ಬಿಸಿಲು.. ಹಂಸತೂಲಿಕಾತಲ್ಪದ ಮೇಲೆ ಮುದುಡಿ ಮಲಗಿದ್ದ ರಾಜಕುವರಿಯಂಥ ಚೆಲುವೆಯ ಕೆನ್ನೆ ಮೇಲೆ ಎಳೆಕಿರಣಗಳನ್ನು ಹೊಳೆಸಿ ಎಬ್ಬಿಸಿ ಬೆಳಗಾಗಿಸಿದ ಬಿಸಿಲು.. ಬೆಚ್ಚನೆಯ ಗೂಡಿನ ಮೆತ್ತನೆಯ ಹಾಸಿನ ಮೇಲೆ ಕಂದಮ್ಮಗಳೊಂದಿಗೆ ತಂಗಿದ್ದ ಅಮ್ಮ ಹಕ್ಕಿಗೆ ಕಾಳು ತರುವ ನೆನಪು ತರಿಸಿದ ಬಿಸಿಲು.. ರಾತ್ರಿಯಿಡೀ ಕತ್ತು ತಿರುಗಿಸಿ ತಿರುಗಿಸಿ ದಣಿದಿದ್ದ ಮುದಿ ಗೂಬೆ ಹಕ್ಕಿಗೆ ಬೆಳಗಾದ ಸುದ್ದಿ ಹೇಳಿ ವಿರಾಮ ಒದಗಿಸಿದ ಬಿಸಿಲು.. ಪ್ರತಿದಿನ ಬರುವ ಬಿಸಿಲು. ಪ್ರತಿ ರಾತ್ರಿಗೆ ಇತಿಶ್ರೀ ಹಾಡುವ ಬಿಸಿಲು. ಪ್ರತಿ ಪರ್ಣದಲ್ಲಿ ಪತ್ರಹರಿತ್ತು ತುಂಬುವ ಬಿಸಿಲು.
ಮಳೆಯ ಹಾಗಲ್ಲ ಬಿಸಿಲು. ಚಳಿಯ ಹಾಗಲ್ಲ ಬಿಸಿಲು. ಮಳೆ ಬಾರದೆ ಹೋಗಬಹುದು. ಚಳಿ ಬೀಳದೆ ಹೋಗಬಹುದು. ಆದರೆ ಬಿಸಿಲು ಹಾಗಲ್ಲ. ಅದು ಎಲ್ಲ ದಿನ ಬರುತ್ತದೆ ಕಿರಣಗಳನ್ನು ಹೊತ್ತು. ಅದು ಸೂರ್ಯನಿಷ್ಠೆ. ಕುವೆಂಪು ಹಾಡಿದಂತೆ: ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ..
ಸೂರ್ಯೋದಯಕ್ಕಿಂತ ಮೊದಲು ಅರುಣೋದಯ. ಮೂಡಲ ಮನೆಯ ಗೋಡೆಗೆ ಕೆಂಬಣ್ಣ ಬಳಿಯುತ್ತ ಬರುವ ಅವ.. ಆ ಕೆಂಪ ಹಿನ್ನೆಲೆಯಲ್ಲಿ ಗಿಳಿವಿಂಡು ಹಾರುತ್ತ ಹೋದಂತೆ, ತಾನ್ ಮೇಲೇರಿ ಬರುತ್ತಾನೆ ರವಿ.. ದಿನವರಳಿದ ಜಗದ ತುಂಬ ಅವಸರ ಈಗ. ಎಲ್ಲರಿಗು ತರಾತುರಿ. ಪೇಪರ್ ಹುಡುಗರು, ಹಾಲಿನ ಹುಡುಗರು, ಹೂವಿನ ಹುಡುಗಿಯರು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಳ್ಳದಂತೆ ಕಾಯುತ್ತದೆ ಬಿಸಿಲು. ಪಾರ್ಕಿನ ಗಾರ್ಡುಗಳು ಜಾಗಿಂಗ್ಗೆ ಬರುವ ದಪ್ಪ ಮನುಷ್ಯರನ್ನು ಆಕಳಿಸುತ್ತ ಒಳಬಿಟ್ಟುಕೊಳ್ಳುವಾಗ ಅವರ ಬಾಯೊಳಗೂ ಪ್ರವೇಶಿಸುತ್ತದೆ ಬಿಸಿಲು. ದೊಡ್ಡ ಅಪಾರ್ಟ್ಮೆಂಟ್ ಬಿಲ್ಡಿಂಗಿನ ಬೇಸ್ಮೆಂಟ್ ಫ್ಲೋರಿನ ಕಾರ್ ಗರಾಜಿನಲ್ಲಿ ಮಲಗಿದ್ದ ಸೆಕ್ಯುರಿಟಿಯವನ ಮೈಮೇಲೂ ಬಿದ್ದು ಅವನನ್ನೂ ಎಚ್ಚರಿಸುತ್ತದೆ ಬಿಸಿಲು. ಕೋಲು ಹಿಡಿದ ಗೊಲ್ಲ ಕೂಗುತ್ತ ಹೋಗುತ್ತಾನೆ ಹಳ್ಳಿಯ ಮನೆ ಮನೆ ಮುಂದೆ: ದನ ಹೊಡಿರೋ...
ದನದ ಮಂದೆ ಬೆಟ್ಟದ ಹುಲ್ಲುಗಾವಲಿನತ್ತ ಸಾಗುತ್ತ ಸಾಗುತ್ತ ಹೋದಹಾಗೆ ಬಿಸಿಲು ಏರುತ್ತ ಏರುತ್ತ ಹೋಗುತ್ತದೆ. ಸೂರ್ಯ ಮೇಲೇರಿದಷ್ಟೂ ಬಿಸಿಲಿನ ಪ್ರಖರತೆ ಹೆಚ್ಚು. ಅಮ್ಮ ಈಗ ಸಂಡಿಗೆ ಹಚ್ಚಿದ ಚಾಪೆಯನ್ನು ಅಂಗಳದಲ್ಲಿ ತಂದು ಹಾಸುತ್ತಿದ್ದಾಳೆ. ತೊಳೆದ ಬಟ್ಟೆಗಳನ್ನು ತಂದು ಟೆರೇಸಿನಲ್ಲಿ ಒಣಗಿಸುತ್ತಿದ್ದಾಳೆ ಕೆಲಸದವಳು. ತನ್ನ ಕ್ಯಾಬಿನ್ನಿನ ಎ.ಸಿ. ಆನ್ ಮಾಡುವಂತೆ ಹೇಳುತ್ತಿದ್ದಾನೆ ಬಾಸ್ ಆಫೀಸ್ ಬಾಯ್ಗೆ. "ಅರೆ, ಇದೇನಣ್ಣ ಬಿಸಿಲು ಹಿಂಗೆ ಏರ್ತಿದೆ?" ಕೇಳುತ್ತಾನೆ ದಾರಿಹೋಕ ಎಳನೀರಿನವನಿಗೆ. ದೊಡ್ಡ ರಾಶಿಯಿಂದ ಸರೀ ಸೀಯಾಳ ಹುಡುಕಿ ತೆಗೆಯುತ್ತ ಉತ್ತರಿಸುತ್ತಾನೆ ಎಳನೀರಿನವ: "ಬೇಸಿಗೆ ಅಲ್ವೇನಣ್ಣೋ.."
ಬಿಸಿಲಿಗೆ ಬೇಸಗೆಯಲ್ಲಿ ಹಬ್ಬ. ಎಲ್ಲರೂ ತನಗೆ ಹೆದರುವವರೇ! ಮೀಸೆ ತಿರುವುತ್ತಾನೆ ಸೂರ್ಯ. ಆತ ವರ್ಷ, ಶರದ್, ಹೇಮಂತ, ಶಿಶಿರ -ಅಂತ ಹೆಚ್ಚುಕಮ್ಮಿ ನಾಲ್ಕು ಋತು ಕಾದಿದ್ದಾನೆ. ಇದೀಗ ತನ್ನ ಮಹಿಮೆಯನ್ನು ತೋರಿಸುವ ಸಮಯ. "ಈ ಸಲ ಮಳೆ ಸರಿಯಾಗಿ ಆಗ್ಲೇ ಇಲ್ಲ", "ಯಾಕೋಪ್ಪ, ಈ ವರ್ಷ ಚಳೀನೇ ಬೀಳ್ಲಿಲ್ಲ" ಇತ್ಯಾದಿ ದೂರುಗಳು ಅವನಿಗೂ ಕೇಳಿಸಿವೆ. ಹಾಗಂತ ಆತ ಹಿಂಜರಿದು ಕೂತಾನೆಯೇ? ಇಲ್ಲ.. ಮಳೆಗಾಲದಲ್ಲಿ ಮಳೆ ಬರಲಿ ಬಾರದಿರಲಿ, ಚಳಿಗಾಲದಲ್ಲಿ ಚಳಿ ಬೀಳಲಿ ಬೀಳದಿರಲಿ; ಆದರೆ ಬೇಸಗೆಯಲ್ಲಿ ಬಿಸಿಲು ಮಾತ್ರ ಇರಲೇಬೇಕು. ಅದು ಸೂರ್ಯನಿಷ್ಠೆ!
