Saturday, February 08, 2014

ಫೆಬ್ರವರಿಗೆ ಇಪ್ಪತ್ತೆಂಟೇ ದಿನಗಳು

ಈಗ ಶಾರ್ಪನರಿನ ಗಿರಣಿಗೊಡ್ಡಿದ ಪೆನ್ಸಿಲ್
ಸರಸರನೆ ಕೆತ್ತಬೇಕು. ಹೊರಬಂದ ಸುರುಳಿಯ
ಕೈಯಲ್ಲಿ ಹಿಡಿದು ಮೈಮರೆಯುವ ಹಾಗಿಲ್ಲ.
ಸೀಸದ ಚೂಪಿನ ಸ್ಪರ್ಶಕ್ಕೆಂದೇ ಕಾಯುತ್ತಿರುವ
ಬಿಳಿಹಾಳೆಯ ಕೆನ್ನೆಗೆ ಮೋಸ ಮಾಡುವುದು ಸಲ್ಲ.

ಈಗ ಆಮೆಯೂ ಬೇಗ ಬೇಗ ನಡೆಯಬೇಕು
ರಸ್ತೆ ಮೇಲೆ ಹಾಸಿದ ಅವರೆಯ ಕಾಳಿನ ಸಿಪ್ಪೆಯ
ಅಂದ ನೋಡುತ್ತ ನಿಂತರೆ ಕೆಟ್ಟಂತೆಯೇ ಕೆಲಸ
ಹಾಗೆಲ್ಲ ಕೈ ಮಾಡಿದ್ದಕ್ಕೆಲ್ಲ ನಿಲ್ಲಿಸುವುದಿಲ್ಲ ಬಸ್ಸು
ಅಲ್ಲೂ ಭಾರೀ ಪೈಪೋಟಿ; ಎರಡು ಟಿಕೀಟು
ಗೆದ್ದರೆ ಜಾಸ್ತಿ, ಅದೇ ಪರಮ ಆಸ್ತಿ.

ಅಂಜೂರದ ಹಣ್ಣನ್ನು ಬಿಡಿಸಿದಾಗ ಹುಳುವೊಂದು ಸಿಕ್ಕರೆ
ನಾನು ತಿನ್ನದೇ ಬಿಟ್ಟುಬಿಡುವುದಕ್ಕೆ ಹುಳು ಬದುಕಿಕೊಳ್ಳಲಿ
ಎಂಬ ಸಹಾನುಭೂತಿಯೇ ಕಾರಣ ಎಂದರೆ,
ಸ್ಥಿತಿಯ ನಿಶ್ಚಲತೆಯನ್ನು ಕಲಕಲೂ ಹಿಂಜರಿಯುವವನಿಗೆ
ಅಲೆಮಾರಿಯಾಗುವ ಕನಸೇಕೆ ಎಂದು ಪ್ರಶ್ನಿಸುತ್ತೀ ನೀನು.
ಉಲ್ಕೆಯೊಂದು ಜಾರಿ ಬೀಳುವಾಗ ಕಣ್ಮುಚ್ಚಿ ನಿಲ್ಲುವ
ನಾಸ್ತಿಕನನ್ನು ತೋರಿಸಿ ಮುಗುಳ್ನಗುತ್ತೇನೆ ನಾನು.

ನಿನ್ನ ಸ್ಥಾನದಲ್ಲಿ ನಾನು - ನನ್ನ ಸ್ಥಾನದಲ್ಲಿ ನೀನು
ನಿಂತು ನೋಡಬೇಕು ಎನ್ನುವುದೆಲ್ಲ ಬಾಯಿಮಾತಾಯ್ತು.
ನಿನ್ನಿಷ್ಟದ ಬದನೆಯ ಎಣ್ಣೆಗಾಯಿ ನನಗೆ ಅಲರ್ಜಿ
ನನ್ನಿಷ್ಟದ ಅರಿಶಿಣ ಕೊಂಬಿನ ತಂಬುಳಿ ನಿನಗೆ ಸೇರದು
ಸ್ಥಾನಮಾನಗಳ ಕತೆಯೆಲ್ಲ ಆಮೇಲೆ, ಮೊದಲು ಇವತ್ತಿನ
ಅಡುಗೆಗೆ ಏನು ಎಂಬುದಾಗಬೇಕು ನಿಷ್ಕರ್ಷೆ.

ತಿರುಮಲೇಶರು ಹೇಳಿದ್ದು, ಅಬೀಡ್ಸಿನಲ್ಲಿ ರಸ್ತೆಯನ್ನು
ದಾಟುವುದು ಕಷ್ಟ ಎಂದೇ ಹೊರತು
ವಾಹನಗಳಗುಂಟ ಬಿರಬಿರನೆ ನಡೆಯುವುದೇನಲ್ಲ
ಹೀಗೆ ನಡುರಸ್ತೆಯಲ್ಲಿ ವಾದ ಮಾಡುತ್ತ ನಿಂತರೆ ಹೇಗೆ?
ಫೆಬ್ರವರಿಗೆ ಇಪ್ಪತ್ತೆಂಟೇ ದಿನಗಳು
ಸಿಕ್ಕ ತರಕಾರಿ ಕೊಂಡು ನಡೆಯೋಣ ಬೇಗ ಮನೆಗೆ
ಉಳಿದರೆ ಸಮಯ, ಇದ್ದೇ ಇದೆ ಮಾತು-ಕತೆ-ಕಲಾಪ
ಎಂದಿಗೂ ಮುಗಿಯದ ನಮ್ಮಿಬ್ಬರ ವ್ಯರ್ಥಾಲಾಪ.


