವಿಸಿಆರ್‌ಗಳು ಮುಂದೆ ವಿಸಿಡಿ-ಡಿವಿಡಿಗಳಾಗಿ ಬಡ್ತಿ ಹೊಂದಿದವು. ಕ್ಯಾಸೆಟ್ಟಿನ ರೀಲು ಪ್ಲೇಯರಿನಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದ ದಿನಗಳು ಹೋದವು. ಕ್ಯಾಸೆಟ್ಟನ್ನು ತಿರುಗಿಸಿ-ಮುರುಗಿಸಿ ಹಾಕಬೇಕಿದ್ದ ಕಾಲ ಇಲ್ಲವಾಯಿತು. ಸುದರ್ಶನ ಚಕ್ರದಂತಹ ಡಿಸ್ಕೊಂದರಲ್ಲಿ ಮೂರ್ನಾಲ್ಕು ಸಿನೆಮಾಗಳು ಜಾಗ ಮಾಡಿಕೊಂಡು ಕೂತವು. ಮುಂದೊಂದು ದಿನ ಸಣ್ಣದೊಂದು ಪೆನ್‌ಡ್ರೈವಿನಲ್ಲಿ ಹತ್ತಾರು ಸಿನೆಮಾ ತುಂಬಿಸಬಹುದು ಎಂಬ ಕಲ್ಪನೆ ಆಗ ಯಾರಿಗೂ ಇರಲಿಲ್ಲವಷ್ಟೇ? 
 
ಡಿಟಿಎಚ್ ಬಂದಮೇಲೆ, ಇಡೀ ಅಂಗಳ ತುಂಬುವಂತಿದ್ದ ದೊಡ್ಡ ಡಿಶ್ಶುಗಳು ಸ್ಲಿಮ್ಮೂ ಟ್ರಿಮ್ಮೂ ಆಗಿ ಮನೆಯ ಕೋಳಂಚನ್ನೋ ಟೆರೇಸಿನ ತುದಿಯನ್ನೋ ಅಪ್ಪಿದವು. ಡೂಮ್ ಟಿವಿಗಳು ಮೂಲೆಗುಂಪಾಗಿ ದೊಡ್ಡ ಪರದೆಯ ಎಲ್‌ಸಿಡಿ-ಎಲ್‌ಇಡಿ ಟಿವಿಗಳು ಬಂದವು. ಈಗ ಟಿವಿಯಲ್ಲಿ ಚುಕ್ಕಿಗಳಿಲ್ಲ, ತೆರೆತೆರೆಯಿಲ್ಲ, ಕಾಮನಬಿಲ್ಲಿನ ಬಣ್ಣಗಳಿಲ್ಲ: ಎಲ್ಲಾ ನಿಚ್ಛಳ ಸುಂದರ ಸ್ಫುಟ. ಕ್ವಿಜ್ ಕಾರ್ಯಕ್ರಮಗಳು, ಸಂಗೀತ ಸ್ಪರ್ಧೆಗಳು, ರಿಯಾಲಿಟಿ ಶೋಗಳ ಟ್ರೆಂಡ್ ಶುರುವಾದಮೇಲಂತೂ ನಮ್ಮ ಅಕ್ಕಪಕ್ಕದವರೇ ಟೀವಿಯಲ್ಲಿ ಬರಲು ತೊಡಗಿದರು. ನಮ್ಮಂತೆಯೇ ಜನಸಾಮಾನ್ಯರು ಎಂದುಕೊಂಡಿದ್ದವರು ಈಗ ಹೀರೋ ಥರ ಕಾಣುವರು! ಅಕಸ್ಮಾತ್ ಯಾರಾದರೂ ನಮ್ಮ ಪರಿಚಿತರು ಟಿವಿಯಲ್ಲಿ ಕಂಡರೆ ಖುಷಿ-ಹೆಮ್ಮೆ ಪಡುತ್ತಿದ್ದ ನಮಗೆ, ಅರೆ, ಈಗ ನಾನು ಬೇಕಾದರೂ ಇಲ್ಲಿ ಕಾಣಿಸಿಕೊಳ್ಳಬಹುದು ಎಂಬಂತಾಯಿತು. 
 