ವಾಚು ನೋಡಿಕೊಳ್ಳುತ್ತಿರುವ ಸೂರ್ಯ, ಗಂಟೆ ಹನ್ನೆರಡು ದಾಟಿದ್ದೇ ಈಗ ಸೀದ ನೆತ್ತಿಗೆ ಬಂದಿದ್ದಾನೆ. ಕಟ್ಟಿಗೆ ಒಡೆಯುತ್ತಿರುವ ಆಳಿನ ಬರಿಮೈಯಿಂದ ಅದೇನದು ಹಾಗೆ ದಂಡಿದಂಡಿ ಇಳಿಯುತ್ತಿರುವುದು? ಬಸ್ಸಿಗಾಗಿ ಗಂಟೆಯಿಂದ ಕಾಯುತ್ತಿರುವ ಗೃಹಿಣಿ ಅದೇನದು ನಿಮಿಷಕ್ಕೊಮ್ಮೆ ಕರ್ಚೀಫಿನಿಂದ ಒರೆಸಿಕೊಳ್ಳುತ್ತಿರುವುದು? ಬೈಕಿನಲ್ಲಿ ಊರೆಲ್ಲ ಸುತ್ತಿದ ಸೇಲ್ಸ್ಬಾಯ್ನ ಅಂಗಿಯೇಕೆ ಹಾಗೆ ಒದ್ದೆಮುದ್ದೆಯಾಗಿದೆ? ಎಲ್ಲಕ್ಕು ಉತ್ತರ ಬೆವರು! ಎಲ್ಲಕ್ಕು ಕಾರಣ ಅಗೋ, ಅಲ್ಲಿ ನೆತ್ತಿಯಲ್ಲಿ ಉರಿಯುತ್ತಿರುವ ಬೆಂಕಿಯುಂಡೆ. ಕಣ್ಬಿಟ್ಟು ನೋಡಲೂ ಆಗದಷ್ಟು ಪ್ರಜ್ವಲತೆ.
ಜ್ಯೂಸ್ ಅಂಗಡಿಯವನ ಮಿಕ್ಸರುಗಳಿಗೀಗ ಬಿಡುವೇ ಇಲ್ಲ. ಒಂದಾದ ತಕ್ಷಣ ಮತ್ತೊಂದು ಜಾರ್ ತೊಳೆದು, ಕತ್ತರಿಸಿದ ಹಣ್ಣು ಹಾಕಿ ಗುರ್ಗುಡಿಸುತ್ತಾರೆ ಹುಡುಗರು. ಐಸ್ಕ್ಯಾಂಡಿಯವನ ನೀಲಿಡಬ್ಬಿ ನೋಡನೋಡುತ್ತಲೇ ಖಾಲಿಯಾಗಿದೆ. ರಸ್ತೆಬದಿಯಲ್ಲಿ ಹಾಕಿಕೊಂಡಿರುವ ಕಲ್ಲಂಗಡಿ ರಾಶಿ ಮುಂದೆ ಜನವೋ ಜನ. ನಂದಿನಿ ಕೌಂಟರಿನವನು ನಿನ್ನೆಯೇ ಹೇಳಿ ತರಿಸಿದ್ದಾನೆ ನೂರು ಪ್ಯಾಕ್ ಎಕ್ಸ್ಟ್ರಾ ಮಸಾಲಮಜ್ಜಿಗೆ. "ಕೋಲ್ಡ್ ಬಿಸ್ಲೇರಿ ಖಾಲಿಯಾಗಿದೆ" ಅಂದಿದ್ದಕ್ಕೆ "ಇಟ್ಸೋಕೆ. ವಾರ್ಮೇ ಕೊಡಿ" ಅಂತ ಇಸಕೊಂಡು, ಅಲ್ಲೇ ಬಾಟಲಿಯ ಮುಚ್ಚಳವನ್ನು ಕರಕರನೆ ತಿರುಗಿಸಿ ತೆರೆದು ಕುಡಿಯುತ್ತಿದ್ದಾನೆ ಗ್ರಾಹಕ. ಐಪಿಎಲ್ ಟ್ವೆಂಟಿಟ್ವೆಂಟಿಯ ಟೈಮ್ಔಟಿನಲ್ಲಿ ಸ್ಲೈಸು, ಮಾಜಾಗಳನ್ನು ‘ಸರ್ ಉಠಾಕೆ’ ಕುಡಿಯುತ್ತಿದ್ದಾರೆ ಕ್ರೀಡಾಪಟುಗಳು. ಆದರೂ ಹಿಂಗುತ್ತಿಲ್ಲವಲ್ಲ ದಾಹ, ಇದೆಂತಹ ಬಿಸಿಲು..
ಪಾರ್ಕಿನಲ್ಲಿ ಚಿಮ್ಮುತ್ತಿರುವ ಕಾರಂಜಿಯಲ್ಲಿ ರೆಕ್ಕೆಗಳನ್ನು ಫಡಫಡಿಸುತ್ತ ಮೀಯುತ್ತಿದೆ ಯಾವುದೋ ಒಂದು ಹಕ್ಕಿ. ಆ ತುಂತುರಿಂದ ಹಾದ ಬೆಳಕು ಪಕ್ಕದ ಮರದ ಗೆಲ್ಲುಗಳ ಮೇಲೆ ಮೂಡಿಸಿರುವ ಸಣ್ಣ ಕಾಮನಬಿಲ್ಲು ಯಾರ ಕಣ್ಣಿಗೂ ಬೀಳದೆಹೋಗುತ್ತಿದೆ. ಮಕ್ಕಳೆಲ್ಲ ಹಾರಿಕೊಂಡಿದ್ದಾರೆ ಈಜುಕೊಳದಲ್ಲಿ. ಬಿಂದಿಗೆ ಬಿಂದಿಗೆ ತಣ್ಣೀರನ್ನು ಮೈಮೇಲೆ ಹೊಯ್ದುಕೊಳ್ಳುತ್ತ ಕುಣಿದಾಡುತ್ತಿದ್ದಾನೆ ರಜೆಯ ಮಜದಲ್ಲಿರುವ ಯುವಕ. ಕಾಗೆ ಹಾರಿಸಲು ಬಂದಿದ್ದ ಗೃಹಿಣಿ ಒಂದೆರಡು ಹಪ್ಪಳ ಮುಟ್ಟಿನೋಡಿ ಇವತ್ತು ಸಂಜೆಯೇ ತೆಗೆಯಬಹುದು ಅಂತ ತೀರ್ಮಾನಿಸಿದ್ದಾಳೆ. ಕತ್ತಲ ಒಳಮನೆಯಲ್ಲೀಗ ನೆಲದಿಂದ ಸೂರಿನ ಗವಾಕ್ಷಿಯವರೆಗೆ ಒಂದು ಬೆಳಕಕೋಲು ನೆಟ್ಟುನಿಂತಿದೆ. ಸ್ನಾನ ಮಾಡಿ ಮಲಗಿಸಿದ್ದ ಹಸಿಗೂಸಿಗೆ ಎಚ್ಚರಾಗಿ ಅಂಬೆ ಹರಿದುಕೊಂಡು ಬಂದು ಈ ಬಿಸಿಲಕೋಲನ್ನು ಕೈಚಾಚಿ ಅಚ್ಚರಿಯಿಂದ ಮುಟ್ಟುತ್ತಿದೆ. ಬತ್ತುತ್ತಿರುವ ಈ ನದಿಯಿಂದ ಬೇರೆ ದೊಡ್ಡ ನದಿಗೆ ಆದಷ್ಟು ಬೇಗ ಸೇರಿಕೊಳ್ಳುವ ತವಕದಲ್ಲಿ ಈಜುತ್ತಿದೆ ಒಂದು ಒಂಟಿಮೀನು. ವಿಧಾನಮಂಡಳದ ಕಲಾಪದ ನಡುವೆಯೇ ದಣಿವಿಗೆ ನಿದ್ರೆ ಹೋಗಿದ್ದಾರೆ ಯಾರೋ ಸಚಿವರು. ಇದೇ ಅವಕಾಶ ನೋಡಿ ಅವರ ಫೋಟೋ ತೆಗೆಯುತ್ತಿದ್ದಾನೆ ಫೋಟೋ ಜರ್ನಲಿಸ್ಟ್.