[ಫೆಬ್ರವರಿ 2012ರ  'ಮುಗುಳು' ಪತ್ರಿಕೆಯಲ್ಲಿ ಪ್ರಕಟಿತ]

7 comments:

Sandeepa said...

ಅದ್ಭುತ! ಆಹಾ!

ಸಿಂಧು sindhu said...

ಸುಶ್ರುತ..
ಕವಿತೆ ಚೆನಾಗಿದೆ.

ಅವರೆ ಕಾಳಿನ ಸಿಪ್ಪೆಯಂದ ಮತ್ತು
ಅಂಜೂರದೊಳಗಿನ ಹುಳ..
ಏನೇನೋ ನೆನಪು ಹೊತ್ತು ತಂದುಬಿಟ್ಟಿತು.

ಪುಟ್ಟ ಊರಿನ ಟಾರು ರಸ್ತೆಯಿಂದ
ಇನ್ನೂ ಪುಟ್ಟ ಊರಿನ ಮಣ್ಣುರಸ್ತೆಗೆ
ಸೈಕಲ್ಲು ಸವಾರಿ ಬ್ಯಾಲನ್ಸು ಮಾಡುವ ಹುಡುಗ
ಮೆಟ್ರೋ ಬೋಗಿಗಳನ್ನ ಸರಾಗವಾಗಿ ಬದಲಿಸುವ ಸ್ಪೀಡು ನೆನಪಾಯಿತು.
ಬೆಳೆಯುತ್ತ ಬೆಳೆಯುತ್ತ
ನಮ್ಮ ಮುಗ್ಧ ಕಲ್ಪನೆಗಳ ಸಿಪ್ಪೆಯನ್ನು ದಾರಿಬದಿಗೆ ಬಿಟ್ಟು
ಒಳಗಿನ ಕೊರಗನ್ನೂ ಅಲ್ಲೆ ಬದುಕಲು ಬಿಟ್ಟು
ಕಾಲ ತುಂಬ ಸ್ಪೀಡು ಎಂದು ಬಜಾಯಿಸುವ
ಹುಲಿಸವಾರಿ ಮಾಡಬೇಕು.

ತರಕಾರಿ ತಗೊಳ್ಳಲು ಏನೇ ಗೊಂದಲವಿದ್ದರೂ
ನಿನ್ನ ಕವಿತೆಯ ಪಾಕ ಹದವಾಗಿದೆ.

ಪ್ರೀತಿಯಿಂದ,
ಸಿಂಧು

ದುರಹಂಕಾರಿ said...

"ಸ್ಥಿತಿಯ ನಿಶ್ಚಲತೆಯನ್ನು ಕಲಕಲೂ ಹಿಂಜರಿಯುವವನಿಗೆ
ಅಲೆಮಾರಿಯಾಗುವ ಕನಸೇಕೆ ಎಂದು ಪ್ರಶ್ನಿಸುತ್ತೀ ನೀನು.
ಉಲ್ಕೆಯೊಂದು ಜಾರಿ ಬೀಳುವಾಗ ಕಣ್ಮುಚ್ಚಿ ನಿಲ್ಲುವ
ನಾಸ್ತಿಕನನ್ನು ತೋರಿಸಿ ಮುಗುಳ್ನಗುತ್ತೇನೆ ನಾನು."

ಇವತ್ತು ದೋಸೆಹಿಟ್ಟಿಗೆ ಹದ ಬಂದು ಬಿಟ್ಟಿದೆ!
:)

Suma Udupa said...

ನೀವು ಲಲಿತ ಪ್ರಬಂಧ ಬರೆಯದೆ ಬಹಳ ಕಾಲ ಅಯ್ತು. ಕವಿತೆಯ ಕೃಷಿಯಲ್ಲಿ ಅದನ್ನು ಮರೆಯಬೇಡಿ. ನನ್ನಂತೆ ಹಲವರು ನಿಮ್ಮ ಪ್ರಬಂಧಕ್ಕೆ ಕಾಯುತಿರಬಹುದು. :)

-ಸುಮ.

ಅರವಿಂದ said...

ಬಹಳ ಚನ್ನಾಗಿದೆ

ಮಹಿಮಾ said...

ahaa!! odisikondu hogutte!! chandavide!!

@spn3187 ಕನ್ನಡಿಗ ಶಿವಕುಮಾರ ನೇಗಿಮನಿ said...

28 ದಿನಗಳು ಸುಂದರ
..
http://spn3187.blogspot.in
ಅಥವಾ
http://bit.ly/1tOXv19