24x7 ನ್ಯೂಸ್‌ಛಾನೆಲ್ಲುಗಳು ಬಂದಮೇಲೆ ಎಲ್ಲ ಸುದ್ದಿಗಳೂ ಎಲ್ಲರಿಗೂ ಆಯಾ ಕ್ಷಣಕ್ಕೆ ತಲುಪುವಂತಾಗಿ, ಆ ಛಾನೆಲ್ಲುಗಳೂ ಮುಂದುವರೆದು, ನಡೆಯುತ್ತಿರುವುದನ್ನೆಲ್ಲಾ ನೇರವಾಗಿ ತೋರಿಸುವವಾಗಿ, ನಮ್ಮ ದಿನಗಳಿಗೊಂದು ರೋಚಕತೆ ಬಂದುಬಿಟ್ಟಿತು. ಎಷ್ಟೋ ಭ್ರಷ್ಟರ ಬಣ್ಣಗಳು ಬಯಲಾದವು. ಕ್ರೈಂ ಶೋಗಳು, ಬ್ರೇಕಿಂಗ್ ನ್ಯೂಸುಗಳು, ಲೈವ್ ದೃಶ್ಯಾವಳಿಗಳು, ವಾರಗಟ್ಟಲೆ ನಡೆಯುವ ಆಡಂಬರದ ಮದುವೆಗಳು, ಯಾರದೋ ಸಂಸಾರದ ಬಿರುಕಿನ ಪಂಚಾಯತಿಗಳೂ, ಯಾರದೋ ಕಣ್ಣೀರು, ಯಾರಿಗೋ ಆದ ಗಾಯ, ಯಾರಿಗೋ ಆದ ಅನ್ಯಾಯಗಳನ್ನೆಲ್ಲ ನೋಡುತ್ತಾ ನಾವು ಕಳೆದುಹೋದೆವು. ಎಷ್ಟರ ಮಟ್ಟಿಗೆ ಎಂದರೆ, ಇತ್ತೀಚಿನ ದಿನಗಳಲ್ಲಿ, ಇವೆಲ್ಲಾ ಜಾಸ್ತಿಯಾಯ್ತೇನೋ, ಧಾರಾವಾಹಿಗಳ ಉದ್ದ, ಕೆಲವು ರಿಯಾಲಿಟಿ ಶೋಗಳಲ್ಲಿನ ವರ್ತನೆ, ನ್ಯೂಸ್‌ಛಾನೆಲ್ಲುಗಳ ವರದಿಗಾರಿಕೆ ಅತಿರೇಖಕ್ಕೆ ಹೋಯ್ತೇನೋ ಅಂತ ಜನ ಮಾತಾಡಿಕೊಳ್ಳುವವರೆಗೆ ಬಂದಿದೆ. “ಎಲ್ಲಾ ಟಿಆರ್‌ಪಿಗಾಗಿ ಮಾಡ್ತಾರೆ” ಅಂತ, ತಿಳಿದವರೂ ತಿಳಿಯದವರೂ ಟಿವಿ ಛಾನೆಲ್ಲುಗಳನ್ನು ಹಳಿದುಕೊಳ್ಳುವ ಕಾಲ ಇದು.
ಇವೆಲ್ಲವುಗಳ ನಡುವೆ ಈಗ ಒಟಿಟಿ ಬಂದಿದೆ. ಸ್ಮಾರ್ಟ್‌ಫೋನುಗಳಲ್ಲೇ ಎಲ್ಲ ತರಹದ ಮನರಂಜನೆ ದೊರಕತೊಡಗಿದಮೇಲೆ, ಟಿವಿಗಳೂ ಸ್ಮಾರ್ಟ್ ಆಗಿವೆ. ಸ್ಥಿರ ಇಂಟರ್ನೆಟ್ ಕನೆಕ್ಷನ್ ಒಂದಿದ್ದರೆ ಸಾಕು, ಆಂಟೆನಾವೂ ಬೇಡ ಡಿಶ್ಶೂ ಬೇಡ: ನೇರ ಅಂತರ್ಜಾಲದಿಂದಲೇ ದೇಶವಿದೇಶಗಳ ಛಾನೆಲ್ಲುಗಳಲ್ಲಿನ ಕಾರ್ಯಕ್ರಮಗಳು, ಕಂಡುಕೇಳರಿಯದ ಭಾಷೆಗಳ ವೆಬ್ ಸೀರಿಸ್ಸುಗಳು, ಬೇಕಾದ ಮನರಂಜನೆಯನ್ನು ಬೇಕಾದಾಗ ನೋಡಬಹುದಾದ ಸೌಕರ್ಯವೀಗ ಇದೆ. ಥಿಯೇಟರಿನಲ್ಲೇ ಬಿಡುಗಡೆಯಾಗುತ್ತಿದ್ದ ಸಿನೆಮಾಗಳು ಈಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಒಟಿಟಿಯೇ ಭವಿಷ್ಯತ್ತು ಎನ್ನಲಾಗುತ್ತಿದೆ. ಹಗಲು-ರಾತ್ರಿಯೆನ್ನದೆ ಸೋಫಾಗೊರಗಿ ಕುಳಿತು ಸಪ್ತಸಾಗರದಾಚೆಯ ಕಥೆಯನ್ನು ಬಿಂಜ್ ವಾಚ್ ಮಾಡುತ್ತಿದ್ದೇವೆ.
 