ಗಂಟೆಯೀಗ ಮೂರಾಗಿದೆ. ಪಶ್ಚಿಮದತ್ತ ಜಾರಲೋ ಬೇಡವೋ ಎಂದು ಯೋಚಿಸುತ್ತಿರುವ ಸೂರ್ಯನ ಬ್ಯಾಟಿಂಗ್ ಇನ್ನೂ ಬಿರುಸಿನಿಂದಲೇ ಸಾಗಿದೆ. ಗೊಲ್ಲರ ಹುಡುಗ ಈಗ ದನಕರುಗಳನ್ನೆಲ್ಲ ತಪ್ಪಲಲ್ಲಿ ಮೇಯಲು ಬಿಟ್ಟು ತಾನೊಂದು ಮರದ ತಣ್ಣೆಳಲ್ಲಿ ಮಲಗಿ ನಿದ್ದೆ ಹೋಗಿದ್ದಾನೆ. ಇಂದಾದರೂ ಮಳೆ ಬಂದೀತೆ ಎಂದು ಮುಗಿಲಿನತ್ತ ಕೈ ಅಡ್ಡ ಹಿಡಿದು ತಲೆಯಿತ್ತಿ ನೋಡುತ್ತಿದ್ದಾನೆ ಉತ್ತರ ಕರ್ನಾಟಕದ ರೈತ. ಊಹುಂ, ಮೋಡಗಳ ಸುಳಿವೇ ಇಲ್ಲ. ಮರದ ಒಂದೆಲೆಯೂ ಅಲ್ಲಾಡುತ್ತಿಲ್ಲ. ಮದುವೆಗೆ ಹೆದರಿದ ಕಪ್ಪೆಗಳು ಎಲ್ಲೋ ಕಲ್ಲಸಂದಿಯಲ್ಲಿ ಅಡಗಿ ಕೂತಿವೆ. ಆಫೀಸಿನಲ್ಲಿರುವವರಿಗೂ ತೂಕಡಿಕೆ ಬರುತ್ತಿದೆ. ಯಾಕೋ ಸುಮ್ಮನೆ ಸುಸ್ತು. ಮಧ್ಯಾಹ್ನ ಊಟ ಮಾಡಲೂ ಸೇರಲಿಲ್ಲ. ತುಂಬಿ ತಂದಿಟ್ಟುಕೊಂಡ ಬಾಟಲಿಯಲ್ಲಿನ ನೀರು ಇದ್ದಲ್ಲೇ ಬಿಸಿಯಾಗಿದೆ. ದೇವಸ್ಥಾನದ ಕಲ್ಲು ಹಾಸಿನಮೇಲೆ ಬರಿಗಾಲಲ್ಲಿ ನಡೆಯುತ್ತಿರುವ ದಂಪತಿಗಳ ಕಾಲು ಚುರುಕ್ ಎಂದಿದೆ. ಭಟ್ಟರು ಪರ್ಜನ್ಯ ಮಾಡಿಸುವ ಯೋಚನೆ ಮಾಡುತ್ತಿದ್ದಾರೆ. ಸ್ಕೂಲ್ ಮುಗಿಸಿ ಹೊರಟ ಹುಡುಗನ ಸೈಕಲ್ಲಿನ ಚಕ್ರಕ್ಕೆಲ್ಲ ಟಾರು ರಸ್ತೆಯ ಡಾಂಬರು ಕರಗಿ ಅಂಟಿದೆ. ರಸ್ತೆ ಬದಿಯಲ್ಲಿ ನಿಂತು ಬಗ್ಗಿ ನೋಡಿದರೆ ದೂರ, ಭುವಿಯೊಳಗಿನ ನೀರೇ ಆವಿಯಾಗುತ್ತಿರುವಂತೆ ಹಬೆಯಾಡುವುದು ಕಾಣಿಸುತ್ತದೆ.
ಸಂಜೆಯಾಗುವ ಲಕ್ಷಣಗಳು ಈಗ.. ಊಹುಂ, ಸೂರ್ಯನ ಪ್ರತಾಪವಿನ್ನೂ ಮುಗಿದಿಲ್ಲ. ಒಂದು ನಕ್ಷತ್ರದ ಒಡಲಲ್ಲಿ ಅದೆಷ್ಟು ಬೆಂಕಿ ಹಾಗಾದರೆ? ಅಳಿದುಳಿದ ಕಿರಣಗಳನ್ನೆಲ್ಲ ಬೀಸುತ್ತಿದ್ದಾನೆ ಸೂರ್ಯ.. ಉದುರಿದ ಎಲೆಗಳ ಮೇಲೆ ಭಾರ ಹೆಜ್ಜೆಗಳನ್ನಿಡುತ್ತ ನಡೆದಿರುವ ಮುದುಕನೇ, ಪಡುವಣ ಬಾನಂಚಿನಲ್ಲಿ ಹೊಳೆಯುತ್ತಿರುವ ದಿನಕರನನ್ನು ನೋಡದಿರು.. ಮೊದಲೇ ಮಂಜಾಗಿರುವ ನಿನ್ನ ಕಣ್ಣು ಸುಟ್ಟುಹೋದೀತು. ಒಂದು ಬೇಸಗೆಯ ಈ ಒಂದು ದಿನ ಅದೆಷ್ಟು ನೀರು ಕುಡಿದರು ಜನ? ಎಷ್ಟು ಬೆವರು ಹರಿಸಿದರು? ಅವರು ಹಾಕಿದ ಶಾಪಗಳೆಲ್ಲ ಸೂರ್ಯನ ಯಜ್ಞಕುಂಡಕ್ಕೆ ತುಪ್ಪವಾಯಿತೆ? ಅವರು ಬಿಟ್ಟ ನಿಟ್ಟುಸಿರೆಲ್ಲ ಉರಿವ ಬೆಂಕಿಗೆ ಧೂಪವಾಯಿತೆ? ಪ್ರಶ್ನೆಗಳು ಮುಗಿಯುವ ಮೊದಲೇ ಮರೆಯಾಗುತ್ತಿದ್ದಾನೆ ಸೂರ್ಯ..
ಕತ್ತಲಾವರಿಸಿದರೂ ಸೆಖೆಯೇನು ಕಮ್ಮಿಯಾಗಿಲ್ಲ.. ಕೊಟ್ಟಿಗೆಗೆ ಮರಳಿದ ಜಾನುವಾರು ಬಕೀಟುಗಟ್ಟಲೆ ನೀರು ಕುಡಿಯುತ್ತಿವೆ. ಕೆಲಸ ಮುಗಿಸಿ ಮನೆಗೆ ಬಂದವರೆಲ್ಲ ಬೆವರ ವಾಸನೆಯ ಬಟ್ಟೆ ಬಿಚ್ಚೊಗೆದು ಫ್ಯಾನಿನ ಕೆಳಗೆ ಅಂಗಾತ ಬಿದ್ದಿದ್ದಾರೆ. ಇಂದು ರಾತ್ರಿಯ ಊಟಕ್ಕೆ ನೀರುಮಜ್ಜಿಗೆ ಸಾಕು. ಹೆಚ್ಚೆಂದರೆ ಒಂದು ಹುಣಸೇಹಣ್ಣಿನ ಗೊಜ್ಜು. ಬಿಸಿಬಿಸಿಯ ಸಾರು-ಹುಳಿ ಯಾರಿಗೂ ಬೇಡ. ಜ್ವರ ಬರುತ್ತೆ ಅಂತ ಹೆದರಿಸಿದರೂ ಕೇಳುತ್ತಿಲ್ಲ, ಮಗಳು ಫ್ರಿಜ್ ವಾಟರೇ ಬೇಕೆಂದು ಹಟ ಮಾಡುತ್ತಿದ್ದಾಳೆ. ರಸ್ತೆಯ ಮೇಲೆ ಕಾರ್ಪೋರೇಶನ್ ನೀರಿಗೆ ಕಾದ ಸಾಲು ಕೊಡಗಳು. ಪಕ್ಕದ ಮನೆಯ ಬ್ಯಾಚುಲರ್ ಹುಡುಗರು ಟೆರೇಸಿನ ಮೇಲೆ ಚಾಪೆ ಹಾಸಿ ಮಲಗುತ್ತಿದ್ದಾರೆ. ಲೋಡ್ ಶೆಡ್ಡಿಂಗ್ ಅಂತೆ, ಕರೆಂಟ್ ಹೋಯ್ತು. ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಾಳೆ ಕೊಡಬೇಕಿರುವ ಲೆಕ್ಚರಿಗೆ ತಯಾರಾಗುತ್ತಿದ್ದ ಪ್ರೊಫೆಸರ್ ಉಫ್ ನಿಟ್ಟುಸಿರು ಬಿಡುತ್ತಿದ್ದಾರೆ. ಬಿಸಿಗಾಳಿ ಬೀಸುತ್ತಿದ್ದ ಫ್ಯಾನೂ ಇಲ್ಲ ಈಗ. ನಿದ್ರೆ ಬಾರದೆ ಹೊರಳಾಡುತ್ತಿರುವ ಎಲ್ಲ ಜೀವಗಳ ತಪನೆ ಒಂದೇ: ಬೀಸಿಬರಬಾರದೆ ಒಂದು ಹೊಯ್ಲು ತಣ್ಣನೆ ಗಾಳಿ? ಇದ್ದಕ್ಕಿದ್ದಂತೆ ಸುರಿಯಲು ಶುರುವಿಡಬಾರದೇ ಒಂದು ಅಡ್ಡಮಳೆ?
ಊಹುಂ, ಬೇಸಗೆಯ ಬವಣೆಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮರುಮುಂಜಾನೆ ಮತ್ತೆ ಅದೇ ಹಾಳು ಸೂರ್ಯ ಹುಟ್ಟುತ್ತಿದ್ದಾನೆ. ಬಿದ್ದ ಇಬ್ಬನಿಯಿಂದ ಕೊಂಚ ತಣ್ಣಗಾಗಿದ್ದ ಭುವಿಯ ತಂಪು ಕಸಿಯಲು ಮತ್ತೆ ಬರುತ್ತಿದ್ದಾನೆ. ಇನ್ನೇನು, ಬಿಸಿಲ ಬಲೆ ಬೀಸಲಿದ್ದಾನೆ..
[ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ]
Monday, April 12, 2010
Tuesday, April 06, 2010
ಬೆಳಕ ಹೆಜ್ಜೆಯನರಸಿ...
ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನನ್ನ ಕಥೆ ಓದಿ, ಅದು ಹೇಗೋ ವಿಳಾಸ ಪತ್ತೆ ಮಾಡಿ ಪತ್ರ ಬರೆದಿದ್ದ, ಸಿರಗುಪ್ಪದ ವಿ. ಹರಿನಾಥ ಬಾಬು ತಮ್ಮ ಚೊಚ್ಚಿಲ ಕವನ ಸಂಕಲನ 'ಬೆಳಕ ಹೆಜ್ಜೆಯನರಸಿ' ಕಳುಹಿಸಿಕೊಟ್ಟಿದ್ದಾರೆ. ಸಧ್ಯ ಗಂಗಾವತಿಯಲ್ಲಿ ಉಪ ಖಜಾನಧಿಕಾರಿಯಾಗಿರುವ ಬಾಬು ಅವರ ಕವಿತೆಗಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತವೆ. ಎಲ್ಲ ಉತ್ತರ ಕರ್ನಾಟಕದ ಕವಿಗಳಂತೆ ಬಾಬು ಅವರ ಕವಿತೆಗಳಲ್ಲೂ ಬಿಸಿಲು, ಕರಿಮಣ್ಣು, ಅವ್ವ, ರೊಟ್ಟಿ, ಬಡತನ, ಹಟ್ಟಿ, ಹಸಿವು, ಜಾತಿ, ಜೀತಗಳಿವೆ. ರಾಜಕಾರಣಿಗಳ ಭ್ರಷ್ಟತೆಯೆಡೆಗಿನ ಪ್ರತಿಭಟನೆಯಿದೆ. ಮತ-ಧರ್ಮಗಳಂಥ ವಿಷಯಗಳ ಮುಂದೆ ಮೌಲ್ಯ ಕಳೆದುಕೊಳ್ಳುತ್ತಿರುವ ಮಾನವೀಯತೆಯ ಬಗ್ಗೆ ತುಡಿತವಿದೆ. ದೊಡ್ಡ ದೇಶಗಳು ಯುದ್ಧದಂಥ 'ಆಟ' ಆಡಿಸುವುದರಿಂದ ಆಗುವ ಹಾನಿಗಳೆಡೆಗೆ ಬೆಳಕು ಚೆಲ್ಲುವ ಪ್ರಯತ್ನವಿದೆ.
"ಬತ್ತಿದ ಮೊಲೆಯ ತಾಯಂದಿರು ಬಂದೂಕುಗಳ ಹಿಡಿದು ಒಲೆ ಹಚ್ಚಿದರೆ / ಅನ್ನದ ಡಬರಿಯಲಿ ತಮ್ಮದೇ ಕೂಸುಗಳು ಕುದಿಯುತ್ತಿವೆ ಕೊತ ಕೊತ / ಸಣ್ಣ ಕರುಳು, ಬೋಟಿ, ಖಲೀಜ" -ದಂತಹ ಬೆಚ್ಚಿ ಬೀಳಿಸುವ ರೂಪಕಗಳನ್ನು ಕಟ್ಟುವ ಬಾಬು, "ಇನ್ನೆಷ್ಟು ದಿನ ಮಿಸುಕಾಡದ ದೇವರುಗಳ ಮುಂದೆ ಹರಕೆ ಹೊರುವುದು / ಹೊಲಸು ಹಾದಿಗಳ ಮೇಲೆ ಚಿಂದಿಯುಟ್ಟು ಉರುಳುವುದು / ತಲೆ ಬೋಳಿಸಿಕೊಳ್ಳುವುದು / ಸತ್ತ ಮೇಲೂ ಸಾಯುವುದು?" ಅಂತ ಪ್ರಶ್ನಿಸುತ್ತಾರೆ. "ನಮ್ಮವರ ಬಣ್ಣ ರೊಕ್ಕ ಇದ್ದ ಧಣಿಗಳ ತಾಕ ಜೀತಕ್ಕಿಟ್ಟೈತಿ / ಹುಟ್ಟಿದಾಗಿಂದ ಜಾತಿ ಒಲಿಯಾಗ ಬಡತನದ ಬೆಂಕ್ಯಾಗ ಸುಟ್ಟು ಕರಕಲಾಗೈತಿ / ಸಾಯೋಗಂಟ ಅದೇ ನಿಜ ಆಗೈತಿ" ಎಂದು ಬರೆಯುವಾಗ ಅವರಲ್ಲಿರುವ ವಿಷಾದ, "ಹೆಣ್ಣಾಗಿ ಹುಟ್ಟಿ ಭೂಮಿ ಎಂದು ಕರೆಸಿಕೊಳ್ಳುವುದು ಸಾಕು, ಸಿಡಿಯಬೇಕು ಇನ್ನಾದರೂ ಜ್ವಾಲಾಮುಖಿಯಾಗಿ" ಅಂತ ಬರೆವಾಗ ವಿಚಿತ್ರ ಆಶಾವಾದವಾಗುತ್ತದೆ. ಇಂತಹ, ಓದುಗನನ್ನು ಕೆರಳಿಸುವ, ಒರೆಗೆ ಹಚ್ಚುವ, ನಿಟ್ಟುಸಿರಿಡಿಸುವ ಕವನಗಳ ಜತೆಗೇ, ಬಾಬು ಚಂದಿರನಿಗೆ ಲಾಲಿ ಹಾಡಿ ತೂಗುತ್ತಾರೆ, ಮಗಳ ಹಾಡಿಗೆ ಕಿವಿಯಾಗುತ್ತಾರೆ, 'ಪ್ರೀತಿಯೇ ಬೆಟ್ಟವಾದ ನನ್ನಪ್ಪ'ನನ್ನು ಅನಾವರಣಗೊಳಿಸುತ್ತಾರೆ, ತಮ್ಮ ಕಾವ್ಯಕನ್ನಿಕೆಯನ್ನು 'ಬ್ಯಾಸಿಗಿ ಬಿಸಿಲಿಗೆ ತಂಪ ನೆಳ್ಳ ಆಗ್ಯಾಳ' ಎಂದು ಬಣ್ಣಿಸುತ್ತಾರೆ.
ಇಂತಹ ಬಾಬು ಅವರ ಕವನ ಸಂಕಲನದಿಂದ ಆಯ್ದ ಒಂದು ಕವಿತೆ, ಅವರ ಪ್ರೀತಿಗೆ; ನನ್ನ ಹಂಚಿಕೊಳ್ಳುವ ಖುಶಿಗೆ.
ಅಮ್ಮ ಸುಟ್ಟ ರೊಟ್ಟಿ
ಅಮ್ಮ ಬೆಳಗೆದ್ದು ರೊಟ್ಟಿ ಸುಡುವುದೆಂದರೆ
ನಮಗೆ ಪಂಚಪ್ರಾಣ
ಕತ್ತಲು ತುಂಬಿದ ಗುಡಿಸಲಿಗೆ
ಒಲೆಯ ಬೆಂಕಿಯೇ ಬೆಳಕು
ಸುಟ್ಟು ಸುಟ್ಟು ಕರ್ರಗಾದ
ಬಿಳಿ ಮೂರು ಕಲ್ಲು,
ಮೇಲೊಂದು ಕರ್ರಾನೆ ಕರಿ ಹೆಂಚು
ಒಲೆಯೊಳಗೆ ಹಸಿ ಜಾಲಿ
ಮುಳ್ಳು ಕಟ್ಟಿಗೆ ಒಟ್ಟಿ
ಹೊಗೆಯೊಳಗೆ ಉಸಿರು ಕಟ್ಟಿ
ಮನೆಯೊಳಗೆ ಉಸಿರೆರೆದವಳು
ಅಮ್ಮ, ಕಾಲು ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಕೊಣಿಗೆಯಲಿ ಹಿಟ್ಟರವಿ
ಆಸೆಯ ಒಡ್ಡು ಕಟ್ಟಿ
ಹಗಲೆಲ್ಲ ದುಡಿದ ಮೈ ಬಸಿದ ಬೆವರು
ಹದಕೆ ಕಾಯಿಸಿದ ಎಸರು
ಸುರುವಿ ಒರೊಟೊರಟ ಕೈಯಿಲೆ
ಮೆತ್ತ ಮೆತ್ತಗೆ ಕಲಸಿ
ಗಾಲಿಯಂಗೆ ಗುಂಡಗೆ ನುಣ್ಣನೆಯ
ಮೂರ್ತಿ ಮಾಡಿದವಳು
ಅಮ್ಮ, ಕೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಎದೆಯ ತುಡಿತಗಳ ಮಿಡಿತ
ಹದವಾಗಿ ಮೆದುವಾಗಿ
ಲಯಬದ್ಧವಾಗಿ ಹಿಟ್ಟ
ತಟ್ಟಿದರೆ ದುಂಡ ದುಂಡಗೆ
ಹುಣ್ಣಿಮೆಯ ಚಂದಿರ
ಕಾದ ಕರಿಹೆಂಚಿನ ಮೇಲೆ
ಆಕಡೀಕಡೆ ಸುಟ್ಟು
ಹೊಟ್ಟೆಗಿಟ್ಟು
ರಟ್ಟೆಗೆ ಬಲವ ಕೊಟ್ಟವಳು
ಅಮ್ಮ, ಮೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಜೀವ ಜೀವದ ಸಾರ
ಕುಸಿವೆಣ್ಣೆ ಒಣಕಾರ
ಈರುಳ್ಳಿ ಹಸಿಮೆಣಸು
ಬೆಳ್ಳುಳ್ಳಿ ಉಂಚೆತೊಕ್ಕು
ದಿನಕೊಂದು ಹೊಸ ರುಚಿಯ
ರೊಟ್ಟಿಯೊಳಗೇ ಸುತ್ತಿ
ಉಣಬಡಿಸಿ
ಸುತ್ತೇಳು ಲೋಕವ ತೋರಿದವಳು
ಅಮ್ಮ, ಜೀವ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಕಟ್ಟಿಗೆಯೊಟ್ಟಿಗೆ ಸುಟ್ಟು
ಹೊಗೆಯೊಳಗೆ ಕುದ್ದು
ಹೆಂಚಂತೆ ಕಾದು
ರೊಟ್ಟಿಯಾಗಿ ಬೆಂದ
ಒಲೆಯ ಮುಂದಿನ ಅಮ್ಮನ ಮುಖ
ನಿಗಿ ನಿಗಿ ಕೆಂಡ!
['ಬೆಳಕ ಹೆಜ್ಜೆಯನರಸಿ'; ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ.]
"ಬತ್ತಿದ ಮೊಲೆಯ ತಾಯಂದಿರು ಬಂದೂಕುಗಳ ಹಿಡಿದು ಒಲೆ ಹಚ್ಚಿದರೆ / ಅನ್ನದ ಡಬರಿಯಲಿ ತಮ್ಮದೇ ಕೂಸುಗಳು ಕುದಿಯುತ್ತಿವೆ ಕೊತ ಕೊತ / ಸಣ್ಣ ಕರುಳು, ಬೋಟಿ, ಖಲೀಜ" -ದಂತಹ ಬೆಚ್ಚಿ ಬೀಳಿಸುವ ರೂಪಕಗಳನ್ನು ಕಟ್ಟುವ ಬಾಬು, "ಇನ್ನೆಷ್ಟು ದಿನ ಮಿಸುಕಾಡದ ದೇವರುಗಳ ಮುಂದೆ ಹರಕೆ ಹೊರುವುದು / ಹೊಲಸು ಹಾದಿಗಳ ಮೇಲೆ ಚಿಂದಿಯುಟ್ಟು ಉರುಳುವುದು / ತಲೆ ಬೋಳಿಸಿಕೊಳ್ಳುವುದು / ಸತ್ತ ಮೇಲೂ ಸಾಯುವುದು?" ಅಂತ ಪ್ರಶ್ನಿಸುತ್ತಾರೆ. "ನಮ್ಮವರ ಬಣ್ಣ ರೊಕ್ಕ ಇದ್ದ ಧಣಿಗಳ ತಾಕ ಜೀತಕ್ಕಿಟ್ಟೈತಿ / ಹುಟ್ಟಿದಾಗಿಂದ ಜಾತಿ ಒಲಿಯಾಗ ಬಡತನದ ಬೆಂಕ್ಯಾಗ ಸುಟ್ಟು ಕರಕಲಾಗೈತಿ / ಸಾಯೋಗಂಟ ಅದೇ ನಿಜ ಆಗೈತಿ" ಎಂದು ಬರೆಯುವಾಗ ಅವರಲ್ಲಿರುವ ವಿಷಾದ, "ಹೆಣ್ಣಾಗಿ ಹುಟ್ಟಿ ಭೂಮಿ ಎಂದು ಕರೆಸಿಕೊಳ್ಳುವುದು ಸಾಕು, ಸಿಡಿಯಬೇಕು ಇನ್ನಾದರೂ ಜ್ವಾಲಾಮುಖಿಯಾಗಿ" ಅಂತ ಬರೆವಾಗ ವಿಚಿತ್ರ ಆಶಾವಾದವಾಗುತ್ತದೆ. ಇಂತಹ, ಓದುಗನನ್ನು ಕೆರಳಿಸುವ, ಒರೆಗೆ ಹಚ್ಚುವ, ನಿಟ್ಟುಸಿರಿಡಿಸುವ ಕವನಗಳ ಜತೆಗೇ, ಬಾಬು ಚಂದಿರನಿಗೆ ಲಾಲಿ ಹಾಡಿ ತೂಗುತ್ತಾರೆ, ಮಗಳ ಹಾಡಿಗೆ ಕಿವಿಯಾಗುತ್ತಾರೆ, 'ಪ್ರೀತಿಯೇ ಬೆಟ್ಟವಾದ ನನ್ನಪ್ಪ'ನನ್ನು ಅನಾವರಣಗೊಳಿಸುತ್ತಾರೆ, ತಮ್ಮ ಕಾವ್ಯಕನ್ನಿಕೆಯನ್ನು 'ಬ್ಯಾಸಿಗಿ ಬಿಸಿಲಿಗೆ ತಂಪ ನೆಳ್ಳ ಆಗ್ಯಾಳ' ಎಂದು ಬಣ್ಣಿಸುತ್ತಾರೆ.
ಇಂತಹ ಬಾಬು ಅವರ ಕವನ ಸಂಕಲನದಿಂದ ಆಯ್ದ ಒಂದು ಕವಿತೆ, ಅವರ ಪ್ರೀತಿಗೆ; ನನ್ನ ಹಂಚಿಕೊಳ್ಳುವ ಖುಶಿಗೆ.
ಅಮ್ಮ ಸುಟ್ಟ ರೊಟ್ಟಿ
- ವಿ. ಹರಿನಾಥ ಬಾಬು
ಅಮ್ಮ ಬೆಳಗೆದ್ದು ರೊಟ್ಟಿ ಸುಡುವುದೆಂದರೆ
ನಮಗೆ ಪಂಚಪ್ರಾಣ
ಕತ್ತಲು ತುಂಬಿದ ಗುಡಿಸಲಿಗೆ
ಒಲೆಯ ಬೆಂಕಿಯೇ ಬೆಳಕು
ಸುಟ್ಟು ಸುಟ್ಟು ಕರ್ರಗಾದ
ಬಿಳಿ ಮೂರು ಕಲ್ಲು,
ಮೇಲೊಂದು ಕರ್ರಾನೆ ಕರಿ ಹೆಂಚು
ಒಲೆಯೊಳಗೆ ಹಸಿ ಜಾಲಿ
ಮುಳ್ಳು ಕಟ್ಟಿಗೆ ಒಟ್ಟಿ
ಹೊಗೆಯೊಳಗೆ ಉಸಿರು ಕಟ್ಟಿ
ಮನೆಯೊಳಗೆ ಉಸಿರೆರೆದವಳು
ಅಮ್ಮ, ಕಾಲು ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಕೊಣಿಗೆಯಲಿ ಹಿಟ್ಟರವಿ
ಆಸೆಯ ಒಡ್ಡು ಕಟ್ಟಿ
ಹಗಲೆಲ್ಲ ದುಡಿದ ಮೈ ಬಸಿದ ಬೆವರು
ಹದಕೆ ಕಾಯಿಸಿದ ಎಸರು
ಸುರುವಿ ಒರೊಟೊರಟ ಕೈಯಿಲೆ
ಮೆತ್ತ ಮೆತ್ತಗೆ ಕಲಸಿ
ಗಾಲಿಯಂಗೆ ಗುಂಡಗೆ ನುಣ್ಣನೆಯ
ಮೂರ್ತಿ ಮಾಡಿದವಳು
ಅಮ್ಮ, ಕೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಎದೆಯ ತುಡಿತಗಳ ಮಿಡಿತ
ಹದವಾಗಿ ಮೆದುವಾಗಿ
ಲಯಬದ್ಧವಾಗಿ ಹಿಟ್ಟ
ತಟ್ಟಿದರೆ ದುಂಡ ದುಂಡಗೆ
ಹುಣ್ಣಿಮೆಯ ಚಂದಿರ
ಕಾದ ಕರಿಹೆಂಚಿನ ಮೇಲೆ
ಆಕಡೀಕಡೆ ಸುಟ್ಟು
ಹೊಟ್ಟೆಗಿಟ್ಟು
ರಟ್ಟೆಗೆ ಬಲವ ಕೊಟ್ಟವಳು
ಅಮ್ಮ, ಮೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಜೀವ ಜೀವದ ಸಾರ
ಕುಸಿವೆಣ್ಣೆ ಒಣಕಾರ
ಈರುಳ್ಳಿ ಹಸಿಮೆಣಸು
ಬೆಳ್ಳುಳ್ಳಿ ಉಂಚೆತೊಕ್ಕು
ದಿನಕೊಂದು ಹೊಸ ರುಚಿಯ
ರೊಟ್ಟಿಯೊಳಗೇ ಸುತ್ತಿ
ಉಣಬಡಿಸಿ
ಸುತ್ತೇಳು ಲೋಕವ ತೋರಿದವಳು
ಅಮ್ಮ, ಜೀವ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಕಟ್ಟಿಗೆಯೊಟ್ಟಿಗೆ ಸುಟ್ಟು
ಹೊಗೆಯೊಳಗೆ ಕುದ್ದು
ಹೆಂಚಂತೆ ಕಾದು
ರೊಟ್ಟಿಯಾಗಿ ಬೆಂದ
ಒಲೆಯ ಮುಂದಿನ ಅಮ್ಮನ ಮುಖ
ನಿಗಿ ನಿಗಿ ಕೆಂಡ!
['ಬೆಳಕ ಹೆಜ್ಜೆಯನರಸಿ'; ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ.]
Wednesday, March 31, 2010
Wednesday, March 17, 2010
ಇನ್ನೊಂದು ಲಾರ್ಜ್
ವಿಳಾಸವೇ ಬರೆದಿರದ ಪರಿಮಳದ
ಜಾಡು ಹಿಡಿದು ಬೆಟ್ಟವನ್ನೇರುತ್ತಿರುವ ತುಂಬಿಗೆ
ಹುಚ್ಚು ಭ್ರಮೆಯಿರಬೇಕು
ಹೂವು ಬೆಟ್ಟದ ಮೇಲೇ ಇರಬಹುದು
ಆಚೆ ತಪ್ಪಲಲ್ಲೂ ಇರಬಹುದು
ಇಲ್ಲದೆಯೂ ಇರಬಹುದು, ಅಥವಾ
ಅದರೊಡಲ ಮಧುಪಾತ್ರೆ ಈಗಾಗಲೇ
ಬರಿದಾಗಿರಬಹುದು.
ಪುಟ್ಟ ಪಾರದರ್ಶಕ ರೆಕ್ಕೆಗಳಿಗೆ
ಭ್ರಾಂತಿಯ ಎಣ್ಣೆ ಸವರಿರದಿದ್ದರೆ
ಹೇಗೆ ಬಂದೀತು ಬಳಲಿ ಬರದಂತೆ
ಬಡಿಯುವ ಕಸುವು?
ಮೆಚ್ಚುತ್ತೇನೆ-
'ಅದು ಭ್ರಮೆಯೂ ಅಲ್ಲ, ಭ್ರಾಂತಿಯೂ ಅಲ್ಲ;
ಬರೀ ಪ್ರೀತಿ.. ಹೂವಿನ ಪರಿಮಳದೆಡೆಗಿನ ತುಂಬಿಯ
ಕನಸಿನ ರೀತಿ' ಎಂದುತ್ತರಿಸುವ ನಿನ್ನ ಜಾಣ್ಮೆ.
ಆದರೆ-
ಸಿಗಲಿಲ್ಲ ಹಣ್ಣು ಎಂದಾಕ್ಷಣ
ದ್ರಾಕ್ಷಿ ಹುಳಿಯೆಂದ ನರಿಯಂತೆ ಹುಸಿ
ಬುದ್ದಿವಂತಿಕೆ ತೋರುವ ನಿನ್ನೀ ಮುಖ ನೋಡಿ
ಯಾಕೋ ಹೂವೇ ಮುಗ್ಧ ಅಂತ ನನಗನಿಸಿದರೆ,
ಕ್ಷಮಿಸು.
ಈಗಾಗಲೇ ಸಿಕ್ಕಾಪಟ್ಟೆ ಕುಡಿದಿದ್ದೀಯ,
ಇನ್ನೊಂದು ಲಾರ್ಜ್ಗೆ ಆರ್ಡರ್ ಮಾಡುವ ಮುನ್ನ
ಕೊಂಚ ಯೋಚಿಸು.
ಜಾಡು ಹಿಡಿದು ಬೆಟ್ಟವನ್ನೇರುತ್ತಿರುವ ತುಂಬಿಗೆ
ಹುಚ್ಚು ಭ್ರಮೆಯಿರಬೇಕು
ಹೂವು ಬೆಟ್ಟದ ಮೇಲೇ ಇರಬಹುದು
ಆಚೆ ತಪ್ಪಲಲ್ಲೂ ಇರಬಹುದು
ಇಲ್ಲದೆಯೂ ಇರಬಹುದು, ಅಥವಾ
ಅದರೊಡಲ ಮಧುಪಾತ್ರೆ ಈಗಾಗಲೇ
ಬರಿದಾಗಿರಬಹುದು.
ಪುಟ್ಟ ಪಾರದರ್ಶಕ ರೆಕ್ಕೆಗಳಿಗೆ
ಭ್ರಾಂತಿಯ ಎಣ್ಣೆ ಸವರಿರದಿದ್ದರೆ
ಹೇಗೆ ಬಂದೀತು ಬಳಲಿ ಬರದಂತೆ
ಬಡಿಯುವ ಕಸುವು?
ಮೆಚ್ಚುತ್ತೇನೆ-
'ಅದು ಭ್ರಮೆಯೂ ಅಲ್ಲ, ಭ್ರಾಂತಿಯೂ ಅಲ್ಲ;
ಬರೀ ಪ್ರೀತಿ.. ಹೂವಿನ ಪರಿಮಳದೆಡೆಗಿನ ತುಂಬಿಯ
ಕನಸಿನ ರೀತಿ' ಎಂದುತ್ತರಿಸುವ ನಿನ್ನ ಜಾಣ್ಮೆ.
ಆದರೆ-
ಸಿಗಲಿಲ್ಲ ಹಣ್ಣು ಎಂದಾಕ್ಷಣ
ದ್ರಾಕ್ಷಿ ಹುಳಿಯೆಂದ ನರಿಯಂತೆ ಹುಸಿ
ಬುದ್ದಿವಂತಿಕೆ ತೋರುವ ನಿನ್ನೀ ಮುಖ ನೋಡಿ
ಯಾಕೋ ಹೂವೇ ಮುಗ್ಧ ಅಂತ ನನಗನಿಸಿದರೆ,
ಕ್ಷಮಿಸು.
ಈಗಾಗಲೇ ಸಿಕ್ಕಾಪಟ್ಟೆ ಕುಡಿದಿದ್ದೀಯ,
ಇನ್ನೊಂದು ಲಾರ್ಜ್ಗೆ ಆರ್ಡರ್ ಮಾಡುವ ಮುನ್ನ
ಕೊಂಚ ಯೋಚಿಸು.
Wednesday, March 03, 2010
ನ್ಯಾಲೆಯ ಮ್ಯಾಲೆ ತೂಗುವ ಮನುಕುಲದ ಬಟ್ಟೆಗಳು
ಒಂದು ಊದ್ದನೆಯ ಹಗ್ಗ ಸಿಕ್ಕರೆ ಏನೇನು ಮಾಡಬಹುದು? ಹಗ್ಗ ತೆಳುವಾಗಿದ್ದರೆ, ಒಂದು ಗಾಳಿಪಟ ಮಾಡಿ ಅದಕ್ಕದನ್ನು ಕಟ್ಟಿ, ಬಯಲಿಗೊಯ್ದು ಹಾರಿಸಿ ಕಾಮನಬಿಲ್ಲನ್ನು ಭೂಮಿಗೆ ಇಳಿಸಬಹುದು. ಇಲ್ಲವೇ ಎರಡು ಬೆಂಕಿಪೊಟ್ಟಣಗಳಿಗೆ ದಾರದ ಎರಡು ತುದಿಗಳನ್ನು ಕಟ್ಟಿ ದೂರದೂರದಲ್ಲಿ ನಿಂತು ಅದನ್ನು ಕಿವಿಗಿಟ್ಟು ಹೃದಯದ ಲಬ್ಡಬ್ ಆಲಿಸಬಹುದು. ಹಗ್ಗ ಗಟ್ಟಿಯಿದ್ದರೆ, ಅದರ ಒಂದು ತುದಿಗೆ ಕುಣಿಕೆ ಗಂಟು ಹಾಕಿ, ಗಡಗಡೆಯ ಮೂಲಕ ತೂರಿಸಿ, ಕೊಡಪಾನವನ್ನು ಕುಣಿಕೆಗೆ ಬಿಗಿದು ಬಾವಿಯಲ್ಲಿ ಇಳಿಬಿಟ್ಟು ಪಾತಾಳದಿಂದ ಗಂಗೆಯನ್ನು ಮೇಲೆತ್ತಬಹುದು. ಹಗ್ಗ ತುಂಬಾ ಉದ್ದ ಇದ್ದರೆ? ಮಧ್ಯರಾತ್ರಿಯಲೆದ್ದು ಹಗ್ಗವನ್ನು ಬಯಲಿಗೊಯ್ದು, ಆಕಾಶದಲ್ಲಿ ಮಿನುಗುತ್ತಿರುವ ಎರಡು ತಾರೆಗಳಿಗೆ ಕಟ್ಟಿ ಜೋಕಾಲಿ ಆಡಬಹುದು. ಅತ್ತ ಗಟ್ಟಿಯೂ ಅಲ್ಲ ಇತ್ತ ತೆಳುವೂ ಅಲ್ಲದ ಹಗ್ಗ ಸಿಕ್ಕಿದರೆ? ಆಗ ಅಂಗಳದಲ್ಲಿ ಎರಡು ಕಂಬಗಳನ್ನು ನೆಟ್ಟು, ಆ ಕಂಬಗಳಿಗೆ ಹಗ್ಗವನ್ನು ಅಡ್ಡಡ್ಡ ಕಟ್ಟಿ, ತೊಳೆದ ಬಟ್ಟೆಯನ್ನೆಲ್ಲ ತಂದು ಒಣಹಾಕಬಹುದು. ಹೀಗೆ ಬಟ್ಟೆಯನ್ನು ತೂಗಿಸಿಕೊಂಡು ಬಿಸಿಲಿಗೆ ಸಾರ್ಥಕತೆಯ ಭಾವ ನೀಡುತ್ತಿರುವ ಹಗ್ಗವೇ ‘ನೇಲು’ ಅಥವಾ ‘ನ್ಯಾಲೆ’.
ನ್ಯಾಲೆಯಲ್ಲಿ ಏನಿಲ್ಲ ಏನಿದೆ? ಅಮ್ಮನ ಸೀರೆ, ಅಕ್ಕನ ಪೆಟ್ಟಿಕೋಟು, ಅಪ್ಪನ ಶರ್ಟು ಧರಿಸಿರುವ ಹ್ಯಾಂಗರು, ವಿಮಾನದಂತೆ ಕಾಣುತ್ತಿರುವ ಪುಟ್ಟನ ಅಂಡರ್ವೇರು, ಅಜ್ಜನ ಮಾಸಲು ಸಾಟಿಪಂಚೆ. ಕೆಲಸದವಳು ತೊಳೆದು ಒಣಗಿಸಿದ್ದ ಅಜ್ಜಿಯ ದಪ್ಪ ಬೆಡ್ಶೀಟು ಒಣಗಿದ್ದು ಇಲ್ಲೇ, ನಾಳೆ ಬೆಳಗ್ಗೆ ಧರಿಸಲು ಬೇಕೆಂದು ಗಟ್ಟಿಯಾಗಿ ಹಿಂಡಿ ಹಾಕಿದ್ದ ಬನೀನಿನ ನೀರು ಆರಿದ್ದು ಇಲ್ಲೇ. ಆಚೆಮನೆ ಗಣಪಯ್ಯ ಕಾಫಿ ಚೆಲ್ಲಿ ಆಗಿದ್ದ ಕಲೆಯನ್ನು ತೊಳೆದು ಒಣಗಿಸಿದ್ದ ಜಮಖಾನ, ಮನೆಗೆ ಬಂದಿದ್ದ ನೆಂಟರ ಮಗುವಿನ ಉಚ್ಚೆ ಪರಿಮಳದ ಬಟ್ಟೆ, ಮುಟ್ಟಾಗಿದ್ದಾಗ ಹೊರಗೆ ಮಲಗಿದ್ದ ಸೊಸೆ ಹೊದ್ದಿದ್ದ ಕಂಬಳಿ -ಎಲ್ಲವೂ ಇಲ್ಲೇ ಒಣಗಿ ಹೊಸದಾಗಿವೆ.
ಮನೆಯಲ್ಲಿ ಬಾಣಂತನವಿದೆ ಎಂದಾದರೆ ಹೊಸದೊಂದು ನ್ಯಾಲೆಯನ್ನೇ ಎಳೆಯಬೇಕಾಗುತ್ತದೆ. ಬಾಣಂತಿಯ ವಸ್ತ್ರಗಳ ಜೊತೆ, ಮಗು ಪದೇ ಪದೇ ಮಾಡಿಕೊಳ್ಳುವ ಹೇಲು-ಉಚ್ಚೆಯ ಬಟ್ಟೆಗಳು, ತೊಟ್ಟಿಲಿನ ಮೆತ್ತೆಗೆ ಹಾಕುವ ವಸ್ತ್ರಗಳು, ಮಗುವಿನ ಗೊಬ್ಬೆ, ಪುಟ್ಟ ಅಂಗಿ-ಚಡ್ಡಿ, ಸ್ವೆಟರು.... ಊಹುಂ, ಇರುವ ನ್ಯಾಲೆ ಸಾಕಾಗುವುದೇ ಇಲ್ಲ. ಯಾರದಾದರೂ ಮನೆಯಲ್ಲಿ ಬಾಣಂತಿಯಿದ್ದಾಳಾ ಅಂತ ಕಂಡುಹಿಡಿಯಲು ಮನೆಯೊಳಗೆ ಹೋಗಬೇಕಾಗಿಯೇ ಇಲ್ಲ, ಹೊರಗಿರುವ ನ್ಯಾಲೆಯನ್ನು ಗಮನಿಸಿದರೆ ಸಾಕು.
ಅಷ್ಟೇ ಅಲ್ಲ, ಅವಶ್ಯಕತೆಯಿದ್ದರೆ, ಮನೆಯೊಳಗಿರುವವರ ಜಾತಿ, ಧರ್ಮ, ಅಂತಸ್ತು, ಸಂಸ್ಕೃತಿ, ವಯಸ್ಸು -ಎಲ್ಲವಕ್ಕೂ ನ್ಯಾಲೆಯೇ ಬೆಳಕಿಂಡಿಯಾಗಬಲ್ಲದು. ನ್ಯಾಲೆಯಲ್ಲಿ ಮಡಿಪಂಚೆ-ಶಲ್ಯಗಳು, ಕೆಂಪು ಕೆಂಪು ಮಡಿ ಸೀರೆಗಳು ಇದ್ದರೆ ಅಥವಾ ನ್ಯಾಲೆಯಲ್ಲಿ ಕಪ್ಪು ಬುರ್ಕಾಗಳು, ಅಚ್ಚಬಿಳಿ ಜುಬ್ಬಾಗಳು ಇದ್ದರೆ ಅಥವಾ ನ್ಯಾಲೆಯಲ್ಲಿ ಬರೀ ಜೀನ್ಸ್ ಪ್ಯಾಂಟುಗಳು, ಟೀ ಶರ್ಟುಗಳು, ವಿಐಪಿ ಬನೀನುಗಳು ಇದ್ದರೆ... ಗೊತ್ತಾಗಿಯೇ ಬಿಡುತ್ತದೆ- ಮನೆಯವರು ಇಂಥವರು ಎಂದು. ಮನೆಯೊಳಗೊಬ್ಬ ಹರೆಯದ ಹುಡುಗಿಯಿದ್ದಾಳೆಯೇ ತಿಳಿಯಬೇಕೇ- ನ್ಯಾಲೆಯನ್ನು ಗಮನಿಸಿ ಸಾಕು. ಮನೆಯೊಳಗೊಬ್ಬ ಹಣ್ಣುಹಣ್ಣು ಮುದುಕ ಇದ್ದಾನೆಯೇ ತಿಳಿಯಬೇಕೇ- ನ್ಯಾಲೆಯತ್ತ ದೃಷ್ಟಿ ಹರಿಸಿ ಸಾಕು. ಈ ಮನುಕುಲದೆಲ್ಲ ಸಂಸಾರಗಳ ಒದ್ದೆಬಟ್ಟೆ ಒಣಗಿ ಹಸನಾಗುವುದು ನ್ಯಾಲೆಯೆಂಬ ನಾಲ್ಕು ಮೀಟರ್ ದಾರದ ಮೇಲೇ.
ಎಲ್ಲರ ಮನೆಯ ಬಚ್ಚಲಲ್ಲೂ ಒಂದು ಪುಟ್ಟ ನ್ಯಾಲೆಯಿದೆ. ಹೊರಗೆ ಒಣಗಿಸಲು ಹಿಂಜರಿದವರ ಅಂಡರ್ವೇರು, ಪ್ಯಾಂಟಿ, ಬ್ರಾಗಳು ಇಲ್ಲಿ ಮುಚ್ಚಟೆಯಲ್ಲಿವೆ. ಬಚ್ಚಲಿನ ಬಿಸಿನೀರಿನ ಹಬೆ ಬೆರೆತ ಗಾಳಿಯಲ್ಲೇ ಅವು ಒಣಗಿ ಪುನೀತವಾಗಬೇಕಿದೆ. ಸ್ನಾನದ ನಂತರ ಮೈ ಒರೆಸಿಕೊಳ್ಳಲಿಕ್ಕಿರುವ ಟವೆಲ್ಲಿಗೂ ಇಲ್ಲಿ ಸ್ಥಾನ. ಬಾತ್ರೂಮ್ ಸಾಂಗುಗಳೆಲ್ಲ ಇದಕ್ಕೆ ಬಾಯಿಪಾಠ. ಮನೆಯವರೆಲ್ಲರ ನಗ್ನ ದೇಹಗಳೂ ಇದಕ್ಕೆ ಪರಿಚಿತ. ಯವ್ವನಿಗನ ಮುಷ್ಟಿಮೈಥುನ, ಹುಡುಗಿ ಬದಲಿಸಿಕೊಂಡ ಸ್ಟೇಫ್ರೀಗಳ ಗುಟ್ಟು ಬಾತ್ರೂಮಿನ ನ್ಯಾಲೆಯ ಮೆಮರಿಯಲ್ಲಿ ಸುರಕ್ಷಿತ.
ಮಳೆಗಾಲದಲ್ಲಿ ಅಂಗಳ-ಟೆರೇಸುಗಳಲ್ಲಿನ ನ್ಯಾಲೆಗಳಿಗೆ ಬೇಸರ. ಸುರಿವ ಧೋ ಮಳೆಯಲ್ಲಿ ನಡುಗುತ್ತ ತನ್ನ ನೀಳ ಮೈಯ ಊದ್ದಕ್ಕೂ ಸ್ನಾನ ಮಾಡಿಕೊಳ್ಳುವ ಇದು ಮುಗಿಲಲ್ಲಿ ದಟ್ಟೈಸಿರುವ ಮೋಡಗಳತ್ತ ದೈನೇತಿ ಕಣ್ಣಲ್ಲಿ ನೋಡುತ್ತದೆ. ಗೆಳೆಯ ಸೂರ್ಯ ಎಲ್ಲಿಗೆ ಹೋದ ಎಂದು ಹುಡುಕುತ್ತದೆ. ತನ್ನ ನಿರುಪಯುಕ್ತ ಸ್ಥಿತಿಯಿಂದಾಗಿ ಈಗ ಮನೆಯೊಳಗೇ ಎಳೆಯಲ್ಪಟ್ಟಿರುವ ಟೆಂಪರರಿ ನ್ಯಾಲೆಯನ್ನು ಇದು ಅಸೂಯೆಯ ಕಣ್ಗಳಿಂದ ನೋಡುತ್ತದೆ. ಎಷ್ಟು ಬೇಗ ಮಳೆಗಾಲ ಮುಗಿದೀತೋ, ತನಗೆ ಮತ್ತೆ ಬೆಲೆ ಬಂದೀತೋ ಎಂದು ಕಾಯುತ್ತದೆ. ಆದರೆ, ತುಂತುರು ಮಳೆಯ ನಂತರ ಸಾಲು ಸಾಲು ಮಳೆನೀರ ಮಣಿಗಳನ್ನು ಧರಿಸಿ ಚಂದ ಕಾಣುವಾಗ ಮಾತ್ರ, ನ್ಯಾಲೆ ತನ್ನಂದಕ್ಕೆ ತಾನೇ ಮರುಳಾಗಿಬಿಡುತ್ತದೆ. ಬೀಸುಗಾಳಿಗೆ ಮಣಿಗಳು ಉದುರುವಾಗ ನ್ಯಾಲೆ ಕಣ್ಣೀರು ಹಾಕುವಂತೆ ಕಾಣುತ್ತದೆ.
ನ್ಯಾಲೆಗಳಿಗೆ ಕ್ಲಿಪ್ಪು ಮತ್ತು ಹ್ಯಾಂಗರುಗಳೆಂಬ ಇಬ್ಬರು ಸಖಿಯರು. ಕ್ಲಿಪ್ಪು ತಬ್ಬಿದರೆ ಹ್ಯಾಂಗರು ಜಗ್ಗುತ್ತದೆ. ಅಂಗಳವೇ ಇಲ್ಲದ ನಗರದ ಮನೆಗಳಲ್ಲಿ ಟೆರೇಸಿನಲ್ಲೇ ನ್ಯಾಲೆಗಳು. ಟೆರೇಸಿನ ನ್ಯಾಲೆಗಳಿಗೆ ಕ್ಲಿಪ್ಪು ಕಡ್ಡಾಯ. ಅದಿಲ್ಲದಿದ್ದರೆ ಒಣಗಿಸಿದ ಬಟ್ಟೆ ಹಾರಿಯೇ ಹೋಗಿತ್ತದೆ- ಮೋರಿಗೋ, ರಸ್ತೆಗೋ, ಪಕ್ಕದ ಟೆರೇಸಿಗೋ, ಗುಲಾಬಿ ಗಿಡದ ಟೊಂಗೆಗೋ. ಕರ್ಚೀಫುಗಳಂತೂ ಕಳೆದೇ ಹೋಗುತ್ತವೆ. ಅಂಗಿಗಳನ್ನು ಒಣಗಿಸಲಿಕ್ಕೆ ಹ್ಯಾಂಗರಿದ್ದರೆ ಒಳ್ಳೆಯದು. ಕಡಿಮೆ ಜಾಗ ಸಾಕು. ಹ್ಯಾಂಗರಿನಲ್ಲಿ ನೇತಾಡುತ್ತಿರುವ ಅಪ್ಪನ ಅಂಗಿಯನ್ನು ಸಡನ್ನಾಗಿ ನೋಡಿದರೆ ಅಪ್ಪನೇ ಅದರೊಳಗಿರುವಂತೆ ಭಾಸವಾಗುತ್ತದೆ.
ನ್ಯಾಲೆಯ ಮೇಲೆ ಗುಬ್ಬಚ್ಚಿ ಕೂತರೆ ನೋಡಲು ಚಂದ. ನ್ಯಾಲೆಗೂ ಆಗ ಆನಂದ. ಕೂತ ಹಕ್ಕಿಯನ್ನು ಸುವ್ವಿ ಸುವ್ವಾಲೆಯೆಂದು ಹಾಡುತ್ತಾ ಇದು ತೂಗುತ್ತಿದ್ದರೆ ಮನೆಯೊಳಗಿನ ಜೋಳಿಗೆಯಲ್ಲಿನ ಕಂದ ನಿದ್ದೆ ಹೋಗಬೇಕು. ತನ್ನನ್ನು ತೂಗಿದ ನ್ಯಾಲೆಗೆ ಗುಬ್ಬಚ್ಚಿ ಎಂದೂ ಕೃತಜ್ಞ. ಗುಬ್ಬಚ್ಚಿಗೂ ನ್ಯಾಲೆಗೂ ಭಲೇ ಗೆಳೆತನ. ವಜೆಯ ಬೆಡ್ಶೀಟು, ರಗ್ಗುಗಳನ್ನು ಒಣಗಿಸಿದಾಗ ತಾಳಲಾರದೆ ಪೂರ್ತಿ ಜಗ್ಗಿಹೋಗುವ ನ್ಯಾಲೆಯ ನೋವನ್ನು ಅರ್ಥ ಮಾಡಿಕೊಳ್ಳುವ ಗುಬ್ಬಚ್ಚಿ, ಆಗ ಅಲ್ಲಿಗೆ ಬಂದು, "ಇನ್ನೇನು ಸ್ವಲ್ಪ ಹೊತ್ತು, ಒಣಗಿಹೋಗುತ್ತೆ, ಒಯ್ದುಬಿಡುತ್ತಾರೆ, ನೀನು ನಿರಾಳವಾಗಬಹುದು.." ಅಂತೆಲ್ಲ ಸಮಾಧಾನ ಮಾಡುತ್ತದೆ. ಬೆಡ್ಶೀಟು, ರಗ್ಗುಗಳಿಂದ ನ್ಯಾಲೆಯ ಕಣ್ಣೀರು ಧಾರಾಕಾರ ಹರಿಯುತ್ತದೆ. "ಈಗೆಲ್ಲ ವಾಷಿಂಗ್ ಮಶೀನುಗಳ ಡ್ರೈಯರುಗಳಲ್ಲೇ ಒಣಗುತ್ತವಂತೆ ಬಟ್ಟೆ" ಎಂದರೆ ನ್ಯಾಲೆ, "ಛೇ ಬಿಡು, ಅವಕ್ಕೆ ನಿನ್ನನಾಲಂಗಿಸುವ ಭಾಗ್ಯವಿಲ್ಲ ಅಷ್ಟೇ" ಅಂತ ಉತ್ತರಿಸುತ್ತದೆ ಗುಬ್ಬಚ್ಚಿ.
ನಮ್ಮ ದೈನಿಕದ ಅವಶ್ಯಕತೆಗಳನ್ನು ಸಂಬಾಳಿಸಲಿಕ್ಕೆ ಸದ್ದಿಲ್ಲದೆ ಸಹಾಯ ಮಾಡುವ ಈ ದಾರ ಯಾವ ಊರಿನ ಯಾವ ತಿರುವಿನ ಯಾರ ಮನೆಯ ಯಾರ ಕೈಗಳಲ್ಲಿ ಹೊಸೆಯಲ್ಪಟ್ಟಿತು? ಹಾಸ್ಟೆಲ್ಲು, ಹಾಸ್ಪಿಟಲ್ಲು, ಜೈಲುಗಳಲ್ಲಿ ಮೀಟರುಗಟ್ಟಲೆ ಅಡ್ಡಾದಿಡ್ಡಿ ಎಳೆಯಲ್ಪಟ್ಟಿರುವ ನ್ಯಾಲೆಯ ತಂತಿಗಳು ಯಾವ ಕಾರ್ಖಾನೆಯಲ್ಲಿ ತಯಾರಾದವು? ಉರಿಬಿಸಿಲು, ಸುರಿಮಳೆ, ಘೋರ ಚಳಿಗಳಲ್ಲೂ ಹೊರಗೇ ಉಳಿದು ನಮ್ಮನ್ನು ಒಳಗೆ ನೆಮ್ಮದಿಯಲ್ಲಿಟ್ಟ ಬಟ್ಟೆಗಳ ನೂಲುಗಳಲ್ಲಿ ಆ ಬೆಚ್ಚನೆಯ ಭಾವ ತುಂಬಿದ ನ್ಯಾಲೆಗಳಿಗೆ ಹೇಗೆ ಹೇಳೋಣ ಕೃತಜ್ಞತೆ?
ಬೆಳದಿಂಗಳಲ್ಲಿ ತೋಯುತ್ತ ತಂಗಾಳಿಯೊಂದಿಗೆ ಮಾತನಾಡುತ್ತ ತೂಗುತ್ತಿದೆ ಹೊರಗೆ ನೇಲು.. ಕಪ್ಪು ಆಗಸದ ಬಿಳಿ ಬಿಳಿಯ ನಕ್ಷತ್ರಗಳ ಕೈಬೀಸಿ ಕರೆಯುತ್ತಿದೆ ತುದಿಯಲ್ಲಿ ಒಂದು ಯಾರದೋ ವೇಲು..
Subscribe to:
Posts (Atom)