ಊರಿಗೊಂದಿದ್ದ ಟಿವಿ ಈಗ ಟಿವಿಯಿಲ್ಲದ ಮನೆಯಿಲ್ಲ ಎನ್ನಬಹುದಾದ ಮಟ್ಟ ತಲುಪಿದೆ.  ಕಪ್ಪು-ಬಿಳುಪು ತೆರೆಗಳ ದೊಡ್ಡ ಡಬ್ಬಿಯಂತಹ ಟಿವಿಗಳ ಕಾಲದಿಂದ ಶುರುವಾಗಿದ್ದು ಈಗ ಎಚ್‌ಡಿ, ಅಲ್ಟ್ರಾ ಎಚ್‌ಡಿ, 4ಕೆ ಟಿವಿಗಳಾಗಿ ಅವು ಗೋಡೆಗಂಟಿ ಕುಳಿತಿವೆ. ಟಿವಿಯಲ್ಲಿ ಸಣ್ಣ ಚಿತ್ರ ಬರಬೇಕೆಂದರೂ ಆಕಾಶದೆತ್ತರಕ್ಕೆ ಆಂಟೆನಾ ಏರಿಸಬೇಕಿದ್ದ ಕಾಲದಿಂದ ವೈರ್‌ಲೆಸ್ ಸೆಟ್‌ಟಾಪ್ ಬಾಕ್ಸೊಂದು ಸಾವಿರಾರು ಛಾನೆಲ್ಲುಗಳನ್ನು ಸ್ಟ್ರೀಮ್ ಮಾಡುವ ಬೆರಗಿನ ದಿನಗಳು ಬಂದಿವೆ. ಬೀದಿಗಳೆಲ್ಲ ಮಲಗಿರುವ ರಾತ್ರಿ, ಸುತ್ತಮುತ್ತಲೂ ಕತ್ತಲೆ ಕವಿದಿರುವ ರಾತ್ರಿ, ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ, ದೊಡ್ಡ ಪರದೆಯ ಮಾಯಾಪೆಟ್ಟಿಗೆ ಸೂಸುವ ಬೆಳಕಲ್ಲಿ ಕೂತ ಯುವಕ-ಯುವತಿಯರು ಕ್ರೈಂ ಥ್ರಿಲ್ಲರ್ ಸರಣಿಯನ್ನು ವೀಕ್ಷಿಸುತ್ತಿದ್ದಾರೆ. ಅದೇ ಬೆಳಕಿನ ಬಲದಲ್ಲೇನೋ ಎಂಬಂತೆ ಭೂಮಿ ನಿಧಾನಕ್ಕೆ ತಿರುಗುತ್ತಿದೆ.

[World Television Day ನಿಮಿತ್ತ ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ]

No comments: